ಬೆರಳುಗಳೆಂಬ ಬೆರಗಿನ ಸುತ್ತ

Share Button

ಮಾನವನ ವಿಕಾಸದಲ್ಲಿ ಬೆರಳುಗಳ ಬೆಳವಣಿಗೆ ಹಾಗೂ ಅವುಗಳ ಪಾತ್ರ ನಿಜಕ್ಕೂ ಬೆರಗು ಮೂಡಿಸುವಂಥಹದು. ಮಾನವನ ಕೈಯ ಹತ್ತು ಬೆರಳುಗಳ ಪಾತ್ರ. ನಿಜಜೀವನದಲ್ಲಿ ನಮಗರಿವಿಲ್ಲದಂತೆಯೇ ಅಪಾರ. ಗ್ರೀಕ್ ತತ್ವಗಳ ಪ್ರಕಾರ ಪಂಚಭೂತಗಳಾದ ಆಕಾಶಕ್ಕೆ ಮಧ್ಯದ ಬೆರಳು, ವಾಯುವಿಗೆ ತೋರುಬೆರಳು, ಅಗ್ನಿಗೆ ಹೆಬ್ಬೆರಳು, ಜಲಕ್ಕೆ ಕಿರುಬೆರಳು, ಭೂಮಿಗೆ ರಿಂಗ್ ಫಿಂಗರ್‌ಗಳನ್ನು ನಿಯೋಜಿಸಿದ್ದಾರೆ.

ಬೆರಳುಗಳ ಪಾತ್ರ ಇಂದು ನೆನ್ನೆಯದಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಇವುಗಳು ಒಂದಲ್ಲ ಒಂದು ಪಾತ್ರ ನಿರ್ವಹಿಸಿ ಇತಿಹಾಸವನ್ನೇ ಸೃಷ್ಟಿಸಿದೆ. ರಾಮಾಯಣದಲ್ಲಿ ದಶರಥ ಯುದ್ಧ ಮಾಡುವಾಗ ರಥದ ಚಕ್ರದ ಗಾಲಿಹೊರಬಂದಾಗ ಕೈಕೇಯಿ ತನ್ನ ಕಿರುಬೆರಳನ್ನು ಚಕ್ರಕ್ಕೆ ಸಿಕ್ಕಿಸಿ ರಥದ ಗಾಲಿ ಬೀಳದಂತೆ ಮಾಡಿದ್ದರಿಂದ ಯುದ್ಧ ಸುಸೂತ್ರವಾಗಿ ಕೊನೆಗೊಂಡು ದಶರಥ ಜಯಶಾಲಿಯಾದನು. ಆಗ ಆತ ಸಂತಸದಿಂದ ಕೈಕೇಯಿಗೆ ಕೊಟ್ಟ ಮೂರು ವರಗಳೇ ರಾಮಾಯಣದ ಬೆಳವಣಿಗೆಗೆ ನಾಂದಿ ಯಾಯಿತೆನ್ನಬಹುದು. ಇನ್ನು ಇಂದ್ರ ಕೋಪಗೊಂಡು ಮಳೆ ಸುರಿಸಿದಾಗ ಕೃಷ್ಣ ಗೋವರ್ಧನ ಪರ್ವತವನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಎಲ್ಲಾ ಪ್ರಜೆಗಳಿಗೆ ಹಾಗೂ ಪ್ರಾಣಿಪಕ್ಷಿಗಳಿಗೆ ಆಸರೆ ನೀಡಿದ್ದು ವಿಸ್ಮಯವೇ. ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಕಿರುಬೆರಳಲ್ಲಿಟ್ಟು ಪ್ರಯೋಗಿಸಿದ್ದು ಕಂಸವಧೆಯಲ್ಲಿ ಕಾಣಬಹುದು, ಅಂಬರೀಶನ ಭಕ್ತಿಗೆ ಮೆಚ್ಚಿ ನಾರದರ ಮೇಲೆ ಪ್ರಯೋಗಿಸಿದ ಚಕ್ರವೂ ಕಿರುಬೆರಳಿನಿಂದಲೇ. ಇನ್ನು ಮಹಾಭಾರತದಲ್ಲಿ ದ್ರೋಣರು ಅರ್ಜುನನ್ನು ಮೀರಿಸಿದ ಏಕಲವ್ಯನ ಬಳಿ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದ ಒಂದು ಸಂದರ್ಭ ನಿಜಕ್ಕೂ ರೋಚಕ ಹಾಗೂ ಖಂಡನೀಯವೆನಿಸುತ್ತದೆ.

ಇವಿಷ್ಟೂ ಪುರಾಣದ ಕಥೆಗಳಾದರೆ ಬೆರಳಿನ ಉಪಯೋಗ ಹಾಗೂ ಅವುಗಳ ಪಾತ್ರ ಇಂದಿನ ಆಧುನಿಕ ಯುಗದಲ್ಲಿ ವರ್ಣನಾತೀತ. ಮಾನವ ತನ್ನ ಪ್ರತಿರೂಪದ ರೋಬೋವನ್ನು ಆವಿಷ್ಕಾರ ಮಾಡಿದ್ದರೂ ಅವು ಮಾನವನ ಬೆರಳುಗಳ ಸರಿಸಮಾನಕ್ಕೆ ಎಂದೂ ಕಾರ್‍ಯನಿರ್ವಹಿಸಲು ಸರಿಸಾಟಿಯಾಗಲಾರದು. ಪ್ರತಿ ಬೆರಳಿಗೂ ಒಂದು ನಿಶ್ಚಿತ ಕಾರ್‍ಯದ ಒಂದು ಕರ್ತವ್ಯ ಇದೆ ಎಂದೇ ಹೇಳಬಹುದು. ಉದಾಹರಣೆಗೆ ನಮ್ಮ ಕಿವಿಯಲ್ಲಿ ಏನಾದರೂ ಕಿರಿಕಿರಿಯಾದರೆ ಕಿರುಬೆರಳೇ ಅದರನಿವಾರಣೆಗೆ ಬರಬೇಕು ಅಲ್ಲವೇ? ಹೆಬ್ಬೆರಳಿನ ಪಾತ್ರವಂತೂ ನಿಜಕ್ಕೂ ಆಶ್ಚರ್ಯಕರ. ಅದಿಲ್ಲದಿದ್ದರೆ ನಮ್ಮ ದಿನನಿತ್ಯದ ಕಾರ್‍ಯಗಳು ಅಸಾಧ್ಯವೆನಿಸುತ್ತದೆ. ನಮ್ಮ ಟಿ.ವಿ. ರಿಮೋಟ್, ಕಂಪ್ಯೂಟರ್, ಮೊಬೈಲ್ ಎಲ್ಲಾ ಪರಿಕರಗಳ ನಿಯಂತ್ರಣಕ್ಕೆ ಹೆಬ್ಬೆರಳು ಅವಶ್ಯಕ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ಲೈಕ್ ಚಿನ್ಹೆಯೂ ಹೆಬ್ಬೆಟ್ಟು. ಪೂಜೆ ಮಾಡುವಾಗ ಜಪಮಣಿ ಎಣಿಸುವುದೇ ಹೆಬ್ಬೆಟ್ಟು. ಬನ್ನಂಜೆ ಗೋವಿಂದಾಚಾರ್ಯರ ಪ್ರಕಾರ ಹೆಬ್ಬೆಟ್ಟು ಜೀವಾತ್ಮ. ಕಿರುಬೆರಳು, ಉಂಗುರದ ಬೆರಳು, ಮಧ್ಯದ ಬೆರಳು ಕ್ರಮವಾಗಿ ಅವಿದ್ಯಾ, ಕಾಮ ಮತ್ತು ಕರ್ಮ. ಆದ್ದರಿಂದ ತೋರುಬೆರಳೇ ಎಲ್ಲದಕ್ಕಿಂತ ಶ್ರೇಷ್ಠ ಎಂಬುದು ಅವರ ಅಭಿಮತ.

ನಮ್ಮ ಈಗಿನ ಸಂಸ್ಕೃತಿಯಲ್ಲಿ ಹೆಬ್ಬೆರಳೇ ಪ್ರಧಾನ. ನಮ್ಮ ಎಲ್ಲಾ ವಹಿವಾಟಿನ ಅಂದರೆ ಮನೆ, ಜಾಗ, ಇವುಗಳ ನೋಂದಣಿಗೆ ಸಬ್ ರಿಜಿಸ್ಟ್ರಾರ್‌ರವರ ಕಛೇರಿಯಲ್ಲಿ ಹೆಬ್ಬೆಟ್ಟಿಗೇ ಹೆಚ್ಚಿನ ಪ್ರಧಾನ್ಯತೆ. ಅನಕ್ಷರಸ್ಥರಿಗೆ ಎಡಗೈ ಹೆಬ್ಬೆಟ್ಟಿನ ಗುರುತೇ ಬ್ಯಾಂಕ್, ಕೋರ್ಟ್, ಸಬ್ ರಿಜಿಸ್ಟ್ರಾರ್ ಕಛೇರಿ, ಅಂಚೆಕಛೇರಿ ಎಲ್ಲ ಕಡೆ ಪ್ರಧಾನ್ಯ ಪಡೆದಿದೆ.

ತಿಲಕವಿಡಲು ಮಧ್ಯದ ಬೆರಳು ಶ್ರೇಷ್ಠ. ಬಲಗೈನ ಕಿರುಬೆರಳಿನ ಪಕ್ಕದ್ದು ಪವಿತ್ರ. ಪೂಜಾ ಕಾರ್ಯಗಳಲ್ಲಿ ದರ್ಭೆ ಅಥವಾ ಉಂಗುರಗಳನ್ನು ಆ ಬೆರಳಿಗೆ ಧರಿಸುತ್ತಾರೆ. ಲಕ್ಷ್ಮಿ ಆ ಬೆರಳಲ್ಲಿ ವಾಸಿಸುತ್ತಾಳೆ ಎಂಬ ನಂಬಿಕೆ ಹಿಂದೂಗಳದ್ದು. ಇನ್ನು ಎಡಗೈಯ ಕಿರುಬೆರಳಿನ ಪಕ್ಕದ ಬೆರಳು ‘ರಿಂಗ್ ಫಿಂಗರ್’ ಎಂದೇ ಪ್ರಸಿದ್ಧ ವಿವಾಹ ನಿಶ್ಚಯವಾದಾಗ ಹುಡುಗ-ಹುಡುಗಿ ಉಂಗುರಗಳನ್ನು ವಿನಿಮಯ ಮಾಡಿಕೊಂಡು ಆ ಬೆರಳಿಗೆ ಉಂಗುರಗಳನ್ನು ಧರಿಸುತ್ತಾರೆ. ಈ ಪದ್ಧತಿ ಜಗತ್ತಿನಾದ್ಯಂತ ಇರುವುದು ವಿಶೇಷ. ಈ ಬೆರಳು ‘ರಿಂಗ್ ಫಿಂಗರ್’ ಎಂದೇ ಪ್ರಸಿದ್ಧ. ಇದಕ್ಕೆ ಒಂದು ಕಾರಣವಿದೆಯಂತೆ. ಈ ಬೆರಳಿನಲ್ಲಿ ಒಂದು ನರವು ನೇರವಾಗಿ ಹೃದಯಕ್ಕೆ ಸಂಪರ್ಕ ಕಲ್ಪಿಸುವುದಂತೆ. ಹೀಗಾಗಿ ಈ ಬೆರಳಲ್ಲಿ ಉಂಗುರ ಧರಿಸಿದರೆ ಹೃದಯದೊಂದಿಗೆ ಪ್ರೀತಿ ಮೂಡುತ್ತದೆ ಎಂಬ ನಂಬಿಕೆ ಇದೆಯಂತೆ. ಅಚ್ಚರಿಯೆಂದರೆ ಹದಿನೇಳನೇ ಶತಮಾನದಿಂದ ವಿವಾಹ ನಿಶ್ಚಯವಾದಾಗ ಈ ಬೆರಳಿಗೆ ಉಂಗುರ ತೊಡುವುದು ಇಂದಿನವರೆಗೂ ನಡೆದಿದೆ. ಇದರಲ್ಲಿ ಪ್ರಪಂಚದಾದ್ಯಂತ ಯಾವ ಭಿನ್ನಮತವೂ ಇಲ್ಲದಿರುವುದು ವಿಶೇಷ.

ಇನ್ನು ಬಲಗೈಯ ಉಳಿದ ಬೆರಳುಗಳನ್ನು ಮುಷ್ಠಿಕಟ್ಟಿ ಮಧ್ಯದ ಬೆರಳೊಂದನ್ನೇ ಎತ್ತಿ ತೋರಿಸಿದರೆ ಅದು ಅಶ್ಲೀಲ ಸೂಚಕ. ಜಗಳವಾದಾಗ ಮಾತ್ರ ಎದುರಾಳಿಯನ್ನು ರೊಚ್ಚಿಗೆಬ್ಬಿಸಲು ಈ ಬೆರಳನ್ನು ಹಾಗೆ ಬಳಸಬಹುದು. ಇಟಾಲಿಯನ್ ಕಲಾವಿದ ಮಾರಿಜಿಯೋ ಕ್ಯಾಟಲೆನ್ ಎಂಬಾತ ಹನ್ನೊಂದು ಮೀಟರ್ ಅಳತೆಯ ಮಧ್ಯದ ಬೆರಳನ್ನು ಅಮೃತ ಶಿಲೆಯಲ್ಲಿ ಕಡೆದು ಸ್ಥಾಪಿಸಿ ಇದು ಇಂದಿಗೂ ಇಟಲಿಯ ಮಿಲಾನ್ ಸ್ಟಾಕ್ ಎಕ್ಸ್‌ಛೇಂಜ್‌ನ ಮುಂಭಾಗದಲ್ಲಿದೆ. ಈ ತರಹದ ಬೆರಳಿನ ಪ್ರದರ್ಶನ ಮಾಡಿದರೆ ಕ್ರಿಕೆಟ್ ಹಾಗೂ ಫುಟ್‌ಬಾಲ್ ಕ್ರೀಡೆಯ ಅಂಪೈರ್‌ಗಳು ಆಟಗಾರರನ್ನು ಮೈದಾನದಿಂದ ಹೊರಗೆ ಕಳುಹಿಸುವ ಹಕ್ಕಿದೆ.

ಕೈ ಬೆರಳುಗಳು ಎಷ್ಟು ಪ್ರಸಿದ್ಧ ಎಂದರೆ, ಜ್ಯೋತಿಷಿಗಳು ಕೈಬೆರಳುಗಳನ್ನು ನೋಡಿ ಹಸ್ತಸಾಮುದ್ರಿಕವನ್ನು ಚೆನ್ನಾಗಿ ಬಲ್ಲವರು ವ್ಯಕ್ತಿಯ ಪೂರ ಚರಿತ್ರೆಯನ್ನು ಹೇಳಬಲ್ಲರು. ಎದುರಾಡಬೇಡ ಎಂದು ಕೈಬೆರಳು ತೋರಿಸಿ ಹೇಳುವುದು ಸಾಮಾನ್ಯ. ಪ್ರೈಮರಿ ಶಾಲೆಯ ಮಾಸ್ಟರುಗಳು ಮಧ್ಯದ ಬೆರಳಿನ ಪಕ್ಕದ ಬೆರಳನ್ನು ತುಟಿಯ ಮೇಲಿಟ್ಟರೆ ಮಕ್ಕಳು ಗಪ್‌ಚುಪ್. ಇನ್ನು ಪ್ರೈಮರಿ ಶಾಲೆಗಳಲ್ಲಿ ಮಕ್ಕಳು ಕಿರುಬೆರಳನ್ನು ಎತ್ತಿ ತೋರಿಸಿದರೆ ಮಾಸ್ತರು ತಕ್ಷಣ ಜಲಭಾದೆಗೆ ಕಳಿಸುತ್ತಾರೆ. ಬಾಯಿಯಲ್ಲಿ ಹೇಳುವ ಅಗತ್ಯವಿಲ್ಲ. ಮತಗಟ್ಟೆಯಲ್ಲಿ ಹೆಬ್ಬೆಟ್ಟಿನ ಪಕ್ಕದ ಬೆರಳಿಗೆ ಮಾತ್ರ ಗುರುತು ಹಾಕಲು ಪ್ರಾಧಾನ್ಯ. ಇದರಿಂದ ಮತ ಚಲಾಯಿಸಿದ ಬಗ್ಗೆ ಒಂದು ದೃಢೀಕರಣ ಲಭ್ಯ.

ಬಡಗಿಗಳು ಮರಮಟ್ಟುಗಳ ಅಳತೆಗಳನ್ನು ಇವತ್ತಿಗೂ ಹೆಬ್ಬೆಟ್ಟನ್ನೇ ಆಧಾರವಾಗಿಟ್ಟುಕೊಂಡು ಮಾಡುವುದು ಸಾಮಾನ್ಯ. ಶತಮಾನಗಳಿಂದ ಪ್ರಾರಂಭವಾದ ಈ ಅಳತೆಯ ವಿಧಾನ ಇಂದಿಗೂ ಮುಂದುವರೆಯುತ್ತಿರುವುದು ಆಶ್ಚರ್ಯಕರ. ಅದರಿಂದಲೇ ಯೂರೋಪಿನಲ್ಲಿ ‘ರೂಲ್ ಆಫ್ ಥಂಬ್’ ಎಂಬ ನುಡಿಗಟ್ಟು ಬಂದಿದೆ ಎಂಬ ಮಾತಿದೆ. ಹತ್ತೊಂಭತ್ತಲೇ ಶತಮಾನದಲ್ಲಿ ಯೂರೋಪ್‌ನಲ್ಲಿ ಒಂದು ವಿಚಿತ್ರವಾದ ಕಾನೂನು ಜಾರಿಯಲ್ಲಿತ್ತಂತೆ. ಅದರಂತೆ ಗಂಡನಾದವನು ಹೆಂಡತಿಯನ್ನು ಹೆಬ್ಬೆರಳಿನ ಅಂಗುಷ್ಟಕ್ಕಿಂತ ದಪ್ಪನಾದ ಕೋಲಿನಿಂದ ಹೊಡೆಯುವಂತಿರಲಿಲ್ಲ. ಅಕಸ್ಮಾತ್ ತಪ್ಪಿದರೆ ‘ರೂಲ್ ಆಫ್ ಥಂಬ್’ನ ಅನ್ವಯ ಶಿಕ್ಷೆಗೊಳಗಾಗುತ್ತಿದ್ದನಂತೆ. ಪ್ರಸ್ತುತ ನಮ್ಮ ಹಿಂದೂ ಪದ್ಧತಿಯಲ್ಲೂ ಊಟ ಮುಗಿದ ಬಳಿಕ ಎಡಗೈ ಹೆಬ್ಬೆಟ್ಟನ್ನು ನೆಲಕ್ಕೆ ಒತ್ತಿ ಅನ್ನ ಕೊಟ್ಟ ದೇವರಿಗೆ ಕೃತಜ್ಞತೆ ಸಲ್ಲಿಸುವ ಪರಿಪಾಠವಿದೆ. ಸಂಧ್ಯಾವಂದನೆ ಸಮಯದಲ್ಲಿ ಹೆಬ್ಬೆರಳಿನ ಪಾತ್ರ ಪ್ರಮುಖವಾದದ್ದು. ಪಾದರಕ್ಷೆಗಳಿಗೆ ಹಿಡಿತ ಸಾಧಿಸಲು ಸುರಳಿಯಾಕಾರದ ಉಂಗುರಗಳು ಹೆಬ್ಬೆಟ್ಟಿನ ಗಾತ್ರಕ್ಕೆ ಹೊಂದುವಂಥಹುದೇ!
ಮುದ್ರಾ ಚಿಕಿತ್ಸೆಯಲ್ಲಿ ಎಲ್ಲಾ ಹತ್ತು ಬೆರಳುಗಳ ಪಾತ್ರ ಅದ್ವಿತೀಯ. ಈ ಚಿಕಿತ್ಸಾ ಕ್ರಮ ಈಗ ಬಹಳ ಜನಪ್ರಿಯವಾಗುತ್ತಿದೆ. ಹೀಗೆ ಬೆರಳುಗಳ ಪಾತ್ರ ನಿಜಕ್ಕೂ ವಿಸ್ಮಯಕರ ಹಾಗೂ ಉಪಯೋಗಕರ. ಇವುಗಳ ಬಗ್ಗೆ ತಿರಸ್ಕಾರ ಬೇಡ, ಚೆನ್ನಾಗಿ ನೋಡಿಕೊಳ್ಳೋಣ, ಪ್ರೀತಿಸೋಣ ನೀವೇನಂತೀರಿ?

ಕೆ. ರಮೇಶ್

15 Responses

 1. ನಯನ ಬಜಕೂಡ್ಲು says:

  ಮಾಹಿತಿಪೂರ್ಣ ಲೇಖನ.

 2. ಉತ್ತಮ ಮಾಹಿತಿಯನ್ನು ಉಳ್ಳ ಲೇಖನ ಲವಲವಿಕೆಯಿಂದ ಓದುಸಿಕೊಂಡು ಹೋಯಿತು..ಸಾರ್..ಧನ್ಯವಾದಗಳು

 3. Hema Mala says:

  ಅದೆಷ್ಟು ಮಾಹಿತಿಯನ್ನು ಸೊಗಸಾಗಿ ಬರೆದಿದ್ದೀರಿ..ಬೆರಗು ಹುಟ್ಟಿಸುವ ಬರಹ.

 4. ಶಂಕರಿ ಶರ್ಮ says:

  ಬೆರಳುಗಳ ಬಗ್ಗೆ ಬೆರಗುಗೊಳಿಸುವ ಮಾಹಿತಿಗಳನ್ನು ಹಂಚಿಕೊಂಡ ಲೇಖನ ಚೆನ್ನಾಗಿದೆ. ಪ್ರತಿಯೊಬ್ಬರ ಬೆರಳುಗಳೂ ಒಬ್ಬರಂತೆ ಇನ್ನೊಬ್ಬರದು ಇರುವುದಿಲ್ಲ. ಅವುಗಳಲ್ಲಿರುವ ರೇಖೆಗಳಲ್ಲಿ ಶಂಖ, ಚಕ್ರಗಳನ್ನು ಗುರುತಿಸಿ ಚಿಕ್ಕಂದಿನಲ್ಲಿ ಖುಷಿಪಡುತ್ತಿದ್ದ ನೆನಪಾಯಿತು.

 5. MANJURAJ H N says:

  ನಿಜ ಸರ್‌, ಬೆರಳುಗಳೇ ಬೆರಗುಗಳು. ಇದನ್ನು ಕುರಿತೂ ನೀವು ಬರೆಹ ಮಾಡಿದ್ದೀರೆಂದರೆ ನಿಜಕೂ ಅಚ್ಚರಿ.

  ಖುಷಿಯಾಯಿತು. ಧನ್ಯವಾದಗಳು

 6. Padma Anand says:

  ಬೆರಳುಗಳ ಮಹತ್ವವನ್ನು ಸವಿಸ್ತಾರವಾಗಿ ತಿಳಿಸುವ ಚಂದದ ಲೇಖನ.

 7. Padmini Hegde says:

  ಖಂಡಿತವಾಗಿ ನಮ್ಮ ಬೆರಳುಗಳನ್ನು ಜೋಪಾನ ಮಾಡಿಕೊಳ್ಳಲೇಬೇಕು! ಇಲ್ಲದಿದ್ದರೆ ಲೈಕ್‌ ಚಿಹ್ನೆಯನ್ನೂ ಒತ್ತಲು ಆಗುವುದಿಲ್ಲ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: