ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 13

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ದ್ವಾರಕಾನಾಥ ಗೋಪ್ತು ಅವರ ಮೊಮ್ಮಗ ಫಣೀಂದ್ರ ನಾಥ ಗೋಪ್ತು ಇವರು ಇಂಗ್ಲೆಂಡಿನಲ್ಲಿ ವ್ಯಾಪಾರ, ಉದ್ಯಮ, ವಾಣಿಜ್ಯಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು 1905ರಲ್ಲಿ ಅಧ್ಯಯನ ಮಾಡಿ F.N. Gooptu & Co ಎಂಬ ಹೆಸರಿನಲ್ಲಿಯೇ ಇನ್ನೊಂದು ಉದ್ಯಮವನ್ನು ಆರಂಭಿಸಿದರು. ಇದು ಪೆನ್‌, ಪೆನ್ಸಿಲ್‌ಗಳ ಉತ್ಪಾದನೆಯಲ್ಲಿ ಯುಗ ಪ್ರವರ್ತಕ ಫರ್ಮ್‌ ಎಂದು ಪರಿಗಣಿತವಾಯಿತು. ಫಣೀಂದ್ರನಾಥರವರು ಅಮೆರಿಕನ್‌ ಮೆಟಲರ್ಜಿಸ್ಟ್‌ ಒಬ್ಬರನ್ನು ಉದ್ಯೋಗಿಯಾಗಿ ತಮ್ಮ ಜೊತೆ ಇರಿಸಿಕೊಂಡು ಪೆನ್ನಿಗೆ ಬೇಕಾದ ನಿಬ್‌ಗಳನ್ನು ತಯಾರಿಸುವ ಮತ್ತು ಪೆನ್ನಿಗೆ ಇಂಕ್‌ ತುಂಬುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿದರು. 1925ರಲ್ಲಿ ಮಹಾತ್ಮಗಾಂಧಿ ಇವರ ಕಾರ್ಖಾನೆಗೆ ಭೇಟಿ ಕೊಟ್ಟು ಇವರು ತಮಗೆ ಬೇಕಾದ ಕೆಲವು ಮಷಿನರಿಗಳನ್ನು ತಾವೇ ವಿನ್ಯಾಸ ಮಾಡಿಕೊಂಡಿರುವುದನ್ನು ಕಂಡು ಇಂಥ ಸ್ವದೇಶಿ ಭಾವದ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದುದು ಭಾರತೀಯ ಉದ್ಯಮಗಳ ಬೆಳವಣಿಗೆಗೆ ಗಮನಾರ್ಹ ಸ್ಫೂರ್ತಿಯನ್ನು ಕೊಟ್ಟಿತು.

PC: Internet

ಕಲ್ಕತ್ತೆಯ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದ ನಂತರ ಸಂಸ್ಕೃತದಲ್ಲಿ ಎಂ.ಎ. ಪದವಿಗಾಗಿ ಮತ್ತು ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿಗಾಗಿ ವಿದ್ಯಾಭ್ಯಾಸವನ್ನು ಒಟ್ಟಾಗಿ ಮುಂದುವರೆಸಿ ಎರಡೂ ಪದವಿಗಳನ್ನು ಪಡೆದರೂ ಪಾಶ್ಚಾತ್ಯ ವೈದ್ಯಕೀಯ ವೃತ್ತಿಯನ್ನು ಕೈಬಿಟ್ಟು ಭಾರತದ ಆಯುರ್ವೇದ ಪದ್ಧತಿಯನ್ನು ಅನುಸರಿಸಿದವರು ಅಪ್ಪಟ ಸ್ವದೇಶಿ ಜಾಮಿನಿ ಭೂಷಣ ರೇ. ವೈದ್ಯಕೀಯ ಪದವಿಯನ್ನು 1905ರಲ್ಲಿ ಪಡೆದ ನಂತರ 1906ರಲ್ಲಿ “ಬಗಲಾ ಮಾರವಾರಿ ಹಾಸ್ಪಿಟಲ್‌” ನಲ್ಲಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಕೊಡಲಾರಂಭಿಸಿದ ಜಾಮಿನಿ ಬ್ರಿಟಿಷರ ಕಾರಣದಿಂದಾಗಿ ಮರೆತುಹೋಗಿದ್ದ ಆಯುರ್ವೇದ ವೈದ್ಯ ಪದ್ಧತಿಯ ಘನತೆಯನ್ನು ಎತ್ತಿಹಿಡಿದರು. ಆಯುರ್ವೇದದ ಔಷಧಿಗಳನ್ನು ಮಾತ್ರ ಮಾರಾಟ ಮಾಡುವ “ವೈದ್ಯರಾಜ್ಫಾರ್ಮೆಸಿಯನ್ನು ಆರಂಭಿಸಿದರು. ತಮ್ಮ ಜೊತೆಗಾರರೊಂದಿಗೆ ಜಾಮಿನಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಆಯುರ್ವೇದದ ಔಷಧಿಗಳ ಗುಣಮಟ್ಟವನ್ನು ಅಧಿಕೃತಗೊಳಿಸಿದರು. ಅವರ ಚಿಕಿತ್ಸೆಗಾಗಿ ಸಾವಿರ ರೂಪಾಯಿ ಫೀ ಕೊಡಲು ಸಿದ್ಧವಿರುವವರೂ ಇದ್ದರು. 

1915ರಲ್ಲಿ ಮದ್ರಾಸಿನ ಆಲ್‌ ಇಂಡಿಯಾ ಆಯುರ್ವೇದಿಕ್‌ ಕಾನ್ಫೆರೆನ್ಸಿಗೆ ಹೋದಾಗ ಅಲ್ಲಿಯ ಆಯುರ್ವೇದಿಕ್‌ ಕಾಲೇಜಿನಲ್ಲಿ ಇರುವ ಸೌಲಭ್ಯಗಳು, ಅದು ಕೆಲಸ ಮಾಡುವ ರೀತಿಯಿಂದ ಪ್ರಭಾವಿತರಾಗಿ ಅಂಥ ಸಂಸ್ಥೆಯೊಂದನ್ನು ಕಲ್ಕತ್ತೆಯಲ್ಲೂ ಸ್ಥಾಪಿಸಬೇಕೆಂದು ಯೋಚಿಸಿದರು. 1916ರಲ್ಲಿ ಬಾಡಿಗೆಯ ಮನೆಯಲ್ಲಿ ಪ್ರಾಚೀನ ಮತ್ತು ಆಧುನಿಕ ಪದ್ಧತಿಗಳೆರಡನ್ನೂ ಮೇಳೈಸಿಕೊಂಡ “ಅಷ್ಟಾಂಗ ಆಯುರ್ವೇದಿಕ್‌ ಕಾಲೇಜು” ಮತ್ತು ಆಸ್ಪತ್ರೆಗಳೆರಡನ್ನು ಆರಂಭಿಸಿದರು. ಇವು ಈಗಲೂ ಪ್ರಸಿದ್ಧಿಯನ್ನು ಉಳಿಸಿಕೊಂಡಿವೆ. ಅವರು ಆಯುರ್ವೇದದ ಮಹತ್ವವನ್ನು ಸಾರ್ವಜನಿಕರಿಗೆ ಮನಗಾಣಿಸಲು ಬೆಂಗಾಲಿಯಲ್ಲಿ “ಆಯುರ್ವೇದಎಂಬ ಪತ್ರಿಕೆಯನ್ನೂ ಹೊರತರುತ್ತಿದ್ದರು. ಅವರು ಬರೆದ ಡಿಸೀಸಸ್: ದೇರ್ಆರಿಜಿನ್ಅಂಡ್ಡಯಾಗ್ನೊಸಿಸ್‌” ಎಂಬ ಕೃತಿ ಅವರನ್ನು ಜಗತ್‌ ವಿಖ್ಯಾತಗೊಳಿಸಿತು. ಭಾರತೀಯ ವೈದ್ಯ ಪದ್ಧತಿಯನ್ನು ವೈಜ್ಞಾನಿಕವಾಗಿ ಪರಿಚಯಿಸುವ ಅವರ ಇನ್ನಿತರ ಕೃತಿಗಳು ಟ್ರೀಟೈಸ್ಆನ್ಡಿಸೀಸಸ್ಆಫ್ಯಿಯರ್‌, ನೋಸ್‌, ತ್ರೋಟ್ಅಂಡ್ದಿ ಮೌತ್‌, ದಿ ಕೇರ್ಆಫ್ಇನ್ಫ್ಯಾಂಟ್ಸ್ ಅಂಡ್ದಿ ಡಿಸೀಸಸ್ಆಫ್ಚಿಲ್ಡ್ರನ್‌, ಮ್ಯಾನ್ಯುಯಲ್ಆಫ್ಟಾಕ್ಸಿಕಾಲಜಿ”.

ಆಧುನಿಕ ಬಂಗಾಳದ ನಿರ್ಮಾಪಕ ಎಂದು ಪರಿಗಣಿತರಾಗಿರುವ, ಮೂಲತಃ ಬಿಹಾರದವರಾದ ಬಿಧನ್ಚಂದ್ರ ರಾಯ್ ಪಾಟ್ನ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿಯನ್ನು, ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದವರು. “ನಿನ್ನ ಕೈಯಲ್ಲಿ ಮಾಡಲು ಏನು ಸಾಧ್ಯವಿದೆಯೋ ಅದನ್ನು ನಿನ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಉಪಯೋಗಿಸಿ ಮಾಡು” ಎಂಬ ಕಲ್ಕತ್ತ ಮೆಡಿಕಲ್‌ ಕಾಲೇಜಿನ ಘೋಷವಾಕ್ಯವನ್ನು ತಮ್ಮ ಜೀವಿತೋದ್ಧೇಶವನ್ನಾಗಿ ರೂಪಿಸಿಕೊಂಡವರು. ಸ್ವರಾಜ್ಯದ ಕನಸು ನನಸಾಗಬೇಕಾದರೆ ಜನರು ನಿರೋಗಿಗಳೂ, ದೃಢಕಾಯರೂ ಆಗಿರಬೇಕು ಎಂದು ನಂಬಿದ್ದ ಅವರು “ಜಾಧವಪುರ ಟಿ.ಬಿ. ಹಾಸ್ಪಿಟಲ್‌”, “ಚಿತ್ತರಂಜನ ಸೇವಾಸದನ”, “ಕಮಲಾ ನೆಹರು ಮೆಮೋರಿಯಲ್ಹಾಸ್ಪಿಟಲ್‌”, “ವಿಕ್ಟೋರಿಯಾ ಇನ್ಸ್ಟಿಟ್ಯೂಷನ್ ಗಳ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದರು. 

ಭಯ, ಅಜ್ಞಾನ, ಹಸಿವು, ಜಿಗುಪ್ಸೆ, ಅಸಹಾಯಕತೆಗಳಿಂದ ಬಿಡುಗಡೆ ಪಡೆಯ ಬಯಸುವ ಯುವ ಸಮೂಹ ರೂಪುಗೊಳ್ಳಬೇಕು ಎಂದು ಆಶಿಸಿದ್ದ ಬಿಧನ್‌ ಚಂದ್ರ ರಾಯ್‌ ಅವರು ಯುವಕರು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು, ಶಕ್ತಿಸಂಪನ್ನರಾಗಬೇಕು, ಆ ಮೂಲಕ ಸಮಾಜಸೇವೆ ಮಾಡಬೇಕು ಎಂದು ಕರೆಕೊಟ್ಟಿದ್ದರು, ಅದರಂತೆ ಬದುಕಿದರು. 

1909ರಲ್ಲಿ ಬ್ರಿಟನ್ನಿನ “ಸೇಂಟ್‌ ಬಾರ್ಥೊಲೊಮ್ಯೂ” ಹಾಸ್ಪಿಟಲ್‌ ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಬ್ರಿಟನ್ನಿಗೆ ಹೋದರು. ಹಾಸ್ಪಿಟಲ್‌ ಅವರು ಏಷ್ಯನ್‌ ಎಂಬ ಕಾರಣಕ್ಕೆ ಪ್ರವೇಶ ಕೊಡಲು ನಿರಾಕರಿಸಿತು. ಛಲ ಬಿಡದ ತ್ರಿವಿಕ್ರಮನಂತೆ ತನಗೆ ಪ್ರವೇಶ ನೀಡಬೇಕು ಎನ್ನುವ ಮನವಿಯನ್ನು 30 ಬಾರಿ ನಿರಂತರವಾಗಿ ಬಿಡದೆ ಸಲ್ಲಿಸಿ ಕೊನೆಗೂ ಪ್ರವೇಶ ಪಡೆಯುವುದರಲ್ಲಿ ಮತ್ತು 1911ರಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾದರು.  ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಕೂಡಲೇ “ಫೆಲೊ ಆಫ್‌ ದಿ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್” ಮತ್ತು “ಮೆಂಬರ್‌ ಆಫ್‌ ದಿ ರಾಯಲ್‌ ಕಾಲೇಜ್‌ ಆಫ್‌ ಫಿಸಿಷಿಯನ್ಸ್”‌ ಎಂಬ ಎರಡೂ ಮಾನ್ಯತೆಗೆ ಏಕಕಾಲದಲ್ಲಿ ಪಾತ್ರರಾದರು. ಇಂಥ ಮಾನ್ಯತೆಯನ್ನು ಪಡೆದ ಕೆಲವೇ ಮಂದಿಗಳಲ್ಲಿ ಇವರು ಒಬ್ಬರಾಗಿದ್ದರು ಎನ್ನುವ ಘನತೆ ಅವರದೂ ಹೌದು, ಭಾರತೀಯರದೂ ಹೌದು.  ಆಧುನಿಕ ತಂತ್ರಜ್ಞಾನದ ಅರಿವಿದ್ದ ಅವರು 1942ರಲ್ಲಿ ಕಲ್ಕತ್ತೆಯ ಮೇಲೆ ಜಪಾನೀಯರಿಂದ ಆಗಬಹುದಾದ ಬಾಂಬ್‌ ಧಾಳಿಯಿಂದ ತಮ್ಮ ಕಲ್ಕತ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಮತ್ತು ಉದ್ಯೋಗಿಗಳನ್ನು ರಕ್ಷಿಸಲು ಶಾಲಾ ಕಾಲೇಜುಗಳಿಗೆ “ಏರ್ ರೇಡ್ ಶೆಲ್ಟರ್‌”ಗಳನ್ನು ಕೂಡಲೇ ನಿರ್ಮಿಸಿದುದು ಒಂದು ವಿಶಿಷ್ಟ ಇತಿಹಾಸ.. 1931ರಲ್ಲಿ ಕಲ್ಕತ್ತೆಯ ಮೇಯರ್‌ ಆಗಿದ್ದ ಇವರು ಉಚಿತ ವಿದ್ಯಾಭ್ಯಾಸ, ಉಚಿತ ವೈದ್ಯಕೀಯ ನೆರವು, ಉತ್ತಮ ರಸ್ತೆಗಳು, ಸುಧಾರಿತ ಬೆಳಕು ಮತ್ತು ಶುದ್ಧ ನೀರಿನ ವ್ಯವಸ್ಥೆ ಮುಂತಾದ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡದ್ದು ಅವರ ಜನಹಿತಾಸಕ್ತ ಸೇವೆಯ ಗಮನಾರ್ಹ ಮುಖ. 

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ:  http://surahonne.com/?p=36107

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

4 Responses

 1. ನಯನ ಬಜಕೂಡ್ಲು says:

  Nice

 2. ಎಂದಿನಂತೆ..ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ.
  ಸೊಗಸಾಗಿ ಸಾಗುತ್ತಿದೆ..
  ಧನ್ಯವಾದಗಳು ಪದ್ಮಿನಿ ಮೇಡಂ.

 3. ಶಂಕರಿ ಶರ್ಮ says:

  ತಮ್ಮ ಸ್ವಾತಂತ್ರ್ಯ ಪೂರ್ವದ ವೈಜ್ಞಾನಿಕ ಜಾಗೃತಿ ಲೇಖನವು ಬಹಳಷ್ಟು ಸಂಗ್ರಹ ಯೋಗ್ಯ ಮಾಹಿತಿಗಳನ್ನು ಹೊತ್ತು ತಂದಿದೆ. ಧನ್ಯವಾದಗಳು ಮೇಡಂ

 4. Padmini Hegde says:

  ಧನ್ಯವಾದಗಳು ನಯನ ಬಜಕೂಡ್ಲು, ಬಿ.ಆರ್.‌ ನಾಗರತ್ನ ಮೇಡಂ ಅವರಿಗೆ ಮತ್ತು ಅಜ್ಞಾತ ಓದುಗರಿಗೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: