ಜೀವ ಜಲ ಮತ್ತು ಮಳೆ

Share Button

ನೀರು  ಜೈವಿಕ ಪ್ರಪಂಚದ  ಚೈತನ್ಯ ಪ್ರಾಣಧಾರ. ನೆಲ ಮತ್ತು ಜಲ ಪ್ರಕೃತಿ ಕೊಟ್ಟ ಉಚಿತ ಕೊಡುಗೆಗಳು. ಅಂಬು, ಉದಕ, ಜಲ , ಪುಷ್ಕರ, ಪಯ ಇವು ನೀರಿನ ಸಮಾನ ಪದಗಳಾದರೂ  ಜೀವಜಲವೆಂದು ಕರೆಯುವಲ್ಲಿ ಅರ್ಥಪೂರ್ಣವಾದ ಹಾಗೂ ಕೃತಜ್ಞತೆಯ ಆಶಯವಿರುವುದರಿಂದ ನನಗಂತೂ  ಈ  ಪದ ತುಂಬಾ ಇಷ್ಟವೇ ಸರಿ.

ಸಾಮಾನ್ಯವಾಗಿ ಯಾರೇ  ಆಗಲಿ  ಊಟ ಕೇಳಿದರೆ , ಬಿಕ್ಷೆಗೆ ಹಣ ಕೇಳಿದರೆ ಇಲ್ಲವೆನ್ನಬಹುದು. ಆದರೆ ಕುಡಿಯಲು ನೀರು ಕೇಳಿದರೆ ಎಂಥವರೂ ಸಹಾ ಇಲ್ಲವೆನ್ನುವುದಿಲ್ಲ. ಈ ಮಾತನ್ನು ಹೇಳುವಾಗ ಬಾಲ್ಯದಲ್ಲಿ ನಮ್ಮತಾಯಿ ಹೇಳುತ್ತಿದ್ದಂಥ ಪುಟ್ಟ ಕಥೆಯೊಂದು  ನೆನಪಿಗೆ  ಬರುತ್ತದೆ. ಕಲ್ಲು ಕುಟಿಗ ದಂಪತಿಗಳು ಕಲ್ಲು ಕುಟ್ಟಿಕೊಂಡು ಜೀವನ  ಮಾಡುತ್ತಿದ್ದರು. ಒಮ್ಮೆ  ಗಂಡನಿಗೆ ಊಟಕ್ಕಿಟ್ಟ ಹೆಂಡತಿಗೆ ಕುಡಿಯಲು ನೀರು ಇಲ್ಲದ್ದನ್ನು ನೋಡಿ ನೀರು ತರಲು ಹೋಗುತ್ತಾಳೆ. ಮಣ್ಣಿನ ಕೊಡದಲ್ಲಿ ನೀರನ್ನು ತುಂಬಿಕೊಂಡು ಬರುವಾಗ ಹಸುವೊಂದು ನೀರು ಕುಡಿಯಲು ಕೊಡದತ್ತ ಕತ್ತನ್ನು ಚಾಚುತ್ತದೆ. ಆಗ ಅವಳು ಕರುಣೆಯಿಂದ ಅಯ್ಯೋ ಪಾಪ ಎನಿಸಿ ಕೊಡದ ಕಂಠವನ್ನೊಡೆದು ಹಸುವಿನ ಮುಂದೆ ನೀರಿಡುತ್ತಾಳೆ. ಹಸುವೇನೋ ಹೊಟ್ಟೆ ತುಂಬ ನೀರು ಕುಡಿಯಿತು. ಅವಳು ನೀರು ತರದೆ ಬರಿಗೈಯಲ್ಲಿ ಬಂದದ್ದನ್ನು ನೋಡಿ ಸಿಟ್ಟಿಗೆದ್ದ ಗಂಡನು ಕಲ್ಲು ಕುಟ್ಟುವ ಆಯುಧದಿಂದಲೇ ಅವಳನ್ನು ಹೊಡೆದಾಗ ಅವಳು ಸತ್ತು ಹೋಗುತ್ತಾಳೆ. ಅವನು ಶಿಕ್ಷೆಯನ್ನು ಅನುಭವಿಸುತ್ತಾನೆ. ಆದರೆ ಅವಳು  ನೀರುಣಿಸಿದ ಪುಣ್ಯದಿಂದ ತನ್ನ ಮುಂದಿನ ಜನ್ಮದಲ್ಲಿ ರಾಜಕುಮಾರಿಯಾಗಿ ಹುಟ್ಟುತ್ತಾಳೆ. ಕಥೆಯ  ಸತ್ಯಾಸತ್ಯಗಳ ಬಗ್ಗೆ ಯೋಚಿಸಲಾಗದ ಬಾಲ್ಯದಲ್ಲಿ ನಾನು ಮುಗ್ಧತೆಯಿಂದ ನಂಬಿರಬಹುದು. ಆದರೆ ಆ ಕಥೆಯ ಸಂದೇಶವು ಇಂದಿಗೂ ನನ್ನ ಮೇಲೆ ಪ್ರಭಾವವನ್ನು ಬೀರುತ್ತಿದೆ. ಆದ್ದರಿಂದ ನಾನು ಯಾವತ್ತೂ ಕುಡಿಯಲು ನೀರು ಕೇಳಿದರೆ ಇಲ್ಲ ಎನ್ನುವುದಿಲ್ಲ. ಹೊರಗೆ ಹೋದ ಕಾಲದಲ್ಲಿಯು ಸಹ ನನಗೇ ನೀರು ಸಾಲದೆ ಬರಬಹುದು ಎಂಬ ಅರಿವಿದ್ದರು ಸಹಾ ಕೊಟ್ಟು ಬಿಡುತ್ತೇನೆ. ನಾನೇನೂ ಯಾರೂ ಮಾಡದಂಥ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿಲ್ಲ. ಆ ಕಥೆ ಬೀರಿದ ಪ್ರಭಾವವನ್ನು ತಿಳಿಸಲು ಹೇಳಿದೆ. ಕೆಲವು ಮನೆಗಳ ಮುಂದೆ ಜಾನುವಾರುಗಳಿಗಾಗಿ ಕಲ್ಲಿನ ಸಣ್ಣಬಾನಿಗಳಲ್ಲಿ, ಪಕ್ಷಿಗಳಿಗಾಗಿ ಆವರಣದ ಅಡ್ಡಗೋಡೆಯ ಮೇಲೆ ಮಡಕೆ ಮುಚ್ಚಳಗಳಲ್ಲಿ ನೀರಿಟ್ಟಿರುವುದನ್ನು ಕಂಡಾಗ ಮನೆಯವರ ಸಹೃದಯಿತನಕ್ಕೆ ಮನ ತುಂಬಿ ಬರುವುದು. ಒಮ್ಮೆ ಮಳೆಯಿಲ್ಲದೆ ಬರಗಾಲದ ಕಾರಣದಿಂದ ಬಹಳಷ್ಟು ಬಾವಿಗಳು ನೀರಿಲ್ಲದೆ ಒಣಗಿದಾಗ  ಊರಿನ ಜನರು ನೀರು ತುಂಬಿಸಿಕೊಳ್ಳಲು ನಮ್ಮ ತೋಟದ ಬಾವಿಗೆ  ಬರುತ್ತಿದ್ದರು. ಆಗ ನಮ್ಮ ಅಜ್ಜಿಯವರು ಬೇಡವೆಂದು ಅಡ್ಡಿ ಮಾಡದೆ ಉದಾರತೆಯನ್ನು ತೋರಿದರೆಂಬುದು ನನಗೆ ಬಾಲ್ಯದ ನೆನಪು. 

ಇಂತಹ ಜೀವಜಲಕ್ಕೆ ಮೂಲ ಮಳೆ. ಮಳೆ ಪ್ರಕೃತಿಯ ಅದ್ಭುತ ಕೊಡುಗೆ. ಮಳೆಯ ಲೀಲೆಗೆ ಮನ ಸೋಲದವರುಂಟೇ?ಇಂಥ ಮಳೆಗೆ ಮೈ ಒಡ್ಡಿ ನೆನೆಯಲು ಇಷ್ಟ ಪಡದವರು ಇದ್ದಾರೆಯೇ? ಮಳೆಯಲ್ಲಿ ನೆನೆವುದೆಂದರೆ ಪ್ರಕೃತಿಯ ಸಾಂಗತ್ಯವನ್ನು ನಾವು ಅನುಭವಿಸಿದಂತೆ. ಮಳೆಯು ಒಂದು ದೊಡ್ಡ ಸಂಪತ್ತು. ಕೆರೆ ಕಟ್ಟೆಗಳ,ಬಾವಿ,ನದಿಗಳ ನೀರಿನ ಮೂಲವೇ ಮಳೆ. ಮಳೆಯು ಸುರಿವ ರೀತಿಯಲ್ಲೇ ಅದಕ್ಕೆ ವಿವಿಧ ವಿಶೇಷಣಗಳನ್ನಿಟ್ಟಿದ್ದಾರೆ ಜಡಿಮಳೆ, ಸೋನೆಮಳೆ, ತುಂತುರು ಮಳೆ, ಸುರಿಮಳೆ, ಭಾರಿ ಮಳೆ, ಧಾರಾಕಾರ ಮಳೆ. ಆಲಿಕಲ್ಲು ಮಳೆ, ಕುಂಭ ದ್ರೋಣ ಮಳೆ ಇತ್ಯಾದಿ. ಸೋನೆ ಮಳೆಯ ಸೌಂದರ್ಯ ಸವಿಯುತ್ತಾ ಕುರುಕಲು ತಿಂಡಿಗಳನ್ನು ತಿನ್ನುವ ಮಜವೇ ಮಜಾ ! ತುಂತುರು ಮಳೆಯಲ್ಲಿ ನೆನೆಯುತ್ತ ಆಡುವ ಮಕ್ಕಳನ್ನು ನೋಡುವುದೇ ಚೆಂದ ! ಸುರಿವ ಜಡಿಮಳೆಗೆ ಬೇಸತ್ತು ಬೆಚ್ಚಗೆ ಮನೆಯಲ್ಲಿ ಟಿ.ವಿ.ನೋಡುವ ಮೋಜೇನು ಕಡಿಮೆಯದಲ್ಲ ! ಇನ್ನು ಗುಡುಗು ಸಿಡಿಲ ಆರ್ಭಟದ ಕುಂಭ ದ್ರೋಣ ಮಳೆಗೆ ಹೆದರತ್ತ ಮನೆಯ ಕಿಟಕಿ ಬಾಗಿಲು ಮುಚ್ಚಿ ಅನುಭವಿಸುವ ಆತಂಕ ತಲ್ಲಣಗಳಿಗೆ ಕೊನೆಯುಂಟೇ ?

ಮಳೆ ನಕ್ಷತ್ರಗಳ ಪ್ರವೇಶ ಮತ್ತು ಅವುಗಳ ಅವಧಿಯ ಬಗ್ಗೆ  ಪಂಚಾಂಗದಲ್ಲಿ ಮಾಹಿತಿ ಲಭ್ಯವಿರುತ್ತದೆ. ಮಳೆ ನಕ್ಷತ್ರಗಳ ಹೆಸರುಗಳು ಮತ್ತುಅವುಗಳಿಗೆ ಸಂಬಂಧಿಸಿದ ಗಾದೆಗಳಂತೂ  ದೇಸಿ ಭಾಷೆಯ ಸೊಗಡನ್ನು ಬೀರುತ್ತವೆ. ಉದಾ:  ಭರಣಿ ಮಳೆಗೆ ಧರಣಿಯೆಲ್ಲ ಬೆಳೆ, ಅನುರಾಗಿ ಮಳೆ ಬಂದು ಮನೆ ರಾಗಿ ಹೊತ್ಕೊಂಡು ಹೋಯ್ತು, ಆರದೇ ಸುರಿಯೋದೆ ಆರಿದ್ರ ಮಳೆ, ಮಘಾ ಮಳೆಯಲ್ಲಿ ಮೈ ನಡುಗೋ ಚಳಿ ,ಸ್ವಾತಿ ಮಳೆ ಮುತ್ತಿನ ಬೆಳೆ ಇತ್ಯಾದಿ. ಬಿಸಿಲ ತಾಪದ ಧಗೆ, ಮೋಡ ಕಟ್ಟುವ ರೀತಿ, ಗಿಡ ಮರದ ಎಲೆಗಳ ಮೇಲೆ ಗೆದ್ದಲ ಗೆರೆಗಳ ಆಧಾರದ ಮೇಲೆಯೇ ಅನುಭವಿ ಹಿರಿಯ ರೈತರು ಮಳೆಯ ಭವಿಷ್ಯದ  ಬಗ್ಗೆ ನಿಖರವಾಗಿ ಹೇಳುತ್ತಾರೆ .ಮಳೆಯ ಕಾಲವನ್ನಾಧರಿಸಿಯೆ ಮುಂಗಾರು ಮಳೆ ಮತ್ತು ಹಿಂಗಾರು ಮಳೆ ಎಂದು ವಿಭಾಗಿಸಿ ಹೇಳಲಾಗುತ್ತದೆ. ಈ ಮಳೆಗಳ ಕಾಲಕ್ಕನುಗುಣವಾಗಿ ಬೆಳೆಗಳ ನಿರ್ಧಾರವಾಗುತ್ತದೆ.

ಬೇಸಿಗೆಯ ಮೊದಲ ಮಳೆಯು ತರುವ ಮಣ್ಣಿನ ಗಮಲಿಗೆ ಮನ ಸೋಲದವರುಂಟೇ ? ಮೊದಲ ಮಳೆ ಮಾತ್ರ ತರುವ ಈ ಸುಗಂಧ ಭಾಗ್ಯವನ್ನು ಆಸ್ವಾದಿಸುತ್ತಿದ್ದಾಗ ಇನ್ನಷ್ಟು ಬೇಕು  ಅನ್ನಿಸುವ ಆಸೆ ಮೂಡಿದರೆ ಅಚ್ಚರಿಯೇನಲ್ಲ ಮರಗಿಡಗಳಿಗೆ ನಾವೆಷ್ಟೇ ನೀರೆರೆದರೂ ಮಳೆ ತರುವ ತೃಪ್ತಿಯನ್ನು ಕೊಡಲು ಅಸಾಧ್ಯ ಮಳೆಯಲ್ಲಿ ಮಿಂದೆದ್ದ ಮರಗಿಡಗಳು ನಳನಳಿಸುವ ನೋಟವನ್ನು ಮರೆಯಲಾದೀತೆ ?ಮಳೆನೀರ ಧಾರೆಗೆ ಮೈಒಡ್ಡಿ   ಶುಭ್ರವಾದ ಪರಿಸರ  ಕಣ್ಣಿಗೆ ಹಿತವಲ್ಲವೇ ? ಮಳೆಗಾಲದಲ್ಲಿನ ಹಚ್ಚ ಹಸಿರ ಹೊಲಗದ್ದೆ ತೋಟ ತುಡಿಕೆಗಳು ನೋಡಲದೆಷ್ಟು  ಆಹ್ಲಾದಕರ. ತುಂಬಿದ ಕೆರೆಕಟ್ಟೆಗಳು, ತುಂಬಿ ಹರಿವ ನದಿಗಳು ಹಾಗೂ ಧುಮ್ಮಿಕ್ಕುವ ಜಲಪಾತಗಳನ್ನು ಕಂಡಾಗ ಮೈಮರೆವ  ಸ್ಥಿತಿಗೇನು ಹೇಳುವುದು ? ಅದೇ ತಾನೇ ನೀರಿನ ಸೆಳೆತ. ಕಳೆದ ಮಳೆಗಾಲದಲ್ಲಿ ತುಂಬಿ ಕೋಡಿ ಬಿದ್ದಂಥ ಕೆರೆಗಳ ಅಪೂರ್ವ ದೃಶ್ಯಗಳನ್ನು ಕಣ್ತುಂಬಿ ಕೊಳ್ಳಲು ಧಾವಿಸುತ್ತಿದ್ದ ಜನಜಂಗುಳಿಯನ್ನು ನೋಡಿದಾಗ ನೀರಿಗಿರುವ ಅದ್ಭುತ ಆಕರ್ಷಣೆಯನ್ನು ಕಂಡು ಬೆರಗಾಗುತ್ತೇವೆ ಅದೇ ಅಲ್ಲವೇ ಜೀವ ಜಲದ ಚೈತನ್ಯ ! ತುಂಬಿದ ಕೆರೆಗಳು ನಮ್ಮ ರೈತರ ಬದುಕಿಗೆ  ನೆಮ್ಮದಿ ನೀಡುವ ಭರವಸೆಗಳಾಗಿವೆ. ಅನ್ನದಾತನೊಡನೆ ನೆಲ ಜಲದ ಬಾಂಧವ್ಯ  ಬಿಡಿಸಲಾಗದ್ದು ಇಂತಹ ಜೀವ ಜಲದ ಸೆಲೆಯಾದ ಮಳೆಯ ಅತಿವೃಷ್ಟಿಯನ್ನು ನೋಡಿದಂಥ ದೂರದರ್ಶನದ ನಿರೂಪಕ/ಕಿ ಯರು ಜಲರಾಕ್ಷಸ, ಜಲಾಸುರ ಹಾಗೂ ಜಲ ಪ್ರಳಯಾಂತಕ ಎಂಬ ವಿಚಿತ್ರ ವಿಶೇಷಣಗಳ ಬಿರುದು ಕೊಡುವಾಗ ಕೇಳಲು  ಕೇಳಲು ಕರ್ಕಶವೇ ಆಗಿರುತ್ತದೆ. ಆಗ ಇವರನ್ನು ಜಲಸಾಕ್ಷರತೆ ಬಗ್ಗೆ ಅರಿವಿಲ್ಲದ ಅನಕ್ಷರಸ್ಥರೆಂದೆ ತಿಳಿಯಬೇಕಾಗಿದೆ.

ನೀರಿನ ಬಳಕೆ ಸಮರ್ಪಕವಾಗಿ ಅಗುವಲ್ಲಿ ‘ ಮಳೆಕೊಯ್ಲು ‘ ಒಂದು ಸುಸ್ಥಿರವಾದ ಹಾಗೂ ಪ್ರಕೃತಿ ಪೂರಕವಾದ ಮಾರ್ಗ. ಮಳೆಕೊಯ್ಲಿನ ಅರ್ಥಗರ್ಭಿತ ವ್ಯಾಖ್ಯಾನ ಹೀಗಿದೆ. ‘ ಓಡುವ ನೀರನ್ನು ನಡೆಯುವಂತೆ ಮಾಡುವುದು, ನಡೆಯುವ ನೀರನ್ನು ತೆರಳುವಂತೆ ನೋಡಿಕೊಳ್ಳುವುದು, ತೆವಳುವ ನೀರನ್ನು ನಿಲ್ಲು ವಂತೆ ಮಾಡುವುದು, ನಿಂತ ನೀರನ್ನು ಇಂಗಿಸುವುದು.’ ನಾವು ಜಲ ಸಮೃದ್ಧಿಯನ್ನು ಕಾಣಬೇಕಾದರೆ ನೀರು – ಮಣ್ಣು -ಕಾಡು ( ಜಲ್, ಜಮೀನ್ ಜಂಗಲ್ ) ಈ ಮೂರು ನೈಸರ್ಗಿಕವಾದ ಸಂಪತ್ತುಗಳ ನಡುವೆ ಇರುವಂಥ ಅವಿನಾಭಾವ ಸಂಬಂಧದ ಅರಿವಿರಬೇಕು. ಒಂದರ ನಾಶವು ಮತ್ತೊಂದರ ಧಕ್ಕೆಗೆ ದಾರಿ ಮಾಡಿಕೊಡುತ್ತದೆ. ಹೀಗೆ ‘ನೀರಿನ ಪೋಲು ನಾಡಿನ ಸೋಲು’ ಎಂಬುದರ ಬಗ್ಗೆ ಜನಜಾಗೃತಿ ಉಂಟಾಗಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಾಮೂಹಿಕ ಪ್ರಯತ್ನಗಳು ಇಂದಿನ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ .

ಎಂ. ಆರ್.ಅನಸೂಯ

3 Responses

  1. ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ.. ಧನ್ಯವಾದಗಳು ಮೇಡಂ

  2. ಶಂಕರಿ ಶರ್ಮ says:

    ಸುರಿದು ನಷ್ಟವಾಗುವ ಜೀವ ಜಲದ ಉತ್ತಮ ನಿರ್ವಹಣೆ ಕುರಿತ ಅಪೂರ್ವ ಮಾಹಿತಿಯುಕ್ತ ಲೇಖನ..ಧನ್ಯವಾದಗಳು.

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: