ಉಶಸನ ‘ಶುಕ್ರಾಚಾರ್ಯ’ನಾದ ಬಗೆ…

Share Button

ಪುರಾಣಲೋಕದಲ್ಲಿ ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿ, ಗೊರವ, ನಿಷ್ಠೆ ಮೊದಲಾದ ಮೌಲ್ಯಯುತ ಸ್ಪಂದನಗಳಿದ್ದುವು. ಇದಕ್ಕೆ ದೃಷ್ಟಾಂತವಾಗಿ, ‘ಉದ್ದಾಲಕ’, ‘ಉಪಮನ್ಯು’ ‘ಏಕಲವ್ಯ’, ‘ಕಚ’ ಮೊದಲಾದ ಪುರುಷರತ್ನರನ್ನು ಇದೇ ಅಂಕಣದಲ್ಲಿ ಪರಿಚಯಿಸಿದ್ದೇನೆ. ಅಂತೆಯೇ ಗುರುಗಳೂ ಅದಕ್ಕೆ ಪ್ರತಿಯಾಗಿ ಶಿಷ್ಯರಲ್ಲಿ ಅಪಾರ ಪ್ರೀತಿ, ಮಮತೆ, ಆತ್ಮೀಯತೆ, ವಿಶ್ವಾಸವಿರುತ್ತದೆ. ಕೆಲವೊಮ್ಮೆ ಇದು ಎಷ್ಟು ಗಟ್ಟಿಯಾಗಿ, ಭದ್ರವಾಗಿ ತಳವೂರಿರುತ್ತದೆ ಎಂದರೆ …ತನ್ನ ಸ್ವಂತ ದೇಹಕ್ಕಾಗುವ ಅಪಾಯವನ್ನೂ ಲೆಕ್ಕಿಸದೆ ಶಿಷ್ಯನ ಏಳ್ಗೆಗಾಗಿ ಶ್ರಮಿಸಿದ ಗುರುಗಳನೇಕರು ಆಗಿ ಹೋಗಿದ್ದಾರೆ. ಈ ಸಾಲಿಗೆ ಸೇರಿದವರಲ್ಲಿ ಶುಕ್ರಾಚಾರ್ಯರ ಪಾತ್ರ ಹಿರಿದಾದುದು. ಸುರರ ಗುರು ಬೃಹಸ್ಪತಾಚಾರ್ಯರಾದರೆ ಅಸುರರ ಗುರು ‘ಶುಕ್ರ’ರು. ಇವರ ತಂದೆ ಭೃಗು ಮಹರ್ಷಿಯಾದರೆ. ತಾಯಿ ಪುಲೋಮಾ ದೇವಿ. ಇವರ ಮಗ ಉಶಸನ. ಈತನು ಶುಕ್ರಾಚಾರ್ಯರೆನಿಸಿದ ಕತೆ ಕುತೂಹಲವಾಗಿದೆ.

ಒಮ್ಮೆ ಮಹಾಕ್ರೂರಿಯಾದ ರಾಕ್ಷಸನೊಬ್ಬನಿಗೆ ಯಾವುದೋ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಶ್ರಯ ಕೊಡಬೇಕಾಗಿ ಬಂತು ಪುಲೋಮಾ ದೇವಿಗೆ. ಈ ಕಾರಣಕ್ಕಾಗಿ ಕ್ರೋಧಗೊಂಡ ಮಹಾವಿಷ್ಣು ಆಕೆಯನ್ನು ಕೊಂದನು. ಇದನ್ನರಿತ ಭೃಗು ಸಿಟ್ಟಿನಿಂದ ಏನು ಮಾಡುವುದೆಂದು ತೋಚದೆ, ಮಹಾವಿಷ್ಣು ಭೂಮಿಯಲ್ಲಿ ಹಲವಾರು ಅವತಾರಗಳನ್ನು ಎತ್ತುವಂತಾಗಲಿ ಎಂದು ಶಾಪವಿತ್ತನು. ‘ಊರ್ವಶಿ ಶಾಪ ಊರಿಗೆ ಉಪಕಾರ ‘ ಎನ್ನುವಂತೆ ಇದರಿಂದಾಗಿ, ಮಹಾವಿಷ್ಣುವಿನ ಹತ್ತು ಅವತಾರಗಳನ್ನು ಲೋಕದ ಜನರು ಕಾಣುವಂತಾಯ್ತು.

‘ಉಶಸನ’ ಶುಕ್ರಾಚಾರ್ಯನಾದ ಬಗೆ:
ತಾಯಿ ಸ್ವರ್ಗಸ್ಥಳಾದಾಗ ಭೃಗು ಪುತ್ರ ‘ಉಶಸನ’ನು ಇನ್ನೂ ಯುವ ಬಾಲಕ. ಶ್ರೀಹರಿಯಿಂದ ತನ್ನ ತಾಯಿಗೆ ಅನ್ಯಾಯವಾಗಿದೆ. ಪೂರ್ವಾಪರ ಯೋಚಿಸದೆ ದೇವತೆಗಳ ಪಕ್ಷಪಾತಿಯಾಗಿ ನಿಂತ ಶ್ರೀಹರಿ ಬಗ್ಗೆ, ದೇವತೆಗಳ ಬಗ್ಗೆ ಅನಾದರ ಮೂಡಿತು ಉಶಸನ ಮನಸ್ಸಲ್ಲಿ. ಸಾಧನೆ ಮಾಡಿ ತಪ:ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಐಶ್ವರ್ಯಕ್ಕೆ ಒಡೆಯನಾದ ಕುಬೇರನ ಸಂಪತ್ತನ್ನೆಲ್ಲ ವಶಮಾಡಿಕೊಂಡ. ಐಶ್ವರ್ಯ ಕಳಕೊಂಡ ಮೇಲೆ ದೇವಲೋಕಕ್ಕೆ, ಕುಬೇರನಿಗೆ ಅಸ್ತಿತ್ವವಿದೆಯೇ? ತೀರಾ ಕಂಗೆಟ್ಟ ಕುಬೇರ ತನ್ನ ಸಹಚರರನ್ನೆಲ್ಲಾ ಕೂಡಿಕೊಂಡು ಕೈಲಾಸಕ್ಕೆ ಹೋಗಿ ಪರಮೇಶ್ವರನಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಂಡ. ಕುಬೇರನಿಗೆ ಅಭಯವನ್ನಿತ್ತ ಪರಮೇಶ್ವರ ಉಶಸನನನ್ನು ದಮನ ಮಾಡುವ ಉಪಾಯ ಚಿಂತಿಸಿದ. ತನ್ನ ತ್ರಿಶೂಲದಿಂದ ಸಂಹಾರ ಮಾಡುತ್ತೇನೆಂದು ಹೊರಟ. ಇದನ್ನರಿತ ಉಶಸನ ಶಿವನ ತ್ರಿಶೂಲದ ತುದಿಯಲ್ಲಿ ಅಡಗಿ ಕುಳಿತ. ವಿಷಯ ತಿಳಿದ ಶಿವ ತ್ರಿಶೂಲವನ್ನು ಬಗ್ಗಿಸಿದ. ಅದು ಧನುಸ್ಸಿನ ರೂಪ ತಾಳಿತು. ಇಷ್ಟೊತ್ತಿಗೆ ಉಶಸನ ಶಿವನ ಬಾಯಿಯ ಮುಖಾಂತರ ಆತನ ಹೊಟ್ಟೆಯನ್ನು ಸೇರಿದ. ಇನ್ನು ಕೊಲ್ಲುವುದಕ್ಕೆ ಶಿವನಿಂದಲೂ ಅಸಾಧ್ಯವಾಯಿತು. ಶಿವ ಒಂದೆಡೆ ತಪಸ್ಸಿಗೆ ಕುಳಿತ. ತನ್ನ ನವದ್ವಾರಗಳನ್ನು ಮುಚ್ಚಿಕೊಂಡು ತಪಸ್ಸು ಮಾಡುತ್ತಿರುವಾಗ ಉಶಸನನಿಗೆ ಹೊರಗೆ ಬರಲು ಅಸಾಧ್ಯವಾಯಿತು. ದಾರಿಕಾಣದ ಉಶಸನ ಪರಮೇಶ್ವರನಿಗೆ ಶರಣಾದ. ಕೊನೆಗೆ ಶಿವನು ಅವನನ್ನು ಹೊರಬರುವಂತೆ ಹೇಳಿದನು. ಉಶಸನ ಹೊರ ಬಂದಾಗ ಶಿವನು ಆತನನ್ನು ಕೊಲ್ಲಲು ಸನ್ನದ್ಧನಾದ. ಆದರೆ ಪಾರ್ವತಿಯು ತಡೆದು ‘ನಿಮ್ಮ ಹೊಟ್ಟೆಯಿಂದ ಬಂದ ಈತ ಮಗನಿಗೆ ಸಮಾನ. ಇವನನ್ನು ಕೊಲ್ಲಬೇಡಿ’ ಎಂದು ತಡೆದಳು . ತನ್ನ ಮೂಲಕ ಪುನರ್ಜನ್ಮ ಪಡೆದ ಈ ಬಾಲಕನಿಗೆ ಶಿವ ‘ಶುಕ್ರ’ ಎಂದು ಹೆಸರಿಟ್ಟು ಕರೆದ. ಶಿವನ ಅಪ್ಪಣೆಯಂತೆ ಶುಕ್ರ ದೇವತೆಗಳ ಸಂಪತ್ತನ್ನು ಅವರಿಗೆ ಹಿಂತಿರುಗಿಸಿದ. ಮುಂದೆ ಈತನು ಅಸುರರ ಏಳ್ಗೆಗಾಗಿ ಶ್ರಮಿಸುತ್ತಾ ಅವರ ಗುರುವಾಗಿ ಶುಕ್ರಚಾರ್ಯನೆನಿಸಿದ.

ಶುಕ್ರನ ಸಹೋದರ ಚ್ಯವನ, ಈತನ ಪತ್ನಿ ಶತಪರ್ವೆ, ಇವನಿಗೆ ಊರ್ಜಸ್ವತಿ, ಜಯಂತಿ ಎಂಬ ಪತ್ನಿಯರೂ ಇದ್ದರು. ಶುಕ್ರಾಚಾರ್ಯರಿಗೆ ಊರ್ಜಸ್ವತಿಯಲ್ಲಿ ದೇವಯಾನಿ ಎಂಬ ಮಗಳಿದ್ದಳು. ಶುಕ್ರಾಚಾರ್ಯನು ತನ್ನ ತಂದೆಯಾದ ಶಿವನನ್ನು ಕುರಿತು ತಪಸ್ಸು ಮಾಡಿ ಮೃತಸಂಜೀವಿನಿ ವಿದ್ಯೆಯನ್ನು ಕಲಿತುಕೊಂಡನು. ಶುಕ್ರನಿಗೆ ಒಂದೇ ಕಣ್ಣು.

ಒಕ್ಕಣ್ಣನಾದ ಬಗೆ: ಒಮ್ಮೆ ಶುಕ್ರಚಾರ್ಯನ ಶಿಷ್ಯನಾದ ಬಲಿಚಕ್ರವರ್ತಿಯ ಅಹಂಭಾವವನ್ನು ಅಡಗಿಸಲು ಮಹಾವಿಷ್ಣುವು ಬಲಿಯು ಯಜ್ಞ ಮಾಡುತ್ತಿರುವಲ್ಲಿಗೆ ವಾಮನ ರೂಪದಿಂದ ಬಂದನು. ವಾಮನ ರೂಪಿಯು ತನಗೆ ತಪಸ್ಸಿಗೆ ಕೂರಲು ಮೂರಡಿ ಜಾಗ ಬೇಕೆಂದು ಕೇಳಿದನು. ಬಲಿಯು ವಾಮನಿಗೆ ಮೂರು ಹೆಜ್ಜೆ ಜಾಗ ಧಾರೆಯೆರೆದು ಕೊಡಲು ಸನ್ನದ್ಧನಾದಾಗ ಶುಕ್ರನು ‘ಈತನು ವಾಮನ ರೂಪಿಯಾದ ಮಹಾವಿಷ್ಣು, ಈತನಿಗೆ ಭೂಮಿ ದಾನಕೊಡಬೇಡ’ವೆಂದು ಪರಿಪರಿಯಾಗಿ ಹೇಳಿದ್ದರೂ ಬಲಿ ಚಕ್ರವರ್ತಿ ಕೇಳಲಿಲ್ಲ. ಆದರೂ ತನ್ನ ಶಿಷ್ಯ ಬಲಿಯನ್ನು ಉಳಿಸಬೇಕೆಂಬ ದೃಷ್ಟಿಯಿಂದ ಶುಕ್ರನು ಧಾರೆಯೆರೆಯಲು ತಯಾರಾದ ಬಲಿಯ ಕೊಂಬುಗಿಂಡಿಯಿಂದ ನೀರು ಬಾರದಂತೆ ಸಣ್ಣದೊಂದು ಕಪ್ಪೆಯ ರೂಪತಾಳಿ ಅಡ್ಡವಾಗಿ ಕುಳಿತನು. ನೀರು ಬಾರದಿರಲು ಬಲಿಯು ಒಂದು ದರ್ಭೆಯ ಮೊನೆಯಿಂದ ಗಿಂಡಿಯ ತೂತನ್ನು ಚುಚ್ಚಿದನು. ಆಗ ಕಪ್ಪೆಯ ರೂಪದಲ್ಲಿದ್ದ ಶುಕ್ರರ ಒಂದು ಕಣ್ಣು ಹೋಯಿತು. ನೀರು ಹರಿಯಿತು. ಶುಕ್ರನು ಒಕ್ಕಣ್ಣನಾದ. ತನ್ನ ಶಿಷ್ಯನಿಗಾಗಿ ಈ ಗುರುವು ತನ್ನ ಕಣ್ಣನ್ನು ಕಳೆದುಕೊಂಡ.

ಶುಕ್ರಾಚಾರ್ಯರ ವಶದಲ್ಲಿದ್ದ ಮೃತಸಂಜೀವಿನಿ ವಿದ್ಯೆಯನ್ನು ತಾವೂ ಕಲಿಯಬೇಕೆಂದು ಬಗೆದ ದೇವತೆಗಳು ಬೃಹಸ್ಪತಿಯ ಮಗನಾದ ‘ಕಚ’ನನ್ನು ಶುಕ್ರರಲ್ಲಿಗೆ ಕಳುಹಿಸಿ ಆತನು ದೇವಯಾನಿಯನ್ನು ಮೋಹಿಸಿ ಮೃತಸಂಜೀವಿನಿ ವಿದ್ಯೆ ಕಲಿತ ಬಗೆಯನ್ನು ಈ ಹಿಂದೆ ಇದೇ ಅಂಕಣದಲ್ಲಿ ತಿಳಿಸಿದ್ದೇನೆ. ಅಂತೂ ಶುಕ್ರಾಚಾರ್ಯರ ಸಹನೆ, ಸಾಧನೆ ತ್ಯಾಗ ವಿಶಿಷ್ಟವಾದುದು. ತನ್ನ ತಾಯಿಗಾದ ಅನ್ಯಾಯಕ್ಕಾಗಿ ವಿಷ್ಣು ಆದಿಯಾಗಿ ದೇವತೆಗಳಲ್ಲಿ ಸೇಡು ತೀರಿಸಿಕೊಂಡ, ಸಹನೆಯಿಂದ, ತನ್ನನ್ನು ದಹಿಸಲು ಬಂದ ಶಿವನನ್ನೇ ಒಲಿಸಿಕೊಂಡ. ಮೃತಸಂಜೀವಿನಿ ವಿದ್ಯೆಯನ್ನೂ ವಶಪಡಿಸಿಕೊಂಡ. ಶಿಷ್ಯನ ಏಳ್ಗೆಗಾಗಿ ತನ್ನ ಕಣ್ಣನ್ನೇ ಕಳೆದುಕೊಂಡು ಒಕ್ಕಣ್ಣನಾದ. ಅಸುರರ ಗುರುವಾದರೂ ಶುಕ್ರಚಾರ್ಯರಿಂದ ಕಲಿಯಬೇಕಾದ್ದು ಬಹಳಷ್ಟಿದೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

 1. ನಾಗರತ್ನ ಬಿ. ಆರ್ says:

  ಪೌರಾಣಿಕ ಕಥೆಗಳನ್ನು ಮತ್ತೆ ಮತ್ತೆ ನಮ್ಮ ಕಣ್ಣಮುಂದೆ ತರುತ್ತಿರುವ ನಿಮಗೆ ಧನ್ಯವಾದಗಳು ವಿಜಯಾ ಮೇಡಂ

 2. ನಯನ ಬಜಕೂಡ್ಲು says:

  Nice

 3. ಶಂಕರಿ ಶರ್ಮ says:

  ಶುಕ್ರಾಚಾರ್ಯರಿಗೆ ಈ ಹೆಸರು ಬರಲು ಕಾರಣವಾದ ಕಥೆ ತುಂಬ ಚೆನ್ನಾಗಿದೆ.

 4. Anonymous says:

  ಧನ್ಯವಾದಗಳು ಅಡ್ಮಿನರ್ ಹೇಮಮಾಲಾ ಹಾಗೂ ಓದುಗರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: