ಕಾದಂಬರಿ: ನೆರಳು…ಕಿರಣ 35

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

ಕ್ಷೇತ್ರಯಾತ್ರೆಯ ಸಿದ್ಧತೆ ಪ್ರಾರಂಭವಾಯಿತು. ನಾರಣಪ್ಪನೂ ಜೊತೆಗೂಡಿದ್ದರಿಂದ ಪಕ್ಕದ ಮನೆಯವರಿಗೆ ಮನೆಯ ನಿಗಾ ಇಡುವ ಜವಾಬ್ದಾರಿಯನ್ನು ವಹಿಸಿದರು. ಭಾಗ್ಯಳೂ ಪಾಠದ ವಿದ್ಯಾರ್ಥಿಗಳಿಗೆ ರಜೆಯೆಂದು ಹೇಳಿದ್ದಾಯಿತು. ತಂದೆ ಮಗ ಇಬ್ಬರೂ ತಂತಮ್ಮ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡರು. ಹೊರಡುವುದು ಇನ್ನೆರಡು ದಿನಗಳಿದೆ ಎನ್ನುವಾಗ ಭಾಗ್ಯ ಆ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಅತ್ತೆಯವರನ್ನು ಕೇಳಿದಳು. ಸೊಸೆಯ ಆಸಕ್ತಿಯನ್ನು ತಿಳಿದ ಸೀತಮ್ಮನವರು “ಭಾಗ್ಯ, ನಾನು ಅದನ್ನು ಹೇಳುವುದಕ್ಕಿಂತ ನಿಮ್ಮ ಮಾವನವರೋ ಅಥವಾ ಶ್ರೀನಿವಾಸನೋ ಹೇಳಿದರೆ ಚೆನ್ನ. ವಿವರವಾಗಿ ಹೇಳುತ್ತಾರೆ” ಎಂದರು.

ಹೂ ಇವರನ್ನು ಕೇಳುವುದಕ್ಕಿಂತ ಮಾವಯ್ಯನವರು ಬಿಡುವಾಗಿ ಕುಳಿತಿದ್ದಾರೆ. ಅವರನ್ನೇ ಕೇಳುವುದೇ ಉತ್ತಮ ಎಂದುಕೊಂಡು ಹಾಲಿಗೆ ಬಂದಳು. ಜೋಯಿಸರು ಜೋಕಾಲಿಯ ಮೇಲೆ ಕಾಣಿಸಲಿಲ್ಲ. ಖಾಸಾ ರೂಮು ಅಲ್ಲಿಯೂ ಇಲ್ಲ, ಮುಂದಿನ ವೆರಾಂಡಾದಲ್ಲಿ ನೋಡಿದಳು. ಅವಳ ಊಹೆ ನಿಜವಾಗಿತ್ತು. ಅಲ್ಲಿದ್ದ ಈಜೀಛೇರಿನಲ್ಲಿ ಕುಳಿತು ಯಾವುದೋ ಪುಸ್ತಕವನ್ನು ಓದುವುದರಲ್ಲಿ ಮಗ್ನರಾಗಿದ್ದರು. ಕೇಳಲೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲಿರುವಾಗಲೇ ಸೀತಮ್ಮ ಅಲ್ಲಿಗೆ ಬಂದರು. “ಅರೇ ಭಾಗ್ಯ ಏನೋ ಕೇಳಬೇಕೆಂದು ಬಂದವಳು ಇಲ್ಲಿಯೇ ಬಾಗಿಲಲ್ಲಿ ನಿಂತಿದ್ದೀಯಾ?” ಎಂದು ಪ್ರಶ್ನಿಸಿದರು.

ಆ ಸದ್ದಿಗೆ ಎಚ್ಚೆತ್ತ ಜೋಯಿಸರು “ಏನು ಯಾರನ್ನು ಕೇಳಬೇಕು, ಯಾವ ವಿಷಯ?” ಎಂದರು.

“ಅದೇ ಮಾವಯ್ಯಾ, ನಾವೀಗ ಪೂಜೆ ಮಾಡಿಸಲೆಂದು ಹೊರಟಿದ್ದೀವಲ್ಲ ‘ವಿದುರಾಶ್ವತ್ಥ‘ ಸ್ಥಳದ ಮಹಿಮೆಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಅತ್ತೆಯವರನ್ನು ಕೇಳಿದ್ದಕ್ಕೆ ಅವರು ನಿಮ್ಮನ್ನು ಕೇಳೆಂದರು. ಅದಕ್ಕೇ ನಿಮಗೆ ಬಿಡುವಿದ್ದರೆ ಹೇಳಿ” ಎಂದಳು.

“ಅಯ್ಯೋ ಅದಕ್ಯಾಕೆ ಅಷ್ಟೊಂದು ಸುತ್ತೀ ಬಳಸಿ ಕೇಳುತ್ತೀಯೆ. ಬಾ.. ಈಗ ನಾನು ಓದುತ್ತಿರುವ ಪುಸ್ತಕವೂ ಅದಕ್ಕೇ ಸಂಬಂಧಿಸಿದ್ದೇ. ನಾವು ಅಲ್ಲಿಗೆ ಭೇಟಿಕೊಟ್ಟು ಸುಮಾರು ಮೂವತ್ತು ವರ್ಷಕ್ಕೂ ಹೆಚ್ಚಾಗಿರಬಹುದು. ಇತ್ತೀಚೆಗೇನೇನು ಬದಲಾವಣೆಗಳು ಆಗಿವೆಯೋ ತಿಳಿದುಕೊಳ್ಳೋಣ ಎಂದು ನಮ್ಮ ದೇವಸ್ಥಾನದ ಮುಂದಿರುವ ಅಂಗಡಿಯಿಂದ ಹೊಸದಾಗಿ ಪ್ರಕಟಿಸಿರುವ ಈ ಪುಸ್ತಕ ತೆಗದುಕೊಂಡು ಬಂದೆ. ಅದನ್ನೇ ತಿರುವಿ ಹಾಕುತ್ತಿದ್ದೆ. ಹೇಳಿಕೊಳ್ಳುವಂತಹ ಬದಲಾವಣೆಗಳೇನೂ ಇದ್ದಂತಿಲ್ಲ. ಬಂದವರಿಗೆ ಉಳಿದಕೊಳ್ಳಲು ಹೆಚ್ಚಿನ ಅನುಕೂಲಗಳನ್ನು ಮಾಡಿದ್ದಾರೆ. ಬಾ ನಾನು ತಿಳಿದಷ್ಟನ್ನು ಹೇಳುತ್ತೇನೆ ನಮ್ಮಲ್ಲಿಗೆ ಪೂಜೆ ಮಾಡಿಸಲು ಬರುವವರಿಗೂ ಇದನ್ನು ಹೇಳುತ್ತೇನೆ. ಈ ಕ್ಷೇತ್ರವು ಬೆಂಗಳೂರಿನಿಂದ ಸುಮಾರು ತೊಂಭತ್ತು ಕಿಲೋಮೀಟರ್ ದೂರದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರಿನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ಇದೊಂದು ಸಣ್ಣಗ್ರಾಮ. ಕರ್ನಾಟಕ ಆಂಧ್ರಪ್ರದೇಶ ರಾಜ್ಯಗಳ ಗಡಿಭಾಗ. ಸ್ಥಳಮಹಿಮೆ ಅಪಾರ. ಇಲ್ಲಿಯೂ ಸ್ಥಳಪುರಾಣದ ಕಥೆಯಿದೆ.

ಮಹಾಭಾರತದ ಯುದ್ಧ ಮುಗಿದಮೇಲೆ ಅಲ್ಲಾದ ರಕ್ತಪಾತವನ್ನು ನೋಡಿ ಮನನೊಂದ ವಿದುರ ಮನಶ್ಶಾಂತಿಗಾಗಿ ಪರಿಹಾರವನ್ನು ಕೋರಿದಾಗ ಶ್ರೀಕೃಷ್ಣನು ಹಲವಾರು ಪುಣ್ಯಕ್ಷೇತ್ರಗಳ ದರ್ಶನ ಮಾಡು. ನಿನ್ನ ಮನಕ್ಲೇಶ ಕಡಿಮೆಯಾಗುತ್ತದೆ. ಮುಕ್ತಿಯ ಮಾರ್ಗ ಗೋಚರಿಸುತ್ತದೆ ಎಂದು ಹೇಳಿದನಂತೆ. ಅದರಂತೆ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಈ ಸ್ಥಳಕ್ಕೆ ಬಂದನಂತೆ. ಅಲ್ಲಿ ಆಗ ಮೈತ್ರೇಯಿ ಮಹರ್ಷಿಗಳ ದರ್ಶನವಾಯಿತು. ಅವರು ಕೊಟ್ಟ ಸಲಹೆಯಂತೆ ವಿದುರನು ಅಲ್ಲಿಯೇ ತಪಸ್ಸನ್ನಾಚರಿಸಿದನಂತೆ. ಅಲ್ಲಿ ಒಂದು ಅಶ್ವತ್ಥವೃಕ್ಷದ ಸಸಿಯನ್ನು ತಂದು ನೆಡಿಸಿದರಂತೆ. ವಿದುರನು ಅದಕ್ಕೆ ನೀರು ಹಾಕಿ ಅದನ್ನು ಪೋಷಿಸಿ ಪೂಜಿಸಿದನಂತೆ.. ಅದರಲ್ಲಿ ಹೊರಬಂದ ಮೂರುಕವಲುಗಳು ಬೆಳೆದವು. ವಿದುರನ ತಪಸ್ಸಿನಿಂದ ಸುಪ್ರೀತರಾದ ತ್ರಿಮೂರ್ತಿಗಳು ಕವಲುಗಳಲ್ಲಿ ಪ್ರತ್ಯಕ್ಷರಾಗಿ ಅವನನ್ನು ಹರಸಿದರು. ಇದರಿಂದ ಅವನ ಮನಸ್ಸಿನ ತಳಮಳಗಳು ಶಾಂತವಾದುವಂತೆ. ಹೀಗೆ ವಿದುರನು ಆ ಕಾಲದಲ್ಲಿ ನೆಟ್ಟು ಬೆಳೆಸಿದ ಅಶ್ವತ್ಥವೃಕ್ಷಕ್ಕೆ ‘ವಿದುರಾಶ್ವತ್ಥ’ ಎಂದು ಹೆಸರಾಯಿತು. ಅದೇ ಈ ಊರಿನ ಹೆಸರಾಗಿ ಜನಜನಿತವಾಗಿದೆ.

ಆದ್ದರಿಂದಲೇ ಈ ಅಶ್ವತ್ಥವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಮೂವರೂ ದೇವತೆಗಳು ನೆಲೆಸಿದ್ದಾರೆಂದು ನಂಬಿಕೆ ಇಂದಿನವರೆಗೂ ಇದೆ. ಅದರ ಪೂಜೆ ಪ್ರದಕ್ಷಿಣೆಯಲ್ಲಿ ವಿಶ್ವಾಸ, ನಂಬಿಕೆ ಇದೆ.  ಸರ್ಪದೋಷವಿರುವವರು ಇಲ್ಲಿಗೆ ಹರಕೆ ಹೊತ್ತು ಪೂಜೆ ಮಾಡಿಸಿ ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿಸಿದರೆ ದೋಷ ಪರಿಹಾರವಾಗಿ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ನಾಗರಕಲ್ಲುಗಳಲ್ಲಿ ಜೋಡಿಯಾಗಿರುವ ನಾಗಗಳು ಗಂಡು ಹೆಣ್ಣಿನ ವಿವಾಹದ ಸಂಕೇತವಾಗಿದ್ದು ಅದನ್ನು ಪ್ರತಿಷ್ಠಾಪನೆ ಮಾಡಿ ಅಲ್ಲಿರುವ ನಾಗರ ಹುತ್ತಕ್ಕೆ ನೂಲಿನ ಎಳೆಗಳನ್ನು ಕಟ್ಟಿ ಪೂಜೆ ಸಲ್ಲಿಸಿ ಹರಕೆಯನ್ನು ಪೂರ್ತಿಮಾಡುತ್ತಾರೆ. ಹೀಗಾಗಿ ಅಲ್ಲಿ ವೃಕ್ಷದ ಸುತ್ತಮುತ್ತಲಿನ ಜಾಗವೆಲ್ಲವೂ ನಾಗರುಕಲ್ಲುಗಳ ಬೀಡಾಗಿದೆ. ಇಲ್ಲಿ ವರ್ಷಕ್ಕೊಂದು ಬಾರಿ ನಡೆಯುವ ರಥೋತ್ಸವವೂ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಯ ದಂಡೆಯಲ್ಲೇ ಈ  ಸ್ಥಳವಿದೆ. ಹಾಗಾಗಿ ಪೂಜಾಕಾರ್ಯಗಳಿಗೆ ಅನುಕೂಲಕರವಾಗಿದೆ. ಅಶ್ವತ್ಥವೃಕ್ಷಗಳು ಬೇರೆ ಕಡೆಗಳಲ್ಲಿಯೂ ಇರುತ್ತವೆ. ಆದರೆ ಸ್ಥಳಮಹಿಮೆಯಿಂದ ಇಲ್ಲಿರುವುದಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ನಾವು ಮೊದಲು ಒಂದೆರಡು ಮಕ್ಕಳನ್ನು ಕಳೆದುಕೊಂಡ ನಂತರ ದೋಷ ಪರಿಹಾರಕ್ಕಾಗಿ ಅಲ್ಲಿಗೆ ಹೋಗಿ ಹರಕೆ ಕಟ್ಟಿಕೊಂಡು ಪೂಜೆ ಮಾಡಿಸಿದ ಮೇಲೆ ನಮಗೆ ಶ್ರೀನಿವಾಸನ ಜನನವಾಯಿತು. ನಂತರ ಅಲ್ಲಿಗೆ ಹೋಗಿ ಹರಕೆ ತೀರಿಸಿ ಬಂದೆವು ಈಗ ತಾನಾಗಿಯೇ ಅವಕಾಶ ಒದಗಿಬಂದಿದೆ. ನಂಬಿಕೆ, ವಿಶ್ವಾಸವಿಟ್ಟು ಹೋಗಿ ಬರೊಣವೆಂದು ನಿರ್ಧರಿಸಿದ್ದೇವೆ. ಇದರಿಂದ ನಮಗೂ ಒಳ್ಳೆಯದಾಗಬಹುದು” ಎಂದರು.

ಎಲ್ಲವನ್ನೂ ಕೇಳಿದ ಭಾಗ್ಯಳಿಗೆ ತನ್ನಮ್ಮ ಅರಳೀಕಟ್ಟೆಗೆ ಪ್ರದಕ್ಷಿಣೆ ಹಾಕುವಾಗ ಹೇಳಿಕೊಳ್ಳುತ್ತಿದ್ದ ಶ್ಲೋಕ ನೆನಪಿಗೆ ಬಂದು ಅದನ್ನು ಈಗ ತಾನೂ ಅನುಸರಿಸುತ್ತಿರುವುದು, ಹಾಗೂ ಈಗ ಮಾವಯ್ಯನವರು ಹೇಳಿದ ಸ್ಥಳ ಮಹಿಮೆ ಎಲ್ಲವೂ ತಾಳೆಯಾಗುತ್ತವೆ. ಎಂದು ನಿಟ್ಟುಸಿರೊಂದನ್ನು ಬಿಟ್ಟು ತನ್ನ ಪತಿರಾಯ ಜಾತಕ ಪರೀಕ್ಷಿಸಿಕೊಂಡಿದ್ದಾರೆಯೋ, ಅದರಲ್ಲಿ ದೋಷವೇನಾದರೂ ಕಂಡಿದೆಯೋ, ಅನುಮಾನ ಬಂತು. ಏಕೆಂದರೆ ಯಾರಾದರೂ ಏನಾದರೂ ಸಲಹೆ ಕೊಟ್ಟರೆ ಕೇಳುವ, ಸುಲಭದಲ್ಲಿ ಅದನ್ನೊಪ್ಪುವ ಅಸಾಮಿ ಅವರಲ್ಲ. ಮಾವಯ್ಯನವರ ಗೆಳೆಯರು ಏನಾದರೂ ಇವರ ಮನಸ್ಸಿಗೆ ನಾಟುವಂತೆ ಬೋಧಿಸಿರಬಹುದೇ? ಏನೇ ಆಗಲೀ ಹೊರಟಿದ್ದೇವೆ, ಮಾವಯ್ಯ ಹೇಳಿದಂತೆ ನನ್ನ ಬರಿದಾದ ಒಡಲಿನಲ್ಲಿ ವಂಶದ ಕುಡಿ ಮೂಡಲಿ ..ಬಂಜೆ‌ಎನ್ನುವ ಅಪವಾದಿಂದ ಈಗಲಾದರೂ ಮುಕ್ತಿ ಸಿಕ್ಕರೆ ಸಾಕು ಎಂದುಕೊಂಡಳು.

“ಏನಮ್ಮಾ ಯಾವುದೊ ಆಲೋಚನೆಯಲ್ಲಿ ಮುಳಗಿದಂತಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಬೇರೆಬೇರೆ ದಂತಕತೆಗಳನ್ನು ಹೆಳುತ್ತಾರೆ. ಏನೇ ಹೇಳಿದರೂ ಮೂಲವೊಂದೇ” ಎಂದರು ಜೋಯಿಸರು.

“ಸರಿ ಮಾವಯ್ಯಾ, ನಿಮಗೆ ಅರವತ್ತು ವರ್ಷದ ಶಾಂತಿ ಮಾಡಲಿಲ್ಲವಲ್ಲ. ನೀವು ಎಲ್ಲರಿಗೂ ಶಾಂತಿಪೂಜೆ ಮಾಡಿಸಲು ಹೋಗುತ್ತೀರಿ” ಎಂದಳು ಭಾಗ್ಯ.

ಅವಳ ಮಾತಿಗೆ ಅಲ್ಲಿಯೇ ನಿಂತಿದ್ದ ಸೀತಮ್ಮ “ಮದುವೆಯಾದ ಹತ್ತು ವರ್ಷಕ್ಕೆ ನಿನಗೆ ಇಂತಹ ಅನುಮಾನ ಬಂತಲ್ಲ. ಆದರೆ ಶೀನಿ ಮದುವೆಗೆ ಮುಂಚೆಯೇ ಇವೆಲ್ಲವೂ ಮುಗಿದಿದ್ದವಮ್ಮಾ. ಹೂಂ ಶೀನಿ ಹುಟ್ಟುವಾಗಲೇ ನಿಮ್ಮ ಮಾವಯ್ಯನವರಿಗೆ ಮೂವ್ವತ್ತೊಂಬತ್ತು ತುಂಬಿ ನಲವತ್ತು. ಈಗ ನಿಮ್ಮ ಮಾವನವರಿಗೆ ಎಪ್ಪತ್ಮೂರು. ನಮ್ಮಲ್ಲಿ ಪ್ರತಿವರ್ಷವೂ ಹುಟ್ಟಿದ ಹಬ್ಬದಾಚರಣೆಗಳಿಲ್ಲ. ಆದ್ದರಿಂದ ನಿನಗೆ ಗೊತ್ತಾಗಿಲ್ಲ. ಪೂಜೆ ಪುನಸ್ಕಾರ, ಜನಗಳ ಕಷ್ಟಸುಖಗಳಿಗೆ ನಮ್ಮಿಂದ ಒಂದಿಷ್ಟು ಸಹಾಯ , ಜಗತ್ತಿನ ಕಷ್ಟಗಳನ್ನೆಲ್ಲ ಯಾರೂ ಪರಿಹರಿಸಲಾಗುವುದಿಲ್ಲ. ಆದರೆ ನಮಗೆ ತಿಳಿದಿರುವ ಕ್ಷೇತ್ರದಲ್ಲಿ ಒಂದಿಷ್ಟು ಸಾಂತ್ವನ ನೀಡಬಹುದಲ್ಲ. ಸೂಚಿಸುವ ಪರಿಹಾರ  ನೂರಕ್ಕೆ ನೂರು ಅಸಾಧ್ಯವಾದರೂ ಬದ್ಧತೆಯನ್ನು ಉಳಿಸಿಕೊಂಡಿದ್ದೇವೆ. ಭಗವಂತ ಹೀಗೆ ನಡೆಸುತ್ತಿದ್ದಾನೆ” ಎಂದರು.

ಅಬ್ಬಾ ! ನಲವತ್ತು ವರ್ಷಕ್ಕೊಬ್ಬ ಮಗ ! ಜನರ ಬಾಯಿಗೆ ಎಷ್ಟು ಆಹಾರವಾಗಿರಬಹುದು. ಅದಕ್ಕೇ ನನ್ನನ್ನು ಯಾರಾದರೂ ಹಂಗಿಸಿದರೆ, ನಾನೇ ನೊಂದುಕೊಂಡರೆ ಅತ್ತೆ ಮಾವ ಬೇಸರಿಸದೆ ಸಾಂತ್ವನ ಹೇಳುತ್ತಿದ್ದಾರೆ. ನೊಂದವರಿಗೇ ಗೊತ್ತು ನೋಯುವವರ ಮನಸ್ಸು ಎಂದುಕೊಂಡು “ನಾನೆಂದೂ ಈ ವಿವರಗಳನ್ನು ಕೇಳಲಿಲ್ಲ. ಅಲ್ಲದೆ ನನ್ನ ಹೆತ್ತವರ ಮನೆಯಲ್ಲಿ ಹುಟ್ಟುಹಬ್ಬದಾಚರಣೆಯ ಪ್ರದರ್ಶನವಿರಲಿಲ್ಲ. ಅಂತಹ ದಿನಗಳಲ್ಲಿ ಒಂದು ಹೊಸಬಟ್ಟೆ, ಏನಾದರೂ ಸಿಹಿಯೂಟವಿರುತ್ತಿತ್ತು ಅತ್ತೆ” ಎಂದಳು. ಅಷ್ಟರಲ್ಲಿ ಜೋಯಿಸರನ್ನು ಭೇಟಿಮಾಡಲು ಹೊರಗಿನಿಂದ ಯಾರೋ ಬಂದದ್ದರಿಂದ ಭಾಗ್ಯ ಮತ್ತು ಸೀತಮ್ಮನವರು ಒಳ ನಡೆದರು.

ಅಂತೂ ಮನೆಯವರ ಜೊತೆಯಲ್ಲಿ ನಾರಣಪ್ಪ ಮತ್ತು ನಂಜುಂಡನ ಕುಟುಂಬ, ಗೌರಿಯಮ್ಮನ ತಮ್ಮನ ಸಂಸಾರವೂ ಹೊರಟಿತ್ತು. ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗಿಬರೋಣವೆಂದು ವ್ಯಾನನ್ನು ಬುಕ್‌ಮಾಡಿದ್ದ ನಂಜುಂಡ. ಅವನ ನೇತೃತ್ವದಲ್ಲೇ ಹೋಗಿಬರುವುದೆಂಬ ಅಭಿಪ್ರಾಯ ಎಲ್ಲರಿಗೂ ಸಮ್ಮತವಾಯಿತು. ಸ್ವಲ್ಪ ದೂರ ವಾಹನವನ್ನು ನಂಜುಂಡ ಮತ್ತು ಶ್ರೀನಿವಾಸ ಇಬ್ಬರೂ ನಡೆಸುವುದೆಂದು ತೀರ್ಮಾನಿಸಿದರು. ಎಲ್ಲರೂ ಪರಸ್ಪರ ಪರಿಚಿತರೇ. ಆದ್ದರಿಂದ ಯಾವುದೇ ಸಂಕೋಚ, ಮುಜುಗರವಿಲ್ಲದೆ ಹರಟೆ, ಹಾಡು, ತಂತಮ್ಮ ಅನುಭವಗಳ ಬುತ್ತಿ ಬಿಚ್ಚುತ್ತಾ ಹೊರಟವರಿಗೆ ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಇವರಿಗೆಲ್ಲ ಇರಲು ವ್ಯವಸ್ಥೆಯನ್ನು ವೆಂಕಟರಾಮು ಪುರೋಹಿತರು ಮಾಡಿದ್ದರಿಂದ ತೊಂದರೆಯಾಗಲಿಲ್ಲ. ಅರ್ಚಕರ ನಿರ್ದೇಶನದಂತೆ ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಅವರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸಿದರು. ಭಾಗ್ಯಳಂತೂ ಅಲ್ಲಿನ ಆವರಣದಲ್ಲಿದ್ದ ಅಶ್ವತ್ಥವೃಕ್ಷ, ನಾಗದೇವರು, ನಾಗರಹುತ್ತ ಎಲ್ಲವನ್ನೂ ವೀಕ್ಷಿಸಿದಳು. ದೃಷ್ಟಿ ಹಾಯುವವರೆಗೂ ಅಲ್ಲಿ ನೆಟ್ಟಿದ್ದ ನಾಗರಕಲ್ಲುಗಳ ಸಂಖ್ಯೆಯನ್ನು ನೋಡಿದ್ದೇ ನೋಡಿದ್ದು. ಒಹೋ ! ತಾಪತ್ರಯ ಇರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದುಕೊಂಡಳು.

PC: Internet

ಪೂಜಾಕಾರ್ಯ, ಹರಕೆ ಎಲ್ಲವನ್ನೂ ಮುಗಿಸಿಕೊಂಡವರಿಗೆ ಭೋಜನ ವ್ಯವಸ್ಥೆಯನ್ನು ಜೋಯಿಸರ ಗೆಳೆಯರಾದ ವೆಂಕಟರಾಮು ಪುರೋಹಿತರೇ ಖುದ್ದಾಗಿ ನಿಗಾ ವಹಿಸಿ ಮಾಡಿಸಿದ್ದರು. ಎಲ್ಲವೂ ಸಾಂಗವಾಗಿ ಮುಗಿದಮೇಲೆ ಮತ್ತೆಲ್ಲಿಯೂ ಅಡ್ಡಾಡಲು ಹೋಗದೆ ತಮ್ಮ ತಮ್ಮ ಮನೆಗಳಿಗೆ ಹೋಗಬೇಕೆಂದೂ, ಹರಕೆ ಫಲಿಸಿದ ಮೇಲೆ ಮತ್ತೆ ಅದನ್ನು ತಪ್ಪದೆ ಬಂದು ತೀರಿಸಬೇಕೆಂದು ಹೇಳಿ ಆಶೀರ್ವದಿಸಿದರು. ಎಲ್ಲರನ್ನೂ ಬೀಳ್ಕೊಟ್ಟರು.

ನಿರ್ವಿಘ್ನವಾಗಿ ಪೂಜೆ ಮುಗಿಸಿಕೊಂಡು ಬಂದವರು ಒಂದೆರಡು ದಿನ ಅವರ ಬಾಯಲ್ಲಿ ಅಲ್ಲಿಯದೇ ಸುದ್ಧಿ, ನಂತರ ಎಂದಿನಂತೆ ತಂತಮ್ಮ ಕೆಲಸಗಳಲ್ಲಿ ಮಗ್ನರಾದರು. ಹೀಗೇ ಒಂದು ವಾರ ಕಳೆಯಿತು.

ಒಂದು ದಿನ ದೇವಸ್ಥಾನದ ಕೆಲಸ ಮುಗಿಸಿ ಹಿಂದಿರುಗಿದ ಜೋಯಿಸರು “ಸೀತೂ ಈ ದಿನ ಕೇಶವಯ್ಯ ಗುಡಿಹತ್ತಿರ ಬಂದಿದ್ದರು. ಅವರ ಮೊಮ್ಮಕ್ಕಳ ಉಪನಯನ ಸಮಾರಂಭ ತುಂಬ ಚೆನ್ನಾಗಿ ನಡೆಯಿತೆಂದರು. ಬಂದಿದ್ದವರಲ್ಲಿ ಬಹಳಷ್ಟು ಜನ ನಮ್ಮನ್ನು, ಭಾಗ್ಯಳನ್ನು ಕೇಳಿದರೆಂದು ಹೇಳಿದರು. ಹಾಗೆಯೇ ವಿದುರಾಶ್ವತ್ಥದಲ್ಲಿ ಈಗಿರುವ ಸೌಕರ್ಯಗಳ ಬಗ್ಗೆ , ಪೂಜಾವಿವರಗಳ ಬಗ್ಗೆ ವಿಚಾರಿಸಿದರು. ಬಂದಿದ್ದ ನೆಂಟರಿಷ್ಟರೆಲ್ಲರೂ ಹಿಂದಿರುಗಿದ್ದಾಯಿತೆಂದು ಹೇಳುವುದನ್ನು ಮರೆಯಲಿಲ್ಲ. ಅವರ ತಾಯಿಯವರು ನಮ್ಮನ್ನೆಲ್ಲಾ ನೋಡಬೇಕೆಂದು ಅಪೇಕ್ಷಿಸುತ್ತಿದ್ದಾರೆ, ಬಿಡುವು ಮಾಡಿಕೊಂಡು ಮನೆಗೆ ಬನ್ನಿ ಎಂದು ಕರೆದರು” ಎಂದು ಹೇಳಿದರು.

ಅಲ್ಲಿಯೇ ಇದ್ದ ಶ್ರೀನಿವಾಸ ಒಳ್ಳೆಯದಾಯಿತು. “ನಾಳೆ ಭಾನುವಾರ ಮಕ್ಕಳಿಗೂ ಶಾಲೆರಜೆ. ನೀವು ದೇವಸ್ಥಾನದಿಂದ ಹಿಂದಿರುಗಿದ ಮೇಲೆ ಊಟ ಮಾಡಿಕೊಂಡು ಹೋಗಿ ಬಂದುಬಿಡೋಣಪ್ಪ. ಅದಿರಲಿ ಇವತ್ತು ಎಂದಿಗಿಂತಲೂ ತಡವಾಗಿ ಬಂದಿದ್ದೀರಿ. ವಿಶೇಷಪೂಜೆ ಏನಾದರೂ ಇತ್ತೇ? ಇಲ್ಲ ಯಾರಾದರೂ ವಿ.ಐ.ಪಿ., ಗಳ ಭೇಟಿಯಿತ್ತೇ?” ಎಂದು ಕೇಳಿದ.

“ಹಾಗೇನಿಲ್ಲ ಶೀನು, ಒಂದಿಬ್ಬರು ಮದುವೆಗಾಗಿ ಛತ್ರದ ವಿಷಯ ಮಾತನಾಡಲು ದೇವಸ್ಥಾನಕ್ಕೇ ಬಂದುಬಿಟ್ಟಿದ್ದರು. ಅವರನ್ನು ಭಟ್ಟರ ಮನೆಗೆ ಕರೆದುಕೊಂಡುಹೋಗಿ ಮಾತುಕತೆ ಆಡಿ ಬರಬೇಕಾಯಿತು. ಅದರಿಂದ ಸ್ವಲ್ಪ ತಡವಾಯಿತು.” ಎಂದರು ಜೋಯಿಸರು.

“ಅದೆಲ್ಲಾ ಆಮೇಲೆ ಮಾತನಾಡುವಿರಂತೆ, ಈಗ ಅಪ್ಪ ಮಗ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಊಟಕ್ಕೆ ಬನ್ನಿ. ಅಡುಗೆ ಆರಿ ಅತ್ತಿಕಾಯಾಗುತ್ತಿದೆ” ಎಂದು ಕರೆದರು ನಾರಣಪ್ಪ.

“ಓಹೋ ನಾಣೀ, ನಮ್ಮಿಬ್ಬರ ಮೇಲಿನ ಅಕ್ಕರೆಯೇ ಇಲ್ಲ ನಿನಗೆ. ನಿನ್ನ ಹೊಟ್ಟೆ ಚುರುಗುಟ್ಟುತ್ತಿದೆಯಾ? ಹೇಗೆ” ಎಂದು ತಮಾಷೆಮಾಡುತ್ತಾ ಇಬ್ಬರೂ ಸಿದ್ಧವಾಗಿ ಊಟಕ್ಕೆ ಹೊರಟರು. ಸರಿ ಎಲ್ಲರೂ ಊಟ ಮುಗಿಸಿ ಹೊರಗಿನ ಅಂಗಳಕ್ಕೆ ಬಂದರು. ತಾಂಬೂಲದ ತಟ್ಟೆ ಕೈಲಿಹಿಡಿದು ಬಂದು ಕುಳಿತರು ಸೀತಮ್ಮ. “ಶೀನೂ ಫೋನಿನ ಕೆಲಸ ಎಲ್ಲಿಗೆ ಬಂತು?” ಎಂದು ಕೇಳಿದರು.

“ಎಲ್ಲವೂ ಆಗಿದೆ, ಈ ವಾರದಲ್ಲಿ ಬರುತ್ತಮ್ಮ. ಒಂದೆರಡು ಕಡೆಯಲ್ಲಿ ಕನೆಕ್ಷನ್ ಕೊಡಿಸೋಣ ಅಂದುಕೊಂಡಿದ್ದೇನೆ.” ಎಂದ ಶ್ರೀನಿವಾಸ.

“ಒಳ್ಳೆಯ ಆಲೋಚನೆ ಶೀನು, ಫೋನ್ ಕೆಳಗಡೆ ಮತ್ತು ಮಹಡಿಮೇಲೆ ಎರಡೂ ಕಡೆ ಇರಲಿ. ಓಡಾಡುವುದು ತಪ್ಪುತ್ತೆ. ನೀನು ಪೂಜೆಗಳಿಗೆ, ಸಂಗೀತ ಕಛೇರಿಗಳ ಕಾರ್ಯಕ್ರಮಗಳಿಗೆ ಹೊರಗಡೆಯ ಊರುಗಳಿಗೆ ಹೋದಾಗ ವಿಷಯ ತಿಳಿಸಲು, ಕೇಳಲು ಅನುಕೂಲವಾಗುತ್ತೆ. ನಂಬರ್ ಅಲಾಟ್ ಮಾಡಿದಮೇಲೇ ನಮಗೆ ಬೇಕಾದವರಿಗೆ ತಿಳಿಸಬೇಕು. ನಮ್ಮ ನೆಂಟರಿಷ್ಟರಲ್ಲಿ ಕೆಲವರ ಮನೆಗಳಲ್ಲಿ ಈಗಾಗಲೇ ಫೋನಿದೆ. ಇಲ್ಲದವರು ಕಾಯಿನ್ ಬೂತಿನಿಂದ ನಮ್ಮೊಡನೆ ಮಾತನಾಡಬಹುದು.” ಎಂದರು ಜೋಯಿಸರು.

ಶೀನಿ ಕೇಶವಯ್ಯನವರ ಮನೆಗೆ ಹೋಗುವ ವಿಚಾರವನ್ನು ಅವರಿಗೆ ಮೊದಲೇ ತಿಳಿಸಿದರೆ ಅನುಕೂಲ ಎಂದು ನನ್ನ ಅಭಿಪ್ರಾಯ. ತಾಯಿಗೆ ಹುಷಾರಿಲ್ಲದ್ದರಿಂದ ಮನೆಯಲ್ಲಿ ಯಾರಾದರೂ ಇದ್ದೇ ಇರುತ್ತಾರೆ. ಆದರೆ ಮಕ್ಕಳಿಗೆ ರಜೆಯಿರುವುದರಿಂದ ಸುಬ್ಬು ಅಂಗಡಿ ಬಂದ್ ಮಾಡಿ ಅವರೇನಾದರೂ ಹೊರಗೆ ಹೋಗುವ ಪ್ರೊಗ್ರಾಮ್ ಹಾಕಿಕೊಂಡಿದ್ದರೆ ನಾವು ಅಲ್ಲಿಗೆ ಹೋಗುವ ಉದ್ದೇಶ ಈಡೇರುವುದಿಲ್ಲ.” ಎಂದನು

“ನಂಜುಂಡನ ಹತ್ತಿರ ಹೇಳಿಕಳುಹಿಸೋಣವೇ?” ಎಂದು ಕೇಳಿದರು ಸೀತಮ್ಮ.

“ಹೌದಲ್ಲವಾ, ನಾನು ಈ ದಿಕ್ಕಿನಲ್ಲಿ ಯೋಚಿಸಲೇ ಇಲ್ಲ. ಬೆಳಗಿನಿಂದ ನಂಜುಂಡ ಕಾಣಿಸುತ್ತಿಲ್ಲ. ಎಲ್ಲಿಗಾದರೂ ಹೋಗಿದ್ದಾನೋ ಏನೋ. ನಾಣಿಯನ್ನೇ ಒಂದ್ಹೆಜ್ಜೆ ಹೋಗಿಬಾ ಎಂದರೆ ಹೇಗಿದ್ದರೂ ಅವರ ಮನೆಯನ್ನು ನೋಡಿದ್ದಾನೆ.” ಎಂದರು ಜೋಯಿಸರು.

“ಅದಕ್ಯಾಕೆ ಅಷ್ಟೊಂದು ಪೇಚಾಟ. ಇವತ್ತು ಸಂಜೆ ಆಕಡೆಗೇ ಹೋಗುತ್ತಿದ್ದೇನೆ. ನಾನೇ ಹೇಳಿ ಬರುತ್ತೇನೆ. ಮೊದಲೇ ಏನಾದರೂ ಪ್ರೋಗ್ರಾಮ್ ಹಾಕಿದ್ದರೆ ಕೇಳಿ ಬಿಡುವಾಗಿದ್ದಾಗ ಬರುತ್ತೇವೆ ಎಂದರಾಯಿತು” ಎಂದ ಶ್ರೀನಿವಾಸ.

“ಅದಕ್ಕೇ ನಾನು ಹೇಳಿದ್ದು ಆದಷ್ಟು ಬೇಗ ಫೋನ್ ಹಾಕಿಸಿಕೊಂಡು ಬಿಡಿ. ಪಟಪಟಾಂತ ಹೇಳಿಬಿಡಬಹುದು” ಎಂದರು ನಾರಣಪ್ಪ.

“ಅಯ್ಯೋ ನಾಣಜ್ಜಾ ಫೋನ್ ನಮ್ಮ ಹತ್ತಿರ ಇದ್ದರೆ ಸಾಲದು, ನಾವು ಮಾತನಾಡಬೇಕಾದವರ ಮನೆಯಲ್ಲಿಯೂ ಇರಬೇಕು. ಇಲ್ಲವಾದರೆ ಈಗ ಅಪ್ಪ ಹೇಳಿದರಲ್ಲಾ ಆ ರೀತಿ ಏರ್ಪಾಡು ಮಾಡಿಕೊಳ್ಳಬಹುದು.” ಎಂದು ಹೇಳಿದ ಶ್ರೀನಿವಾಸ.

“ಓ ! ಹೌದಲ್ಲವಾ, ನನ್ನ ದಡ್ಡತಲೆಗೆ ಹೊಳೀಲೇ ಇಲ್ಲ” ಎಂದರು ನಾರಣಪ್ಪ.

“ಹೂಂ ದಿನವೂ ಪೇಪರನ್ನು ಅಡಿಯಿಂದ ಮುಡಿಯವರೆಗೆ ಒಂದಕ್ಷರವನ್ನೂ ಬಿಡದಂತೆ ಒದಿ ವಿಷಯಗಳನ್ನೆಲ್ಲ ಅರೆದು ಕುಡಿದಂಗೆ ಮಾತನಾಡುತ್ತೀ ನಾಣೀ, ತಕ್ಷಣಕ್ಕೆ ಹೊಳೆದಿಲ್ಲ ಅಷ್ಟೇ” ಎಂದು ಹೇಳಿ ಒಳ ನಡೆದರು ಜೋಯಿಸರು.

ರಾತ್ರಿಯೂಟ ಮಾಡುವಾಗ ಶ್ರೀನಿವಾಸ ಕೇಶವಯ್ಯನವರ ಮನೆಗೆ ಹೋಗಿದ್ದು ಅವರುಗಳು ಮಾರನೆಯದಿನ ತಮ್ಮನ್ನು ಊಟಕ್ಕೇ ಬರಲು ಆಹ್ವಾನಿಸಿದ್ದು, ಅದನ್ನು ನಿರಾಕರಿಸಿದ್ದು, ಲಕ್ಷ್ಮತ್ತೆಯವರನ್ನೂ ಅಲ್ಲಿಯೇ ಭೇಟಿಯಾಗಿ ಅವರ ಕಿವಿಗೂ ವಿಷಯ ಹಾಕಿಸಿದ್ದು ಎಲ್ಲವನ್ನೂ ಹೇಳಿದನು. “ನಾಳೆ ಹೋಗಿ ಬಂದುಬಿಡೋಣ. ಮುಂದಿನ ವಾರದಿಂದ ನನಗೆ ಒಂದೆರಡು ಸಂಗೀತಕಛೇರಿ ಪ್ರೊಗ್ರಾಂ, ಹಾಗೂ ಪೂಜೆಗಳಿವೆ” ಎಂದು ಸೇರಿಸಿದ.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36103

ಬಿ.ಆರ್.ನಾಗರತ್ನ, ಮೈಸೂರು

6 Responses

 1. ನಯನ ಬಜಕೂಡ್ಲು says:

  Beautiful story

 2. ಧನ್ಯವಾದಗಳು ನಯನ ಮೇಡಂ

 3. ಶಂಕರಿ ಶರ್ಮ says:

  ವಿದುರಾಶ್ವತ್ಥದ ಕಥೆಯೊಂದಿಗಿನ ಇಂದಿನ ಕಥಾಭಾಗವು ವಿಶೇಷವಾಗಿದ್ದು ಆಸಕ್ತಿದಾಯಕವಾಗಿದೆ…ಧನ್ಯವಾದಗಳು ನಾಗರತ್ನ ಮೇಡಂ.

 4. Padmini Hegde says:

  ಕಥೆಯ ಹರಹು ಚೆನ್ನಾಗಿದೆ

 5. ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಿನಿ ಮೇಡಂ

 6. ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಿನಿ ಮೇಡಂ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: