ಪರಮ ಪುರುಷ ‘ಪಿಪ್ಪಲಾದ’

Share Button

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಲ್ಲ! ಅಲ್ಲಲ್ಲಿಗಾಹಾರ ಇತ್ತವರು ಯಾರು?’ ಎಂಬುದು ದಾಸರ ಪದದ ಸೊಲ್ಲು. ಹೌದು, ಮಾನವರ ಹುಟ್ಟು, ಸಾವು, ಜೀವರಕ್ಷಣೆ ಮೊದಲಾದವುಗಳಿಗೆಲ್ಲ ಆ ಪರಮಾತ್ಮನೇ ಕಾರಣ. ಮಾನವನ ಪ್ರಯತ್ನಕ್ಕೆ ದೇವರ ಅನುಗ್ರಹ. ಆತನ ಕೃಪೆ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂಬುದು ಆಸ್ತಿಕವಾದ, ಪೂರ್ವದಲ್ಲಿ ದಧೀಚಿ ಮಹರ್ಷಿಯ ಮಗನಾದ ”ಪಿಪ್ಪಲಾದ”ನ ಕತೆಯೂ ಈ ವಾದವನ್ನು ಸ್ಪಷ್ಟಿಕರಿಸುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ. ‘ದಧೀಚಿ’ ಮುನಿಯ ಬಗ್ಗೆ ನಾವು ಹಿಂದೆ ಇದೇ ಅಂಕಣದಲ್ಲಿ ತಿಳಿದಿದ್ದೇವೆ. ಈತನ ಪುತ್ರನೇ ಪಿಪ್ಪಲಾದ, ತಾಯಿ ‘ಸುವರ್ಚೆ’.

‘ದಧೀಚಿ’ಯ ಕಾಲದಲ್ಲಿ ಒಮ್ಮೆ ದೇಶಕ್ಕೆ ಭೀಕರ ಕ್ಷಾಮ ಬಂದೊದಗಿತಂತೆ. ಹಳ್ಳ,ಕೊಳ, ಕೆರೆ, ಬಾವಿ, ನದಿ, ಮೊದಲಾದ ಜಲಾಶಯಗಳಲ್ಲಿ ನೀರಿಲ್ಲದೆ ಬರಿದಾದುವಂತೆ. ಬರಬರುತ್ತಾ ಜನರು, ಪ್ರಾಣಿ, ಪಕ್ಷಿಗಳೂ ನೀರಡಿಕೆ ನೀಗಿಸಲೂ ನೀರಿಗೆ ಪರದಾಡುವಂತಾಯ್ತು. ಋಷಿ ತನ್ನ ಪತ್ನಿ ಪುತ್ರರೊಂದಿಗೆ ಊರು ಬಿಟ್ಟು ಅರಣ್ಯದಲ್ಲಿ ಅಲೆಯುತ್ತಾನೆ. ಹೀಗಿರಲು ಅವರಿಗೆ ಎಲ್ಲೋ ಒಂದು ಕಡೆ ಸಣ್ಣ ನೀರಿನ ಕೊಳ ಕಾಣಸಿಗುತ್ತದೆ. ತತ್ಕಾಲಕ್ಕೆ ಬೇಕಾದಷ್ಟು ನೀರು ಕುಡಿದು ದಾಹ ತೀರಿಸಿದ್ದಾಯ್ತು. ಆದರೆ ಈ ಪುಟ್ಟ ನೀರಿನ ಆಶ್ರಯವು ಮೂವರಿಗೂ ಬಹುದಿನ ಜೀವಿಸಲು ಸಾಲುವಂತಿಲ್ಲ. ಈ ಬಾಲಕನ್ನು ಇಲ್ಲಿಯೇ ಬಿಟ್ಟು ತೆರಳಿದರೆ ಅವನಾದರೂ ಬದುಕುಳಿದಾನು. ಮಹರ್ಷಿ ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾನೆ. ಜೊಂಪು ಹತ್ತಿದ ಬಾಲಕನನ್ನು ಅಲ್ಲಿಯೇ ಬಿಟ್ಟು ಪತ್ನಿಯೊಂದಿಗೆ ಬೇರೆ ಕಡೆ ಹೊರಟು ಹೋಗುತ್ತಾನೆ.

ಎಚ್ಚರವಾದಾಗ ಏಕಾಂಗಿಯಾದ ಮಗು ಅಳುವುದಕ್ಕೆ ಪ್ರಾರಂಭಿಸಿತು. ಆದರೆ ಮಗುವಿನ ಅಳುವು ಅರಣ್ಯರೋದನವಾಯ್ತು. ರಕ್ಷಿಸುವ ಪರದೈವಕ್ಕೆ ತಿಳಿಯದೇ?

ಆಗಸ ಮಾರ್ಗದಲ್ಲಿ ಸಾಗುತ್ತಿದ್ದ ನಾರದರು ಈ ಅನಾಥ ಮಗುವನ್ನು ಕಂಡು ಕೆಳಗಿಳಿದು ಬರುತ್ತಾರೆ. ಮಗುವಿನೊಂದಿಗೆ ವಿಚಾರಿಸಿದಾಗ ವಿಷಯ ತಿಳಿಯಿತು. ಹಸಿವಿನಿಂದ ರೋಧಿಸುತ್ತಿದ್ದ ಬಾಲಕನನ್ನು ಸಂತೈಸಿ ಹತ್ತಿರದಲ್ಲೇ ಇದ್ದ ‘ಪಿಪ್ಪಲಿ’ ಹಣ್ಣನ್ನು ತಂದು ಕೊಡುತ್ತಾರೆ. ಹಸಿವು ಅಡಗಿದ ಬಾಲಕನಿಗೆ ನವಚೈತನ್ಯ ಬಂತು. ನಾರದರು ಅವನಿಗೆ ದ್ವಾದಶಾಕ್ಷರೀ ಮಂತ್ರವನ್ನು ಉಪದೇಶಿಸಿದರು. ಮಂತ್ರೋಚ್ಚಾರಣೆ ಮಾಡುತ್ತಾ ಬಾಲಕ ತಪಸ್ಸಿನಲ್ಲಿ ನಿರತನಾದ. ನಾರದರು ಅದೃಶ್ಯರಾದರು. ಆ ಬಾವಿಯ ನೀರನ್ನು ಕುಡಿಯುತ್ತಾ ತಪಸ್ಸು ಮಾಡುತ್ತಾ ಹಸಿವಾದಾಗ ಪಿಪ್ಪಲಿ ಹಣ್ಣು ತಿಂದು ಹೊಟ್ಟೆ ಹೊರೆಯುತ್ತಾ ಇದ್ದ ಬಾಲಕ. ಹೀಗೆ ಅನೇಕ ದಿನಗಳು ಸರಿಯಲು ಆತನ ತಪಃಶಕ್ತಿ ವೃದ್ಧಿಸಿತು. ಹುಡುಗನಿಗೆ ಆತ್ಮಶಕ್ತಿ ಒಲಿದು ಜ್ಞಾನಿಯಾದನು.

ಒಂದು ದಿನ ನಾರದರು ಬಂದು ಆತನ ಮುಂದೆ ನಿಂತರು. ಗುರುಗಳೆಂದು ಬಗೆದ ಬಾಲಕ ಸಾಷ್ಟಾಂಗವೆರಗಿದ. ಆತನನ್ನು ಕಂಡು ನಾರದರಿಗೆ ಬಹಳ ಆನಂದವಾಯಿತು. ಪಿಪ್ಪಲಿಹಣ್ಣು ತಿಂದು ಮರುಜೀವ ಪಡೆದ ಆ ಬಾಲಕನಿಗೆ ನಾರದರು ‘ಪಿಪ್ಪಲಾದ’ ಎಂದು ಹೆಸರಿಟ್ಟು ಕರೆದರು. ‘ಊರಿಗೆ ಬರಗಾಲ ಬಂದು ತಾನು ನಿರ್ಗತಿಕನಾದೆ. ಹೀಗೆ ಊರಿಗೆ ಕ್ಷಾಮ ಬರಲು ಕಾರಣವೇನು ಗುರುಗಳೇ?” ಎಂದು ನಾರದರಲ್ಲಿ ಕೇಳಿದ ಪಿಪ್ಪಲಾದ. ಇದಕ್ಕೆ ಶನಿಯ ವಕ್ರದೃಷ್ಟಿಯೇ ಕಾರಣವೆಂದು ನಾರದರು ವಿವರಿಸಿದರು. ಈಗ ಬಾಲಕನಿಗೆ ಶನಿಯ ಮೇಲೆ ಸಹಿಸಲಾಗದ ಸಿಟ್ಟು ಬಂತು. ತನ್ನ ಕಣ್ಣಿನಲ್ಲಿ ಕೆಂಡಕಾರುತ್ತಾ ಶನಿಯನ್ನು ಶಪಿಸಿದ. ಈ ತಪಸ್ವಿ ಬಾಲಕನ ಶಾಪ ಶನಿಗೆ ತಗಲಿತ್ತು. ಶನಿಯು ಹಿಮಾಲಯ ಪರ್ವತದ ಕೊಳವೊಂದರಲ್ಲಿ ಬಿದ್ದು ತನ್ನ ಒಂದು ಕಾಲನ್ನು ಮುರಿದುಕೊಂಡ. ನಿಯಮಿತ ವ್ಯವಸ್ಥೆಗೆ ಚ್ಯುತಿ ಬಂತಲ್ಲವೇ?

ಆಗ ನಾರದರು ‘ಮಗೂ ಪಿಪ್ಪಲಾದ, ಆ ಶನಿಮಹಾಶಯನಿಗೆ ಇಂತಹ ಶಿಕ್ಷೆ ಕೊಡಬೇಡ. ಅವನನ್ನು ಮನ್ನಿಸು. ಭೂಮಿ, ಚಂದ್ರ, ರವಿ, ನಕ್ಷತ್ರಗಳೆಲ್ಲ ಭಗವಂತನ ಕರುಣೆ, ಅವರಿಗೆಲ್ಲ ಅವರದೇ ಆದ ಸ್ಥಾನವನ್ನು ಭಗವಂತ ಕಲ್ಪಿಸಿದ್ದಾನೆ. ಅವರೆಲ್ಲ ಅವರವರ ಸ್ಥಾನದಲ್ಲಿದ್ದರೇ ಲೋಕಕ್ಕೆ ಕ್ಷೇಮ. ಶನಿಯು ಮೊದಲಿನಂತೆ ಸ್ವಸ್ಥಾನ ಸೇರುವಂತೆ ಮಾಡು’ ಎಂದು ಗುರುಗಳು ನುಡಿದಾಗ ಪಿಪ್ಪಲಾದ ಅವರ ಮಾತಿಗೆ ಮನ್ನಣೆ ನೀಡಿದ ಮುಂದೆ ಪಿಪ್ಪಲಾದ ನಚಿಕೇತನನ್ನು ಭೇಟಿಯಾಗುತ್ತಾನೆ. ನಚಿಕೇತನು ಅವನಿಗೆ ಸಾವಿನಾಚೆಗಿನ ರಹಸ್ಯವನ್ನೂ ಯಮಲೋಕ, ನರಕದ ವಿಷಯಗಳನ್ನೂ ವಿವರಿಸುತ್ತಾನೆ. ಮುಂದೆ ಪಿಪ್ಪಲಾದ ಶ್ರೀ ರಾಮನ ವಂಶದವನಾದ ಅನರಣ್ಯನ ಮಗಳು ಪದ್ಮಾವತಿಯನ್ನು ವಿವಾಹವಾಗುತ್ತಾನೆ.

‘ಹುಟ್ಟಿಸಿದ ದೇವ ಹುಲ್ಲು ಮೇಯಿಸುವನೇ’! ಉಗುರೆಡೆಯ ಆಯಸ್ಸು ಇದ್ದಲ್ಲಿ ಬದುಕುಳಿಯಬಹುದು. ಯಾರದೋ ನಿಮಿತ್ತ ತಂದು ಪರದೈವ ಅವರಿಗೆ ಅನುಗ್ರಹಿಸಬಹುದು. ಕ್ರಮೇಣ ಅವರು ಪರಮ ಪುರುಷರಾಗಬಹುದು ಎಂಬುದಕ್ಕೆ ಪಿಪ್ಪಲಾದನೇ ಶ್ರೇಷ್ಠ ಉದಾಹರಣೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Vijayasubrahmanya says:

  ಅಡ್ಮಮಿನ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 2. ಪೌರಾಣಿಕ ಕಥೆ ಪಿಪ್ಪಲಾದ..ಸೊಗಸಾಗಿ ಮೂಡಿಬಂದಿದೆ.. ಧನ್ಯವಾದಗಳು ವಿಜಯಾ ಮೇಡಂ.

 3. ಶಂಕರಿ ಶರ್ಮ says:

  ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ? ಎಂಬುದು ಎಷ್ಟೊಂದು ನಿಜ!! ಅಂತೆಯೇ ಪಿಪ್ಪಲಾದನ ಕಥೆ ಅರ್ಥಪೂರ್ಣವಾಗಿದೆ.

 4. Padmini Hegde says:

  ಪಿಪ್ಪಲಾದನ ಪರಿಚಯ ಮಾಡಿರುವುದು ಚೆನ್ನಾಗಿದೆ

 5. Keshava Murthy says:

  ಪಿಪ್ಪಲಾದ ಮುನಿಯ ಪೂರ್ವ ವೃತ್ತಾಂತವನ್ನು ಓದುಗರಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಇದೇ ಪಿಪ್ಪಲಾದರು ಮುಂದೆ ತಮ್ಮ ಆರು ಜನ ಶಿಷ್ಯರ ಆರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಅವರ ಸಂದೇಹಗಳನ್ನು ನಿವಾರಿಸುತ್ತಾರೆ. ಅದನ್ನು ‘ಪ್ರಶ್ನೋಪನಿಷತ್ತಿನಲ್ಲಿ’ ನೋಡಬಹುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: