ಮಕ್ಕಳೊಂದಿಗೆ ಮಕ್ಕಳಾಗಿ…
ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ.
“ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ ಕೆಲಸ ಮಾಡಿದರೂ ಮುಗ್ಧವಾಗಿ, ತಮಗೆ ತೋಚಿದ್ದನ್ನು ಯಾವುದೇ ಭೇದ- ಭಾವ ಇಲ್ಲದೆ ಮಾಡುತ್ತಾರೆ. ಜೊತೆಗೆ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ. ಈ ಹಂತದಲ್ಲಿ ನಾವು ಖಾಲಿ ಬಿಳಿ ಹಾಳಿಯಂತಿರುವ ಮನಸ್ಸಿಗೆ ಏನೆಲ್ಲಾ ತುಂಬುತ್ತೇವೋ ಅದು ಮುಂದೆ ಫಲ ನೀಡುತ್ತದೆ!.
ನಾವು ಅತಿ ಮುಖ್ಯವಾಗಿ ಮಕ್ಕಳಲ್ಲಿ ಸಂಸ್ಕಾರ ಗುಣಗಳನ್ನು ತುಂಬ ಬೇಕಾಗಿದೆ. ಮಕ್ಕಳ ಬಾಲ್ಯದ ಆ ಚಿನ್ನಾಟ ವರ್ಣಿಸಲಸದಳ ಅನುಭವ ನೀಡುತ್ತದೆ! ಹರಿಕಥೆ ಯೊಂದರಲ್ಲಿಗುರುರಾಜನಾಯ್ಡು ರವರು ಹೀಗೆ ಪ್ರಸ್ತಾಪ ಮಾಡುತ್ತಾರೆ……. ಮಕ್ಕಳಿಲ್ಲದವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆ, ಮಕ್ಕಳಾದರೆ ಮಕ್ಕಳು ಉತ್ತಮರಾಗಲಿಲ್ಲ ಎನ್ನುವ ಚಿಂತೆ! ಎರಡು ಕೂಡ ಒಂದು ರೀತಿಯಲ್ಲಿ ಸಮಸ್ಯೆ, ಆ ಸಮಸ್ಯೆಯನ್ನು ಗೆಲ್ಲುವಂತಾಗಬೇಕು. ದೊಡ್ಡವರಾದ ನಾವು ಮಕ್ಕಳ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳ ಬೇಕು-ಬೇಡಗಳ ಬಗ್ಗೆ ಚರ್ಚಿಸಿ, ಚಿಂತಿಸಿ, ಯಾವುದು ಸರಿ- ತಪ್ಪು ಎಂಬುದರ ಬಗ್ಗೆ ಅವುಗಳ ಮನ ಗೆದ್ದು ಮನತುಂಬುವ ಕೆಲಸವನ್ನು ನಾವು ಅತಿ ಜರೂರಾಗಿ ಮಾಡಬೇಕಾಗಿದೆ.
ರಾಜ್ಯೋತ್ಸವದ ಮಾಸದಲ್ಲಿ ಮಕ್ಕಳ ದಿನಾಚರಣೆ ಹೆಮ್ಮೆಯನ್ನುoಟುಮಾಡುತ್ತದೆ. ಏಕೆಂದರೆ ನವಂಬರ್ ತಿಂಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲೂ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಗೀತೆಗಳು ಇವುಗಳಲ್ಲಿ ಭಾಗವಹಿಸುವುದೇ ಒಂದು ರೀತಿಯಲ್ಲಿಸಂತಸ ಅವರಿಗೆ.
ನವಂಬರ್ 14 ಮಕ್ಕಳ ದಿನಾಚರಣೆಯನ್ನು ಆಚರಿಸುವ ದಿನ. ಇದು ಎಲ್ಲರಿಗೂ ತಿಳಿದ ವಿಷಯ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರು ಹುಟ್ಟಿದ ದಿನವೂ ಕೂಡ ಹೌದು. ಜವಾಹರಲಾಲ್ ನೆಹರುರವರಿಗೆ ಮಕ್ಕಳೆಂದರೆ ಅತೀವ ಪ್ರೀತಿ. ಅದರಿಂದಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಅವರು ಮಕ್ಕಳಾಗಿ ಮಕ್ಕಳ ಮನಸ್ಸನ್ನು ಹತ್ತಿರದಿಂದ ಕಂಡು, ಅವರನ್ನು ಪ್ರೀತಿಸುವ ಗುಣವನ್ನು ಹೆಚ್ಚು ಹೊಂದಿದ್ದರು. ಅದರ ಬಳುವಳಿಯೇ ಈ ಮಕ್ಕಳ ದಿನಾಚರಣೆ.
ಇವತ್ತಿನ ಮಕ್ಕಳೇ ಮುಂದಿನ ಪ್ರಜೆಗಳು. ಶಾಲಾ- ಕಾಲೇಜು ದಿನಗಳು ಮಕ್ಕಳ ಪಾಲಿಗೆ, ಭವಿಷ್ಯದ ದೃಷ್ಟಿಯಿಂದ ಒಂದು ರೀತಿಯಲ್ಲಿ ಸುವರ್ಣ ಕಾಲಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ಏನೆಲ್ಲಾ ತಮ್ಮ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅದೆಲ್ಲ ಅವರವ್ಯಕ್ತಿತ್ವ, ಪ್ರತಿಭೆ ಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಂತ್ರಿಕದ, ಒತ್ತಡದ ಜೀವನದಲ್ಲಿ ಅವರಿಗೆ ಓದಿನ ಸಾಮರ್ಥ್ಯ ಹೆಚ್ಚುಇರುವುದರಿಂದ ಅವರು ಪಠ್ಯ ಸಂಬಂಧಿ ವಿಷಯಗಳ ಜೊತೆಗೆ, ಪಠ್ಯೇತರ ವಿಷಯಗಳ ಬಗ್ಗೆಯೂ ಕೂಡ ಓದುವಂತೆ ನಾವು ಪೋಷಕರಾದವರು ಗಮನ ಹರಿಸಬೇಕು. ಇದರಿಂದಾಗಿ ಮಕ್ಕಳಿಗೆ ಕೇವಲ ಪಠ್ಯ ಚಟುವಟಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಅಲ್ಲದೆ, ಎಲ್ಲಾ ವಿಷಯಗಳ ಬಗ್ಗೆಯೂ ಕೂಡ ಆಸಕ್ತಿ ಮೂಡಿಸುವಲ್ಲಿ ಸಫಲವಾಗುತ್ತದೆ.
ಸಾಂಕೇತಿಕವಾಗಿ ಇವತ್ತು ಮಕ್ಕಳ ದಿನಾಚರಣೆ ಆಗಿರಬಹುದು, ಆದರೆ ಆ ಒಂದು ದಿನ ನಾವು ಮಕ್ಕಳಿಗಾಗಿ ಚಿಂತಿಸುವ ಕಾಲ, ಇದು ಸುದಿನ ಎನ್ನುವಂತಾಗಿದೆ. ಏಕೆಂದರೆ ಮಕ್ಕಳ ಮೇಲೆ ಪೋಷಕರ ಜವಾಬ್ದಾರಿಗಳು ಇವತ್ತು ಹೆಚ್ಚಾಗಿದೆ. ಅವರ ವ್ಯಕ್ತಿತ್ವ ಬೆಳವಣಿಗೆಗೆ ಯೋಜನಾಬದ್ಧ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಬೇಕಾಗಿದೆ.
ದೇಶದ ಪ್ರತಿಯೊಂದು ಪ್ರಜೆಗಳಿಗೂ ಕೂಡ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಅದು ಸಿಗುತ್ತಿದೆ, ಆದರೆ ಆ ಶಿಕ್ಷಣವನ್ನು ಮಕ್ಕಳು ಯಾವ ರೀತಿಯಲ್ಲಿ ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಅದರಿಂದಾಗಿ ಕೇವಲ ಶಾಲಾ-ಕಾಲೇಜುಗಳಿಗೆ ನಾವು ಹೆಚ್ಚೆಚ್ಚು ಡೊನೇಷನ್ ಕೊಟ್ಟು ಅತ್ಯುತ್ತಮ ಶಾಲೆಗಳಿಗೆ ಸೇರಿಸಿದರೆ ಸಾಲದು. ಅವರು ಆ ಶಾಲೆಯಲ್ಲಿ ಏನೆಲ್ಲಾ ತಮ್ಮ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ನಾವು ಕೊಡು-ಕೊಳ್ಳುವಿಕೆ ಇಟ್ಟುಕೊಳ್ಳಬೇಕು. ಜೊತೆಗೆ ಶಾಲಾ ಶಿಕ್ಷಕರ ಜೊತೆಗೂ ಕೂಡ ಅವಿನಾಭಾವ ಸಂಬಂಧ ಇಟ್ಟುಕೊಂಡು, ಮಕ್ಕಳ ಪೂರಕ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲೇಬೇಕು.
ಮನೆಗೆ ಬಂದ ಮಕ್ಕಳ ಬಗ್ಗೆಯೂ ಕೂಡ ನಾವು ಎಚ್ಚರ ವಹಿಸಲೇಬೇಕು. ಹೋಂವರ್ಕ್ ಜೊತೆಗೆ, ಮನೆ ಪಾಠ ಎಲ್ಲವುಗಳ ಜೊತೆಗೆ ಅವರ ಒಂದು ವೈಯಕ್ತಿಕ ವಿಚಾರಕ್ಕೆ ನಾವು ಸಮಯ ಮೀಸಲಿಡಬೇಕು. ಕೇವಲ ಓದು ಇದ್ದರೆ ಸಾಲದು, ಅವರ ಜೊತೆಗೆ ನಮ್ಮ ಸುಮಧುರ ಬಾಂಧವ್ಯ ಹೇಗೆಇರುತ್ತದೆ ಅದರ ಮೇಲೆ ನಮ್ಮ ಮಕ್ಕಳು ಮುಂದೆ ಬರುತ್ತಾರೆ. ಪ್ರತಿಯೊಂದು ಮಕ್ಕಳಿಗೂ ನಾವು ಪಠ್ಯ ಸಂಬಂಧಿ ವಿಷಯಗಳ ಜೊತೆಗೆ ನಮ್ಮ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ,ಆಚಾರ ವಿಚಾರ ಎಲ್ಲವನ್ನು ಕೂಡ ತಿಳಿಸಬೇಕು. ನಮ್ಮ ನೆರೆಹೊರೆಯವರ ಜೊತೆ ಯಾವ ರೀತಿಯ ಬಾಂಧವ್ಯ ಇಟ್ಟುಕೊಳ್ಳಬೇಕು, ಜೊತೆಗೆ ನಮ್ಮ ಸಂಬಂಧಿಕರು ನಮ್ಮ ಮನೆ ಕುಟುಂಬದ ಪರಿಕಲ್ಪನೆ ಬಗ್ಗೆ ತಿಳಿಸಬೇಕು.
ಇವತ್ತು ಸಂಪರ್ಕ ಮಾಧ್ಯಮಗಳು ಅತಿ ಹೆಚ್ಚು ಇವೆ. ಅದು ಆಕಾಶವಾಣಿ ಆಗಿರಬಹುದು….., ದೂರದರ್ಶನ ಆಗಿರಬಹುದು…… ಪತ್ರಿಕೆಗಳಾಗಿರಬಹುದು….. ಜೊತೆಗೆ ಮೊಬೈಲ್ ನ ಯೂಟ್ಯೂಬ್ ಗಳಲ್ಲಿ…… ಮಕ್ಕಳ ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ಕಾರ್ಯಕ್ರಮಗಳ ಮಹಾಪೂರವೇ ಅಲ್ಲಿ ಅಡಗಿವೆ. ಸಂಪರ್ಕ ಮಾಧ್ಯಮಗಳಲ್ಲಿ ಅನೇಕ ಬಾಲ ಪ್ರತಿಭೆಗಳು ಅಗಾಧವಾದ ಸಾಹಿತ್ಯ, ಸಂಸ್ಕೃತಿ, ಗಾಯನ, ಇನ್ನಿತರ ಕಲೆಗೆ ಸಂಬಂಧಿಸಿದಂತೆ ದೊಡ್ಡದಾದ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅವುಗಳನ್ನು ನಾವು ಗುರುತಿಸಿ ಅವರ ಒಂದು ಸದಭಿರುಚಿಗೆ ತಕ್ಕಂತೆ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ಮುಖ್ಯವಾಗಿ ನೆರವಾಗಬೇಕು.
ಎಷ್ಟು ಚೆಂದಾಗಿತ್ತು ನಮ್ಮ ಬಾಲ್ಯ! ಅದನ್ನು ನೆನಪಿಸಿಕೊಂಡರೆ ಒಂದು ರೀತಿಯಲ್ಲಿ ಮೈಮನಗಳಿಗೆ ರೋಮಾಂಚನವನ್ನುಂಟುಮಾಡುತ್ತದೆ! ಆದರೆ ಇವತ್ತಿನ ಮಕ್ಕಳ ಬಾಲ್ಯಕ್ಕೂ, ನಮ್ಮಗಳ ಬಾಲ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ನಿಜಕ್ಕೂ ಮಕ್ಕಳು ಸಂಕಷ್ಟದಲ್ಲಿ ಇದ್ದಾರೆ ಎಂದೇ ಹೇಳಬೇಕು. ಮಕ್ಕಳು ಮಣ್ಣಿನೊಂದಿಗೆ….. ಪ್ರಕೃತಿಯೊಂದಿಗೆ….. ಆಟವಾಡುತ್ತಿದ್ದ ಕಾಲದಿಂದ ಈಗ ದೂರ ವಾಗಿ, ಕೇವಲ ನಿರ್ಜೀವ ವಸ್ತುಗಳ ಮೂಲಕ ಆಟ ಪಾಠಗಳನ್ನು ಆಡುವಂಥಾಗಿದೆ!
ಏಕೆಂದರೆ ಮಕ್ಕಳಿಗೆ ಶಿಕ್ಷಣವೇ ಒಂದು ರೀತಿಯಲ್ಲಿ ಅತಿಹೆಚ್ಚಿನ ಒತ್ತಡ ತರುತ್ತಿದೆ. ಏಕೆಂದರೆ ನಾವು ಪ್ರಾರಂಭದಿಂದಲೇ ಮಕ್ಕಳಿಗೆ ಓದು ಓದು ಓದು ಎಂಬ ಈ ಎರಡಕ್ಷರವನ್ನೇ ಅವರ ತಲೆಯಲ್ಲಿ ತುಂಬಿರುತ್ತೇವೆ. ಯಾವುದೇ ಪರೀಕ್ಷೆಯಲ್ಲಿ ನಮ್ಮ ಮಕ್ಕಳು ನೂರಕ್ಕೆ ನೂರನ್ನು ತೆಗೆದುಕೊಳ್ಳಲೇಬೇಕು. ಆಗಿದ್ದಲ್ಲಿ ಮಾತ್ರ ನಮ್ಮ ಮಕ್ಕಳು. ಮಕ್ಕಳ ಬಗ್ಗೆ ಏನೋ ಒಂದು ರೀತಿಯಲ್ಲಿ ಆಸಕ್ತಿ. ಇಲ್ಲದಿದ್ದರೆ ಅವರನ್ನು ತಾತ್ಸಾರದಿಂದ ನೋಡುವ ಭಾವನೆಗಳು ಕೂಡ ಇಂದು ಹೆಚ್ಚಿವೆ. ಜೊತೆಗೆ ನಾವು ನಮ್ಮ ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಸುವುದು ಕೂಡ ಹೆಚ್ಚುತ್ತಿದೆ. ಏಕೆಂದರೆ ಮಕ್ಕಳು….. ಅವರ ಮನಸ್ಸು….. ಅವರ ವ್ಯಕ್ತಿತ್ವ….. ಅವರ ವಿಕಸನದ ಮೇಲೆ ಅವರ ಬೆಳವಣಿಗೆ ಅವಲಂಬಿತವಾಗಿರುತ್ತದೆ.
ಮಕ್ಕಳು ಕೇವಲ ಅಂಕ ಗಳಿಕೆಯ ರನ್ ಮಿಷನ್ ಗಳಂತೆ ಆಗುತ್ತಿದ್ದಾರೆ. ಅವರಿಗೆ ನಾವು ವ್ಯವಹಾರದ ಜ್ಞಾನ ಅಥವಾ ನಮ್ಮ ಸಮಾಜದ ಸುತ್ತಮುತ್ತ ಇರುವ ಒಂದು ಪರಿಸರದ ಬಗ್ಗೆ ಆಗಲಿ ಯಾವುದೇ ರೀತಿಯಲ್ಲಿ ತಿಳಿಸದೆ ಕೇವಲ ಓದಿನ ಮಹಡಿಯ ಮನೆ ಅವರಲ್ಲಿ ಕಟ್ಟುತ್ತಿದ್ದೇವೆ ನೂರಕ್ಕೆ ತೊಂಬತ್ತೆಂಟು ಅಂಕಗಳನ್ನು ಪಡೆದರೂ ಕೂಡ ತಂದೆ- ತಾಯಿಗಳಿಗೆ ಸಮಾಧಾನವಾಗಿರುವುದಿಲ್ಲ. ಎರಡು ಅಂಕಗಳು ಎಲ್ಲಿ ಹೋಯಿತೋ ಎಂಬುದರ ಬಗ್ಗೆ ಚರ್ಚಿಸುತ್ತಾರೆ!. ಇವತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣ ಅತಿ ಮಹತ್ವದ ಪಾತ್ರವನ್ನು ವಹಿಸುತ್ತದೆ ನಿಜ. ಆದರೆ ಶಿಕ್ಷಣ ಶಿಕ್ಷೆ ಆಗಬಾರದು ಎಂಬುದನ್ನು ನಾವು ಮನದಲ್ಲಿ ಚಿಂತಿಸುವಂತಾಗಬೇಕು.
ಒಬ್ಬ ಮಗುವಿಗೆ ಯಾವ ರೀತಿಯಲ್ಲಿ ಶಿಕ್ಷಣದಲ್ಲಿ ಅಂಕಗಳು ಮುಖ್ಯವೋ ಅದೇ ರೀತಿ ಬದುಕಿನ ಮೌಲ್ಯದಲ್ಲೂ ಕೂಡ ಹೊರ ಜಗತ್ತಿನ ಸುತ್ತ ಮುತ್ತ ನಡೆಯುವ ಸಾಧಕ- ಬಾಧಕಗಳ ಬಗ್ಗೆಯೂ ಕೂಡ ಅರಿವಿರಬೇಕು. ಎಷ್ಟೋ ಮಕ್ಕಳು ಕಡಿಮೆ ಅಂಕಗಳು ಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕೆಲವೊಂದು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಸಾಹಿತ್ಯದ ರುಚಿ ತೋರಿಸಬೇಕು. ಮಕ್ಕಳ ಸಾಹಿತ್ಯ ಇವತ್ತು ಅಗಾಧವಾಗಿದೆ. ಮಕ್ಕಳಿಗಾಗಿಯೇ ಅನೇಕ ದೊಡ್ಡ ಕವಿಗಳು ಲೇಖಕರು ಕೂಡ ಹೆಚ್ಚೆಚ್ಚು ಸಮಯ ಮೀಸಲಿಟ್ಟು,ಅನೇಕ ಮೌಲಿಕ ಪುಸ್ತಕಗಳನ್ನು ಬರೆದಿದ್ದಾರೆ. ಅಂತಹ ಆಯ್ಕೆ ಮಾಡಿದ
ಪುಸ್ತಕಗಳನ್ನು ನಾವು ಮಕ್ಕಳಿಗೆ ನಿಗದಿತ ಸಮಯದಲ್ಲಿ ಓದಲು ತಿಳಿಸಬೇಕು.ಇದರಿಂದಾಗಿ ಅವರ ಬೌದ್ಧಿಕ ಮಟ್ಟ ಹೆಚ್ಚುತ್ತದೆ.
ಅವತ್ತಿನ ರೀತಿ ಇವತ್ತು ಒಟ್ಟು ಕುಟುಂಬದ ಪರಿಕಲ್ಪನೆ ಇಲ್ಲ. ಅದರಲ್ಲೂ ತಂದೆ-ತಾಯಿಗಳು ಕೆಲಸದಲ್ಲಿ ಇದ್ದರೆ ಮುಗಿಯಿತು!. ಮಕ್ಕಳಿಗೆ ಸ್ವಲ್ಪವೂ ಕೂಡ ಸಮಯವನ್ನು ಕೊಡುವುದಿಲ್ಲ. ಇದರಿಂದಾಗಿ ಮಕ್ಕಳಿಗೆ ಏನೋ ಒಂದು ರೀತಿಯಲ್ಲಿ ಏಕಾಂಗಿ ಮನೋಭಾವ ಕಾಡುತ್ತದೆ. ಮನೆಗೆ ಬಂದರೆ ಓದು, ಜೊತೆಗೆ ತಂದೆ ಒಂದು ಕಡೆ, ತಾಯಿ ಒಂದು ಕಡೆ ಈ ರೀತಿ ವಾತಾವರಣದಲ್ಲಿ ಬೆಳೆದ ಮಕ್ಕಳು ಮುಂದೊಂದು ದಿನ ಒಂದು ರೀತಿಯಲ್ಲಿ ಮಾನಸಿಕ ಕಾಯಿಲೆಗಳಿಗೆ ಒಳಗಾಗಿದ್ದು ಕೂಡ ಅನೇಕ ಉದಾಹರಣೆಗಳಿವೆ.
ಮಕ್ಕಳಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಬೇಕು. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು. ಇವತ್ತಿನ ಕ್ರೀಡಾ ಸ್ಪರ್ಧೆಗಳು ಹೇಗಾಗಿದೆ ಎಂದರೆ….. ಕೇವಲ ಟಿವಿ ನೋಡಿ ಕಾಲ ಕಳೆಯುವಂತಾಗಿದೆ. ಕ್ರೀಡೆಗಳು ಮಕ್ಕಳ ಆರೋಗ್ಯದ ಬೆಳವಣಿಗೆಗೂ ಕೂಡ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಅದರಿಂದಾಗಿ ದಿನನಿತ್ಯ ಯೋಗ, ಧ್ಯಾನ, ಕ್ರೀಡೆಗಳೊಂದಿಗೆ ಮಕ್ಕಳ ಮನಸ್ಸನ್ನು ನಾವು ಗೆಲ್ಲಬೇಕು.ಇದರಿಂದಾಗಿ ಮಕ್ಕಳ ಮನಸ್ಸು ಮತ್ತಷ್ಟು ಪ್ರಫುಲ್ಲಗೊಳ್ಳುತ್ತದೆ.
ಮೊದಲೇ ಹೇಳಿದಂತೆ ಸಾಹಿತ್ಯ, ಸಂಗೀತ, ಕ್ರೀಡೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸುವಂತೆ ಕ್ರಮ ವಹಿಸಬೇಕು. ಮೈಸೂರಿನ ಕುವೆಂಪು ನಗರದಲ್ಲಿರುವ “ಕಲಾಸುರುಚಿ” ಯಲ್ಲಿ (ಇದು ಸಿಂಧುವಳ್ಳಿ ಅನಂತಮೂರ್ತಿಯವರ ಮನೆ) ಪ್ರತೀ ಶನಿವಾರ ಸಂಜೆ 4:30 ರಿಂದ 5:30ರ ವರೆಗೆ ಸರಿಯಾಗಿ “ಕಥೆ ಕೇಳೋಣ ಬನ್ನಿ…” ಕಾರ್ಯಕ್ರಮ ಬಹಳ ದೀರ್ಘಕಾಲದಿಂದ ನಡೆಯುತ್ತಾ ಬಂದಿದ್ದು, ಇವತ್ತು ದಾಖಲೆ ಸ್ಥಾಪಿಸಿದೆ. ಅಲ್ಲಿ ಪ್ರತಿ ವಾರವೂ ಕೂಡ ಒಬ್ಬೊಬ್ಬರು ಬಂದು 4 ರಿಂದ 5 ಕಥೆಗಳನ್ನು ಹೇಳುತ್ತಾರೆ. ನಂತರ ಆ ಕಥೆಗಳಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಕಾರ್ಯಕ್ರಮವು ನಡೆಯುತ್ತದೆ. ಜೊತೆಗೆ ಮಕ್ಕಳಿಗೆ ಕನ್ನಡದ ಕಲಿಕೆಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಕೂಡ ಇಲ್ಲಿ ತಿಳಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ಕಥೆ ಕೇಳುವುದರ ಜೊತೆಗೆ, ಕನ್ನಡದ ಪದ ಚಮತ್ಕಾರಗಳ ಬಗ್ಗೆ ತಿಳುವಳಿಕೆ ಮೂಡಿಸಿಕೊಳ್ಳುತ್ತಾರೆ. ಇಲ್ಲಿಗೆ ನಾನು ನಮ್ಮ ಮಕ್ಕಳೊಂದಿಗೆ ನಾಲ್ಕೈದು ಬಾರಿ ಹೋಗಿದ್ದೇನೆ. ನಿಜಕ್ಕೂ ಈ ಒಂದು ವಾತಾವರಣ ಮಕ್ಕಳ ಮನಸ್ಸಿಗೆ, ಅವರ ವ್ಯಕ್ತಿತ್ವಕ್ಕೆ ಯೋಗ್ಯ ಸ್ಥಳ ಎನ್ನುವಂತಾಗಿದೆ.
ಏಕೆಂದರೆ ನಮಗೂ ಕೂಡ ಗೊತ್ತಿಲ್ಲದ ಎಷ್ಟೋ ವಿಷಯಗಳು ಇಲ್ಲಿ ಲಭ್ಯವಾಗುತ್ತದೆ. ಇಂತಹ ಒಂದು ಸಾಹಿತ್ಯ ಕಾರ್ಯಕ್ರಮದ ಸ್ಥಳಗಳಿಗೆ ನಾವು ಸ್ವಲ್ಪ ಬಿಡುವ ಮಾಡಿಕೊಂಡು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಅವರ ಒಂದು ಜ್ಞಾನದ ಅಭಿವೃದ್ಧಿ ಹೆಚ್ಚುವಲ್ಲಿ ಇದು ನೆರವಾಗುತ್ತದೆ.
“ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ… . ಕೂಸು ಕಂದಮ್ಮ ಒಳ ಹೊರಗ…..” ಈ ರೀತಿ ಅದೆಷ್ಟೋ ಹಾಡುಗಳು, ಜನಪದ ಗೀತೆಗಳು, ಮಕ್ಕಳ ಗೀತೆಗಳು ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ಸೆಳೆದುಬಿಡುತ್ತದೆ. ಊಟ ಮಾಡಲು ಮಕ್ಕಳು ಹಠ ಹಿಡಿದಾಗ, ಚಂದಮಾಮನನ್ನು ತೋರಿಸುತ್ತಾ ಊಟ ಮಾಡಿಸುತ್ತಿದ್ದ ಕಾಲ ಒಂದಿತ್ತು! ಈಗ ಟಿವಿ ತೋರಿಸುತ್ತಾ ಊಟ ಮಾಡಿಸುತ್ತಾರೆ! ಇದರ ಜೊತೆಗೆ ಕಥೆಗಳನ್ನು ಹೇಳುತ್ತಿದ್ದರು….. ಹಾಡುಗಳನ್ನುಹೇಳುತ್ತಿದ್ದರು…. ಅಲ್ಲದೆ ಸುತ್ತಮುತ್ತಲಿನ ವಾತಾವರಣದ ಬಗ್ಗೆ….ಪರಿಸರದ ಬಗ್ಗೆ…..ರಾಜಾರಾಣಿಯರ ಕಥೆಗಳ ಬಗ್ಗೆ….. ತಿಳಿಸುತ್ತಾ ಇದ್ದರು. ಆ ಒಂದು ವಾತಾವರಣ ಈಗ ಕಾಣೆಯಾಗಿದೆ!
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ನಾವು ಯೋಗ್ಯ ರೀತಿಯಲ್ಲಿ ಅವರ ವ್ಯಕ್ತಿತ್ವ ವಿಕಸನವಾಗಲು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅವರ ಒಂದು ಸಮಸ್ಯೆಗಳ ಬಗ್ಗೆಯೂ ಕೂಡ ಸ್ನೇಹಿತನಾಗಿ ಅರಿತು, ಮಾರ್ಗದರ್ಶಕರಾಗೋಣ. ಜೊತೆಗೆ ಮಕ್ಕಳು ಮಾರಕ ವಸ್ತುಗಳ ದಾಸರಾಗುವುದನ್ನು ತಡೆಯೋಣ. ಅವರು ಎಂತೆಂಥ ಅವರ ಎಂತಹ ಸ್ನೇಹಿತರ ಸಹವಾಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೂಡ ಎಚ್ಚರಿಕೆ ವಹಿಸೋಣ. ಸಾಕಷ್ಟು ಸವಲತ್ತುಗಳನ್ನು ನೀಡಿ, ಆ ಸವಲತ್ತುಗಳನ್ನು ಯಾವ ರೀತಿಯಲ್ಲಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಒಂದು ಕಣ್ಣು ಇಟ್ಟಿರೋಣ. ಅದರಲ್ಲೂ ಮೊಬೈಲ್ ಇನ್ನಿತರ ಸಾಮಾಜಿಕ ಜಾಲತಾಣಗಳನ್ನು ಅವರು ಹೇಗೆ ಉಪಯೋಗಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇಡಲೇಬೇಕು.
ಜೊತೆಗೊಂದು ಮಾತು…. ಎಷ್ಟೋ ಅನಾಥ ಮಕ್ಕಳು ನಮ್ಮ ಕಣ್ಮುಂದೆ ಕಾಣಿಸಿತ್ತಾರೆ. ಅವರನ್ನು ಪಕ್ಕದ ಅನಾಥಾಶ್ರಮಗಳಿಗೆ ಸೇರಿಸೋಣ. ಅವರಿಗೂ ಕೂಡ ಯೋಗ್ಯ ರೀತಿಯಲ್ಲಿ ಕ್ರಮ ವಹಿಸೋಣ. ಜೊತೆಗೆ ಅನೇಕ ಭಿಕ್ಷೆ ಬೇಡುತ್ತಿರುವ ಮಕ್ಕಳು ಸಿಕ್ಕರೆ, ಸರ್ಕಾರದ… ಸಂಘ ಸಂಸ್ಥೆಗಳ… ಗಮನ ತರೋಣ.
ಯಾವುದೇ ರೀತಿಯಲ್ಲಿ ಮಕ್ಕಳು ಬಾಲ್ಯದ ಶಿಕ್ಷಣದಿಂದ ವಂಚಿತ ಆಗಕೂಡದು. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಅನೇಕ ವಿನೂತನ ಶೈಲಿಯಲ್ಲಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಜ್ಞರಿಂದ ನೆರವು ಪಡೆದು, ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ. ಸರ್ಕಾರಿ ಶಾಲೆಗಳು ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ, ಶಿಕ್ಷಣದ ವ್ಯವಸ್ಥೆಗೆ ಪೂರಕ ಮಾಹಿತಿಗಳೊಂದಿಗೆ ಖಾಸಗಿ ಶಾಲೆಯನ್ನು ಕೂಡ ಮೀರಿಸುತ್ತಿವೆ.
ಒಟ್ಟಿನಲ್ಲಿ ತಂದೆ- ತಾಯಿಗಳು ಮಕ್ಕಳಿಂದ ಕೇವಲ ಅಂಕಗಳನ್ನು ನಿರೀಕ್ಷಿಸದೆ…… ಅವರಿಗೆ ಸವಲತ್ತು ನೀಡುವುದರ ಜೊತೆಗೆ….. ಅವರ ಒಂದು ಬೇಕು- ಬೇಡಗಳ ಬಗ್ಗೆ….. ಚಿಂತನೆಯ ಜೊತೆಗೆ….. ಅವರ ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಇಂತಹ ವಿಷಯಗಳೊಂದಿಗೆ ನಾವು ಈ ಮಕ್ಕಳ ದಿನಾಚರಣೆಯಂದು ಸಂಕಲ್ಪ ಮಾಡೋಣ. ಇದು ಮಕ್ಕಳ ದಿನಾಚರಣೆಯ ಆಶಯವಾಗಲಿ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಮಕ್ಕಳ ಬಗ್ಗೆ ಸೊಗಸಾದ ಲೇಖನ.. ಅಭಿನಂದನೆಗಳು ಸಾರ್
ಮಕ್ಕಳಿಂದ ಕೇವಲ ಅಂಕಗಳನ್ನು ನಿರೀಕ್ಷಿಸದೆ ಅವರಿಗೆ ಸವಲತ್ತು ನೀಡುವುದರ ಜೊತೆಗೆ ಅವರ ಒಂದು ಬೇಕು- ಬೇಡಗಳ ಬಗ್ಗೆ ಚಿಂತಿಸಿ ಅವರನ್ನುಅಭಿವೃದ್ಧಿಯತ್ತ ಕೊಂಡೊಯ್ಯೋಣ ಎನ್ನುವ ಆಶಯದ ಲೇಖನ ಚೆನ್ನಾಗಿದೆ ಕಾಳಿಹುಂಡಿ ಶಿವಕುಮಾರ್ ಸರ್.
ಬೆಳೆಯುವ ಹಂತದಲ್ಲಿರುವ ಮುಗ್ಧ ಮಕ್ಕಳ ಮನಸ್ಸಲ್ಲಿ ಸುವಿಚಾರಗಳನ್ನು ತುಂಬಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳುವ ಸೊಗಸಾದ ಲೇಖನ