ಆರೋಗ್ಯವೆಂಬ ಅಮೃತಧಾರೆ

Share Button


ಅಂದು ಕೃಷ್ಣ ಜನ್ಮಾಷ್ಟಮಿ. ಹತ್ತಾರು ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ನೃತ್ಯ ಮಾಡಲು ಸಜ್ಜಾಗಿದ್ದರು. ಸ್ಥಳ – ಸ್ಕಾಟ್‌ಲ್ಯಾಂಡಿನಲ್ಲಿರುವ ಒಂದು ಸುಂದರ ನಗರ ಅಬರ್ಡೀನ್. ಸಮುದ್ರ ತೀರದಲ್ಲಿದ್ದ ಹಳೆಯ ಚರ್ಚ್‌ನ್ನು ನವೀಕರಿಸಿ, ಹಿಂದೂ ದೇಗುಲವನ್ನಾಗಿ ಮಾರ್ಪಡಿಸಿದ್ದರು. ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು.

ನಾನು, ಅಬರ್ಡೀನ್.ನಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಗನ ಮನೆಗೆ ಬಂದು ಹದಿನೈದು ದಿನ ಕಳೆದಿತ್ತು. ನಮ್ಮ ನೆರೆ ಮನೆಯಲ್ಲಿದ್ದ ಬೆಂಗಾಲಿ ಕುಟುಂಬದ ಪುಟ್ಟ ಹುಡುಗಿ ‘ಪಿಯಾಲಿ’ ಈ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹದಿನೈದು ದಿನದಿಂದ ಅಭ್ಯಾಸ ನಡೆಸಿದ್ದಳು. ನಾನು ಅವಳ ನೃತ್ಯವನ್ನು ನೋಡಲು ಉತ್ಸುಕಳಾಗಿ ಕಾಯುತ್ತಿದ್ದೆ. ಆದರೆ ಪಿಯಾಲಿಯಾಗಲೀ, ಅವಳ ಕುಟುಂಬದವರಾಗಲೀ ಅಲ್ಲಿಗೆ ಬರಲೇ ಇಲ್ಲ. ಮನೆಗೆ ಹಿಂತಿರುಗಿ ಬಂದವಳೇ, ಅವರ ಮನೆಗೆ ಹೋದೆ. ಜ್ವರದಿಂದ ಬಳಲುತ್ತಿದ್ದ ಮಗು ಸೋತು ಮಲಗಿದ್ದಳು. ಅವಳ ಅಮ್ಮ ಸ್ವಸ್ಥಿಕಾ, ಮಂಕಾಗಿ ಕುಳಿತಿದ್ದಳು.

‘ಪಿಯಾಲಿಯನ್ನು ಎರಡು ವಾರಗಳಿಂದ ಡ್ಯಾನ್ಸ್ ಪ್ರಾಕ್ಟೀಸ್‌ಗೆ ಕರೆದೊಯ್ಯುತ್ತಿದ್ದೆ. ಅವಳಿಗಾಗಿ ರಾಧೆಯ ಉಡುಪು ಹಾಗೂ ಆಭರಣಗಳನ್ನು ಜೋಡಿಸಿದ್ದೆ. ಕಳೆದೆರಡು ದಿನದಿಂದ ಜ್ವರ ಬಂದು, ಅವಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ. ನಮಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ವೈದ್ಯರ ಅಪಾಯಿಂಟ್‌ಮೆಂಟ್ ಸಿಗಲೇ ಇಲ್ಲ. ನಿಮ್ಮ ಮಗ ದೇವರ ಹಾಗೆ ಬಂದು, ಹೆಚ್ಚುವರಿ ಪೇಷಂಟ್ ಕೋಟಾದಡಿ, ಅವಳಿಗೆ ಔಷಧೋಪಚಾರ ಮಾಡಿದರು.’ ಎಂದು ಸ್ವಸ್ಥಿಕಾ ಹೇಳಿದಾಗ, ನನಗೆ, ಅವರ ಮಾತುಗಳ ತಲೆ ಬುಡ ಅರ್ಥವಾಗಲಿಲ್ಲ. ಮುಂದುವರೆದ ರಾಷ್ಟ್ರವಾದ ಯು.ಕೆ.ಯಲ್ಲಿ ಮೆಡಿಕಲ್ ಆರೈಕೆ ಸಿಗುವುದು ಅಷ್ಟು ದುರ್ಲಭವೇ ಎಂದೆನಿಸಿತ್ತು.

ಮನೆಗೆ ಬಂದವಳೇ, ನನ್ನ ಸಂದೇಹಗಳನ್ನು ಮಗನ ಮುಂದಿಟ್ಟೆ – ಇಲ್ಲಿ ಎಲ್ಲರಿಗೂ ಉಚಿತವಾದ ವೈದ್ಯಕೀಯ ಆರೈಕೆ ಸಿಗುವುದು ಎಂದು ಹೇಳುತ್ತಿದ್ದೆ. ಪಿಯಾಲಿಯನ್ನು ನೇರವಾಗಿ ಮಕ್ಕಳ ವೈದ್ಯರ ಬಳಿ ಕರೆದೊಯ್ಯಬಹುದಾಗಿತ್ತಲ್ಲ. ಜಿ.ಪಿ. (General Practitioner) ಯಾದ ನಿನ್ನ ಬಳಿ ಏಕೆ ಬಂದರು? ಆಗ ನನ್ನ ಮಗ ಅಲ್ಲಿನ ವ್ಯವಸ್ಥೆಯ ವಿವರಗಳನ್ನು ತಿಳಿಸಿದ – ಇಡೀ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಉಚಿತ ಆರೋಗ್ಯ ವ್ಯವಸ್ಥೆ ಯು.ಕೆ. ಯಲ್ಲಿದೆ. ಇದನ್ನು ಎನ್.ಹೆಚ್.ಎಸ್. – ರಾಷ್ಟ್ರೀಯ ಆರೋಗ್ಯ ಸೇವೆ ಎನ್ನುವರು. ಈ ಯೋಜನೆಯನ್ನು – ಜನರಿಂದ ಸಂಗ್ರಹವಾದ ತೆರಿಗೆಯಿಂದ ಹಾಗೂ ರಾಷ್ಟ್ರೀಯ ವಿಮಾ ಯೋಜನೆಗಳಿಂದ ನಿರ್ವಹಣೆ ಮಾಡಲಾಗುತ್ತದೆ. ಎರಡನೇ ಮಹಾಯುದ್ಧದ ನಂತರ 1948 ರಲ್ಲಿ ‘ಅನ್ಯುರೆನ್ ಬೆವಾನ್’ ಎಂಬ ಮಹಾಶಯ ಎನ್.ಹೆಚ್.ಎಸ್.ಗೆ ಶಂಕುಸ್ಥಾಪನೆ ಮಾಡಿದನು. ಜನರಿಗೆ ಅತ್ಯಾವಶ್ಯಕವಾದ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಆರಂಭವಾದ ಸಂಸ್ಥೆಯಿದು. ಬಡವ ಬಲ್ಲಿದರೆಂಬ ಬೇಧವಿಲ್ಲದೆ ಎಲ್ಲರಿಗೂ ಸಮಾನ ವೈದ್ಯಕೀಯ ಆರೈಕೆ ನೀಡುವ ಧ್ಯೇಯ ಇವರದು. ಸಣ್ಣ ಪುಟ್ಟ ಖಾಯಿಲೆಗಳಿಂದ ಹಿಡಿದು ಕ್ಯಾನ್ಸರ್‌ನಂತಹ ರೋಗಗಳಿಗೂ ಉಚಿತ ಚಿಕಿತ್ಸೆ ಲಭ್ಯ. ಜುಲೈ 5,2022 ರಂದು ಎನ್.ಹೆಚ್.ಎಸ್. ನ 74 ವರ್ಷಗಳ ವಾರ್ಷಿಕೋತ್ಸವ ಆಚರಿಸಲಾಯಿತು.

ನಾನು ಎನ್.ಹೆಚ್.ಎಸ್.ನ ನಿಯಮಗಳನ್ನು ತಿಳಿದುಕೊಳ್ಳುವ ಆಸಕ್ತಿಯಿಂದ ಅಂತರ್‌ಜಾಲದ ಮೊರೆ ಹೊಕ್ಕೆ. ಈ ಸಂಸ್ಥೆಯ ಉಚಿತ ವೈದ್ಯಕೀಯ ನೆರವು ಯು.ಕೆ. ನಾಗರೀಕರಿಗೆ ಮಾತ್ರ ಲಭ್ಯ. ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗ ಅರಸಿ ಬಂದವರೂ, ತಮಗೆ ಸಮೀಪವಿರುವ ಆಸ್ಪತ್ರೆಗಳಲ್ಲಿ, ತಾತ್ಕಾಲಿಕವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಆಕ್ಸಿಡೆಂಟ್‌ನಂತಹ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊರದೇಶದವರಿಗೆ, ಉಚಿತ ವೈದ್ಯಕೀಯ ನೆರವು ದೊರೆಯುವುದು. ಇಂಗ್ಲೆಂಡಿನಲ್ಲಿ, ಹದಿನೈದು ವರ್ಷಗಳ ಹಿಂದೆ ರಸ್ತೆ ದಾಟುವಾಗ, ನನಗೊಂದು ಕಾರ್ ಆಕ್ಸಿಡೆಂಟ್ ಆಗಿತ್ತು. ಆಗ ನನಗೆ ದೊರೆತ ಚಿಕಿತ್ಸೆಯಿಂದ ಇಲ್ಲಿನ ಎನ್.ಹೆಚ್.ಎಸ್.ನ ಅತ್ಯುತ್ತಮ ಸಾಧನೆಯ ಪರಿಚಯವಾಗಿತ್ತು. ಪ್ರವಾಸಿಗರು, ಮುನ್ನೆಚರಿಕೆಯಿಂz ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ಬರುವುದು ಸೂಕ್ತ. ಇಲ್ಲವಾದರೆ, ಇಲ್ಲಿನ ದುಬಾರಿ ವೈದ್ಯಕೀಯ ಚಿಕೆತ್ಸೆ ಪಡೆಯುವುದು ಕಷ್ಟಸಾಧ್ಯ.

ಎನ್.ಹೆಚ್.ಎಸ್. ನ ಕೆಲವು ಷರತ್ತುಗಳನ್ನು ಅರಿಯುವುದು ಉತ್ತಮ. ಮೊದಲಿಗೆ ಯು.ಕೆ.ಯ ನಾಗರೀಕರು, ತಮ್ಮ ಮನೆಯ ವ್ಯಾಪ್ತಿ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಜಿ.ಪಿ.ಸರ್ಜರಿ) ಅಧಿಕೃತ ಐ.ಡಿ.ಕಾರ್ಡ್ ತೋರಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಅನಾರೋಗ್ಯ ಪೀಡಿತರಾದವರು, ವೈದ್ಯರನ್ನು ಭೇಟಿ ಮಾಡಲು, ಆರೋಗ್ಯ ಕೇಂದ್ರಕ್ಕೆ ಫೋನ್ ಮಾಡಿ, ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಒಂದು ವಾರ ಕಾಯಬೇಕಾಗಬಹುದು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ಅಂಗಡಿಗಳಲ್ಲಿ ಪ್ಯಾರಾಸಿಟಮಾಲ್ ಹಾಗೂ ಬ್ರೂಫಿನ್ ಮಾತ್ರೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಔಷಧಿಯನ್ನು ಮಾರುವುದಿಲ್ಲ. ಜನರಲ್ ಪ್ರಾಕ್ಟೀಷನರ್ ರೋಗಿಗಳನ್ನು ನೋಡಿ, ಸೂಕ್ತವಾದ ಔಷಧೋಪಚಾರ ಮಾಡುವರು. ರೋಗಿಗಳಿಗೆ, ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ, ಆಸ್ಪತ್ರೆಗಳಲ್ಲಿರುವ ವಿಶೇಷ ತಜ್ಞರ (specialist) ಬಳಿ ಕಳುಹಿಸುತ್ತಾರೆ. ಯಾವುದೇ ರೋಗಿಯೂ ನೇರವಾಗಿ ಯಾವುದೇ ತಜ್ಞರ ಬಳಿ ಹೋಗುವಂತಿಲ್ಲ. ನಮ್ಮ ದೇಶದಲ್ಲಿ, ಸಾಮಾನ್ಯವಾಗಿ, ತಜ್ಞರ ಬಳಿ ನೇರವಾಗಿ ಹೋಗುವ ಪರಿಪಾಠ ಬೆಳೆದು ಬಂದಿದೆ ಅಲ್ಲವೇ? ಇನ್ನೂ ಕೆಲವರು, ಔಷಧಿ ಅಂಗಡಿಗಳಿಗೇ ನೇರವಾಗಿ ಹೋಗಿ ಮಾತ್ರೆಗಳನ್ನು ಕೊಳ್ಳುವ ಅಭ್ಯಾಸವೂ ಉಂಟು.

PC: Internet

ಜಿ.ಪಿ. ಗಳು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಜಿ.ಪಿ.ಗಳಾಗಬಯಸುವವರು, ಎಮ್.ಬಿ.ಬಿ.ಎಸ್. ಪದವಿ ಪಡೆದ ನಂತರ ಎರಡು ವರ್ಷ ಫೌಂಡೇಷನ್ ಕೋರ್ಸ್ ಹಾಗೂ ಮೂರು ವರ್ಷಗಳ ಅವಧಿಯ ಜಿ.ಪಿ.ಕೋರ್ಸ್ ಮಾಡಬೇಕು, (ಎರಡು ವರ್ಷ ಆಸ್ಪತ್ರೆಯ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರೆ ಒಂದು ವರ್ಷ ಜಿ.ಪಿ ಸರ್ಜರಿಗಳಲ್ಲಿ ತರಬೇತಿ ಪಡೆಯಬೇಕಾಗುವುದು). ಜಿ.ಪಿ.ಕೋರ್ಸಿನ ಅವಧಿಯ ಕೊನೆಯಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಜಿ.ಪಿ. ಆಗಲು ಅರ್ಹತೆ ಪಡೆಯುತ್ತಾರೆ.

ಪ್ರಾಥಮಿಕ ಆರೊಗ್ಯ ಕೇಂದ್ರಗಳನ್ನು ಜನರಲ್ ಮೆಡಿಕಲ್ ಕೌನ್ಸಿಲ್ ನ ನಿಯಮಾವಳಿಯಂತೆ ನಡೆಸಬೇಕು. ಜಿ.ಪಿ.ಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಪಾಲುದಾರರಾಗಿ ಅಥವಾ ಸಂಬಳ ಪಡೆಯುವ ವೈದ್ಯರಂತೆಯೂ ಕಾರ್ಯ ನಿರ್ವಹಿಸಬಹುದು. ಬೋಧನೆ ಮಾಡುವುದರಲ್ಲಿ ಆಸಕ್ತಿ ಉಳ್ಳವರು ಜಿ.ಪಿ. ತರಬೇತುದಾರರಾಗಿ ಕಾರ್ಯ ನಿರ್ವಹಿಸಬಹುದು. ಇವರು ಸ್ಪೆಷಾಲಿಟಿ ತರಬೇತಿಯನ್ನೂ ಪಡೆದು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬಹುದು – ಉದಾ: ಕ್ರೀಡಾ ವಿಭಾಗ, ಹದಿ ಹರೆಯದವರ ಆರೋಗ್ಯ, ಡಯಾಬಿಟಿಕ್ ಕ್ಲಿನಿಕ್, ನೋವಿನ ಉಪಶಮನ ಕೇಂದ್ರ ಇತ್ಯಾದಿ. ಸಂಶೋಧನೆಯಲ್ಲಿ ಆಸಕ್ತಿ ಇರುವವರು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯನ್ನೂ ಮಾಡಬಹುದು. ಕೇಂದ್ರದಲ್ಲಿ ನೋಂದಣಿಯಾಗಿರುವ ಜನರು ಹಾಗೂ ಕೇಂದ್ರದಲ್ಲಿ ನೀಡಲಾಗುತ್ತಿರುವ ಸೇವೆಗಳ ಆಧಾರಕ್ಕೆ ಅನುಗುಣವಾಗಿ ಎನ್. ಹೆಚ್.ಎಸ್. ನಿಂದ ಅನುದಾನವನ್ನು ಪಡೆಯುವರು. ರೋಗಿಗಳನ್ನು ಫೋನ್ ಮೂಲಕ ಸಂಪರ್ಕಿಸಿ, ಅವರ ಖಾಯಿಲೆಯ ಲಕ್ಷಣಗಳನ್ನು ವಿಚಾರಿಸಿ, ಫೋನ್ ಮೂಲಕವೇ ಚಿಕಿತ್ಸೆಯನ್ನೂ ನೀಡುವ ಕ್ರಮವೂ ಇದೆ. ರೋಗಿಗಳನ್ನು ಮುಖತಃ ಭೇಟಿ ಮಾಡಿ, ಅವರ ಖಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಕ್ರಮದ ಜೊತೆಗೇ ತೀವ್ರವಾಗಿ ಅಸ್ವಸ್ಥರಾದವರ ಮನೆಗೇ ಹೋಗಿ ಚಿಕಿತ್ಸೆ ನೀಡುವ ವಿಧಾನವೂ ಜಾರಿಯಲ್ಲಿದೆ. ನನ್ನ ಮಗ ಜಿ.ಪಿ.ಸರ್ಜರಿಯಲ್ಲಿ ಪಾಲುದಾರನಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೇ ಜಿ.ಪಿ. ವಿದ್ಯಾರ್ಥಿಗಳಿಗೆ ಬೋಧನೆಯನ್ನೂ ಮಾಡುತ್ತಿರುವನು. ಮನೆ, ಮಕ್ಕಳ ಜವಾಬ್ದಾರಿ ಹೊತ್ತಿರುವ ಸೊಸೆ ಜಿ.ಮೆಡ್ ನಲ್ಲಿ ಅರೆಕಾಲಿಕ ವೈದ್ಯಳಾಗಿ ಸೇವೆ ಸಲ್ಲಿಸುತ್ತಿರುವಳು. ಇವರಿಬ್ಬರ ನಡುವೆ ಜರುಗುವ ಮಾತುಕಥೆ, ಸದಾ ಅಂದು ಆಸ್ಪತ್ರೆಯಲ್ಲಿ ನೋಡಿದ ರೋಗಿಗಳ ಚಿಕಿತ್ಸೆಯ ಬಗ್ಗೆಯೇ ಸುತ್ತುತ್ತಿರುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಪ್ರತಿ ರೋಗಿಗೆ ಹತ್ತು ನಿಮಿಷಗಳ ಕಾಲಾವಕಾಶವನ್ನು ನೀಡಿ, ಅವರ ವಿವರಗಳನ್ನು ಕರಾರುವಾಕ್ಕಾಗಿ ಸಂಗ್ರಹಿಸಿ ದಾಖಲಿಸುವರು. ವೈದ್ಯರು ಮುಂಜಾನೆ ಎಂಟೂವರೆಯಿಂದ ಸಂಜೆ ಆರು ಗಂಟೆಯವರೆಗೆ ಕಾರ್ಯ ನಿರ್ವಹಿಸುವರು. ಸಂಜೆ ಆರು ಗಂಟೆಯಿಂದ ಮಾರನೆಯ ದಿನ ಮುಂಜಾನೆ ಎಂಟು ಗಂಟೆಯವರೆಗೆ ಔಟ್ ಆಫ್ ಅವರ್‍ಸ್ ಎಂಬ ಸಂಘದ ಅಡಿಯಲ್ಲಿ ಕೆಲಸ ಮಾಡಬಯಸುವ ಜಿ.ಪಿ.ಗಳೂ ಗಣನೀಯ ಪ್ರಮಾಣದಲ್ಲಿದ್ದಾರೆ.

ಮಗನ ಮನೆ ಆಸ್ಪತ್ರೆಗೆ ಹತ್ತಿರದಲ್ಲಿಯೇ ಇದ್ದುದರಿಂದ ಆಗಾಗ್ಗೆ ಅಂಬ್ಯುಲೆನ್ಸ್ ಸದ್ದು, ಹೆಲಿಕಾಪ್ಟರ್ ಸದ್ದು ಕೇಳಿಸುತ್ತಿತ್ತು. ತೀವ್ರವಾಗಿ ಅಸ್ವಸ್ಥರಾದವರು 999 ಗೆ ಕರೆ ಮಾಡಿದರಾಯ್ತು, ಹತ್ತು ನಿಮಿಷದಲ್ಲಿ ಆಂಬುಲೆನ್ಸ್ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿತ್ತು. ನಮ್ಮ ಮನೆಯ ಹತ್ತಿರದಲ್ಲಿದ್ದ ಗರ್ಭಿಣಿಗೆ ಹದಿನೈದು ದಿನ ಮೊದಲೇ ಹೊಟ್ಟೆ ನೋವು ಕಾಣಿಸಿಕೊಂಡಿತ್ತು, ಅವಳ ಗಂಡ ಕೆಲಸಕ್ಕೆ ಹೋಗಿದ್ದ. ಧೃತಿಗೆಡದ ಗರ್ಭಿಣಿ 999 ಗೆ ಕರೆ ಮಾಡಿದಳು, ಅವಳ ನಾಲ್ಕು ವರ್ಷದ ಮಗುವನ್ನು ನಮ್ಮ ಮನೆಯಲ್ಲಿ ಬಿಟ್ಟು, ಅಂಬ್ಯುಲೆನ್ಸ್‌ನಲ್ಲಿ ಒಬ್ಬಳೇ ಹೊರಟಳು, ಗಂಡನಿಗೆ ಸುದ್ಧಿ ತಿಳಿದು ಹಿಂತಿರುಗುವ ಹೊತ್ತಿಗೆ ಪುಟ್ಟ ಪಾಪು ತಂದೆಯ ಹಾದಿಯನ್ನು ಕಾಯುತ್ತಿತ್ತು. ನಮ್ಮ ಊರಿನಲ್ಲಿ ಆಗಿದ್ದರೆ, ಗರ್ಭಿಣಿಯ ಹಿಂದೆ ಒಂದು ಮೆರವಣಿಗೆಯೇ ಹೊರಡುತ್ತಿತ್ತಲ್ಲವೇ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಈ ಘಟನೆ ಎನ್.ಹೆಚ್.ಎಸ್.ನ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ ಅಲ್ಲವೇ?

ಸಂಜೆ ವಾಕ್ ಹೋಗುವಾಗ, ಆಸ್ಪತ್ರೆಯ ಮುಂದೆ ಒಂದು ಹೆಲಿಕಾಪ್ಟರ್ ನಿಂತಿತ್ತು. ಅಪಘಾತಕ್ಕೀಡಾದವನಿಗೆ, ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದುದರಿಂದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್ ತರಿಸಿದ್ದರು. ಅವನು ವಿ.ಐ.ಪಿ. ಇರಬಹುದೆಂದು ನಾನು ಭಾವಿಸಿದೆ, ಆದರೆ ಅವನೊಬ್ಬ ಸಾಮಾನ್ಯ ಕಾರ್ಮಿಕ ಎಂದು ತಿಳಿದು ಅಚ್ಚರಿಯಾಯಿತು. ಇಂತಹ ಆಸ್ಪತ್ರೆಗಳು ನಮ್ಮಲ್ಲಿಯೂ ಇದ್ದಿದ್ದರೆ ಎಂದು ಅನ್ನಿಸಿತ್ತು, ಆ ಕ್ಷಣ. ಪ್ರತಿಯೊಬ್ಬರ ಜೀವಕ್ಕೂ ಇವರು ನೀಡುವ ಮಹತ್ವ ಕಂಡು ಬೆರಗಾಗುವ ಸರದಿ ನನ್ನದಾಗಿತ್ತು.

ಇನ್ನು ಹಿರಿಯ ನಾಗರೀಕರಿಗೆಂದೇ ನರ್ಸಿಂಗ್ ಹೋಂಗಳು, ತೀವ್ರವಾಗಿ ಅಸ್ವಸ್ಥರಾದವರಿಗೆ ಕೇರ್ ಹೋಂ ಹಾಗೂ ಪ್ಯಾಲಿಯೇಟಿವ್ ಕೇರ್ ಮುಂತಾದ ಉಚಿತ ಚಿಕಿತ್ಸಾ ಕೇಂದ್ರಗಳೂ ಲಭ್ಯ. ಈ ಎಲ್ಲ ಆರೋಗ್ಯ ಕೇಂದ್ರಗಳೂ ಫೈವ್ ಸ್ಟಾರ್ ಹೊಟೇಲುಗಳಂತೆ ಸುಸಜ್ಜಿತವಾಗಿರುತ್ತವೆ. ವಯಸ್ಸಾದವರು ತಮ್ಮ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಕಾಲ ಕಳೆಯಲು ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿರುತ್ತಾರೆ. ನಗುಮೊಗದಿಂದ ಸ್ವಾಗತಿಸುವ ರಿಸೆಪ್ಷನಿಸ್ಟ್, ಪಟಪಟನೇ ಮಾತಾಡುವ ನರ್ಸ್‌ಗಳು, ಖಾಯಿಲೆಯ ಎಲ್ಲ ಅಂಶಗಳನ್ನೂ ರೋಗಿಗಳಿಗೆ ವಿವರವಾಗಿ ತಿಳಿಸುವ ವೈದ್ಯರು ಹಾಗು ಸಮಯಕ್ಕೆ ಸರಿಯಾಗಿ ಲಭಿಸುವ ಉಚಿತ ಚಿಕಿತ್ಸೆ ಬೆರಗು ಹುಟ್ಟಿಸುವಂತಿದೆ. ಕೃಷ್ಣ ಜನ್ಮಾಷ್ಟಮಿಯಂದು ನಡೆದ ಘಟನೆ ನನ್ನ ಕಣ್ಣು ತೆರೆಸಿತ್ತು. ಅಂದು ಪುಟ್ಟ ಹುಡುಗಿ ಪಿಯಾಲಿಗೆ, ಚಿಕಿತ್ಸೆ ನೀಡಿದ ನನ್ನ ಮಗ ಎನ್.ಹೆಚ್.ಎಸ್.ನ ಭಾಗವಾಗಿದ್ದ. ಜಿ.ಪಿ.ಸರ್ಜರಿಗಳಲ್ಲಿ, ತೀವ್ರವಾಗಿ ಅಸ್ವಸ್ಥರಾಗಿರುವ ಮಕ್ಕಳಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡುವ ಪರಿಪಾಠವೂ ಇದೆ. ಕನ್ನಡದ ನಾಣ್ಣುಡಿಯೊಂದು ನೆನಪಾಯಿತು,’ಆರೊಗ್ಯವೇ ಭಾಗ್ಯ’. ಆದರೆ, ಇಂದಿನ ದಿನಗಳಲ್ಲಿ, ಆರೋಗ್ಯ ಕೇಂದ್ರಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಾಡಾಗಿರುವುದನ್ನು ನಾವು ಕಾಣುತ್ತಿದ್ದೇವೆ ಅಲ್ಲವೇ? ಯು.ಕೆ.ಯ ಆರೋಗ್ಯದ ಅಮೃತ ಧಾರೆಯ ಯೋಜನೆಗಳನ್ನು ಕೇಳಿ, ಅವರನ್ನು ಅಭಿನಂದಿಸೋಣವೇ?

– ಡಾ. ಗಾಯತ್ರಿದೇವಿ ಸಜ್ಜನ್. ಎಸ್ ,ಶಿವಮೊಗ್ಗ

7 Responses

 1. ಖಂಡಿತ.. ಆ ವೈದ್ಯಕೀಯ ವೃಂದವನ್ನು ಅಭಿನಂದಿಸಲೇ ಬೇಕು…ಉತ್ತಮ ಮಾಹಿತಿಯುಳ್ಳ ಲೇಖನ..
  ಧನ್ಯವಾದಗಳು ಮೇಡಂ.

 2. ನಯನ ಬಜಕೂಡ್ಲು says:

  ಮಾಹಿತಿಪೂರ್ಣ

 3. . ಶಂಕರಿ ಶರ್ಮ says:

  ಹೌದು, ಉಚಿತ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಕೇಳಿದ್ದೆ. ಎಲ್ಲವನ್ನೂ ವಿವರವಾಗಿ ತಿಳಿದು ಖುಷಿಯಾಯಿತು. ನಮ್ಮಲ್ಲಿ ಮಾತ್ರ ಅದನ್ನು ಯೋಚಿಸುವಂತೆಯೇ ಇಲ್ಲ ಬಿಡಿ!

 4. Krishnaprabha says:

  ಮಾಹಿತಿಪೂರ್ಣ ಬರಹ ಚೆನ್ನಾಗಿದೆ

 5. Padmini Hegade says:

  ಮಾಹಿತಿಪೂರ್ಣ ಬರಹ

 6. Padma Anand says:

  ಯು.ಕೆ.ಯಲ್ಲಿರುವ ವೈದ್ಯಕೀಯ ಸೇವೆಯ ಮಾಹಿತಿಗೆ ಹಿಡಿದ ಕೈಗನ್ನಡಿಯಾಗಿ ಮೂಡಿ ಬಂದಿದೆ ಲೇಖನ. ಅಭಿನಂದನೆಗಳು.

 7. ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: