ಕಾಣದಂತೆ ಮಾಯವಾದನೋ : ಅಮರನಾಥ ಯಾತ್ರೆ…ಹೆಜ್ಜೆ-1

Share Button

2022 ಜುಲೈ, ದಿನಕ್ಕೊಂದು ಸುದ್ದಿ ಅಮರನಾಥ ದೇಗುಲದ ಬಗ್ಗೆ. ಮೇಘಸ್ಫೋಟ, ಹಲವು ಯಾತ್ರಿಗಳನ್ನು ಕೊಚ್ಚಿಕೊಂಡು ಹೋದ ಮಳೆರಾಯ, ಯಾತ್ರೆಯನ್ನು ಸ್ಥಗಿತಗೊಳಿಸಿದ ಮಾಹಿತಿ, ಭಾರತದ ಎಲ್ಲೆಡೆ ಎಡೆಬಿಡದೆ ಸುರಿದ ವರ್ಷಧಾರೆ ನಮ್ಮನ್ನು ಕಂಗೆಡಿಸಿದ್ದವು. ಆದರೂ, ಛಲ ಬಿಡದ ತ್ರಿವಿಕ್ರಮನಂತೆ ನಾವು 2022, ಜುಲೈ 23 ರಂದು ಅಮರನಾಥನದ ದರ್ಶನಕ್ಕೆ ಹೊರಟೇಬಿಟ್ಟೆವು. ಹೀಗೆ ಹಲವು ಅಡೆ ತಡೆಗಳನ್ನು ದಾಟಿ ಬಂದರೆ, ನೀನೆಲ್ಲಿ ಮಾಯವಾದೆ ಶಿವ? ಹೆಸರು ಅಮರನಾಥ – ಆದರೆ ಕ್ಷಣಕ್ಕೊಮ್ಮೆ ಬದಲಾಗುವ ನಿನ್ನ ರೂಪ, ಒಮ್ಮೆ ಕಲ್ಲಿನಂತಿರುವ ಹಿಮಗಡ್ಡೆಯಾದರೆ, ಮತ್ತೊಮ್ಮೆ ಆಕಾರವೇ ಇಲ್ಲದ ಜಲಧಾರೆ, ಇನ್ನೊಮ್ಮೆ ನೀರಾವಿಯಾಗಿ ಗಿರಿಶಿಖರಗಳ ಮೇಲೆ ತೇಲುವ ಪರಿ. ನಿನ್ನ ದರ್ಶನ ಮಾಡಲು ಓಡೋಡಿ ಬಂದೆ, ಆದರಿಲ್ಲಿ ಕಂಡದ್ದು ಹಿಮಲಿಂಗ ಕರಗಿ ನೀರಾದ ಜಲಧಾರೆ. ನಿನ್ನ ಮುಂದೆ ನಿಂತಿರುವ ತ್ರಿಶೂಲವೇ ಸಾಕ್ಷಿ – ಇದು ನಿನ್ನ ಆಲಯವಾಗಿತ್ತೆಂದು ಸಾರಲು. ಹದಿಮೂರು ಅಡಿ ಎತ್ತರದ ಹಿಮಲಿಂಗವನ್ನು ಮನದಲ್ಲಿ ಕಲ್ಪಿಸಿಕೊಂಡು ಶಿರಬಾಗಿ ವಂದಿಸಿದೆ. ಕಂಡದ್ದಕ್ಕಿಂತ ಕಾಣದ್ದೇ ಹೆಚ್ಚು ಆಪ್ಯಾಯಮಾನವಲ್ಲವೇ?

ನಿನ್ನ ಸ್ವರೂಪವನ್ನು ಹೇಗೆ ತಾನೇ ಅರಿಯಲಿ ಅಮರನಾಥ? ನೀನು ಕರಗಿ ಹರಿದ ಜಲಧಾರೆಯನ್ನು ಬಾಟಲಿಯಲ್ಲಿ ತುಂಬಿಸಿ ತಂದೆ ನಾನು. ನಾ ತಂದ ತೀರ್ಥವನ್ನು, ಮೊಮ್ಮಗಳು ಸಾಶಾ ಫ್ರೀಜರ್‌ನಲ್ಲಿಟ್ಟು, ಮರುದಿನ ಮಂಜಿನ ಗಡ್ಡೆಯಾದ ಪವಿತ್ರ ಜಲವನ್ನು ತೋರಿಸಿ -‘ಅಜ್ಜೀ ನೋಡು, ನಿನ್ನ ಅಮರನಾಥ ಎಂದು ಕಿಲಕಿಲನೇ ನಕ್ಕಳು.’ ಹೌದಲ್ಲ, ಎಂದು ಮನಸ್ಸು ಮಾರ್ನುಡಿಯಿತು. ಶಿವನು ದೇಗುಲಗಳಲ್ಲಿ, ಗುಹೆಗಳಲ್ಲಿ ಅಡಗಿ ಕುಳಿತಿರುವನೇ? ಖಂಡಿತಾ ಇಲ್ಲ, ಹರಿಯುತ್ತಿರುವ ಝರಿ ತೊರೆಗಳಲ್ಲಿ ಸಾಗುತ್ತಿರುವನು, ಹಸಿರು ಹೊದ್ದು ನಿಂತ ಗಿಡ ಮರಗಳಲ್ಲಿ ಉಯ್ಯಾಲೆಯಾಡುತ್ತಿರುವನು, ಬಣ್ಣ ಬಣ್ಣದ ಹೂಗಳಲ್ಲಿ ನಸು ನಗುತ್ತಿರುವನು, ಗಿರಿ ಶಿಖರಗಳ ಮೇಲೇರಿ ಭಕ್ತರನ್ನು ಹರಸುತ್ತಿರುವನು ಅಲ್ಲವೇ?

ನಿನ್ನ ದರ್ಶನ ಮಾಡಿ ಪಾಲ್ಕಿಯಲ್ಲಿ ಹಿಂದಿರುಗುತ್ತಿರುವಾಗ ಹಾಗೆಯೇ ಜೋಂಪು ಹತ್ತಿತ್ತು. ಪಾರಿವಾಳಗಳ ಜೋಡಿಯೊಂದು ಹಾರಿ ಬಂದು ನನ್ನ ಹೆಗಲ ಮೇಲೆ ಕುಳಿತು, ಅಮರನಾಥನ ಕಥೆ ಹೇಳತೊಡಗಿದ್ದವು – ‘ಕೇಳು ತಂಗೀ, ಸೃಷ್ಟಿಯ ಹಾಗೂ ಅಮರತ್ವದ ರಹಸ್ಯ. ಹಿಮಾಲಯದ ಪರ್ವತ ಶ್ರೇಣಿಗಳ ಮಧ್ಯೆ ದುರ್ಗಮವಾದ ಹಾದಿಯಲ್ಲಿ ಸಾಗಿತ್ತು ಪಾರ್ವತಿಯೊಂದಿಗೆ ಪರಶಿವನ ಸವಾರಿ. ಗೌರಿಯ ಮನದಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿದ್ದವು. ಪರಶಿವನ ಪತ್ನಿಯಾದ ತಾನು, ಎಲ್ಲ ಜೀವಿಗಳಂತೆ, ಹುಟ್ಟು ಸಾವಿನ ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆ. ಆದರೆ ತನ್ನ ಪತಿ ಮಹಾದೇವನು ಅಜೇಯನು, ಅಮರನೂ ಆಗಿದ್ದಾನೆ. ಇದರ ರಹಸ್ಯವಾದರೂ ಏನು? ತನ್ನ ಒಲವಿನ ಮಡದಿಗೆ ಅಮರತ್ವದ ರಹಸ್ಯ ತಿಳಿಸಲು, ಯಾರೂ ಕಂಡರಿಯದ, ಕೇಳರಿಯದ ಸ್ಥಳವನ್ನು ಅರಸುತ್ತಾ ಹೊರಟಿದ್ದ ಸದಾಶಿವ. ಪಹಲ್‌ಗಾವ್ ತಲುಪಿದ ಶಿವನು ನಂದಿಯನ್ನು ನಿಲ್ಲಿಸಿ ಯಾರನ್ನೂ ಮುಂದೆ ಬಿಡದಿರಲು ಸೂಚಿಸಿ ಮುಂದೆ ಸಾಗಿದ. ಚಂದನವಾಡಿಯಲ್ಲಿ, ತನ್ನ ಮುಡಿಯಲ್ಲಿ ಧರಿಸಿದ್ದ ಚಂದ್ರನನ್ನು ಕೆಳಗಿಳಿಸಿದಾಗ, ಚಂದ್ರನಿಂದ ಬಿದ್ದ ಅಮೃತಬಿಂದುಗಳಿಂದ ಅಮರಾವತಿ ನದಿ ಉದ್ಭವಿಸಿತ್ತು. ಮುಂದೆ ಆದಿದೈವನು ಅಸುರರನ್ನು ಸಂಹರಿಸಿದ ಸ್ಥಳವು ‘ಪಿಸೂಘಾಟ್’ ಎಂದು ಪ್ರಖ್ಯಾತಿ ಪಡೆಯಿತು. ನಾಗಭೂಷಣನು, ತನ್ನ ಕೊರಳಲ್ಲಿ ಧರಿಸಿದ್ದ ನಾಗನನ್ನು ‘ಶೇಷನಾಗ ಸರೋವರದಲ್ಲಿ’ ತ್ಯಜಿಸಿದ. ತಮ್ಮ ಮುದ್ದು ಮಗ ಗಣಪತಿಯನ್ನು ‘ಮಹಾಗುಣ ಪಾಸ್’ ನಲ್ಲಿ ಇಳಿಸಿದರೆ, ತನ್ನ ಜಟೆಯಲ್ಲಿ ಬಂಧಿಸಿದ್ದ ಗಂಗೆಯನ್ನು ಪಂಚತಾರಿಣಿಯಲ್ಲಿ ಬಿಡುಗಡೆಗೊಳಿಸಿದ. ಗಂಗೆಯು ಪಂಚನದಿಗಳಾಗಿ ಕವಲೊಡೆದು ಭುವಿಯನ್ನು ಹಸನುಗೊಳಿಸುತ್ತಾ ಸಾಗಿದಳು. ಶಿವನು ತನ್ನಲ್ಲಿ ಅಡಕವಾಗಿದ್ದ, ಪಂಚಭೂತಗಳಾದ – ಜಲ, ಪೃಥ್ವಿ, ಆಕಾಶ, ವಾಯು ಅಗ್ನಿ – ಇವುಗಳನ್ನೂ ತ್ಯಜಿಸಿದನು. ಹೀಗೆ ತನ್ನ ಎಲ್ಲ ಸಹಚರರನ್ನು ತ್ಯಜಿಸಿದ ಈಶನು, ಅಭೇದ್ಯವಾದ ಹಿಮಾಲಯದ ಗಿರಿಶಿಖರಗಳ ಮಧ್ಯೆ ಇದ್ದ ಗುಹೆಯೊಂದರಲ್ಲಿ ಕುಳಿತು ಪಾರ್ವತಿಗೆ ಅಮರತ್ವದ ರಹಸ್ಯವನ್ನು ತಿಳಿಸಲು ಮುಂದಾದ. ಅಮರತ್ವದ ರಹಸ್ಯವನ್ನು ಯಾರೂ ಅರಿಯದಿರಲೆಂದು ಗುಹೆಯು ಸುತ್ತಮುತ್ತಲಿದ್ದ ಎಲ್ಲಾ ಜೀವಿಗಳನ್ನೂ ನಾಶಪಡಿಸಲು ಕಾಲಾಗ್ನಿಯನ್ನು ರಚಿಸಿದ. ಆದರೆ ಶಿವನು ಆಸೀನನಾಗಿದ್ದ ಜಿಂಕೆಯ ಚರ್ಮದ ಕೆಳಗೊಂದು ಪಾರಿವಾಳದ ಮೊಟ್ಟೆಯಿತ್ತು. ಮೊಟ್ಟೆಯಿನ್ನೂ ಸಂಪೂರ್ಣವಾದ ಜೀವಿಯಾಗಿ ಮಾರ್ಪಾಡಾಗಿಲ್ಲವೆಂದು ಭಾವಿಸಿ ಕಾಲಾಗ್ನಿಯು ಅದನ್ನು ಸಂಹರಿಸಲಿಲ್ಲ.

ಪರಶಿವನ ಅರ್ಧಾಂಗಿಯಾದ ಪಾರ್ವತಿಯು ಶಿವನಿಗೆ ಹಲವು ಪ್ರಶ್ನೆಗಳನ್ನು ಕೇಳಿದಳು, ನೀವು ಏಕೆ ರುಂಡಮಾಲೆ ಧರಿಸಿರುವಿರಿ? ಇವು ಯಾರ ತಲೆಬುರುಡೆಗಳು? ಆಗ ಶಿವನು,ನೀನು ಎಷ್ಟು ಬಾರಿ ಈ ಬ್ರಹ್ಮಾಂಡದಲ್ಲಿ ಜನಿಸಿದ್ದೀಯೋ ಅಷ್ಟು ರುಂಡಗಳು ಈ ಮಾಲೆಯಲ್ಲಿ ಸೇರಿಕೊಳ್ಳುತ್ತವೆ ಎಂದು ಉತ್ತರಿಸಿದನು. ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕಿದ್ದ ಪಾರ್ವತಿಯು ತ್ರಿಮೂರ್ತಿಗಳ ಅಮರತ್ವದ ರಹಸ್ಯವಾದರೂ ಏನು ಎಂದು ಪ್ರಶ್ನಿಸಿದಾಗ ಪರಶಿವನು ಏಕಾಂತವಾದ ಸ್ಥಳದಲ್ಲಿ ಸೃಷ್ಟಿಯ ಆದಿ, ಅಂತ್ಯದ ರಹಸ್ಯವನ್ನು ಹಾಗೂ ಅಮರತ್ವದ ನಿಗೂಢವಾದ ಮಾಹಿತಿಯನ್ನೂ ಪಾರ್ವತಿಗೆ ಸವಿಸ್ತಾರವಾಗಿ ತಿಳಿಸಿದನು. ಈ ರಹಸ್ಯವನ್ನು ಪಾರಿವಾಳದ ಮೊಟ್ಟೆಯಲ್ಲಿದ್ದ ಜೋಡಿ ಪಾರಿವಾಳಗಳು ಆಲಿಸಿ ಅಮರತ್ವ ಪಡೆದವು ಎಂಬ ಐತಿಹ್ಯವೂ ಇದೆ. ಇಂದಿಗೂ, ಈ ಗುಹೆಯಲ್ಲಿ, ಭಕ್ತರು ಈ ಜೋಡಿ ಪಾರಿವಾಳಗಳ ದರ್ಶನವನ್ನು ಭಕ್ತಿಭಾವದಿಂದ ಮಾಡುವರು. ಆಮರತ್ವದ ರಹಸ್ಯವನ್ನು ಬೋಧಿಸಿದ ಆದಿಗುರು ಶಿವನು ಹಿಮಲಿಂಗವಾಗಿ ಮಾರ್ಪಾಡಾಗಿ ಈ ಗುಹೆಯಲ್ಲಿಯೇ ನೆಲಸಿದ್ದರಿಂದ – ಅಮರನಾಥ ಗುಹೆಯೆಂದು ಪ್ರಖ್ಯಾತವಾಗಿದೆ.ಇನ್ನೂ ಕೆಲವು ಪೌರಾಣಿಕವಾದ ಸಂಗತಿಗಳೂ ಜನಜನಿತವಾಗಿವೆ. ಕಾಶ್ಮೀರದ ಕಣಿವೆಗಳು ಜಲಾವೃತವಾದಾಗ, ಕಾಶ್ಯಪ ಮಹರ್ಷಿಗಳು ಈ ಸುಂದರವಾದ ನಾಡನ್ನು ಮೇಲೆತ್ತಿದರು ಎಂಬ ಐತಿಹ್ಯವೂ ಇದೆ. ಭೃಗುಮಹರ್ಷಿಯು ಅಮರನಾಥ ಗುಹೆಯನ್ನು ಕಂಡ ಮೊದಲಿಗರು ಎಂಬ ನಂಬಿಕೆಯೂ ಇದೆ.

ಅಮರನಾಥ ಗುಹೆ

ಹಿಮಾಲಯದ ತಪ್ಪಲಿನಲ್ಲಿ ಗುಹಯೊಂದರಲ್ಲಿರುವ ಈ ಹಿಮಲಿಂಗವನ್ನು ಮೊದಲಿಗೆ ಕಂಡವರ್‍ಯಾರು ಗೊತ್ತೆ? ಬೂಟಾ ಮಲಿಕ್ ಎಂಬ ಮುಸ್ಲಿಂ ಕುರಿಗಾಹಿ. ಒಮ್ಮೆ ಮಲಿಕ್ ತನ್ನ ಕುರಿಗಳನ್ನು ಮೇಯಿಸುತ್ತಾ ಮೇಯಿಸುತ್ತಾ ಬಹುದೂರ ಸಾಗುತ್ತಾನೆ. ಮಳೆ ಗಾಳಿಯಿಂದ, ಛಳಿಯಿಂದ ನಡುಗುತ್ತಾ ಇದ್ದ ಬೂಟಾ ಮಲಿಕ್, ಗುಹೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ. ಆಗ ಅಲ್ಲಿದ್ದ ಒಬ್ಬ ಸನ್ಯಾಸಿಯು, ಹುಡುಗನು ಬೆಂಕಿ ಕಾಯಿಸಿಕೊಳ್ಳಲೆಂದು, ಒಂದು ಪಾತ್ರೆಯ ತುಂಬಾ ಕಲ್ಲಿದ್ದಲನ್ನು ತುಂಬಿ ಕೊಡುತ್ತಾನೆ. ಆ ಬಾಲಕನು ಮನೆಗೆ ಬಂದು ನೋಡಿದಾಗ, ಆ ಕಲ್ಲಿದ್ದಲೆಲ್ಲಾ ಚಿನ್ನದ ಗಟ್ಟಿಯಾಗಿ ಮಾರ್ಪಾಡಾಗಿರುತ್ತದೆ. ತಕ್ಷಣವೇ, ಆ ಸನ್ಯಾಸಿಯನ್ನು ಕಾಣಲು, ಮಲಿಕ್ ಓಡೋಡಿ ಬರುತ್ತಾನೆ. ಆದರೆ, ಆ ಸನ್ಯಾಸಿಯು ಅದೃಶ್ಯನಾಗಿರುತ್ತಾನೆ. ಬದಲಿಗೆ ಅಲ್ಲೊಂದು ಬೃಹದಾಕಾರದ ಹಿಮಲಿಂಗ ಕಂಡುಬರುತ್ತದೆ. ಬೆರಗಾದ ಮಲಿಕ್, ಇಲ್ಲಿ ನಡೆದ ಅಚ್ಚರಿಯನ್ನು ತನ್ನ ಗ್ರಾಮಸ್ಥರಿಗೆ ತಿಳಿಸುತ್ತಾನೆ. ಊರವರೆಲ್ಲಾ ಗುಹೆಯ ಬಳಿ ತೆರಳಿ, ಅಮರನಾಥನ ದರ್ಶನವನ್ನು ಶ್ರದ್ಧಾಭಕ್ತಿಗಳಿಂದ ಮಾಡುತ್ತಾರೆ. ಪ್ರತಿವರ್ಷ ಅಮರನಾಥನ ಯಾತ್ರೆಯನ್ನೂ ಸಂಭ್ರಮ ಸಡಗರಗಳಿಂದ ಆಚರಿಸುತ್ತಾರೆ. ಇಂದಿಗೂ ಅಮರನಾಥ ಗುಹೆಯ ಮೇಲುಸ್ತುವಾರಿಯನ್ನು ಮಾಡುವವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಬೂಟಾ ಮಲಿಕ್ ವಂಶಸ್ಥರೆಂದರೆ ನಂಬುವಿರಾ? ಆದರಿಂದು ನಾವು ಹಿಂದೂ ಮುಸ್ಲಿಂ ಎಂದು ಬೇಧಭಾವ ಮಾಡುತ್ತಾ ಹೊಡೆದಾಡುತ್ತಿದ್ದೇವೆ, ಒಬ್ಬರನ್ನೊಬ್ಬರು ದ್ವೇಷಿಸುತ್ತಾ, ಸಮಾಜವನ್ನು ಒಡೆಯುತ್ತಿದ್ದೇವೆ.

ಮುಂದುವರಿಯುವುದು…

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

 1. ನಯನ ಬಜಕೂಡ್ಲು says:

  ಯಾತ್ರೆಯ ಕುರಿತಾದ ನಿರೂಪಣೆ ಚೆನ್ನಾಗಿದೆ

 2. ಅಮರನಾಥ ಯಾತ್ರೆಯ…ಮೊದಲ ಭಾಗ..ಓದಿಸಿಕೊಂಡು..ಹೋಯಿತು… ಮುಂದಿನ.. ಭಾಗವನ್ನು.
  ಎದುರು…ನೋಡುವಂತೆ… ಮಾಡಿದೆ..ನಿರೂಪಣೆ… ಅಭಿನಂದನೆಗಳು.. ಮೇಡಂ.
  .

 3. ವಂದನೆಗಳು ತಮ್ಮ ಅಮೂಲ್ಯವಾದ ಸಂದೇಶಕ್ಕೆ

 4. ಶಂಕರಿ ಶರ್ಮ says:

  ಅಮರನಾಥ ಯಾತ್ರೆಯ ಸೊಗಸಾದ ವಿವರಣೆಯು ಪೌರಾಣಿಕ ಕಥಾ ಹಿನ್ನೆಲೆಯೊಂದಿಗೆ ಆರಂಭವಾಗಿ, ಹಿಂದೂ ಮುಸ್ಲಿಂ ಬಾಂಧವ್ಯದ ಕೊಂಡಿಯಾಗಿ ರೂಪುಗೊಂಡ ಈಗಿನ ಹಿಮಲಿಂಗದ ಪ್ರಸ್ತುತಿ ಚೆನ್ನಾಗಿ ಮೂಡಿಬಂದಿದೆ.

 5. ವಂದನೆಗಳು ಮೇಡಂ

 6. Padmini Hegde says:

  ಯಾತ್ರೆಯ ವಿವರಣೆಯ ಮುಕ್ತಾಯ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: