ಅವಿಸ್ಮರಣೀಯ ಅಮೆರಿಕ-ಎಳೆ 40
ಕಣಿವೆಯ ಹಾದಿಯಲ್ಲಿ…
ಹೌದು.. ಊಟಕ್ಕೆ ತಡವಾದರೂ, ಅದರಿಂದ ನಮಗೆ, ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ವಿಶಿಷ್ಟವಾದ ಅಂಗಡಿಗೆ ಭೇಟಿಕೊಡುವ ಅವಕಾಶವು ಲಭಿಸಿತು. ಈ ಹೋಟೇಲಿನಲ್ಲಿ ಬರೇ ಊಟ, ತಿಂಡಿ ಮಾತ್ರವಲ್ಲದೆ, ಅವರದೇ ಆದ ಈ ಅಂಗಡಿಯಲ್ಲಿ, ಅತೀ ಕಡಿಮೆ ದರದಲ್ಲಿ, ನೆನಪಿನ ಉಡುಗೊರೆಗಾಗಿ ಇರುವಂತಹ ಕೀ ಚೈನ್, ಟೀ ಶರ್ಟ್, ಫ್ರಿಜ್ ಮ್ಯಾಗ್ನೆಟ್ ಇತ್ಯಾದಿ ವಿವಿಧ ರೀತಿಯ ಸುಂದರ ಸಾಮಗ್ರಿಗಳು ಮನಸೆಳೆಯುತ್ತವೆ. ಎಲ್ಲಾ ಕಡೆಗಳಲ್ಲಿ; ಅಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮೂರ್ತಿಗಳು, ಅಲಂಕಾರಗಳು ಗಮನಸೆಳೆಯುವಂತಿದ್ದು; ಇಡೀ ಕಟ್ಟಡದೊಳಗೆ ಮಂದಬೆಳಕು ಹರಡಿತ್ತು. ಮೆಕ್ಸಿಕನ್ ಮಾದರಿಯ ತಿಂಡಿ, ಊಟಗಳಿಗಾಗಿ ಆದೇಶ ನೀಡಲಾಯಿತಾದರೂ; ನನ್ನ ಹಸಿದ ಹೊಟ್ಟೆಗೆ ಅದ್ಯಾವುದೂ ಸೇರುವಂತೆ ಕಾಣಲಿಲ್ಲ. ನನ್ನ ಅಸಹಾಯಕತೆಯನ್ನು ನೆನೆದು ನನ್ನ ಬಗ್ಗೆ ನನಗೇ ಬೇಸರವಾಯಿತು. ಆಗಲೇ, ಬೆಣ್ಣೆಹಣ್ಣು (ಅವಕಾಡೊ), ಟೊಮೆಟೊ ಇತ್ಯಾದಿಗಳನ್ನು ಸೇರಿಸಿ ತಯಾರಿಸಿದ ಸಲ್ಸಾ ಎನ್ನುವ ಸಲಾದನ್ನು ಸ್ವಲ್ಪ ಚಿಪ್ಸಿನ ಜೊತೆಗೆ ತಂದಿಟ್ಟರು…ಊಟದ ಮೊದಲು ಸೇವಿಸಲು. ನನ್ನ ಪರಿಸ್ಥಿತಿಯನ್ನು ಗಮನಿಸಿದ ಮಗಳು ಅದನ್ನೇ ತಿನ್ನಲು ಕೊಟ್ಟಳು. ಹಾಗೆಯೇ ನನ್ನ ಅಂದಿನ ಉದರಪೋಷಣೆಯೂ ಅದರಿಂದಲೇ ಆಯಿತೆನ್ನಿ! ಇಲ್ಲಿಯೂ ಚಿತ್ರಕ್ಕೆ ಬಣ್ಣ ತುಂಬಿಸಲು ಮೊಮ್ಮಗಳಿಗೆ ಬಣ್ಣದ ಪೆನ್ಸಿಲ್ ಜೊತೆಗೆ ಚಿತ್ರಗಳನ್ನೂ ನೀಡಿದರು.
ಮರುದಿನ ಬೆಳಗ್ಗೆ ತಿಂಡಿಗಾಗಿ ಬೇರೊಂದು ಹೋಟೇಲಿಗೆ ಹೋದಾಗ, ಅಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಸುಮಾರು 85ವರ್ಷ ಪ್ರಾಯದ ಮಹಿಳೆಯೊಬ್ಬರನ್ನು ಕಂಡು ಮನಸ್ಸು ಸ್ವಲ್ಪ ನೊಂದಿತು. ಜೊತೆಗೇ ಆ ವಯಸ್ಸಿನಲ್ಲೂ ಸ್ವಂತ ದುಡಿದು ಜೀವಿಸುವ ಹುಮ್ಮನಸ್ಸು ಕಂಡು ಹೆಮ್ಮೆ ಎನಿಸಿದ್ದೂ ಸುಳ್ಳಲ್ಲ. ನಮ್ಮ ಪುಟ್ಟ ಮಕ್ಕಳ ಮೇಲೆ ಅವರು, ಹಿರಿಯಜ್ಜಿಯಂತೆ ಪ್ರೀತಿಯ ಮಳೆಗರೆದರು! ಅಲ್ಲಿದ್ದ ಅಮ್ಲೆಟ್, ದೋಸೆಗಳಂತಹ ತಿಂಡಿಗಳನ್ನು ನನ್ನ ಹತ್ತಿರಕ್ಕೂ ಸುಳಿಯಲು ಬಿಡದ ನನಗೆ ಸನ್ಯಾಸಿನಿಯಂತೆ, ಬರೇ ಹಣ್ಣು ಮತ್ತು ಹಣ್ಣಿನ ರಸಗಳೇ ಬೆಳಗ್ಗಿನ ಉಪಾಹಾರವಾಯ್ತು…ಹಾಗೆಯೇ ಸ್ವಲ್ಪ ಹಣ್ಣುಗಳೂ ನನ್ನ ಕೈಚೀಲ ಸೇರಿದವು. ಮುಂದಕ್ಕೆ, ಕಣಿವೆಯೊಳಕ್ಕೆ ಇಳಿಯಲು ನಮ್ಮ ದಂಡು ಹೊರಟಿತು ನೋಡಿ!
ಕಣಿವೆಯೊಳಗೆ ಇಳಿಯಲು ಅಲ್ಲಿರುವ ಇತರ ಎಲ್ಲಾ ದಾರಿಗಳಿಗಿಂತ Bright Angel Trial ಎಂಬುದು ತುಂಬಾ ಒಳ್ಳೆಯ ಹಾಗೂ ಸುರಕ್ಷಿತವಾದ ಹಾದಿಯಾಗಿದೆ. ಇದರ ಇಳಿಯುವಿಕೆಯ ದಾರಿಯು ನಾವು ತಿಂಡಿ ತಿಂದ ಹೋಟೇಲಿನ ಪಕ್ಕದಿಂದಲೇ ಪ್ರಾರಂಭವಾಗುವುದು. ಈ ದಾರಿಯಲ್ಲಿ ಸುಮಾರು13ಕಿ.ಮೀ ಇಳಿದರೆ; ನೆಲಮಟ್ಟದಿಂದ 4380ಅಡಿಗಳಷ್ಟು ಆಳದಲ್ಲಿರುವ ಕೊಲೊರಾಡೊ ನದಿಯನ್ನು ಕಾಣಬಹುದು. ಈ ದಾರಿಯನ್ನು ಆಗಾಗ ಪರಿಶೀಲಿಸುತ್ತಾ, ಅಗತ್ಯವಿದ್ದಲ್ಲಿ ದುರಸ್ತಿ ಕಾರ್ಯಗಳನ್ನು ಮಾಡುವರಲ್ಲದೆ, ಎಡೆಬಿಡದೆ ಕಾಯುವ ಸುರಕ್ಷಣಾ ತಂಡವೂ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಚಾರಣಿಗರ ಅನುಕೂಲಕ್ಕಾಗಿ ಪ್ರತಿ ಎರಡು ಕಿ.ಮೀ ಗಳಿಗೆ ಒಂದರಂತೆ, ನೀರಿನ ಸೌಲಭ್ಯವನ್ನೊಳಗೊಂಡ Rest Room ಗಳು ಲಭ್ಯ. ಇಲ್ಲಿ ಪೂರ್ತಿ ಕೆಳಗಿಳಿದು ಅದೇ ದಿನ ಮೇಲೇರಿ ಬರಲು ಸಾಧ್ಯವಾಗುವುದಿಲ್ಲ.
ಬೆಳಗ್ಗೆ ಹತ್ತುಗಂಟೆಗೆ ನಾವು ಇಳಿಯಲು ಪ್ರಾರಂಭಿಸಿದಾಗ ಅದಾಗಲೇ ಕೆಲವು ಗುಂಪುಗಳು ತಮ್ಮ ನಡಿಗೆ ಪ್ರಾರಂಭಿಸಿಯಾಗಿತ್ತು. ನನ್ನ ನಡಿಗೆಯು ಬಹಳ ಉತ್ಸಾಹದಿಂದಲೇ ಪ್ರಾರಂಭವಾಯ್ತೆನ್ನಿ!. ಪುಟ್ಟ ಮಗುವಿನೊಂದಿಗೆ ಅಳಿಯ ಅದಾಗಲೇ ವೇಗದಿಂದ ಮುಂದುವರಿದಿದ್ದ. ದಾರಿ ಖರ್ಚಿಗಾಗಿ ಇರಿಸಿಕೊಂಡಿದ್ದ ನೀರು, ಬಿಸ್ಕತ್, ಜ್ಯೂಸ್, ಹಣ್ಣು, ಚಾಕಲೇಟ್ ಇತ್ಯಾದಿಗಳ ಪೊಟ್ಟಣಗಳು ಪ್ರತ್ಯೇಕ ಪ್ರತ್ಯೇಕವಾಗಿ ಅವರವರ ಹೆಗಲೇರಿದವು. ಇಳಿಯಲಿರುವ ದಾರಿಯನ್ನು ಬಹಳ ಸ್ವಚ್ಛವಾಗಿರಿಸಲಾಗಿತ್ತು. ನಡೆದಾಡಲು ಅನುಕೂಲವಾಗುವಂತೆ, ಬಹಳ ಇಕ್ಕಟ್ಟಾದ ಸ್ಥಳಗಳಲ್ಲಿ ನೆಲವನ್ನು ಸಮತಟ್ಟುಗೊಳಿಸಿದ್ದರು. ಇನ್ನು ಕೆಲವು ಕಡೆಗಳಲ್ಲಿ ಸೊಗಸಾದ ಮೆಟ್ಟಲುಗಳನ್ನೂ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳ ಜೊತೆಗೆ; “ಕೆಳಗಿಳಿದವರು ಇಂದೇ ಹಿಂದಕ್ಕೆ ಬರಬೇಡಿ!” ಎಂಬ ವಿಶೇಷವಾದ ಸೂಚನಾ ಫಲಕವು ಗಮನಸೆಳೆಯಿತು. ಯಾಕೆಂದರೆ, ಇಳಿಯುವುದು ಸುಲಭ…ಏರುವುದು ಕಷ್ಟ ತಾನೇ? ಕಟ್ಟಕಡೆಯ ಜಾಗ ತಲಪಿಯಾದ ಬಳಿಕ, ಅತೀ ಕೆಳಗಡೆಗೆ; ಸುಮಾರು 50ಜನರು ಉಳಕೊಳ್ಳಲು ಸಾಧ್ಯವಾಗುವ ವ್ಯವಸ್ಥೆಯಿದೆಯಂತೆ. ಉತ್ತಮ ಡೇರೆ, ಆಹಾರ, ಪಾನೀಯಗಳು ಹಾಗೂ ಎಲ್ಲ ಸೌಲಭ್ಯಗಳನ್ನೂ ಅಲ್ಲಿಯ ಸ್ಥಳೀಯರೇ ಕಲ್ಪಿಸಿಕೊಡುವರಂತೆ… ಅಳಿಯ ಈ ಮೊದಲೇ ಅಲ್ಲಿಗೆ ಹೋಗಿದ್ದರ ಅನುಭವವನ್ನು ಹೇಳಿದ. ಅಲ್ಲಿಯ ಒಣ ಹವೆಯಿಂದಾಗಿ ಅತೀ ನೀರಡಿಕೆ, ಸುಸ್ತು ಸರ್ವೇಸಾಮಾನ್ಯ. ಮುಂಜಾಗರೂಕತಾ ಕ್ರಮಗಳನ್ನು ಅಳವಡಿಕೊಳ್ಳದಿದ್ದಲ್ಲಿ ಜೀವಕ್ಕೆ ಅಪಾಯವಾಗುವುದೂ ಅಷ್ಟೇ ಸತ್ಯ! ಬಿಸಿರಕ್ತದ ಯುವಕರು ಕೆಲವೊಮ್ಮೆ ಇದನ್ನು ಲೆಕ್ಕಿಸದೆ ಅಪಾಯಕ್ಕೀಡಾಗಿದ್ದುದೂ ಇದೆಯಂತೆ!
ನಾವು ಇಳಿಯುತ್ತಿದ್ದಾಗ ದಷ್ಟಪುಷ್ಟವಾದ ಹಲವಾರು ಹೇಸರಗತ್ತೆಗಳು ಬೆನ್ನ ಮೇಲೆ, ಭಾರವಾದ ಸಾಮಗ್ರಿಗಳನ್ನು ಹೇರಿಕೊಂಡು ಬರುತ್ತಿದ್ದುದು ಕಾಣಿಸಿತು. ಇವುಗಳು ಕುದುರೆ ಮತ್ತು ಕತ್ತೆಯ ಸಂಕರ ತಳಿಯಾದುದರಿಂದ; ಕುದುರೆಯಂತೆ ಬಲಿಷ್ಟ ಹಾಗೂ ಎತ್ತರವಾಗಿವೆ ಮತ್ತು ಕತ್ತೆಯಂತೆ ಅಪರಿಮಿತ ದುಡಿಮೆಗೆ ಒಗ್ಗಿಕೊಂಡಿವೆ. ಇವುಗಳು ಎಂತಹ ಹವಾಮಾನದಲ್ಲೂ ಹಾಯಾಗಿ ಬದುಕಬಲ್ಲವು. ಕಣಿವೆಯೊಳಕ್ಕೆ ಅಗತ್ಯದ ಸಾಮಾನುಗಳ ಜೊತೆಗೆ ಜನರನ್ನೂ ಕೊಂಡೊಯ್ಯಲು ಇವುಗಳನ್ನು ಬಳಸುತ್ತಾರೆ. ಅಗಲ ಕಿರಿದಾದ ಕಾಲುದಾರಿಯಲ್ಲಿ ಇನಿತೂ ಎಡವದೆ, ಶಿಸ್ತಿನಿಂದ ಸಾಲಾಗಿ, ಅವುಗಳು ಹತ್ತಿ ಇಳಿಯುವುದು ನೋಡಲೇ ಸೊಗಸು. ನನಗಂತೂ ಅವುಗಳನ್ನು ನೋಡಿ “ಆಯ್ಯೋ..ಪಾಪ!” ಅನಿಸಿದ್ದೂ ಹೌದು.
ನಮ್ಮಇಳಿಯುವ ಕಾರ್ಯ ಆರಂಭವಾದಾಗ ನಾವೆಲ್ಲರೂ ಶೂರರೇ!…ಆದರೆ ಅಷ್ಟೇ ದೂರ ಏರುವ ಯೋಚನೆ ತಲೆಯಲ್ಲಿರಬೇಕಷ್ಟೆ! ನಮ್ಮ ಮುಂಭಾಗದಲ್ಲಿ ಏರಿ ಬರುವವರ (ದು)ಸ್ಥಿತಿಯನ್ನು ನೋಡಿದಾಗ ಅಯ್ಯೋ ಎನಿಸುತ್ತಿತ್ತು. ಆದರೆ ಅವರಲ್ಲಿದ್ದ ಕೆಲವು ವೃದ್ಧ ಜೋಡಿಗಳ ಉತ್ಸಾಹವು ನವಯುವಕರನ್ನೂ ನಾಚಿಸುವಂತಿತ್ತು! ಅವರನ್ನು ಕಂಡು ನಮಗೆ ನಿಜವಾಗಿಯೂ ಬಹಳ ಖುಶಿಯಾಯ್ತು. ಬರುವ ಚಾರಣಿಗರಿಗೆ ಅವರು ಪ್ರೋತ್ಸಾಹಿಸುತ್ತಿದ್ದ ಪರಿ ನಿಜಕ್ಕೂ ಸಂತಸವನ್ನುಂಟು ಮಾಡಿತು. ನನ್ನವರು ನಮ್ಮೊಂದಿಗೆ ಸ್ವಲ್ಪ ದೂರ ಬಂದವರು, “ಇನ್ನು ಮುಂದಕ್ಕೆ ಬರಲಾರೆ!” ಎಂದು ಒಂದೆಡೆ ಕುಳಿತುಬಿಟ್ಟರು…ಇಳಿದರೆ ಅಷ್ಟೇ ಏರಲಿದೆಯೆಂಬ ಭಯದಿಂದ! ಉಳಿದ ನಾವೆಲ್ಲರೂ ಸುಮಾರು ಎರಡು ಮೈಲಿಗಳಷ್ಟು ದೂರ ನಡೆದು, ಅಲ್ಲೇ ಒಂದು ಸಣ್ಣ ತಿರುವಿನಲ್ಲಿ; ಕೆಳಗಡೆಯ ಸುಂದರ ದೃಶ್ಯವನ್ನೊಳಗೊಂಡ ಫೊಟೋವೊಂದನ್ನು ಕ್ಯಾಮರಾದೊಳಗೆ ಇಳಿಸಿದೆವು!. ಅಲ್ಲಿಂದ ನಮ್ಮ ಪಯಣ ಹಿಂದಕ್ಕೆ, ಅಂದರೆ ಏರಲು ಪ್ರಾರಂಭವಾಯಿತು. ನಾಲ್ಕು ಹೆಜ್ಜೆ ಇಡುವುದರೊಳಗೆ.. ಅಬ್ಬಾ.. ತಗೊಳ್ಳಿ.. ಶ್ವಾಸಕ್ಕೆ ಉಸಿರೇ ಸಾಕಾಗ್ತಾ ಇಲ್ವಲ್ಲಾ..! ನನಗಂತೂ, ನನ್ನವರು ನಮ್ಮಿಂದ ತುಂಬಾ ಮುಂದೆಯೇ ಕುಳಿತುಬಿಟ್ಟುದು ಬಹಳ ಒಳ್ಳೇದಾಯ್ತು ಅನಿಸಿದ್ದು ಸುಳ್ಳಲ್ಲ… ಜೊತೆಗೇ ಅವರು ಆವಾಗಲೇ ಆಯಾಸ ಪರಿಹರಿಸಿಕೊಂಡುದರಿಂದ ಆರಾಮವಾಗಿ ಬೇಗನೆ ಮೇಲೇರಿ ತಲಪಿಬಿಟ್ಟುದು ಕಂಡು ನಮ್ಮ ಹೊಟ್ಟೆ ಸ್ವಲ್ಪ ಉರಿದದ್ದೂ ಹೌದು! ನಾವಂತೂ ಹಿಂದಿನಿಂದ ಆಮೆಗಿಂತಲೂ ಮೆಲ್ಲನೆ.. ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ..ನಾಲ್ಕು ಹೆಜ್ಜೆಗೊಮ್ಮೆ ಸುಧಾರಿಸಿಕೊಂಡು ಮೇಲೇರುವುದು ಕಂಡು ಮೇಲಿನಿಂದ ನಕ್ಕಿರಬಹುದು ಅಲ್ಲವೇ? ಕೈಯಲ್ಲಿದ್ದ ನೀರು ಎಲ್ಲಿಗೂ ಸಾಲದಾಯಿತು. ಐದು ವರ್ಷದ ಮೊಮ್ಮಗಳು ನನಗಿಂತ ಚೆನ್ನಾಗಿ ನಡೆಯುತ್ತಿದ್ದರೂ ಆಗಾಗ ಚಾಕಲೇಟ್ ನ ಲಂಚ ಬೇಕಾಗುತ್ತಿತ್ತು. ಅಳಿಯ, ತನ್ನ ಪುಟ್ಟ ಮಗುವಿನೊಂದಿಗೆ ಈ ಮೊದಲೇ ಮೇಲೇರಿಯಾಗಿತ್ತು. ನನಗಂತೂ ಮೇಲಕ್ಕೇರುವಾಗ, ಪ್ರಕೃತಿ ಸೌಂದರ್ಯದ ಆಸ್ವಾದನೆ ಬಿಡಿ…ಒಮ್ಮೆ ಮೇಲಕ್ಕೆ ತಲಪಿದರೆ ಸಾಕೆನಿಬಿಟ್ಟಿತ್ತು! ಆಂತೂ ಇಂತೂ ಏದುಸಿರು ಬಿಡುತ್ತಾ ಮೇಲಕ್ಕೆ ಬಂದು ನಿಂತಾಗ; ಅಬ್ಬಾ… ಪರ್ವತಾರೋಹಣ ಮಾಡಿ ಬಂದಂತಹ ಅನುಭವ(ತೇನ್ ಸಿಂಗ್ ಅವರನ್ನು ಕೇಳಬೇಕಷ್ಟೆ?!)ವಾದರೂ ಏನೋ ಸಾಧಿಸಿದ ಹೆಮ್ಮೆ! ಅಲ್ಲೇ ಪಕ್ಕದಲ್ಲಿದ್ದ ಸೂಚನಾ ಫಲಕದ ಬಳಿ ನಿಂತು ಸವಿನೆನಪಿಗಾಗಿ ಚಿತ್ರವೊಂದನ್ನು ಕ್ಲಿಕ್ಕಿಸಲಾಯಿತು. ಅಲ್ಲಿಂದ ಮುಂದೆ, ಹಿಂದಿನ ದಿನ ನೋಡಲಾಗದಿದ್ದ ವೀಕ್ಷಣಾ ಕಟ್ಟಡಕ್ಕೇರಿ ಅದರೊಳಗಿರಿಸಿದ್ದ ದೂರದರ್ಶಕದಲ್ಲಿ ಕಣಿವೆಯ ಅದ್ಭುತ ವಿಹಂಗಮನೋಟವನ್ನು ಮನದಣಿಯೆ ನೋಡಿದೆವು.
ಅದಾಗಲೇ ಮಧ್ಯಾಹ್ನ ಗಂಟೆ 12 ಆಗಿತ್ತು…ಜೊತೆಗೇ, ಚುರುಗುಟ್ಟುವ ಬಿಸಿಲಿನೊಂದಿಗೆ ಚಳಿಗಾಳಿ ಬೀಸುತ್ತಿತ್ತು. ಅಲ್ಲಿಯ ಇಟಾಲಿಯನ್ ಹೋಟೇಲೊಂದರಲ್ಲಿ ಊಟ ಮುಗಿಸಿದ ಬಳಿಕ; ವಿಶೇಷವಾಗಿ ಬೇರೇನೂ ನೋಡಲು ಇರದುದರಿಂದ, ಅಲ್ಲೇ ಪಕ್ಕದಲ್ಲಿರುವ ರೈಲು ನಿಲ್ದಾಣಕ್ಕೆ ಭೇಟಿ ಕೊಟ್ಟೆವು. ಎಲ್ಲೆಲ್ಲೂ ಕಂಡುಬರುವ ಸ್ವಚ್ಚತೆಯು ಇಲ್ಲಿಯೂ ಮನಸ್ಸನ್ನು ಮುದಗೊಳಿಸಿದರೂ, ನಮ್ಮೂರಲ್ಲಿ ಸ್ವಚ್ಚತಾಪಾಲನೆಯು ಬರೇ ಭಾಷಣಗಳಲ್ಲಿ ಮತ್ತು ಪೇಪರುಗಳಲ್ಲಿ ಮಾತ್ರ ಕಂಡುಬರುವುದರ ಬಗ್ಗೆ ನೆನೆದು ಮನ ಭಾರವಾದುದು ಸತ್ಯ… ಯಾವಾಗಿನಂತೆ, ನಮ್ಮಲ್ಲಿಯೂ ಈ ತೆರನ ಕಾನೂನುಪಾಲನೆಯ ಕನಸು ಯಾವಾಗ ನೆನಸಾಗಬಹುದೆಂಬ ಯೋಚನೆಯು ತಲೆ ತಿನ್ನಹತ್ತಿತು! ಇಳಿಹಗಲು ಮೂರುಗಂಟೆಯ ವರೆಗೆ ಸುತ್ತಾಡುತ್ತಿರುವಾಗಲೇ ಮಗಳಿಗೆ ಥಟ್ಟನೆ ಒಂದು ಯೋಚನೆ ಹೊಳೆಯಿತು. ನಮ್ಮ ಯೋಜನೆಯಂತೆ, ಆ ದಿನ ಅಲ್ಲಿದ್ದು ಮರುದಿನ ಬೆಳಗ್ಗೆ ಮುಂದಕ್ಕೆ ಪ್ರಯಾಣ ಹೊರಡುವುದಿತ್ತು…ಅದರಂತೆಯೇ ಕೋಣೆಗಳನ್ನೂ ಕಾದಿರಿಸಲಾಗಿತ್ತು. ತಕ್ಷಣದಲ್ಲಿಯೇ ಹೊರಟರೆ, ಮುಂದಿನ ತಾಣಕ್ಕೆ ಮಧ್ಯರಾತ್ರಿಯೊಳಗೆ ತಲಪಬಹುದಿತ್ತು…ಹಾಗೆಯೇ ಸಮಯದ ಉಳಿತಾಯವೂ ಆಗುತ್ತಿತ್ತು. ಈ ಯೋಚನೆಯೊಂದಿಗೆ; ಇಲ್ಲಿ ಹೋಟೇಲ್ ಕಾದಿರಿಸಲು ಕೊಟ್ಟ ಹಣವನ್ನು ವಾಪಾಸು ಮಾಡುವ ಬಗ್ಗೆಯೂ ಸಂಶಯವಿತ್ತು. ಆದುದಾಗಲಿ.. ಪ್ರಯತ್ನಿಸೋಣವೆಂದುಕೊಂಡು ಅಳಿಯ ಹೋಟೇಲ್ ಮೆನೇಜರನ್ನು ಭೇಟಿಯಾಗಿ ವಿಷಯ ತಿಳಿಸಿದನು. ಅವರು ಆ ದಿನದ ಹಣವನ್ನು ಹಿಂತಿರುಗಿಸುವ ಭರವಸೆಯನ್ನಿತ್ತಾಗ ನೆಮ್ಮದಿಯಾಯಿತು. ಬಹಳ ತರಾತುರಿಯಿಂದ ಸಾಮಾನುಗಳನ್ನು ಜೋಡಿಸಿಕೊಂಡು ಹೊರಟಾಗ ಅದಾಗಲೇ ಸಂಜೆ ಗಂಟೆ 5. ಅಲ್ಲಿಂದ ಸುಮಾರು ಆರು ಗಂಟೆ ದೂರದ ಪ್ರಯಾಣವಿರುವ ನಮ್ಮ ಮುಂದಿನ ತಾಣಕ್ಕೆ ಆದಷ್ಟು ಬೇಗನೆ ತಲಪುವ ಹುಮ್ಮಸ್ಸಿನೊಂದಿಗೆ ನಮ್ಮ ವಾಹನವು ಮುಂದಕ್ಕೆ ಚಲಿಸಿತು…
(ಮುಂದುವರಿಯುವುದು……)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=36235
–ಶಂಕರಿ ಶರ್ಮ, ಪುತ್ತೂರು.
ಎಂದಿನಂತೆ.. ಅಮೆರಿಕ.. ಪ್ರವಾಸ ..ಕಥನ…ಮುದಕೊಟ್ಟಿತು.
ಶಂಕರಿ ಮೇಡಂ.. ಧನ್ಯವಾದಗಳು.
ಧನ್ಯವಾದಗಳು ನಾಗರತ್ನ ಮೇಡಂ.
Very nice
ಧನ್ಯವಾದಗಳು
ಅಮೆರಿಕಾ ಪ್ರವಾಸ ದ ಅನುಭವ ತಿಳಿ ಹಾಸ್ಯ ಲೇಪನ ದಿಂದ ಬಹಳ ಚೆನ್ನಾಗಿ ಮೂಡಿ ಬರುತ್ತಾ ಇದೆ.
ಧನ್ಯವಾದಗಳು ಅಕ್ಕ.
ಅವಿಸ್ಮರಣೀಯ ಅಮೆರಿಕ ಎಳೆಗಳು ಅವಿಸ್ಮರಣೀಯ ಲೇಖನ ಮಾಲೆಯೇ!