ಕಾದಂಬರಿ: ನೆರಳು…ಕಿರಣ 41

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಇದುವರೆಗೆ ಭಾಗ್ಯಳಿಗೆ ತನ್ನ ಗಂಡನ ಬಗ್ಗೆ ಇದ್ದ ಗೌರವಾದರಗಳು ಒಮ್ಮೆಗೇ ಕೊಚ್ಚಿಹೋಗಿದ್ದವು. ಬೇರೆಯವರಿಗೆ ಜಾತಕಗಳನ್ನು ಬರೆದುಕೊಟ್ಟು ಅದರಲ್ಲಿನ ದೋಷಗಳಿಗೆ ಸೂಕ್ತ ಪರಿಹಾರ ಸೂಚಿಸುತ್ತಿದ್ದವರಿಗೆ, ಕುಲದೈವದ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದವರ ವಿವೇಚನೆ ಇಷ್ಟೊಂದು ಬಲಹೀನವೇ? ಒಂದೇ ಒಂದು ಸಾರಿ ಎಲ್ಲರೊಡನೆ, ಬೇಡ ನನ್ನೊಡನೆ ಈ ವಿಷಯವನ್ನು ಹೇಳಿದ್ದರೆ ಎಷ್ಟೋ ಚೆನ್ನಾಗಿತ್ತು. ಭಟ್ಟರು ಅಳಿಯಂದಿರೇ ಕೂಸಿನ ಜಾತಕ ಬರೆದಿರಾ? ಎಂದು ಕೇಳಿದ್ದಕ್ಕೆ ಇಲ್ಲಾ ಮಾವಯ್ಯಾ ನಾಮಕರಣಕ್ಕೆ ಎಷ್ಟುಬೇಕೋ ಅಷ್ಟನ್ನು ಗುರುತು ಹಾಕಿದ್ದೇನೆ. ಆ ನಂತರ ನಿಧಾನವಾಗಿ ನೋಡಿ ಬರೆಯುತ್ತೇನೆಂದವರು ನಂತರದ ದಿನಗಳಲ್ಲೂ ಪುರುಸೊತ್ತಾಗುತ್ತಿಲ್ಲ, ಬರೆಯುತ್ತೇನೆಂದು ಹಾರಿಕೆಯ ಉತ್ತರವನ್ನು ಕೊಡುತ್ತಲೇ ಬಾರದ ಊರಿಗೆ ನಡೆದೇಬಿಟ್ಟರು. ಹೂಂ ತಮ್ಮ ಮನದ ವ್ಯಾಕುಲವನ್ನು ಬಿಚ್ಚಿಟ್ಟಿದ್ದರೆ ಏನಾಗುತ್ತಿತ್ತು. ಜ್ಯೋತಿಷ್ಯದಲ್ಲಿ ನಂಬಿಕೆ ಇರಬೇಕು ನಿಜ, ಆದರೆ ಅದನ್ನೇ ವೇದವಾಕ್ಯದಂತೆ ಘಳಿಗೆ, ತಿಥಿ, ನಕ್ಷತ್ರ, ವಾರ ಸಮೇತ ನಂಬುವುದುಂಟೇ. ಮಗುವು ಜನಿಸಿದ ಘಳಿಗೆಯನ್ನು ಅಷ್ಟೊಂದು ಕರಾರುವಾಕ್ಕಾಗಿ ಯಾರು ದಾಖಲಿಸಿರುತ್ತಾರೆ. ಇಂತದ್ದೊಂದು ಅನುಮಾನವೂ ಬರಲಿಲ್ಲವೇ? ಮಗುವಿನ ಹುಟ್ಟನ್ನೇ ಕೊನೆಗಾಣಿಸುವ ಹೀನ ಯೋಚನೆ ಮಾಡಿದರಲ್ಲ. ನಕಾರಾತ್ಮಕ ದೃಷ್ಟಿಕೋನದಿಂದ ನೋಡಿ ಮುಂದಿನ ಸಂತಸದ ಆಗುಹೋಗುಗಳನ್ನು ಬಲಿಕೊಟ್ಟರಲ್ಲಾ. ಎಂಥಹ ಬುದ್ಧಿವಂತ ಮೂರ್ಖರು. ಎಂದು ದುಃಖ, ನಿರಾಸೆ, ಆಕ್ರೋಶ ಎಲ್ಲವೂ ಒಟ್ಟಿಗೇ ಅವಳನ್ನು ಆವರಿಸಿದ್ದವು.

ದಿಗ್ಗನೆದ್ದು ಬಾಗಿಲು ತೆಗೆದುಕೊಂಡು ಸದ್ದಾಗದಂತೆ ಮಹಡಿಯಲ್ಲಿದ್ದ ರೂಮಿಗೆ ಬಂದಳು. ಎಲ್ಲ ಪುಸ್ತಕಗಳನ್ನು ಬಿಡಿಸಿ ಬಿಡಿಸಿ ನೋಡಿದಳು, ಅಲ್ಲಿದ್ದ ಕೆಲವು ಗಂಟುಗಳನ್ನು ಬಿಚ್ಚಿ ತಡಕಾಡಿದಳು. ಎಲ್ಲಿಯೂ ಯಾವುದೇ ತಾಮ್ರಪಟವೂ ಸಿಗಲಿಲ್ಲ. ಸೀತಮ್ಮ, ಜೋಯಿಸರು, ಶ್ರೀನಿವಾಸ ಇವರ ಜಾತಕಗಳಾವುವೂ ಅವುಗಳಲ್ಲಿರಲಿಲ್ಲ. ಹಾಗಾದರೆ ಅವೆಲ್ಲಾ ಎಲ್ಲಿ ಹೋದವು. ಎಷ್ಟರ ಮಟ್ಟಿಗೆ ತನ್ನ ಗಂಡ ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಬಹಳ ಹಿಂದೆ ಮಾವಯ್ಯನವರ ಮುತ್ತಜ್ಜಿ ಅವರ ಪತಿಯ ಮೇಲಿನ ಸಿಟ್ಟಿಗೆ ಮಾಡಿದಂತೆ ಕಡತಗಳನ್ನೆಲ್ಲ ಬೆಂಕಿಗೆ ಆಹುತಿ ಮಾಡಿಬಿಟ್ಟರೆ? ಮತ್ತೆ ಇವುಗಳನ್ನೆಲ್ಲ ಯಾಕಿಟ್ಟಿದ್ದಾರೆ? ಅವುಗಳನ್ನು ತೆಗೆದು ಜೋಡಿಸಿಡುವಾಗ ಇದ್ದ ಪೂಜ್ಯ ಭಾವನೆ ಈಗ ಹಾಳಾಗಿತ್ತು. ಅವೆಲ್ಲವನ್ನೂ ಗುಡ್ಡೆ ಹಾಕಿ ಬೆಂಕಿಹಚ್ಚುವಷ್ಟು ರೋಷ ಉಕ್ಕಿಬಂತು. ಛೇ..ಛೇ.. ಬೇಡ ಅವು ಮನೆತನದವರ ತುತ್ತಿನ ಚೀಲ ತುಂಬಿಸಲು ಉದ್ಯೋಗ ಕೊಟ್ಟಿವೆ. ಅಷ್ಟೇ ಅಲ್ಲ ಎಷ್ಟೋ ಜನರ ಕಣ್ಣೀರನ್ನು ಒರೆಸಿವೆ. ಯಾವುದೋ ನಂಬಿಕೆಗೆ ಬದ್ಧರಾಗಿ ಅವರೆಲ್ಲರ ಬದುಕನ್ನು ಮುನ್ನಡೆಸಲು ಪ್ರೇರೇಪಿಸಿವೆ. ನನ್ನ ಹಣೆಯಬರಹ ಖೊಟ್ಟಿ ಅಷ್ಟೆ ಎಂದು ಕಿತ್ತುಹಾಕಿದವುಗಳನ್ನೆಲ್ಲ ಮತ್ತೆ ಯಥಾಸ್ಥಾನದಲ್ಲಿ ಜೋಡಿಸಿದಳು ಬಾಗ್ಯ.ತಮ್ಮ ಅಳಿಯನ ಬಗ್ಗೆ ಅತಿಯಾದ ಪ್ರೀತಿ ವಾತ್ಸಲ್ಯ ಗೌರವ ಹೊಂದಿದ್ದ ತನ್ನ ಹೆತ್ತವರ ಮುಂದೆ ಈ ಸಂಗತಿಯನ್ನು ಹೇಳಬಾರದು. ಹಾಗೇ ಅವರಂತೆ ಈ ಪೆಡಂಭೂತವನ್ನು ನನ್ನೊಳಗೆ ಹೊತ್ತುಕೊಂಡರೆ ನಾನೂ ನನ್ನವರ ದಾರಿಯನ್ನೇ ಹಿಡಿಯಬೇಕಾಗುತ್ತದೆ. ನಂತರ ನನ್ನ ಮಗಳು ಪೂರ್ತಿ ಅನಾಥೆಯಾಗುತ್ತಾಳೆ. ಹಾಗಾಗಲು ಬಿಡಬಾರದು. ಎಂದು ನಿರ್ಧರಿಸಿ ಅ ಡೈರಿಯನ್ನು ಬೆಂಕಿಗೆ ಆಹುತಿ ಮಾಡಿದಳು. ಏನೂ ಆಗಿಯೇ ಇಲ್ಲವೇನೋ ಎಂಬತೆ ತನ್ನ ಕೆಲಸಕಾರ್ಯಗಳನ್ನು ಮುಂದುವರೆಸಿದ್ದಳು. ಇಂದು ಮತ್ತದೇ ಸುದ್ಧಿ ಎತ್ತಿದಾಗ ಅವಳೊಳಗಿದ್ದ ದಾವಾನಲ ಸ್ಫೋಟಗೊಂಡಿತ್ತು. ಪಾಪ ಅಪ್ಪನಿಗೆ ಹಾಗೆ ಹೇಳಬಾರದಾಗಿತ್ತು. ನನಗಿಂತ ಹೆಚ್ಚಾಗಿ ಅವರೇ ನೋವನ್ನು ಅನುಭವಿಸುತ್ತಿರುವವರು. ಬದುಕನ್ನು ಹಗುರವಾಗಿ ತೆಗೆದುಕೊಳ್ಳುತ್ತಿದ್ದ ಅಪ್ಪ ಅಮ್ಮನ ನೆರಳಿನಲ್ಲೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಎಷ್ಟೋ ಬದಲಾಗಿದ್ದಾರೆ. ಇನ್ನೆಂದೂ ಅವರಿಗೆ ಮುಖಕ್ಕೆ ಹೊಡೆದಂತೆ ಉತ್ತರಿಸಬಾರದು. ನಾಳೆಯೇ ಅವರಲ್ಲಿ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದಳು ಭಾಗ್ಯ. ಇದರಿಂದ ಅವಳಿಗೆ ಏನೋ ನೆಮ್ಮದಿ ದೊರಕಿದಂತಾಯ್ತು. ಅಲ್ಲಿಯೇ ಹಾಕಿದ್ದ ಮಂದಲಿಗೆಯ ಮೇಲೆ ಮಲಗಿ ನಿದ್ರೆಗೆ ಜಾರಿದಳು.

ಮನೆಯ ಹಿರಿತಲೆಗಳು ಮತ್ತು ಅವರ ಪುತ್ರ ಕಾಲವಾದ ಮೂರುವರ್ಷಗಳ ನಂತರ ಪೂಜೆಪುನಸ್ಕಾರ, ಔತಣಕೂಟ ನಡೆದದ್ದು ಒಂದು ರೀತಿಯ ಬಿಗುವಿನ ವಾತಾವರಣವನ್ನು ಸಡಿಲಗೊಳಿಸಿದಂತಾಯಿತು. ಬಂಧುಬಳಗ, ಆತ್ಮೀಯರ ಆಗಮನದಿಂದ ಮೈಮನಕ್ಕೆ ಉಲ್ಲಾಸ ತಂದಿತ್ತು. ಬಂದವರೆಲ್ಲ ಲಕ್ಷ್ಮಿಯವರ ಉತ್ಸಾಹ ಉಮೇದನ್ನು ಕೊಂಡಾಡಿ ನೀಡಿದ ಆತಿಥ್ಯ ಸ್ವೀಕರಿಸಿ ಮಗುವಿಗೆ ಆಶೀರ್ವದಿಸಿ ಭಾಗ್ಯಳಿಗೆ ಧೈರ್ಯ ತುಂಬಿ ತೆರಳಿದರು.

ಚೆನ್ನಾಗಿ ನಡೆದರೆ ಮುಂದುವರೆಯುವುದು ಇಲ್ಲವಾದರೆ ಮುಕ್ತಾಯ ಹಾಡಿದರಾಯಿತೆಂದು ಪ್ರಾರಂಭಿಸಿದ ಲಕ್ಷ್ಮಿಯ ‘ಸಿರಿ ಕಸೂತಿ ಸೆಂಟರ್’ ದಿನೇದಿನೇ ವೃದ್ಧಿಸುತ್ತಾ ಲಕ್ಷ್ಮಿಯು ಊಹಿಸಿದ್ದಕ್ಕಿಂತ ಹೆಚ್ಚಿನ ಬೆಂಬಲ ದೊರಕಿತ್ತು. ಸುತ್ತಮುತ್ತಲಿನ ಅಂಗಡಿಯವರು ಪರಿಕರಗಳನ್ನು ತಾವೇ ಒದಗಿಸಿ ಉಡುಪುಗಳಿಗೆ, ಕುಷನ್ಗಳಿಗೆ ಟೇಬಲ್‌ಕ್ಲಾತ್, ಬೆಡ್‌ಷೀಟ್, ಇತ್ಯಾದಿಗಳಿಗೆ ಕಸೂತಿ ಹಾಕಿಕೊಡಲು ಕೋರುತ್ತಿದ್ದರು. ಅದರ ಮೂಲಕ ಕೆಲಸಕ್ಕೆ ಉತ್ತೇಜನ ಸಿಗುವಂತೆ ಮಾಡುತ್ತಿದ್ದರು. ಜೊತೆಗೆ ಕೆಲವು ಕ್ರಿಷ್ಚಿಯನ್ ಮಿಷನರಿಗಳಿಂದ ಕೌದಿಹೊಲಿದು ಕೊಡುವ ಬೇಡಿಕೆಗಳು ಸೇರಿಕೊಂಡವು. ಮಧ್ಯಾನ್ಹ ಕಾಡುಹರಟೆಯಲ್ಲಿ ಕಾಲಕಳೆಯುತ್ತಿದ್ದ ಮಹಿಳೆಯರಿಗೆಲ್ಲ ಮಾಡಲು ಉಪಯುಕ್ತ ಕೆಲಸ ಸಿಕ್ಕಿ ಅದರ ಬದಲಿಗೆ ಕೈಯಲ್ಲಿ ನಾಲ್ಕು ಕಾಸು ಸೇರುವಂತಾಗಿದ್ದು ಕಂಡು ಅವರ ಮನೆಯವರಿಗೆ ಲಕ್ಷ್ಮಿಯ ಮೇಲೆ ಗೌರವಾದರಗಳು ಹೆಚ್ಚಿದವು. ಮೌನವಾಗಿದ್ದ ಮನೆ ಈಗ ಮತ್ತೆ ನವಚೈತನ್ಯಪಡೆಯಿತು. ಸದಾಕಾಲ ಮನೆಯಲ್ಲಿ ಚಟುವಟಿಕೆ, ಬಂದು ಹೋಗುವವರ, ಅನುಭವಗಳ ಬುತ್ತಿಯ ಹಂಚಿಕೆಗಳಿಂದ ಭಾಗ್ಯಳಿಗೂ ತಾನು ಒಂಟಿಯೆಂದೆನ್ನಿಸುವುದು ದೂರಾಯಿತು. ವರ್ಷಗಳು ಉರುಳಿದಂತೆ ಭಾಗ್ಯಳ ಮಗಳು ಸಿರಿ ಪ್ರಾಥಮಿಕ ಶಾಲೆಯ ಹಂತ ಮುಗಿಸಿ ಹಿರಿಯ ಪ್ರೈಮರಿಗೆ ಕಾಲಿಟ್ಟಳು. ಹಿಂದೊಮ್ಮೆ ಭಾಗ್ಯಳಿಗೆ ಮಕ್ಕಳಿಲ್ಲ ಎಂಬ ಕೊರತೆಯಾಗಿದ್ದು ಬಿಟ್ಟರೆ ಮಿಕ್ಕೆಲ್ಲ ಅನುಕೂಲಗಳಿದ್ದಂತೆ ಅವಳ ಮಗಳು ಸಿರಿಗೆ ಅಪ್ಪನಿಲ್ಲ ಎಂಬ ಕೊರತೆಯಿದ್ದರೂ ಮಿಕ್ಕೆಲ್ಲ ಸೌಕರ್ಯಗಳು ಲಭಿಸಿದ್ದವು. ತಂದೆಯ ನೆನಪು, ಮತ್ತು ಅಜ್ಜಿತಾತನ ಇರುವಿಕೆಯ ಅರಿವಿಲ್ಲದ ಆ ಮಗುವಿಗೆ ಮನೆಯಲ್ಲಿದ್ದ ಭಟ್ಟರು, ಲಕ್ಷ್ಮಿಯೇ ಅಜ್ಜಿ ತಾತ. ಕೇಶವಯ್ಯ, ರಾಧಮ್ಮನವರು ದೊಡ್ಡ ತಾತ, ಅಜ್ಜಿ, ಭಾವನಾ ಚಿಕ್ಕಮ್ಮ, ಸುಬ್ಬು ಚಿಕ್ಕಪ್ಪ , ಅವರ ಮಕ್ಕಳು ಸುಹಾಸ, ಸುಧೀರ ಅಣ್ಣಂದಿರ ಸ್ಥಾನ ತುಂಬಿದ್ದರು. ಮನೆಯಲ್ಲಿದ್ದ ನಾರಾಣಪ್ಪನವರನ್ನು ತಮ್ಮಮ್ಮನಂತೆ ನಾಣಜ್ಜನೆಂದು ಕರೆಯುತ್ತಿದ್ದಳು. ಅವರೆಂದರೆ ಅವಳಿಗೆ ಪಂಚಪ್ರಾಣ. ಅವರು ಹೇಳಿಕೊಡುತ್ತಿದ್ದ ದೇವರನಾಮ, ಕಥೆಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದಳು. ಹಾಗೇ ಕಲಿತುಕೊಂಡು ಬೇರೆಯವರ ಮುಂದೆ ಹೇಳುತ್ತಿದ್ದಳು. ಚಿಕ್ಕ ಚಿಕ್ಕಮ್ಮಂದಿರು ಅವರ ಮಕ್ಕಳೊಡನೆ ಬಂದಾಗ ಅವರೊಡನೆ ಖುಷಿಯಿಂದ ಆಟವಾಡುತ್ತಿದ್ದಳು. ಆದರೆ ಅಷ್ಟೊಂದು ಒಡನಾಟವಿರಲಿಲ್ಲ. ಹೀಗೆ ಎಲ್ಲರ ಅಕ್ಕರೆಯ ಬೊಂಬೆಯಾಗಿ ಬೆಳೆಯುತ್ತಿದ್ದಳು. ಒಂದೇ ಒಂದು ಅಪವಾದವೆಂದರೆ ತನ್ನ ತಾಯಿಯೊಡನೆಯೇ ಅವಳಿಗೆ ಅಷ್ಟೊಂದು ಸಲಿಗೆ ಇರಲಿಲ್ಲ. ಬೇರೆಯವರ ನೆರಳಿನಲ್ಲೇ ಹೆಚ್ಚಾಗಿರಲು ಬಯಸುತ್ತಿದ್ದಳು. ಇದಕ್ಕೆ ಕಾರಣ ಭಾಗ್ಯಳ ಗಂಭೀರ ನಿಲುವೋ ಅಥವಾ ಅವಳ ವೇಷಭೂಷಣವೋ ಏನೋ ಹೆಚ್ಚಾಗಿ ಹಚ್ಚಿಕೊಂಡೇ ಇರಲಿಲ್ಲ. ಅದು ಭಾಗ್ಯಳ ಗಮನಕ್ಕೆ ಬಂದಿದ್ದರೂ ಆ ಬಗ್ಗೆ ಆಕ್ಷೇಪಣೆ ಎತ್ತುವುದಾಗಲಿ, ಮಗಳನ್ನು ದಂಡಿಸುವುದಾಗಲೀ ಮಾಡದೆ ಅರ್ಥವಾಗುವ ವಯಸ್ಸು ಬಂದಾಗ ಅವಳೇ ತಿಳಿದುಕೊಳ್ಳುತ್ತಾಳೆಂದುಕೊಂಡು ಸುಮ್ಮನಾಗುತ್ತಿದ್ದಳು. ಒಟ್ಟಿನಲ್ಲಿ ಎಲ್ಲರೊಡನೆ ಕಲೆತು, ಬೆರೆತು ನನ್ನ ಮಗಳು ಬೆಳೆಯುವಂತಾಗಲಿ ಎಂದು ಬಯಸುತ್ತಿದ್ದಳು.

ಮುಂದುವರಿಯುವುದು…

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36435

ಬಿ.ಆರ್.ನಾಗರತ್ನ, ಮೈಸೂರು

7 Responses

 1. ಶಂಕರಿ ಶರ್ಮ says:

  ಭಾಗ್ಯಳ ಬಾಳಿನಲ್ಲಿ ಬಂದ ಮಗಳು ಸಿರಿಯ ಜೊತೆಗೆ ಲಕ್ಷ್ಮಿ ಸಿರಿಯೂ ಅಭಿವೃದ್ಧಿ ಹೊಂದುತ್ತಿರುವುದು ಸಮಾಧಾನ ತರಿಸಿತು. ಎಂದಿನಂತೆ ಚಂದದ ನಿರೂಪಣೆ…ಧನ್ಯವಾದಗಳು ನಾಗರತ್ನ ಮೇಡಂ

 2. ವಂದನೆಗಳು… ಶಂಕರಿ ಶರ್ಮಾ..

 3. Padma Anand says:

  ಜೀವನ ಜಂಜಾಟದ ಉಳಿಪೆಟ್ಟುಗಳಿಂದ ಭಾಗ್ಯ ಪೂಜೆಗೆ ಯೋಗ್ಯವಾದ ಸುಂದರ ವಿಗ್ರಹವಾಗಿ ರೂಪುಗೊಳ್ಳುವಂತೆ ಕಥೆ ಮುಂದುವರಿಯುತ್ತಿದೆ.

 4. ನಯನ ಬಜಕೂಡ್ಲು says:

  ಜೋತಿಷ್ಯ ದ ವಿಚಾರದಲ್ಲಿ ಮನಸು ನಂಬಿಕೆ, ಅನಂಬಿಕೆಗಳ ನಡುವೆ ತೂಗುಯ್ಯಾಲೆ ಆಡಿ ಕೊನೆಗೂ ಸರಿಯಾದ ದಾರಿಯನ್ನೇ ಹಿಡಿಯಿತು.

 5. ಧನ್ಯವಾದಗಳು… ಪದ್ಮಾ… ಹಾಗೂ…ನಯನ..ಮೇಡಂ

 6. Padmini Hegade says:

  ಹೊಸ ತಿರುವುಗಳೊಂದಿಗೆ ಕಥೆ ಚೆನ್ನಾಗಿ ಮೂಂದುವರೆಯುತ್ತಿದೆ

 7. ಧನ್ಯವಾದಗಳು ಪದ್ಮಿನಿ.. ಮೇಡಂ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: