ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 14
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
1916ರಲ್ಲಿ ಹೊಸದಾಗಿ ಆರಂಭವಾದ ಯೂನಿವರ್ಸಿಟಿ ಸೈನ್ಸ್ ಕಾಲೇಜಿನಲ್ಲಿ ಸಿ.ವಿ.ರಾಮನ್ ಅವರ ಅಡಿಯಲ್ಲಿ ಪಿ.ಹೆಚ್.ಡಿ. ಸ್ಕಾಲರ್ ಆಗುವ ಅವಕಾಶ ಮಿತ್ರರವರಿಗೆ ದೊರೆಯಿತು. ಇಲ್ಲಿ “ಮಾನೊಕ್ರೊಮಾಟಿಕ್” ಬೆಳಕಿನ “ಡಿಫ್ರ್ಯಾಕ್ಷನ್”ಗೆ ಸಂಬಂಧಿಸಿದಂತೆ ಈ ಹಿಂದೆ ಆಗಿದ್ದ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದರು, ಹೀಲಿಯೊಮೀಟರ್‌ನ ಡಿಫ್ರ್ಯಾಕ್ಷನ್ ಮಾದರಿಗಳನ್ನು ನಿರ್ಧರಿಸುವ ಹೆಚ್ಚು ಉತ್ತಮವಾದ ವಿಧಾನವನ್ನು ಕಂಡುಹಿಡಿದರು, 1919ರಲ್ಲಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಫಿಲೊಸಾಫಿಕಲ್ ಪತ್ರಿಕೆಯಲ್ಲಿ “Asymetry of the Illumination Curves in Oblique Diffraction”; “Arnold Sommerfield’s approach to Diffraction” ಎಂಬ ಲೇಖನಗಳನ್ನು ಪ್ರಕಟಿಸಿದರು.
1920ರಲ್ಲಿ ಪ್ಯಾರಿಸ್ಸಿಗೆ ಹೋಗಿ ಚಾರ್ಲ್ಸ್ ಫೇಬ್ರಿಯೊಂದಿಗೆ ಅಧ್ಯಯನ ಮಾಡಿ “2000-2300 A region of Copper”ನಲ್ಲಿ “ವೇವ್‌ಲೆಂತ್ ಸ್ಟಾಂಡರ್ಡ್”ಗಳನ್ನು ನಿರ್ಧರಿಸುವುದರ ಬಗ್ಗೆ ಮಾಡಿದ ಸಂಶೋಧನೆಗೆ ಪೋಸ್ಟ್ ಡಾಕ್ಟೊರಲ್ ಪದವಿಯನ್ನು 1923ರಲ್ಲಿ ಪಡೆದರು. ಮೇರಿ ಕ್ಯೂರಿಯೊಂದಿಗೆ ಅಧ್ಯಯನ ಮಾಡಿ ರೇಡಿಯೊ ಸಂವಹನ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಮಾಹಿತಿ ಪಡೆದರು. ಗಟ್ಟನ್ ಅವರೊಂದಿಗೆ ಅಧ್ಯಯನ ಮಾಡಿ “ರೇಡಿಯೊ ವಾಲ್ವ್ ಸರ್ಕ್ಯೂಟ್ರಿ” ಬಗ್ಗೆ ಸಂಶೋಧನೆ ಮಾಡಿದರು.
ಭಾರತಕ್ಕೆ ಬಂದ ನಂತರ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ವೈರ್ಲೆಸ್ ಕೋರ್ಸ್ನ್ನು ವೈರ್ ಲೆಸ್ ಪ್ರಯೋಗಾಲಯದೊಂದಿಗೆ ಆರಂಭಿಸಿದರು. ಅದು ಮುಂದೆ “Institute of Radio Physics and Electronics” ಎಂದಾಯಿತು. ಇವರ ಸಂಶೋಧನಾ ಪಟುತ್ವ ಮತ್ತು ಪ್ರಸ್ತುತತೆಯನ್ನು ಮಾನ್ಯ ಮಾಡಿದ ವಿಜ್ಞಾನ ಸಮುದಾಯ ಚಂದ್ರನಲ್ಲಿ ಕಂಡ ಕ್ರೇಟರ್ ಒಂದಕ್ಕೆ “ಮಿತ್ರ” ಎಂದು ಹೆಸರಿಸಿದೆ.
ಕಲ್ಕತ್ತದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನದ ವಾತಾವರಣವನ್ನು ಹುಟ್ಟುಹಾಕಿದವರು ವಿನಯ ಕುಮಾರ ಸರ್ಕಾರ್. ಇವರು ಬೆಂಗಾಲಿ, ಇಂಗ್ಲಿಷ್, ಜರ್ಮನ್, ಫ್ರೆಂಚ್, ಇಟಾಲಿಯನ್ ಭಾಷೆಗಳಲ್ಲಿ ವಿವಿಧ ವಿಷಯಗಳ ಬಗ್ಗೆ 30,000ಕ್ಕೂ ಹೆಚ್ಚು ಪುಟಗಳ, 53ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಮತ್ತು ಪುಸ್ತಿಕೆಗಳನ್ನು ಪ್ರಕಟಿಸಿದ್ದಾರೆ. ಇವರು 1914ರಲ್ಲಿ “The Positive Background of Hindu Sociology”, 1916ರಲ್ಲಿ “The Beginning of Hindu Culture as world power (A.D. 300-600)”, ಮತ್ತು “Chinese Religion Through Hindu Eyes”, 1918ರಲ್ಲಿ “Hindu acheivements in exact science – a study in the history of scientific development” ಕೃತಿಗಳನ್ನು ಪ್ರಕಟಿಸಿದರು. 1919ರಲ್ಲಿ “Hindu Theory of International relations” ಎಂಬುದರ ಬಗ್ಗೆ “American Political science Review” ನಲ್ಲಿ ಪ್ರಕಟಿಸಿದರೆ 1921ರಲ್ಲಿ “Hindu Theory of State” ಎಂಬುದರ ಬಗ್ಗೆ Political Science Quarterly ನಲ್ಲಿ ಪ್ರಕಟಿಸಿದರು.
ಇವರ ಅಂತರ್ರಾಷ್ಟ್ರೀಯ ನೀತಿಯ ಬಗೆಗಿನ ನಿಲುವು ಭಾರತೀಯರೊಬ್ಬರು ಪಶ್ಚಿಮೇತರ ಅಂತರ್ರಾಷ್ಟ್ರೀಯ ನೀತಿಯನ್ನು ರೂಪಿಸಲು ಪ್ರಪ್ರಥಮವಾಗಿ ಮಾಡಿದ ಆಧುನಿಕ ಪ್ರಯತ್ನ ಎಂದು ಪರಿಗಣಿತವಾಗಿದೆ.
1914ರಲ್ಲಿ ಖಾಸಗಿಯಾಗಿ ಬಿ.ಎ. ಪದವಿಯನ್ನು, 1916ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನು ಪಡೆದ ಕಿಶೋರಿ ಮೋಹನ್ ಬಂದ್ಯೋಪಾಧ್ಯಾಯರು ಸಾರ್ವಜನಿಕ ಆರೋಗ್ಯಕ್ಕಾಗಿ ಆರಂಭಿಸಿದ “ಜಿಮ್ನಾಷಿಯಂ” 1914ರಿಂದಲೂ ಸಮಾಜಸೇವಾ ಸಂಸ್ಥೆಯಾಗಿ ಕ್ರಿಯಾಶೀಲವಾಗಿದೆ. ಮಲೇರಿಯಾ ಸಾಂಕ್ರಾಮಿಕ ಪಿಡುಗನ್ನು ತಡೆಯುವ ಕಾರ್ಯಾಚರಣೆಯಲ್ಲಿ ಡಾಕ್ಟರ್ ಗೋಪಾಲಚಂದ್ರ ಚಟ್ಟೋಪಾಧ್ಯಾಯರೊಂದಿಗೆ ಭಾಗಿಯಾದ ಕಿಶೋರಿ ಮೋಹನ್ ಆರೋಗ್ಯವನ್ನು ಕಾಯ್ದುಕೊಳ್ಳುವುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲು ಡಾ. ಗೋಪಾಲ ಚಂದ್ರ ಚಟ್ಟೋಪಾಧ್ಯಾಯರೊಂದಿಗೆ “ದಿ ಸೆಂಟ್ರಲ್ ಆಂಟಿ ಮಲೇರಿಯ ಕೊ-ಆಪರೇಟಿವ್ ಸೊಸೈಟಿ”ಯನ್ನು ಆರಂಭಿಸಿದರು. ಇದರ ಯಶಸ್ವಿ ಕಾರ್ಯಾಚರಣೆಯಿಂದ ಪ್ರೋತ್ಸಾಹಿತರಾದ ಕಿಶೋರಿ ಮೋಹನ್ ಅಂಥ ಅನೇಕ ಸೊಸೈಟಿಗಳು ಹಳ್ಳಿ ಹಳ್ಳಿಗಳಲ್ಲಿ ಕಾರ್ಯೋನ್ಮುಖವಾಗಲು ಮತ್ತು ದಿ ಸೆಂಟ್ರಲ್ ಆಂಟಿ ಮಲೇರಿಯ ಕೊ ಆಪರೇಟಿವ್ ಸೊಸೈಟಿಯು ಕಲ್ಕತ್ತದಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸಮಾಡಲು ಶ್ರಮಿಸಿದರು. ಈ ಸೊಸೈಟಿ “ಸೋನಾರ್ ಬಾಂಗ್ಲ” ಎಂಬ ಮಾಸಿಕ ಪತ್ರಿಕೆಯನ್ನು ಎರಡು ಭಾಷೆಗಳಲ್ಲಿ ಪ್ರಕಟಿಸಲಾರಂಭಿಸಿತು. 1928ರಲ್ಲಿ ಚಟರ್ಜಿಯವರು ಆರಂಭಿಸಿದ ಹೋಂ ಕ್ರಾಫ್ಟಿಂಗ್, ಕೊ ಆಪರೇಟಿವ್ ಬ್ಯಾಂಕ್‌ಗಳನ್ನು ಯಶಸ್ವಿಗೊಳಿಸಿದರು. ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಇವರ ಹೆಸರನ್ನು ಒಂದು ಬೀದಿಗೆ ಇರಿಸಿ ಬೆಂಗಾಲಿಗಳು ಇವರನ್ನು ನಿತ್ಯ ಸ್ಮರಣೀಯರನ್ನಾಗಿಸಿದ್ದಾರೆ.
ಕಲಾಯ್ಡ್ ಕೆಮಿಸ್ಟ್ ಆದ ಜ್ಞಾನೇಂದ್ರನಾಥ ಮುಖರ್ಜಿ ತಮ್ಮ ಸ್ನಾತಕೋತ್ತರ ಪದವಿಗಾಗಿ 1915ರಲ್ಲಿ ಸಿದ್ಧಪಡಿಸಿದ “ಎಲೆಕ್ಟ್ರಿಕ್ ಸಿಂಥೆಸಿಸ್ ಆಫ್ ಕಲಾಯ್ಡ್ಸ್” ಪ್ರಬಂಧವು “ಜರ್ನಲ್ ಆಫ್ ದಿ ಅಮೆರಿಕನ್ ಕೆಮಿಕಲ್ ಸೊಸೈಟಿ” ಎನ್ನುವ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟವಾಗುವಷ್ಟು ಪ್ರೌಢವಾಗಿತ್ತು. ರಾಜಬಜಾರ್ ಸೈನ್ಸ್ ಕಾಲೇಜಿನಲ್ಲಿ ಎಂ.ಎಸ್‌ಸಿ ಮಾಡುವಾಗಲೇ ಇಂಥ ಸ್ವತಂತ್ರ ಸಂಶೋಧನಾತ್ಮಕತೆ ಇದ್ದವರಲ್ಲಿ ಇವರು ಪ್ರಪ್ರಥಮರು. 1919ರಲ್ಲಿ ಎಫ್. ಜಿ. ಡೋನನ್ ಅವರ ಮಾರ್ಗದರ್ಶನದಲ್ಲಿ ಕಲಾಯ್ಡ್‌ಗಳ ಬಗೆಗಿನ ತಮ್ಮ ಸಂಶೋಧನೆಯನ್ನು ಮುಂದುವರೆಸಿದ ಮುಖರ್ಜಿ “ಎಲೆಕ್ಟ್ರೊ ಕೈನೆಟಿಕ್ ಡಬಲ್ ಲೇಯರ್ ಗಳು ಮತ್ತು ಅವುಗಳ ಅಯಾನಿಕ್ ಸ್ಟ್ರಕ್ಚರ್” ಬಗೆಗಿನ ಥಿಯರಿಯನ್ನು ಸಿದ್ಧಪಡಿಸಿದರು. ಕಲಾಯ್ಡ್ ಕಣಗಳ “ಕ್ಯಾಟಸ್ಫೋರೆಟಿಕ್” ವೇಗವನ್ನು ನಿರ್ಧರಿಸಲು ಬೌಂಡರಿ ಮೆಥಡ್ ಎಂಬುದನ್ನು ಕಂಡುಹಿಡಿದರು. 1942ರಲ್ಲಿ ಎನ್.ಸಿ. ಸೇನ ಗುಪ್ತರವರೊಂದಿಗೆ “ಅನಾಮಲಸ್ ವಿಸ್ಕಸ್” ಗುಣಧರ್ಮಗಳನ್ನು ಅಧ್ಯಯನ ಮಾಡಲು ಸರಳವಾದ ರೋಟರಿ ವಿಸ್ಕೊಮೀಟರ್ ಎಂಬ ಉಪಕರಣವನ್ನು ನಿರ್ಮಿಸಿಕೊಂಡಿದ್ದರು. 1944ರಲ್ಲಿ ಕಚ್ಚಾ ತೈಲಗಳನ್ನು ಪ್ರತ್ಯೇಕಿಸಲು “ಕ್ರೊಮಟೊಗ್ರಫಿ ಕೆಪಿಲರಿ ಅನಾಸಿಸ್” ಮತ್ತು ಅತಿನೇರಳೆ ಕಿರಣಗಳಲ್ಲಿಯ “ಫ್ಲೋರೋಸೆನ್ಸ್”ಗಳನ್ನು ಆಧರಿಸಿದ ವಿಧಾನವೊಂದನ್ನು ಕಂಡುಹಿಡಿದಿದ್ದರು.
ಇವರ ಕಲಾಯ್ಡ್‌ಗಳ ಬಗೆಗಿನ ತಿಳುವಳಿಕೆ ಮಣ್ಣಿನ ಗುಣಧರ್ಮ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬಹು ಉಪಯಯಕ್ತವಾದದ್ದು ಆಗಿತ್ತು.”ಇಂಪೀರಿಯಲ್ (ಇಂಡಿಯನ್) ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಷನ್” ನ ನಿರ್ದೇಶಕರಾಗಿ 1945ರಲ್ಲಿ ನೇಮಕಗೊಂಡ ನಂತರ ಇವರು “ಸಾಯಿಲ್ ಪ್ಲಾಂಟ್” ಅಧ್ಯಯನವನ್ನು ಪ್ರಮುಖ ಸಂಶೋಧನಾ ಕ್ಷೇತ್ರವನ್ನಾಗಿಸಿದರು. “ಸಾಯಿಲ್ ಸೈನ್ಸ್ ಅಂಡ್ ಅಗ್ರಿಕಲ್ಚರಲ್ ಕೆಮಿಸ್ಟ್ರಿ” ಎಂಬ ಹೊಸ ವಿಭಾಗವನ್ನು ಆರಂಭಿಸಿದರು. ಅದರ ಮೂಲಕ “ಸಾಯಿಲ್ ಸರ್ವೇ, ಸಾಯಿಲ್ ಫಿಸಿಕ್ಸ್, ಸಾಯಿಲ್ ಫರ್ಟಿಲಿಟಿ, ಸಾಯಿಲ್ ಮೈಕ್ರೊ ಬಯಾಲಜಿ, ಅಗ್ರಿಕಲ್ಚರಲ್ ಕೆಮಿಕಲ್ಸ್” ಮುಂತಾದ ವಿಷಯಗಳ ಅಧ್ಯಯನಗಳನ್ನು ನಡೆಸಿದರು. ಮೇಲ್ಪದರದ ಮಣ್ಣಿನ ಮತ್ತು ಸಸ್ಯಗಳ ಮೈಕ್ರೊ ಪೋಷಕಾಂಶಗಳು; ಒಳಪದರದ ಮಣ್ಣಿನ ಧಾತುಗಳ ಒಳರಚನೆ, ಗುಣಧರ್ಮ, ವರ್ಗೀಕರಣ, ಸ್ವಾಭಾವಿಕವಾಗಿರುವ ಅವುಗಳ ಒಳಹಂಚಿಕೆ ಮುಂತಾದವುಗಳ ವ್ಯವಸ್ಥಿತ ಅಧ್ಯಯನ ಕ್ರಮವನ್ನು ಸಿದ್ಧಪಡಿಸಿದರು. ಅದಕ್ಕೆ ಅಗತ್ಯವಾದ ತಾಂತ್ರಿಕತೆ, ಉಪಕರಣಗಳನ್ನು ಒದಗಿಸಿದರು.
ಪಶುಗಳಿಗೆ ಮತ್ತು ಮನುಷ್ಯರಿಗೆ ಪೋಷಕಾಂಶಗಳನ್ನು ಒದಗಿಸುವ ಸಸ್ಯಗಳ ಅಧ್ಯಯನ; ಸಸ್ಯಗಳಿಗೆ ಮಾರಕವಾಗುವ ರೋಗಗಳು ಮತ್ತು ಅವುಗಳಿಗೆ ಪರಿಹಾರೋಪಾಯಗಳ ಅಧ್ಯಯನ ಮುಂತಾದವುಗಳನ್ನು ಯೋಜಿಸಿದರು. ಇದೇ ರೀತಿ ಸ್ವತಂತ್ರ ಭಾರತದಲ್ಲೂ ಕೃಷಿ ಕ್ಷೇತ್ರವನ್ನು ವೈಜ್ಞಾನಿಕವಾಗಿ ಸಂಪದ್ಭರಿತವಾಗಿ ಅಭಿವೃದ್ಧಿಪಡಿಸಿದರು. ಸ್ವತಂತ್ರ ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಅಡಿಗಲ್ಲನ್ನಿರಿಸಿದರು.
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36109
(ಮುಂದುವರಿಯುವುದು)
-ಪದ್ಮಿನಿ ಹೆಗಡೆ
ಎಂದಿನಂತೆ …ಮಾಹಿತಿ ಪೂರ್ಣ ಲೇಖನ… ಮುಂದುವರೆದಿದೆ…ಧನ್ಯವಾದಗಳು ಮೇಡಂ
Nice
ಎಂದಿನಂತೆ ಸೊಗಸಾದ ಮಾಹಿತಿಪೂರ್ಣ ಲೇಖನ.
ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ ನಾಗರತ್ನ.ಬಿ.ಆರ್. ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ ಅನಾಮಿಕ ಓದುಗರಿಗೆ, ಅತ್ಯುತ್ತಮವಾದ ಪೂರಕ ಚಿತ್ರಗಳೊಂದಿಗೆ ಪ್ರಕಟಿಸುತ್ತಿರುವ ಹೇಮಾಮಾಲಾ ಮೇಡಂಗೆ ಹೃತ್ಪೂರ್ವಕ ಧನ್ಯವಾದಗಳು.