ಸಿ.ಎನ್.ಮುಕ್ತಾ ಅವರ “ಆಕಾಶಕ್ಕೊಂದು ಏಣಿ”

Share Button

2017 ರಲ್ಲಿ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ.ಸಿ.ಎನ್. ಮುಕ್ತಾ ಅವರು ರಚಿಸಿರುವ ಆಕಾಶಕ್ಕೊಂದು ಏಣಿ” ಎಂಬ ಹೆಸರಿನ ಪುಸ್ತಕದಲ್ಲಿ ಎರಡು ಮಿನಿ ಕಾದಂಬರಿಗಳು ಪ್ರಕಟಗೊಂಡಿವೆ. ಆ ವೇಳೆಗಾಗಲೇ 80 ಕ್ಕೂ ಮೀರಿ ಕಾದಂಬರಿಗಳನ್ನು ರಚಿಸಿ, ಇನ್ನೂ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿರುವ ನುರಿತ ಲೇಖಕಿಯಿಂದ ಒಂದು ಪ್ರೌಢ ಕಾದಂಬರಿ “ಆಕಾಶಕ್ಕೊಂದು ಏಣಿ” ರಚಿತವಾಗಿದೆ, ಓದುವ ಓದುಗರ ಮನ ಸೆಳೆಯುತ್ತದೆ.

ಕಾದಂಬರಿಯಲ್ಲಿನ ಪ್ರಮುಖ ಆಕರ್ಷಣೆಯಲ್ಲೊಂದು, ಕಥಾವಸ್ತುವಿನ ಆಯ್ಕೆ. ನಾಲ್ಕು ಜನ ಗೆಳೆತಿಯರು, ಅದೂ ಗೆಳತಿಯರು ಅಂದ್ರೆ ಬಾಲ್ಯದ, ಹದಿಹರೆಯದ ಗೆಳತಿಯರಲ್ಲ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಪ್ರಬುದ್ಧ ಮನಸ್ಸಿನ ಹೆಣ್ಣುಮಕ್ಕಳು. ಅತ್ಯಂತ ವಿಭಿನ್ನ ಪರಿಸರದಿಂದ ಬಂದು ಒಂದಾಗಿ , ಗೆಳೆತಿಯರಾಗಿ, ನಂತರ ಟಿಸಿಲೊಡೆದ ಬಾಳಪಥದಲ್ಲಿ ಸಾಗಿ 20 ವರ್ಷಗಳ ನಂತರ ಭೇಟಿಯಾಗಿ 3-4 ದಿನಗಳನ್ನು ಒಟ್ಟಾಗಿ ಕಳೆಯುವ ವಿಭಿನ್ನ ಕಥಾವಸ್ತು. ಕಥಾವಸ್ತುವಿನ ಆಯ್ಕೆ ಹೇಗಿದೆ ಎಂದರೆ ಕಾದಂಬರಿ ಓದುವ ಪ್ರತಿಯೊಬ್ಬರೂ ತಮ್ಮ ಬಾಳಲ್ಲೂ ಇಂತಹ ಅವಕಾಶವನ್ನು ಎದುರು ನೋಡುವಂತಿದೆ. ನನಗೂ ಓದಿದ ತಕ್ಷಣ ಅನ್ನಿಸಿದ್ದು, ನಾನೂ ನನ್ನ ಕಾಲೇಜು ಗೆಳತಿಯರನ್ನು ಸಂಪರ್ಕಿಸಿ ಈ ರೀತಿ ಹೋಗಬೇಕೆನ್ನಿಸುದುದು, ಇರಲಿ. ಈ ಕಾದಂಬರಿಯಲ್ಲಿ ಪಾತ್ರಗಳ ಪೋಷಣೆ ಸೊಗಸಾಗಿ, ಎಲ್ಲೂ ಜಾಸ್ತಿ ಅಥವಾ ಕಮ್ಮಿ ಎನ್ನಿಸದಂತೆ ಪಾತ್ರಕ್ಕೆ ನ್ಯಾಯ ಒದಗಿಸುವಂತೆ ಮೂಡಿಬಂದಿರುವುದು.


ಅಂಬಿಕಾ ಶ್ರೀಮಂತೆ. ಮೊದಲಿನಿಂದಲೂ ನಾನು ಸರಿ, ಏಕೆಂದರೆ ನನ್ನ ಹತ್ತಿರ ತುಂಬಾ ದುಡ್ಡಿದೆ ಎಂಬ ಅಹಂ ಹೊಂದಿರುವ ಮಹಿಳೆ. ಸುಶಿಕ್ಷಿತಳಾದರೂ ಸಂಕುಚಿತ ಮನೋಭಾವದಿಂದ, ಸ್ವಪ್ರತಿಷ್ಟೆಯಿಂದ ತನ್ನ ಅಹಂಮಿನ ಕೋಟೆಯಿಂದ ಹೊರಬರಲಾರದೆ ದುರಂತಕ್ಕೆ ಈಡಾಗುತ್ತಾಳೆ.

ಮಾಲತಿ ಚಿಕ್ಕಂದಿನ ಬಡತನದಿಂದಾಗಿ, ತನ್ನ ಪೂರ್ವಾಗ್ರಹ ಪೀಡಿತ ಮನೋಭಾವದ ವರ್ತನೆಯಿಂದ ಮನೋಹರನ ಫೋನ್‌ ಕಾಲ್‌ ಗಳಿಗೆ ಉತ್ತರಿಸದೆ ತನ್ನ ಜೀವನದ 20 ವರುಷಗಳನ್ನು ಅನ್ಯಾಯವಾಗಿ ಕಳೆದುಕೊಳ್ಳುತ್ತಾಳೆ. ನಾವು ಎಷ್ಟೇ ಮಹಿಳಾ ಉದಾರೀಕರಣ ನೀತಿಯನ್ನು ಅನುಸರಿಸಿದರೂ ಸಾಮಾಜಿಕ ಕಟ್ಟುಪಾಡುಗಳಿಗೆ ಬದ್ಧರಾಗದಿದ್ದರೆ ಎದುರಿಸಬೇಕಾದ ಸಮಸ್ಯಗಳಿಗೆ ಕನ್ನಡಿ ಹಿಡಿಯುವಂತಿದೆ ಮಾಲತಿಯ ಪಾತ್ರದ ಚಿತ್ರಣ. ಮಾಲತಿ, ಮನೋಹರರದೇನೂ ಹದಿಹರೆಯದ ಹುಚ್ಚುಖೋಡಿಯ ವಯಸ್ಸಿನ ಪ್ರೇಮವಲ್ಲ. ಮಾಲತಿ ಏಕೆ ಒಮ್ಮೆಯದರೂ ಮನೋಹರನ ಕೌಟುಂಬಿಕ ವಿಷಯಗಳ ಬಗ್ಗೆ ವಿಚಾರಿಸಲು ಹೋಗಲಿಲ್ಲ ಎಂಬುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ಆದಾಗ್ಯೂ ಗೆಳತಿಯಾದ ಶಾರದಳ ಹಿತವಚನಗಳಿಗೆ ಕಿವಿಗೊಟ್ಟುದುದರ ಪರಿಣಾಮವಾಗಿ ಮತ್ತೆ ಬಾಳನ್ನು ಹಸನು ಮಾಡಿಕೊಳ್ಳುವುದು ಓದುಗರಿಗೆ ಖುಷಿ ನೀಡುತ್ತದೆ.

ಇನ್ನು ಮೃಣಾಲಿನಿ ಅಥವಾ ಮಿನ್ನಿಯ ಪಾತ್ರ, ಛಿದ್ರಗೊಂಡ ಕುಟುಂಬ ವ್ಯವಸ್ಥೆಗೆ ಬಲಿಯಾದ ಮಹಿಳೆಯ ಜೀವನ ಎಂದೇ ಹೇಳಬಹುದು. ಮಹಿಳಾ ಉದಾರೀಕರಣ ನೀತಿಯ ಅನುಕರಣೆ ಖಂಡಿತಾ ಅಗತ್ಯವಾದರೂ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ಮಧ್ಯೆಇರುವ ತೆಳುವಾದ ಗೆರೆಯನ್ನು ಗುರುತಿಸದಿದ್ದಾಗ ಉಂಟಾಗುವ ತಲ್ಲಣಗಳು, ಸಮಸ್ಯೆಗಳು ಮನುಷ್ಯರ ಬಾಳನ್ನು ನುಂಗಿ ನೀರು ಕುಡಿದು ಬಿಡುತ್ತವೆ ಎಂಬ ಅಂಶವನ್ನು ಎತ್ತಿಹಿಡಿಯುವಲ್ಲಿ ಕಾದಂಬರಿ ಗೆದ್ದಿರುವುದಕ್ಕೆ ಮಿನ್ನಿಯ ಪಾತ್ರದ ಚಿತ್ರಣ ಲೇಖಕಿ ಸಿ.ಎನ್.ಮುಕ್ತಾ ಅವರ ಲೇಖನಿಯಿಂದ ಅತ್ಯಂತ ಸಮಂಜಸವಾಗಿ ಮೂಡಿಬಂದಿದೆ. ಸುಶಿಕ್ಷಿತೆ, ಸುಂದರಿ, ಶ್ರೀಮಂತೆ, ಬುದ್ಧಿವಂತೆ, ಒಳ್ಳೆಯ ಮನಸ್ಸುಳವಳು, ಬೌದ್ಧಿಕವಾಗಿಯೂ ಉನ್ನತ ಮಟ್ಟದಲ್ಲಿದ್ದರೂ ಭಾವನಾತ್ಮಕವಾಗಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದರಲ್ಲಿ ಸೋತು, ಮಗಳು ಮಾನ್ಯಳ ಸೂಕ್ಷ್ಮ ಮನಕ್ಕೆ ಘಾಸಿಗೊಳಿಸಿ ಅವಳಿಂದ ತಿರಸ್ಕೃತಳಾಗುತ್ತಾಳೆ. ಮಾನ್ಯಳು ಹೇಳುವ ಮಾತುಗಳಾದ, – ಸಮಾಜದಲ್ಲಿ ಆರ್ಥಿಕ ಸ್ಥಿರತೆ ಇದ್ದರೆ ಮಾತ್ರ ಸಾಲದಮ್ಮ, ಸಾಮಾಜಿಕ ಸ್ಥಾನಮಾನಗಳೂ ಮುಖ್ಯ.ಅದು ಅಗತ್ಯವೂ ಹೌದು. ನಾನು ಇಂಥಹವರ ಮಗಳೂಂತ ಹೇಳಿಕೊಳ್ಳುವುದರಲ್ಲಿ ನೆಮ್ಮದಿ ಇರುತ್ತಮ್ಮ – ಎಂದು ಹೇಳಿದಾಗ, ಓದುಗಳಾದ ನನ್ನ ಮನ ಮಾನ್ಯಳೊಂದಿಗೆ ಮೃಣಾಲಿನಿಗಾಗಿಯೂ ಮಮ್ಮಲ ಮರುಗಿತು. ಮೃಣಾಲಿನಿ ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿಯಾಗುತ್ತಾಳೆ.

ಇನ್ನು ಶಾರದೆ ಹೊಂದಿಕೆ ಎಂಬ ವಜ್ರಕವಚವನ್ನು ಧರಿಸಿ ತನಗಾಗುತ್ತಿದ್ದ ನಿರಾಶೆಗಳನ್ನು ಹಿಂದಕ್ಕೆ ಸರಿಸಿ, ಕುಟುಂಬ ಜೀವನವನ್ನು ಅರಿತು ತನ್ನವರ ಬಾಳನ್ನೂ, ತನ್ಮೂಲಕ ತನ್ನ ಬಾಳನ್ನೂ ಹಸನು ಮಾಡಿಕೊಂಡ ನಾರಿ. ಜೀವನದ ಬದ್ಧತೆಯ ವಿಚಾರ ಬಂದಾಗ, ತಂದೆ ತಾಯಿಯರಿಗಾಗಿ ತ್ಯಾಗಕ್ಕೆ ಸಿದ್ದಳಾಗುತ್ತಾಳೆ. ಗಂಡನ ಅರಸಿಕತೆಯನ್ನು ಕ್ಷಮಿಸುತ್ತಾಳೆ. ಗೆಳತಿಯರಿಗೆ ಕಿವಿ ಮಾತುಗಳನ್ನು ಹೇಳುತ್ತಾಳೆ. ಮಾಲತಿ ತನ್ನ ಬಾಳನ್ನು ಪುನಃ ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರಧಾರಿಣಿ ಇವಳಾಗುತ್ತಾಳೆ. ಇವಳೆಲ್ಲ ಹೊಂದಾಣಿಕೆಗಳಿಗೆ ಅತ್ಯಂತ ಸುಮಧುರ ಫಲ ಬಾಳಿನ ಹೊಸ್ತಿಲಲ್ಲಿ ಸಮೃದ್ಧವಾಗಿ ಸಿಗುವುದು ಓದುಗರಿಗೆ ಒಂದು ಧನಾತ್ಮಕ ಭಾವವನ್ನು ನೆಮ್ಮದಿಯನ್ನು ನೀಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.

ಹಾಂ, ಹಾಗಂದು ಅವಳೆನೂ ನಿಃಶಕ್ತ ಮನಸ್ಸಿನವಳಲ್ಲ. ಪಿಜಿಯಲ್ಲಿರುವಾಗ ಅಂಬಿಕಳ ಶ್ರೀಮಂತಿಕೆಯ ಚುಚ್ಚುಮಾತುಗಳಿಗೆ ಮಾಲತಿ ನೊಂದುಕೊಂಡಾಗ ಸರಿಯಾದ ತಿರುಗೇಟು ನೀಡುತ್ತಾಳೆ. ಶಾರದೆಯ ಪಾತ್ರ ಆದರ್ಶ ನಾರಿಯದ್ದು ಎಂದುಕೊಂಡರೂ ಅದೇನು ಕಥೆಯಲ್ಲಿ ಮಾತ್ರ ಸಾಧ್ಯ ಎನ್ನುವಂಥಹುದಲ್ಲ. ಬಹುತೇಕ ನಮ್ಮ ಸಂಸ್ಕೃತಿಯ ಹೆಣ್ಣು ಮಕ್ಕಳು ಹೀಗೇ ಬಾಳು ಸವೆಸಿದವರು. ಹಿಂದಿನ ಕಾಲದಲ್ಲಿ ಹೀಗೇ ಇದ್ದು ಹೀಗೇ ಕಮರಿಹೋಗುವ ಜೀವಗಳಿದ್ದವು. ಆದರೆ ನಮ್ಮ “ಆಕಾಶಕ್ಕೊಂದು ಏಣಿ’ʼಯ ಶಾರದೆ ತನ್ನ ಹೊಂದಾಣಿಕೆಯ ಮನೋಭಾವಕ್ಕಾಗಿ ತುಂಬ ಸಿಹಿಯಾದ ಫಲವನ್ನು ಉಣ್ಣುತ್ತಾಳೆ. ಇದಕ್ಕೆ ಕಾರಣೀಭೂತಳಾದವಳು ಮಗಳು ಶ್ರಾವಣಿ.

ಹಾಗೆಯೇ ಕಾವೇರಿಯ ಪಾತ್ರವೂ ಕಥೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಕುಟುಂಬ ವ್ಯವಸ್ಥೆಯನ್ನು ಅಪ್ಪಿಕೊಂಡೂ ಸಾಮಾಜಿಕ ಕಳಕಳಿಯಿಂದ ಬದುಕುರೂಪಿಸಿಕೊಂಡ ಕಾವೇರಿಯ ಪಾತ್ರವೂ ಉಳಿಯ ಪೆಟ್ಟುಗಳಿಗೆ ಹೆದರದೆ ಸುಂದರ ಶಿಲ್ಪವಾಗಿ ಓದುಗರ ಮನದಲ್ಲಿ ಪೂಜ್ಯಸ್ಥಾನ ಪಡೆಯುತ್ತದೆ. ಅಂಬಿಕಳ ಗಂಡ ಶ್ರೀನಿವಾಸ, ಮಾನ್ಯಳನ್ನು ಸಾಕಿದ ಅಜ್ಜಿ, ಅವಳ ಮಗಳು ಭವಾನಿ, ಅಳಿಯ, ಮನೋಹರ . . ಮುಂತಾದ ಪಾತ್ರಗಳೂ ಮನುಷ್ಯ ಸಹಜ ಸಾತ್ವಿಕ ಗುಣಗಳನ್ನು ಹೊರಹಾಕುತ್ತಾ ಕಾದಂಬರಿಗೆ ನೈಜತೆಯನ್ನು ತಂದುಕೊಡುತ್ತದೆ.

ಒಟ್ಟಿನಲ್ಲಿ ಕಾದಂಬರಿ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಎಲ್ಲೂ ಹಿಂದೆ ಬಿದ್ದಿಲ್ಲ. ಆದರೆ ಅಲ್ಲಿ ಎಚ್ಚರ ವಹಿಸದಿದ್ದರೆ ಆಗಬಹುದಾದ ಅನಾಹುತಗಳನ್ನು ಬಿಂಬಿಸುವಲ್ಲಿಯೂ ಕಾದಂಬರಿ ಯಶಸ್ವಿಯಾಗಿದೆ. ಉದಾಹರಣೆಗೆ ಮುಕ್ತಾ ಅವರು ಎಲ್ಲೂ ಪ್ರೇಮ ವಿವಾಹವನ್ನು ವಿರೋಧಿಸಿಲ್ಲ. ಆದರೆ ಆ ಸಮಯದಲ್ಲಿ ತೆಗೆದುಕೊಳ್ಳ ಬೇಕಾದ ಎಚ್ಚರಿಕೆಗಳ ಬಗ್ಗೆ ಎಚ್ಚರಿಸಿದ್ದಾರೆ. ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಪರಿಹಾರವನ್ನು ಪಾತ್ರಗಳ ಮೂಲಕವೇ ಸೂಚಿಸಿದ್ದಾರೆ. ಮಾಲತಿ, ಮನೋಹರನ ಕೌಟುಂಬಿಕ ಹಿನ್ನೆಲೆ ತಿಳಿಯಲು ಪ್ರಯತ್ನಿಸದೇ ಇದ್ದುದು ತಪ್ಪಾಯಿತು. ಮೃಣಾಲಿನಿಗೆ ಲಿವ್-ಇನ್-ರಿಲೇಷನಶಿಪ್‌ ಬೇಕಿದ್ದರೆ, ಮಗುವಿಗೆ ಜನ್ಮ ನೀಡಬಾರದಿತ್ತು ಎಂದು ಕಾವೇರಿಯ ಪಾತ್ರದ ಮೂಲಕ ಹೇಳಿಸುವುದು . . . . ಹೀಗೆ ಪರಿಹಾರಗಳೂ ಕಥೆಯಲ್ಲೇ ಸಿಗುತ್ತವೆ. ಅಂಬಿಕಳ ಪಾತ್ರದ ಮೂಲಕ ಜೀವನದಲ್ಲಿ ಭಾವನಾತ್ಮಕ ಬಂಧನದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

“ಆಕಾಶಕ್ಕೊಂದು ಏಣಿ”, ಸಾಮಾಜಿಕ ಕಟ್ಟುಪಾಡುಗಳನ್ನು ಕಾಲಾನುಕ್ರಮದಲ್ಲಿ ಬದಲಾಯಿಸುಕೊಳ್ಳಬಹುದಷ್ಟೇ ಹೊರತು ಅವುಗಳನ್ನು ಬಿಟ್ಟೇ ಬಿಡುತ್ತೇನೆಂದರೆ ಬದುಕೇ ಇಲ್ಲ ಎಂಬ ಸಂದೇಶವನ್ನು ಘಂಟಾಘೋಷವಾಗಿ ಹೇಳುತ್ತದೆ. ಹಾಗೆಯೇ ʼಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ ʼ ಎಂಬುದು ಕವಿವಾಣಿಯೂ, ನಿಜವಾದುದೂ ಆದರೂ ಹೊಂದಾಣಿಕೆಯೇ ಜೀವನ ಎಂಬ ಸಂದೇಶವನ್ನೂ, ಸಹ್ಯ ಜೀವನದ ನಾಯಕ, ನಾಯಕಿಯರು ನಾವಾಗಬೇಕಿದ್ದರೆ ಭಾವನಾತ್ಮಕ ತಂತುಗಳನ್ನೂ ಸುಸ್ತಿತಿಯಲ್ಲಿ ಇಡಬೇಕೆಂಬ ಸುಂದರ ಸಂದೇಶವನ್ನೂ ಕಾದಂಬರಿ ನೀಡುತ್ತದೆ.

ಕಾದಂಬರಿಯನ್ನು ಓದಿ ಮುಗಿಸುವಾಗ ಮೂಡಿದ ಒಟ್ಟು ಅಭಿಪ್ರಾಯವೆಂದರೆ, ಕುಟುಂಬ ವ್ಯವಸ್ಥೆಯನ್ನೂ, ಸಾಮಾಜಿಕ ಬದ್ಧತೆಯನ್ನೂ ಎತ್ತಿ ಹಿಡಿಯುವ, ಓದುವ ಸುಖ ನೀಡಿದ, ಮನವನ್ನು ಚಿಂತನೆಗೆ ಹಚ್ಚುವ ಅನುಭವ ನೀಡಿದ ಕಾದಂಬರಿ “ಆಕಾಶಕ್ಕೊಂದು ಏಣಿ” ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಒಂದು ಕಾದಂಬರಿಯ ಗೆಲುವು ಓದುಗ, ಪಾತ್ರಗಳಲ್ಲಿ ತನ್ನನ್ನು ತಾನು ಚಿತ್ರಿಸಿಕೊಂಡು ಪರಕಾಯ ಪ್ರವೇಶ ಮಾಡುವಂತಾದಾಗ ಮಾತ್ರ ಎಂದು ತಿಳಿದವರು ಹೇಳುತ್ತಾರೆ. ಅದು ಈ ಕಾದಂಬರಿಯಲ್ಲಿ ಯಥೇಚ್ಛವಾಗಿ ಸಿಕ್ಕಿದೆ. ಶ್ರಾವಣಿ ತಾಯಿಗೆ, ಗಂಟು ಹಾಕಿಕೊಳ್ಳಬೇಡ, ಕೂದಲನ್ನು ಹಾಗೇ ಬಿಟ್ಟು ಕ್ಲಿಪ್‌ ಹಾಕಿಕೋ ಎನ್ನುವುದೂ, ಮಿನ್ನಿ ಅಡುಗೆ ಭಟ್ಟರ ಮಗಳ ನಿಶ್ಚಿತಾರ್ಥಕ್ಕೆ ಸಹಾಯ ಹಸ್ತ ಚಾಚುವುದೂ ಮುಂತಾದ ಸಣ್ಣ ಸಣ್ಣ ವಿಚಾರಗಳಿಗೂ ಗಮನ ಹರಿಸಿ ನೈಜತೆಯ ದಾರಿಯಲ್ಲಿ ಕಥೆಯನ್ನು ಕೊಂಡೊಯ್ಯುವಲ್ಲಿ ಲೇಖಕಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ.

ಆದರೂ ಎಲ್ಲೋ ಒಂದು ಕ್ಷಣ, ಎರಡು ಶ್ರೀಮಂತ ಪಾತ್ರಗಳು ದುರಂತ ಕಂಡು, ಮಿಕ್ಕೆರಡು ದಡ ಸೇರಿದ್ದು ನೋಡಿದರೆ, ಶ್ರೀಮಂತಿಕೆಯನ್ನು ಕುರಿತಾಗಿ ಪೂರ್ವಾಗ್ರಹ ಪೀಡಿತವೇ ಎಂದು ಒಂದೊಮ್ಮೆ ಅನ್ನಿಸಿದಾಗ, ಮತ್ತೊಮ್ಮೆ ಪೂರ್ಣವಾಗಿ ಕಾದಂಬರಿಯನ್ನು ಓದಿದ ನನಗೆ ಎಷ್ಟು ಸಹಜತೆಯಿಂದ ಸನ್ನಿವೇಶಗಳು ಬಿಂಬಿತವಾಗಿದೆಯೆಂದರೆ ಅದು ಕಾಕತಾಳೀಯವಷ್ಟೆ ಎಂದೆನಿಸಿ ಮನ ಸಮಾಧಾನ ಹೊಂದಿತು. ಒಂದು ಒಳ್ಳೆಯ ಕಾದಂಬರಿಯನ್ನು ಓದಿದ ತೃಪ್ತಿ ನನಗೆ ಸಿಕ್ಕಿತು.

ಖ್ಯಾತ ಲೇಖಕಿ ಸಿ.ಎನ್.ಮುಕ್ತಾ ಅವರ ಸಮ್ಮುಖದಲ್ಲಿ ಅವರದೇ ಕಾದಂಬರಿಗಳ ಕುರಿತು ವಿಶ್ಲೇಷಣೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅವರಿಂದಲೇ ಸ್ವೀಕರಿಸಿದ ಕ್ಷಣ..

-ಪದ್ಮಾ ಆನಂದ್‌

6 Responses

  1. ಕಾದಂಬರಿಯ ಸೂಕ್ಷ್ಮ ಅವಲೋಕನ ದ ವಿಶ್ಲೇಷಣೆ ಸೊಗಸಾಗಿ ಅನಾವರಣ ಗೊಂಡಿದೆ..ಅಭಿನಂದನೆಗಳು.. ಪದ್ಮಾ ಮೇಡಂ.

  2. ಶಂಕರಿ ಶರ್ಮ says:

    ಹಿರಿಯ ಕಾದಂಬರಿಗಾರ್ತಿ ಸಿ. ಎನ್. ಮುಕ್ತಾರವರ ಸೊಗಸಾದ ಕಾದಂಬರಿಯ ವಿಮರ್ಶೆಯು ಬಹಳ ಇಷ್ಟವಾಯ್ತು…ಧನ್ಯವಾದಗಳು ಮೇಡಂ.

  3. Padmini Hegde says:

    ಕಾದಂಬರಿಯ ಅವಲೋಕನ ಚೆನ್ನಾಗಿದೆ

  4. ನಯನ ಬಜಕೂಡ್ಲು says:

    ಚೆನ್ನಾಗಿದೆ ಅವಲೋಕನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: