ಸುರಹೊನ್ನೆಗೆ ಕೃತಜ್ಞತೆಯ ವಂದನೆಗಳು.
2014 ರಲ್ಲಿ ಜನ್ಮತಳೆದ ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆ ಪ್ರಶಾಂತವಾದ ನದಿಯಂತೆ ಪ್ರವಹಿಸುತ್ತಾ ಮುಂದುವರೆದಿದೆ. ಈ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಹೇಮಮಾಲಾರವರು ನನಗೆ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ. ಮೊದಲು ನಾನು ಅವರ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಓದುತ್ತಾ ಅನಿಸಿಕೆಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ದಾಖಲಿಸುತ್ತಿದ್ದೆ. ನಂತರ ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ಲೇಖನಗಳು, ಕವನಗಳನ್ನು ಪ್ರಕಟಣೆ ಕೋರಿ ಕಳುಹಿಸುತ್ತಿದ್ದೆ. ತದನಂತರ ಅವರು ತಮ್ಮ ಪತ್ರಿಕೆಯಲ್ಲಿ ಸ್ಥಿರ ಅಂಕಣಗಳನ್ನು ಪ್ರಾರಂಭಿಸುತ್ತಿರುವ ಬಗ್ಗೆ ನೀಡಿದ್ದ ಜಾಹಿರಾತನ್ನು ಕಂಡು ಅದೇ ತಾನೇ ನಾನು ಬರೆದು ಮುಕ್ತಾಯ ಮಾಡಿದ್ದ ನನ್ನ ಪ್ರಥಮ ಕಾದಂಬರಿ ‘ನೆಮ್ಮದಿಯ ನೆಲೆ’ ಯನ್ನು ಅವರಿಗೆ ಕಳುಹಿಸಿದೆ. ಅದು ಪತ್ರಿಕೆಯ ಆವಶ್ಯಕತೆಗಳಿಗೆ ಸರಿಹೊಂದುವಂತಿದ್ದರೆ ಖಂಡಿತ ಪ್ರಕಟಿಸುವೆನೆಂದರು. ಅದರಂತೆಯೆ ಜನವರಿ 2021 ರ ಸಂಚಿಕೆಯಿಂದ ಪ್ರಾರಂಭಿಸಿ ಧಾರಾವಾಹಿಯಂತೆ ಪ್ರಕಟಿಸಿದರು. ಅಲ್ಲದೆ ಪ್ರತಿಯೊಂದು ಸಂಚಿಕೆಯ ಕಥಾಭಾಗದ ಸನ್ನಿವೇಶಗಳಿಗೆ ಸರಿಹೊಂದುವಂತಹ ಚಿತ್ರಗಳನ್ನು ಹುಡಕಿ ಕಥೆಯ ಜೊತೆಯಲ್ಲಿ ಸೇರಿಸಿ ಬರಹವನ್ನು ಮತ್ತಷ್ಟು ಆಕರ್ಷಕವಾಗುವಂತೆ ಮಾಡಿ ಪ್ರೋತ್ಸಾಹ ನೀಡಿದರು. ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ.
ಇದರಿಂದ ಉತ್ಸುಕಳಾಗಿ ನಾನು ನನ್ನ ಎರಡನೆಯ ಕಾದಂಬರಿ ‘ನೆರಳು’ ಪೂರ್ಣಗೊಳಿಸಿದಾಗ ಅದನ್ನು ಅವರಿಗೆ ಕಳುಹಿಸಿ ಅವರ ಅಭಿಪ್ರಾಯ ಕೋರಿದ್ದೆ. ಅವರದನ್ನು ಓದಿ ಅದನ್ನೂ ಧಾರಾವಾಹಿಯಂತೆ ನಲವತ್ಮೂರು ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಮೊದಲಿನಂತೆಯೇ ಆಯಾ ಸಂಚಿಕೆಯ ಕಥಾಭಾಗಕ್ಕೆ ಹೊಂದಿಕೊಳ್ಳುವಂತಹ ಚಿತ್ರಗಳನ್ನು ಹುಡುಕಿ ಜೋಡಿಸಿ ಆಕರ್ಷಕವಾಗಿ ಓದುಗರಿಗೆ ಒದಗಿಸಿದ್ದಾರೆ. ಅವರ ಕಾರ್ಯದ ಭದ್ಧತೆಯಿಂದ ನಾನು ಪ್ರಭಾವಿತಳಾಗಿದ್ದೇನೆ. ಈ ರೀತಿ ಪ್ರೋತ್ಸಾಹ ನೀಡಿರುವುದಕ್ಕಾಗಿ ನಾನು ಅವರಿಗೆ ನನ್ನ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ಈ ಪತ್ರದ ಮೂಲಕ ಸಲ್ಲಿಸಿದ್ದೇನೆ.
ಬರಹಗಾರರಿಗೆ ಒದುಗರ ಪ್ರೋತ್ಸಾಹವೇ ಮುಂದೆ ಸಾಗಲು ಸ್ಫೂರ್ತಿ ನೀಡುವುದು. ಅವರ ಅನಿಸಿಕೆ, ಅಭಿಪ್ರಾಯಗಳೇ ಲೇಖಕರು ತಮ್ಮ ಮುಂದಿನ ಕೃತಿಯಲ್ಲಿ ಇನ್ನಷ್ಟು ಉತ್ತಮವಾಗಿ ಬರೆಯಲು ಚೈತನ್ಯ ನೀಡುವ ಅಮೃತ ಬಿಂದುಗಳಾಗಿವೆ. ಓದಿ ಅಭಿಪ್ರಾಯ ದಾಖಲಿಸಿ ಪ್ರೋತ್ಸಾಹ ನೀಡಿದ ಎಲ್ಲ ಓದುಗ ಬಳಗದವರಿಗೂ ನನ್ನ ಗೌರವಪೂರ್ವಕ ವಂದನೆಗಳು.
ನಾನೊಬ್ಬ ಗೃಹಿಣಿ, ಹವ್ಯಾಸಿ ಬರಹಗಾರ್ತಿ. ನನ್ನ ಮತ್ತು ನನ್ನಂತಹ ಎಷ್ಟೋ ಬರಹಗಾರರಿಗೆ ತಮ್ಮ ಪತ್ರಿಕೆಯ ಮೂಲಕ ಅವಕಾಶ ಒದಗಿಸುತ್ತಿರುವ ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆಯು ಮತ್ತಷ್ಟು ಆಕರ್ಷಕವಾಗಿ ಬೆಳೆಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುವ ದೀವಿಗೆಯಾಗಿ ಪ್ರಕಾಶಿಸಲೆಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.
ವಿಶ್ವಾಸ ಪೂರ್ವಕ ಧನ್ಯವಾದಗಳೊಂದಿಗೆ
– ಬಿ.ಆರ್.ನಾಗರತ್ನ, ಲೇಖಕಿ. ಮ್ಯಸೂರು.
ಮೇಡಂ ನಿಮ್ಮ ಎರಡು ಕಾದಂಬರಿಗಳೂ ತುಂಬಾ ಚೆನ್ನಾಗಿದ್ದವು. ಮುಂದೆಯೂ ನಿಮ್ಮ ಕಥೆ, ಕಾದಂಬರಿಗಳ ನಿರೀಕ್ಷೆ ಇದೆ.
ಧನ್ಯವಾದಗಳು ನಯನ ಮೇಡಂ. ನೀವು ಸಹಿತ ಪ್ರತಿ ಕಂತನ್ನು..ಬಿಡದೆ..ಓದಿ..ಪ್ರತಿಕ್ರಿಯೆ..ನೀಡಿ..ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಾ…ಅದು ನನಗೆ..ನನ್ನ ಬರವಣಿಗೆಗೆ…ಸ್ಪೂರ್ತಿ ಯಾಗಿದೆ…ಅದಕ್ಕಾಗಿ.. ಹೃತ್ಪರ್ವಕ ಧನ್ಯವಾದಗಳು.. ಈಗ ಮೂರನೇ ಕಾದಂಬರಿ ಪ್ರಾರಂಭಿಸಿದ್ದೇನೆ..ಹಲವಾರು… ಕಾರಣಗಳಿಂದ.. ಇನ್ನೂ ಮುಂದುವರಿಸಲಾಗುತ್ತಿಲ್ಲ..ಈ ತಿಂಗಳ.. ನಂತರ. ಕೈಗೆತ್ತುಕೊಳ್ಳುತ್ತೇನೆ…ಹೀಗೆ.. ನಿಮ್ಮ… ಪ್ರೋತ್ಸಾಹ.. ನಿರಂತರವಾಗಿ ರಲಿ…ಮತ್ತೊಮ್ಮೆ.ಧನ್ಯವಾದಗಳು.
ತಮ್ಮ ಎರಡೂ ಕಾದಂಬರಿಗಳೂ ಸಹಜ, ಸರಳ, ಸುಂದರ ನಿರೂಪಣೆಯಿಂದ ಓದುಗರ ಮನಗೆದ್ದಿವೆ. ..ನಾಗರತ್ನ ಮೇಡಂ. ನಿಮ್ಮ ಮುಂದಿನ ಕಾದಂಬರಿಯ ನಿರೀಕ್ಷೆಯಲ್ಲಿದ್ದೇವೆ…
ಧನ್ಯವಾದಗಳು ಶಂಕರಿ ಮೇಡಂ ನಿಮ್ಮ ಪ್ರೋತ್ಸಾಹ ವೇ ನಮಗೆ ಶ್ರೀ ರಕ್ಷೆ..ನನ್ನ ವಯುಕ್ತ ಕಾರಣದಿಂದ ಬರವಣಿಗೆ ಮಾಡಲಾಗುತ್ತಿಲ್ಲ ಇಷ್ಟರಲ್ಲೇ ಪ್ರಾರಂಭಿಸುತ್ತೇನೆ..ಮೇಡಂ.
ನಾಗರತ್ನ ಮೇಡಂ, ನೀವು ಕೃತಜ್ಞತೆ ತಿಳಿಸಿರುವ ಪರಿ ಸೊಗಸಾಗಿದೆ.
ಸುರಹೊನ್ನೆಯ ಬಗ್ಗೆ ತಮ್ಮ ಅಭಿಮಾನ, ಪ್ರೀತಿಗೆ ಋಣಿ.
ಧನ್ಯವಾದಗಳು ಗೆಳತಿ ಹೇಮಾ
ಧನ್ಯವಾದಗಳು ಪದ್ಮಾ ಮೇಡಂ