ಮಹಾವಿಷ್ಣು ಕಿಂಕರರಾದ ಜಯ-ವಿಜಯರು

Share Button

ಯಾವುದೇ ಒಂದು ಕೆಲಸಕ್ಕಾಗಿ ಯಜಮಾನರಿಂದ ನೇಮಿಸಲ್ಪಟ್ಟವನು ಕೆಲಸವನ್ನು ಹೇಗೆ ನಿಯೋಜಿಸಿದ್ದಾರೋ ಅದಕ್ಕೆ ತಕ್ಕಂತೆ ನಿರ್ವಹಿಸಿ ಕರ್ತವ್ಯ ಪರಿಪಾಲನೆ ಮಾಡಬೇಕಾದ್ದು ನಿಜ. ಆದರೂ ಕೆಲವು ವೇಳೆ ಆ ಕಾರ್ಯವನ್ನು ಸಮಯ, ಸಂದರ್ಭ,ವೃತ್ತಿಗಳಿಗನುಗುಣವಾಗಿ ವ್ಯವಹರಿಸಬೇಕಾದ್ದು ಅನಿವಾರ್ಯ ಉದಾ: ಪ್ರಸಿದ್ಧ ದೇವಾಲಯವೊಂದರಲ್ಲಿ ಅಪರೂಪವು ವಿಶೇಷವೂ ಆದ ಕಾರ್ಯಕ್ರಮ ನೆರವೇರಿಸಲು ನಿಶ್ಚಯಿಸಿರುತ್ತಾರೆ. ಅದಕ್ಕಾಗಿ ಊಟ, ಉಪಚಾರ, ಧಾರ್ಮಿಕ, ಸಾಂಸ್ಕೃತಿಕ, ಸಕಲ ಕಾರ್ಯಗಳೂ ಸುಸೂತ್ರವಾಗುವಂತೆ ಅದಕ್ಕದೇ ಕೆಲಸಕ್ಕಾಗಿ ಜನ ನಿಯೋಜಿಸಿರುತ್ತಾರೆ. ಗಣ್ಯಾತಿಗಣ್ಯರು ಬರುತ್ತಾರೆ. ಜನದಟ್ಟಣೆ ಅಧಿಕವಾದಾಗ ದೇವಾಲಯದ ಒಳಗಿನ ದ್ವಾರದಲ್ಲಿ ಸಾರ್ವಜನಿಕರ ನೂಕುನುಗ್ಗಲು ತಡೆಯಲು ಒಂದೇ ಸಮನೆ ಪ್ರವೇಶಿಸುವವರನ್ನು ದ್ವಾರಪಾಲಕ ತಡೆಯುತ್ತಾನೆ. ಹಾಗೆಂದು ಕಾರ್ಯಕ್ರಮಕ್ಕೆ ವಿಶೇಷವಾಗಿ ಆಮಂತ್ರಿಸಲ್ಪಟ್ಟು ಗಣ್ಯರನ್ನು ತಡೆಯುವ ಹಾಗಿಲ್ಲವಲ್ಲ? ಒಂದು ವೇಳೆ ತಡೆದರೆ ಅವರಿಗೆ ತೇಜೋಭಂಗ ಮಾಡಿದಂತಾಗುತ್ತದೆ. ಹಾಗೆ ಮಾಡಬಾರದು. ಕರ್ತವ್ಯದತ್ತ ವಿವೇಕವೂ ಬೇಕು ಎಂಬುದೇ ಜಯ-ವಿಜಯರ ಕಡೆಯಿಂದ ನಾವು ಕಲಿಯುವ ಪಾಠ. ಒಂದು ವೇಳೆ ಅನುಚಿತವಾಗಿ ನಡದಲ್ಲಿ ಅದಕ್ಕೆ ಕ್ಷಮೆ ಕೇಳಬೇಕಾಗುತ್ತದೆ

ಅಥವಾ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಆದು ಭೀಕರವೂ ಭಯಂಕರವೂ ಆದರೂ ಅನಿವಾರ್ಯ ಎಂಬುದು ಜಯ-ವಿಜಯರ ಕತೆ ತಿಳಿಸುತ್ತದೆ.

ಮಹರ್ಷಿ ಕರ್ದಮ  ಹಾಗೂ ಪ್ರಜಾಪತಿ ಪಾರಂಗತರಾಗಿ ಜಿತೇಂದ್ರಿಯರಾಗಿದ್ದರು. ಇವರು ಮಹಾವಿಷ್ಣುವಿನ ಪರಮಭಕ್ತರಾಗಿದ್ದರು, ಇವರ ಭಕ್ತಿ ಪಾರಮ್ಯ ಎಷ್ಟಿತ್ತೆಂದರೆ….ಈ ಸಹೋದರರು ನಿತ್ಯವೂ ವಿಷ್ಣುವಿನ ಪೂಜೆ ಮಾಡುತ್ತಿದ್ದು ಅವರ ಪೂಜೆಯನ್ನು ಪ್ರತ್ಯಕ್ಷರೂಪದಿಂದ ಕಾಣಿಸಿಕೊಂಡು ಮಹಾವಿಷ್ಣು ಸ್ವೀಕರಿಸುತ್ತಿದ್ದನಂತೆ.

ಒಮ್ಮೆ ಮರುತನೆಂಬ ರಾಜನು ಬಲುದೊಡ್ಡ ಯಾಗವೊಂದನ್ನು ಕೈಗೊಂಡು ಅದರ ನಿರ್ವಹಣೆಯನ್ನು ಜಯ-ವಿಜಯರಿಗೇ ಒಪ್ಪಿದನು. ತೇಜಸ್ವಿಗಳೂ ಪರಿಣತರೂ ಆಗಿದ್ದ ಋಷಿಕುಮಾರರು ಯಜ್ಞವನ್ನು ಸಾಂಗವಾಗಿ ನೆರವೇರಿಸಿಕೊಟ್ಟು ರಾಜನ ಪ್ರೀತಿಗೆ ಪಾತ್ರರಾದರು. ಮಹಾರಾಜನು ಆ ಸಹೋದರರಿಗೆ ವಿಪುಲವಾಗಿ ದಕ್ಷಿಣೆಯನ್ನು ನೀಡಿ ಸತ್ಕರಿಸಿದನು, ಮನೆಗೆ ಹಿಂತಿರುಗಿದ ಅಣ್ಣ- ತಮ್ಮಂದಿರು ತಮಗೆ ಸಿಕ್ಕಿದ ದ್ರವ್ಯಗಳನ್ನು ಹಂಚಿಕೊಳ್ಳುವಾಗ ನನಗೆ ಹೆಚ್ಚು, ತನಗೆ ಹೆಚ್ಚು ಎಂದು ಕಾದಾಡಿದರು. ಕಚ್ಚಾಡುತ್ತಾ ಅವರೀರ್ವರೂ ಪರಸ್ಪರ ಶಾಪಕೊಟ್ಟುಕೊಂಡರು. ಅಣ್ಣನಾದ ‘ಜಯ’ ತಮ್ಮನಿಗೆ, ‘ನೀನು ಮೊಸಳೆಯಾಗಿ ಹೋಗು ಎಂದು ಕೋಪದ ಭರದಲ್ಲಿ ನುಡಿದರೆ ತಮ್ಮನಾದ ವಿಜಯನು ಜಯನಿಗೆ ‘ನೀನು ಆನೆಯಾಗು’ ಎಂದು ಶಾಪವಿತ್ತನು. ಮೊಸಳೆ-ಆನೆಯಾದ ಮೇಲೆ ಅವರೀರ್ವರಿಗೂ ಪಶ್ಚಾತ್ತಾಪವಾಯಿತು. ‘ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡಬಾರದು‘ ಎಂದು ಹೇಳುವುದು ಇದಕ್ಕೆ, ದುಡುಕಿದ ಇಬ್ಬರೂ ಮಹಾವಿಷ್ಣುವನ್ನು ಪೂಜಿಸಿದ ಪರಿಣಾಮವಾಗಿ ಮಹಾವಿಷ್ಣು ಪ್ರತ್ಯಕ್ಷನಾಗಿ ನಿಮ್ಮ ಶಾಪದ ಫಲ ನೀವು ಅನುಭವಿಸಬೇಕು. ಆ ಕರ್ಮಫಲ ಕಳೆದಾಗ ನಾನು ಅನುಗ್ರಹಿಸುತ್ತೇನೆ’ ಎಂದನು.

ಗಂಡಕೀ ನದಿಯ ಪಕ್ಕದ ವನವೊಂದರಲ್ಲಿ ಜಯ ಆನೆಯಾಗಿ ತಿರುಗುತ್ತಿದ್ದರೇ. ಅದೇ ನದಿಯಲ್ಲಿ ವಿಜಯನು ಮೊಸಳೆಯಾದನು. ಅಲ್ಲಿಯೂ ಅವರು ಜಗಳವಾಡುತ್ತಿದ್ದರು. ಒಮ್ಮೆ ಆ ನದಿಗೆ ನೀರು ಕುಡಿಯಲು ಆನೆರೂಪದ ಜಯನು ಬಂದಾಗ ಮೊಸಳೆರೂಪದ ವಿಜಯನು ಆನೆಯ ಕಾಲನ್ನು ಕಚ್ಚಿ ಹಿಡಿದೆಳೆಯಿತು. ಆನೆ ಎಷ್ಟು ಒದ್ದಾಡಿದರೂ ಮೊಸಳೆ ಬಿಡಲಿಲ್ಲ. ಆಗ ಆನೆ ಮಹಾವಿಷ್ಣುವನ್ನು ಅನನ್ಯವಾಗಿ ಸ್ಮರಿಸಿತು. ಆನೆಯ ಮೊರೆ ಕೇಳಿ ಮಹಾವಿಷ್ಣು ಪ್ರತ್ಯಕ್ಷನಾಗಿ ತನ್ನ ಚಕ್ರದಿಂದ ಮೊಸಳೆಯನ್ನು ಸೀಳಿ ಹಾಕಿದನು. ಇಲ್ಲಿ ಇಬ್ಬರಿಗೂ ನಿಜರೂಪ ಮುಂದೆ ಅವರಿಬ್ಬರನ್ನು ಮಹಾವಿಷ್ಣು ವೈಕುಂಠದ ದ್ವಾರಪಾಲಕರನ್ನಾಗಿ ನೇಮಿಸಿದನು.

ಹೀಗಿರುತ್ತಾ ಒಂದು ದಿನ ‘ಸನಕ’, ಸನಂದ ಮೊದಲಾದ ಮುನಿಗಳು ಶ್ರೀಮನ್ನಾರಾಯಣನ ಸಂದರ್ಶನಕ್ಕಾಗಿ ವೈಕುಂಠಕ್ಕೆ ಬಂದರು. ಜಯ- ವಿಜಯರು ದೇವ-ದೇವನ ಸಾನ್ನಿಧ್ಯಕ್ಕೆ ಬಂದವರನ್ನು ಮಹಾಮುನಿಗಳೆಂದು ಅರಿಯದೆ ತಡೆದರು. ಇದರಿಂದ ಮುನಿಗಳು ಸಿಟ್ಟಾಗದೆ ಇರುತ್ತಾರೆಯೇ? ಅವರು ಜಯ-ವಿಜಯರಿಗೆ ರಾಕ್ಷಸರಾಗುವಂತೆ ಶಾಪವಿತ್ತು ತಾವು ದೇವದರ್ಶನಗೈದು ಹೊರಟು ಬಿಟ್ಟರು.

ಅದರಿಂದ ಖತಿಗೊಂಡ ಜಯ-ವಿಜಯರು ಮುನಿಗಳ ಹಿಂದೆಯೇ ಹೋಗಿ ಶಾಪ ಹಿಂತೆಗೆಯುವಂತೆ ವಿನಂತಿಸಿಕೊಂಡರು. ಒಮ್ಮೆ ಕೊಟ್ಟ ಶಾಪವನ್ನು ಹಿಂತೆಗೆಯುವ ಹಾಗಿಲ್ಲ. ಆದರೆ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು’ ಎಂದರು ಋಷಿಗಳು.

ಅದು ಹೇಗೆ ?

ಮಹಾವಿಷ್ಣುವಿನ ಮಿತ್ರರಾಗಿ ಜನ್ಮವೆತ್ತಿದರೆ ಹತ್ತು ಜನ್ಮದಲ್ಲೂ ಶತ್ರುಗಳಾಗಿ ಹುಟ್ಟಿದರೆ ಮೂರು ಜನ್ಮದಲ್ಲೂ ನಿಮ್ಮ ಶಾಪವಿಮೋಚನೆಯಾಗಬಹುದು. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿತ್ತೀರೋ ಅದು ನಿಮಗೆ ಬಿಟ್ಟಿದ್ದು’ ಎಂದರು ಋಷಿವರ್ಯರು ಆಗ ಜಯ-ವಿಜಯರು ‘ಮಹಾವಿಷ್ಣುವಿನ ಶತ್ರುಗಳಾದರೂ ಚಿಂತೆಯಿಲ್ಲ. ಆದಷ್ಟು ಬೇಗ ನಮ್ಮ ಶಾಪ ವಿಮೋಚನೆಯಾಗಿ ಮೊದಲಿನಂತೆ ವಿಷ್ಣುವಿನ ಕಿಂಕರಾಗಬೇಕೆಂಬುದೇ ನಮ್ಮಿಚ್ಛೆ’ ಎಂದಾಗ ಮುನಿಗಳು ತಥಾಸ್ತು ಎಂದರು. ಮೊದಲಿನ ಜನ್ಮದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳಾಗಿ ಹುಟ್ಟಿ ವರಾಹಸ್ವಾಮಿ ಹಾಗೂ ನರಸಿಂಹ ಸ್ವಾಮಿಯಿಂದ

ಹತರಾದರು. ಎರಡನೇ ಜನ್ಮದಲ್ಲಿ ರಾವಣ-ಕುಂಭಕರ್ಣರಾಗಿ ಜನ್ಮವೆತ್ತಿ ಶ್ರೀರಾಮನಿಂದ ವಧಿಸಲ್ಪಟ್ಟರು.

ಮೂರನೆ ಜನ್ಮದಲ್ಲಿ ಶಿಶುಪಾಲ-ದಂತವಕ್ರರಾಗಿ ಹುಟ್ಟಿ ಶ್ರೀ ಕೃಷ್ಣನಿಂದ ಕೊಲ್ಲಲ್ಪಟ್ಟು ಶಾಪವಿಮೋಚನೆ ಹೊಂದಿ ವೈಕುಂಠವನ್ನು ಸೇರಿದರು. ಶತ್ರುವೋ ಮಿತ್ರನೋ ಹೇಗಾದರೂ ತಮ್ಮ ಸ್ವಾಮಿಯನ್ನು ಶೀಘ್ರ ಸೇರಬೇಕೆಂಬುದೇ ಜಯ-ವಿಜಯರ ತವಕ . ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡ ಅವರುಗಳ ಹಿರಿಮೆ ಹಿರಿದಾದುದು. ಇದರಿಂದಾಗಿ ನಮಗೆ ನರಸಿಂಹಾವತಾರ, ರಾಮಾಯಣ, ಶ್ರೀಕೃಷ್ಣಾವತಾರ ಮೊದಲಾದ ಪುರಾಣಗಳು ಲಭಿಸುವಂತಾಯಿತು. ದೇವ-ದೇವನ ಆಪ್ತರಾದರೂ ತಪ್ಪೆಸಗಿದಲ್ಲಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿಯೇ ತೀರಬೇಕು. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಉಂಟಾಗುವ ಲೋಪ-ದೋಷಕ್ಕೆ ತಕ್ಕುದಾದ ದಂಡನೆಯನ್ನು ಸ್ವೀಕರಿಸಿ ತಿದ್ದಿಕೊಳ್ಳುವವನೇ ನಿಜವಾದ ಮಹಾನುಭಾವ ಎಂಬ ತಿರುಳನ್ನು ನಾವಿಲ್ಲಿ ತಿಳಿಯಬಹುದು.

 -ವಿಜಯಾ ಸುಬ್ರಹ್ಮಣ್ಯ ಕುಂಬಳೆ

7 Responses

 1. ನಯನ ಬಜಕೂಡ್ಲು says:

  ಸರಿಯಾಗಿ ಜಯ -ವಿಜಯರ ಕುರಿತಾಗಿ ಇವತ್ತೇ ತಿಳಿದುಕೊಳ್ಳುತ್ತಿರುವುದು, ಚೆನ್ನಾಗಿದೆ

 2. ವಾವ್… ನೀವು..ಬರೆಯುವ..ಪೌರಾಣಿಕ… ಕಥೆಗಳ..ನಿರುಪಣೆ ಸಗಸಾಗಿರುತ್ತದೆ..ವಿಜಯ..ಮೇಡಂ.. ಧನ್ಯವಾದಗಳು.

 3. Anonymous says:

  ಧನ್ಯವಾದಗಳು ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ.

 4. Anonymous says:

  ಈ ದಿನಕ್ಕೆ ಸಮಯೋಚಿತ ಕಥೆ.

 5. ಶಂಕರಿ ಶರ್ಮ says:

  ಜಯ ವಿಜಯರ ಜೀವನದ ಕುರಿತಾಗಿರುವ ಕಥೆಯು ಬಹಳ ಇಷ್ಟವಾಯ್ತು ವಿಜಯಕ್ಕ.

 6. Padma Anand says:

  ಜಯ-ವಿಜಯರ ಕುತೂಹಲ ಭರಿತ ಕಥೆ ಪೌರಾಣಿಕ ಮಾಹಿಯನ್ನೂ ನೀಡಿ ಮುದಗೊಳಿಸಿತು. ಅಭಿನಂದನೆಗಳು ತಮಗೆ.

 7. Anonymous says:

  ಓದಿ ಅಭಿಪ್ರಾಯ ತಿಳಿಸಿದ ಎಲ್ಲರಿಗೂ ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: