ಅವಿಸ್ಮರಣೀಯ ಅಮೆರಿಕ-ಎಳೆ 36

Share Button

  ಯುಟಾಕ್ಕೆ ಟಾ… ಟಾ….

 ಸುರಸುಂದರ ಪ್ರಕೃತಿಯ ನೈಜ ಕಲಾದರ್ಶನವನ್ನು ಮನದುಂಬಿ ವೀಕ್ಷಿಸಿ ನಮ್ಮ ಹೋಟೇಲಿಗೆ ಹಿಂತಿರುಗಿದಾಗ ಕತ್ತಲಾವರಿಸಿತ್ತು. ರಾತ್ರಿಯೂಟಕ್ಕೆ ಆ ಪುಟ್ಟ ಪಟ್ಟಣದಲ್ಲಿರುವ ಬೇರೆ ಹೋಟೇಲಿಗೆ ಭೇಟಿ ಕೊಡೋಣವೆಂದು ಹೊರಟೆವು. ರಸ್ತೆಯಲ್ಲಿ ಯಾಕೋ  ಅಲ್ಲಲ್ಲಿ  ಬೆಳಕಿಲ್ಲದೆ, ನಸುಗತ್ತಲು ಆವರಿಸಿತ್ತು. ಹತ್ತು ನಿಮಿಷಗಳ ನಡಿಗೆ ಬಳಿಕ ಚಿಕ್ಕದಾದ ಆದರೆ ಚೊಕ್ಕದಾದ ಹಳೆ ಮಾದರಿಯ ಉಪಾಹಾರಗೃಹಕ್ಕೆ ತಲಪಿದಾಗ ನಿಜಕ್ಕೂ ಖುಷಿಯಾಯ್ತು. ಮರಗಳಿಂದಲೇ ಮಾಡಿದಂತಹ ಆ ಕಟ್ಟಡವು ಒಂದು ಅಂತಸ್ತನ್ನು ಹೊಂದಿದ್ದು, ಅದರ ಹೆಸರೂ ಗಮನ ಸೆಳೆಯುವಂತಿತ್ತು…Twisted Sisters ! ಹೆಸರಿಗೆ ತಕ್ಕಂತೆ, ಅಲ್ಲಿ ಎಲ್ಲಾ ಕೆಲಸಗಳಿಗೂ ಮಹಿಳೆಯರೇ ಇದ್ದುದು ವಿಶೇಷ. ಮಂದಬೆಳಕಿನಲ್ಲಿ ಅಲ್ಲಿಯ ಸ್ವಚ್ಛತೆ, ನಾಜೂಕುತನ ಎದ್ದುಕಾಣುತ್ತಿತ್ತು. ಅತ್ಯಂತ ನಯ ವಿನಯ ನಡವಳಿಕೆಯಿಂದ ಕೂಡಿದ ಅವರ ವ್ಯವಹಾರ ಬಹಳ ಮೆಚ್ಚುಗೆಯಾಯ್ತು. ಒಳಗಡೆಗೆ ಹೆಜ್ಜೆ ಇಟ್ಟ ತಕ್ಷಣ, ಮುಂಭಾಗದಲ್ಲಿರುವ ಫಲಕದಲ್ಲಿ ನೇತು ಹಾಕಲಾಗಿರುವ ಪುಟ್ಟ ಮಕ್ಕಳು ಬಿಡಿಸಿದ ಚಿತ್ರಗಳು ಗಮನಸೆಳೆಯುವಂತಿತ್ತು…ಹಾಗೆಯೇ ಕುತೂಹಲವೂ ಉಂಟಾಯ್ತು. ಹೋಟೇಲ್ ಅದಾಗಲೇ ಭರ್ತಿಯಾಗಿದ್ದುದರಿಂದ ನಾವು ಊಟಕ್ಕಾಗಿ ಸ್ವಲ್ಪ ಹೊತ್ತು ಕಾಯಬೇಕಾಯಿತು. ಆಗಲೇ, ನಮ್ಮ ಮೊಮ್ಮಗಳಿಗಾಗಿ, ಚಿತ್ರ ಬಿಡಿಸಲು,  ಬಣ್ಣ ತುಂಬಿಸಲು ಖಾಲಿ ಹಾಗೂ ಚಿತ್ರವಿರುವ ಹಾಳೆಗಳ ಜೊತೆಗೆ ಪೆನ್ಸಿಲ್, ಬಣ್ಣದ ಪೆನ್ಸಿಲುಗಳನ್ನು ಮೇಜಿನ ಮೇಲೆ ಇರಿಸಿದರು. ನನಗೆ ಆಶ್ಚರ್ಯವಾಯ್ತು…ಇದೇನಪ್ಪಾ ಎಂದು! ನಮ್ಮ ಊಟ ಬರಲು ತೆಗೆದುಕೊಳ್ಳುವ ಸಮಯದಲ್ಲಿ ಚಿಕ್ಕ ಮಕ್ಕಳಿಗೆ ಬೇಸರವಾಗಬಾರದೆಂದು, ಅವರನ್ನು ಚಟುವಟಿಕೆಗಳಲ್ಲಿ ತೊಡಗಿಸಲು  ಈ ವ್ಯವಸ್ಥೆ! ಅವರು ಬಿಡಿಸಿದ ಚಿತ್ರಗಳನ್ನು ಆಮೇಲೆ ಮುಂಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗುತ್ತದೆ. ಇದನ್ನು ನೋಡುವಾಗ,  ಮಕ್ಕಳಿಗೂ, ಅವರ ಹೆತ್ತವರಿಗೂ ಎಷ್ಟೊಂದು ಖುಷಿಯ ಸಂಗತಿ ಅಲ್ಲವೇ..?  ಇಲ್ಲಿಯ ಜನರಿಂದ ನಾವು ಕಲಿಯುವುದು ಎಷ್ಟೊಂದು ಇದೆಯಲ್ಲಾ ಅನ್ನಿಸಿದ್ದು ನಿಜ. ಊಟ ಮುಗಿಸಿ, ನೆನಪಿಗೋಸ್ಕರ ಕೆಲವು ವಸ್ತುಗಳನ್ನು ಖರೀದಿಸಿ ಹಿಂತಿರುಗುವಾಗ ರಾತ್ರಿ ಗಂಟೆ ಹತ್ತು ದಾಟಿತ್ತು.

ಮರುದಿನ ಬೆಳಗ್ಗೆ, ದಿನದ ಪ್ರಯಾಣಕ್ಕೆ ಸಜ್ಜಾಗುತ್ತಾ ಸಿದ್ಧಪಡಿಸಿದ ಮೊಸರನ್ನ ಬ್ಯಾಗ್ ಸೇರಿತು..ಹನ್ನೊಂದು ಗಂಟೆಗೆ ಅಲ್ಲಿಂದ ನಮ್ಮ ವಾಹನ ಹೊರಟಾಗ, ಮನಸ್ಸಿಗೆ ಬೇಸರವಾದರೂ ಯುಟಾಕ್ಕೆ ಟಾ…ಟಾ…ಮಾಡಲೇಬೇಕಾಯ್ತು. ಬೃಹದಾಕಾರ ಬೆಟ್ಟಗಳ ಸಾಲಿನ ತಪ್ಪಲಿನಲ್ಲಿಯೇ  ಹಾದು ಹೋಗುವ ರಸ್ತೆಯು ಬಹಳ ಚೆನ್ನಾಗಿದ್ದರೂ ಬಹಳ ತಿರುವುಗಳು ನಮ್ಮೂರನ್ನು ನೆನಪಿಸಿತು. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ  ನಾವು ಬಂದು ಸೇರಿದೆವು, Bluff city ಯಲ್ಲಿರುವ Twin Stone  ಎನ್ನುವ ಇಟಾಲಿಯನ್ ಹೋಟೇಲ್ ಗೆ. ಇದೊಂದು ಪುಟ್ಟ ಹಳ್ಳಿಯ ಹೋಟೇಲ್ ಆಗಿದ್ದರೂ, ಎಲ್ಲಾ ತರಹದ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಸ್ವಚ್ಛ, ಸುಂದರವಾಗಿದೆ.  ಹೋಟೇಲ್ ಗೆ ಹೊಂದಿಕೊಂಡೇ ಇರುವ ಚಂದದ, ಚಿಕ್ಕ ವಸ್ತುಸಂಗ್ರಹಾಲಯವು ಮನಸೆಳೆಯುತ್ತದೆ. ಈ ಸಂಗ್ರಹಾಲಯದಲ್ಲಿ ಗಮನಿಸಿದಂತೆ, ಈ ಯುಟಾ ರಾಜ್ಯದ ಚಿಹ್ನೆಯ ಹೆಸರು Kokapalli ಎಂದಾಗಿದ್ದು, ತಲೆ ಮೇಲೆ ಹಕ್ಕಿಯ ಗರಿಯಿದ್ದು, ಕೈಯಲ್ಲಿ ಕೊಳಲು ಹಿಡಿದ ಕಾಡುಮನುಷ್ಯನ ಚಿತ್ರವನ್ನು ಕಾಣಬಹುದು. ನನಗೆ ನಮ್ಮ ಮುರಳೀಲೋಲ ನೆನಪಾದ!  ಇಲ್ಲಿ ಗಮನಿಸಿದ ಸೋಜಿಗದ ಸಂಗತಿಯೆಂದರೆ, ಈ ಹೋಟೇಲಿನ ಹಿಂಭಾಗದಲ್ಲಿ ಅದಕ್ಕೆ ತಾಗಿಕೊಂಡಂತೆ ಅತೀ ಸಮೀಪದಲ್ಲಿರುವ ಸಣ್ಣ ಬೆಟ್ಟದ ಮೇಲೆ, ದೈತ್ಯಾಕಾರದ ಎರಡು ಬಂಡೆಗಳು ಒಂದಕ್ಕೊಂದು ತಾಗಿಕೊಂಡು,  ಹೋಟೇಲ್ ನ ಕಡೆಗೆ ವಾಲಿದಂತಿದ್ದು, ಭಾರೀ ಸಮತೋಲನ ಕಾಪಾಡಿಕೊಂಡು ನಿಂತಿದ್ದರೂ, ನೋಡುಗರಿಗೆ, ಅವುಗಳು ಯಾವ ಕ್ಷಣದಲ್ಲಾದರೂ ಹೋಟೇಲ್ ಮೇಲೆ ಧಡಾರ್ ಎಂದು ಬೀಳುವಂತೆ ಕಾಣಿಸುತ್ತಿತ್ತು!  ಈ ಜೋಡಿ ಬಂಡೆಗಳಿಂದಲೇ ಹೋಟೇಲಿಗೆ ಈ ಹೆಸರು ಬಂದುದೂ ಹೌದು. ನಮಗಂತೂ ಹೋಟೇಲ್ ನವರ ಧೈರ್ಯಕ್ಕೆ ಮೆಚ್ಚುಗೆಯ ಬದಲು ಗಾಬರಿಪಡುವಂತಾಯಿತು… ಅಲ್ಲದೆ ಅದನ್ನು ಕೇಳಿಯೂ ಬಿಟ್ಟೆವೆನ್ನಿ!  ನಾವು ಅಷ್ಟೂ ಸಮಯ ಅಲ್ಲಿದ್ದರೂ ಅಲ್ಲಿ ವ್ಯವಹಾರವೇನೂ ಮಾಡದೆ ಬರೇ  ತಿರುಗಾಡಿಕೊಂಡು, ಅಲ್ಲಿಯ ಬಚ್ಚಲನ್ನು, ನೀರನ್ನು ಬೇಕಾದಂತೆ ಬಳಸಿಕೊಂಡರೂ ಅವರು ಅದರ ಬಗ್ಗೆ ಏನೂ ತಕರಾರು ತೆಗೆಯದಿದ್ದುದು ಅವರ ಸೌಜನ್ಯಯುತ ನಡವಳಿಕೆಗೆ ಸಾಕ್ಷಿಯಾಗಿತ್ತು ಎನ್ನಬಹುದು ಅಲ್ಲವೇ?!

ಇನ್ನೂ ಊಟದ ಸಮಯವಾಗದಿದ್ದುದರಿಂದ, ನಾವು ತಂದಿದ್ದ ಮೃಷ್ಟಾನ್ನ(?)ವನ್ನು ಪ್ರಯಾಣದ ಮಧ್ಯೆ ಎಲ್ಲಾದರೂ ತಗೊಂಡರಾಯಿತು ಎಂದುಕೊಂಡು ಹೊರಟೆವು. ಆದರೆ ಅರ್ಧ ಗಂಟೆ ಪಯಣಿಸಿದರೂ ಒಂದೇ ಒಂದು ಮರ ಬಿಡಿ…ಗಿಡದ ನೆರಳೂ ಸಿಗದಾಯಿತು…ಮುಂದೆ ಸಿಗುವ ಸೂಚನೆಯೂ ಕಾಣಸದು…  ಜೊತೆಗೆ, ಬಟ್ಟಾಬಯಲಿನಲ್ಲಿ ಬಿರುಬಿಸಿಲು ಚುರುಗುಟ್ಟುತ್ತಿದೆ! ಬೇರೆ ದಾರಿ ಕಾಣದೆ ವಾಹನವು ಪುನ: ಹಿಂತಿರುಗಿ, ಮೊದಲು ನಾವು ಹೊರಟಿದ್ದ ಜೋಡಿ ಬಂಡೆಗಳ ಹೋಟೇಲಿಗೆ ತಲಪಿತು…ಸ್ವಲ್ಪ ಸಂಕೋಚದಿಂದಲೇ. ಅವರೋ ಕುತೂಹಲದಿಂದ ನಮ್ಮನ್ನು ನೋಡಿದರಷ್ಟೆ. ಅವರ ಒಪ್ಪಿಗೆ ಪಡೆದು, ಅಲ್ಲಿ ಹೊರ ಜಗುಲಿ ಮೇಲಿದ್ದ ಮೇಜು ಕುರ್ಚಿಗಳನ್ನು ಬಳಸಿಕೊಂಡು ನಮ್ಮ ಊಟದ ಡಬ್ಬ ಖಾಲಿ ಮಾಡಿದೆವು. ಜೊತೆಗೇ, ಅಲ್ಲಿಂದ ನಮಗಾಗಿ ಜ್ಯೂಸ್ ಖರೀದಿಸಿದೆವು…  ನಮಗೆ ಅಷ್ಟೊಂದು ಸಹಾಯ ಮಾಡಿದವರಲ್ಲಿ ಏನೂ ವ್ಯವಹರಿಸದೆ ಹೋಗುವುದು ತರವಲ್ಲ ಅಲ್ಲವೇ?

ಮುಂದಕ್ಕೆ ನಮ್ಮ ಪಯಣದ ಹಾದಿಯಲ್ಲಿ,   ರಸ್ತೆಗಡ್ಡ, ಅಪರೂಪಕ್ಕೆ ಸಿಕ್ಕ San Juan ನದಿಯಲ್ಲಿ  ರಭಸವಾದ ನೀರ ಹರಿವು ಕಂಡು ಬಹಳ ಖುಷಿಯಾಯ್ತು. ಮತ್ತೈದು ನಿಮಿಷಗಳಲ್ಲಿ ನಮ್ಮ ವಾಹನವು ಇನ್ನೊಂದು ರಾಜ್ಯವನ್ನು ಪ್ರವೇಶಿಸಿತು…ಅದುವೇ Arizona. ಈವರೆಗೆ ನಮ್ಮ ಪ್ರಯಾಣದಲ್ಲಿ  ಮೂರು ರಾಜ್ಯಗಳನ್ನು ಹೊಕ್ಕು ಹೊರಬಂತಂತಾಗಿತ್ತು. ಆದರೆ, ಅಮೆರಿಕದಲ್ಲಿ, ನಮ್ಮಲ್ಲಿರುವಂತೆ ಎಲ್ಲಿಯೂ ಅಂತಾರಾಜ್ಯ ಪರವಾನಿಗಿ ಕಿರಿಕಿರಿ ಇರಲಿಲ್ಲ.   ಸಂಜೆ ಸುಮಾರು ನಾಲ್ಕು ಗಂಟೆ ಸಮಯಕ್ಕೆ, Page ಎನ್ನುವ ಮಧ್ಯಮ ಗಾತ್ರದ ಪಟ್ಟಣಕ್ಕೆ ತಲಪಿದೆವು. (ಇಲ್ಲಿಯ ಹೆಸರುಗಳು ನಮಗೆ ಬಹಳ ಮೋಜೆನಿಸುತ್ತವೆ ಅಲ್ಲವೇ?!)  ಮೊದಲೇ ಕಾದಿರಿಸಿದ್ದ, ಸಕಲ ಸೌಕರ್ಯಗಳನ್ನೊಳಗೊಂಡ Hotel Road Side Inn, ಗೆ ಬಂದಿಳಿದಾಗ ನಿಜವಾಗಿಯೂ ಖುಷಿಯಾಯ್ತು. ರೆಸೋರ್ಟ್ ನಂತಹ ಈ ವಸತಿಗೃಹದ ಮುಂಭಾಗದಲ್ಲಿ ಸೊಗಸಾದ ಹೂದೋಟ, ಸುತ್ತಲೂ ಇರುವ ಗಿಡಮರಗಳು, ನಮ್ಮ ಇಂದಿನ ದೀರ್ಘಪ್ರಯಾಣದಲ್ಲಿ, ಶುಷ್ಕ ಭೂಪ್ರದೇಶವನ್ನೇ  ಕಂಡ ನಮ್ಮ ಮೈ, ಮನಕ್ಕೆ ತುಸು ಚೇತನವನ್ನು ನೀಡಿದ್ದು ಸುಳ್ಳಲ್ಲ. ವಸತಿಗೃಹದ ಕಟ್ಟಡ ಸಮುಚ್ಚಯದಲ್ಲಿ ಒಂದೆಡೆ, ಅಲ್ಲಿ ಉಳಕೊಂಡ ಗ್ರಾಹಕರಿಗೆ ಕಾಫಿ, ಟೀ, ಹಾಲು, ಬ್ರೆಡ್, ಹಣ್ಣು ಇತ್ಯಾದಿಗಳು ಉಚಿತವಾಗಿ ನೀಡುವರು. (ನಾವು ಮೊದಲೇ ಪಾವತಿಸಿದ ಹಣದಲ್ಲಿ ಇವುಗಳೂ ಸೇರಿಕೊಂಡಿವೆ…ಆದ್ದರಿಂದ ಉಚಿತ!) ಆ ವಸತಿಗೃಹದ ಮಾಲಕರು, ಗುಜರಾತಿನ ಪಟೇಲ್ ಕುಟುಂಬದವರಾಗಿದ್ದುದು ನಮಗೆ ಆತ್ಮೀಯವೆನಿಸಿತು… ನಮ್ಮ ದೇಶದಲ್ಲಿಯೇ ಇರುವೆವೆಂಬ ಭಾವನೆಯನ್ನು ಮೂಡಿಸಿತು. ಅಲ್ಲಲ್ಲಿ ಕೇಳಿ ಬರುತ್ತಿದ್ದ ಹಿಂದಿ ಭಾಷೆಯ ಮಾತುಗಳು ಇದಕ್ಕೆ ಪೂರಕವಾಗಿದ್ದವು. ಆಗಲೇ ಸಂಜೆ 5ಗಂಟೆಯಾಗುತ್ತಾ ಬಂದಿತ್ತು… ಅಲ್ಲಿಯ ಹೂದೋಟದ ಹೂವೊಂದು ನಮ್ಮವರಲ್ಲಿ ಯಾರದೋ ಒಬ್ಬರ ಕೈಚಳಕದಿಂದ  ನಮ್ಮ ರೂಮಿನಲ್ಲಿದ್ಧ ದೇವರ ಫೋಟೋವನ್ನು ಅಲಂಕರಿಸಿದಾಗ ನನಗೆ ನಿಜವಾಗಿಯೂ ಆತಂಕವಾಯ್ತು.. ಕೀಳುವುದನ್ನು ಕಂಡಿದ್ದರೆ!??  ಅದಾಗಲೇ ಸಮಯವಾಗಿಬಿಟ್ಟಿತ್ತು.. ಅಲ್ಲಿಯ ಜಗತ್ಪ್ರಸಿದ್ಧ ಪ್ರವಾಸೀತಾಣ Horse Shoe Bend ಗೆ ಭೇಟಿ ಕೊಡಲು… ಅದಕ್ಕಾಗಿ ನಾವೆಲ್ಲರೂ ಸಿದ್ಧರಾದೆವು.

ಕೊಲೊರಾಡೋ ನದಿ ವಿಸ್ಮಯ

ಸುಮಾರು 2,334 ಕಿ.ಮೀ ಉದ್ದದ, ಅಮೆರಿಕದ ಪ್ರಸಿದ್ಧ ಕೊಲೊರಾಡೋ ನದಿಯು ಅಲ್ಲಿಯ ಏಳು ರಾಜ್ಯಗಳು ಹಾಗೂ ಮೆಕ್ಸಿಕೋದ ಎರಡು ರಾಜ್ಯಗಳ ಮೂಲಕ ಹರಿಯುತ್ತದೆ. ಹಾಗೆಯೇ, ಈ ಅರಿಝೋನಾ ರಾಜ್ಯದ ಮೂಲಕ ಸಾಗುವಾಗ, ಅಲ್ಲಿಯ ಮೃದುವಾದ ಮರಳುಗಲ್ಲಿನ ಭೂತಳವನ್ನು ಚಿತ್ರ ವಿಚಿತ್ರ ರೂಪದಲ್ಲಿ ಕೊರೆದು ತನ್ನ ಇರುವಿಕೆಯ ಗುರುತನ್ನು ತೋರಿಸಿದೆ. ನಾವು ವೀಕ್ಷಿಸಲು ಹೊರಟಿರುವ ಜಾಗದಲ್ಲಿ ಈ ನದಿಯು ಕುದುರೆಲಾಳದಂತೆ U ಆಕಾರದಲ್ಲಿ ಹರಿದು, ಅದರ ಮಧ್ಯದಲ್ಲಿ ಒಂದು ಪುಟ್ಟ ನಡುಗುಡ್ಡೆಯನ್ನು ನಿರ್ಮಿಸಿದೆ…ಅದ್ದರಿಂದಲೇ ಈ ಪ್ರವಾಸೀತಾಣಕ್ಕೆ ತಕ್ಕುದಾದ ಹೆಸರು ಇದಾಗಿದೆ. ಇಲ್ಲಿ ನದಿಯು ನೆಲಮಟ್ಟದಿಂದ ಸುಮಾರು 1000 ಅಡಿಗಳಷ್ಟು ಆಳದಲ್ಲಿ ಹರಿದು ತನ್ನ ಅಗಾಧತೆಯನ್ನು ಮೆರೆಸಿದೆ. ಸುಮಾರು 4,400 ವರ್ಷಗಳಷ್ಟು ಹಿಂದೆ ಈ ರಚನೆಯು ಏರ್ಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿಗೆ, ವರ್ಷವೊಂದಕ್ಕೆ ಸುಮಾರು ಎರಡು ಮಿಲಿಯ ಪ್ರವಾಸಿಗರು  ಭೇಟಿಕೊಡುವುದು ಇದರ ಹೆಗ್ಗಳಿಕೆ ಎನ್ನಬಹುದು. 

ನಮ್ಮ ವಸತಿಗೃಹದಿಂದ ವಾಹನದಲ್ಲಿ 20 ನಿಮಿಷ  ಪಯಣಿಸಿ, ಆ ಬಳಿಕ 15 ನಿಮಿಷಗಳಷ್ಟು ದೂರ ನಡೆಯಬೇಕಿತ್ತು. ಅಲ್ಲಿಯ ಅತ್ಯಂತ ಸುಂದರ ಸೂರ್ಯಾಸ್ತ ವೀಕ್ಷಿಸುವುದನ್ನು ತಪ್ಪಿಸುವ ಹಾಗಿಲ್ಲವಲ್ಲಾ.? ವಾಹನ ನಿಲ್ಲಿಸಿದಲ್ಲಿಂದ ಸ್ವಲ್ಪ ಎತ್ತರಕ್ಕೇರಿದಾಗ ಕಣ್ಣೆದುರಿಗೆ ಕಾಣಿಸಿದುದು ಬರೇ ಬಟ್ಟಾಬಯಲು. ಹಲವು ಪ್ರವಾಸಿಗರು ಹೋಗುವತ್ತ ನಿರುಕಿಸಿದಾಗ, ಬಯಲಿನ ಕೆಳಗಡೆಗೆ ಅನತಿ ದೂರದಲ್ಲಿ ಪುಟ್ಟ ಪುಟ್ಟ ಗೊಂಬೆಗಳಂತೆ ತೋರುವ ಜನರ ಗುಂಪು ಕಾಣಿಸಿತು. ಸಮಯ ಮೀರುತ್ತಿದೆ.. ಆದರೆ, ನದಿಯ ಕುರುಹೇ ಕಾಣಿಸ್ತಿಲ್ಲವಲ್ಲಾ ಎಂದು ನನ್ನ ಆತಂಕ. ಅಲ್ಲೇ ಹೋಗುತ್ತಿರುವವರ ಹಿಂದೆಯೇ ಕಿರಿದಾದ ಕಾಲುದಾರಿಯಲ್ಲಿ  ಓಡು ನಡಿಗೆಯಲ್ಲಿಯೇ ಸಾಗಬೇಕಾಯಿತು. ಎಷ್ಟು ವೇಗವಾಗಿ ನಡೆದರೂ ತಲಪಬೇಕಾದ ಸ್ಥಳವು ಇನ್ನೂ ದೂರವಾಗುತ್ತಿರುವಂತೆ ಭಾಸವಾಗುತ್ತಿತ್ತು. ಅಂತೂ ಅರ್ಧಗಂಟೆ ನಡೆದಾಗ ಜನರ ಗುಂಪು ಹತ್ತಿರದಲ್ಲೇ ಗೋಚರವಾಯಿತು. ಎಲ್ಲರೂ ಇಣುಕಿ ಕೆಳಗಡೆಗೆ ನೋಡುತ್ತಿದ್ದರು. ಇದೇನಪ್ಪಾ ಎಂದು ಕುತೂಹಲದಿಂದ ನಾನೂ ಹತ್ತಿರ ಹೋದೆ.. ಕೆಳಗಡೆ ನೋಡುತ್ತೇನೆ…ಆಶ್ಚರ್ಯ!!

ಅತ್ಯಂತ ಆಳದಲ್ಲಿ  ಕಾಣುತ್ತಿದೆ ಜಗತ್ಪ್ರಸಿದ್ಧ ಕೊಲೊರಾಡೊ ನದಿಯ ಗಂಭೀರ ಹರಿವು. ಸಾವಿರ ಅಡಿಗಳಷ್ಟು ಆಳದಲ್ಲಿರುವ ಇದರ ಅಗಾಧತೆಯನ್ನು ಅರಿಯಲು ನಮ್ಮ ನೋಟದ ಹರಹು ಒಂದಿನಿತೂ ಸಾಲದಾಯಿತು. ಅಗಾಧ ಎತ್ತರದ  ದಿಬ್ಬದ ಒಂದು ಪಕ್ಕದಿಂದ ನದಿಯು ಹರಿಯುತ್ತಾ ಸುಮಾರು 270° ಕೋನದಷ್ಟು ತಿರುವನ್ನು ಪಡೆದು ಹಿಂದಕ್ಕೆ ಪ್ರವಹಿಸುವ ನದಿಯನ್ನು ನೋಡುತ್ತಾ ಮೈಮರೆಯುವಂತಾಯ್ತು. ಮೇಲೆ ನಿಂತಿದ್ದ ನನಗಂತೂ ಕೆಳಗೆ ಬಾಗಿ ನೋಡಲೇ ಭಯ…ಸ್ವಲ್ಪ ದೂರದಿಂದಲೇ ನೋಡಿ ತೃಪ್ತಿ ಪಟ್ಟುಕೊಂಡೆ. ಅಲ್ಲಿ ನಾನು ಗಮನಿಸಿದಂತೆ ಅಪಾಯವಾಗದಂತೆ, ಯಾವ ರೀತಿಯ ತಡೆಗೋಡೆಯನ್ನೂ ಹಾಕಿರಲಿಲ್ಲ. ಕೊರೆತಕ್ಕೆ ಒಳಗಾದ ಕಣಿವೆಯ ಅಂಚಿನಲ್ಲಿರುವ ಬಂಡೆಗಳು ಕಣಿವೆಯೊಳಕ್ಕೆ ನಿರುಕಿಸುತ್ತಿದ್ದವು. ಅವುಗಳ ಮೇಲೆ ಗಟ್ಟಿ ಗುಂಡಿಗೆಯವರು ತೀರಾ ಅಂಚಿನಲ್ಲಿ, ಅಪಾಯಕರ ರೀತಿಯಲ್ಲಿ ನಿಂತು ಫೋಟೋ ತೆಗೆಯುತ್ತಿರುವುದನ್ನು ಕಂಡು ನನ್ನೆದೆ ಝಲ್ ಎನ್ನುತ್ತಿತ್ತು!  ಬಹಳ ಜನರು ಕ್ಯಾಮರಾವನ್ನು ಹೊಂದಿಸಿಕೊಂಡು, ಸೂರ್ಯಾಸ್ತವಾಗಲು, ಅದರ ವೈಭವವನ್ನು ಅದರೊಳಗೆ ತುಂಬಲು ಕಾಯುತ್ತಿದ್ದರು.ಅಷ್ಟರಲ್ಲೇ ಸಂಜೆ ಗಂಟೆ 6 ಆಗಿಬಿಟ್ಟಿತು…ಭಾಸ್ಕರನು ಪಡುದಿಗಂತದಲ್ಲಿ ಅಸ್ತಂಗತನಾಗತೊಡಗಿದ. ಅಷ್ಟರಲ್ಲೇ ನಮ್ಮವರು, “ಅದೋ, ಸೂರ್ಯಾಸ್ತ!” ಎಂದು, ನಾವು ಕಡಲತೀರದಲ್ಲಿ ಸಂಭ್ರಮದಿಂದ ಸೂರ್ಯಾಸ್ತ ವೀಕ್ಷಿಸುವಂತೆ ಆಗಸದಂಚಿಗೆ ದೃಷ್ಟಿ ನೆಟ್ಟಿದ್ದರು. ಆದರೆ ಇಲ್ಲಿ ನಡೆದ ವಿದ್ಯಮಾನವೇ ಬೇರೆ!…..

ಏನದು ವಿಚಿತ್ರ ವಿದ್ಯಮಾನ..??

(ಮುಂದುವರಿಯುವುದು……)

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=36026

–ಶಂಕರಿ ಶರ್ಮ, ಪುತ್ತೂರು.

6 Responses

 1. ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ says:

  ಬಹಳ ಒಳ್ಳೆಯ ವಿಷಯಗಳು

  • . ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು

 2. ನಯನ ಬಜಕೂಡ್ಲು says:

  ಚಂದದ ಪ್ರವಾಸ

 3. ಚಂದದ ಅಮೆರಿಕ ಪ್ರವಾಸ… ಜೊತೆಗೆ ಒಳ್ಳೆಯ ಸಂಗತಿಗಳ. ಉಲ್ಲೇಖ… ಹಾಗೂ..ತಮ್ಮ ಅನುಭವ ದ ಬುತ್ತಿ…ಧನ್ಯವಾದಗಳು.

  • . ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು… ನಾಗರತ್ನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: