ಪರೀಕ್ಷಿತನಿಂದ ಪರಮ ಸಂದೇಶ

Share Button

ಯಾವುದೇ ಒಂದು ಕಾರ್ಯಕ್ಕೆ, ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ ಅದಕ್ಕೆ ಹೇತುವಾಗಿ ಒಬ್ಬ ನಿಮಿತ್ತಮಾತ್ರನಿರುತ್ತಾನೆ. ಅಥವಾ ಪರಿಸ್ಥಿತಿ ಆ ರೀತಿಯಾಗಿ ಸಂಕೋಲೆ ಬೆಸೆಯುತ್ತದೆ. ಎಲ್ಲವೂ ದೈವ ನಿರ್ಮಿತವೆಂಬಂತೆ ಒಳ್ಳೆಯವರೂ ಕೆಲವೊಂದು ಕ್ಷಣ ವಿವೇಕ ಶೂನ್ಯರಾಗಿ ವರ್ತಿಸುವುದುಂಟು! ಯಾವುದೋ ಕಾಣದ ಕೈವಾಡದಿಂದ, ಒಂದು ಕ್ಷಣ ದುಡುಕಿದ ಪರಿಣಾಮವಾಗಿ ಪರಿಸ್ಥಿತಿ ಕೈಮೀರಿ ಹೋಗಿ ಮತ್ತೆ ಪಶ್ಚಾತ್ತಾಪಪಡುವುದುಂಟು. ಸಂಯಮ ಕಳೆದುಕೊಂಡು ಹಾದಿ ತಪ್ಪಬಾರದು ಎಂಬುದೇ ಜೀವನದ ಪ್ರತಿ ಹೆಜ್ಜೆಗೂ ಪುರಾಣ ನೀಡುವ ಸಂದೇಶ.

ಈ ನಿಟ್ಟಿನಲ್ಲಿ ‘ಪಂಚಮವೇದ’ವೆನಿಸಿಕೊಂಡ ಮಹಾಭಾರತ ಕತೆಯನ್ನು ಜನಕೋಟಿಗೆ ಸಾದರಪಡಿಸುವ ಸನ್ನಿವೇಶದಲ್ಲಿ ‘ಪರೀಕ್ಷಿತ್’ ಮಹಾರಾಜನ ಕತೆಯ ಮೂಲಕ ನಿರೂಪಣೆ ಮಾಡುತ್ತಾನೆ ವೇದವ್ಯಾಸ. ಪಾಂಡವರ ಸಂತತಿಯವನೇ ಆದ ಪರೀಕ್ಷಿತ್ ರಾಜ. ಈತನ ಮಗ ಜನಮೇಜಯನಿಗೆ; ವೇದವ್ಯಾಸರ ಶಿಷ್ಯನಾದ  ವೈಶಂಪಾಯನರಿಂದ ಕತೆ ನಿರೂಪಣೆ.

ಮೇಲೆ ತಿಳಿಸಿದಂತೆ ಪಾಂಡವರ ಮುಂದಿನ ಪೀಳಿಗೆಯವನೇ ಪರೀಕ್ಷಿತ್, ಅರ್ಥಾತ್ ಅಭಿಮನ್ಯುವಿನ ಮಗ, ವಿರಾಟ ರಾಜನ ಮಗಳಾದ ಉತ್ತರೆ ಇವನ ತಾಯಿ. ಈತನ ಪತ್ನಿ ಭದ್ರವತಿ. ಈತನಿಗೆ ಜನಮೇಜಯ, ಶ್ರುತಸೇನ, ಉಗ್ರಸೇನ, ಭೀಮಸೇನ ಎಂಬ ನಾಲ್ವರು ಮಕ್ಕಳು, ಧರ್ಮ, ಪ್ರಜಾ ಸಂಪತ್ತಿನಿಂದ ಕೂಡಿದ್ದ ಇವನ ಆಳ್ವಿಕೆಯಲ್ಲಿಪ್ರಜೆಗಳು ಸುಖಿಗಳಾಗಿದ್ದರು. ಇವನು ನೂರು ಅಶ್ವಮೇಧ ಯಾಗಗಳನ್ನು ಮಾಡಿದ್ದನು. ಪುಣ್ಯ ಕಾರ್ಯ ಮಾಡಿದ್ದರಿಂದ ಪ್ರಜಾನುರಾಗಿಯಾದ ರಾಜನಾದರೂ ‘ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವ ಹಾಗಾಯಿತು ಪರೀಕ್ಷಿತನಿಗೆ.

ಒಮ್ಮೆ ಬೇಟೆಗೆಂದು ಅಡವಿಗೆ ಹೋದವನು ಒಂದು ಹರಿಣವನ್ನು ಬೆನ್ನಟ್ಟಿಕೊಂಡು ಹೋದನು, ತಪ್ಪಿಸಿಕೊಂಡ ಜಿಂಕೆಯನ್ನು ಹುಡುಕುತ್ತಿದ್ದವನಿಗೆ ಒಬ್ಬ ಮುನಿಯು ಮಾಡುವುದು ಕಂಡಿತು. ಆತನು ಶಮೀಕಿ ಋಷಿಯಾಗಿದ್ದ. ತನ್ನ ಬೇಟೆ ಮೃಗ ತಪ್ಪಿಸಿಕೊಂಡ ಬಗ್ಗೆ ಮುನಿಯಲ್ಲಿ ವಿಚಾರಿಸಿದ ಪಂಚೇಂದ್ರಿಯಗಳನ್ನು ಅಧೀನದಲ್ಲಿಟ್ಟುಕೊಂಡು ದೇವರನ್ನು ಧ್ಯಾನಿಸುತ್ತಿದ್ದವನಿಗೆ ರಾಜನ ಮಾತು ಕೇಳಿಸಲಿಲ್ಲ. ಈಗ ರಾಜನಿಗೆ ಕೋಪ ನೆತ್ತಿಗೇರಿ, ಮುನಿಯನ್ನು ಕುಚೇಷ್ಟೆ ಮಾಡುವ ದುರ್ಬುದ್ಧಿ  ಉಂಟಾಯ್ತು. ಇಲ್ಲಿ ರಾಜ ತಪ್ಪಿದ. ವಿವೇಕ ಶೂನ್ಯವಾಯಿತು.

ಅಲ್ಲೇ ಸನಿಹದಲ್ಲಿ ಸತ್ತು ಬಿದ್ದಿದ್ದ ಹಾವೊಂದನ್ನು ಬಿದಿರಿನ ಕೋಲಿನ ತುದಿಯಿಂದ ತಂದು ತಾಪಸೋತ್ತಮರ ಕೊರಳಿಗೆ ಹಾಕಿದ.  ಈ ಕೃತ್ಯವೆಸಗಿದ ರಾಜ  ಅರಮನೆಗೆ ಹಿಂತಿರುಗಿದನಾದರೂ ರಾಜನ ವಿಚಿತ್ರ ವರ್ತನೆ ಶಮೀಕನ ಮಗನಾದ ‘ಶೃಂಗಿ’ಗೆ ತಿಳಿಯಿತು. ತಂದೆಗಾದ ಅವಮಾನದಿಂದ ಮಗ ಕೋಪಾವಿಷ್ಟನಾದ ‘ನನ್ನ ತಂದೆಯ ಕೊರಳಿಗೆ ಸತ್ತು ಬಿದ್ದ ಹಾವನ್ನೆಸೆದು ಅವಮಾನ ಮಾಡಿದ ರಾಜ ಎಂಟು ದಿನಗಳೊಳಗೆ ಹಾವು ಕಟ್ಟಿ ಮರಣಿಸಲಿ’ ಎಂದು ಶಾಪವಿತ್ತ ಮಗ. ರಾಜನಿಗಿತ್ತ ಶಾಪದಿಂದ ಶಮೀಕ ಋಷಿ ಬೇಸತ್ತ. ತನ್ನ ಶಿಷ್ಯನೊಬ್ಬನನ್ನು ಕರೆದು ಶೃಂಗಿಯು ಕೋಪದಲ್ಲಿ ಕೈಗೊಂಡ ತೀರ್ಮಾನವನ್ನು ರಾಜನಿಗೆ ತಿಳಿಸಿ ಬಾ ಎಂದು ಕಳುಹಿಸಿದ. ಶೃಂಗಿಯು ಕೊಟ್ಟ ಶಾಪದ ದುರ್ವಾರ್ತೆಯಿಂದ ರಾಜ ಚಿಂತೆಗೀಡಾದ.  ತನ್ನಿಂದಾದ ಅಚಾತುರ್ಯಕ್ಕೆ ತಾನು ನೊಂದುಕೊಂಡ. ಆದರೆ ಸಮಯ ಮೀರಿತ್ತು.

ಒಂದೇ ಕಂಬದ ತುದಿಯಲ್ಲಿ ಮಂದಿರ ನಿರ್ಮಿಸಿ ಅದರಲ್ಲಿ ವಾಸ ಮಾಡಿದ. ದಿನಗಳು ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳನೇ ದಿನ ಬಂತು. ಸಂಜೆಯಾಗಬೇಕಾದರೆ ಅಪಾಯದಿಂದ ಪಾರಾದೆ ಎಂದಣಿಸಿದ ರಾಜನನ್ನು ಕಾಣಲು ಹಣ್ಣು ಹಂಪಲಿನ ಹರಿವಾಣದೊಂದಿಗೆ ಅತಿಥಿಗಳು ಬಂದರು. ಒಂದು ಹಣ್ಣಿನಲ್ಲಿ ಕೆಂಪು ಕ್ರಿಮಿಯಿತ್ತು. ಅದನ್ನು ಪರೀಕ್ಷಿತ  ರಾಜ  ತೆಗೆದು ಜಾಡಿಸಿದಾಗ ಅದು ತಕ್ಷಣ ಹಾವಿನ ರೂಪ ತಾಳಿ ರಾಜನನ್ನು ಕಟ್ಟಿ ಕೊಂದಿತು. ಭಯಂಕರ ಉರಿಜ್ವಾಲೆಯಿಂದ ಆ ಮಂದಿರವೂ ಭಸ್ಮವಾಯಿತು.

ಮುಂದೆ ಮಂತ್ರಿ ಮಾಗಧರು, ವಿಪ್ರೋತ್ತಮರೆಲ್ಲ ಸೇರಿ ಪರೀಕ್ಷಿತನ ಮಗ ಜನಮೇಜಯ ಅಪ್ರಾಪ್ತ ಬಾಲಕನಾದರೂ ರಾಜ್ಯದ ಹಿತದೃಷ್ಟಿಯಿಂದ ಪಟ್ಟಾಭಿಷೇಕ ಮಾಡಿದರು. ದಿನಗಳುರುಳಿ ಅವನು ಪ್ರಾಪ್ತ ವಯಸ್ಸಿಗೆ ಬಂದಾಗ ತಂದೆಯ ಮರಣದ ಕಾರಣವನ್ನು ತಿಳಿದು ಸರ್ಪಕುಲವನ್ನೇ ನಾಶ ಮಾಡಲು ಸರ್ಪಾಧ್ವರವೆಂಬ ಯಾಗವನ್ನುಕೈಗೊಳ್ಳುತ್ತಾನೆ. ಅವನ್ನು ಮಾತ್ರ ತನ್ನ ಸಹೋದರಿಯಾದ ಜರತ್ಕಾರುವಿನ ಮಗ ಆಸ್ತಿಕನನ್ನು ಬರಮಾಡಿಕೊಂಡು  ‘ಜನಮೇಜಯ ರಾಜನಲ್ಲಿಗೆ ನೀನೇ ಹೋಗಿ ಸರ್ಪಾಧ್ವರವನ್ನು ಕೊನೆಗೊಳಿಸಿ ನಮ್ಮನ್ನು ರಕ್ಷಿಸಬೇಕೆಂದು ವಿನಂತಿಸಿ ಬಾ’ ಎನ್ನುತ್ತಾನೆ,

ಅಂತೆಯೇ ಆಸ್ತಿಕನು ಜನಮೇಜಯನ ಯಜ್ಞಶಾಲೆಗೆ ತೆರಳಿ ‘ಓರ್ವನ ತಪ್ಪಿಗಾಗಿ ಸರ್ಪ ಸಂಕುಲವನ್ನೇ ನಾಶ ಮಾಡಹೊರಟಿರುವುದು ಸರಿಯಲ್ಲ’ ಎಂದು  ಕೆಲವು ಹಿತೋಕ್ತಿಗಳನ್ನು ಹೇಳಿದಾಗ ಜನಮೇಜಯನ ಮನ:ಪರಿವರ್ತನೆಯಾಗುತ್ತದೆ.

ಇಂತಹ ಸಮಯದಲ್ಲಿ ವೇದವ್ಯಾಸರು ಶಿಷ್ಯರಾದ ವೈಶಂಪಾಯನ ಋಷಿಗಳು ಜನಮೇಜಯನ ಪೂರ್ವಜರ ಇತಿಹಾಸವಾದ  (ವೇದವ್ಯಾಸರಿಂದ ತಾನು ತಿಳಿಯಲ್ಪಟ್ಟ) ಮಹಾಭಾರತ ಕತೆಯನ್ನು ಹೇಳುತ್ತಾರೆ. 

ಪ್ರಜಾಪಾಲಕನಾದ ಪರೀಕ್ಷಿತ  ಮಹಾರಾಜ  ಸ್ವಭಾವತಃ ಒಳ್ಳೆಯವನು. ಪ್ರಜೆಗಳನ್ನು ತನ್ನ ಮಕ್ಕಳಂತೆ ಸಲಹುವವನು, ಕೀರ್ತಿವಂತನು, ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ತಾನು ಮಾಡುತಿವೆ ಎಂದು ಪಶ್ಚಾತ್ತಾಪ ಪಟ್ಟಿದ್ದನು. ತನ್ನಿಂದಾದ ಅಚಾತುರ್ಯಕ್ಕೆ ಮಮ್ಮಲ ಮರುಗಿದ್ದನು. ಆತನ ತಪ್ಪಿಗೆ ಪಶ್ಚಾತಾಪವೇ ಪ್ರಾಯಶ್ಚಿತ್ತವಾಯಿತು. ಕೋಪದ ಕೈಗೆ ಇಲ್ಲಿ ಕೊಡಬೇಡಿ, ವಿವೇಕಯುತವಾಗಿ ನಡೆದುಕೊಳ್ಳಿ ಎಂಬುದೇ ಜನರಿಗೆ ಪರೀಕ್ಷಿತನು ಪರೋಕ್ಷವಾಗಿ ನೀಡುವ ಸಂದೇಶ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

 1. Vijayasubrahmanya says:

  ಎಡಿಟರ್ ಹೇಮಮಾಲಾ ಹಾಗೂ ಓದುಗರಿಗೆ ವಂದನೆಗಳು.

 2. ಪರೀಕ್ಷಿತ ರಾಜನ ಕಥೆ.. ಚೆನ್ನಾಗಿ ಮೂಡಿಬಂದಿದೆ… ಪುರಾಣ ಕಥೆಗಳನ್ನು ಹೇಳುವಾಗ. ಅದರ ಹಿನ್ನೆಲೆ… ವಿವರಿಸಿ..ನಂತರ.. ಅದರ ಪರಿಣಾಮ… ಹೇಳಿ… ಮುಕ್ತಾಯ ಮಾಡುವ ರೀತಿ..ಚೆನ್ನಾಗಿರುತ್ತದೆ …ವಿಜಯಾ ಮೇಡಂ.

  ಧನ್ಯವಾದಗಳು

 3. ನಯನ ಬಜಕೂಡ್ಲು says:

  ಉತ್ತಮ ಸಂದೇಶವುಳ್ಳ ಕಥೆ

 4. ಶಂಕರಿ ಶರ್ಮ says:

  ಚಂದದ ನಿರೂಪಣೆಯೊಂದಿಗೆ ಹರಿದು ಬರುವ ಪೌರಾಣಿಕ ಕಥೆ ನಿಜಕ್ಕೂ ಅಮೂಲ್ಯ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: