ಗಾದೆಗೊಂದು ಕಥೆ..

Spread the love
Share Button

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮೇಲು”

ಈ ಭೂಮಿಗೆ ಸೌಂದರ್ಯದ ಮೆರುಗನ್ನು ತಂದುಕೊಡುವುದೆಂದರೆ ಅದು ಹಸಿರು ವನಗಳು. ಇಂತಹ ವನಗಳ ಮಧ್ಯೆ ಅಲ್ಲಲ್ಲೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರು. ಅವರ ಊಟ, ನೋಟ, ಉಡುಗೆ, ತೊಡುಗೆ ಎಲ್ಲರಿಗಿಂತ ಭಿನ್ನವಾಗಿದ್ದು ನೋಡುಗರ ಮನಸೆಳೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಮುಗ್ಧತೆಯ ಸೆಳೆತ ಎಲ್ಲರೆದೆಯಲಿ ನಿಂತು ಬಿಡುತ್ತದೆ.  ಇಂತಹ ಸಮುದಾಯದಲ್ಲಿ ಹುಟ್ಟಿದಶಿವ ಅವನೂ ಕೂಡ ಅಷ್ಟೇ ಮುಗ್ದನು.

ಅಷ್ಟೇನೂ ಸುಂದರನಲ್ಲದ, ಬುದ್ಧಿವಂತನಲ್ಲದ ,ಕಡುಕಪ್ಪಾದ,ಒರಟು ಮೈಯ ಶಿವನೆಂದರೆ ಅದೇನೋ ಸ್ವಲ್ಪ ಆಕರ್ಷಣೆ. ಅವನ
ಕಣ್ಣುಗಳ ಸೆಳೆತ ಹಾಗಿತ್ತು. ಕಪ್ಪುವದನದಲ್ಲಿ ಬೆಳ್ಳನೆ ಹೊಳೆಯುವ ಕಣ್ಣುಗಳು , ಅದೇನೋ ಮಾಡುವೆನೆಂಬ ಕಾರ್ಯವೈಖರಿ, ಚುರುಕಾದ ಓಟ, ನೋಟ, ಮುಗ್ಧ ಮಾತಿಗೆ ಅಲ್ಲಿನವರು ಮರುಳಾಗುತ್ತಿದ್ದದರು. ಇತ್ತೀಚೆಗೆ ತಾಂಡಕ್ಕೆ ಪಾಠಕಲಿಸಲು ಬಂದ ಶಿಕ್ಷಕರ ಪ್ರಭಾವವಿರಬೇಕು!!!

ಚಿಗರೆಯಂತೆ ನೆಗೆಯುತ್ತಿದ್ದ, ಚಿರತೆಯಂತೆ ಓಡುತ್ತಿದ್ದ ಬಡತನವಿದ್ದರೂ ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಓದುವುದರಲ್ಲಿ ಅಷ್ಟೇನೂ ಬುದ್ಧಿವಂತನಲ್ಲದಿದ್ದರೂ ಹೇಳಿದ್ದನ್ನು ಗ್ರಹಿಸಿಕೊಳ್ಳುವ ಇವನನ್ನು ಕಂಡರೆ ಶಿಕ್ಷಕರಿಗೂ ಅಚ್ಚುಮೆಚ್ಚು. ಆಟೋಟದಲ್ಲಿ, ಇವನದೇ ಮೇಲುಗೈ. ಈಗ ಐದನೇ ತರಗತಿಗೆ ಕಾಲಿಟ್ಟಿದ್ದ. ಕಾಡಿನ ಬಾಲಕನಾದರೂ ಓದಿ ತಿಳಿಯುವ ಜ್ಞಾನ ಸಂಪಾದನೆ ಮೋಡಿದ್ದ. ತನ್ನ ಮನೆ, ಸಮುದಾಯ, ಕಾಡು ಎಂದರೆ ಎಲ್ಲಿಲ್ಲದ ಪ್ರೀತಿ ಶಿವನಿಗೆ. ಹೀಗೊಮ್ಮೆ ಕಂದಾಯ ಇಲಾಖೆಯವರು ತಾಂಡಾಗಳಲ್ಲಿ ಸಂಚರಿಸುತ್ತ ಇವರು ವಾಸಿಸುತ್ತಿದ್ದ ಇಪ್ಪತ್ತು ಮನೆಯ ಕಂದಾಯದ ಹೊರೆಯನ್ನು ಎರ್ರಾ ಬಿರ್ರಿ ಬರೆದು ಹೋಗಿದ್ದರೆಂದು ಅವರ ಮೇಲೆ ಸಿಟ್ಟಾಗಿದ್ದನಂತೆ. ಶಾಲಾ ಶಿಕ್ಷಕರ ಬಳಿ ಹೇಳಿಕೊಂಡು ಜೋರುಮಾಡಿದ್ದನಂತೆ . ” ನಾವು ಕಾಡಿನ ಪ್ರಾಣಿಗಳ ರೀತಿ ಬದುಕುನಡೆಸುತ್ತಿದ್ದೇವೆ. ನಗರ ಪ್ರದೇಶಗಳಂತೆ ನಾವೇನು ರಸ್ತೆ , ಚರಂಡಿ, ವಿದ್ಯುತ್ , ಮತ್ತಿತರ ಸೌಲಭ್ಯಗಳನ್ನು ಕೇಳಿದ್ದೇವೆಯೆ ?. ನಾವೂ ಕಾಡಿನ ಪ್ರಾಣಿಗಳಂತೆ ತಿಂದುಂಡು ಬದುಕುತ್ತಿದ್ದೇವೆ. ಹರುಕು ಬಟ್ಟೆಗಳನ್ನು ತೊಡುತ್ತಿದ್ದೇವೆ. ನಮ್ಮ ಕಷ್ಟಗಳನ್ನು ನೋಡಲು, ಕೇಳಲು ಯಾರೂ ಇಲ್ಲ. ಯಾರೋ ಪುಣ್ಯಾತ್ಮರು ಈ ಶಾಲೆಯನ್ನು ತೆರೆದು ನಿಮ್ಮನ್ನು ನಮಗಾಗಿ ಬಿಟ್ಟಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ನಾವೇಕೆ ಸರ್ ಇವರಿಗೆ ಕಂದಾಯ ಕಟ್ಟಬೇಕು ” ಎಂದು ಕಿತ್ತೂರರಾಣಿ ಚೆನ್ನಮ್ಮನ ರೀತಿ ಪಟಪಟನೆ ಡೈಲಾಗ್ ಗಳನ್ನು ಉದುರಿಸಿದ್ದು ನೋಡಿ ಶಿಕ್ಷಕರು ದಂಗಾಗಿದ್ದರಂತೆ.

ಅಂದಿನಿಂದ ಅವರಿಗೆ ಏನೆನಿಸಿತೋ ಏನೋ ಸಮಾಧಾನ ಮಾಡುತ್ತಾ ನೋಡು, ” ನೀನು ಚೆನ್ನಾಗಿ ಓದಿಕೊಂಡು ದೊಡ್ಡ ಡಿ. ಸಿ. ಆಗು ಆಗ ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಕೊಡಿಸಬಹುದು. ಹಾಗೂ ಎಲ್ಲಾ ಕಂದಾಯಗಳನ್ನು ಸುಲಭವಾಗಿ ವಜಾ ಮಾಡಬಹುದು. ನಿನ್ನ ತಾಂಡಾಗಳ ಸಮಸ್ಯೆಗಳನ್ನು ಸುಲಭವಾಗಿ ಆಲಿಸಿ ಪರಿಹರಿಸಬಹುದು.  ಏನು ? ಓದಿ ದೊಡ್ಡ ಅಧಿಕಾರಿಯಾಗುವೆಯಾ ” ಎಂದು ಹೇಳಿದ ಮಾತಿಗೆ ಅಂದು ಗೋಣಾಡಿಸಿ ಶಪಥ ಮಾಡಿದನು. “ಆಗ್ಲಿ ಸರ್ ಅದೇನಾಗುತ್ತೋ ಆಗಲಿ ನಾನು ಡಿ.ಸಿ.ಆಗೇ ಆಗುವೆ. ನನ್ನ ತಾಂಡಾವನ್ನು ಮಾದರಿ ತಾಂಡವಾಗಿ ಪರಿವರ್ತಿಸುವೆ. ನಗರ ಸೌಲಭ್ಯಗಳನ್ನು ದೊರಕಿಸುವೆ. ನನ್ನ ತಾಂಡಾವನ್ನು ದೇಶ ಗುರುತಿಸ ಬೇಕು ಹಾಗೆ ಮಾಡುವೆ. ಒಣಗಿದ ಮರಗಳನ್ನು ತೆಗೆಯಿಸಿ ಹೊಸ ಮರಗಿಡಗಳನ್ನು ನೆಡಿಸುವೆ, ಕಾಡು ಸಂಮೃದ್ಧಿಯಾಗಿದ್ದರೆ ಮಳೆ ಬೆಳೆ ಚೆನ್ನಾಗಿ ಬರುತ್ತೆ ಅಂತ ನೀವೇ ತಾನೆ ಹೇಳಿರುವಿರಿ. ನೋಡುತ್ತಾ ಇರಿ. ಸುಮ್ಮನೆ ಬರಡು ಭೂಮಿಯಾಗಿ ಉಳಿದಿರುವ ಕಾಡಿನ ಪಕ್ಕದ ಜಾಗವನ್ನೆಲ್ಲ ಉಳಿಸಿ ಆಹಾರದ ಬೆಳೆ ಬೆಳೆದು ನಮ್ಮೂರಿನವರಿಗೆ ಕೆಲಸ ಕೊಡುವೆ. ಹಣಕ್ಕಾಗಿ, ಊಟಕ್ಕಾಗಿ, ಬಟ್ಟೆಗಾಗಿ ಎಲ್ಲೂ ಹೋಗದಂತೆ ಮಾಡುವೆ. ನಮ್ಮೂರೇನು ಚಾನ್ಸ ಕೊಟ್ಟರೆ ದೇಶವನ್ನೇ ಪರಿವರ್ತನೆ ಮಾಡಿಯೇನು , ಪ್ರಾಣಿಗಳಿಗೆ ಸದಾಕಾಲ ನೀರು ಸಿಗುವಂತೆ ಮಾಡುವೆ, ಅವುಗಳಿಗೂ ಮನೆಕಟ್ಟಿಸುವೆ, ಅವೆಂದೂ ನಾಡಿಗೆ ತಲೆಹಾಕದಂತೆ ಎತ್ತರದ ಗೋಡೆ ಕಟ್ಟಿಸುವೆ ಸರ್” ಎಂದು ಒಂದೇ ಉಸುರಿಗೆ ಒಪ್ಪಿಸಿಬಿಟ್ಟ. ಅವನ್ನಲ್ಲಿನ ವಿಚಾರ ಧಾರೆಯನ್ನು ಕೇಳಿ ಸುಸ್ತಾದ ಶಿಕ್ಷಕರು, “ಭಲೇ ಭಲೇ ” ಎಂದು ಬೆನ್ನುತಟ್ಟಿದರು.

ರಾತ್ರಿಯೆಲ್ಲಾ ಇದೇ ಗುಂಗಿನಲ್ಲಿ ಮಲಗಿದ ಶಿವನಿಗೆ ನಿದ್ದೆ ಸುಳಿಯದಾಯ್ತು. ತಾನು ತನ್ನ ಗೆಳೆಯ ರವಿಗಿಂತ ಚೆನ್ನಾಗಿ ಓದಿನಲ್ಲಿ ಮುಂದೆ ಇಲ್ಲ ಅನ್ನೋ ಸತ್ಯ ಗೊತ್ತಿತ್ತು. ಆದರೆ ನಾನು ನನ್ನ ತಲೆಗೆ ಹಿಡಿಯುವಷ್ಟು ಮಾತ್ರ ಓದಬಲ್ಲೆ. ದೊಡ್ಡ ಅಧಿಕಾರಿಯಾಗಲು ತುಂಬಾ ಚೆನ್ನಾಗಿ ಓದಬೇಕು ಎಂದು ಶಿಕ್ಷಕರು ಹೇಳುತ್ತಿದ್ದರು. ಡಿ.ಸಿ.ಆದರೆ ಮಾತ್ರ ಹೀಗೆ ಮಾಡಲು ಸಾಧ್ಯವಾ, ಮತ್ತೇನು ಮಾಡಿದರೆ ನಾನು ಅಂದುಕೊಂಡಿದ್ದನ್ನು ಮಾಡಬಲ್ಲ ಎಂದು ಯೋಚಿಸುತ್ತಾ ನಿದ್ದೆಗೆ ಜಾರಿದ. ಕಾಡಿನ ತಂಪಾದಗಾಳಿ ಯೋಚಿಸುತ್ತಾ ದಣಿದಿದ್ದ ಶಿವನನ್ನು ನಿದ್ದೆಗೆಜಾರಿಸಿತು.

ಅದೊಂದು ದೊಡ್ಡ ಕ್ರೀಡಾಂಗಣ. ಅಲ್ಲಿ ತಾನೆಂದೂ ನೋಡದಷ್ಟು ಮಂದಿ ಸೇರಿದ್ದರು. ಕ್ರೀಡಾಂಗಣದ ಒಳಗೆ ಬಿಳಿಯ ಗೆರೆಗಳನ್ನು ಎಳೆದು ಓಡಲು ತಯಾರಿ ಮಾಡಿದ್ದರು. ಬಲಿಷ್ಠರ ಸಾಲಿನಲ್ಲಿ ತಾನೂ ನಿಂತಿದ್ದ , ಎಲ್ಲರಂತೆ ನಂಬರ್ ಬರೆದು ಬನಿಯನ್ ತೊಡಿಸಿ, ಕಾಲಿಗೆ ಶೂ ಕೊಟ್ಟು ನಿಲ್ಲಿಸಿದ್ದರು. ಸುತ್ತ ನೋಡಿದ ಅಲ್ಲಿ ತನ್ನೂರೇ ನಿಂತಿತ್ತು. ತನ್ನವ್ವ ಗಾಳಿಯಲ್ಲಿ ದೃಷ್ಟಿ ತೆಗೆಯುತ್ತಿದ್ದಳು. ನೆಚ್ಚಿನ ಶಿಕ್ಷಕರು ಕೈ ಮೇಲೆತ್ತಿ ಗೆಲುವು ತೋರಿಸಿದರು. ತನ್ನ ಅಕ್ಕ ಪಕ್ಕ ನೋಡಿದ ಬಲಿಷ್ಠರಂತೆ ಕಂಗೊಳಿಸಿದ ದಡಿಯರನ್ನು ನೋಡಿ ತನ್ನ ಜಂಘಾಬಲವೇ ಅಡಗಿಹೋದಂತೆ ಸಣ್ಣಗೆ ನಡುಗಿದ, ಓಟದ ಸ್ಪರ್ಧೆ ಪ್ರಾರಂಭವಾಯಿತು. ಹಸಿರು ನಿಶಾನೆ ತೋರಿಸಿದರು ಹೆದರುತ್ತಲೇ ಓಡಿದ ಓಡಿದ ಓಡುತ್ತಲೇ ಇದ್ದ ಹಿಂತಿರುಗಿ ನೋಡದಂತೆ. ಗೆಲುವಿಗೆ ಒಂದೇ ಹೆಜ್ಜೆ ‘ ಶಿವ, ಶಿವ’ ಎಂದು ಕೆಂಪಿ ಅಲುಗಾಡಿಸಿ ಏಳಿಸುತ್ತಿದ್ದಳು. ದಿಢೀರ್ ನೆ ಎದ್ದು ಕುಳಿತು ಸುತ್ತ ಕಣ್ಣಾಡಿಸಿದ ತಾನು ಕಂಡದ್ದು ‘ಕನಸು’ ಎಂದು ಹಾಗೆಯೇ ಕುಳಿತ.

“ಯಾಕ ಮಗಾ ,ಸೂರ್ಯ ನಿನ್ನ ಮರದ ಸಂದಿಯಿಂದ ಇಣುಕಿ ನೋಡಿ ಶಾನೆ ಹೊತ್ತಾಯಿತು‌. ಯಾಕೋ ಶಿವ ನನಗೆ ವತ್ತಾರೆ ಕೈ ಮುಗಿಯಕೆ ಬಂದಿಲ್ಲವಲ್ಲ ಅಂತ ಯೋಚನೆ ಮಾಡ್ತಾವ್ನೆ. ಯೋಳು ಎದ್ದು ಹಣ್ಣು, ಗೆಣಸು ತರೋ ಯೋಚನೆ ಮಾಡು, ನಾನು ನೀರು ತಕ್ಕಾಂಡು ಬತ್ತೀನಿ ” ಅಂತ ಕೆಂಪಿ ತಲೆ ಸವರಿ ಹೋದಳು.

ಪ್ರಾಣಿಗಳು ಹಳ್ಳದರಿವ ಹುಡುಕಿ  ಬರುವ ವೇಳೆಗೆ ನೀರು ತರಬೇಕಿತ್ತು. ಅರ್ಧ ಕಿಲೋಮೀಟರ್ ನಿಂದ ನೀರನ್ನು ಹೊರುತ್ತಿದ್ದ ಕೃಷ ದೇಹದ ತನ್ನ ತಾಯಿಯನ್ನುನೋಡಿ ಎಳೆ ಜೀವ ಸೊರಗಿತು. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಶಿವ ತಾಯಿಯ ಆಸರೆಯಲ್ಲೇ  ಬೆಳೆದು ದೊಡ್ಡವನಾಗಿದ್ದ. ಹುಟ್ಟಿದಾರಾಭ್ಯ ಗೆಡ್ಡೆ – ಗೆಣಸು, ಹಣ್ಣು-ಕಾಯಿಗಳನ್ನು ತಿಂದು ಬೆಳೆದ ಜೀವ ಡಿ.ಸಿ.ಆಗುವ ಆಸೆ ಹೊತ್ತಿತು. ತಾನು ಕಂಡ ಕನಸು ಅದೆಷ್ಟು ಚೆನ್ನಾಗಿತ್ತು ಎಂದು ನೆನೆಯುತ್ತಾ ನಿತ್ಯ ಕಾರ್ಯಕ್ಕೆ ಮೈಯೊಡ್ಡಿದ.

ಇವನ ಕನಸಿಗೆ ಜೊತೆಯಾದದ್ದು ಬಾಲ್ಯ ಸ್ನೇಹಿತನ ಅಣ್ಣ ಮಹಾಂತ. ಇವನು ಸೈನಿಕನಾಗಿ ಕೆಲಸಕ್ಕೆ ಸೇರಿ ಬಹಳ ವರ್ಷಗಳೇ ಕಳೆದಿತ್ತು. ಯಾರೋ ಪಟ್ಟಣದವರು ಇವನ ಬಡತನವನ್ನು ನೋಡಲಾರದೇ ಯೋಧ ಆಗೆಂದು ಸೇರಿಸಿದ್ದರಂತೆ. ಊರು ಬಿಟ್ಟು ಎಷ್ಟೋ ವರ್ಷಗಳಾಗಿದ್ದವು. ಈಗ ಇದ್ದಕ್ಕಿದ್ದಂತೆ ತಾಂಡಾಕ್ಕೆ ಬಂದು ಪರಿಚಯಿಸಿಕೊಂಡಿದ್ದ. ದಿನಕಳೆದಂತೆ ಶಿವನ ಪರಿಚಯವಾಗಿ ಅವನ ಓಟ ಇವನನ್ನು ಮನ ಸೆಳೆದಿತ್ತು. ಅವನನ್ನು ನೋಡಿದಾಗಲೆಲ್ಲ ಇವನನ್ನು ಏನಾದರೂ ಮಾಡಿ ಬೆಳಕಿಗೆ ತರಬೇಕೆಂದು ಯೋಚಿಸಿದ. ಅವರ ತಾಯಿಯನ್ನು ಒಪ್ಪಿಸಿ ಪಟ್ಟಣಕ್ಕೆ ಕರೆದೊಯ್ದು ಕ್ರೀಡಾ ತರಬೇತಿ ಕೇಂದ್ರಕ್ಕೆ ಸೇರಿಸಿದ. ಅಲ್ಲಿಂದ ಪ್ರಾರಂಭವಾದ ಅವನ ಯಶೋಗಾಥೆ ತಡೆ ಇಲ್ಲದೆ ಸಾಗಿತು. ಹೀಗೇ ಹತ್ತು ವರ್ಷಗಳು ಕಳೆದು ಹೋದವು.

ಶಿವನೂ ಕೂಡಾ ಮಹಾಂತನಂತೆ ಒಂದು ದಿನ ತಾಂಡಾಕ್ಕೆ ಬಂದುಇಳಿದ. ಆದರೆ ಡಿ.ಸಿ ಯಾಗಿ ಅಲ್ಲ. ಒಬ್ಬ ಅರಣ್ಯಾಧಿಕಾರಿಯಾಗಿ. ಅವನು ಕ್ರೀಡಾ ಪಟುತ್ವ, ಹಾಗೂ ನಿರಂತರ ಅಭ್ಯಾಸದಿಂದ ,ತಾನು ತನ್ನ ಕಾಲಮೇಲೆ ನಿಂತು ತಾಂಡಾವನ್ನು ಬದಲಿಸಬೇಕೆನ್ನುವ ಮಹತ್ವಾಕಾಂಕ್ಷೆಯ ಛಲ ಅವನನ್ನು ಇಲ್ಲಿಯವರೆಗೆ ಎಳೆತಂದಿತ್ತು.  ಮಹಾಂತ ಇವನಿಗೆ ಮಾಡಿದ ಸಹಯದಿಂದ ತಾನೊಬ್ಬ ಅಧಿಕಾರಿಯಾಗಿ ಬಂದಿದ್ದ.  ಒಂದೊಂದಾಗಿ ಅಂದಿನ ಭರವಸೆಗಳ ಈಡೇರಿಕೆಗೆ ನಾಂದಿಹಾಡಿದ. ಹೆತ್ತ ತಾಯಿ ಹೊತ್ತನಾಡಿನ ಸೇವೆಯನ್ನು ಚಿಕ್ಕದಾಗಿ ಪ್ರಾರಂಭಿಸಿದ.  ಇಂತಹ ಸಣ್ಣ ಕಾರ್ಯಗಳೂ ಕೂಡ ದೇಶಸೇವೆ ಎನಿಸುತ್ತವೆ. ತನ್ನ ಹುಟ್ಟಿದ ಊರನ್ನು ಕಾಪಾಡಬಲ್ಲವನು ಮುಂದೆ ದೇಶವನ್ನೂ ಕಾಪಾಡಬಲ್ಲನು.

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

4 Responses

  1. ನಯನ ಬಜಕೂಡ್ಲು says:

    Nice

  2. ಸೊಗಸಾದ ಕಥೆ….ಅಭಿನಂದನೆಗಳು… ಗೆಳತಿ ಭಾಗ್ಯ..

  3. ಅಬ್ಬಾ ಶಿವನ ಸಾಧನೆ ನಮಗೆಲ್ಲಾ ದಾರಿದೀಪದಂತಿದೆ

  4. . ಶಂಕರಿ ಶರ್ಮ says:

    ಉತ್ತಮ ಸಂದೇಶವನ್ನು ಸಾರುವ ಶಿವನ ಸಾಧನೆಯ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: