ಜೂನ್ ನಲ್ಲಿ ಜೂಲೇ : ಹನಿ 6

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಯಾಕ್ ಮೃಗದ ಉಣ್ಣೆಯ ಶಾಲು

ಚೈನೀಸ್ ಬೌಲ್ ಹೋಟೆಲ್ ನಲ್ಲಿ ಹೊಟ್ಟೆತುಂಬಿಸಿಕೊಂಡು  ಆ ‘ಚಾಂಗ್ಸ್ ಪಾ’ ರಸ್ತೆಯಲ್ಲಿ ಉದ್ದಕ್ಕೂ ಏನಿದೆಯೆಂದು ನೋಡುತ್ತಾ ಬರುತ್ತಿದ್ದಾಗ  ಒಂದು ಅಂಗಡಿಯಾತ ‘ಆಯಿಯೇ, ಶಾಲ್ ಹೈ, ಬ್ಯಾಗ್ ಹೈ ಕ್ಯಾ ಚಾಹಿಯೇ’ ಎಂದು ಕರೆದ. ನಮಗೇ ಏನೂ ಬೇಕಾಗಿರಲಿಲ್ಲ. ಸಮಯವಿತ್ತು. . ಹಾಗಾಗಿ ಅಂಗಡಿಯ ಒಳ ಹೊಕ್ಕು ವಿವಿಧ ಅಲಂಕಾರಿಕ ವಸ್ತುಗಳು, ಲೇಹದ ಕಿವಿಯ ಆಭರಣಗಳು, ಬ್ಯಾಗ್ , ಪರ್ಸ್ ಮುಂತಾದ ಕರಕುಶಲ ವಸ್ತುಗಳು,  ಯಾಕ್ ಮೃಗದ ಉಣ್ಣೆಯ ಶಾಲುಗಳು ಇತ್ಯಾದಿ ನೋಡುತ್ತಾ ದರ ಕೇಳಿದೆವು. ಅಂಗಡಿಯಾತನ ಹೆಸರು ಸಫೀಕ್. ಬಹಳ ಮುತುವರ್ಜಿಯಿಂದ ಮಾರಾಟದ ವಸ್ತುಗಳನ್ನು ತೋರಿಸುತ್ತಿದ್ದ. 

“ನಮಗೆ ಮನೆಗೆ ಫೋನ್ ಮಾಡಬೇಕಿತ್ತು, ಇಲ್ಲಿ ಎಲ್ಲಿಯಾದರೂ ಕಾಯಿನ್ ಬೂತ್ ಇದೆಯೆ, ನಮ್ಮ್ ಫೋನ್ ಇಲ್ಲಿ ಕೆಲಸ ಮಾಡುತ್ತಿಲ್ಲ’ ಎಂದೆವು. ಆತ ಕೂಡಲೆ, ತನ್ನ ಫೋನ್ ಕೊಟ್ಟು ಧಾರಾಳವಾಗಿ ಮಾತನಾಡಿ ಎಂದ. ನಾವೆಲ್ಲರೂ ಅವರವರ ಮನೆಯವರಿಗೆ ಮಾತನಾಡಿ, ನಾವು  ಸುರಕ್ಷಿತವಾಗಿದ್ದೇವೆಂದೂ, ಲೇಹ್ ನಲ್ಲಿ ನಮ್ಮ  ಫೋನ್ ಕೆಲಸ ಮಾಡದಿರುವುದರಿಂದ, ಇಂಟರ್ ನೆಟ್ ಸಿಗದೇ ಇರುವುದರಿಂದ, ಸಂದರ್ಭ ಸಿಕ್ಕಿದಾಗ ಸಂಪರ್ಕಿಸುತ್ತೇವೆ. ಹಾಗಾಗಿ ಯಾವುದೋ ಅಪರಿಚಿತ ಸಂಖ್ಯೆಯಿಂದ ಫೋನ್ ಮಾಡುವ ಸಾಧ್ಯತೆ ಇದೆ ತಿಳಿಸಿದೆವು. ನಮಗೆ ಬೇರೇನೂ ಕೆಲಸವಿರಲಿಲ್ಲ, ಆತನಿಗೆ ಆ ಸಮಯಕ್ಕೆ ಬೇರೆ ಗಿರಾಕಿಗಳು ಇದ್ದಿರಲಿಲ್ಲ.  ಹಾಗಾಗಿ ಆರಾಮವಾಗಿ ಹರಟುತ್ತಾ ಇದ್ದೆವು. ಆತ ಹಸನ್ಮುಖಿಯಾಗಿದ್ದ. ಆತನ ಬಳಿ ಸ್ಥಳೀಯ ವಿಚಾರಗಳ ಬಗ್ಗೆ , ಪ್ರೇಕ್ಷಣೀಯ ತಾಣಗಳ ಬಗ್ಗೆ  ಬಹಳಷ್ಟು ಮಾಹಿತಿಯನ್ನು ಕೇಳಿ ತಿಳಿದೆವು.

ಸಫೀಕ್ ಮಾತನಾಡುತ್ತಾ, ನಾವು ಪ್ರಯಾಣಿಸಲಿರುವ ಮುಂದಿನ ಜಾಗಗಳಲ್ಲಿ ಬಹಳ ಚಳಿ ಇರುತ್ತದೆಯೆಂದೂ, ನಾವು ತೊಟ್ಟಿದ್ದ ಸ್ವೆಟರ್ ಚಳಿ ತಡೆಯಲಾರದು ಎಂದೂ ತಿಳಿಸಿದ. “ನಮ್ಮಲ್ಲಿ  ಯಾಕ್ ಮೃಗದ ಉಣ್ಣೆಯಿಂದ ತಯಾರಿಸಿದ ಉತ್ತಮ ಗುಣಮಟ್ಟದ ಶಾಲುಗಳಿವೆ. ಯಾಕ್ ಮೃಗವನ್ನು ಕೊಂದು ಶಾಲುಗಳನ್ನು ತಯಾರಿಸುವುದಿಲ್ಲ. ಕುರಿಯ ತುಪ್ಪಳವನ್ನು ಕತ್ತರಿಸಿ ಶಾಲು ತಯಾರಿಸುವ ರೀತಿಯಲ್ಲಿಯೇ ಇದನ್ನು ತಯಾರಿಸುತ್ತಾರೆ” ಎಂದು ವಿವರಿಸಿ, ನಮಗೆ ಪಾಪಪ್ರಜ್ಞೆ ಬಾರದಂತೆ ಜಾಗ್ರತೆ ವಹಿಸಿದ. ಬೇಕಿಲ್ಲದಿದ್ದರೂ,  ಕಲರ್, ಡಿಸೈನ್, ಬಾರ್ಡರ್ ಎಂದು ಆಯ್ಕೆ ಮಾಡುತ್ತಾ  ಸವಿತ ಮತ್ತು ನಾನು ಒಂದೊಂದು  ಶಾಲು ಕೊಂಡೆವು. ಒಂದೆರಡು   ಜೋಳಿಗೆಯಂತಹ  ಕರಕುಶಲ ಚೀಲಗಳನ್ನೂ ಖರೀದಿಸಿದೆವು. ಅಲ್ಲಿವರೆಗೆ, ನಮ್ಮ ಹರಟೆ, ವ್ಯಾಪಾರಗಳನ್ನು ಮೂಕಪ್ರೇಕ್ಷಕರಾಗಿ  ದಿವ್ಯನಿರ್ಲಕ್ಷ್ಯದಿಂದ ನೋಡುತ್ತಿದ್ದ   ನಮ್ಮ  ಭಾವ ಕೊನೆಯ ಕ್ಷಣದ ಸ್ಫೂರ್ತಿ ಪಡೆದು ದಿಢೀರ್ ಆಗಿ ತಾನು ಒಂದು ದುಬಾರಿ ಕಾಶ್ಮೀರಿ ‘ಪಶ್ಮೀನಾ’ ಶಾಲನ್ನು ಕೊಂಡುಕೊಳ್ಳುವುದಾಗಿ ಹೇಳಿ, ನಮಗೂ, ಸಫೀಕ್ ಗೂ ಅಚ್ಚರಿ ಹಾಗೂ ಸಂತಸ ಮೂಡಿಸಿದರು! ಒಟ್ಟಿನಲ್ಲಿ, ಅನಿರೀಕ್ಷಿತವಾದರೂ ಅಲ್ಲಿ ಎಲ್ಲರೂ  ಖರೀದಿಸಿದ ವಸ್ತುಗಳು ನಮ್ಮ ಮುಂದಿನ ಪ್ರಯಾಣಕ್ಕೆ ಬಹಳ ಸಹಕಾರಿಯಾದುವು.

ಮರಳಿ ಹೋಟೆಲ್ ಗ್ಯಾಲಕ್ಸಿ..
ಲಡಾಖಿ ಜನರಿಗೆ ಪ್ರವಾಸೋದ್ಯಮವೇ ಮುಖ್ಯ ಆದಾಯದ ಮೂಲ. ವರ್ಷದ ಐದು ತಿಂಗಳು ಇಲ್ಲಿ ವಾಸಿಸುವ ಈ ಜನರು, ಇಲ್ಲಿ ಒಂದು ಮನೆ ಮತ್ತು  ಸ್ವಲ್ಪ ಕೆಳಭಾಗದಲ್ಲಿರುವ ಜಮ್ಮು, ಹಿಮಾಚಲ ಪ್ರದೇಶ, ಉತ್ತರಾಖಂಡದಂತಹ ಸ್ಥಳಗಳಲ್ಲಿ ಇನ್ನೊಂದು ಮನೆಯನ್ನು ಹೊಂದಿರುತ್ತಾರೆ.  ಉಷ್ಣತೆಯು  ಮೈನಸ್ 20 ಡಿಗ್ರಿಗೂ ಕೆಳಗೆ ಇಳಿಯುವ ಲೇಹ್ ನಲ್ಲಿ ಚಳಿಗಾಲದಲ್ಲಿ  ವ್ಯವಹಾರಗಳು ಸ್ತಬ್ದವಾಗುವುದರಿಂದ,  ಇಲ್ಲಿನ  ಮನೆ ಮತ್ತು ಅಂಗಡಿಯನ್ನು ಮುಚ್ಚಿ ಭಾರತದ ಇತರ ರಾಜ್ಯಗಳಿಗೆ ಮಾರಾಟ ಮಾಡಲು ಹೋಗುತ್ತಾರಂತೆ. ಕೆಲವು ಮಂದಿ ಮಾತ್ರ  ಚಳಿಯೊಂದಿಗೆ ಹೋರಾಡುತ್ತಾ ಇಲ್ಲಿಯೇ ವಾಸಿಸುತ್ತಾರೆ.  ಸಫೀಕ್ ಅವರು ಮೈಸೂರು, ಬೆಂಗಳೂರಿಗೆ ಕೂಡ ಹಲವು ಬಾರಿ ಬಂದಿದ್ದರಂತೆ. ಚಳಿಯಿಂದಾಗಿ ವರ್ಷದ ದುಡಿಮೆಯನ್ನು ಬೇಸಗೆಯ ಐದು ತಿಂಗಳಲ್ಲಿ ಮಾಡುವ ಅನಿವಾರ್ಯತೆ ನಮ್ಮದು ಎಂದ. ಅವರ ಕುಟುಂಬ ಲೇಹ್ ನಲ್ಲಿಯೇ ಇದೆ. ಚಳಿಗಾಲದಲ್ಲಿ ಡಿಸೆಂಬರ್ ನಿಂದ ಮಾರ್ಚ್ ವರೆಗೆ  ಮೂರು ತಿಂಗಳು ಮಕ್ಕಳಿಗೆ ಶಾಲೆಗೆ ರಜೆ ಇರುತ್ತದೆಯಂತೆ. ಆಗ ಜಮ್ಮುವಿಗೆ ಹೋಗುತ್ತಾರಂತೆ. ಹವಾಮಾನದ ಮಟ್ಟಿಗೆ ನಾವೆಷ್ಟು ಅದೃಷ್ಟವಂತರು ಎಂದು ತಿಳಿಯಬೇಕಾದರೆ ಇಂತವರ ಜೀವನವನ್ನು ಗಮನಿಸಬೇಕು!

‘ಫೋನ್ ಮಾಡಬೇಕಿದ್ದರೆ ಇಲ್ಲಿ ಇರುವಷ್ಟು ದಿನವೂ ಬನ್ನಿ, ನಿಮ್ಮ ಮುಂದಿನ ಪ್ರಯಾಣ ಸುಖಕರವಾಗಲಿ, ದಕ್ಷಿಣದ ಕಡೆಗೆ ಬಂದಾಗ ಸಂಪರ್ಕಿಸುತ್ತೇನೆ, ಇನ್ನೊಮ್ಮೆ ಬನ್ನಿ’ ಎಂದು ಹಾರೈಸಿ, ತನ್ನ ಕಾರ್ಡ್ ಅನ್ನು ಕೊಟ್ಟು  ಸಫೀಕ್  ನಮ್ಮನ್ನು ಬೀಳ್ಕೊಟ್ಟ.ಅಲ್ಲಿಂದ ಕಾಲು ಗಂಟೆ ಅತಿ ನಿಧಾನವಾಗಿ ನಡೆದು ಹೋಟೆಲ್ ಗ್ಯಾಲಕ್ಸಿ ತಲಪಿ, ಅಲ್ಲಿನ ಗುಲಾಬಿ ತೋಟದಲ್ಲಿ ಆರಾಮವಾಗಿ ಬಿಸಿಲು ಕಾಯಿಸುತ್ತಾ ಕುಳಿತೆವು.. 

ಹೋಟೆಲ್ ಗ್ಯಾಲಕ್ಸಿ ..ಲೇಹ್

ಆಮೇಲೆ ಸ್ವಲ್ಪ ನಿದ್ರೆ, ವಿಶ್ರಾಂತಿ. ಸಂಜೆ ವೇಳೆಗೆ ಭಾರತಿ ತಯಾರಿಸಿದ್ದ ಕಷಾಯ ಪುಡಿಯಿಂದ ಬಿಸಿಬಿಸಿ ಕಷಾಯ ಮಾಡಿಸಿ ಕುಡಿದಾಗ ನಾಲಿಗೆಗೂ ಗಂಟಲಿಗೂ ಹಿತವೆನಿಸಿತು.ಹೋಟೆಲ್ ಮಾಲೀಕ ಗಿರಿ ಅವರು ‘ಕೈಸೆ ಹೈ ಆಪ್….ಠೀಕ್ ಹೈ..’ ಇತ್ಯಾದಿ ವಿಚಾರಿಸುತ್ತಾ ಇದ್ದರು. ಅದೂ ಇದೂ ಹರಟುತ್ತ ಸಮಯ ನೋಡಿದಾಗ ಗಂಟೆ ಸಂಜೆ ಗಂಟೆ 0745 ಆಗಿತ್ತು. ಆದರೂ ಇನ್ನೂ ನಸುಬೆಳಕಿತ್ತು. ಇಲ್ಲಿ ಬೇಸಗೆ ಸಮಯದಲ್ಲಿ ಹಗಲು ಜಾಸ್ತಿ, ರಾತ್ರಿಯ ಅವಧಿ ಕಡಿಮೆ.

ರಾತ್ರಿಯೂಟಕ್ಕೆ ಸಲಾಡ್,  ಚಪಾತಿ, ಪಲ್ಯ, ಗ್ರೇವಿ, ದಾಲ್,  ಅನ್ನ, ಹಪ್ಪಳ ಮತ್ತು ಕಸ್ಟಾರ್ಡ್ ಸಿಹಿ ಇತ್ತು. ಜಾರ್ಖಂಡ್ ಮೂಲದ  5 ಮಂದಿಯ ತಂಡವು ಅಲ್ಲಿ ಅಡುಗೆಮನೆ ಹಾಗೂ  ಹಾಗೂ ನೈರ್ಮಲ್ಯದ   ಜವಾಬ್ದಾರಿ ಹೊತ್ತಿತ್ತು.  ಅವರೂ ಅತಿಥಿಗಳಿಗೆ  ಅನುಕೂಲವಾಗುವಂತೆ ಸ್ನೇಹಪರರಾಗಿದ್ದರು. ಅವರ ಜೊತೆ  ಒಬ್ಬ ಎಳೆ ವಯಸ್ಸಿನ ಬಾಲಕನೂ ಇದ್ದ . ನಾವು ಅಲ್ಲಿ ಒಟ್ಟು ನಾಲ್ಕು ರಾತ್ರಿ ವಾಸ್ತ್ಯವ್ಯ ಮಾಡಿದ್ದೆವು. ಈಗ ತಾನೇ ಬೇಸಗೆ ಶುರು ಆಗಿದ್ದುದರಿಂದ ಹೆಚ್ಚಿನ ಜನದಟ್ಟಣೆ ಇರಲಿಲ್ಲ.

ಈ ಸಂದರ್ಭದಲ್ಲಿ ನಮ್ಮ ರುಚಿ, ಆರೋಗ್ಯ ನಿರ್ವಹಣೆಗೆ ತಕ್ಕಂತೆ ಕೇಳಿದಾಗಲೆಲ್ಲ ಬಿಸಿನೀರು, ಕಾಫಿ, ಚಹಾ, ನಿಂಬೆಹಣ್ಣಿನ ಪಾನಕ ಮಾಡಿಕೊಟ್ಟಿದ್ದರು.  ನಮ್ಮ ರೂಮ್ ನೆಲಮಟ್ಟದಲ್ಲಿಯೇ ಇದ್ದುದರಿಂದ ಪಕ್ಕದಲ್ಲಿಯೇ ಇದ್ದ ಅಡುಗೆಮನೆಗೆ ಹೋಗಿ ನಮಗೆ ಬೇಕಿದ್ದನ್ನು ಕೇಳಿ ಪಡೆಯುವ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದೆವು. ಒಂದೆರಡು ಬಾರಿ ಭಾರತಿಯವರು ತಂದಿದ್ದ ರಸಂ ಕ್ಯೂಬ್ ಅನ್ನು ನಮ್ಮ ಕೋರಿಕೆ ಮೇರೆಗೆ ಬಿಸಿನೀರಿಗೆ ಹಾಕಿ ಕುದಿಸಿ ದಿಢೀರ್ ಆಗಿ ತಿಳಿಸಾರು ಮಾಡಿ ಕೊಟ್ಟರು. ಅದೇ ರೀತಿ ಕಷಾಯವನ್ನೂ ಮಾಡಿಸಿ ಕುಡಿದೆವು .

ಒಂದು ದಿನ ರಾತ್ರಿ ಬರುವಾಗ ಬಹಳ ತಡವಾಗಿದ್ದುದರಿಂದ ನಾವು ನಾಲ್ವರೂ ಊಟ ಮಾಡಿರಲಿಲ್ಲ.  ಮರುದಿನ  ತಿಂಡಿಗೆ  ಪೋಹಾ, ಬ್ರೆಡ್ ಇರಲಿದೆ ಎಂದು ಗೊತ್ತಾಯಿತು. ಅವುಗಳನ್ನು ಆಗಲೇ 2-3 ಸಲ ತಿಂದಿದ್ದೆವು. ಹಾಗಾಗಿ, ನಾವು ಅಡುಗೆಯವರ  ಬಳಿ  ಈ ಮಿಕ್ಕಿದ ಅನ್ನದಿಂದ ನಮಗೆ ಸುಲಭವಾಗಿ ಚಿತ್ರಾನ್ನ ತಯಾರಿಸಿಕೊಡುವಿರಾ ಎಂದು ನಿಂಬೆಹಣ್ಣು ಚಿತ್ರಾನ್ನದ ರೆಸಿಪಿಯನ್ನು ವಿವರಿಸಿ ಕೇಳಿಕೊಂಡೆವು. ಮರುದಿನ ನಮಗಾಗಿ ಇತರ ತಿಂಡಿಗಳ ಜೊತೆಗೆ ಚಿತ್ರಾನ್ನವನ್ನೂ ಕೊಟ್ಟು ‘ಕೈಸಾ ಹೈ ಅಪ್ನಾ ಡಿಶ್’ ಎಂದು ನಗುನಗುತ್ತಾ ಕೇಳಿದರು. ನಾನು ಮನೆಯಿಂದ ತಂದಿದ್ದಒಂದು ಬಾಟಲ್  ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಸದಾ ಡೈನಿಂಗ್ ಹಾಲ್ ಗೆ ತೆಗೆದುಕೊಂಡೇ ಹೋಗುತ್ತಿದ್ದೆ.  ಯಾವುದೇ ಅಡುಗೆಯ ರುಚಿ ಇಷ್ಟವಾಗದಿದ್ದರೆ ಉಪ್ಪಿನಕಾಯಿ ನೆಂಚಿಕೊಂಡರೆ ರುಚಿಸುತ್ತಿತ್ತು. ಒಟ್ಟಿನಲ್ಲಿ, ಹೋಟೆಲ್ ಆದರೂ, ಅಪರಿಚಿತರಾದರೂ ವೈಯುಕ್ತಿಕ ಕಾಳಜಿ ವಹಿಸುವ ತಂಡದಿಂದಾಗಿ  ನಮಗೆ ಅನುಕೂಲಕರವಾದ ‘ಹೋಂ ಅವೇ ಫ಼್ರಮ್ ಹೋಂ ‘ ಅನುಭವ ದೊರೆತಿತ್ತು .

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=36949

ಮುಂದುವರಿಯುವುದು..
-ಹೇಮಮಾಲಾ, ಮೈಸೂರು

6 Responses

 1. ಪ್ರವಾಸ ಕಥನ ಎಂದಿನಂತೆ ಓದಿ ಸಿಕೊಂಡು ಹೋಯಿತು…ನಿರೂಪಣೆ ಸೊಗಸಾಗಿ ಬರುತ್ತಿದೆ
  ಗೆಳತಿ ಹೇಮಾ ಧನ್ಯವಾದಗಳು.

  • Hema says:

   ತಮ್ಮ ಪ್ರೋತ್ಸಾಹದಾಯಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಬಹಳ ಸೊಗಸಾದ ಪ್ರವಾಸ ಕಥನ

 3. ಶಂಕರಿ ಶರ್ಮ says:

  ಸೊಗಸಾದ ನಿರೂಪಣೆಯ ಪ್ರವಾಸ ಲೇಖನ ಓದುಗರಿಗೆ ಆತ್ಮೀಯವೆನಿಸುತ್ತದೆ… ಜೂಲೇ…!!

 4. ಉತ್ತಮವಾದ ಪ್ರವಾಸದ ಅನುಭವ ಕಥನ

 5. Padmini Hegde says:

  ನಿರೂಪಣೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: