ವಿಷಕ್ಕೆ ಪ್ರತಿವಿಷದ ರೂಪ
ಕಾಲ ಎಷ್ಟೇ ಬದಲಾದರೂ, ಜನ ಎಷ್ಟೇ ವಿವೇಚನೆಯುಳ್ಳವರಾದರೂ, ಬುದ್ಧಿವಂತರಾದರೂ, ವಿವೇಕಿಗಳಾದರೂ, ವಿದ್ಯಾವಂತರಾದರೂ ಹಳೆಯ ನಂಬಿಕೆ, ಹಿರಿಯರ ಮಾತುಗಳ ಜೊತೆ ಬದುಕಬೇಕಾಗುತ್ತದೆ.ಕೆಲವು ಮೂಢನಂಬಿಕೆಯಾದರೂ ಸಹಾ ಶೇಕಡ ತೊಂಭತ್ತು ಭಾಗ ನಾವು ಹಳೆಯ ಪದ್ಧತಿಯನ್ನು ಬಿಡುವುದಿಲ್ಲ ಅಲ್ಲವೇ. ವಾಸ್ತವವಾಗಿ ಬಿಡು ಎಂದು ಹೇಳುವವರೇ ನಮಗಿಂತ ಹೆಚ್ಚು ಹೆಚ್ಚು ಅಂತಹ ನಂಬಿಕೆಗಳೊಡನೆ ಬದುಕುತ್ತಾರೆ.
ಅದೇನೇ ಆದರೂ ಅಂತಹ ನಂಬಿಕೆಗಳಿಂದ ಎಲ್ಲರಿಗೂ ಒಳಿತಾಗುವುದು ಮಾತ್ರ ಮುಖ್ಯ. ಮತ್ತು ಕೆಲವು ನಂಬಿಕೆಗಳನ್ನು ನಂಬುವುದೇ ಬೇಡ. ಸುಮ್ಮನೆ ಮೂಢನಂಬಿಕೆ ಅಂದು ಕೊಳ್ಳಿ…ಕಾಕತಾಳೀಯದಂತೆ ಅದೇ ಸಮಯದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಿದರೆ,ಅಯ್ಯೋ!…. ನಾನವತ್ತು ಹಾಗೆ ಮಾಡಿದ್ದರಿಂದ ಹೀಗಾಯಿತು ಎಂದು ಮಾನಸಿಕವಾಗಿ ಒದ್ದಾಡುತ್ತೇವೆ. ಅದರ ಬದಲಿಗೆ ಮೂಢನಂಬಿಕೆ ಎಂದು ಕೊಂಡರೂ ಪರವಾಗಿಲ್ಲ ಕೆಲವು ವಿಷಯಗಳಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಮಾನಸಿಕವಾಗಿ ನೆಮ್ಮದಿ ಸಂಪಾದಿಸುತ್ತೇವೆ.
ನಾನಿಂದು ಪುರಾಣದ ಕಥೆಯ ಸಂಬಂಧದೊಂದಿಗೆ ವಾಸ್ತವವದ ಚಿತ್ರಣವನ್ನು ತಿಳಿಸಿಕೊಡುವ ಒಂದು ಪ್ರಾಣಿಯ ಕೆಲವು ವಿಷಯವನ್ನು ಹಂಚಿಕೊಳ್ಳುವೆ. ನಿಮಗೂ ಗೊತ್ತಿರುವ ಸತ್ಯಾಸತ್ಯತೆಯನ್ನು ನೆನಪುಮಾಡುವ ಒಂದು ಪ್ರಯತ್ನವಿದು. ನಾಗಗಳ ಬಗ್ಗೆ ಒಂದಷ್ಟು ಮಾಹಿತಿ ನಿಮ್ಮ ಜೊತೆ. ಅದೆಷ್ಟೇ ತಿಳಿದರು ಇಂದು ಕೇಳಿ ಮರೆತು ಬಿಡುವ ಮಾಹಿತಿ ಅಂತೂ ಅಲ್ಲ. ನವನಾಗಗಳ ಜೊತೆ ಸಾಕಷ್ಟು ಜಾತಿಯ ಹಾವುಗಳನ್ನು ನಾವು ಕೇಳಿದ್ದೇವೆ. ಇವು ಬಿಲವಾಸಿಗಳಾದರೂ,ಉಭಯವಾಸಿ.
ಹಾವೆಂದರೆ ಯಾರಿಗೆ ಭಯವಿಲ್ಲ? ಎಲ್ಲರಿಗೂ ಅದರ ಭಯ ಇದ್ದೇಇದೆ. ಆದರೆ ಕೆಲವರು ಅವುಗಳಿಗೂ ಹೆದರುವುದಿಲ್ಲ. ನಾವು ಅವಕ್ಕೇನು ಮಾಡದ ಹೊರತು ನಮಗೇನು ಅವು ಮಾಡವು ಎಂಬುದು ಸೂಕ್ತಿ. ಹಾವೆಂದರೆ ನೆನಪಾಗುವುದು ಅದು ಕಚ್ಚಿದರೆ ಸಾಯುವುದು ಎಂದು. ಏಕೆಂದರೆ ಹಾವೆಂದರೆ ಅದೊಂದು ವಿಷದ ಮೂಟೆ ಎಂದೇ ನಮ್ಮ ಭಾವನೆ. ಕೆಟ್ಟ ಮನುಷ್ಯರನ್ನು ಸಹಾ ವಿಷದ ಹಾವುಗಳಿಗೆ ಹೋಲಿಸುವರು. ನಾನಿಂದು ಅದರ ವಿಷದ ಮಹತ್ವದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಸುವೆ.
ವಿಷದ ಹಾವೆಂದರೆ ವಿಷ ಹೊರಹಾಕುವ ಯಂತ್ರ . ಹಾವುಗಳಲ್ಲಿ ಅವುಗಳ ನಾಳ ಹಾಗೂ ವಿಷದ ಹುಲ್ಲುಗಳು. ತಲೆಯ ಎರಡೂ ಪಕ್ಕದಲ್ಲಿ ಒಂದೊಂದರಂತೆ ಎರಡು ವಿಷಗ್ರಂಥಿಗಳಿರುತ್ತವೆ. ವಿಷದ ಹುಲ್ಲುಗಳು ಬೇರೆ ಹಲ್ಲುಗಳಿಗಿಂತ ದೊಡ್ಡದಾಗಿರುತ್ತದೆ ಮತ್ತು ಚೂಪಾಗಿರುತ್ತದೆ. ಹಾವಿನ ಪಂಡಿತರು ಹಾವು ಕಚ್ಚಿರುವ ಗಾಯದ ಗುರುತುಗಳನ್ನು ನೋಡಿ ಅದರ ಜಾತಿಯನ್ನು ಹೇಳುವರು.
ವಿಷದ ಹಾವು ಒಮ್ಮೆ ಕಚ್ಚಿದರೆ ಮುಗಿಯಿತು. ಕೆಲವು ವರ್ಷಗಳ ಹಿಂದೆ ಪ್ರಥಮ ಚಿಕಿತ್ಸೆಯಾಗಿ ಗಾಯದ ಸ್ಥಳವನ್ನು ಕತ್ತರಿಸಿ, ರಕ್ತವನ್ನು ಸುರಿಸಿ ಚಿಕಿತ್ಸೆ ನೀಡುತ್ತಿದ್ದರು. ಗಾಯದ ಮೇಲೆ ಮಂಜುಗಡ್ಡೆ ಇಡುತ್ತಿದ್ದರು. ಇದರಿಂದ ರಕ್ತ ವೇಗವಾಗಿ ಹರಿದು ವಿಷವೇರುವ ಸಂಭವವೇ ಹೆಚ್ಚು.
ರೆಡ್ ಕ್ರಾಸ್ ಸಂಸ್ಥೆಯ ಪ್ರಕಾರ ಗಾಯವನ್ನು ಮೊದಲು ಸೋಪಿನಿಂದ ತೊಳೆದು, ಹೆಚ್ಚು ಅಲುಗಾಡಿಸದಂತೆ ತಕ್ಷಣ ಆಸ್ಪತ್ರೆಗೆ ದಾಖಲಿಸುವುದು. ಒಂದು ವೇಳೆ ವೈದ್ಯರ ಭೇಟಿ ವಿಳಂಬವಾದರೆ ಹಾವು ಕಡಿತದ ಗಾಯದಿಂದ ಸ್ವಲ್ಪ ಮೇಲ್ಬಾಗದಲ್ಲಿ ಗಟ್ಟಿಯಾದ ದಾರ ಕಟ್ಟುವುದು ಉತ್ತಮ. ಹಾಗಂತ ಹೆಚ್ಚು ಗಟ್ಟಿಯಾಗಿ ಬಿಗಿಯುವಂತಿಲ್ಲ.ದಾರ ಕಟ್ಟಿದ ನಂತರ ಆ ಜಾಗದಿಂದ ಹೀರು ಯಂತ್ರ ಅಥವಾ ಬಾಯಿಯಿಂದ ರಕ್ತವನ್ನು ತೆಗೆದು ವೈದ್ಯಕೀಯ ಪಡೆಯಬಹುದು.ಇನ್ನೂ ತಡವಾದರೆ ಅಯೋಡಿನ್ ದ್ರಾವಣ ಅಥವಾ ಆಲ್ಕೋಹಾಲ್ ನಿಂದ ತೊಳೆದು ಗಾಯದ ಮೇಲೆ ಎಪ್ಸಂ ಅಥವಾ ಉಪ್ಪನ್ನು ಹಚ್ಚಬೇಕು. ಆನಂತರ ಪಟ್ಟಿ ಕಟ್ಟಿ ಅರ್ಧಗಂಟೆಗೆ ಒಮ್ಮೆ ರಕ್ತ ಹೀರಿ ತೆಗೆಯಬೇಕು. ನೀರು ಪದೇಪದೇ ಕುಡಿಸಬೇಕು. ಯಾವುದೇ ಕಾರಣಕ್ಕೂ ಮಾದಕ ಪಾನೀಯ ಕೊಡಬಾರದು.
ಹಾವು ಎಂದರೆ ಅದರ ಸಂಕೇತವೇ ವಿಷಕಾರುವುದು. ಅದರ ಕಡಿತಕ್ಕೆ ಚಿಕಿತ್ಸೆ ಎಂದರೆ ಪ್ರತಿವಿಷ ಕೊಡುವುದು. ಆದರೆ ಕಚ್ಚಿದ್ದಕ್ಕೆಲ್ಲ ಕೊಡಲು ಆಗುವುದಿಲ್ಲ. ಕಡಿತದ ತೀವ್ರತೆಯನ್ನು ನೋಡಿ ಆನಂತರ ಚಿಕಿತ್ಸೆ ನೀಡುತ್ತಾರೆ. ಅಗತ್ಯ ಎನಿಸಿದರೆ ಮಾತ್ರ ಪ್ರತಿವಿಷ ಕೊಡುವುದು. ಇದು ಮಾತ್ರೆ ಮೂಲಕ ಸಿಗುವುದಿಲ್ಲ. ಚುಚ್ಚುಮದ್ದಿನ ರೂಪದಲ್ಲೇ ನೀಡಬೇಕು. ಯಾವ ಹಾವು ಎಷ್ಟರ ಮಟ್ಟಿಗೆ ಕಚ್ಚಿದೆ, ವಿಷದ ಪ್ರಮಾಣ ಎಷ್ಟು ಎಂದೆಲ್ಲಾ ಗಮನಿಸುವರು. ಪ್ರತಿವಿಷವು ವಿಷದೊಂದಿಗೆ ಕೂಡಿ ವಿಷವನ್ನು ಕ್ರಿಯಾಹೀನವಾಗಿಸುತ್ತದೆ.
ಈ ವಿಷವನ್ನು ಹೇಗೆ ತಯಾರಿಸುವರು……
ಇದನ್ನು ಹೆಚ್ಚಾಗಿ ಕುದುರೆಯ ರಕ್ತದಿಂದ ತಯಾರಿಸಲಾಗುತ್ತದೆ. ಪ್ರತಿವಿಷವನ್ನು ಪಡೆದ ವ್ಯಕ್ತಿಗಳು ಮುಂದೆ ಕುದುರೆಯ ರಕ್ತ ಅಥವಾ ಕುದುರೆಯಿಂದ ತಯಾರಿಸಲಾದ ಇತರ ವಸ್ತುಗಳಿಗೆ ನಿರೋಧತೆ ಕಳೆದುಕೊಳ್ಳಬಹುದು. ಇತ್ತೀಚೆಗೆ ಬೇರೆ ಪ್ರಾಣಿಗಳಲ್ಲಿ ವಿಷದ ತಯಾರಿ ನಡೆಸಿದ್ದಾರೆ.
ನಾಟಿ ವೈದ್ಯರು ತಮ್ಮದೇ ಆದ ವಿಧಾನದಿಂದ ಚಿಕಿತ್ಸೆ ನೀಡುವರು. ಇವರು ಗಿಡಮೂಲಿಕೆಗಳಿಂದ ಮಾಡುವರು. ಅದನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೆ ದಾಖಲೆಗಳಿಲ್ಲದೆ ಹಾಗೂ ಗುಟ್ಟಾಗಿಯೇ ಇರುವುದರಿಂದ ಹೆಚ್ಚು ಪ್ರಚಲಿತದಲ್ಲಿ ಇಲ್ಲ. ಆಯುರ್ವೇದದಲ್ಲಿ ಔಷಧಿ ಇದೆ. ಆದರೆ ಅದು ತುಂಬಾ ಕಠಿಣ. ಹಾಗಾಗಿ ಹೆಚ್ಚು ಪ್ರಚಾರ ಇದಕ್ಕೂ ಇಲ್ಲ.
ಇದನ್ನು ಯಾವ ಮಂತ್ರ ತಂತ್ರಗಳಿಂದಲೂ ವಾಸಿಮಾಡಲು ಆಗುವುದಿಲ್ಲ. ಕೆಲವು ಮೂಢನಂಬಿಕೆಗೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದ ಯಾವುದೇ ಮೂಢನಂಬಿಕೆಗೆ ಬಲಿಯಾಗದೆ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು.
ಎಲ್ಲಾ ಹಾವುಗಳು ವಿಷಕಾರಿಯಲ್ಲ…ಆದರೆ ಉಪ್ಪುನೀರಿನ ಸಮುದ್ರ, ಸಾಗರ ಇಂತಹ ಕಡೆ ವಾಸಿಸುವ ಹಾವುಗಳು ವಿಷದಿಂದ ಕೂಡಿರುತ್ತದೆ. ಬಾಲ ಚಪ್ಪಟೆಯಾಗಿರುವ ಹಾವುಗಳು ವಿಷದಿಂದ ಕೂಡಿರುತ್ತದೆ. ಭೂವಾಸಿ ಹಾವುಗಳ ಬಾಲ ಗುಂಡಾಗಿ ಚೂಪಾಗಿರುತ್ತದೆ.
ಹಾವಿನ ಕಡಿತದಿಂದ ಸೇರಿದ ವಿಷ ಮಾರಕವೇನೋ ಸರಿ. ಆದರೆ ಇದೂ ಕೂಡ ಉಪಯೋಗ ಎನ್ನುತ್ತಾರೆ ತಜ್ಞರು. ಹಾವಿನ ಕಡಿತಕ್ಕೆ ಚಿಕಿತ್ಸೆಗೆ ಬಳಸುವ ಪ್ರತಿವಿಷವನ್ನು ಹಾವಿನ ವಿಷದಿಂದಲೇ ತಯಾರಿಸುತ್ತಾರೆ. ನಾನು ಓದಿರುವ ಪ್ರಕಾರ ಸಾಕಿದ ಹಾವುಗಳಿಂದ ಮೊದಲು ವಿಷವನ್ನು ಸಂಗ್ರಹಿಸುತ್ತಾರೆ. ಸಂಗ್ರಹವಾದ ವಿಷವನ್ನು ಸ್ವಲ್ಪ ಸ್ವಲ್ಪವಾಗಿ ಕುದುರೆಗಳಿಗೆ ಚುಚ್ಚುಮದ್ದು ರೂಪದಲ್ಲಿ ನೀಡುವರು. ಅಂದರೆ ಸಾಯಲು ಎಷ್ಟು ಬೇಕೋ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊಡುವರು. ವಿಷ ಮಿಶ್ರವಾದ ಕುದುರೆ ರಕ್ತದಲ್ಲಿ ಸಾಕಷ್ಟು ಪ್ರತಿಕಾಯಗಳ ಪ್ರೋಟೀನ್ ಉತ್ಪತ್ತಿಯಾಗುತ್ತದೆ. ಸಾಕಷ್ಟು ಪ್ರತಿಕಾಯ ಸಂಗ್ರಹವಾದಾಗ ಕುದುರೆಯ ರಕ್ತ ಹಾವಿನ ವಿಷಕ್ಕೆ ನಿರೋಧತೆಯನ್ನು ಪಡೆಯುವುದು. ಆನಂತರ ರಕ್ತದಿಂದ ಈ ಪ್ರತಿಕಾಯಗಳನ್ನು ಬೇರ್ಪಡಿಸುವರು. ಆನಂತರ ಹಾವು ಕಡಿದವರಿಗೆ ಸೂಕ್ತ ಪ್ರಮಾಣದಲ್ಲಿ ನೀಡಿ ಚಿಕಿತ್ಸೆ ಮಾಡುವರು. ಪ್ರತಿವಿಷವು ವಿಷದೊಡನೆ ಬೆರೆತು ಅದನ್ನು ಕ್ರಿಯಾಹೀನವಾಗಿಸುತ್ತದೆ.
ಮುಳ್ಳಿಂದ ಮುಳ್ಳನ್ನು ತೆಗೆಯುವಂತೆ ಅದರ ವಿಷದಿಂದಲೇ ಚಿಕಿತ್ಸೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವರು. ಅಲ್ಲದೇ ಯಾವ ಪ್ರಭೇದದ ಹಾವು ಕಚ್ಚಿರುವುದೋ ಅದೇ ಪ್ರಭೇದದ ವಿಷದಿಂದ ತಯಾರಿಸಿದ ಪ್ರತಿವಿಷವನ್ನು ನೀಡಬೇಕು. ಇತ್ತೀಚೆಗೆ ಕುದುರೆಯಲ್ಲದೆ ಬೇರೆ ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ, ಪ್ರತಿವಿಷವನ್ನು ತಯಾರಿಸುವ ಗೆಲುವಿನತ್ತ ಸಾಗುತ್ತಿದ್ದಾರೆ. ಹಾಗೆಯೇ ಇದರ ವಿಷದಲ್ಲಿ ಕಿಣ್ವಗಳನ್ನು ಬೇರ್ಪಡಿಸಿ, ಡಿ.ಎನ್.ಎ. ರಚನೆ ಮತ್ತು ಕಾರ್ಯವಿಧಾನಗಳನ್ನು ಅರಿಯಲು ಬಳಸುತ್ತಿದ್ದಾರೆ. ಹೀಗೆ ಹತ್ತು ಹಲವಾರು ವಿಷಯಗಳಿಗೆ ಹಾವಿನ ವಿಷವು ಉಪಯುಕ್ತವಾಗಿದೆ.
–ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
ಮಾಹಿತಿ ಪೂರ್ಣ ಬರಹ
ಒಳ್ಳೆಯ.. ಮಾಹಿತಿಯನ್ನು.. ಒಳಗೊಂಡ.. ಲೇಖನ..
ಗೆಳತಿ… ಭಾಗ್ಯಲಕ್ಷ್ಮಿ… ಅಭಿನಂದನೆಗಳು.
ದೇಹದಿಂದ ವಿಷವನ್ನು ನಿವಾರಿಸಲು ಉಪಯೋಗಿಸುವ ಪ್ರತಿವಿಷವನ್ನು ತಯಾರಿಸುವ ತಂತ್ರವನ್ನು ಬಹಳ ಚೆನ್ನಾಗಿ ತಿಳಿಸಿರುವಿರಿ.
ಸಿಡುಬು ಇತ್ಯಾದಿ ಮಾರಕ ರೋಗಗಳಿಗೆ ಬಳಸುವ ಎಲ್ಲಾ ವ್ಯಾಕ್ಸಿನೇಷನ್ ಗಳು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ತತ್ತ್ವವನ್ನೇ ಆಧರಿಸಿದೆ. ಮಾಹಿತಿಯನ್ನು ಹಂಚಿಕೊಂಡದ್ದು ಚೆನ್ನಾಗಿದೆ.