ಅವಿಸ್ಮರಣೀಯ ಅಮೆರಿಕ-ಎಳೆ 41

Share Button

ವೇಗದ ಹಾದಿಯಲ್ಲಿ ವೇಗಸ್ ಗೆ….
ನಮ್ಮ ಪ್ರಯಾಣವು ಪ್ರಾರಂಭವಾಗುತ್ತಿದ್ದಂತೆಯೇ, ಮತ್ತೊಂದು ತೊಂದರೆ ಎದುರಾಗಿತ್ತು. ನಮ್ಮ ಯೋಜನೆಯಂತೆ ನಾವು ಮರುದಿನ ಬೆಳಗ್ಗೆ ಹೊರಡುವುದಿತ್ತು…ಅಂತೆಯೇ ಅಲ್ಲಿಯ ನಮ್ಮ ವಸತಿಯೂ ಮರುದಿನಕ್ಕಾಗಿ ಕಾದಿರಿಸಲಾಗಿತ್ತು. ಆದರೆ ಈ ರಾತ್ರಿ ಅಲ್ಲಿಗೆ ತಲಪಿದರೆ ಅಲ್ಲಿ ಉಳಕೊಳ್ಳಲು ವ್ಯವಸ್ಥೆಗಾಗಿ ವಸತಿಯನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದರ ಬಗ್ಗೆ ಚರ್ಚಿಸಿ, ನಮ್ಮ ಬಂಧುಗಳಲ್ಲೊಬ್ಬರನ್ನು ಸಂಪರ್ಕಿಸಿ, ಒಂದು ತಾಸಿನ ಸತತ ಪ್ರಯತ್ನದಿಂದ ಅವರ ಮೂಲಕ ವಸತಿಯನ್ನು ಕಾದಿರಿಸಲಾಯಿತು. ಅಮೆರಿಕದಲ್ಲಿ ಎಲ್ಲ ಸುವ್ಯವಸ್ಥೆಗಳೊಂದಿಗೆ, ಎಂತಹ ಕಾಡು ಅಥವಾ ಮರುಭೂಮಿಯಂತಹ ನಿರ್ಜನ ಪ್ರದೇಶಗಳಲ್ಲೂ ನಿರಂತರ, ಅತ್ಯಂತ ವೇಗದ ಅಂತರ್ಜಾಲ ಸಂಪರ್ಕದ ಒದಗುವಿಕೆಯು  ಬಹಳ ಆಶ್ಚರ್ಯವನ್ನುಂಟು ಮಾಡುತ್ತದೆ! ಉಪಗ್ರಹದ ಮೂಲಕ ಪಡೆಯುವ ಈ ಸೇವೆಯು ಅತ್ಯಂತ ಉಪಯುಕ್ತವೂ ಹೌದು. ಆದರೆ ನಮ್ಮಲ್ಲಿ ಅತ್ಯಂತ ಜನದಟ್ಟಣೆ ಪ್ರದೇಶದಲ್ಲೂ ಕೆಲವೊಮ್ಮೆ ಅಂತರ್ಜಾಲ ಸೇವೆಯು ಕೈಕೊಡುವುದು ಮಾಮೂಲು ಅಲ್ಲವೇ?  ನಮ್ಮ ಈ ಪ್ರಯಾಣದಲ್ಲಿ ರಾತ್ರಿಯೂಟಕ್ಕೆ ನೆರವಾದುದು MTR ಮಹಾಶಯರ ತಿಂಡಿ ಪೊಟ್ಟಣಗಳು. ಅಳಿಯನಿಗೆ ಕಣಿವೆಯಲ್ಲಿ ಏರಿಳಿದು ಆಯಾಸವಾಗಿದ್ದರಿಂದ ಹಾಗೂ ವಿಶ್ರಾಂತಿ ಇಲ್ಲದೆ ವಾಹನ ಚಾಲನೆ ಮಾಡಬೇಕಾಗಿ ಬಂದುದರಿಂದ, ಅಲ್ಲಲ್ಲಿ Star Bucks ಗಳಲ್ಲಿ ಕಾಫಿ, ಟೀ ಗಳ ಅವ್ಯಾಹತ ಸೇವನೆ ನಡೆದಿತ್ತು…ಸದಾ ಎಚ್ಚರವಾಗಿರಲು! ಮಧ್ಯೆ ಮಧ್ಯೆ ಮಗಳು ವಾಹನ ಚಾಲನೆಗೆ ಸಾಥ್ ಕೊಡುತ್ತಿದ್ದುದರಿಂದ, ಆಗಾಗ ಮಗುವಿನ ಜವಾಬ್ದಾರಿ ನಮ್ಮ ಮೇಲಿರುತ್ತಿತ್ತು.

ಹೀಗೇ ಸಾಗುತ್ತಿದ್ದಂತೆಯೇ, ಕತ್ತಾಲಾಗುತ್ತಾ ಬಂತು… ಹೊರ ಜಗತ್ತನ್ನು ಪೂರ್ತಿ ನಿಶಾರಾಣಿ ಆವರಿಸಿದ್ದಳು. ಬಿಕೋ ಎಂದು ಉದ್ದುದ್ದ ಹಾಸಿ ಹೊದ್ದು ಮಲಗಿದ ರಸ್ತೆಯಲ್ಲಿ ಅತ್ಯಂತ ವಿರಳವಾಗಿ ಓಡಾಡುವ ವಾಹನಗಳ ಹಾಗೂ ಬೀದಿ ದೀಪಗಳ ಬೆಳಕು ಮಾತ್ರ ನಮ್ಮ ಸಂಗಾತಿಯಾಗಿದ್ದವು.  ರಾತ್ರಿ ಸುಮಾರು ಒಂಬತ್ತು ಗಂಟೆಯ ಸಮಯ…ನಮ್ಮ ಪುಟ್ಟ ಕಂದನು ಏನೋ ಕಾರಣದಿಂದ ಅಳಲಾರಂಭಿಸಿದ. ನಾಲ್ಕು ತಿಂಗಳ ಹಸುಗೂಸನ್ನು; ಮಕ್ಕಳಿಗಾಗಿಯೇ ಪ್ರತ್ಯೇಕವಾಗಿರುವ ಸೀಟಿನಲ್ಲಿ ಬೆಲ್ಟ್ ಬಿಗಿದು ಹಿಮ್ಮುಖವಾಗಿ ಕುಳ್ಳಿರಿಸಿ, ಆ ಸೀಟನ್ನು ಕಾರಿನ ಸೀಟಿಗೆ ಬಲವಾಗಿ ಸಿಕ್ಕಿಸಲಾಗಿತ್ತು. ಅತ್ಯಂತ ವೇಗದಿಂದ ಚಲಿಸುವ ವಾಹನದಲ್ಲಿ ತಕ್ಷಣ ಬ್ರೇಕ್ ಹಾಕಬೇಕಾಗಿ ಬಂದಾಗ,  ಮಗುವಿಗೆ  ಅಪಾಯವಾಗದಿರಲಿ ಎಂದು ಈ ವ್ಯವಸ್ಥೆಯಿದೆ. ಅಲ್ಲದೆ, ವಾಹನದಲ್ಲಿರುವ ಪ್ರತಿಯೊಬ್ಬರೂ ಬೆಲ್ಟ್ ಬಿಗಿದೆ ಕೂರಬೇಕು, ಕಡ್ಡಾಯವಾಗಿ. ವಾಹನ ಚಲಿಸುತ್ತಿರುವಾಗ ಯಾವುದೇ ಕಾರಣಕ್ಕೂ ಮಗುವನ್ನು ಅಲ್ಲಿಂದ ತೆಗೆಯುವಂತಿಲ್ಲ. ಅಲ್ಲದೆ, ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತೆಯೂ ಇಲ್ಲ. ಅದಕ್ಕಾಗಿಯೇ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕಾಗುತ್ತದೆ. ನಮಗೆ ಈ ಸಮಯದಲ್ಲಿ, ಇದುವೇ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಸುಳ್ಳಲ್ಲ. ಕೂತಲ್ಲಿಂದಲೇ, ಗಂಟಲು ಬಿರಿಯುವಂತೆ, ಸರದಿ ಪ್ರಕಾರ ನಮ್ಮ ಹಾಡುಗಳ ಉಪಚಾರವೂ ನಡೆಯಿತು. ಆಗಾಗ ಕಾರನ್ನು ನಿಲ್ಲಿಸಿ ಸಮಾಧಾನ ಪಡಿಸುವುದು.. ಅದು ಚಲಿಸಿದಾಗ ಅವನ ಅಳು ಪುನ: ಪ್ರಾರಂಭ! ಹೀಗೇ ಹಲವಾರು ಬಾರಿ ನಮ್ಮ ವಿವಿಧ ಪ್ರಯೋಗಗಳು ನಡೆದರೂ ಮಗುವಿನ ಮೇಲೆ ಪರಿಣಾಮವೇನೂ ಬೀರಿದಂತೆ ಕಾಣಲಿಲ್ಲ! ಮಧ್ಯರಾತ್ರಿ ಮೊದಲು ತಲಪಬೇಕಾದ್ದರಿಂದ ಬಹಳ ಆತಂಕವೂ ಆಗುತ್ತಿತ್ತು. ಅಂತೂ ಒಂದು ಹಂತದಲ್ಲಿ ಅವನೇ ಆಯಾಸದಿಂದ ನಿದ್ರಿಸಿದ. ಅಬ್ಬಾ.. ಪ್ರಯಾಣದ ಸಮಯದಲ್ಲಿ ಮಗುವನ್ನು ಮಡಿಲಲ್ಲಿಟ್ಟು ಸಮಾಧಾನ ಪಡಿಸುವ ಅನುಕೂಲತೆ ಇರುವ ನಮ್ಮ ದೇಶ ಎಷ್ಟೋ ವಾಸಿಯೆಂದು ಮನ:ಪೂರ್ತಿ ನಾನಂದುಕೊಂಡೆ!

ಸುಮಾರು ರಾತ್ರಿ ಹತ್ತು ಗಂಟೆ ಕಳೆದಿತ್ತು.  ಮಗಳು ನನ್ನ ಬಳಿ, “ಅಲ್ನೋಡು, ಹೇಗಿದೆ?…ವೇಗಸ್ ಬಂತು !” ಎಂದು ಬಹು ದೂರದಲ್ಲಿ ಝಗಝಗಿಸುತ್ತಿರುವ ಬೆಳಕಿನ ಕಡಲನ್ನು ತೋರಿಸಿದಳು. ಹೌದು…ಕಣ್ಣು ಬಾಯಿ ಬಿಟ್ಟು ನೋಡಿದೆ…ಆಹಾ.. ನೂರಾರು ಬಣ್ಣಗಳ ಬೆಳಕಿನ ಪುಂಜವೊಂದು ಭೂಮಿಗೆ ಇಳಿದು ತನ್ನ ಮಾಯಾದಂಡದಿಂದ, ಸಹಸ್ರಾರು ತಾರೆಗಳಿಂದ ಅಲಂಕೃತವಾದ ಬೃಹತ್ ವಸನವನ್ನು ಹೊದಿಸಿದಂತಿದೆ! ನಮ್ಮ ವಾಹನವು ಮುಂದೋಡಿದಂತೆ ಅದು ನಮ್ಮ ಬಳಿಸಾರಿ ಬರುವುದನ್ನು ನೋಡುತ್ತಾ ಮೈಮರೆತೆ!

ಸರಿಯಾದ ವಿಳಾಸವಿರುವ, ಪ್ರಪಂಚದ ಯಾವ ಮೂಲೆಯ ಸ್ಥಳಕ್ಕಾದರೂ ಹೋಗಬಹುದಾದಂತಹ ವ್ಯವಸ್ಥೆಗಾಗಿ ವಾಹನದ GPS(Global positioning System) ನಲ್ಲಿ ವಿಳಾಸವನ್ನು ನಮೂದಿಸಿ ಬಿಟ್ಟರೆ ಸಾಕು…ಕೊಂಚವೂ ತಪ್ಪದೆ ನಮ್ಮನ್ನು ಅದೇ ಸ್ಥಳಕ್ಕೆ ತಲಪಿಸುವುದು. ಹಾಗೆಯೇ ನಮ್ಮ ವಾಹನವು, ನಮ್ಮ ಬಂಧುಗಳು ಕಾದಿರಿಸಿದ ವಸತಿಗೃಹ Hotel Rivearaದ ಮುಂದೆ ಬಂದು ನಿಂತಾಗ ರಾತ್ರಿ ಗಂಟೆ 10:30. ಮರುದಿನ ಮಧ್ಯಾಹ್ನ ಮೂರು ಗಂಟೆಯ ವರೆಗೆ ಅಲ್ಲಿ ನಾವಿದ್ದು ಆ ಬಳಿಕ ನಾವು ಮೊದಲೇ ಕಾದಿರಿಸಿದ್ದ ಹೋಟೆಲಿಗೆ ಸ್ಥಳಾಂತರಿಸಬೇಕಿತ್ತು.

ನಾವು ತಲಪಿದ ಈ ಲಾಸ್ ವೇಗಸ್(Las Vegas) ಎಂಬುದು, ಅಮೆರಿಕದಲ್ಲಿ ಅತೀ ಹೆಚ್ಚು ಜನಸಂಖ್ಯೆಯಲ್ಲಿ,  26ನೇ ಸ್ಥಾನದಲ್ಲಿರುವ, ನೆವಾಡ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ ಮತ್ತು ಕ್ಲಾರ್ಕ್ ಪ್ರಾಂತ್ಯದ ಕೇಂದ್ರಸ್ಥಾನವಾಗಿದೆ. ಜಾಗತಿಕ ಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿರುವ ಈ ಮನರಂಜನಾ ತಾಣವು ಸುಮಾರು 110 ಎಕರೆಗಳಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ. ಇದು ಮೂಲತ: ಮರಳು ಕಲ್ಲುಗಳಿಂದ ಕೂಡಿದ ಮಹಾವೆ(Majave)ಮರುಭೂಮಿಯಾಗಿದ್ದು; ಇದನ್ನು ಸುತ್ತುವರೆದಿರುವ ಸುಮಾರು 10,000 ಅಡಿಗಳಿಗಿಂತಲೂ ಎತ್ತರದ ಬೃಹತ್ ಬೆಟ್ಟಗಳ ಸಾಲುಗಳು ಹೊರಗಡೆಯಿಂದ ಬರುವ ತೇವಾಂಶವನ್ನು ತಡೆದು, ಇಲ್ಲಿಯ ವಾತಾವರಣವನ್ನು ಸದಾಕಾಲ ಉಲ್ಲಾಸ ಭರಿತವಾಗಿರಿಸುತ್ತದೆ. ಇಲ್ಲಿಯ ಜನಸಂಖ್ಯೆ ಸುಮಾರು 6,50, 000 ದಷ್ಟಿದ್ದು; ಈ ಪಟ್ಟಣದ ವಿಸ್ತೀರ್ಣ 352 ಚ. ಕಿ.ಮೀಗಳಷ್ಟಿದೆ. ಉತ್ತರ ಅಮೆರಿಕದ ಈ ಕಣಿವೆಯಂತಹ ಪ್ರದೇಶವು 1905ರಲ್ಲಿ ಗುರುತಿಸಲ್ಪಟ್ಟರೂ,1911 ರಲ್ಲಷ್ಟೇ ಈ ನಗರವು ನಿರ್ಮಾಣಗೊಂಡು ಪ್ರಸಿದ್ಧಿ ಹೊಂದಿತು. ಈ ಪ್ರದೇಶದಲ್ಲಿ ವರ್ಷವಿಡೀ ಸೂರ್ಯನ ಬೆಳಕು ಅತೀ ದೀರ್ಘಕಾಲವಿದ್ದು; ಜೂನ್ ನಿಂದ ಸೆಪ್ಟೆಂಬರ್ ವರೆಗೆ   ಸೆಕೆಗಾಲವಾಗಿರುತ್ತದೆ. ಜುಲೈ ತಿಂಗಳಲ್ಲಿ ಸಾಮಾನ್ಯ ಉಷ್ಣತೆಯು 40°c ಗಿಂತಲೂ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಉಷ್ಣತೆಯು ರಾತ್ರಿ ವೇಳೆಯಲ್ಲಿ, 4°c ಗಿಂತಲೂ ಕಡಿಮೆಯಾಗುವುದು. ನಗರದ 90% ಪ್ರದೇಶಕ್ಕೆ ಮೀಡ್ ಸರೋವರ(Lake Mead)ದ ನೀರು ಬಳಕೆಯಾಗುವುದು. ಕೊಲೊರಾಡೊ ನದಿಯ ನೀರು ಈ ಸರೋವರದ ನೀರಿನ ಮೂಲ ಸೆಲೆಯಾಗಿದೆ. ಉಳಿದಂತೆ, ಅರಿಜೋನಾ ಮತ್ತು ನೆವಾಡ ರಾಜ್ಯಗಳ ಮಧ್ಯೆ ಇರುವ ಕಪ್ಪು ಕಣಿವೆಯಲ್ಲಿ ನಿರ್ಮಿಸಿರುವ ಜಗತ್ಪಸಿದ್ಧ ಹೂವರ್ ಅಣೆಕಟ್ಟಿನಿಂದ(Hoover Dam)  ನೀರು ಸರಬರಾಜಾಗುತ್ತದೆ. ಈ ಅಣೆಕಟ್ಟು, ಅಮೆರಿಕದ ಮೂರ್ನಾಲ್ಕು ಬಹು ದೊಡ್ಡ ರಾಜ್ಯಗಳಿಗೆ ನೀರುಣಿಸುವುದರ ಜೊತೆಗೆ ವಿದ್ಯುತ್ ಸರಬರಾಜು ಮಾಡುವಂತಹ ಹೆಗ್ಗಳಿಕೆಯನ್ನು ಹೊಂದಿದೆ. (ನಮ್ಮ ಪಯಣದ ಹಾದಿಯಲ್ಲೇ ಈ ಅಣೆಕಟ್ಟು ಬರುವುದರಿಂದ ಅದನ್ನು ನೋಡುವ ಯೋಜನೆ ಇತ್ತು. ಆದರೆ ರಾತ್ರಿಯ ಸಮಯವಾದುದರಿಂದ ಆ ಅವಕಾಶವು ಕೈತಪ್ಪಿ ಹೋದುದು ನನಗೆ ನಿಜಕ್ಕೂ ನಿರಾಶೆಯನ್ನುಂಟು ಮಾಡಿತು.)

ಈ ಎಲ್ಲಾ ಭೌಗೋಳಿಕ ಲಕ್ಷಣಗಳೊಂದಿಗೆ, ಈ ಪಟ್ಟಣವು ಅತ್ಯಂತ ಶ್ರೀಮಂತವಾಗಿದೆ…ಯಾಕೆ ಗೊತ್ತೇ?..ಇಡೀ ಜಗತ್ತಿನಲ್ಲಿಯೇ ಅತ್ಯಂತ ವೈಭವೋಪೇತ ಜೂಜಾಟದ ಕೇಂದ್ರ ಎನ್ನುವ ಖ್ಯಾತಿ(ಕುಖ್ಯಾತಿ?) ಇದರದು. ಸಾಮಾನ್ಯ ಜೀವನ ಪದ್ಧತಿಯಲ್ಲಿ ಯಾವುದೆಲ್ಲಾ ನಿಷಿದ್ಧವೆನಿಸಿವೆಯೋ ಅವುಗಳೆಲ್ಲಾ ಇಲ್ಲಿ ಕಾನೂನು ಪ್ರಕಾರ ಬಳಕೆಯಲ್ಲಿವೆ! ಅತ್ಯಂತ ಉನ್ನತಮಟ್ಟದ, ವಿವಿಧ ರೀತಿಗಳ ಜೂಜಾಟ, ವೇಶ್ಯಾವಾಟಿಕೆಗಳಂತಹ ಅನೈತಿಕ ಕಾರ್ಯಗಳು ರಾತ್ರಿ ಹಗಲೆನ್ನದೆ ದಿನದ 24 ಗಂಟೆಗಳೂ ನಡೆಯುತ್ತಿರುತ್ತವೆ. ಇಂತಹ ಕಾರ್ಯಗಳಿಗಾಗಿಯೇ ರೂಪುಗೊಂಡ ಈ ವಿಶೇಷ ರೀತಿಯ ಬೃಹತ್ ಪಟ್ಟಣಕ್ಕೆ ಪ್ರಪಂಚದಾದ್ಯಂತ ಇರುವ ಕೋಟ್ಯಧೀಶ್ವರರು  ಬಂದು ದುಡ್ಡು ಗಳಿಸಿಯೋ ಅಥವಾ ಕಳಕೊಂಡೋ ಹೋಗುವುದು ಮಾಮೂಲು. ಕಳೆದ ಬಾರಿ ನನ್ನ ಅಮೆರಿಕ ಭೇಟಿಯ ಸಮಯದಲ್ಲಿ ಈ ವೇಗಸ್ ಗೆ ಬರುವ ಬಗ್ಗೆ ಹೇಳಿದಾಗ ನಾನು ಒಪ್ಪಿರಲಿಲ್ಲ..ಅಂತಹ ಕೆಟ್ಟದಾದ ಜಾಗದಲ್ಲಿ ನೋಡುವುದು ಏನಿರುತ್ತದೆ ಎನ್ನುತ್ತಾ ನಿರಾಕರಿಸಿದ್ದೆ. ಆದರೆ ಈ ಸಲ ಮಕ್ಕಳು ನನ್ನ ಮನವೊಲಿಸುವುದರಲ್ಲಿ ಸಫಲರಾದರೂ; ಇಲ್ಲಿ ನನ್ನ ಮನಸ್ಥಿತಿ ಹೇಗಿರುವುದೋ ಎಂದು ನನ್ನ ಬಗ್ಗೆ ನನಗೇ ಆತಂಕವೆನಿಸಿದ್ದು ಸುಳ್ಳಲ್ಲ!

ನಾವಿಳಿದುಕೊಂಡ ವಸತಿಗೃಹದಲ್ಲಿದ್ದ ಬಹಳ ವಿಶಾಲವಾದ ಕೋಣೆಗಳು ಸಕಲ ಸವಲತ್ತುಗಳನ್ನೂ ಒಳಗೊಂಡಿದ್ದವು. ಅನತಿ ದೂರದಲ್ಲಿ, “Circus Circus” ಎಂಬ ಫಲಕದೊಂದಿಗೆ ದೊಡ್ಡ ಕಟ್ಟಡವೊಂದು ಪೂರ್ತಿಯಾಗಿ  ಕಣ್ಣು ಕೋರೈಸುವಂತೆ ಹೊಳೆಯುತ್ತಿತ್ತು…ಅದು ಅಲ್ಲಿಯ ಮೋಜು ಮಂದಿರ(Casino)ಗಳಲ್ಲಿ ಒಂದಾಗಿದ್ದು, ಮಾರನೇ ದಿನ ಅಲ್ಲಿಗೆ ಭೇಟಿ ಕೊಡುವವರಿದ್ದೆವು. ಅದು ಬಹಳ ಚೆನ್ನಾಗಿದೆ ಎಂದು ಮಗಳು  ನನ್ನನ್ನು ಹುರಿದುಂಬಿಸಲು ಪ್ರಯತ್ನಸುತ್ತಿದ್ದುದು ಮೋಜೆನಿಸಿತು. ಬಹಳ ಆಯಾಸವಾಗಿದ್ದರಿಂದ ಸ್ನಾನ ಮುಗಿಸಿ ಮಲಗಿದ ನಾವು ಬಹುಬೇಗನೆ ನಿದ್ರಾಲೋಕಕ್ಕೆ ತೆರಳಿದೆವು…

(ಮುಂದುವರಿಯುವುದು….)

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=36242

–ಶಂಕರಿ ಶರ್ಮ, ಪುತ್ತೂರು.  

2 Responses

  1. ಅಮೆರಿಕದ… ಪ್ರವಾಸ..ಕಥನ… ಚೆನ್ನಾಗಿ ಮೂಡಿಬರುತ್ತಿದೆ….ಧನ್ಯವಾದಗಳು ಶಂಕರಿ ಮೇಡಂ

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: