ದೀಪಾವಳಿ-ಪಟಾಕಿ ಸಂಭ್ರಮ

Share Button

ಈ “ದೀಪಾವಳಿ” ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ- ಮನ ತುಂಬುತ್ತದೆ. ಒಂದು ಕಡೆ ದೀಪಗಳ ಸಾಲು ಸಾಲು….. ಮತ್ತೊಂದೆಡೆ ಭಾರಿ ಶಬ್ದಗಳೊಂದಿಗೆಪಟಾಕಿಗಳ ಕಾರುಬಾರು…. ಇವುಗಳ ಜೊತೆಗೆ ಭಕ್ತಿ- ಭಾವದ ಹಬ್ಬದ ಆಚರಣೆಗೆ ತಯಾರಾಗುವ ದೊಡ್ಡವರು….. ಹೊಸ ಹೊಸ ಬಟ್ಟೆಗಳೊಂದಿಗೆ, ಪಟಾಕಿಗಳ ಕನಸು ಕಾಣುವ ಚಿಕ್ಕವರು….!.

ದೀಪಾವಳಿ ಹಬ್ಬಕ್ಕಾಗಿ ಒಂದು ವಾರ ಮುಂಚಿತವಾಗಿಯೇ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಾರೆ. ಅವರವರ ಆರ್ಥಿಕ ಸ್ಥಿತಿಗನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಮತ್ತೂ ಕೆಲವರು “ಸಾಲ ಮಾಡಿ ಯಾದ್ರೂ ತುಪ್ಪ ತಿನ್ನು” ಎನ್ನುವಂತೆ ಹಬ್ಬಕ್ಕಾಗಿ ಸ್ವಲ್ಪ ಸಾಲ ಮಾಡಿ, ಅದ್ದೂರಿಯಾಗಿ ಆಚರಿಸುವವರು ಇದ್ದಾರೆ! ಯಾವುದೇ ಹಬ್ಬಗಳು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರನ್ನು ಒಟ್ಟುಗೂಡಿಸಿ, ಸಂಬಂಧಗಳನ್ನು ಗಟ್ಟಿಗೊಳಿಸಿ, ಒಂದೆಡೆ ಬೆರೆಯುವಂತೆ ಮಾಡುತ್ತವೆ. ಈ ಬೆಳಕಿನ ದೀಪಾವಳಿ ಮುಖ್ಯವಾಗಿ ಮಕ್ಕಳಿಗೆ ಪಟಾಕಿಗಳೇ ಸರ್ವಸ್ವ
ಎನ್ನುವಂತಾಗಿರುತ್ತದೆ!.

“ದೀಪಾವಳಿ” ಹಬ್ಬ ಬಂತೆದರೆ ನನಗೆ ನನ್ನ ಬಾಲ್ಯದ ವೈಭವದ ದಿನಗಳು ನೆನಪಾಗುತ್ತದೆ!. ನಾವು ಗೋಲಕ ಡಬ್ಬಿಯಲ್ಲಿ ಕೂಡಿಟ್ಟ ಒಂದಿಷ್ಟು ಕಾಸುಗಳನ್ನು ನಮ್ಮ ದೊಡ್ಡವರಿಗೆ ನೀಡಿ ಪಟಾಕಿ ತರಲು ಹೇಳುತ್ತಿದ್ದೆವು. ದೊಡ್ಡವರು ಕೂಡ ನಮಗೆ ತಿಳಿಯದಂತೆ ಮೊದಲೇ ಪಟಾಕಿಗಳನ್ನು ತಂದು ಇಡುತ್ತಿದ್ದರು. ಮೂರು ದಿನ ಆಚರಿಸುವ ಈ ದೀಪಾವಳಿಯಲ್ಲಿ ಮೂರು ರಾತ್ರಿಗಳು ಕೂಡ ಪಟಾಕಿಗಳನ್ನುಒಂದಲ್ಲ ಒಂದು ರೀತಿಯಲ್ಲಿ ಹೊಡೆಯುತ್ತಿದ್ದೆವು. ಒಮ್ಮೊಮ್ಮೆ ಪಟಾಕಿ ಹೊಡೆಯುವುದರಲ್ಲೂ ಕೂಡ ಪೈಪೋಟಿ ನಡೆಯುತ್ತಿತ್ತು . ಯಾರ ಮನೆಯ ಮುಂದೆ ಹೆಚ್ಚಾಗಿ ಪಟಾಕಿ ಹೊಡೆದ ನಂತರ ಬರುವ ಪೇಪರ್ ಇನ್ನಿತರ ಸಾಮಗ್ರಿಗಳು  ಇದ್ದಾಗ ಅವರು ಈ ವರ್ಷ ಹೆಚ್ಚು ಪಟಾಕಿ ಹೊಡೆದಿದ್ದಾರೆ ಎನ್ನುವ ಗತ್ತು ಗಮ್ಮತ್ತು ಕೂಡ ಇರುತ್ತಿತ್ತು! ಇದರಿಂದಾಗಿ ನಾವು ಒಂದು ರೀತಿಯಲ್ಲಿ ಪೈಪೋಟಿಯುತವಾಗಿ ಪಟಾಕಿಗಳನ್ನು ಹೆಚ್ಚೆಚ್ಚು ಹೊಡೆಯುತ್ತಿದ್ದೆವು.

ಮೊದಲೇ ಹೇಳಿದಂತೆ ದೊಡ್ಡವರು ಪಟಾಕಿ ತಂದು ಮೂರು ದಿನವು ಇಂತಿಷ್ಟೇ ಪಟಾಕಿ ಹೊಡೆಯಬೇಕೆಂದು ಹಂಚುತ್ತಿದ್ದರು. ನಾವುಗಳು ಮಾತ್ರ ಒಂದೇ ರಾತ್ರಿ ಪಟಾಕಿಗಳನ್ನು ಹೊಡೆದು ಮುಂದಿನ ಎರಡು ರಾತ್ರಿಗೆ ಯಾವ ರೀತಿಯಲ್ಲಿ ಪಟಾಕಿ ಹೊಡೆಯುವುದು ಎಂಬ ಯೋಚನೆಯೊಂದಿಗೆ ಲೆಕ್ಕಹಾಕುತ್ತಿದ್ದೆವು! ಒಮ್ಮೊಮ್ಮೆ ನಮ್ಮ ಸ್ನೇಹಿತರುಗಳಿಂದ…. ಸಹೋದರರುಗಳಿಂದ….. ಪಟಾಕಿಗಳನ್ನು ಕದ್ದಿದ್ದು ಉಂಟು!.  ಇವೆಲ್ಲ ನಮಗೆ ಮಾಮೂಲು ಎನ್ನುವಂತಾಗಿತ್ತು!.

ಈಗಲಂತೂ ನಗರ ಪ್ರದೇಶಗಳ ಕಡೆಗೆ ದೊಡ್ಡ ದೊಡ್ಡ ಪಟಾಕಿ ಅಂಗಡಿಗಳಿರುತ್ತವೆ. ನಮಗೆ ಕೈಗೆಟುಕುವ ದರದಿಂದ ಹಿಡಿದು ಅದ್ದೂರಿವರೆಗು ಸಹ ಪಟಾಕಿಗಳು ವರ್ಣ ರಂಜಿತವಾಗಿ, ಬಗೆ ಬಗೆಯ ಶಬ್ದಗಳೊಂದಿಗೆ, ಬಗೆ ಬಗೆಯ ಆಕಾರದಲ್ಲಿ ಪಟಾಕಿಗಳು ಸಿಗುತ್ತವೆ, ಜೊತೆಗೆ ಸಿಡಿಯುತ್ತವೆ!. ಆದರೆ ಆ ಕಾಲದಲ್ಲಿ ನಮಗೆ ಪಟಾಕಿಗಳು ಎಂದರೆ ಕೆಲವೇ ಕೆಲವು ಎನ್ನುವಂತಾಗಿತ್ತು. ಅದರಲ್ಲಿಯೂ ಮಕ್ಕಳು ಹೊಡೆಯುವ ಪಟಾಕಿಗಳು, ದೊಡ್ಡವರು ಹೊಡೆಯುವ ಪಟಾಕಿಗಳು ಎಂಬ ಎರಡು ವಿಭಾಗಗಳಿದ್ದವು.

ಮಕ್ಕಳಿಗೆ ಮಾತ್ರ  ಸೂರ್ ಸುರ್ ಬತ್ತಿ, ಹೂವಿನ ಕುಡಿಕೆ, ಕೃಷ್ಣಚಕ್ರ,ಚಿನಕುರಳಿ ಪಟಾಕಿ ಜೊತೆ ಇನ್ನೊಂದಿಷ್ಟು ಪಟಾಕಿ. ದೊಡ್ಡವರಿಗೆ ಲಕ್ಷ್ಮಿಪಟಾಕಿ, ಆನೆಪಟಾಕಿ, ಆಟಂ ಬಾಂಬ್ ಮುಂತಾದವು ಇರುತ್ತಿದ್ದವು. ಮೊದಲು ಚಿಕ್ಕವರು ಎಲ್ಲಾ ಪಟಾಕಿಗಳನ್ನು ಹೊಡೆದ ನಂತರ ಅವರು ಒಂದೆಡೆ ಕೂರಬೇಕಾಗಿತ್ತು. ಏಕೆಂದರೆ ದೊಡ್ಡ ಪಟಾಕಿಗಳನ್ನು ದೊಡ್ಡವರು ಹೊಡೆಯುವಾಗ ಅನಾಹುತವಾಗುತ್ತದೆ ಎನ್ನುವ ಭಯ ಒಂದೆಡೆ ಇದ್ದೇ ಇರುತ್ತಿತ್ತು.ಮುಖ್ಯವಾಗಿ ದೊಡ್ಡವರು ಮಕ್ಕಳು ಪಟಾಕಿ ಹೊಡೆಯುವಾಗ ಹತ್ತಿರದಲ್ಲೇ ಇದ್ದು ಜಾಗರೂಕತೆ ವಹಿಸುತ್ತಿದ್ದರು.

PC:Internet

ನಾವಂತೂ ಯಾವುದೇ ಪಟಾಕಿ ಸಿಡಿತದ ಶಬ್ದಕ್ಕೆ ಅಂಜದೇ, ಅಳುಕದೆ ಬೀದಿ ಬೀದಿ ಸುತ್ತಿ, ಎಲ್ಲೆಲ್ಲಿ ಹೆಚ್ಚೆಚ್ಚು ಪಟಾಕಿ ಹೊಡೆಯುತ್ತಾರೋ ಅಲ್ಲಿ ನಿಂತು ಪಟಾಕಿಗಳನ್ನು ಹೊಡೆಯುವುದನ್ನು ದೂರದಿಂದ ನೋಡಿ ಸಂಭ್ರಮ ಪಡುತ್ತಿದ್ದೆವು!. ನಂತರ ತಡವಾಗಿ ಮನೆಗೆ ಬಂದು ಬೈಸಿಕೊಂಡಿದ್ದು ಉಂಟು!!.  ನಮ್ಮ ಸ್ನೇಹಿತರುಗಳು….. ಅಕ್ಕಪಕ್ಕದ ಮನೆಯವರು….. ತಾವು ತಂದಿದ್ದ ಹೆಚ್ಚೆಚ್ಚು ಪಟಾಕಿಗಳನ್ನು ಹೊಡೆಯುವಾಗ ನಮ್ಮಗಳನ್ನು ಕೂಡ  ಕರೆಯುತ್ತಿದ್ದರು. ನಮಗೊಂದುಷ್ಟು ಪಟಾಕಿಗಳನ್ನು ಕೊಡುತ್ತಿದ್ದರು.

ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಚಿನಕುರಳಿ ಪಟಾಕಿಗಳು ಇರುತ್ತಿದ್ದವು. ಅವನ್ನೆಲ್ಲ ಕೆಲವರು ಕೈಯಲ್ಲೇ ನೆಲಕ್ಕೆ ಅಥವಾ ಗೋಡೆಗೆ ಉಜ್ಜುವುದರ ಮೂಲಕ ಪಟ್ ಎನ್ನುವ ಶಬ್ದ ಬರುವಂತೆ ಮಾಡುತ್ತಿದ್ದೆವು. ಬರು ಬರುತ್ತಾ ಅದೇ ಚಿನಕುರುಳಿ ಪಟಾಕಿ ಟೇಪ್ಗಳ ಮೂಲಕ ಬಂದು ಅವನ್ನು ಗನ್ ಗಳಿಗೆ ಹಾಕಿಕೊಂಡು ಪಟ್ಪಟ್… ಪಟ್ ಪಟ್ ಪಟ್ ಎನ್ನುವ  ರೀತಿಯ ಶಬ್ದವು ಕೂಡ ನಮಗೆ ಆನಂದ ನೀಡುತ್ತಿತ್ತು.

ಈ ಪಟಾಕಿ ಹೊಡೆಯುವ ಸಂಭ್ರಮವು ಅನೇಕ ಚಲನಚಿತ್ರಗಳಲ್ಲಿ ಕೂಡ ನಾವು ನೋಡಿದ್ದೇವೆ. ದೊಡ್ಡವರು ಕೂಡ ಮಕ್ಕಳಾಗಿ ಬಿಡುತ್ತಾರೆ. ಅದರಲ್ಲೂ ಡಾ ರಾಜಕುಮಾರ್ ರವರು ಪುಟ್ಟ ಮಗುವಿನೊಂದಿಗೆ ನಟಿಸಿರುವ ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ ರವರು ಹಾಡಿರುವ  “ಸಿಹಿಮುತ್ತು ಸಿಹಿಮುತ್ತು…” ಈ ಗೀತೆಯ ಮೂಲಕ ದೀಪಾವಳಿ ಹಬ್ಬವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿದ್ದಾರೆ. ಅಲ್ಲಿ ಬರುವ ಹಾಡಿನ ಒಂದು ಪ್ಯಾರಾದಲ್ಲಿ “ಚಿನಕುರುಳಿ ಮಾತಿನಲ್ಲಿ…… ಹೂಬಾಣ ನೋಟದಲ್ಲಿ…… ಕೋಪದಿ ಸಿಡಿದರೆ….. ಆನೆ ಪಟಾಕಿ….!.”- ಈ ಸಾಲುಗಳು ನೆನಪಾಗುತ್ತವೆ.

ಇಷ್ಟೆಲ್ಲಾ ಪಟಾಕಿಗಳೊಂದಿಗೆ ನಮ್ಮಗಳ ಕಾರುಬಾರು ಇದ್ದರೂ ಕೂಡ ನಮಗೆ ಈ ಪಟಾಕಿಗಳು ಒಂದಿಷ್ಟು ಕೂಡ ತೃಪ್ತಿ ತರುತ್ತಿರಲಿಲ್ಲ!. ಮತ್ತೊಂದಿಷ್ಟು ಪಟಾಕಿ ಹೊಡೆಯೋಣ ಎನ್ನು ಗುಂಗಿನಲ್ಲೇ ನಾವು ಸದಾ  ಇರುತ್ತಿದ್ದೆವು!.  ಮೂರು ದಿನದಲ್ಲಿ ಪ್ರತಿದಿನದ ರಾತ್ರಿ ಪಟಾಕಿ ಹೊಡೆದ ನಂತರ ಬೆಳಿಗ್ಗೆ ಬೇಗ ಬೇಗ ಎದ್ದು ನಾವು  ಪಟಾಕಿ ಹೊಡೆದ ಸ್ಥಳಗಳಿಗೆ ಹೋಗಿ ಅಳಿದುಳಿದ, ಸಿಡಿಯದೇ ಇದ್ದ ಕಳ್ಳ ಪಟಾಕಿಗಳನ್ನೆಲ್ಲ ಒಂದೆಡೆ ಸಂಗ್ರಹಿಸುತ್ತಿದ್ದೆವು! ಅವನ್ನೆಲ್ಲಾ ಜೋಪಾನವಾಗಿಟ್ಟುಕೊಂಡು ನಮ್ಮ ಮನೆಯಿಂದ ಸ್ವಲ್ಪ ಹೊರಗಡೆ ಹೋಗಿ ಒಂದೆಡೆ ಪೇಪರ್ ಮೇಲೆ ಹಾಕಿ, ಬೆಂಕಿ ಹಚ್ಚಿದಾಗ ಬರುವ ಚಿಟಪಟ ಎನ್ನುವ ಒಂದು ರೀತಿಯಲ್ಲಿ ಶಬ್ದ… ಒಮ್ಮೊಮ್ಮೆ ಡಮ್ ಎನ್ನುವ ಶಬ್ದ… ನಮಗೆ ತುಂಬಾ ತುಂಬಾ ಸಂತಸ ನೀಡುತ್ತಿತ್ತು!. ಮಾಮೂಲು ಪಟಾಕಿ ಹೊಡೆಯುವುದಕ್ಕಿಂತಲೂ ಕೂಡ ಈ ಒಂದು ಘಟನೆ ನಮ್ಮ ಸಂಭ್ರಮವನ್ನು ಹೆಚ್ಚಿಸುತ್ತಿತ್ತು. ನಂತರ ನಮ್ಮ ಕೈಗಳೆಲ್ಲಾ ಬಿಳಿ ಮಿಶ್ರಿತ ಮದ್ದು ಅಂಟಿಕೊಂಡಿದ್ದರಿಂದ ಮನೆಯಲ್ಲಿ ಮತ್ತೆ ಎಂದಿನಂತೆ ಬೈಗುಳ….! “ಪಟಾಕಿ” ಎಂಬ ಸಂಭ್ರಮದ ನಡುವೆ ನಮಗೆ ಅದೆಲ್ಲಾ ಮರೆತೇ ಹೋಗುತ್ತಿತ್ತು!.

ವರ್ಷಕ್ಕೆ ಮೂರು ದಿನ ಮಾತ್ರ ಪಟಾಕಿಗಳನ್ನು ಹೊಡೆಯುತ್ತಿದ್ದ ಆ ಸಂಭ್ರಮವೆಲ್ಲಿ?!. ಈಗ ಎಲ್ಲಾ ಹಬ್ಬಗಳಿಗೆ, ದೇವರ ಉತ್ಸವಗಳಿಗೆ, ಹುಟ್ಟುಹಬ್ಬ ಇನ್ನಿತರ ಆಚರಣೆಗಳಲ್ಲಿ ಕೂಡ ಪಟಾಕಿ ನಮ್ಮೊಟ್ಟಿಗೆ ಇದ್ದರೂ ಕೂಡ ಆ ಸಂಭ್ರಮ ಇವತ್ತು ಸಿಗುತ್ತಿಲ್ಲ. ನಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಬಾಕ್ಸ್ ಗಳಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ತೆಗೆದುಕೊಟ್ಟರು ಸಹ ಪಟಾಕಿಯನ್ನು ಹೊಡೆಯುವ ಸಂಭ್ರಮವಿಲ್ಲ. ದೊಡ್ಡವರು ಕೂಡ ಆ ಪಟಾಕಿ ಹೊಡೆಯುವ ಮಕ್ಕಳ  ಕ್ಷಣಗಳನ್ನೂ ಸವಿಯಲು ಕೂಡ ಸಮಯವಿಲ್ಲ. ಇವೆಲ್ಲ ಕಾಣೆಯಾಗುತ್ತಿವೆ!.

ಪರಿಸ್ಥಿತಿ ಹೇಗಾಗಿದೆ ಎಂದರೆ ಪೈಪೋಟಿ ಯಾಗಿ ಪಟಾಕಿಗಳನ್ನು ಚೀಟಿ ಹಾಕುವುದರ ಮೂಲಕ ಕೊಂಡುಕೊಂಡು ಪ್ರತಿ ಮನೆಯಲ್ಲೂ, ಪ್ರತಿ ಬೀದಿಯಲ್ಲಿ ಕೂಡ ಪಟಾಕಿಗಳನ್ನು ಹೆಚ್ಚೆಚ್ಚು ಹೊಡೆಯುವುದೇ ಒಂದು ರೀತಿಯಲ್ಲಿ ಹಬ್ಬವಾಗಿದೆ!. ನಂತರದಲ್ಲಿ ರಾಸಾಯನಿಕ ಯುಕ್ತ ಪಟಾಕಿಗಳ ಅವಶೇಷಗಳು ಕೆರೆ, ಕಾಲುವೆ,  ನದಿ ಮೂಲಕ ಸೇರಿ ಮತ್ತೆ ನಾವು ಆ ಮಲಿನ ಯುಕ್ತ ನೀರನ್ನು ಬಳಸುವಂತೆ ಆಗುತ್ತಿದೆ. ಜೊತೆಗೆ ಭೂಮಿಯ ಅಂತರಂಗ ಸೇರುತ್ತಿರುವುದು ಒಂದೆಡೆಯಾದರೆ,ಮತ್ತೊಂದೆಡೆ ಹೆಚ್ಚು ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ಯಾವುದೇ ರೀತಿಯ ಮುಂಜಾಗ್ರತೆ ಕ್ರಮವನ್ನು ಅನುಸರಿಸದೆ ದೊಡ್ಡ ದೊಡ್ಡ ಪಟಾಕಿಗಳನ್ನು… ಅಟಂಬಾಂಬ್ಗಳನ್ನು ಸಿಡಿಸುವುದು ಅದು ಸಿಡಿಯಲಿಲ್ಲ ಎಂದು ಹತ್ತಿರ ಹೋಗಿ ನೋಡುವುದು ನಂತರ ಡಮ್ ಎಂದು ಸಿಡಿಯುವುದು ಇದರಿಂದಾಗಿ ಅನೇಕ ಅನಾಹುತಗಳು ಉಂಟಾಗಿವೆ. ಎಷ್ಟೋ ಮಂದಿ ದೊಡ್ಡ ದೊಡ್ಡ ಪಟಾಕಿಗಳನ್ನು ಕೈಯಲ್ಲಿ ಹಿಡಿದು ಸಿಡಿಸುತ್ತಾರೆ. ಮೈ ಕೈಗಳಿಗೆ ನೋವು ಮಾಡಿ ಕೊಳ್ಳುವುದರ ಜೊತೆಗೆ, ಕಣ್ಣು ದೃಷ್ಟಿ ಕಳೆದುಕೊಂಡವರು ಹೆಚ್ಚಾಗುತ್ತಿದ್ದಾರೆ. ಆ ಸಮಯದಲ್ಲಿ ದೊಡ್ಡವರಾದವರು ನಾವು ಮುಂಜಾಗ್ರತೆ ಕ್ರಮ ವಹಿಸಿ ಮಕ್ಕಳು ಪಟಾಕಿಗಳನ್ನು ಹೊಡೆಯುವಾಗ ನಾವು ಹತ್ತಿರದಲ್ಲೇ ಇದ್ದುಕೊಂಡು ಅವರಿಗೆ ನೆರವಾಗಬೇಕು.

ನಗರ ಪ್ರದೇಶಗಳಲ್ಲಿ ನಿಗದಿತ ಸ್ಥಳದಲ್ಲೇ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಆ ಸಂದರ್ಭದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಕೂಡ ವಹಿಸುತ್ತಿದೆ. ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಲು ಎಲ್ಲೆಡೆ ಕರೆ ನೀಡುತ್ತಿದ್ದರು ಕೂಡ ಈ ಪಟಾಕಿಗಳ ಹಾವಳಿಯಿಂದ ಪರಿಸರ ಮಾಲಿನ್ಯ ಹಾಳಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿತ್ಯ ರಾತ್ರಿ 8 ರಿಂದ 10ರವರೆಗೆ ಎರಡು ಗಂಟೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡುವ ಮೂಲಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ  (ಕೆಎಸ್ ಪಿಸಿಬಿ) ಸುತ್ತೋಲೆಯನ್ನು ಹೊರಡಿಸಿದೆ.

ಪ್ರತಿಯೊಂದು ಹಬ್ಬಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮ ತರುತ್ತವೆ ನಿಜ. ಆದರೆ ಆ ಹಬ್ಬದ ಆಚರಣೆಯ ನೆಪದಲ್ಲಿ ನಮ್ಮ ಸಂಸ್ಕೃತಿಗೆ….. ನಮ್ಮ ಪರಿಸರಕ್ಕೆ….. ಯಾವುದೇ ರೀತಿಯಲ್ಲಿ ಧಕ್ಕೆ ಆಗದಂತೆ ನಾವೆಲ್ಲರೂ ಕೂಡ ನೋಡಿಕೊಳ್ಳಬೇಕು. ಇದು ನಮ್ಮ ಆದ್ಯ ಕರ್ತವ್ಯವಾಗಬೇಕು.

ಈ ದೀಪಾವಳಿ ಹಬ್ಬ ಎಲ್ಲರ ಮನೆ- ಮನಗಳನ್ನು ಬೆಳಗಲಿ. ಜೊತೆಗೆ ನಾವು ಪಟಾಕಿಗಳನ್ನು ಹೊಡೆಯುವಾಗ ಹೆಚ್ಚು ಮುಂಜಾಗ್ರತಾ ಕ್ರಮವನ್ನು ವಹಿಸೋಣ. ವಯಸ್ಸಾದವರು…. ಅನಾರೋಗ್ಯದಿಂದ ಇರುವವರು…. ನಮ್ಮ ಸುತ್ತ ಮುತ್ತ ಇದ್ದೇ ಇರುತ್ತಾರೆ.  ಜೊತೆಗೆ ಅಕ್ಕಪಕ್ಕದ ಮನೆಗಳಿಗೆ, ಬಡಾವಣೆಯವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದೆ, ನಿಗದಿತ ಸಮಯದಲ್ಲಿ….. ನಿಗದಿತ ಸ್ಥಳದಲ್ಲಿ…. ಪಟಾಕಿಗಳನ್ನು ಹಚ್ಚೋಣ. ನಮ್ಮ ಪರಿಸರವನ್ನುಕಾಪಾಡೋಣ.

-ಕಾಳಿಹುಂಡಿ ಶಿವಕುಮಾರ್ ಮೈಸೂರು.

5 Responses

  1. ದೀಪಾವಳಿ..ಹಬ್ಬದ… ಆಚರಣೆ….ತಮ್ಮ..ಬಾಲ್ಯದ.. ನೆನಪುಗಳನ್ನು..ಹಂಚಿಕೊಳ್ಳುತ್ತಲೇ….ವಾಸ್ತವಿಕ..
    ಬದುಕಿನ…ಚಿತ್ರ ಣ..ಪರಿಣಾಮ…ಪರಿಸರ.. ಕಾಳಜಿ.
    ಇವೆಲ್ಲವೂ.ತಮ್ಮ.. ಲೇಖನದ ಮೂಲಕ..ಅನಾವರಣ.
    ಮಾಡಿರುವ..ರೀತಿ.. ಸೊಗಸಾಗಿ ದೆ..ಧನ್ಯವಾದಗಳು.ಸಾರ್.

    .

  2. Padma Anand says:

    ಹಳೆಯ ದಿನಗಳ ಸುಂದರ ನೆನಪುಗಳೊಂದಿಗೆ ಮನವನ್ನು ಚಿಂತನೆಗೆ ಹಚ್ಚುವ ದೀಪಾವಳಿಯ ಕುರಿತಾದ ಚಂದದ ಲೇಖನ. ಅಭಿನಂದನೆಗಳು.

  3. Anonymous says:

    ಚೆನ್ನಾಗಿದೆ..!
    ಲೇಖಕರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
    ಹಳ್ಳಿಯ ಜೊತೆಗೆ ನಗರ ಪ್ರದೇಶದ ಹಬ್ಬದಾಚರಣೆಯನ್ನು ತುಲನಾತ್ಮಕವಾಗಿ ಬರೆದಿದ್ದಾರೆ.
    ಅಭಿನಂದನೆಗಳು.

  4. ಚಂಪಾಶಿವಣ್ಣ says:

    ದೀಪಾವಳಿ ಕುರಿತ ಲೇಖನ ಚೆನ್ನಾಗಿ ಮೂಡಿ ಬಂದಿದೆ.ಅಭಿನಂನೆಗಳು

  5. ಶಂಕರಿ ಶರ್ಮ says:

    ಬಾಲ್ಯದ ನೆನಪುಗಳನ್ನು ಹೊತ್ತು ಬಂದ ಸಕಾಲಿಕ ಲೇಖನ ಬಹಳ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: