ಅನಿರೀಕ್ಷಿತ !

Share Button

ಆ ಆಲದ ಮರ ತುಂಬಾ ಹಳೆಯದು. ಅದರ ಬೇರು ಊರಲ್ಲೆಲ್ಲ  ಹರಡಿ ಆಶ್ಚರ್ಯ ಮೂಡಿಸಿದ್ದವು. ಎಷ್ಟೋ ತಲೆಮಾರು ಉರುಳಿದರು ಅದು  ಇನ್ನೂ ಚಿಗಿಯುತ್ತಲೇ ಇತ್ತು ಬೇರು ಚಾಚುತ್ತಲೇ ಇತ್ತು  ಅಬ್ಬಾ ಎಂತಹ ಅದ್ಭುತ ಮರ ಇದರ   ಆಯಸ್ಸು ಎಷ್ಟಿರಬೇಕು? ಇದು ಚಿರಂಜೀವಿ ಅಲ್ಲ ಆದರೆ ದೀರ್ಘಾಯುಷಿ , ಆಲದ ಮರ ಆಗಿರುವುದರಿಂದಲೇ ಇಷ್ಟು ವರ್ಷ ಬದುಕಿದೆ ಇಲ್ಲವಾದರೆ ಯಾವಾಗಲೋ ಕೊಡಲಿ ಪೆಟ್ಟು ಬೀಳುತಿತ್ತು ಅಂತ ಯೋಚಿಸಿದೆ ಇದರಡಿ ನಿತ್ಯ  ಹತ್ತಾರು ಜನ ವಿಶ್ರಾಂತಿ ಪಡೆಯುತ್ತಿದ್ದರು ಕೆಲವರು ದೇಶಾವರಿ ಚರ್ಚೆ ಮಾಡುತಿದ್ದರು. ಬೇಸಿಗೆ ಬಂತೆಂದರೆ ಸಾಕು ಇದರ ನೆರಳಿಗೆ ಜನ  ಹಾತೊರೆಯುತಿದ್ದರು. ಇದನ್ನು ಆಲದ ಮರ ಅನ್ನುವದಕ್ಕಿಂತ ಆಶ್ರಯ ಮರವೆಂದು ಕರೆದರೆ   ಸೂಕ್ತ ಅಂತ ನನಗನಿಸುತಿತ್ತು.

ಅಂದು  ಪಾತ್ರಧಾರಿಯೊಬ್ಬ ಊರಿಗೆ ಬಂದು ಇದೇ ಆಲದ ಮರದ  ಕೆಳಗೆ ಏಕಾಭಿನಯ ಪಾತ್ರದಲ್ಲಿ ತೊಡಗಿದ. ಆತನ ಸುತ್ತಲೂ ಜನ ಸುತ್ತುವರೆದು  ಪಾತ್ರ ನೋಡುವಲ್ಲಿ ತಲ್ಲೀನರಾಗಿದ್ದರು. ಆತ  ಮೈತುಂಬ ನೀಲಿ ಬಣ್ಣ ಬೆಳೆದುಕೊಂಡು ತಲೆಯ ಮೇಲೆ ಜಡೆ ಕಟ್ಟಿಕೊಂಡು ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ತ್ರಿಶೂಲ , ಡಮರುಗ ಹಿಡಿದು ಪಾತ್ರ ಮಾಡುವಾಗ ಸಾಕ್ಛಾತ ಶಿವನೇ ಧರೆಗಿಳಿದು ಬಂದಂತೆ ಭಾಸವಾಗುತಿತ್ತು. ಎಲ್ಲರೂ ಭಕ್ತಿಭಾವದಿಂದ  ಆತನ ಪಾತ್ರ ನೋಡುವದರಲ್ಲಿ ಮಗ್ನರಾಗಿದ್ದರು. ಸುದರ್ಶನ ತನ್ನ ತಂಗಿ ಲೀಲಾಳ ಜೊತೆ ಶಾಲೆಯಿಂದ ಬರುವಾಗ ಆಲದ ಮರದ ಕೆಳಗೆ ಜನ ಗುಂಪುಗೂಡಿದ್ದು ನೋಡಿ ಕುತೂಹಲ ಮೂಡಿತು. ಅರೇ ಅಲ್ಲಿ ನೋಡು ಏನೋ ವಿಶೇಷ ಇದ್ದಂತೆ ಕಾಣಸ್ತಿದೆ ಎಂದಾಗ ಲೀಲಾಳಿಗೂ ಕುತೂಹಲ ಮೂಡಿ  ಇಬ್ಬರೂ  ಮರದ ಕಡೆ ಧಾವಿಸಿದರು. ಎಲ್ಲರ ಮಧ್ಯ ನಿಂತು ಆತನ  ಪಾತ್ರ ನೋಡಿದರು.  ಸುಮಾರು ಜನ ಆತನ ಪಾತ್ರ ಮೆಚ್ಚಿ ಹಣ ನೀಡಿದರು ನಾವೇನು ಕೊಡೋದು ನಮ್ಮಲ್ಲಿ  ಹಣವಿಲ್ಲ ಅಂತ  ಮನಸ್ಸು ತಳಮಳವಾಗಿ  ಸುದರ್ಶನ ಮುಖ  ಸಪ್ಪಗೆ  ಮಾಡಿದಾಗ   ನಮ್ಮಲ್ಲಿ ಹಣ ಎಲ್ಲಿಂದ ಬರಬೇಕು? ನಾವಿನ್ನೂ ಚಿಕ್ಕವರು ಅಂತ ಲೀಲಾ ಸಮಜಾಯಿಷಿ ನೀಡಲು ಮುಂದಾದಳು.ನಾವು ಪುಕ್ಕಟೆ  ಪಾತ್ರ ನೋಡಿದ್ದು ಸರಿಯಲ್ಲ ಅಂತ  ಸಂಕಟ ಹೊರಹಾಕಿದ. ಆತನಿಗೆ ಹಣ ಕೊಡದಿದ್ದರೆ ಏನಾಯಿತು? ಅದರ ಬದಲಿಗೆ ಬೇರೆ ಏನಾದರೂ ಸಹಾಯ ಮಾಡೋಣ  ಅಂತ  ಹೇಳಿದಳು. ನಮ್ಮಿಂದ ಏನು ಸಹಾಯ ಮಾಡಲು ಸಾಧ್ಯ ? ಅಂತ ಸುದರ್ಶನ  ಪ್ರಶ್ನಿಸಿದಾಗ  ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸೋಣ ಇದು ಕೂಡ ಸಹಾಯ  ಅಲ್ಲವೇ ?  ಅಂತ ಪ್ರಶ್ನಿಸಿದಳು ಇವಳ  ಮಾತು ಸಮಯೋಚಿತವೆನಿಸಿತು .

ಮಕ್ಕಳು ಶಾಲೆಯಿಂದ ಇನ್ನೂ ಯಾಕೆ ಬಂದಿಲ್ಲ ಅಂತ ದಾನಮ್ಮ ಮನೆಯಲ್ಲಿ ಇವರ  ದಾರಿ ಕಾಯುತಿದ್ದಳು. ಇವರು ಬರುತ್ತಲೇ ಯಾಕೆ ತಡಾ ಮಾಡಿದ್ರಿ ಶಾಲೆ ಬಿಟ್ಟು ಆಗಲೇ ತಾಸು ಹೊತ್ತಾಯಿತು  ಅಂತ ಪ್ರಶ್ನಿಸಿದಳು.  ಪಾತ್ರಧಾರಿಯ ವಿಷಯ ವಿವರಿಸಿ ಆತನ ಬಗ್ಗೆ ವರ್ಣನೆ ಮಾಡಿ  ನಾವು ಅವನ ಪಾತ್ರ ಪುಕ್ಕಟೆ ನೋಡಿ  ಮನಸ್ಸಿಗೆ ಬೇಸರವಾಯಿತು ಅಂತ ಸುದರ್ಶನ ಹೇಳಿದ. ಪುಕ್ಕಟೆ ನೋಡಿದ್ದಕ್ಕೆ  ಆತನಿಗೆ  ಊಟ ಮಾಡಿಸಬೇಕಂತ ಮಾಡಿದ್ದೇವೆ ಅಂತ ಲೀಲಾ ಇಂಗಿತ ವ್ಯಕ್ತಪಡಿಸಿದಳು. ಮಕ್ಕಳ ಮಾತಿಗೆ ದಾನಮ್ಮ ತಕ್ಷಣ ಒಪ್ಪಿಗೆ ಸೂಚಿಸಿ  ನಾನು ಅಡುಗೆ ಮಾಡಿಡುತ್ತೇನೆ  ಆತನಿಗೆ ಕರೆದುಕೊಂಡ ಬಂದು ಊಟ ಮಾಡಿಸಿ ಅಂತ  ಹೇಳಿದಾಗ ಇವರಿಗೆ  ಖುಷಿ ನೀಡಿತು.

ಪಾತ್ರಧಾರಿಯ ಪಾತ್ರ ಮುಗಿದ ಮೇಲೆ  ಜನ ಆತನಿಗೆ ಸುತ್ತುವರೆದು ಹತ್ತು  ಹಲವು  ಪ್ರಶ್ನೆ ಕೇಳತೊಡಗಿದರು. ನಿನ್ನ ಕಲೆ ಎಷ್ಟು ಹೊಗಳಿದರು ಕಡಿಮೆ, ನೀನು ಮಾಡಿದ ಆ ಶಿವನ ಪಾತ್ರ ಇನ್ನೂ ನಮ್ಮ ಕಣ್ಮುಂದೆ ಕಟ್ಟಿದಂತಾಗಿದೆ ಎಂತಹ ಅದ್ಭುತ ಪಾತ್ರ ಈಗಿನ ಕಾಲದಲ್ಲಿ ಪೌರಾಣಿಕ ಪಾತ್ರ ಮಾಡುವವರು  ಸಿಗುವದಿಲ್ಲ   ನಿನ್ನ ಪಾತ್ರ ಎಷ್ಟು ಸಾರಿ ನೋಡಿದರು ಇನ್ನೂ ನೋಡಬೇಕೆನೆಸುತ್ತದೆ  ಅಂತ ಹೊಗಳಿದಾಗ  ಪಾತ್ರಧಾರಿಯ ಮುಖ ಅರಳಿತು.  ನಿನ್ನೂರು ಯಾವುದು ? ನಿನ್ನ ಹೇಸರೇನು ? ಅಂತ ಕೆಲವರು  ಪ್ರಶ್ನಿಸಿದರು  ನನಗೆ ನನ್ನದೇ ಆದ ಊರು ಇಲ್ಲ ಯಾವ ಊರಿಗೆ ಹೋಗುತ್ತೇನೋ ಅದೇ ನನ್ನೂರು. ನನ್ನ ಕಲೆಗೆ ಯಾರು ಬೆಲೆ ಕೊಡುತ್ತಾರೊ ಅವರೇ ನನ್ನವರು  ನಾನು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೋ ಅದೇ ನನ್ನ ಹೆಸರು ಅಂತ ಮುಗ್ಳನಗೆ ಬೀರಿದ . ವಾಹ್ ಎಲ್ಲರಿಗೂ ಒಂದೇ  ಹೆಸರಿದ್ದರೆ ನಿನಗೆ ಹಲವಾರು ಹೆಸರುಗಳು ಅಂತ   ಆಶ್ಚರ್ಯ ಹೊರ ಹಾಕಿದರು.   ನೀನು ಇವತ್ತು ಶಿವನ ಪಾತ್ರ  ಮಾಡಿದೆ ನಾವೆಲ್ಲಾ ನಿನಗೆ ಶಿವ ಅಂತ ಕರೆಯಬಹುದೇ ಎಂದಾಗ ಮುಗ್ಳನಗೆ ಬೀರಿ  ತಲೆಯಾಡಿಸಿದ.

ನೀನು ಮೊದಲು ಯಾವುದಾದರು ನಾಟಕ ಕಂಪನ್ಯಾಗ ಕೆಲಸಾ ಮಾಡೀದೇನು? ಅಂತ  ಪ್ರಶ್ನಿಸಿದರು. ಹೌದು ನಾನು ನಾಟಕ ಕಂಪನಿಯಿಂದಲೇ ಈ ಏಕಾಭಿನಯ ಪಾತ್ರಕ್ಕೆ ಬಂದಿದ್ದು ಅಂತ ವಾಸ್ತವ ಹೇಳಿದ.  ಯಾವ ನಾಟಕ ಕಂಪನಿ ಅಂತ ಮರು ಪ್ರಶ್ನಿಸಿದರು ಅದೊಂದು ದಿವಾಳಿಯಾದ ನಾಟಕ ಕಂಪನಿ ಅದರ ಬಗ್ಗೆ ಮತ್ಯಾಕೆ ನೆನಪಿಸಿಕೊಳ್ಳೋದು ಅದರ  ಹೆಸರು ಹೇಳಲು ನನಗೆ  ಇಷ್ಟವಿಲ್ಲ ಎಂದನು. ಹೋಗಲಿ ಬಿಡು ಆದರೆ ಆ ನಾಟಕ ಕಂಪನಿಯ ಕಲಾವಿದರೆಲ್ಲ ಈಗ ಏನ್ಮಾಡ್ತಿದ್ದಾರೆ ? ಅಂತ  ಪ್ರಶ್ನಿಸಿದರು. ಅವರೆಲ್ಲ ಸಿನಿಮಾ, ಧಾರಾವಾಹಿ ಅಂತ ಬೇರೆ ಬೇರೆ ಕಡೆ ಸೇರಿಕೊಂಡರು ಆದರೆ ನಾನು ಮಾತ್ರ  ಈ ಏಕಾಭಿನಯ ಪಾತ್ರ ಮಾಡುತ್ತಾ ಊರಿಂದೂರಿಗೆ ಅಲೆದಾಡುತಿದ್ದೇನೆ ಅಂತ  ಹೇಳಿದ.  ಸಿನಿಮಾ ಬಂದ ಮೇಲೆ ನಾಟಕ ಕಂಪನಿಗಳೇ ಇಲ್ಲವಾಗ್ತಿವೆ ಏನು ಮಾಡೋದು ಅಂತ ಹಳಾಳಿಸಿದರು.   ಯಾರಿಗೂ  ಪಾತ್ರದಾರಿಯ  ನಿಜವಾದ ಹೆಸರು , ಊರು ಗೊತ್ತಾಗಲಿಲ್ಲ.

ಪಾತ್ರಧಾರಿ  ವಿಷಯ   ಬೇಕಂತಲೇ ಮುಚ್ಚಿಡುತಿದ್ದಾನೆ ಅಂತ ಕೆಲವರಿಗೆ ಸಂಶಯ ಮೂಡಿತು . ಇವನಿಗೆ ಎಲ್ಲೋ ನೋಡಿದ ಹಾಗಿದೆ ಆದರೆ ಈಗ ನೆನಪು ಬರುತಿಲ್ಲ ಅಂತ ಕೆಲವರು ತಲೆ ಕೆರೆದುಕೊಂಡರು.

ಸ್ವಲ್ಪ ಸಮಯದ ನಂತರ ಸುದರ್ಶನ ಆಲದ ಕಟ್ಟೆಗೆ ಹಾಜರಾಗಿ  ನಮ್ಮ ಮನೆಗೆ ಊಟಕ್ಕೆ ಬರಬೇಕು ಅಂತ ಆತನಿಗೆ ವಿನಂತಿಸಿಕೊಂಡ. ಪಾತ್ರಧಾರಿಯ  ಹೊಟ್ಟೆ ಮೊದಲೇ ಹಸಿದಿತ್ತು. ಯಾರಾದರು ಕರೆಯುತ್ತಾರೆಯೇ ಅಂತ ಯೋಚಿಸುತಿದ್ದ.  ತಕ್ಷಣ ಸುದರ್ಶನ ಮಾತಿಗೆ ಒಪ್ಪಿಗೆ ಸೂಚಿಸಿ ಇವನ   ಹೆಜ್ಜೆ ಹಾಕಿದ.  ನಿಮ್ಮ ಮನೆ ಎಲ್ಲಿದೆ ? ಅಂತ ಸ್ವಲ್ಪ ಮುಂದೆ ಹೋಗಿ ಪ್ರಶ್ನಿಸಿದ.  ಅದೋ ಅಲ್ಲಿ ಕಾಣಿಸ್ತಿದೆಯಲ್ಲ ಅದೇ ನಮ್ಮ ಮನೆ ಅಂತ ಬಣ್ಣ ಹಚ್ಚಿದ ಬಾಗಿಲಿನ ಕಡೆ ಸುದರ್ಶನ ಕೈ ಮಾಡಿ ತೋರಿಸಿದ. ದಾನಮ್ಮ ಕೆಂಪು ಸೀರೆ ಧರಿಸಿ ಬಾಗಿಲ ಮುಂದೆ ನಿಂತಿದ್ದು ಕಂಡು ಬಂದಿತು  ಅವಳಿಗೆ ನೋಡಿ  ಪಾತ್ರಧಾರಿ ತಕ್ಷಣ ಹೆಜ್ಜೆ ಹಿಂದೆ ಸರಿಸಿ  ಯೋಚನೆಯಲ್ಲಿ ಮುಳುಗಿದ. ಯಾಕೆ ಏನಾಯ್ತು  ಅಂತ ಸುದರ್ಶನ ಪ್ರಶ್ನಿಸಿದ.  ಒಂದು ಮುಖ್ಯವಾದ ವಸ್ತು ಆಲದ ಮರದ ಹತ್ತಿರ ಬಿಟ್ಟು ಬಂದಿದ್ದೇನೆ ಅದನ್ನ ತೆಗೆದುಕೊಂಡ ಆಮ್ಯಾಲ ಬರುತ್ತೇನೆ ನೀನು ಹೋಗು ಅಂತ ಹೇಳಿದಾಗ  ಸುದರ್ಶನ  ತಲೆಯಾಡಿಸಿದ.

ಸುಮಾರು ಹೊತ್ತು ಕಳೆದು ಹೋಯಿತು. ಎಲ್ಲರೂ ಆತ ಊಟಕ್ಕೆ ಬರುತ್ತಾನೆ ಅಂತ ಕಾಯತೊಡಗಿದರು.   ಆತ ಬರದಿದ್ದಾಗ ಇನ್ನೂ ಎಷ್ಟು ಹೊತ್ತು ಕಾಯೋದು ? ಮಾಡಿದ ಅಡುಗೆ ತಣ್ಣಗಾಗುತ್ತದೆ  ನೀನೇ ಹೋಗಿ ಕರೆದುಕೊಂಡ ಬಾ  ಅಂತ ದಾನಮ್ಮ ಮಗನಿಗೆ ಸೂಚಿಸಿದಳು.  ಸುದರ್ಶನ ತಲೆಯಾಡಿಸಿ ಪುನಃ  ಆಲದ ಮರದ ಹತ್ತಿರ ಬಂದು ಆತನಿಗೆ  ಹುಡುಕಿದ . ಆದರೆ ಆತ  ಕಾಣಲಿಲ್ಲ.  ಅಲ್ಲಿದ್ದವರಿಗೂ ವಿಚಾರಿಸಿದ ನಿನ್ನ ಜೊತೆಗೆ ಬಂದನಲ್ಲ? ಅಂತ ಹೇಳಿದರು ಎಷ್ಟು ಹುಡುಕಿದರು ಯಾವ ಪ್ರಯೋಜನವಾಗಲಿಲ್ಲ.  ನಿರಾಸೆಯಿಂದ ವಾಪಸ ಮನೆ ಕಡೆ ಹೊರಟ ದಾರಿಯಲ್ಲಿ  ಗೆಳೆಯನೊಬ್ಬ  ಭೇಟಿಯಾಗಿ ಯಾರನ್ನು ಹುಡುಕುತಿರುವೆ ಅಂತ  ಪ್ರಶ್ನಿಸಿದ.   ಪಾತ್ರಧಾರಿಗೆ ಅಂತ ಹೇಳಿದಾಗ  ಅಯ್ಯೋ ಆತ ಆಗಲೇ ಬಸ್ ಹತ್ತಿ  ಹೊರಟು ಹೋದ ಅಂತ ವಾಸ್ತವ ಹೇಳಿದ.  ಇವನಿಗೆ  ಗಾಬರಿಯಾಯಿತು.  ಆತ ಹೀಗೇಕೆ ಮಾಡಿದ ಊಟ ಮಾಡದೇ ಹೊರಟು ಹೋದನಲ್ಲ ಅಂತ ಮುಖ ಸಪ್ಪಗೆ ಮಾಡಿದ.  ಆತ ಯಾಕೆ ಹೋದ ಅಂತ ಯಾರಿಗೂ ತಿಳಿಯದೆ ಹೋಯಿತು.

ಆಲದ ಮರಕ್ಕೆ ಎಲ್ಲ ವಿಷಯ ಗೊತ್ತಿತ್ತು ಕಂಡು ಕೇಳಿದರೂ  ಮೂಕವಾಗಿತ್ತು. ಆ ಪಾತ್ರಧಾರಿ ಬೇರೆ ಯಾರೂ ಆಗಿರದೆ ದಾನವ್ವಳ ಗಂಡನೇ ಆಗಿದ್ದ.   ಇದೇ ಆಲದ ಮರದ ಕೆಳಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಇವರಿಬ್ಬರ  ಮದುವೆಯಾಗಿತ್ತು. ಮದುವೆ ಮಾಡಿಕೊಂಡು ಆತ  ದಾನಮ್ಮಳಿಗೆ ತಮ್ಮೂರಿಗೆ ಕರೆದುಕೊಂಡು ಹೋಗಿದ್ದ. ಆತನ   ಮೂಲ ಹೆಸರು ರುದ್ರಣ್ಣ . ಮದುವೆಯಾದ ನಾಲ್ಕೈದು ವರ್ಷಗಳ ತನಕ ಸಂಸಾರ ಚನ್ನಾಗೇ ಮಾಡಿಕೊಂಡು ಬಂದಿದ್ದ. ಇಬ್ಬರು ಮುತ್ತಿನಂತಹ ಮಕ್ಕಳು ಜನಿಸಿದರು. ನಂತರ ಆತನ ಜೀವನದ ದಿಕ್ಕೇ ಬದಲಾಗಿ ಹೋಯಿತು. ಅಂದು ತಮ್ಮೂರಿಗೆ ಶಿವತಾಂಡವ ಅನ್ನುವ ಸಂಚಾರಿ ನಾಟಕ ಕಂಪನಿ ಬಂದಿತ್ತು. ನಾಟಕ ನೋಡಲು ಜನ ಮುಗಿ ಬೀಳುತಿದ್ದರು.  ಅವನಿಗೆ  ಮೊದಲಿನಿಂದಲೂ ನಾಟಕದಲ್ಲಿ ಪಾತ್ರ ಮಾಡುವ ಆಸೆಯಿತ್ತು ಹಾಗೋ ಹೀಗೋ ಮಾಡಿ ಆ ನಾಟಕ ಕಂಪನಿ ಸೇರಿಕೊಂಡ  ಶಿವಗಂಗೆ ಅನ್ನುವವಳ ಜೊತೆ ಶಿವನ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ . ಶಿವಗಂಗೆಯ ವ್ಯಾಮೋಹಕ್ಕೆ ಸಿಲುಕಿ  ಹೊರ ಬರಲು ಆಗಲಿಲ್ಲ. ನಾಟಕ ಯಶಸ್ವಿ ಪ್ರಯೋಗ ಮುಗಿಸಿ ಬೇರೆ ಊರಿಗೆ ಹೋಯಿತು. ನಾಟಕ ಕಂಪನಿ ಜೊತೆ ಅವನೂ ಹೊರಟು ಹೋದ. ಹೋಗುವ ವಿಷಯ ಹೆಂಡತಿಗೆ ತಿಳಿಸಲೇ ಇಲ್ಲ. ಇದರಿಂದ ದಾನಮ್ಮಳ ಮನಸ್ಸಿಗೆ ನೋವಾಯಿತು. ಗಂಡನಿಗೆ ವಾಪಸ ಕರೆ ತರಲು ನಾನಾ ರೀತಿಯ ಕಸರತ್ತು ಮಾಡಿದಳು ಆದರೆ ಫಲ ಕೊಡಲಿಲ್ಲ.

ಗಂಡನೇ ಹೋದ  ಮೇಲೆ ಇಲ್ಲಿ ಇರೋದು ಬೇಡ ಅಂತ ಮಕ್ಕಳ ಜೊತೆ  ತವರು ಮನೆ  ಸೇರಿಕೊಂಡಳು.  ಅಪ್ಪನಿಗೂ ಇವಳೊಬ್ಬಳೇ   ಮಗಳು,  ತವರು ಮನೆಯಲ್ಲಿ  ಎಲ್ಲರಿಂದಲೂ ಸಹಕಾರ ಸಿಕ್ಕಿತು . ಮಕ್ಕಳಿಗೆ ಅಲ್ಲೇ ಸರಕಾರಿ ಶಾಲೆಗೆ ಸೇರಿಸಿ ಜೀವನ ಸಾಗಿಸತೊಡಗಿದಳು ಸ್ವಲ್ಪ ವರ್ಷದ ನಂತರ ಇವಳಪ್ಪ ತೀರಿ ಹೋದ ಆಗ  ಆ ತವರು ಮನೆಯೇ  ಇವಳಿಗೆ ಖಾಯಂ ಆಯಿತು. ಒಂದು ಕಡೆ ಅಪ್ಪನ ಚಿಂತೆ ಇನ್ನೊಂದು ಕಡೆ ಗಂಡನ ಚಿಂತೆ ಸುಮಾರು ದಿನ ಕಾಡಿತು. ಆದರೂ ಧೈರ್ಯ ಗುಂದದೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುತ್ತಾ ದಿನ ಕಳೆಯತೊಡಗಿದಳು. ಆದರೆ ಗಂಡನ ಆಸೆ ಬಿಡದೆ ಆತ ಇಂದಿಲ್ಲ ನಾಳೆ ಬಂದೇ ಬರುತ್ತಾನೆ ಅನ್ನುವ ಆಸೆ ಮಾತ್ರ ಬಿಟ್ಟಿರಲಿಲ್ಲ . ಅಪ್ಪ ಎಲ್ಲಿದ್ದಾನೆ? ಯಾವಾಗ ಬರುತ್ತಾನೆ? ಅಂತ ಮಕ್ಕಳು ಆಗಾಗ ಪ್ರಶ್ನಿಸಿದಾಗ  ನಿಮ್ಮಪ್ಪ ಬೇರೆ ಊರಲ್ಲಿದ್ದಾನೆ ಇನ್ನೂ ಸ್ವಲ್ಪ ದಿನ ಬಿಟ್ಟು ಬರ್ತಾನೆ ಅಂತ ಸಮಜಾಯಿಸಿ ನೀಡುತಿದ್ದಳು.

ಅಂದು ಗಂಡ   ಪಾತ್ರದಾರಿಯ ವೇಷದಲ್ಲಿ ಊರಿಗೆ ಬಂದು ಮನೆಯ ತನಕ ಬಂದರೂ ಇವಳಿಗೆ ಗೊತ್ತೇ ಆಗಲಿಲ್ಲ.   ಆತ ಇವಳಿಗೆ ನೋಡಿ  ಗುರತು ಹಿಡಿದಾಗ,ನಾನೇ ಇವಳಿಗೆ ತೊರೆದು ಹೋದ ಮೇಲೆ  ಮತ್ತೆ ಹೇಗೆ ಮುಖ ತೋರಿಸಲಿ ಅಂತ ಯೋಚಿಸಿ  ತಕ್ಷಣ  ಮಾಯವಾಗಿ ಹೋದ. ಆತ ಹೋದ ಮೇಲೆ ಕೆಲವು ಹಿರಿಯರು ಆಲದ ಮರದ ಕೆಳಗೆ ಕುಳಿತು ಆತ ಸಂಗಪ್ಪನ ಅಳಿಯ ಅಲ್ಲವೇ?  ನಾವೇ ಎಲ್ಲರೂ ಇದೆ ಆಲದ ಮರದ ಕೆಳಗೆ  ಮದುವೆ ಮಾಡಿಸಿದ್ದೇವು  ಅಂತ ಚರ್ಚಿಸಿ ಖಚಿತ  ತೀರ್ಮಾನಕ್ಕೆ ಬಂದರು. ತಕ್ಷಣ   ದಾನಮ್ಮಳ ಹತ್ತಿರ ಬಂದು ಆ ಪಾತ್ರಧಾರಿ ಬೇರೆ ಯಾರೂ ಅಲ್ಲ ನಿನ್ನ ಗಂಡನೇ ಅಂತ ಹೇಳಿದಾಗ  ಇವಳ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು.  ಗಂಡ ಊರಿಗೆ ಬಂದರೂ ಮನೆಗೆ ಬರಲಿಲ್ಲ ಅಂತ ಯೋಚಿಸಿ ಕಣ್ಣಂಚಿನಲಿ ನೀರು ತಂದಳು. ಮಕ್ಕಳಿಗೂ ವಿಷಯ ಗೊತ್ತಾಗಿ ಅಪ್ಪ ಅಂತ ಮೊದಲೇ ಗೊತ್ತಿದ್ದರೆ ಆತನಿಗೆ ಹೋಗಲು ಬಿಡುತಿರಲಿಲ್ಲ ಅಂತ ಹೇಳಿ ರೋಧಿಸಿದರು. ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ ಅನ್ನುವ ಹಾಡು ಮುಂಜಾನೆ  ಆಲದ ಮರದ  ಸ್ಪೀಕರದಿಂದ  ಕೇಳಿ ಬಂದಾಗೊಮ್ಮೆ   ದಾನಮ್ಮಳ  ಮನಸ್ಸಿನಲ್ಲಿ ಸುಂಟರಗಾಳಿ ಎದ್ದು  ಗಂಡನ ನೆನಪು ಮರುಕಳಿಸುತಿತ್ತು! 

ಶರಣಗೌಡ ಬಿ ಪಾಟೀಲ ತಿಳಗೂಳ, ಕಲಬುರ್ಗಿ

8 Responses

 1. ಹೃದಯಸ್ಪರ್ಶಿ ಯಾದ ಕಥೆ ಧನ್ಯವಾದಗಳು ಸಾರ್

 2. ನಯನ ಬಜಕೂಡ್ಲು says:

  ಚೆನ್ನಾಗಿದೆ ಕಥೆ

 3. Padma Anand says:

  ಮನಕಲಕುವ ಸೊಗಸಾದ ಕಥೆ.

 4. ಶಂಕರಿ ಶರ್ಮ says:

  ಕಥೆ ಚೆನ್ನಾಗಿದೆ.
  ಎಲ್ಲದಕ್ಕೂ ಮೂಕ ಸಾಕ್ಷಿಯಾಗಿ ನಿಂತ ಆಲದಮರವು ಕಣ್ಣಿರಿಳಿಸಿತೇನೋ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: