ಜೂನ್ ನಲ್ಲಿ ಜೂಲೇ : ಹನಿ 2

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…

ದಿಲ್ಲಿಯ ವಿಮಾನನಿಲ್ದಾಣದ ಮುಖ್ಯದ್ವಾರದಲ್ಲಿ  ಟಿಕೆಟ್ ಪರೀಕ್ಷಿಸುವ ಸೆಕ್ಯೂರಿಟಿ ವ್ಯಕ್ತಿಯು, ನಮ್ಮ ಟಿಕೆಟ್  ಆನ್ನು ನೋಡಿ ‘ಇದು ಗ್ರೂಪ್ ಟಿಕೆಟ್ ,  ಸ್ಪಷ್ಟವಾಗಿಲ್ಲ,  ‘ಗೋ ಏರ್’ ಸಂಸ್ಥೆಯ  ಕೌಂಟರ್ ಗೆ ಹೋಗಿ ಪ್ರಿಂಟ್ ಮಾಡಿದ ಟಿಕೆಟ್ ತನ್ನಿ’ ಅಂದ. ಸರಿ,  ಕೌಂಟರ್ ಅನ್ನು ಹುಡುಕಿ, ಎರಡು ಟಿಕೆಟ್ ಅನ್ನು ಮುದ್ರಿಸಲು ತಲಾ 50/- ಕೊಟ್ಟು ತಂದಾಯಿತು.  ಸರ್ವಿಸ್ ಏಜೆನ್ಸಿಯವರು ಸೃಷ್ಟಿಸುವ ಅನಾವಶ್ಯಕ ಕಿರಿಕಿರಿಗೆ ಅತ್ಯುತ್ತಮ ಉದಾಹರಣೆ ಇದು. ಕನಿಷ್ಟ ಮುನ್ನಾದಿನ ಸಂಜೆಯೊಳಗೆ ಮೆಸೇಜ್ ಬಂದಿದ್ದರೆ, ನಮ್ಮ ಬಡಾವಣೆಯಲ್ಲಿ  ನಾಲ್ಕು  ರೂ.ಗಳಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದಾಗಿತ್ತು, ಜತೆಗೆ ನೆಮ್ಮದಿಯಲ್ಲಿ ಇರಬಹುದಾಗಿತ್ತು.

ದಿಲ್ಲಿಯಿಂದ ಲೇಹ್ ಗೆ ವಿಮಾನದಲ್ಲಿ ಒಂದೂವರೆ ಗಂಟೆ ಪ್ರಯಾಣ. 24 ಜೂನ್ 2018  ರಂದು   ಬೆಳಗ್ಗೆ 0830 ಗಂಟೆಗೆ ದೆಹಲಿಯಿಂದ ಹೊರಡುವ ವಿಮಾನದಲ್ಲಿ ಪ್ರಯಾಣಿಸುವಾಗ ಹಿಮಾಲಯದ ಪ್ರರ್ವತ ಶ್ರೇಣಿಗಳ ಸೊಬಗು ಕಣ್ಮನ ತಣಿಸಿದುವು. ವಿಮಾನದಲ್ಲಿ ಮಾಮೂಲಿ ಸುರಕ್ಷಾ ವ್ಯವಸ್ಥೆಗಳ ಪ್ರಾತ್ಯಕ್ಷಿಕೆಯ ಜೊತೆಗೆ ,  ಲೇಹ್ ನಗರದ ಬಗ್ಗೆ ವಿಶೇಷ ಮಾಹಿತಿಯನ್ನೂ ಕೊಟ್ಟರು.

“ಸಮುದ್ರ ಮಟ್ಟದಿಂದ  11480 ಅಡಿ ಎತ್ತರದಲ್ಲಿರುವ ಲೇಹ್ ನಗರದಲ್ಲಿ ಕಡಿಮೆ ಆಮ್ಲಜನಕದಿಂದಾಗಿ ತಲೆಸುತ್ತು, ವಾಂತಿ, ಸುಸ್ತು ಇತ್ಯಾದಿ  ಮೌಂಟೇನ್ ಸಿಕ್ನೆಸ್ ಬರಬಹುದು, ಅಧೀರರಾಗಬೇಡಿ, ವಿಮಾನ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಲಭ್ಯವಿದೆ.  ಲೇಹ್ ಗೆ ಬಂದ ಪ್ರತಿಯೊಬ್ಬರಿಗೂ ಮೊದಲ ಒಂದೆರಡು ದಿನಗಳಲ್ಲಿ ಶರೀರವು ಅಲ್ಲಿನ ಹವೆಗೆ ಒಗ್ಗಿಕೊಳ್ಳುವುದು ಅಗತ್ಯ, ಬೆಚ್ಚಗಿನ ಬಟ್ಟೆ ಧರಿಸಿ, ಬಿಸಿಲಿನಲ್ಲಿ ಹೋಗುವಾಗ ತಂಪು ಕನ್ನಡಕ ಧರಿಸಿ, ಧಾರಾಳವಾಗಿ ನೀರು ಮತ್ತಿತರ ದ್ರವಾಹಾರಗಳನ್ನು ಸೇವಿಸಿ, ಸೈಕ್ಲಿಂಗ್, ಟ್ರೆಕ್ಕಿಂಗ್ ಇತ್ಯಾದಿ ಶರೀರಕ್ಕೆ ಸುಸ್ತಾಗುವ ಚಟುವಟಿಕೆಗಳನ್ನು ಕೂಡಲೇ ಹಮ್ಮಿಕೊಳ್ಳದಿರಿ, ಮೊದಲೆರಡು ದಿನ ವಿಶ್ರಾಂತಿ ಹಾಗೂ ಲಘು ನಡಿಗೆ ಮಾತ್ರ ಮಾಡಿ, ನಿಧಾನವಾಗಿ ನಡೆಯಿರಿ, ,..’  ಇತ್ಯಾದಿ ಸಲಹೆಗಳು ಮುದ್ರಿತ ದ್ವನಿಯ ಮೂಲಕ ತೇಲಿ ಬಂದುವು.

1000 ಗಂಟೆಗೆ ಸರಿಯಾಗಿ ನಾವು ಪ್ರಯಾಣಿಸುತ್ತಿದ್ದ ವಿಮಾನವು ಲೇಹ್ ನ  ‘ಕುಶೋಕ್ ಬಕುಲ ರಿಂಪೋಚೆ’ ವಿಮಾನನಿಲ್ದಾಣದ ಚಿಕ್ಕ ಓಡುದಾರಿಯಲ್ಲಿ ಓಡಿ ನಿಂತಿತು. ಭಾರತದ ಕಿರೀಟದಂತಿರುವ ಜಮ್ಮು-ಕಾಶ್ಮೀರ ರಾಜ್ಯದ ನೆತ್ತಿಯಲ್ಲಿರುವ ನೆಲವನ್ನು ಸ್ಪರ್ಶಿಸಿದಾಗ ಪುಳಕವಾಯಿತು.  ನಮ್ಮ ದೇಶದಲ್ಲಿ ಅತ್ಯಂತ ಎತ್ತರದ ಜಾಗದಲ್ಲಿರುವ ಏರ್ ಪೋರ್ಟ್ ಇದು.  ಚಿಕ್ಕದಾದ ವಿಮಾನನಿಲ್ದಾಣವನ್ನು ಹೊಕ್ಕಾಗ, ಹಳೆಕಾಲದ ಸಿನೆಮಾಗಳಲ್ಲಿ ಬರುವ  ಶಾನುಭೋಗರ  ಮನೆಗೆ ಪ್ರವೇಶಿಸಿದಂತಾಯಿತು!  ಅಲ್ಲಲ್ಲಿ ಬಣ್ಣಬಣ್ಣದ ಚಿತ್ತಾರಗಳುಳ್ಳ  ಮರದ ಕಂಬಗಳು, ಕಂಬಗಳಿಗೆ ತೂಗುಹಾಕಿದ ಟಿಬೆಟಿಯನ್ ಅಲಂಕಾರಿಕ ವಸ್ತುಗಳು, ಪ್ರಯಾಣಿಕರನ್ನು ಬಿಟ್ಟರೆ ಬೆರಳೆಣಿಕೆಯ ಸಿಬ್ಬಂದಿಗಳು, ಒಂದೋ-ಎರಡೋ ಕೌಂಟರ್ ಗಳು, ಅಲ್ಲಲ್ಲಿ ಕಾಣಿಸುವ ಸೇನೆಯ ಯೋಧರು…. ನೆಲಕ್ಕೆ ಹಾಕಿದ್ದ ಹೊಸ ಟೈಲ್ಸ್ ಮತ್ತು ತಿರುಗುವ ಬೆಲ್ಟ್ ನಲ್ಲಿ ಬರುತ್ತಿದ್ದ ನಮ್ಮ ಲಗೇಜುಗಳು ಮಾತ್ರ ಇದು ಏರ್ ಪೋರ್ಟ್ ಎಂದು ನೆನಪಿಸುತ್ತಿದ್ದುವು! ಅಬ್ಬಬ್ಬಾ ಅಂದರೆ ನಮ್ಮೂರ ಬಸ್ ಸ್ಟ್ಯಾಂಡ್ ನಷ್ಟು ದೊಡ್ಡದು  ಎಂಬ ಭಾವನೆ ಹುಟ್ಟಿಸುವ ವಿಮಾನನಿಲ್ದಾಣವದು.  

‘ಕುಶೋಕ್ ಬಕುಲ ರಿಂಪೋಚೆ’ ವಿಮಾನನಿಲ್ದಾಣದಲ್ಲಿ…

ಸಡಗರದಲ್ಲಿ ಒಂದೆರಡು ಚಿತ್ರಗಳನ್ನು  ಕ್ಲಿಕ್ಕಿಸುವಷ್ಟರಲ್ಲಿ, ಸೆಕ್ಯೂರಿಟಿಯವರು ಇಲ್ಲಿ ಚಿತ್ರ ಕ್ಲಿಕ್ಕಿಸಬಾರದು ಎಂದರು. ಬಹುಶ:  ಭಯೋತ್ಪಾದಕರ ಚಟುವಟಿಕೆ  ಬಗ್ಗೆ ಎಚ್ಚರಿಕೆ ಇರಬೇಕು. ವಿಮಾನ ನಿಲ್ದಾಣದ ಹೊರಗೆ ಬಂದಾಗ, ಓಯೋ ಟ್ರಾವೆಲ್ಸ್ ನವರ ಕೋರಿಕೆ  ಮೇರೆಗೆ, ಸ್ಥಳೀಯ ಏಜೆಂಟ್  ‘ಜಿಮ್’ ಎಂಬವರು ನಮಗಾಗಿ ಕಾಯುತ್ತಿದ್ದರು. ನಾವು ಒಟ್ಟು ಹತ್ತು ಜನ ಪ್ರವಾಸಿಗರಿದ್ದೆವು.  ನಮ್ಮನ್ನು, ನಿಗದಿಪಡಿಸಿದ್ದ ಹೋಟೆಲ್ ಗೆ ತಲಪಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡರು.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=36726

ಮುಂದುವರಿಯುವುದು..
-ಹೇಮಮಾಲಾ, ಮೈಸೂರು

3 Responses

  1. ಲಡಾಕ್ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು..ಮುಂದಿನ ಕಂತಿಗಾಗಿ ನಿರೀಕ್ಷೆ.. ಗೆಳತಿ ಹೇಮಾ

  2. ಶಂಕರಿ ಶರ್ಮ says:

    ಕರ್ನಾಟಕದ ಸಾಂಪ್ರದಾಯಿಕ ಮನೆಯಂತಿರುವ ವಿಮಾನ ನಿಲ್ದಾಣವು ಕುತೂಹಲ ಹುಟ್ಟಿಸುವಂತಿದೆ… ಬಹು ಸೊಗಸಾದ ಲೇಖನ.

  3. ನಯನ ಬಜಕೂಡ್ಲು says:

    ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: