“ಜಾತ್ರೆ”ಯ ವೈಭವದ ಸೊಗಸು…!.

Share Button


ಈ “ಜಾತ್ರೆ” ಎಂಬ ಪದ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮಿಂಚಿನ ಸಂಚಾರವಾಗುತ್ತದೆ!. ಅದರಲ್ಲೂ “ಜನ ಜಾತ್ರೆ” ಎಂದರೆ ಏನೋ ಒಂದು ರೀತಿಯಲ್ಲಿ ನವೋಲ್ಲಾಸ ಮೂಡಿಸುತ್ತದೆ. ‘ಅವರವರ ಭಾವಕ್ಕೆ ಅವರವರ ಭಕುತಿಗೆ…..’ ಎನ್ನುವಂತೆ ಎಲ್ಲಾ ವರ್ಗದ ಜನರು ಜಾತ್ರೆಯಲ್ಲಿ ಸಂಗಮವಾಗುತ್ತಾರೆ! “ಜಾತ್ರೆ” ಬಗ್ಗೆ ಬರೆಯುತ್ತಾ ಹೋದರೆ ಅದು ಒಂದು ರೀತಿಯಲ್ಲಿ ಮುಗಿಯದ ಪಯಣ. ನೆನಪುಗಳ ಖಜಾನೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜಾತ್ರೆ ಸವಿ ನೆನಪುಗಳ ಸುರಳಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಿಚ್ಚಿಡುತ್ತದೆ!.

 ಜಾತ್ರೆ ಹಲವರ ಪಾಲಿಗೆ ಒಂದು ರೀತಿಯಲ್ಲಿ ಬದುಕನ್ನು ಕಟ್ಟಿಕೊಡುತ್ತದೆ. ಭಾವನಾತ್ಮಕ ಸಂಬಂಧವನ್ನೇರ್ಪಡಿಸುತ್ತದೆ. ಈ ಜಾತ್ರೆ ಅಬಾಲರುದ್ದರಾದಿಯಾಗಿ ಎಲ್ಲರ ಮೈಮನ ಪುಳಕಿತ ಗೊಳಿಸುತ್ತದೆ. ಒಂದು ರೀತಿಯಲ್ಲಿ ವಿಶಿಷ್ಠ ಅನುಭವ ನೀಡುತ್ತದೆ. ಜಾತ್ರೆಯ ವೈಭವದ ಸೊಬಗು ವರ್ಣಿಸಲಸದಲ ಅನುಭವ ನೀಡುತ್ತದೆ. ಇಲ್ಲಿಗೆ  ಬಡವರಿಂದ ಶ್ರೀಮಂತರವರೆಗೂ ಬರುತ್ತಾರೆ. ಒಂದು ರೀತಿಯಲ್ಲಿ ಒಟ್ಟು ಕುಟುಂಬದ ಚಿತ್ರಣವನ್ನು ಮೂಡಿಸುತ್ತದೆ. ಬಡವರ ಪಾಲಿಗೆ ಒಂದು ರೀತಿಯಲ್ಲಿ….. ಶ್ರೀಮಂತರ
ಪಾಲಿಗೆ ಒಂದು ರೀತಿಯಲ್ಲಿ….. ಅನುಭವ, ನೆನಪು ನೀಡುತ್ತದೆ. ಈ ಜಾತ್ರೆ ಎಂದೊಡನೆ ನಾ ಮೊದಲೇ ಹೇಳಿದಂತೆ ನಿಮ್ಮ ಬಾಲ್ಯದ, ಅಥವಾ ನೀವು ಯಾವುದಾದರೂ ಜಾತ್ರೆಗಳಲ್ಲಿ ಭಾಗಿಯಾದ ಚಿತ್ರಣವನ್ನ ನೆನಪು ಮಾಡಿಕೊಳ್ಳಿ. ಇದರ ಜೊತೆ ನನ್ನ ಜಾತ್ರೆಯ ನೆನಪುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.

ಇದು ಜಾತ್ರೆಗೆ ಸಕಾಲ ಹಲವು ಕಡೆ ಜಾತ್ರೆಗಳು ಮುಗಿದಿವೆ. ಕೆಲವು ಜಾತ್ರೆಗಳು ಪ್ರಾರಂಭವಾಗುವುದಕ್ಕೆ ಬಾಕಿ ಇವೆ. ನಗರ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಿಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮದು ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು. ಈ ಭಾಗದಲ್ಲಿ ಪ್ರತಿ ವರ್ಷ ಮೂರು ಜನಪ್ರಿಯ ಜಾತ್ರೆಗಳು ನಡೆಯುತ್ತವೆ. ಅವುಗಳಲ್ಲಿ ಅಂತರಸಂತೆಯ ಜಾತ್ರೆ….. ತುಂಬಸೋಗೆಯ ಜಾತ್ರೆ…. ಭೀಮನ ಕೊಲ್ಲಿ ಜಾತ್ರೆ……. ಇನ್ನುಳಿದಂತೆ ಆಯಾ
ಗ್ರಾಮಗಳಲ್ಲಿ….. ಗ್ರಾಮ ದೇವತೆಗೆ ತಕ್ಕಂತೆ ಒಂದು ದಿನ ಜಾತ್ರೆಗಳು ಕೂಡ ನಡೆಯುತ್ತವೆ. ಅಲ್ಲದೆ ಜಿಲ್ಲಾಮಟ್ಟದಲ್ಲಿ…. ರಾಜ್ಯಮಟ್ಟದಲ್ಲಿ…. ಪ್ರಸಿದ್ಧಿ ಪಡೆದಿರುವ ಜಾತ್ರೆಗಳು ಕೂಡ ಜನರ ಕಣ್ಮನ ಸೆಳೆಯುತ್ತವೆ. ಸುತ್ತೂರು ಜಾತ್ರೆ, ನಂಜನಗೂಡಿನ ನಂಜುಂಡೇಶ್ವರನ ಜಾತ್ರೆ, ಮುಡುಕುತೊರೆ ಜಾತ್ರೆ, ಮಲೆ ಮಹದೇಶ್ವರ ಸ್ವಾಮಿ  ಜಾತ್ರೆ,  ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ, ಕಪ್ಪಡಿ ರಾಚಪ್ಪಾಜಿ ಜಾತ್ರೆ,  ಚುಂಚನಕಟ್ಟೆ ದನಗಳ ಜಾತ್ರೆ, ಹೀಗೆ ಜಾತ್ರೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರಾತಿನಿಧಿಕವಾಗಿ ಇಲ್ಲಿ ಕೆಲವು ಜಾತ್ರೆಗಳನ್ನು ಮಾತ್ರ ಪ್ರಸ್ತಾಪ ಮಾಡಿದ್ದೇನೆ.ಇನ್ನು ನನ್ನ ಬಾಲ್ಯದಿಂದ ಇವತ್ತಿನವರೆಗೂ ಕೂಡ ವರ್ಷದಿಂದ ವರ್ಷಕ್ಕೆ ಕಣ್ಮನ ಸೆಳೆಯುತ್ತಿರುವ ಮೂರು ಜಾತ್ರೆಗಳ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಅದರಲ್ಲೂ ತುಂಬಸೋಗೆ ಮತ್ತು ಅಂತರಸಂತೆ ಜಾತ್ರೆ ಮನದಲ್ಲಿ  ಅಚ್ಚಳಿಯದ ನೆನಪುಗಳನ್ನು ಕಣ್ಮುಂದೆ ತರುತ್ತದೆ.

ಜಾತ್ರೆ ಶುರುವಾಗಲು ಒಂದು ತಿಂಗಳ ಮುಂಚೆಯೇ ಊರಿನ ಪ್ರಮುಖರೆಲ್ಲ ಸೇರಿ, ಜೊತೆಗೆ ಅಕ್ಕಪಕ್ಕದ ಗ್ರಾಮಗಳ ಮುಖ್ಯಸ್ಥರು ಕೂಡ ಸೇರಿ ಯಾವ ರೀತಿಯಲ್ಲಿ ಜಾತ್ರೆ ಈ ಬಾರಿ ಮಾಡಬೇಕು. ಜೊತೆಗೆ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಂಬುದರ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ. ಜೊತೆಗೆ ದಿನಾಂಕವನ್ನು ಕೂಡ ನಿಗಧಿಪಡಿಸುತ್ತಾರೆ. ದಿನಾಂಕ ನಿಗಧಿಯಾದಾಗಿನಿಂದ ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಊರ ಸಿದ್ಧತೆ  ನಡೆಯುತ್ತದೆ. ಜಾತ್ರೆ ನಡೆಯುವ ದೇವಸ್ಥಾನದ ಸುತ್ತಮುತ್ತ ಮೊದಲು ಶುಚಿಗೊಳಿಸುತ್ತಾರೆ.

ಒಂದು ತಂಡ ಊರಿನ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ನಗದು, ಹಾಗೂ ಅಕ್ಕಿ ಬೇಳೆ ಎಲ್ಲವನ್ನು ಕೂಡ ಸಂಗ್ರಹಿಸುತ್ತಾರೆ. ಯಾರನ್ನು ಬಲವಂತ ಪಡಿಸುವುದಿಲ್ಲ. ತಮ್ಮ ಶಕ್ತ್ಯಾನುಸಾರ ದಾನ ಮಾಡಬಹುದು. ಜೊತೆಗೆ ಒಂದು ಲಿಸ್ಟ್ ಮಾಡಿಕೊಂಡು ಎಲ್ಲರಿಗೂ ಕೂಡ ಜಾತ್ರೆಯ ಆಮಂತ್ರಣವನ್ನು ಕಳಿಸುತ್ತಾರೆ ಮತ್ತು ಹೇಳುತ್ತಾರೆ.ನಮಗಂತೂ ಜಾತ್ರೆಯ ಆಮಂತ್ರಣ ತಲುಪಿದ ಕೂಡಲೇ ಎಷ್ಟೊತ್ತಿಗೆ ಜಾತ್ರಾ ಮಾಳಕ್ಕೆ (ಜಾತ್ರಾ ನಡೆಯುವ ಸ್ಥಳ) ಹೋಗುತ್ತೇವೆ ಎಂಬ ಕುತೂಹಲ ಮೂಡುತ್ತದೆ.

ಜಾತ್ರೆ ಪ್ರತೀ ವರ್ಷ ಸೋಮವಾರ, ಮಂಗಳವಾರ, ಬುಧವಾರ ನಡೆಯುತ್ತದೆ. ಒಟ್ಟು ಐದು ದಿನ ಶಾಲೆಗೆ ಚಕ್ಕರ್ ಹೊಡೆದು ಜಾತ್ರಾ ನೆಪದಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದೆವು. ಅಲ್ಲಿ ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ!. ಆನೆ ನಡೆದಿದ್ದೇ ದಾರಿ! ಎನ್ನುವಂತೆ ನಮ್ಮ ಚೇಷ್ಟೆಗಳು ಪ್ರಾರಂಭವಾಗುತ್ತಿದ್ದವು. ಸದ್ದು ಗದ್ದಲವಿಲ್ಲದೇ ಸೊರಗಿದ್ದ ಅಜ್ಜಿ ಮನೆ ಗಲಾಟೆಯಿಂದ…. ಹೆಚ್ಚು ಜನರಿಂದ ತುಂಬಿ ತುಳುಕುತ್ತಿತ್ತು. ಇದೇ ರೀತಿ ಎಲ್ಲರೂ ಕೂಡ ತಮ್ಮ ಊರಿನಿಂದ ಹೊರಗಡೆ ಮದುವೆ ಮಾಡಿದ ಗ್ರಾಮಗಳಿಗೆ ತೆರಳಿ ಜಾತ್ರೆಗೆ ಬನ್ನಿ ಎಂದು ಕರೆಯುತ್ತಿದ್ದರು.  ಇದರಿಂದಾಗಿ…….ಅಳಿಯಂದಿರು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಕೂಡ ಜಾತ್ರೆಗೆ ಒಟ್ಟಾಗಿಬರುತ್ತಿದ್ದರು.

ಭಾನುವಾರ ರಾತ್ರಿ ನಮಗೆ ನಿದ್ದೆಯೇ ಬರುತ್ತಿರಲಿಲ್ಲ ಏಕೆಂದರೆ ಸೋಮವಾರ ಜಾತ್ರೆಯ ಪ್ರಾರಂಭದ ದಿನ. ನಾವು ಬೆಳಿಗ್ಗೆ ಬೇಗ ಎದ್ದು ನಮ್ಮ ದೈನಂದಿನ ಕೆಲಸಗಳನ್ನು ಮಾಡಿ ಮುಗಿಸಿ, ಮನೆಯವರಿಗೆ ಯಾರಿಗೂ ಗೊತ್ತಾಗದಂತೆ ಜಾತ್ರೆಯ ಸುತ್ತ ಒಂದು ರೌಂಡ್ ಹೊಡೆದು ಬರುತ್ತಿದ್ದೆವು. ನಮ್ಮ ಕುಟುಂಬದವರೊಂದಿಗೆ ಜಾತ್ರಾ ಮಾಳಕ್ಕೆ ಹೋದಾಗ ಏನು ಗೊತ್ತಾಗದಂತೆ ವರ್ತಿಸುತ್ತಿದ್ದೆವು! ಜಾತ್ರೆಯ ಮಾಳದ ತುಂಬಾ ಎಲ್ಲಿ ನೋಡಿದರಲ್ಲಿ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಅಲ್ಲಿ ಒಂದು ಕಡೆ ಸ್ವೀಟು ಕಾರ ಬತ್ತಾಸು, ಮೈಸೂರು ಪಾಕು, ಒಂದೇ ಎರಡೇ?  ಅಂಗಡಿಗಳು…. ಮತ್ತೊಂದು ಕಡೆ ಆಟದ ಸಾಮಾನುಗಳು….. ಅಲ್ಲದೆ ಅಡಿಯಿಂದ ಮುಡಿವರೆಗೆ ಎನ್ನುವಂತೆ ಎಲ್ಲಾ ಪದಾರ್ಥಗಳು ಸಿಗುವ ತಾಣಗಳು. ಎತ್ತರದ ಸ್ಥಳದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿರುತ್ತಿತ್ತು. ಅಲ್ಲಿ ಸಂಜೆಯ ವೇಳೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು…… ಜೊತೆಗೆ ಚಲನಚಿತ್ರ ಗೀತೆಗಳು ರಸಸಂಜೆ ಕಾರ್ಯಕ್ರಮಗಳು……ನಾಟಕ ಕಾರ್ಯಕ್ರಮಗಳು….. ಹಾಸ್ಯ ಕಾರ್ಯಕ್ರಮಗಳು…… ಜಾನಪದ ಕಲೆಯ ಪ್ರದರ್ಶನ…… ಹೀಗೆ ವೈವಿಧ್ಯಮಯವಾಗಿ ಮೂರು ದಿನಗಳ ರಾತ್ರಿಯೂ ಕೂಡ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ನಾವು ಬೆಳಿಗ್ಗೆಯಿಂದ ಸಂಜೆಯವರೆಗೂ ಜಾತ್ರೆಯ ಸುತ್ತಮುತ್ತ ಅಡ್ಡಾಡಿ ನಿತ್ರಾಣಗೊಂಡಿದ್ದರೂ ಕೂಡ ನಮಗೆ ಎಂದು ಕೂಡ ಉತ್ಸಾಹ ಕುಂದುತ್ತಿರಲಿಲ್ಲ. ಸ್ವಲ್ಪ ರೆಸ್ಟ್ ಮಾಡಿ ಮತ್ತೆ ಸಂಜೆ ಮನೆಯವರ ಜೊತೆ ಜಾತ್ರಾ ಮಾಳಕ್ಕೆ ಹೋಗಲು ತಯಾರಾಗುತ್ತಿದ್ದೆವು. ಅಲ್ಲಿ ಮೊದಲೇ ಜಾಗ ಹಿಡಿದುಕೊಂಡಿದ್ದರಿಂದ ನಮಗೆ ಸ್ಥಳದ ಅಭಾವ ಆಗುತ್ತಿರಲಿಲ್ಲ. ಒಟ್ಟಾಗಿ ಕುಳಿತು ರಾತ್ರಿ ಸುಮಾರು 11ರವರೆಗೆ ಕೂಡ ನಿದ್ದೆ ಮಂಪರಿನಲ್ಲೇ ಕಾರ್ಯಕ್ರಮಗಳನ್ನು ಸವಿಯುತ್ತಿದ್ದೆವು. ಜಾತ್ರೆಗೆ ದೂರದ ಊರಿನಿಂದ ಒಂದು ದಿನ ಮುಂಚೆಯೇ ನಡೆದುಕೊಂಡೆ ಬರುತ್ತಿದ್ದರು. ಬಂದು ಜಾತ್ರಾಮಾಳದಲ್ಲಿ ಮೂರು ದಿನವೂ ಕಾಲ ಕಳೆಯುತ್ತಿದ್ದರು. ಅಲ್ಲೇ ಪ್ರಸಾದ ವಿತರಣೆಯಾಗುತ್ತಿತ್ತು.

ನಮ್ಮ ಅಜ್ಜಿ ಮನೆಯವರದು ಒಟ್ಟು ಕುಟುಂಬ ಅದರಿಂದಾಗಿ ಮನೆಯ ತುಂಬೆಲ್ಲ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು. ಜೊತೆಗೆ ಇನ್ನಿತರ ಸಂಬಂಧಿಕರು ಎಲ್ಲರೂ ಕೂಡ ಒಟ್ಟಾಗಿ ಸೇರುತ್ತಿದ್ದರಿಂದ ಒಂದು ರೀತಿಯಲ್ಲಿ ದೊಡ್ಡ ಹಬ್ಬದ ವಾತಾವರಣ ಮನೆಯಲ್ಲಿ ತುಂಬಿ ತುಳುಕುತ್ತಿತ್ತು. ಮನೆಯು ಕೂಡ ಚಿಕ್ಕದಾಗಿದ್ದರೂ ಕೂಡ ಅಷ್ಟು ಜನ ಸೇರಿದರೂ ಕೂಡ ಅಲ್ಲಿ ಸ್ಥಳದ ಅಭಾವ ಆಗುತ್ತಿರಲಿಲ್ಲ. ಇದೊಂದು ಅಚ್ಚರಿ!.

ನಮ್ಮ ಮನೆಗೆ ಬಂದ ನೆಂಟರೆಲ್ಲ 10 ರಿಂದ 20 ರ ನೋಟುಗಳನ್ನು ಕೈಗೆ ಕೊಡುತ್ತಿದ್ದರು. ನಾವು ಅವೆಲ್ಲವನ್ನು ಒಂದೆಡೆ ಎಣಿಸಿ ಇಟ್ಟುಕೊಂಡು ಜೋಪಾನವಾಗಿ ಜಾತ್ರಾಮಳದಲ್ಲಿ ಸಿಗುತ್ತಿದ್ದ ಸಿಹಿ ತಿಂಡಿಗಳು…. ಕರಿದ ತಿಂಡಿಗಳು….. ಜ್ಯೂಸ್….. ಐಸ್ ಕ್ರೀಮ್…. ಎಲ್ಲವನ್ನು ತಿನ್ನುತ್ತಿದ್ದೆವು.  ಅದರಲ್ಲೂ ನಮಗೆ ಕಡಲೆಪುರಿ ಮತ್ತು ಖಾರ. ಜೊತೆಗೆ ಅಲ್ಲೇ ಸಿಗುತ್ತಿದ್ದ ಟೀಯನ್ನು ಮನಸೋ ಇಚ್ಛೆ ಸೇವಿಸುತ್ತಿದ್ದೆವು.

ಮೂರನೆಯ ದಿನ ತೇರು ಎಳೆಯುವ ದಿನವಾಗಿರುತ್ತಿತ್ತು. ಅವತ್ತು ಎರಡು ದಿನಕ್ಕಿಂತಲೂ ಹೆಚ್ಚು ಜನ ಅಕ್ಕಪಕ್ಕದಿಂದ ಬಂದು ಸೇರುತ್ತಿದ್ದರು. ವರ್ಣರಂಜಿತವಾಗಿ ನವವಧುವಿನಂತೆ ಸಿಂಗಾರಗೊಂಡ ಬೃಹತ್ ದೊಡ್ಡದಾದ ತೇರನ್ನು ಎಳೆಯುವುದೇ ಒಂದು ರೀತಿಯಲ್ಲಿ ರೋಮಾಂಚನ ಅನುಭವ ನೀಡುತ್ತಿತ್ತು.ಹೊಸದಾಗಿ ಮದುವೆಯಾಗಿದ್ದ ಹುಡುಗ- ಹುಡುಗಿಯರು ಬಂದು ಆ ತೇರಿಗೆ ಬಾಳೆಹಣ್ಣು ಜವನ ಎಸೆಯುತಿದ್ದರು. ಮಹಾದೇಶ್ವರ ಸ್ವಾಮಿಯ ದೇವಸ್ಥಾನ ಸುತ್ತ ಮೂರು ಬಾರಿ ರಥ ಎಳೆಯುತ್ತಿದ್ದಂತೆ ಎಲ್ಲರಲ್ಲೂ ಕೂಡ ಭಕ್ತಿ ಭಾವ ಮೂಡಿಸುವ  ನುಡಿಗಳು ಮೊಳುಗುತ್ತಿದ್ದವು. ಕಡಿಮೆ ಅವಧಿ…… ಕಡಿಮೆ ದುಡ್ಡು…… ಅತಿ ಹೆಚ್ಚಿನ ಮನರಂಜನೆ…..
ಜಾತ್ರೆಯಿಂದ ಸಿಗುತ್ತಿತ್ತು. ಈಗ ನಡೆಯುವ ಜಾತ್ರೆಗಳು ಅದ್ದೂರಿಯಾಗಿ ನಡೆದರೂ ಕೂಡ ಏನೋ ಒಂದು ರೀತಿಯಲ್ಲಿ ಲವಲವಿಕೆ ಮೂಡುವುದಿಲ್ಲ.  ಜೊತೆಗೆ ಜಾತ್ರೆಗೆ ಹೋಗುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಜಾತ್ರೆಗೆ ಹೋಗಲು ಸಕಲ ಸೌಕರ್ಯಗಳು ಇದ್ದರೂ ಕೂಡ ಜನರಲ್ಲಿ ಭಕ್ತಿ-ಭಾವದ ಜೊತೆಗೆ, ಆಸಕ್ತಿಯು ಕೂಡ ಕಡಿಮೆಯಾಗುತ್ತಿದೆ.

ಇನ್ನೊಂದು ಅಂಶವನ್ನು ಮರೆತಿದ್ದೆ……. ಆ ಕಾಲದ ಜಾತ್ರೆಗಳು ವಧು-ವರರ ಕೇಂದ್ರಗಳು ಕೂಡ ಆಗಿದ್ದವು!. ಏಕೆಂದರೆ ಹೊಸದಾಗಿ ಹುಡುಗ ಅಥವಾ ಹುಡುಗಿಗೆ ಮದುವೆ ಮಾಡಲು ಮನೆ ಹಿರಿಯರು ಅಲ್ಲಿ ಸೇರುತ್ತಿದ್ದರು. ನಮ್ಮ ಸಂಬಂಧಿಕರ ಹೆಣ್ಣುಗಳು ಆಗಿರಬಹುದು ಅಥವಾ ಗಂಡುಗಳಾಗಿರಬಹುದು ಅವರನ್ನೆಲ್ಲ ದೂರದಿಂದಲೇ ನೋಡಿ ಹುಡುಗ ಹುಡುಗಿ ಹೇಗೆ ಇದ್ದಾರೆ….ಅವರ ಕುಟುಂಬದವರು ಹೇಗಿದ್ದಾರೆ…. ಎಂಬುದನ್ನು ದೂರದಿಂದಲೇ ನೋಡಿ ಅಳೆಯುತ್ತಿದ್ದರು.

ಈ ಜಾತ್ರೆ ಎನ್ನುವುದು ಒಬ್ಬೊಬ್ಬರಿಗೂ ಒಂದೊಂದು ಈ ರೀತಿಯಲ್ಲಿ ಖುಷಿ ಕೊಡುತ್ತಿತ್ತು. ಈಗ ಕಾಲ ಬದಲಾದಂತೆ ಜಾತ್ರೆಗಳು ಕೂಡ ಬದಲಾಗಿವೆ. ಈಗ ಭಾವನಾತ್ಮಕ ಜಾತ್ರೆಯಾಗದೆ ಒಂದು ರೀತಿಯಲ್ಲಿ ಯಾಂತ್ರಿಕ ಜಾತ್ರೆಯಾಗಿದೆ. ದುಂದು ವೆಚ್ಚದ ಜಾತ್ರೆ, ಜೊತೆಗೆ ಒಂದು ರೀತಿಯಲ್ಲಿ ಲವಲವಿಕೆಯನ್ನು ಕಳೆದುಕೊಂಡಿರುವ ಜಾತ್ರೆ ಆಗುತ್ತಿದೆ. ಕೇವಲ ವ್ಯಾಪಾರದ ದೃಷ್ಟಿಯಲ್ಲಿ ಜಾತ್ರೆಗಳು ನಡೆಯುತ್ತಿವೆ. ಜೊತೆಗೆ ಜಾತ್ರಾ ಸಂದರ್ಭದಲ್ಲಿ ದಾಸೋಹ  ಕೂಡ ಇರುತ್ತದೆ. ಅಲ್ಲಿನ ಪ್ರಸಾದ ರುಚಿಸುತ್ತದೆ. ನಾವು ಜಾತ್ರೆಗೆ ಹೋಗುವಾಗ ಯಾವುದೇ ನಿಯಂತ್ರಣವಿರುತ್ತಿರಲಿಲ್ಲ ಈಗ ತಂದೆ ತಾಯಿಗಳಾದ ನಾವುಗಳು ಮಕ್ಕಳಿಗೆ ಒಂದು ರೀತಿಯಲ್ಲಿ ಒತ್ತಡದ ಜೊತೆಗೆ….  ರೋಗ ಬರುತ್ತದೆ ಅದು ಇದು ಎಂದು ತಲೆಗೆ ಹುಳ ಬಿಡುತ್ತಾರೆ. ಒಂದು ರೀತಿಯಲ್ಲಿ ಅವರು ಹೆಚ್ಚರಿಸುವುದು ಸರಿ
ಎನಿಸುತ್ತದೆ. 

ಒಂದೇ ಮಾತಿನಲ್ಲಿ ಹೇಳುವುದಾದರೆ ನನಗೆ ಬಾಲ್ಯದಲ್ಲಿ ನಡೆಯುತ್ತಿದ್ದ ಜಾತ್ರೆಗಳ ಸೊಬಗು ಮಾತ್ರ ವರ್ಣಾನಾತೀತ. ಆದರೆ ಈಗ ನಡೆಯುವ ಜಾತ್ರೆಗಳು ಏನೋ ಒಂದು ರೀತಿಯಲ್ಲಿ ಪ್ರವಾಸದ ಅನುಭವ ನೀಡುತ್ತವೆ. ಮನದಲ್ಲಿ ನಿಲ್ಲುವುದಿಲ್ಲ.ಜನರು ಕೂಡ ಬದಲಾಗಿದ್ದಾರೆ. ಅದರಿಂದಾಗಿ ಜಾತ್ರೆಗಳು….. ಜನರು….. ರೋಗಗಳು…… ಎಲ್ಲವೂ ಕೂಡ ಹೈಟೆಕ್ ಆಗಿದೆ. ನಮ್ಮ ಮಕ್ಕಳಿಗಂತೂ ಜಾತ್ರೆ ಎಂದರೇನು ಎಂಬುದೇ ತಿಳಿಯುತ್ತಿಲ್ಲ. ನಗರ ಪ್ರದೇಶಗಳಲ್ಲಿ ಮಾಲ್ ಅಥವಾ ಇನ್ನಿತರ ವಸ್ತು ಪ್ರದರ್ಶನಗಳಲ್ಲಿ ನೋಡುವುದೇ ಒಂದು ಜಾತ್ರೆ ಎಂದುಕೊಂಡಿರುತ್ತಾರೆ.

ಅದರಲ್ಲೂ ದನಗಳ ಜಾತ್ರೆಯಂತೂ ಎಂತಹ ಚಿಕ್ಕ ಜಾತ್ರೆಗಳಲ್ಲೂ ಕೂಡ ನಡೆಯುತ್ತಿತ್ತು. ಈಗಲೂ ಕೂಡ ನಮ್ಮ ಅಜ್ಜಿ ಮನೆಗೆ ಜಾತ್ರೆಯ ಸವಿ ಸವಿ ನೆನಪು ಮನದಲ್ಲಿ ಮೂಡುತ್ತದೆ. ಜೊತೆಗೆ ವರ್ಷ ವರ್ಷವೂ ಕೂಡ ಒಂದು ದಿನದ ಮಟ್ಟಿಗಾದರೂ ಕೂಡ ನಮ್ಮ ಮಕ್ಕಳ ಜೊತೆ ಹೋಗಿ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಜಾತ್ರೆಗೆ ಒಂದು ರೀತಿಯಲ್ಲಿ ವೈಭವದ ಚೌಕಟ್ಟು ನಿರ್ಮಿಸುತ್ತಿದ್ದ ಅಜ್ಜ-ಅಜ್ಜಿಯು ಕೂಡ ಈಗ ಇಲ್ಲ. ಒಟ್ಟು ಕುಟುಂಬವಿರುತ್ತಿದ್ದ ಕಾಲ ಅದಾಗಿತ್ತು. ಆದರೆ ಈಗ ಎಲ್ಲರ ಮನಗಳು ಕೂಡ ಬೇರೆ ಬೇರೆಯಾಗಿವೆ. ಅದರಿಂದಾಗಿ ಅವಿಭಕ್ತ ಕುಟುಂಬಗಳು ಕೂಡ ಈಗ ಕಾಣೆಯಾಗಿವೆ.ಗಂಡ ಹೆಂಡತಿ ಮಕ್ಕಳು ಇವರು ಅವಿಭಕ್ತ ಕುಟುಂಬಗಳು ಎನ್ನುವಂತಾಗಿದೆ!. ತಾವಾಯಿತು ತಮ್ಮ ಮನೆಯ ವ್ಯವಹಾರವಾಯಿತು ಎನ್ನುವಂತೆ ಎಲ್ಲರೂ ಇರುತ್ತಾರೆ. ಕೊಡುಕೊಳ್ಳುವಿಕೆ ರೀತಿಯಲ್ಲಿ ಜಾತ್ರೆಯ ಸಾಂಸ್ಕೃತಿಕ ಚೌಕಟ್ಟು ಒಡೆದುಹೋಗಿದೆ. ಆದರೆ ಹಲವು ಪ್ರಮುಖ ಜಾತ್ರೆಗಳು ಈಗಲೂ ಕೂಡ ತನ್ನತನವನ್ನು ಕಳೆದುಕೊಂಡಿಲ್ಲ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆಯುತ್ತಲೇ ಇವೆ.

ಒಟ್ಟಿನಲ್ಲಿ ಜಾತ್ರೆಗಳು ಕೂಡ ಬದಲಾಗುತ್ತಿವೆ. ನಮಗೆ ಕಾಣಸಿಗುವ ಜಾತ್ರೆಗಳಿಗೆ ಹೋಗಿ ನಮ್ಮ ಮಕ್ಕಳಿಗೂ ಕೂಡ ಜಾತ್ರೆಯ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ಮಾಡೋಣ.

-ಕಾಳಿಹುಂಡಿ ಶಿವಕುಮಾರ್, ಮೈಸೂರು 

7 Responses

 1. ಸೊಗಸಾದ ಜಾತ್ರೆ ವಿವರಣೆ… ಚೆನ್ನಾಗಿ ದೆ ಸಾರ್..
  ಧನ್ಯವಾದಗಳು

 2. ನಯನ ಬಜಕೂಡ್ಲು says:

  ಉತ್ತಮ ಬರಹ

 3. Anonymous says:

  ಜಾತ್ರೆಗೆ ಹೋದಷ್ಟು ಖುಶಿ ಆಯಿತು. ವಂದನೆಗಳು.

 4. ಶಂಕರಿ ಶರ್ಮ says:

  ತಮ್ಮ ಸೊಗಸಾದ ಜಾತ್ರೆ ಬರಹವು ನಾನು ಚಿಕ್ಕಂದಿನಲ್ಲಿ ಜಾತ್ರಗದ್ದೆಯಲ್ಲಿ ಸುತ್ತಾಡಿದ ನೆನಪುಗಳನ್ನು ಮರುಕಳಿಸುವಂತೆ ಮಾಡಿತು… ಧನ್ಯವಾದಗಳು

 5. Krishnaprabha M says:

  ತುಂಬಾ ವಿವರಗಳನ್ನು ನೀಡಿರುವಿರಿ

 6. Padma Anand says:

  ಜಾತ್ರೆಯ ಮಧುರ ನೆನಪುಗಳ ತೇರಿನ ಮೆರವಣಿಗೆ ರಥಬೀದಿಯಲ್ಲಿ ಸೊಗಸಾಗಿ ಸಾಗಿತು.

 7. ಕಾಳಿಹುಂಡಿ ಶಿವಕುಮಾರ್ says:

  ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: