ವಾಟ್ಸಾಪ್ ಕಥೆ 9: ಮೊಟ್ಟೆ ಮೊದಲೋ, ಕೋಳಿ ಮೊದಲೋ?
ಒಂದು ರಾಜ್ಯದಲ್ಲಿ ಅಂಗದ ಎಂಬ ರಾಜನು ರಾಜ್ಯಭಾರ ಮಾಡುತ್ತಿದ್ದ. ಅವನು ದಕ್ಷನಾಗಿದ್ದ. ಅವನಲ್ಲಿದ್ದ ಒಂದೇ ಕೊರತೆಯೆಂದರೆ ಅವನು ಶೀಘ್ರಕೋಪಿ. ಅವನ ಮುಂಗೋಪಕ್ಕೆ ಹಲವರು ನಿರಪರಾಧಿಗಳೂ ಬಲಿಯಾಗುತ್ತಿದ್ದುದೂ ಉಂಟು. ಕೋಪ ಬಂದಾಗ ಅವನು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮತ್ತು ಮಂತ್ರಿಗಳ ಸಲಹೆಯನ್ನೂ ಮಾನ್ಯ ಮಾಡುತ್ತಿರಲಿಲ್ಲ. ಇದರಿಂದಾಗಿ ಸಣ್ಣದೊಂದು ಅಪರಾಧಕ್ಕೂ ಉಗ್ರವಾದ ಶಿಕ್ಷೆಯನ್ನು ಕೊಡುತ್ತಿದ್ದ.
ಒಮ್ಮೆ ರಾಜನ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಭಟ್ಟನೊಬ್ಬ ಎರಡು ಕೋಳಿಮೊಟ್ಟೆಗಳನ್ನು ಕದ್ದು ಮೇಲ್ವಿಚಾರಕನ ಕೈಗೆ ಸಿಕ್ಕಿಹಾಕಿಕೊಂಡ. ಆತ ಭಟ್ಟನನ್ನು ಮಹಾರಾಜರ ಸನ್ನಿಧಿಗೆ ಕರೆತಂದು ದೂರುನೀಡಿದ. ಯಥಾಪ್ರಕಾರ ರಾಜನಿಗೆ ಭಯಂಕರವಾದ ಸಿಟ್ಟುಬಂತು. ವಿಚಾರಣೆ ಮಾಡಿದಾಗ ಭಟ್ಟನು ತಾನು ಮೊಟ್ಟೆಗಳನ್ನು ಕಳವುಮಾಡಿದ್ದು ನಿಜವೆಂದು ಒಪ್ಪಿಕೊಂಡುಬಿಟ್ಟ. ಮಹಾರಾಜನು ಹಾಗಾದರೆ ಶಿಕ್ಷೆ ಅನುಭವಿಸಲು ಸಿದ್ಧನಾಗು ಎಂದ. ಅಡುಗೆ ಭಟ್ಟನು ತುಂಬ ರುಚಿಯಾಗಿ ಭಕ್ಷ್ಯಗಳನ್ನು ತಯಾರಿಸುತ್ತಿದ್ದ. ರಾಜನು ಈ ಕಾರಣದಿಂದ ಅವನಿಗೆ ತಕ್ಷಣ ಶಿಕ್ಷೆ ವಿಧಿಸಲಿಲ್ಲ. ನಿನ್ನನ್ನು ನೋಡಿದರೆ ನನಗೇಕೋ ಸ್ವಲ್ಪ ಕರುಣೆ ಹುಟ್ಟುತ್ತಿದೆ. ಆದ್ದರಿಂದ ನಿನಗೊಂದು ಅವಕಾಶ ಕೊಡುತ್ತೇನೆ. ನಾನು ಕೇಳುವ ಒಂದು ಪ್ರಶ್ನೆಗೆ ನೀನು ಸರಿಯಾದ ಉತ್ತರ ಕೊಟ್ಟರೆ ನಿನ್ನ ಶಿಕ್ಷೆ ರದ್ದಾಗುತ್ತದೆ. ಇಲ್ಲವಾದರೆ ನಿನ್ನನ್ನು ಗಳ್ಲಿಗೇರಿಸಲು ಆದೇಶಿಸುತ್ತೇನೆ. ಹೇಳು ಒಪ್ಪಿಗೆಯೇ ಎಂದು ಕೇಳಿದನು.
‘ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು’ ಎಂಬ ಗಾದೆ ನೆನಪಾಗಿ ಅಡುಗೆಭಟ್ಟನು ಶರತ್ತಿಗೆ ಒಪ್ಪಿಕೊಂಡನು. ಮಹಾರಾಜನು ಕೇಳಿಸಿಕೋ ನನ್ನ ಪ್ರಶ್ನೆ, ‘‘ಮೊಟ್ಟೆ ಮೊದಲೋ? ಕೋಳಿ ಮೊದಲೋ?” ಎಂದು ಕೇಳಿದನು.
ಭಟ್ಟನಿಗೆ ಉತ್ತರ ತಿಳಿಯದೆ ತಬ್ಬಿಬ್ಬಾದ. ಅವನ ಮುಖ ಕಪ್ಪಿಟ್ಟಿತು. ರಾಜನ ಆಸ್ಥಾನದಲ್ಲಿ ಒಬ್ಬ ಚತುರನಾದ ಮಾಣಿಕ್ಯನೆಂಬ ಮಂತ್ರಿಯೊಬ್ಬನಿದ್ದನು. ಅವನು ಈ ವಿಚಾರಣೆಯನ್ನು ನೋಡುತ್ತಿದ್ದ. ಅವನಿಗೆ ಎರಡು ಕೋಳಿಮೊಟ್ಟೆಗಳನ್ನು ಕಳವು ಮಾಡಿದ್ದಕ್ಕೆ ಗಲ್ಲುಶಿಕ್ಷೆ ನೀಡುವುದು ಅತ್ಯಂತ ಕ್ರೂರವಾದುದು ಎನ್ನಿಸಿತು. ಧೈರ್ಯಮಾಡಿ ಮಹಾರಾಜನಲ್ಲಿ ಅರಿಕೆ ಮಾಡಿಕೊಂಡ.
‘ಪ್ರಭೂ ಭಟ್ಟರು ಉತ್ತರವನ್ನು ತಕ್ಷಣ ಕೊಡಲು ಗಾಭರಿಯಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅವರಿಗೆ ಸ್ವಲ್ಪ ಕಾಲಾವಕಾಶ ಕೊಡಬೇಕೆಂದು ಬೇಡುತ್ತೇನೆ. ದಯವಿಟ್ಟು ತಪ್ಪಾಗಿ ಭಾವಿಸಬಾರದು ‘ ಎಂದು ಭಿನ್ನವಿಸಿಕೊಂಡನು.
ಮಹಾರಾಜನು ಆಯಿತು ‘ಇವರಿಗೆ ಒಂದು ವಾರ ಕಾಲಾವಕಾಶ ಕೊಟ್ಟಿದ್ದೇನೆ. ಅಷ್ಟರೊಳಗೆ ಉತ್ತರ ಹೇಳಬೇಕು. ಇಲ್ಲವಾದರೆ ನೀನು ಹೇಳಬೇಕು. ತಪ್ಪಿದರೆ ಅವರಿಗೆ ವಿಧಿಸುವ ಗಲ್ಲುಶಿಕ್ಷೆಯನ್ನು ನಿನಗೆ ವಿಧಿಸುತ್ತೇನೆ ‘ ಎಂದನು.
ರಾಜರು ಕೊಟ್ಟ ವಾರದ ಗಡುವು ಮುಗಿಯುವ ದಿನ ರಾಜದರ್ಬಾರು ಸೇರಿತ್ತು. ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಮಂತ್ರಿಗಳು ಸರಿಯಾದ ಸಮಯಕ್ಕೆ ಬಂದಿರಲಿಲ್ಲ.ರಾಜನಾಗಲೇ ಸಿಟ್ಟಿಗೆದ್ದಿದ್ದ. ಅಷ್ಟರಲ್ಲಿ ಮಂತ್ರಿ ಮಾಣಿಕ್ಯ ಅಪರಿಚಿತನೊಬ್ಬನೊಡನೆ ದರ್ಬಾರನ್ನು ಪ್ರವೇಶಿಸಿ ರಾಜರಿಗೆ ವಂದಿಸಿದ. ರಾಜನು ಕೋಪದಿಂದ ತಡವಾಗಿ ರಾಜಸಭೆಗೆ ಬಂದಿರುವುದೂ ಅಲ್ಲದೆ ಅಪರಿಚಿತ ವ್ಯಕ್ತಿಯೊಬ್ಬನನ್ನು ಅನುಮತಿಯಿಲ್ಲದೆ ಕರೆತಂದಿದ್ದೀಯೆ ಕಾರಣವೇನು? ಎಂದು ಪ್ರಶ್ನಿಸಿದನು.
ಮಂತ್ರಿಯು ‘ಮಹಾಪ್ರಭು, ನಾನು ಬೇಕೆಂದು ತಡಮಾಡಲಿಲ್ಲ. ಈತನು ಬೇರೆ ರಾಜ್ಯದಿಂದ ಬಂದಿರುವ ಪ್ರತಿನಿಧಿ. ದಾರಿಯಲ್ಲಿ ನನಗೆ ಭೇಟಿಯಾದರು. ಒಂದು ಪ್ರಶ್ನೆಗೆ ನನ್ನಿಂದ ಉತ್ತರ ಬಯಸಿದರು. ನಾನು ಉತ್ತರಿಸಲು ಸಾಧ್ಯವಾಗದೇ ನಮ್ಮ ಮಹಾರಾಜರು ಬಹಳ ಬುದ್ಧಿಶಾಲಿಗಳು. ಅವರು ನಿನ್ನ ಪ್ರಶ್ನೆಗೆ ಖಂಡಿತ ಉತ್ತರ ನೀಡಬಲ್ಲರು ಎಂದು ಅವರನ್ನೇ ಇಲ್ಲಿಗೆ ಕರೆತರಬೇಕಾಯಿತು. ಕ್ಷಮಿಸಬೇಕು’ ಎಂದು ವಿವರಿಸಿದನು.
ರಾಜನಿಗೆ ತನ್ನ ಬುಧ್ಧಿಶಕ್ತಿಯನ್ನು ಹೊಗಳಿದನೆಂದು ಹೆಮ್ಮೆಯಾಯಿತು. ‘ಆಯಿತು ನಿಮ್ಮ ಪ್ರಶ್ನೆಯನ್ನು ಕೇಳಿ ಉತ್ತರ ಹೇಳುತ್ತೇನೆ’ ಎಂದನು.
ಬಂದಿದ್ದ ವ್ಯಕ್ತಿ ‘ಸೂರ್ಯ ಹುಟ್ಟಿದಾಗ ಹಗಲು ಎನ್ನುತ್ತೇವೆ, ಅವನು ಮುಳುಗಿದಾಗ ರಾತ್ರಿಯಾಯಿತು ಎನ್ನುತ್ತೇವೆ. ಹಾಗಿದ್ದಾಗ ಹಗಲು ಮೊದಲೋ? ರಾತ್ರಿ ಮೊದಲೋ?’ ಎಂಬುದೇ ನನ್ನ ಪ್ರಶ್ನೆ ಪ್ರಭು ಮಹಾರಾಜನಿಗೆ ಮಂತ್ರಿ ಮಾಣಿಕ್ಯನ ಜಾಣತನದ ಅರಿವಾಯಿತು. ಹಾಗೇ ತನ್ನ ಪ್ರಶ್ನೆಯೂ ಅನುಚಿತವಾದುದು ಎಂದು ಮನವರಿಕೆಯಾಯಿತು. ಕೂಡಲೇ ಭಟ್ಟರಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದನು. ಮಂತ್ರಿ ಮಾಣಿಕ್ಯನು ಆಗ ‘ಮಹಾಸ್ವಾಮಿ, ಅಡುಗೆಭಟ್ಟರು ಕಳವು ಮಾಡಿದ್ದು ಎರಡು ಕೋಳಿಮೊಟ್ಟೆಗಳನ್ನು ಮಾತ್ರ. ಚಿನ್ನ, ಬೆಳ್ಳಿ ಒಡವೆ ವಸ್ತುಗಳನ್ನಲ್ಲ. ಮೊಟ್ಟೆಗಳಿಂದ ಹಸಿವನ್ನು ನೀಗಿಸಿಕೊಳ್ಳಬಹುದು. ಆದ್ದರಿಂದ ಭಟ್ಟರ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲದಿರಬಹುದು. ಇದರಿಂದ ತಿನ್ನುವ ವಸ್ತುವನ್ನು ಕಳವು ಮಾಡಿದ್ದಾರೆ. ತಾವು ಈ ಬಗ್ಗೆ ವಿಚಾರಣೆ ಮಾಡಿರೆಂದು ಕೋರುತ್ತೇನೆ’ ಎಂದು ಹೇಳಿದನು. ವಿಚಾರಿಸಿದಾಗ ಭಟ್ಟರ ಸಂಪಾದನೆಯಿಂದ ಅವರ ಕುಟುಂಬದ ನಿರ್ವಹಣೆ ಸಾಧ್ಯವಾಗುತ್ತಿಲ್ಲವೆಂಬ ಅಂಶ ಬೆಳಕಿಗೆ ಬಂತು. ಮಹಾರಾಜರು ಕೂಡಲೇ ಭಟ್ಟರಿಗೆ ನೀಡುವ ಭತ್ಯೆಯನ್ನು ಹೆಚ್ಚು ಮಾಡಿ ಆದೇಶ ಹೊರಡಿಸಿದರು.
ಅಧಿಕಾರದಲ್ಲಿರುವವರು ಯಾರೇ ಆಗಿರಲಿ ಹಿಂದುಮುಂದು ಆಲೋಚಿಸದೆ ಸಿಟ್ಟಿನ ಕೈಗೆ ಬುದ್ಧಿಕೊಡುವ ಆದೇಶಗಳನ್ನು ನೀಡಬಾರದು. ಕೂಲಂಕುಷವಾಗಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಕೋಳಿ… ಮೊಟ್ಟೆ…ಕಥೆ ಚೆನ್ನಾಗಿದೆ
ರೇಖಾಚಿತ್ರ ಹಾಗೂ ಉತ್ತಮ ನಿರೂಪಣೆ
ವಂದನೆಗಳು
ಸುಧಾ ಮತ್ತು ಗಾಯತ್ರಿ ಮೇಡಂ ಅವರಿಗೆ ಧನ್ಯವಾದಗಳು
ಬಹಳ ಚೆನ್ನಾಗಿದೆ ಕಥೆ
ಧನ್ಯವಾದಗಳು ನಯನ ಮೇಡಂ
ಸೊಗಸಾದ ಕಥೆಗೆ ಪೂರಕ ಚಿತ್ರವು ತಾವು ನುರಿತ ಚಿತ್ರಗಾತಿ ಎಂದೂ ನಿರೂಪಿಸಿದೆ ಮೇಡಂ
ಧನ್ಯವಾದಗಳು ಶಂಕರಿ ಮೇಡಂ
ಅಧಿಕಾರದಲ್ಲಿ ಕೂರಲು ಬೇಕಾದ ಮೊದಲ ಅರ್ಹತೆ ವಿವೇಚನೆ ಎನ್ನುವ ಸಂದೇಶವನ್ನು ಹೊತ್ತ ಚಂದದ ಕಥೆ.
ಧನ್ಯವಾದಗಳು ಪದ್ಮಾ ಮೇಡಂ