ಕಾದಂಬರಿ: ನೆರಳು…ಕಿರಣ 39

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ವಿಷಯ ತಿಳಿದು ಬೇರೆ ಊರುಗಳಿಂದ ಬಂದಿಳಿದಿದ್ದ ಬಂಧುಬಾಂದವರು ಮನೆಯ ಪರಿಸ್ಥಿತಿಯನ್ನು ಅರಿತು ಕೇಶವಯ್ಯನವರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ತಯಾರಿ ನಡೆಸಿದ್ದರು. ಎಲ್ಲವೂ ಸಿದ್ಧವಾದ ಮೇಲೆ ಶಾಸ್ತ್ರೋಕ್ತವಾಗಿ ಮಾಡಬೇಕಾದ ಧಾರ್ಮಿಕ ಕ್ರಮಗಳನ್ನು ನೆರವೇರಿಸಿ ಶ್ರೀನಿವಾಸನ ಅಂತ್ಯಕ್ರಿಯೆಯನ್ನು ಪೂರೈಸಿ ಬಂದರು. ಎಲ್ಲರೂ ಸ್ನಾನಗಳನ್ನು ಮುಗಿಸುವಷ್ಟರಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ರಾಮಣ್ಣನವರು ಮತ್ತವರ ಮಗ ಮಧು ಸಿದ್ಧಪಡಿಸಿದ್ದರು. ವೈದ್ಯರ ನಿರಂತರ ಪ್ರಯತ್ನದಿಂದ ಭಾಗ್ಯ ಅರಿವಿಗೆ ಬಂದಳು. ನಿಧಾನವಾಗಿ ಕಣ್ಣುಬಿಟ್ಟು ಸುತ್ತ ನೋಡಿದಳು. ತನ್ನ ಸುತ್ತ ನಿಂತಿದ್ದವರನ್ನೆಲ್ಲ ನೋಡುತ್ತಿದ್ದಂತೆ ಅವಳ ಮನಸ್ಸಿಗೆ ನಡೆದ ಘಟನೆಗಳು ಮೂಡಿಬಂದವು.

ಹುಟ್ಟಿದಾಗಿನಿಂದ ಪರಿಸ್ಥಿತಿಯೊಂದಿಗೆ ರಾಜಿಯಾಗುವುದೇ ಆಯಿತು. ಈಗಲೂ ಅದೇ ವ್ಯತ್ಯಾಸವೇನಿಲ್ಲ. ಹೆತ್ತವರು ನನ್ನ ಸ್ಥಿತಿಯಿಂದ ಗಾಭರಿಯಾಗಿ ನಿಂತಿದ್ದಾರೆ. ತಮ್ಮೆಲ್ಲ ಜವಾಬ್ದಾರಿಗಳನ್ನು ಪೂರೈಸಿ ರಾಮಾಕೃಷ್ಣಾ ಎಂದು ಕಾಲಕಳೆಯುವ ಸಮಯದಲ್ಲಿ ಅವರು ನನ್ನ ಬದುಕಿನ ಭಾರ ಹೊರುವಂತಾಯಿತು. ನನಗೇನಾಗುತ್ತದೆಯೋ ಎಂಬ ಆತಂಕ, ದುಗುಡ ಅವರ ಮನದಲ್ಲಿ. ಹೂಂ ನಾನೇಕೆ ಇಷ್ಟು ದುರ್ಬಲಳಾದೆ. ಹೆತ್ತವರನ್ನೂ ಮರೆಸುವಂತೆ ನನ್ನನ್ನು ಅಕ್ಕರೆಯಿಂದ ನೋಡುತ್ತಾ, ನನ್ನಾಸೆಗಳಿಗೆಲ್ಲ ಬೆನ್ನೆಲುಬಾಗಿ ನಿಂತು ಪರೋಕ್ಷವಾಗಿ ತಮ್ಮ ಮಗನನ್ನೂ ತಿದ್ದುತ್ತಾ ಈ ಹಂತದವರೆಗೆ ಮುಟ್ಟಿಸಿದವರು ಅತ್ತೆಮಾವ. ಅವರಿಬ್ಬರೂ ಏಕಾ‌ಏಕಿ ಕಣ್ಮರೆಯಾದಾಗ ಪ್ರಜ್ಞಾಹೀನಳಾಗದೆ ಮನದ ದುಗುಡವನ್ನೆಲ್ಲ ಹೊರಹಾಕಿದ್ದೆ. ಘಳಿಗೆ ಘಳಿಗೆಗೂ ಅವರ ನೆನಪನ್ನು ಮನದಾಳದಲ್ಲಿ ಹುದುಗಿಸಿಟ್ಟುಕೊಂಡೇ ಮುನ್ನಡೆದಿದ್ದೆ. ಹೆಗಲಿಗೊಂದು ಆಸರೆಯಿದೆ ಎಂಬ ಭರವಸೆಯಿಂದ. ಆದರೀಗ ನನ್ನೊಡನೆ ಸಪ್ತಪದಿ ತುಳಿದು ಕೊನೆಯವರೆಗೂ ನಿನ್ನೊಡನಿರುತ್ತೇನೆಂದು ಕೈಹಿಡಿದವರು ನಡುನೀರಿನಲ್ಲಿ ನನ್ನನ್ನು ಬಿಟ್ಟು ಹೋದರೆ ಏನಾದೀತು. ಇದನ್ನು ತಡೆದುಕೊಳ್ಳಲಾಗಲಿಲ್ಲ. ನಾನು ಪಡೆದು ಬಂದದ್ದಿಷ್ಟೇ. ಏನಾದರಾಗಲೀ ನಾನು ಎದ್ದುನಿಲ್ಲಬೇಕು. ಆ ಹಸುಗೂಸಿಗೊಂದು ನೆಲೆಯಾಗಿ ಬದುಕು ಕಟ್ಟಿಕೊಡಬೇಕು. ಅದೂ ಅಪ್ಪನಿಲ್ಲದ ಸ್ಥಾನವನ್ನು ತುಂಬಿಕೊಡುತ್ತಾ. ಎಂಥಹ ವಿಪರ್ಯಾಸ. ಆಲೋಚನಾ ಲಹರಿ ಹರಿಯುತ್ತಲೇ ಇತ್ತು.

ಎಚ್ಚರವಾದರೂ ಒಂದೂ ಮಾತನಾಡದೇ ದುಃಖವನ್ನೂ ವ್ಯಕ್ತಪಡಿಸದೆ ಕಣ್ಣುಬಿಟ್ಟು ಎಲ್ಲರನ್ನೂ ಸುಮ್ಮನೆ ದಿಟ್ಟಿಸಿ ನೋಡುತ್ತಿದ್ದ ಮಗಳನ್ನು ನೋಡಿ ಲಕ್ಷ್ಮಿ ಉಮ್ಮಳಿಸಿ ಬರುತ್ತಿದ್ದ ಅಳುವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಳು. ಮಿಕ್ಕವರು ಏನುಮಾಡಬೇಕು, ಹೇಗೆ ಮಾತನಾಡಿಸಬೇಕೆಂದು ತಿಳಿಯದೆ ನಿಂತಿದ್ದರು.

ಪಕ್ಕದ ಮನೆಯಲ್ಲಿ ಬಿಟ್ಟಿದ್ದ ಮಗುವನ್ನು ಕರೆತಂದು ಅದಕ್ಕೆ ಸ್ನಾನಪಾನಾದಿಗಳನ್ನು ಮಾಡಿಸಿ ಮಲಗಿಸುತ್ತಿದ್ದ ಭಾವನಾಳಿಗೆ ನಾರಣಪ್ಪ ಭಾಗ್ಯಳು ಎಚ್ಚರವಾಗಿದ್ದಾಳೆಂಬ ಸುದ್ಧಿ, ಹಾಗೇ ಅಲ್ಲಿದ್ದ ಪರಿಸ್ಥಿತಿಯನ್ನು ಚುಟುಕಾಗಿ ತಿಳಿಸಿ ಅವಳಿಗೆ ರೂಮಿಗೆ ಹೋಗಲು ಒತ್ತಾಯಿಸಿದರು.

ಅವರ ಆತಂಕವನ್ನು ಗಮನಿಸಿ ಭಾವನಾ ಮಗುವಿನ ಹೊಣೆಯನ್ನು ಅವರಿಗೇ ವಹಿಸಿ ಅಕ್ಕನಿದ್ದಲ್ಲಿಗೆ ಬಂದಳು. ಅಕ್ಕನ ಹತ್ತಿರ ಹೋದವಳೇ ತನ್ನ ಕೈಯಿಂದ ಅವಳ ತಲೆ ಸವರುತ್ತಾ ಸಮಾಧಾನಪಡಿಸುವಂತೆ ಕುಳಿತಳು. ಸೋದರಿಯ ಸ್ಪರ್ಶವಾಗುತ್ತಿದ್ದಂತೆ ಒಳಗಿದ್ದ ದಾವಾಗ್ನಿ ಹೊರಗೆ ಚೆಲ್ಲಿದಂತೆ ಬಿಕ್ಕಿ ಬಿಕ್ಕಿ ಅಳತೊಡಗಿದಳು ಭಾಗ್ಯ. ಈ ದೃಶ್ಯವನ್ನು ಕಂಡು ಉತ್ತೇಜಿತಳಾಗಿ ಲಕ್ಷ್ಮೀ ಮುಂದೆಬಂದಳು. “ಅತ್ತುಬಿಡು ಮಗಳೇ, ಅತ್ತುಬಿಡು. ದುಃಖವನ್ನೆಲ್ಲ ಕಾರಿಬಿಡು. ಕಲ್ಲಿನಂತೆ ಸುಮ್ಮನಿರಬೇಡ. ನಿನಗೇನಾದರೂ ಅಪಾಯವಾದರೆ ಕೂಸಿನ ಗತಿಯೇನು? ಗುಂಡಿಗೆಯನ್ನು ಗಟ್ಟಿ ಮಾಡಿಕೋ. ಯಾವ ಘಳಿಗೆ, ಯಾವ ನಕ್ಷತ್ರ, ಯಾವ ಜಾತಕ , ಯಾರ ಕಾಲ್ಗುಣ, ..ಹೂಂ..ಶಿಶು ತಾಯಗರ್ಭಕ್ಕೆ ಬಿದ್ದು ಜೀವ ಮಿಡಿದಾಗಲೇ ಅದರ ಹುಟ್ಟು. ಅಲ್ಲಿಂದಲೇ ಬರಹವನ್ನು ಬರೆದಿರುತ್ತಾನೆ ಬ್ರಹ್ಮ. ಅದರ ಹೊರತು ಭೂಮಿಗೆಬಿದ್ದ ಘಳಿಗೆಯ, ದಿನದ ಲೆಕ್ಕ ಹಾಕುವ ನಾವು ಮೂರ್ಖರು. ಅದೆಂದಿಗೂ ಸರಿಯಲ್ಲ. ಎದ್ದೇಳು. ಬಂದಿದ್ದನ್ನೆಲ್ಲ ಎದುರಿಸಿ ನಿಲ್ಲುವ ಬಲವನ್ನು ಕೊಡೆಂದು ಭಗವಂತನಲ್ಲಿ ಬೇಡೋಣ. ಅವನೇ ತಾನೇ ಕೊಡುವವನು, ಕಿತ್ತುಕೊಳ್ಳುವವನು.” ಎಂದು ನಿಧಾನವಾಗಿ ಅವಳನ್ನೆಬ್ಬಿಸಿದರು.

ತಾಯಿ ಆಡಿದ ಮಾತುಗಳಲ್ಲಿನ ಸತ್ಯತೆಯನ್ನರಿತ ಭಾಗ್ಯ ಎದ್ದು ತಂಗಿಯ ಕೈಹಿಡಿದು ರೂಮಿನಿಂದ ಹೊರಬಂದಳು. ಎಲ್ಲವೂ ಮುಗಿದುಹೋಗಿರುವುದು ತಿಳಿಯಿತು. ಮಗುವನ್ನು ಕಾಣದೆ ಎಲ್ಲಿದೆಯೆಂದು ಪ್ರಶ್ನಿಸಿದಳು. ಅದಕ್ಕೆ ಸಮಾಧಾನದಿಂದ ಉತ್ತರಿಸಿದ ಭಾವನಾ ಅದನ್ನು ಮಲಗಿಸಿದ್ದ ರೂಮಿಗೆ ಕರೆದುಕೊಂಡು ಹೋಗಿ ತೋರಿಸಿದಳು. ಏನೊಂದೂ ಮಾತನಾಡದೆ ಸ್ನಾನ ಮುಗಿಸಿ ಸೇರಿದಷ್ಟನ್ನು ತಿಂದು ಮತ್ತೆ ಮಲಗಿಬಿಟ್ಟಳು ಭಾಗ್ಯ.

ಅದನ್ನೆಲ್ಲ ನೋಡಿದ ಮಿಕ್ಕವರು ಹೆಚ್ಚೇನೂ ಕೆದಕದೆ ಇದ್ದುದರಲ್ಲೇ ಸಾವರಿಸಿಕೊಂಡು ವಿಶ್ರಾಂತಿಗೆ ಜಾರಿದರು.

ಒಂದೊಂದು ದಿನದ ಕಾರ್ಯಕ್ರಮ ಮುಗಿದಂತೆಲ್ಲ ಅಲ್ಲಿ ಸೇರಿದ್ದ ಬಂಧುಬಳಗದವರ ಬಾಯಲ್ಲಿ ಒಂದೊಂದು ರೀತಿಯ ವ್ಯಾಖ್ಯಾನ, ಟೀಕೆ, ಟಿಪ್ಪಣಿಗಳು ಬರುತ್ತಿದ್ದವು. ಅದರಲ್ಲಿ ಭಾಗ್ಯಳ ಕಿರಿಯ ಅವಳಿ ಸೋದರಿಯರ ಅತ್ತೆ, ಭಟ್ಟರ ಚಿಕ್ಕಮ್ಮಂದಿರ ಬಾಯಿಗೆ ಸಿಕ್ಕ ಲಕ್ಷ್ಮಿ ತತ್ತ್ತರಿಸಿ ಹೋಗುತ್ತಿದ್ದಳು. “ಲಕ್ಷ್ಮಮ್ಮಾ ಏನು ಹೇಳ್ತಾಳೆ ನಿಮ್ಮ ಮಗಳು? ಸಂಪ್ರದಾಯಕ್ಕೆ ತಲೆ ಒಡ್ಡುತ್ತಾಳಂತೋ, ಇಲ್ಲ ಸಕೇಶಿಯಾಗಿ ಉಳಿದು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಾಳೋ? ಅಲ್ಲಾ ಮಾತಿಗೆ ಕೇಳಿದ್ವೀ..ಎಷ್ಟೇ ಆಗಲಿ ಅಂಗ್ರೇಜಿ ಕಲಿತವಳು, ಜೊತೆಗೆ ಸಂಗೀತ ವಿದ್ವಾನಾಗಿ ಅದೇನೋ ಪುಸ್ತಕ ಬೇರೆ ಬರೆದಿದ್ದಾಳಂತೆ. ಪಾಠ ಹೇಳೋದೂ ಉಂಟಲ್ಲವಾ? ಸಂಪ್ರದಾಯಕ್ಕೆ ಬೆನ್ನುತೋರಿದರೆ ಇವೆಲ್ಲಕ್ಕೂ ಕಷ್ಟವೇ. ಯಾರು ಅವಳಲ್ಲಿಗೆ ಪಾಠಕ್ಕೆ ಕಳಿಸ್ತಾರೆ. ದೇವಸ್ಥಾನದ ಕೆಲಸಕ್ಕೆ ಕುತ್ತು. ಇದರಿಂದ ಅವರು ಕೊಟ್ಟಿರೋ ಸವಲತ್ತುಗಳು ಹೋಗಿಬಿಡುತ್ತವೆ. ನಿಮಗಿದ್ದ ಜಮೀನು ಸರ್ಕಾರದ ಪಾಲಾಯಿತು. ಇವರಿಗೇನೋ ಚೂರುಪಾರು ಇದೆಯಂತೆ. ಅದರಿಂದ ಎಷ್ಟು ಆದಾಯ ಹುಟ್ಟುತ್ತೆ. ಹೀಗೆ ಒಂದರ ಹಿಂದೊಂದು ಹರಿಯಬಿಡುತ್ತಿದ್ದ ಮಾತುಗಳ ಬಾಣಗಳಿಗೆಲ್ಲ ಯಾವ ಉತ್ತರವನ್ನೂ ನೀಡದೇ ಮೌನಕ್ಕೆ ಶರಣಾಗುತ್ತಿದ್ದಳು ಲಕ್ಷ್ಮಿ. ಇವರ ಸ್ವಭಾವವನ್ನು ಅರಿತಿದ್ದ ಇತರರೂ ತಮಗೆ ಸಂಬಂಧ ಇಲ್ಲವೆಂಬಂತೆ ಕೆಲಸಗಳಲ್ಲಿ ನಿರತರಾಗಿದ್ದರು.

ಇವೆಲ್ಲವನ್ನೂ ಗಮನಿಸುತ್ತಲೇ ಮೌನಗೌರಿಯಂತಿದ್ದ ಭಾಗ್ಯಾಳ ಮನಸ್ಸು ಅಗ್ನಿಕುಂಡದಂತೆ ಬೇಯುತ್ತಿತ್ತು. ಹೂಂ ಪ್ರೀತಿಯ ಗಂಡನೇ ಹೋದಮೇಲೆ ಈ ರೂಪ ಉಳಿಸಿಕೊಂಡೇನು ಪ್ರಯೋಜನ ಎಂಬ ಮಾತು ನಿಜ. ಆದರೆ ಗಂಡನ ಬದಲು ನಾನೇ ಮೊದಲು ಹೋಗಿದ್ದರೆ? ಈ ಸಂಪ್ರದಾಯ, ಕಟ್ಟುಪಾಡು, ನೀತಿನಿಯಮ ಅಡ್ಡ ಬರುತ್ತಿದ್ದವೇ? ಅಯ್ಯೋ ಪಾಪ ಗಂಡಸು, ಎಳೇ ಕೂಸನ್ನು ಕಟ್ಟಿಕೊಂಡು ಹೇಗೆ ಕೈಬಾಯಿ ಸುಟ್ಟುಕೊಂಡು ಸಂಭಾಳಿಸಿಯಾನು ಎಂದು ಇದೇ ಸಮಾಜ ವರ್ಷ ತುಂಬುವ ಮೊದಲೇ ಇನ್ನೊಂದು ವಿವಾಹ ಮಾಡಿಸುತ್ತಿದ್ದರು. ಇದನ್ನು ಅದ್ಯಾವ ಪುಣ್ಯಾತ್ಮ ಮಾಡಿದ್ದಾನೋ, ಬರೀ ಹೆಣ್ಣಿಗಷ್ಟೇ ಎಲ್ಲ ನಿಬಂಧನೆಗಳು. ಹೆಣ್ಣೂ ಒಂದು ಜೀವಿಯೇ, ಎಂದು ಪರಿಗಣಿಸಿಯೇ ಇಲ್ಲ ಪುರುಷ ಸಮಾಜ. ಅದರಲ್ಲೂ ನಮ್ಮ ಜನಾಂಗ. ಒಂದುವೇಳೆ ನಾನು ಸೆಟೆದು ನಿಂತರೆ. ಅಬ್ಬಾ ! ಊಹಿಸಿಕೊಳ್ಳಲೂ ಆಗದು. ನನ್ನ ಹೆತ್ತವರು, ಒಡಹುಟ್ಟಿದವರು, ಒಡನಾಟದಲ್ಲಿರುವವರು, ಬಂಧುಗಳು ಎಲ್ಲರನ್ನೂ ಹುರಿದು ಮುಕ್ಕಿಬಿಡುತ್ತಾರೆ. ಅದೂ ಹೋಗಲಿ ನನ್ನ ಕರುಳಕುಡಿ ‘ಸಿರಿ’, ಬೇಡವೇ ಬೇಡ. ಹೇಗಿದ್ದರೂ ಇಪ್ಪತ್ತೇಳು ಸಂವತ್ಸರಗಳನ್ನು ಕಳೆದಾಗಿದೆ. ನಮ್ಮಲ್ಲಿ ಕೆಲವರು ವಿವಾಹವಾಗಿ ಅರಿಶಿನ ಮೈ ಆರುವ ಮುನ್ನ, ಮದುವೆ ಎಂದರೇನೆಂದು ತಿಳುವಳಿಕೆಯೇ ಇಲ್ಲದ ವಯಸ್ಸಿನವರು, ಎಷ್ಟೋ ಮಂದಿ ಸಂಪ್ರದಾಯಕ್ಕೆ ತಲೆಬಾಗಿ ಮಡಿಯಾಗಿ ತಮ್ಮ ಎಲ್ಲ ಆಸೆ, ಆಕಾಂಕ್ಷೆಗಳನ್ನು ಬೂದಿಮಾಡಿ ತಾವು ಬೂದಿಯಾಗುವವರೆಗೂ ಇದೇ ಕಟ್ಟುಪಾಡುಗಳಲ್ಲಿಯೇ ಬದುಕಿದ್ದಾರೆ. ಹಾಗೆ ನೋಡಿದರೆ ನಾನೇ ಪುಣ್ಯವಂತೆ, ಹನ್ನೆರಡು ವರ್ಷಗಳ ದಾಂಪತ್ಯಜೀವನ ನಡೆಸಿದ್ದೇನೆ. ಇಲ್ಲಸಲ್ಲದ್ದನ್ನು ಯೋಚಿಸಿ ಈ ಮನೆತನದ ಗೌರವಕ್ಕೆ ಮಸಿ ಬಳಿಯದೆ, ಹೆತ್ತವರಿಗೆ, ಸೋದರಿಯರಿಗೆ, ಒಡನಾಟದಲ್ಲಿರುವವರಿಗೆ ಮತ್ತೊಬ್ಬರು ಬೆಟ್ಟುಮಾಡಿ ತೋರಿಸುವಂತೆ ಮಾಡಬಾರದು. ಮೊದಲೇ ಯೋಚಿಸಿದಂತೆ ‘ಈಸಬೇಕು, ಇದ್ದು ಜೈಸಬೇಕು’ ಕಲಿತ ವಿದ್ಯೆಯಿದೆ. ನೆಲೆಸಲು ಹಿರಿಯರ ಮನೆಯಿದೆ. ಆಸರೆಗಾಗಿ ಹೆತ್ತವರಿದ್ದಾರೆ. ಬಹಳಷ್ಟು ಆಪ್ತೇಷ್ಟರಿದ್ದಾರೆ.  ಎಲ್ಲದರ ವಿರುದ್ಧ ಕ್ರಾಂತಿಕಹಳೆ ಊದಿ ಏನಾಗಬೇಕಾಗಿದೆ. ಎಂದು ನಿರ್ಧರಿಸಿ ಸಂಪ್ರದಾಯಕ್ಕೆ ತಲೆಬಾಗಿ ಕೇಶಮುಂಡನ ಮಾಡಿಸಿಕೊಂಡು ಮಡಿಯಾಗಿಬಿಟ್ಟಳು ಭಾಗ್ಯ.

ಸುದ್ಧಿ ತಿಳಿದ ದಿನವಂತೂ ಎಲ್ಲರಿಗಿಂತ ಹೆಚ್ಚಾಗಿ ಸಂಕಟಪಟ್ಟವರು ಕೇಶವಯ್ಯನವರ ತಾಯಿ ಗೋದಮ್ಮನವರು. “ಹಾಸಿಗೆ ಹಿಡಿದು ವರ್ಷಗಳೇ ಉರುಳಿಹೋಗಿವೆ. ನನ್ನಂಥವಳನ್ನು ಕರೆದುಕೊಂಡು ಹೋಗುವ ಬದಲು ಬದುಕಿ ಬಾಳಬೇಕಾದವನನ್ನು ಬೂದಿಮಾಡಿ, ಚಿನ್ನದಂಥ ಹುಡುಗಿಗೆ ಈ ಸ್ಥಿತಿ ತಂದೊಡ್ಡಿತೇ ವಿಧಿ. ಅಪರೂಪದ ಪುಟ್ಟ ಕಂದಮ್ಮನಿಗೆ ತಂದೆಯ ಋಣವಿಲ್ಲದಂತೆ ಮಾಡಿಬಿಟ್ಟೆಯಲ್ಲೋ ಹರೀ” ಎಂದು ಗೋಳಾಡಿದರು.

ಎಲ್ಲ ಧಾರ್ಮಿಕ ವಿಧಿಗಳನ್ನೂ ಪೂರೈಸಿದ ಜೋಯಿಸರು ಮತ್ತು ಸೀತಮ್ಮನವರ ಕಡೆಯ ಬಂಧುಬಾಂಧವರು “ಚಂದದ ಸುಂದರ ಸಂಸಾರಕ್ಕೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಕಾಣೆವು ತಾಯಿ, ನೀನು ಒಂಟಿಯೆಂದುಕೊಳ್ಳಬೇಡಮ್ಮ. ನಾವೆಲ್ಲ ನಿನ್ನೊಡನೆ ಇದ್ದೇವೆಂದು ತಿಳಿ. ಸಂಕೋಚವಿಲ್ಲದೆ ಸಂಕಟವನ್ನು ಹಂಚಿಕೋ. ಸಹಾಯ ಬೇಕಾದಾಗ ಕೇಳು. ಅದರಲ್ಲೇನೂ ತಪ್ಪಿಲ್ಲ” ಎಂದು ಅಭಯವನ್ನಿತ್ತು ತಂತಮ್ಮ ಊರುಗಳಿಗೆ ತೆರಳಿದರು.

ಮೊದಲೇ ನಿರೀಕ್ಷಿಸಿದಂತೆ ದೇವಸ್ಥಾನದ ಮಂಡಳಿಯವರು ಪೂಜಾಕಾರ್ಯಕ್ಕೆ ಸಂಭಂಧಿಸಿದ ಎಲ್ಲ ಸವಲತ್ತುಗಳನ್ನು ಬೇರೆಯವರಿಗೆ ವಹಿಸಿದರು. ಒಂದೆರಡು ಹಸುಗಳು, ಸ್ವಲ್ಪ ಮೊತ್ತದ ಹಣ ಮಾತ್ರ ಭಾಗ್ಯಳಿಗೆ ಸಂದಾಯವಾಯಿತು. ದೇವಸ್ಥಾನದ ಜಮೀನಿನ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಪಕ್ಕದ ಮನೆಯ ಕುಟುಂಬದವರಿಂದ ಅದನ್ನು ಬೇರೆಯವರಿಗೆ ವಹಿಸಿದರು. ಇದನ್ನು ನೋಡಿ ಭಾಗ್ಯ ಅವರನ್ನು ಬೇರೆಡೆಗೆ ಹೋಗದಂತೆ ತಡೆದು ಅವರು ಅದೇ ಮನೆಯಲ್ಲಿದ್ದುಕೊಂಡೇ ಅವರೇ ಕೊಂಡಿದ್ದ ಜಮೀನಿನ ಸಾಗುವಳಿಯನ್ನು ಮಾಡಿಕೊಂಡು ಜೊತೆಗೆ ತಮ್ಮ ತೋಟವನ್ನೂ ನೋಡಿಕೊಳ್ಳುವಂತೆ ಹೇಳಿದಳು. ಅಲ್ಲದೆ ಅವರಿಗಾಗಿ ಇನ್ನೂ ಕೆಲವು ಹಸುಗಳನ್ನು ಕೊಡಿಸುವ ಏರ್ಪಾಡು ಮಾಡಿ ಹೈನುಗಾರಿಕೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದಳು. ಮನೆಯಲ್ಲಿದ್ದ ಕಾರನ್ನು ನಂಜುಂಡನ ವಶಕ್ಕೆ ನೀಡಿ ಅದನ್ನು ಬಾಡಿಗೆಗೆ ನೀಡುವಂತೆ ಒಪ್ಪಿಸಿದಳು. ಕುಟುಂಬದ ಮದುವೆಯ ಛತ್ರದ ಸಂಬಂಧವನ್ನೂ ಬಿಡದಂತೆ ಹಿರಿಯಜ್ಜನ ಮಗನಿಗೆ ಆಗಾಗ ಬಂದು ಅದರ ಮೇಲ್ವಿಚಾರಣೆಯನ್ನು ಗಮನಿಸಲು ಕೇಳಿಕೊಂಡಳು.

ಕಾಲ ಸರಿದಂತೆ ದಿನಗಳು ಸಾಗುತ್ತಿದ್ದವು. ಮಗುವಿನ ಆಟಪಾಟ, ಆ ಮನೆಯನ್ನು ಜೀವಂತವಾಗಿಡಲು ಸಹಕಾರಿಯಾಗಿತ್ತು. ನಿಂತಿದ್ದ ಸಂಗೀತ ನಿನಾದ ಮತ್ತೆ ಪ್ರಾರಂಭವಾಯಿತು. ನಾರಾಣಪ್ಪನವರಂತೂ ಮೊದಲಿಗಿಂತಲೂ ಜವಾಬ್ದಾರಿಯಾಗಿ ಮನೆಯ ಒಳಗಿನ, ಹೊರಗಿನ ಕಾರ್ಯಕಲಾಪಗಳನ್ನು ಹೆಗಲಮೇಲೆ ಹೊತ್ತುಕೊಂಡಂತೆ ನಿರ್ವಹಿಸುತ್ತಿದ್ದರು.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36366

ಬಿ.ಆರ್.ನಾಗರತ್ನ, ಮೈಸೂರು

8 Responses

 1. ನಯನ ಬಜಕೂಡ್ಲು says:

  ಒಂದು ಅವ್ಯಕ್ತ ಭಯ ಭಾಗ್ಯಳ ಪರಿಸ್ಥಿತಿಯನ್ನು ನೆನೆದರೆ ಆಗುತ್ತದೆ. ಯಾರೂ ಶಾಶ್ವತರಲ್ಲ ನಿಜ, ಹಾಗೆಂದು ಕಂಗೆಡಿಸುವ ರೀತಿಯಲ್ಲಿ ಬದುಕು ಮುಂದೆ ಬಂದರೆ…?

 2. ನಿಮ್ಮ… ಸಹೃದಯ..ಪ್ರತಿ ಕ್ರಿಯೆಗೆ…ಧನ್ಯವಾದಗಳು.. ನಯನಮೇಡಂ.

 3. Anonymous says:

  ಇದು ಯಾವ ಕಾಲದ ಕಥೆ? ಐವತ್ತು ವರ್ಷದ ಹಿಂದೆಯೇ ಸಕೇಶಿಯರು ಅತ್ಯಂತನಸಂಪ್ರದಾಯಸ್ಥ ಮನೆಗಳಲ್ಲಿ ಇದ್ದರು

 4. ಇರಬಹುದು… ಕೆಲವು..ಮನೆಗಳಲ್ಲಿ… ಆ..ರೀತಿಯ.. ಪದ್ದತಿಯೂ.
  ಇತ್ತು..ಹೈ..ಪೈ…ಕಾಲದಲ್ಲೂ..
  ಸಂಪ್ರದಾಯವನ್ನು… ನೆಡಸುವವರು..ಇದ್ದಾರೆ..
  ಯಾವ..ಕಾಲದ.ಕಥೆಯೂ..ಅಲ್ಲ.ನಾನು..ನೋಡಿದ..ಅವರ..ಬಾಯಲ್ಲೇ..ಕೇಳದ..ಕಥೆ.

 5. ಶಂಕರಿ ಶರ್ಮ says:

  ಅಕಾಲದಲ್ಲಿ ಪತಿಯನ್ನು ಕಳೆದುಕೊಂಡ ಭಾಗ್ಯಳ ಮನಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿರುವಿರಿ…

 6. ಧನ್ಯವಾದಗಳು..ಶಂಕರಿ.. ಮೇಡಂ.

 7. Padma Anand says:

  ಕಳೆದ ಹಲವಾರು ವಾರಗಳು ” ಸುರಹೊನ್ನೆ”ಯನ್ನು ಓದುತ್ತಿದ್ದರೂ ಪ್ರತಿಕ್ರಿಯೆ ನೀಡಲಾಗಲಿಲ್ಲ.
  ಕಾದಂಬರಿಯ ತಿರುವುಗಳು ಭಾನಾತ್ಮಕವಾಗಿ ಮನಕಲಕುವಂತಿದೆ. ನಿಜಕ್ಕೂ ಭಾಗ್ಯಳ ನಿರ್ಧಾರ ಬೆಚ್ಚಿಬೀಳುವಂತಾಯಿತು.

 8. ಧನ್ಯವಾದಗಳು ಪದ್ಮಾ ಮೇಡಂ..
  ಓದುಗರ..ಪ್ರತಿ ಕ್ರಿಯೆಯೇ..ನಮ್ಮ… ಬರಹಕ್ಕೆ.. ಜೀವಾಳ…ಸ್ಪೂರ್ತಿ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: