ಪ್ರೇಮಿಗಳ ಸ್ವರ್ಗ ಉದಯಪುರ ಚರಣ-2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ನಮ್ಮ ಗುಂಪಿನ ಸದಸ್ಯರಿಗೆ ಉದಯಪುರದಲ್ಲಿ – ಕರ್ಣಿಮಾತಾ ಮಂದಿರದ ದರ್ಶನ, ಸರೋವರದಲ್ಲಿ ದೋಣಿವಿಹಾರ, ರಾಜಸ್ಥಾನೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ಕಾತುರ ಇತ್ತು. ಸಂಜೆಯಾಗುತ್ತಿತ್ತು. ದೇವಿಯ ದರ್ಶನ ಮಾಡುವುದಕ್ಕೇ ಹೆಚ್ಚಿನ ಮತ ಬಿದ್ದುದರಿಂದ, ಕೇಬಲ್ ಕಾರ್ ಮೂಲಕ ಮಹಾರಾಣಾ ಕರಣ್‌ಸಿಂಗ್‌ನು ೧೬೨೦ ರಲ್ಲಿ ಮಾಚ್ಲಾ ಮಾಗ್ರಾ ಬೆಟ್ಟದ ಮೇಲೆ ನಿರ್ಮಿಸಿದ ಮನ್‌ಷಾಪೂರ್ಣ ಕರ್ಣಿಮಾತಾ ದೇಗುಲ ದರ್ಶನ ಮಾಡಲು ಹೊರಟೆವು. ಮನ್‌ಷಾಪೂರ್ಣ ಎಂದರೆ ನಮ್ಮ ಕನಸುಗಳನ್ನು ನನಸು ಮಾಡುವವಳು ಎಂದು. ಇಲ್ಲಿನ ದೊರೆಗಳು, ಯುದ್ಧಕ್ಕೆ ಹೊರಡುವ ಮೊದಲು, ಕರ್ಣಿಮಾತಾ ದೇವಿಗೆ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದೇ ಶತ್ರುಗಳ ಸಂಹಾರಕ್ಕೆ ಸಿದ್ದರಾಗುತ್ತಿದ್ದರು. ಕರ್ಣಿಮಾತಾ ದೇವಿಯ ಮೂಲ ಸ್ಥಾನ ಇರುವುದು ಬಿಕಾನೇರ್‌ನಿಂದ ಮೂವತ್ತು ಕಿ.ಮೀ. ದೂರದಲ್ಲಿರುವ ದೇಶ್‌ನೋಕ್ ಎಂಬ ಊರಿನಲ್ಲಿ. ದಿನಕ್ಕೆರೆಡು ಬಾರಿ ದೇವಿಯ ದರ್ಶನ ಮಾಡಿ, ಅಲ್ಲಿ ವಾಸಿಸುವ ಇಲಿಗಳಿಗೆ ಸಿಹಿ ಉಣ್ಣಿಸಿದರೆ ಭಕ್ತರ ಆಸೆಗಳು ಪೂರೈಸುವುವು ಎಂಬ ನಂಬಿಕೆ ಇದೆ. ದೇಗುಲದ ತುಂಬೆಲ್ಲಾ ಇಲಿಗಳು ಓಡಾಡುತ್ತಿದ್ದವು, ಒಮ್ಮೊಮ್ಮೆ ನಮ್ಮ ಪಾದಗಳ ಮೇಲೆ, ಒಮ್ಮೆ ನಮ್ಮ ಕೈಗಳ ಮೇಲೆ ಜಿಗಿಯುತ್ತಿದ್ದವು. ದೇಗುಲದಲ್ಲಿ ಓಡಾಡುವಾಗ, ಅಕಸ್ಮಾತ್ ಇಲಿಯು ನಮ್ಮ ಕಾಲ್ತುಳಿತಕ್ಕೆ ಸಿಕ್ಕು ಮರಣ ಹೊಂದಿದರೆ, ಚಿನ್ನದ ಇಲಿಯನ್ನು ಮಾಡಿಸಿ ದೇಗುಲಕ್ಕೆ ಒಪ್ಪಿಸಬೇಕಂತೆ. ಗಾಬರಿಯಿಂದ, ಆತುರಾತುರವಾಗಿ ದೇವಿಯ ದರ್ಶನ ಮುಗಿಸಿ, ಹೊರಗಡೆ ಬಂದೆವು.

ಈ ದೇವಿಯ ಇತಿಹಾಸವಾದರೂ ಏನು? ದೇವಿಗೂ ಇಲಿಗಳಿಗೂ ಇರುವ ಸಂಬಂಧವಾದರೂ ಏನು ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗಿತ್ತು. ಆಗ ಕೇಳಿ ಬಂದ ಐತಿಹ್ಯ ಹೀಗಿದೆ. ಒಂದಾನೊಂದು ಕಾಲದಲ್ಲಿ, ಒಬ್ಬ ಮಹರ್ಷಿಯು, ಚರಣ್ ರಜಪೂತನ ಏಳನೇ ಮಗಳಾಗಿ ಜನ್ಮವೆತ್ತುವನು. ಆ ಮಗುವಿನ ಹೆಸರು ರಿಧೂಬಾಯಿ. ಅವಳನ್ನು ದಿಪೋಜಿ ಚರಣ್ ಎಂಬ ಯುವಕನಿಗೆ ಕೊಟ್ಟು ಮದುವೆ ಮಾಡುವರು. ಆದರೆ ಲೌಕಿಕ ಜೀವನದಲ್ಲಿ ಯಾವುದೇ ಆಸಕ್ತಿಯಿಲ್ಲದ ರಿಧೂಬಾಯಿ, ತನ್ನ ಪತಿಗೆ, ತಂಗಿಯನ್ನು ಕೊಟ್ಟು ಮದುವೆ ಮಾಡಿಸಿ, ಸನ್ಯಾಸ ಸ್ವೀಕರಿಸಿ ಲೋಕಸಂಚಾರ ಹೊರಡುವಳು. ಒಮ್ಮೆ ಅವಳ ಮಲಮಗ ಲಕ್ಷ್ಮಣನು ಕಪಿಲ ಸರೋವರದಲ್ಲಿ ನೀರು ಕುಡಿಯಲು ಹೋದವನು, ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತನಾಗುವನು. ರಿಧೂಬಾಯಿ ತನ್ನ ಮಗನನ್ನು ಬದುಕಿಸಿಕೊಡಬೇಕೆಂದು ಮೃತ್ಯುದೇವತೆಯಾದ ಯಮನನ್ನು ಪ್ರಾರ್ಥಿಸುವಳು. ಅವಳ ಪ್ರಾರ್ಥನೆಗೆ ಓಗೊಟ್ಟ ಯಮನು ಲಕ್ಷ್ಮಣನಿಗೆ ಇಲಿಯ ರೂಪದಲ್ಲಿ ಪುನರ್‌ಜನ್ಮ ನೀಡುವನು. ಅಂದಿನಿಂದ ರಿಧೂಬಾಯಿ ವಂಶದ ಗಂಡು ಸಂತಾನವೆಲ್ಲಾ ಮೃತಪಟ್ಟನಂತರ ಇಲಿಗಳಾಗಿ ಪುನರ್‌ಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಜನಜನಿತವಾಗಿದೆ. ಇವುಗಳಿಗೆ ಕಬ್ಬಾಸ್ ಎಂದು ಕರೆಯುತ್ತಾರೆ. ಬಿಕಾನೇರ್ ಬಳಿ ಇರುವ ದೇಗುಲದಲ್ಲಿ ಸುಮಾರು ೨೫,೦೦೦ ಇಲಿಗಳು ಇವೆ ಎಂದರೆ ನಂಬುತ್ತೀರಾ? ಅಂದಿನಿಂದ ಇಲಿ ರೂಪದಲ್ಲಿರುವ ಪವಿತ್ರ ಆತ್ಮಗಳಿಗೆ ಸಿಹಿ ತಿನ್ನಿಸುವುದು ಹಾಗೂ ಇಲಿಗಳು ಕಚ್ಚಿ ಬಿಟ್ಟ ಸಿಹಿಯನ್ನು ಪ್ರಸಾದವೆಂದು ಸೇವಿಸುವುದು ವಾಡಿಕೆಯಾಗಿದೆ. ಇಲ್ಲಿ ಬಿಳಿ ಇಲಿಗೆ ವಿಶೇಷ ಮನ್ನಣೆ.

ಜೋಧ್‌ಪುರ್ ಮತ್ತು ಬಿಕಾನೇರ್ ಕೋಟೆಯ ಶಂಖುಸ್ಥಾಪನೆ ಮಾಡಿದ ಕೀರ್ತಿಯೂ ರಿಧೂಬಾಯಿಗೆ ಸಲ್ಲುವುದು. ಸಲ್ಲುವುದು. ಜನರ ಕಷ್ಟದಲ್ಲಿ ನೆರವಾಗುತ್ತಾ, ಎಲ್ಲರ ಬದುಕಲ್ಲೂ ಬೆಳಕು ಚೆಲ್ಲಿದ ಕರ್ಣಿಮಾತೆ ದೀರ್ಘಕಾಲ ಬದುಕಿದಳು. ಒಮ್ಮೆ ತನ್ನ ಅನುಯಾಯಿಗಳೊಂದಿಗೆ ಅರಣ್ಯದಲ್ಲಿ ಹೋಗುತ್ತಿರುವಾಗ ೧೫೧ ವರ್ಷ ವಯಸ್ಸಿನ ಇದ್ದಕ್ಕಿದ್ದಂತೆ ಮಾಯವಾದಳಂತೆ. ನಂತರ ಯಾರಿಗೂ ಕಾಣಲಿಲ್ಲವಂತೆ..

ನಾವು, ಕರ್ಣಿಮಾತೆಯ ಐತಿಹ್ಯವನ್ನು ತನ್ಮಯತೆಯಿಂದ ಆಲಿಸುತ್ತಾ ದೇಗುಲದ ಪ್ರಾಂಗಣದಲ್ಲಿ ನಿಂತಿದ್ದೆವು. ದೇಗುಲದ ಮುಂದೆ ಧೂದ್ ತಲೈ ಸರೋವರ ಹಾಯಾಗಿ ಮಲಗಿತ್ತು. ಮುಸ್ಸಂಜೆಯಾಗಿತ್ತು, ಎಲ್ಲೆಲ್ಲಿಯೂ ನಿಶ್ಯಬ್ಧ, ಸರೋವರಗಳ ಮಧ್ಯೆ ಕಂಗೊಳಿಸುತ್ತಿದ್ದ ಮಹಲುಗಳಿಗೆ ದೀಪಾಲಂಕಾರ ಮಾಡಿದ್ದರು, ದೋಣಿಗಳು ಸರೋವರಗಳ ಮೇಲೆ ಮೆಲ್ಲಮೆಲ್ಲಗೆ ಚಲಿಸುತ್ತಿದ್ದವು, ಸರೋವರಗಳ ಹಿಂಬದಿಯಲ್ಲಿ ಅರಾವಳಿ ಬೆಟ್ಟದ ಸಾಲುಗಳು ನಮ್ಮನ್ನು ಕಾಯುವಂತೆ ನಿಂತಿದ್ದವು. ಮಹಲುಗಳು, ಉದ್ಯಾನವನಗಳು, ಜನರು ವಾಸಿಸುತ್ತಿದ್ದ ಸಾಲು ಸಾಲು ಮನೆಗಳ ನೋಟ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡಿತ್ತು. ಉದಯಪುರ ಧ್ಯಾನಮಗ್ನನಾಗಿ ಕುಳಿತಂತೆ ಭಾಸವಾಗುತ್ತಿತ್ತು.

ನಾವು ರೆಸಾರ್ಟ್‌ಗೆ ಹಿಂತಿರುಗಿದಾಗ ಮದುವೆ ಗಂಡು ಮತ್ತು ಹೆಣ್ಣು ವಿವಾಹ ಪೂರ್ವ ಚಿತ್ರೀಕರಣ ಮುಗಿಸಿಕೊಂಡು ಹಿಂತಿರುಗಿದ್ದರು. ಮದುವೆ ಹೆಣ್ಣು ಪದ್ಮಿನಿ, ರಾಣಿ ಪದ್ಮಿನಿಯಂತೆಯೇ ಚೆಲುವಾಗಿದ್ದಳು. ಮಾರನೆಯ ದಿನದ ವಿವಾಹ ಕಾರ್ಯಕ್ರಮ ಸಂಜೆ ನಾಲ್ಕರಿಂದ ಆರಂಭವಾಗುತ್ತಿದುದರಿಂದ, ನಾವು ಚಿತ್ತೋಡಿಗೆ ಹೋಗುವ ಯೋಜನೆ ಹಾಕಿದೆವು. ಮುಂಜಾನೆ ಆರು ಗಂಟೆಗೇ ಉದಯಪುರದಿಂದ ಹೊರಟು, ೧೧೦ ಕಿ.ಮೀ. ದೂರದಲ್ಲಿದ್ದ ಚಿತ್ತೋಡಿಗೆ ಎಂಟು ಗಂಟೆಗೆ ತಲುಪಿದೆವು. ಏಷ್ಯಾದಲ್ಲಿಯೇ ಮೊದಲನೆಯ ಸ್ಥಾನ ಪಡೆದಿರುವ ಈ ಕೋಟೆಯ ಹೆಸರು ಕೇಳುತ್ತಿದ್ದಂತೆ, ನಮ್ಮ ಕಣ್ಣ ಮುಂದೆ ತೇಲಿ ಬಂದದ್ದು – ರಾಣಿ ಪದ್ಮಿನಿಯ ಮೋಹಕ ಸೌಂದರ್ಯ, ಮಹಾರಾಣಾ ಪ್ರತಾಪಸಿಂಹನ ಶೌರ್ಯ ಜೋಹಾರ್ ಪದ್ದತಿಯ ಕ್ರೌರ್ಯ. ಉದಯಪುರವನ್ನು ನಿರ್ಮಿಸಿದ ಉದಯಸಿಂಹನ ಜನ್ಮಸ್ಥಳ ಚಿತ್ತೋಡ್, ಮೀರಾಬಾಯಿಯ ಪತಿಯ ಗೃಹ ಚಿತ್ತೋಡ್, ಬಪ್ಪಾ ರಾವಲ್, ರಾಣಾ ಕಂಭ, ಉದಯಸಿಂಹ, ಪ್ರತಾಪಸಿಂಹ ಮೊದಲಾದ ಪರಾಕ್ರಮಿಗಳ ತವರೂರು ಚಿತ್ತೋಡ್. ರಾಜಾ ಚಂದ್ರಗುಪ್ತ ಮೌರ್ಯನ ವಂಶಸ್ಥನಾದ ಚಿತ್ರಾಂಗದ ಮೌರ್ಯನು ಚಿತ್ತೋಡಿನ ಕೋಟೆಯನ್ನು ಕಟ್ಟಲು ಆರಂಭಿಸಿದನಂತೆ. ನಂತರದಲ್ಲಿ ಸಿಸೋಡಿಯಾ ರಾಜ ಮನೆತನದ ಬಪ್ಪಾ ರಾವಲ್ ಈ ಕೋಟೆಯ ನಿರ್ಮಾಣ ಕಾರ್ಯವನ್ನು ಮುಂದುವರೆಸಿದರು. ಹಲವು ರಜಪೂತ ರಾಜ ಮಹಾರಾಜರು ಚಿತ್ತೋಡಿನ ಕೋಟೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಶತ್ರುಗಳ ಆಕ್ರಮಣದಿಂದ ತಮ್ಮ ರಾಜ್ಯವನ್ನು ಸಂರಕ್ಷಿಸಲು, ಮೌರ್ಯರು ಈ ಸ್ಥಳವನ್ನು ಆಯ್ಕೆ ಮಾಡಿದರು. ೧೮೫೦ ಅಡಿ ಎತ್ತರದಲ್ಲಿರುವ ಈ ಸ್ಥಳ ವಿಶಾಲವಾಗಿದ್ದು, ಏಳುನೂರು ಎಕರೆ ವಿಸ್ತೀರ್ಣ ಹೊಂದಿದೆ. ಸಾಕಷ್ಟು ನೀರಿನ ಸೌಕರ್ಯವೂ ಇದ್ದು ಸುಮಾರು ೮೨ ಕೊಳಗಳನ್ನು ನಿರ್ಮಿಸಿದ್ದಾರೆ. ಈ ಕೊಳಗಳಲ್ಲಿ ಇಪ್ಪತ್ತೆರೆಡು ಕೊಳಗಳು ಎಂದಿಗೂ ಬತ್ತುವುದಿಲ್ಲ. ಸರ್ವಧರ್ಮಗಳ ಸಂಗಮವಾದ ಚಿತ್ತೋಡಿನ ಕೋಟೆಯಲ್ಲಿ ಸುಮಾರು ೧೧೩ ದೇಗುಲಗಳಿವೆ – ಶಿವ, ವಿಷ್ಣು, ಸೂರ್ಯ, ಕಾಳಿ ಮಾತೆಯರ ದೇಗುಲಗಳಿದ್ದು ಜೊತೆಗೆ ೨೭ ಜೈನ ಬಸದಿಗಳೂ ಇವೆ.

ಈ ಅಭೇಧ್ಯವಾದ ಕೋಟೆಯನ್ನು, ಇಪ್ಪತ್ತೆರಡು ಪೀಳಿಗೆಯ ರಾಜರು, ೪೩೫ ವರ್ಷಗಳ ಕಾಲ ಸುಭದ್ರ ಪಡಿಸುತ್ತಾ, ಉತ್ತಮ ಆಳ್ವಿಕೆಯನ್ನು ನಡೆಸಿದರು. ಏಳು ನೂರು ಎಕರೆ ಜಾಗದಲ್ಲಿ ಕಟ್ಟಲಾಗಿರುವ ಚಿತ್ತೋಡಿನ ಕೋಟೆಯಲ್ಲಿ ಇಂದಿಗೂ ಸುಮಾರು ಐದು ಸಾವಿರ ಜನರು ತಮ್ಮ ಬಾಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ ಮತ್ತೆ ಕೆಲವರು ವ್ಯವಸಾಯದಲ್ಲಿ ಕಾರ್ಯನಿರತರು. ಕೋಟೆಯನ್ನು ನೋಡಲು ವಾಹನ ಬಳಸಿದರೆ ಉತ್ತಮ, ಕಾಲ್ನಡಿಗೆಯಲ್ಲಿ ಹೋದರೆ ಮೂರು ನಾಲ್ಕು ದಿನ ಬೇಕಾದೀತು. ಈ ಅಭೇಧ್ಯವಾದ ಕೋಟೆಯನ್ನು ಪ್ರವೇಶೀಸಲು ಏಳು ಭವ್ಯವಾದ ದ್ವಾರಗಳಿವೆ. ಕೋಟೆಯ ಪ್ರವೇಶ ದ್ವಾರದಲ್ಲಿ ರಾವತ್ ಬಾಗ್ ಸಿಂಹನ ಸ್ಮಾರಕವನ್ನು ನೋಡಿದೆವು. ಈ ದೊರೆಯು ಬಹಾದೂರ್ ಶಾನೊಂದಿಗೆ ಯುದ್ಧ ಮಾಡುವಾಗ ಹುತಾತ್ಮನಾಗುವನು. ಮುಂದೆ ಸಾಗಿದಂತೆ – ಏಳು ಪ್ರವೇಶ ದ್ವಾರಗಳನ್ನು ಹೊಕ್ಕು ಮುನ್ನೆಡೆದೆವು. ಮತ್ತೊಂದು ಸ್ಮಾರಕವನ್ನು ಕಂಡೆವು – ಇದು ಜಯಮಲ್ ರಾಥೋಡ್ ಮತ್ತು ಕಲ್ಲೋಜಿ ರಾಥೋಡ್‌ರ ಸ್ಮಾರಕ. ಈ ಇಬ್ಬರು ಪರಾಕ್ರಮಿಗಳು ಅಕ್ಬರ್ ಚಕ್ರವರ್ತಿಯೊಂದಿಗೆ ಯುದ್ಧ ಮಾಡಿ ವೀರಸ್ವರ್ಗ ಸೇರಿದರಂತೆ. ಇವರ ಸಾಹಸಗಾಥೆಯನ್ನು ತಪ್ಪದೆ ಕೇಳಲೇಬೇಕು. ಯುದ್ಧಕ್ಕೆ ಸಿದ್ಧತೆ ಮಾಡುವಾಗ ಮದ್ದು ಗುಂಡು ಸಿಡಿದು ಜಯಮಲ್ ರಾಥೋಡನ ಕಾಲುಗಳೆರಡೂ ನಿಷ್ಕ್ರಿಯವಾಗಿದ್ದವು, ಆದರೂ ಈ ವೀರನು, ಎದೆಗುಂದದೆ, ಕಲ್ಲೋಜಿ ರಾಥೋಡನ ಹೆಗಲ ಮೇಲೆ ಕುಳಿತು ಎಂಟು ತಿಂಗಳ ಕಾಲ ಶತ್ರುಗಳೊಂದಿಗೆ ವೀರಾವೇಶದಿಂದ ಕಾದಾಡಿದನೆಂದರೆ ನಂಬುವಿರಾ? ಚಿತ್ತೋಡ್‌ಗಡ್ ಮೇಲೆ ನಿಂತು ನೋಡಿದರೆ ಇಡೀ ನಗರ ಕಂಡುಬರುವುದು, ಗುಂಪು ಗುಂಪು ಮನೆಗಳು, ಅಲ್ಲಲ್ಲಿ ಹೊಲಗದ್ದೆಗಳು ಹಾಗೂ ನಗರದ ಸುತ್ತಲೂ ಮೈಚಾಚಿ ಮಲಗಿರುವ ಅರಾವಳಿ ಬೆಟ್ಟದ ಸಾಲುಗಳು,

ಮುಂದೆ ಕಂಡದ್ದು ಮಹಾರಾಣಾ ಕುಂಭನ ಮಹಲ್. ಮಹಲಿನ ಮುಂದೆ ಒಂದೂವರೆ ಕಿ.ಮೀ. ಉದ್ದದ ಒಂದು ಸುರಂಗವಿತ್ತು. ರಾಣಿವಾಸದವರು ಈ ಸುರಂಗದ ಮೂಲಕ ಸಾಗಿ ಗೋಮುಖ ಸರೋವರದಲ್ಲಿ ಸ್ನಾನ ಮಾಡಿ, ಸನಿಹದಲ್ಲಿರುವ ಶಿವ ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸುತ್ತಿದ್ದರಂತೆ. ರಾಣಾ ರತನ್‌ಸಿಂಹನ ಪತ್ನಿ ಪದ್ಮಿನಿ ಸುರಸುಂದರಿ, ಇವಳ ಸೌಂದರ್ಯ, ಬುದ್ಧಿವಂತಿಕೆ, ಪರಾಕ್ರಮ ಮನೆಮಾತಾಗಿತ್ತು. ಮಹಲಿನ ಗೋಡೆಯ ಮೇಲೆ ಒಂದು ದೊಡ್ಡಗಾತ್ರದ ಕನ್ನಡಿ ಹಾಕಿದ್ದರು. ಕನ್ನಡಿಯ ಎದುರಿಗಿದ್ದ ಕಿಡಕಿಯಿಂದ ಇಣುಕಿದರೆ ಕಮಲದ ಹೂಗಳು ಅರಳಿದ್ದ ಸರೋವರದ ಮಧ್ಯೆಯಿದ್ದ ರಾಣಿ ಪದ್ಮಿನಿಯ ಅರಮನೆ ಕಾಣುತ್ತಿತ್ತು. ಈ ಕನ್ನಡಿಯ ಕಥೆಯನ್ನು ಕೇಳೋಣ ಬನ್ನಿ. ‘ರಾಣಿ ಪದ್ಮಿನಿಯ ಸೌಂದರ್ಯದ ಕಥನಗಳನ್ನು ಕೇಳಿದ ಅಲ್ಲಾವುದ್ದೀನ್ ಖಿಲ್ಜಿ, ಅವಳನ್ನು ಹೇಗಾದರೂ ಪಡೆಯಲೇಬೇಕೆಂಬ ವ್ಯಾಮೋಹದಿಂದ, ಚಿತ್ತೋಡಿನ ಕೋಟೆಗೆ ಲಗ್ಗೆಯಿಡುತ್ತಾನೆ. ಈ ಅಭೇಧ್ಯವಾದ ಕೋಟೆಯನ್ನು ಬೇಧಿಸಲಾಗದೆ ಸೋತು ಶರಣಾಗುತ್ತಾನೆ. ಈ ಕೋಟೆಯನ್ನು ಜಯಿಸಲು ಖಿಲ್ಜಿಯು ಒಂದು ಸಂಚು ರೂಪಿಸುತ್ತಾನೆ. ತನಗೆ ಒಮ್ಮೆ ಪದ್ಮಿನಿಯ ದರ್ಶನವಾದರೆ ಸಾಕು, ಸೈನ್ಯದೊಂದಿಗೆ ಹಿಂತಿರುಗಿ ಹೋಗಿಬಿಡುವೆ ಎಂದು ರಾಣಾ ರತನ್‌ಸಿಂಹನಿಗೆ ಪತ್ರ ಬರೆಯುತ್ತಾನೆ. ಆಗ ರತನ್ ಸಿಂಹನು, ವೈರಿಯ ಕಿರುಕುಳ ತಪ್ಪಿಸಿಕೊಳ್ಳಲು ಶತ್ರುವಿನ ಬೇಡಿಕೆಯನ್ನು ಕೆಲವು ನಿಂಬಂಧನೆಗಳೊಂದಿಗೆ ಒಪ್ಪಿಕೊಳ್ಳುತ್ತಾನೆ. ಖಿಲ್ಜಿಯು ನಿಶ್ಯಸ್ತ್ರನಾಗಿ ಒಬ್ಬಂಟಿಯಾಗಿ ಕೋಟೆಯೊಳಗೆ ಪ್ರವೇಶಿಸಿ, ತಮ್ಮ ಆತಿಥ್ಯವನ್ನು ಸ್ವೀಕರಿಸಬಹುದೆಂಬ ಸಂದೇಶವನ್ನು ರವಾನಿಸುತ್ತಾ. ನಯವಂಚಕನಾದ ಖಿಲ್ಜಿಯು ತನ್ನ ಸೈನಿಕರಿಗೆ ಕೋಟೆಯ ಪ್ರವೇಶದ್ವಾರದ ಬಳಿ ಅಡಗಿಕೊಳ್ಳಲು ಆದೇಶಿಸಿ, ರತನಸಿಂಹನ ಅರಮನೆಯೊಳಗೆ ಪ್ರವೇಶಿಸುತ್ತಾನೆ. ಅವನಿಗೆ ಬಾರಿ ಔತಣಕೂಟವನ್ನು ಏರ್ಪಡಿಸಿದ್ದ ರಾಣಾ, ತನ್ನ ಅರಮನೆ ಜಲ್ ಮಹಲ್‌ನ ಮುಂದಿದ್ದ ಕಮಲದ ಕೊಳದ ಬಳಿ ನಿಂತಿದ್ದ ಪದ್ಮಿನಿಯ ಮುಖಾರವಿಂದವನ್ನು ಒಂದು ಕನ್ನಡಿಯ ಮೂಲಕ ಖಿಲ್ಜಿಗೆ ತೋರಿಸುವನು. ಶತ್ರುವು ಹಿಂತಿರುಗಿ ನೋಡಿದರೂ ಪದ್ಮಿನಿಯು ಕಾಣದಿಂತಿರುವ ಹಾಗೆ ಯೋಜನೆಯನ್ನು ರೂಪಿಸಿದ್ದರು. ಕನ್ನಡಿಯಲ್ಲಿ ಕಂಡ ಪದ್ಮಿನಿಯ ಚೆಲುವನ್ನು ವೀಕ್ಷಿಸಿದ ಖಿಲ್ಜಿಯು, ಅವಳ ರೂಪಕ್ಕೆ ಮರುಳಾಗಿ ಹುಚ್ಚನಾಗುವನು. ಅತಿಥಿಯನ್ನು ಕೋಟೆಯ ಪ್ರವೇಶದ್ವಾರದವರೆಗೂ ಬೀಳ್ಕೊಡಲು ಬಂದ ರಾಣಾನನ್ನು, ಅಲ್ಲಿಯೇ ಅಡಗಿದ್ದ ಖಿಲ್ಜಿಯ ಸೈನಿಕರು ಮೋಸದಿಂದ ಬಂಧಿಸುವರು. ತಂತ್ರಕ್ಕೆ ಪ್ರತಿತಂತ್ರ ಹೆಣೆದ ರಾಣಿ ಪದ್ಮಿನಿ, ರಾಣಾ ರತನ್‌ಸಿಂಹನ ಭೇಟಿ ಮಾಡಿಸಿದರೆ ತಾನು ಅವನ ಜೊತೆ ಹೊರಡಲು ಸಿದ್ಧಳೆಂಬ ಸಂದೇಶವನ್ನು ಖಿಲ್ಜಿಗೆ ಕಳುಹಿಸುವಳು. ತಾನು ಚಿತ್ತೋಡಿನ ಮಹಾರಾಣಿ, ಎಂಟುನೂರು ಪಲ್ಲಕ್ಕಿಗಳಲ್ಲಿ ಕುಳಿತ ಸೇವಕಿಯರೊಂದಿಗೆ ಆಗಮಿಸುವುದಾಗಿ ತಿಳಿಸುವಳು. ಅವಳ ಎಲ್ಲಾ ಷರತ್ತುಗಳನ್ನೂ ಒಪ್ಪಿದ ಖಿಲ್ಜಿ, ಪದ್ಮಿನಿಯ ಆಗಮನಕ್ಕಾಗಿ ಚಾತಕಪಕ್ಷಿಯಂತೆ ಕಾದು ಕುಳಿತನು. ಪದ್ಮಿನಿಯು ಎಲ್ಲಾ ಪಲ್ಲಕ್ಕಿಗಳಲ್ಲೂ ಸ್ತ್ರೀವೇಷ ಧರಿಸಿದ ನುರಿತ ಯೋಧರನ್ನು ಅಡಗಿಸಿಟ್ಟು, ಖಿಲ್ಜಿಯ ಅರಮನೆಗೆ ತೆರಳುವಳು. ಅವಳ ಸೈನಿಕರು ದಿಢೀರನೆ ವೈರಿಗಳ ಮೇಲೆ ಧಾಳಿ ನಡೆಸಿ, ರಾಣಾ ರತನ್‌ಸಿಂಹನ್ನು ಬಿಡುಗಡೆಗೊಳಿಸುವರು. ನಂತರ ನಡೆದ ಕಾಳಗದಲ್ಲಿ, ಎರಡು ಪಡೆಗಳಿಗೂ ಅಪಾರ ಹಾನಿಯುಂಟಾಗುವುದು. ಇದರಿಂದ ಕುಪಿತಗೊಂಡ ಖಿಲ್ಜಿ, ತನ್ನ ಎಲ್ಲಾ ಸೈನ್ಯವನ್ನೂ ಒಟ್ಟುಗೂಡಿಸಿ ಚಿತ್ತೋಡಿನ ಮೇಲೆ ಯುದ್ಧ ಸಾರುವನು. ಅವನ ಅಪಾರ ಸೈನ್ಯದ ಮುಂದೆ, ಚಿತ್ತೋಡಿನ ಸೈನ್ಯ ಸೋತುಹೋಯಿತು. ಕೋಟೆಯ ಪ್ರವೇಶ ದ್ವಾರದಲ್ಲಿ ವೀರಾವೇಷದಿಂದ ಹೋರಾಡಿದ, ಕಾವಿಧಾರಿಗಾಳಾದ ಸುಮಾರು ಏಳು ಸಾವಿರ ಪರುಷರು ಹುತಾತ್ಮರಾಗಿದ್ದರು. ಜಯಶಾಲಿಯಾದ ಖಿಲ್ಜಿಯು ಅಟ್ಟಹಾಸದಿಂದ, ಪದ್ಮಿನಿಯನ್ನು ವಶಪಡಿಸಿಕೊಳ್ಳಲು ಕೋಟೆಯೊಳಗೆ ನುಗ್ಗುವನು. ಆದರೆ, ಅಲ್ಲಿ ಕಂಡ ಭಯಾನಕ ದೃಶ್ಯದಿಂದ ಅವನು ಹೌಹಾರುವನು. ಕೋಟೆಯೊಳಗೆ ಹೊತ್ತಿ ಉರಿಯುತ್ತಿದ್ದ ಅಗ್ನಿಯ ಜ್ವಾಲೆಗಳು, ಶತ್ರುಗಳಿಂದ ತಮ್ಮ ಮಾನ ಉಳಿಸಿಕೊಳ್ಳಲು ಚಿತೆಗೆ ಹಾರಿದ ಸಾವಿರಾರು ಸ್ತ್ರೀಯರು. ಯುದ್ಧದಲ್ಲಿ ರಾಣಾ ರತನ್‌ಸಿಂಹನ ಹತ್ಯೆಯಾಗುತ್ತಿದ್ದಂತೆ, ರಾಣಿ ಪದ್ಮಿನಿಯು ಸುರಂಗದೊಳಗೆ ಸಾಗಿ, ಗೋಮುಖ ಸರೋವರದ ಬಳಿ ಅಗ್ನಿ ಪ್ರವೇಶ ಮಾಡುವಳು, ತಾನು ಅಳಿದ ಮೇಲೆ, ತನ್ನ ಚಿತಾಭಸ್ಮವೂ ಶತ್ರುವಿನ ಕೈಗೆ ಸಿಗಬಾರದೆಂದು, ತನ್ನ ಸಹಚರರಾದ ಗೋರಾ ಮತ್ತು ಬಾದಲ್‌ಗೆ ಆದೇಶಿಸುವಳು. ಉಳಿದ ಹದಿನಾರು ಸಾವಿರ ಸ್ತ್ರೀಯರು ಒಂದು ದೊಡ್ಡದಾದ ಚಿತೆಯನ್ನು ನಿರ್ಮಿಸಿ, ಅಗ್ನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವರು. ಇದನ್ನು ಜನ್ ಜೋಹಾರ್ ಎಂದು ಕರೆಯಲಾಗಿದೆ. ಜೋಹಾರ್ ಕುಂಡವು ನಲವತ್ತು ಅಡಿ ಆಳವಿದ್ದು, ಕಟ್ಟಿಗೆ, ಎಣ್ಣೆ ಹಾಗೂ ತುಪ್ಪ ಹಾಕಿ ಹೊತ್ತಿಸುತ್ತಿದ್ದರಂತೆ. ಕುಪಿತಗೊಂಡ ಅಲ್ಲಾವುದ್ದೀನ್ ಖಿಲ್ಜಿಯು ಇಡೀ ಕೋಟೆಯನ್ನು ನಿರ್ನಾಮ ಮಾಡುವನು. ಮುಂದೆ ೧೫೩೫ ರಲ್ಲಿ ಬಹಾದೂರ್ ಶಾ ನೊಂದಿಗೆ ಹೋರಾಡಿ ಪರಾಭವಗೊಂಡಾಗ, ರಜಪೂತ ಸ್ತ್ರೀಯರು ಎರಡನೆ ಬಾರಿ ಜೋಹಾರ್ ಆಚರಿಸಿದರು. ಆಗ ಅಗ್ನಿಗೆ ಆಹುತಿಯಾದ ಸ್ತ್ರೀಯರ ಸಂಖ್ಯೆ ಹದಿಮೂರು ಸಾವಿರ. ಅಕ್ಬರ್ ನೊಂದಿಗೆ ಯುದ್ಧ ಮಾಡಿದಾಗ ಜೋಹಾರ್‌ಗೆ ಆಹುತಿಯಾದವರು ಏಳು ಸಾವಿರ ಸ್ತ್ರೀಯರು. ಅರಮನೆಯ ಮುಂದೆ ಒಂದು ದೊಡ್ಡದಾದ ಕುಂಡ ಇದ್ದು, ಅದನ್ನು ಪುರಾತತ್ವಶಾಸ್ತ್ರಜ್ಞರು ಪರೀಕ್ಷಿಸಿದಾಗ, ಅವರಿಗೆ ದೊರೆತದ್ದು – ಚಿತಾಭಸ್ಮ, ರಾಶಿ ರಾಶಿ ಮೂಳೆಗಳು ಹಾಗೂ ಸ್ತ್ರೀಯರು ಧರಿಸಿದ್ದ ಆಭರಣಗಳು. ಇಲ್ಲಿ ಪ್ರತಿ ವರ್ಷ ಜೋಹಾರ್ ಉತ್ಸವವನ್ನು ಆಚರಿಸಿ, ಅಗ್ನಿಕುಂಡದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ಸ್ತ್ರೀಯರಿಗೆ ಗೌರವ ಸಲ್ಲಿಸುತ್ತಾರೆ.

ಚಿತ್ತೋಡಿನ ಕೋಟೆ ನೋಡುತ್ತಾ ಮುಂದೆ ಸಾಗಿದವರಿಗೆ ಕಂಡದ್ದು ಹತ್ತನೇ ಶತಮಾನದಲ್ಲಿ ನಿರ್ಮಿಸಲಾದ ಶ್ವೇತಾಂಬರ ಜೈನರ ದೇಗುಲಗಳ ಸಂಕೀರ್ಣ. ಇಲ್ಲಿ ಸುಮಾರು ಇಪ್ಪತ್ತೇಳು ಜಿನದೇಗುಲಗಳಿವೆ. ಮತ್ತೊಂದು ದೇಗುಲ ಚಿತ್ತೋಡಿನ ಅರಸರ ಶಿಲ್ಪಕಲಾ ಕೌಶಲಕ್ಕೆ ಸಾಕ್ಷಿಯಾಗಿ ನಿಂತಿದೆ. ಸೂರ್‍ಯವಂಶದವರಾದ ಚಿತ್ತೋಡಿನ ಅರಸರು ಭವ್ಯವಾದ ಸೂರ್ಯದೇಗುಲವನ್ನು ನಿರ್ಮಿಸಿದ್ದಾರೆ. ಇಲ್ಲಿನ ದೊರೆಗಳು ಸೂರ್ಯದೇಗುಲದ ಮುಂದಿರುವ ಕೊಳದಲ್ಲಿ ಮಿಂದು ಭಾಸ್ಕರನ ದರ್ಶನ ಮಾಡಿಯೇ ತಮ್ಮ ಕಾಯಕವನ್ನು ಆರಂಭಿಸುತ್ತಿದ್ದರಂತೆ. ಈ ದೇಗುಲದಲ್ಲಿ, ಏಳು ಕುದುರೆಗಳ ರಥವೇರಿ ಸಾಗುವ ಸೂರ್ಯನ ಮೂರ್ತಿಯನ್ನು ಆಯಸ್ಕಾಂತಗಳ ನೆರವಿನಿಂದ ಗರ್ಭಗುಡಿಯ ಮಧ್ಯೆ ಯಾವ ಆಧಾರವಿಲ್ಲದೆ ಗಾಳಿಯಲ್ಲಿ ತೇಲುವ ಹಾಗೆ ನಿಲ್ಲಿಸಿದ್ದರಂತೆ. ಆದರೆ ಶತ್ರುಗಳು ಈ ಅದ್ಭುತವಾದ ಸೂರ್ಯನ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ.

ಮುಂದೆ ಮೀರಾಬಾಯಿ ಪೂಜಿಸುತ್ತಿದ್ದ ಕುಂಭಸ್ವಾಮಿ ದೇಗುಲ ನೋಡಿದೆವು. ಇಲ್ಲಿ ಕೃಷ್ಣ, ಬಲರಾಮ ಹಾಗೂ ರಾಧಾರಾಣಿಯರ ಮೂರ್ತಿಗಳಿವೆ. ಮೀರಾಬಾಯಿಯನ್ನು ಚಿತ್ತೋಡದ ಅರಸನಿಗೆ ವಿವಾಹ ಮಾಡಿಕೊಡಲಾಗಿತ್ತು, ದುರದೃಷ್ಟವಶಾತ್ ಅವಳ ಪತಿ ಮರಣಹೊಂದಿದ. ಕೃಷ್ಣಭಕ್ತೆಯಾದ ಮೀರಾಳನ್ನು, ಶಿವಭಕ್ತನಾದ ಅವಳ ಮೈದುನ ಹತ್ಯೆ ಮಾಡಲು ಸಂಚು ರೂಪಿಸಿದ. ಆದರೆ, ಅವನು ಕಳುಹಿಸಿದ ವಿಷ ಅಮೃತವಾಗಿತ್ತು, ವಿಷಸರ್ಪಗಳು ಹೂವಿನ ಮಾಲೆಗಳಾದವು. ತನ್ನ ಗಂಡನ ಮನೆಯವರ ವರ್ತನೆಯಿಂದ ಬೇಸತ್ತ ಮೀರಾಬಾಯಿ, ಚಿತ್ತೋಡಿನಿಂದ ದ್ವಾರಕೆಗೆ ತೆರಳಿದಳು. ಮೀರಾಬಾಯಿ ಪೂಜಿಸುತ್ತಿದ್ದ ಕೃಷ್ಣನ ಮೂರ್ತಿಯನ್ನು ರಾಣಾ ಮಾನ್‌ಸಿಂಹನು ಜಯಪುರಕ್ಕೆ ಸಾಗಿಸಿದನು.

ನಾವು ಚಿತ್ತೋಡಿನ ಕೋಟೆಗೆ ಕಳಶಪ್ರಾಯದಂತಿರುವ ‘ವಿಜಯಸ್ಥಂಭದ’ ಮುಂದೆ ನಿಂತಿದ್ದೆವು. ಶಿವನ ಡಮರುಗದ ಆಕಾರದಲ್ಲಿ ರಾರಾಜಿಸುತ್ತಿರುವ ೧೨೨ ಅಡಿ ಎತ್ತರದ ಒಂಭತ್ತು ಅಂತಸ್ತಿನ ಸ್ಥಂಭ. ಈ ವಿಜಯ ಸ್ಥಂಭದ ಹೊರಗೂ ಒಳಗೂ – ಕೆತ್ತಲಾಗಿರುವ ದೇವಾನುದೇವತೆಗಳ ಮೂರ್ತಿಗಳು ಇವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಎಂಟನೆಯ ಅಂತಸ್ತಿನವರೆಗೆ ೧೫೭ ಮೆಟ್ಟಿಲುಗಳಿದ್ದು, ಇತ್ತೀಚೆಗೆ ವಿಜಯಸ್ಥಂಭದ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸಲಾಗಿದೆ. ರಾಣಾ ಕಂಭನು ಇಬ್ಬರು ಮೊಗಲ್ ಚಕ್ರವರ್ತಿಗಳನ್ನು ಸೋಲಿಸಿದ ಸವಿ ನೆನಪಿಗಾಗಿ ನಿರ್ಮಿಸಿದ ವಿಜಯಸ್ಥಂಭವಿದು. ನಗರದ ಮತ್ತೊಂದು ಪಾರ್ಶ್ವದಲ್ಲಿ ಎಪ್ಪತ್ತೈದು ಅಡಿ ಎತ್ತರದ ಕೀರ್ತಿ ಸ್ಥಂಭವನ್ನು ಜೈನರು ನಿರ್ಮಿಸಿದ್ದಾರೆ.

.ಚಿತ್ತೋಡಿನ ಕೋಟೆಯ ಒಂದೊಂದು ಕಲ್ಲೂ ಮೇವಾಡದ ಪರಾಕ್ರಮಿ ದೊರೆಗಳ ಕಥೆಯನ್ನು ಹೇಳುವಂತಿದೆ. ತಟ್ಟನೆ ನೆನಪಿನಂಗಳದಿಂದ ತೇಲಿಬಂದಿತ್ತು ಜನಪ್ರಿಯವಾದ ಸಿನೆಮಾಗೀತೆ, ‘ಗೊಂಬೆ ಹೇಳುತೈತೆ.. ಆಡಿಸಿಯೇ ನೋಡು, ಬೀಳಿಸಿಯೇ ನೋಡು / ಎಂದೂ ಸೋಲದು, ಸೋತು ತಲೆಯ ಬಾಗದು.’ ರಜಪೂತರು ಪರಕೀಯರ ಆಕ್ರಮಣವನ್ನು ಧೈರ್ಯವಾಗಿ ಎದುರಿಸಿ ವೀರಸ್ವರ್ಗವನ್ನು ಸೇರಿದರೇ ಹೊರತು ಎಂದಿಗೂ ಸಂಧಾನಕ್ಕೆ ಸಿದ್ಧರಾಗಲಿಲ್ಲ. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಇವರ ಚಾರಿತ್ರ್ಯದ ಮೇಲೆ ಒಂದು ಕಪ್ಪು ಚುಕ್ಕೆಯೂ ಕಂಡುಬರುವುದಿಲ್ಲ. ಹಾಗಾಗಿ ಈ ನಗರವನ್ನು ಇಂದಿಗೂ ಶ್ವೇತ ನಗರ ಎಂದು ಕರೆಯಲಾಗುತ್ತದೆ.

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.

6 Responses

 1. ಸೊಗಸಾಗಿ ಸಾಗುತ್ತಿದೆ ಉದಯಪುರದ ಪ್ರವಾಸ ಕಥನ.. ಧನ್ಯವಾದಗಳು ಮೇಡಂ

 2. ವಂದನೆಗಳು ಮೇಡಂ

 3. ನಯನ ಬಜಕೂಡ್ಲು says:

  Nice

 4. ಶಂಕರಿ ಶರ್ಮ says:

  ಚಂದದ ಉದಯಪುರದ ಇತಿಹಾಸ, ಹಿನ್ನೆಲೆ, ವಿಚಿತ್ರವೆನಿಸುವ ಇಲಿಗಳ ಪೂಜೆ…
  ಸೊಗಸಾದ ಪ್ರವಾಸ ಕಥನ…ಧನ್ಯವಾದಗಳು ಗಾಯತ್ರಿ ಮೇಡಂ

 5. Padmini Hegde says:

  ಚಂದದ ಉದಯಪುರದ ಇತಿಹಾಸ ಕಥನ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: