ಅಷ್ಟಾವಕ್ರನ ಸಂಯಮ ನಿಷ್ಠೆ

Share Button


ಸಂಯಮ ಶೀಲತೆಯನ್ನು ಅಷ್ಟಾವಕ್ರನ ಕತೆಯಿಂದ ಕಲಿಯಬೇಕು. ಅಷ್ಟಾವಕ್ರನ ಕತೆ ಹೇಗೆ?. ಆತನು ಎಲ್ಲಿ ಸಂಯಮಶೀಲತೆಯನ್ನು ಕಾಪಾಡಿಕೊಂಡ ಎಂಬುದನ್ನು ನೋಡೋಣ.

‘ಕಹೋಳ’ ಋಷಿ ಹಾಗೂ ಸುಜಾತೆಯರ ಮಗ ಅಷ್ಟಾವಕ್ರ.ಈತನು ಅಷ್ಟಾವಕ್ರನಾಗಿ ಜನಿಸುವುದಕ್ಕೂ ಒಂದು ಕಾರಣವಿದೆ.ಒಮ್ಮೆ ಕಹೋಳ ಮುನಿಯು ವೇದಾಧ್ಯಯನ ಮಾಡುತ್ತಿದ್ದಾಗ ಆತನ ಪತ್ನಿ ಸುಜಾತೆಯು ಬಳಿಯಲ್ಲಿ ಕುಳಿತು ಕೇಳುತ್ತಿದ್ದಳು.ಆಗ ಅವಳು ಗರ್ಭಿಣಿಯೂ ಆಗಿದ್ದಳು. ‘ಕಹೋಳ’ ನು ವೇದವನ್ನು ಓದುತ್ತಾ ಇದ್ದಂತೆ ”ನೀನು ಓದಿದ್ದು ತಪ್ಪಾಗಿದೆ” ಎಂದು ಹೇಳುವದು ಕೇಳಿತಂತೆ. ಬಳಿಯಲ್ಲಿ ಪತ್ನಿಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಕೂಲಂಕಷ ನೋಡಿದಾಗ ಸುಜಾತೆಯ ಹೊಟ್ಟೆಯೊಳಗಿಂದ ಗರ್ಭಸ್ಥ ಶಿಶು ಹೇಳಿದ್ದೆಂದು ತಿಳಿಯಿತು. ಕಹೋಳರಿಗೆ ಸಿಟ್ಟು ಬಂತು. ”ಏನು ತಪ್ಪಾಗಿದ್ದು? ಈಗಲೇ ನನ್ನಲ್ಲಿ ದೋಷವನ್ನು ಹುಡುಕುವೆಯಾ? ನೀನು ಅಷ್ಟಾವಕ್ರನಾಗಿ ಜನಿಸು” ಎಂದರು.

ಗರ್ಭಿಣಿ ಸುಜಾತೆಗೆ ದಿನಗಳು ತುಂಬುತ್ತಿದ್ದಂತೆ ಈಕೆ ಗಂಡನಿಗೆ ಸ್ವಲ್ಪ ಧನಸಂಗ್ರಹ ಮಾಡಿಕೊಂಡು ಬರಲು ಸೂಚಿಸಿದಳು. ಅಂತೆಯೇ ಕಹೋಳನು ಜನಕ ಮಹಾರಾಜನಲ್ಲಿಗೆ ಹೋದಾಗ ಅಲ್ಲಿ ‘ಬನ್ದಿ’ ಎಂಬ ವಿದ್ವಾಂಸನು ವಾದಕ್ಕೆ ಕರೆದನು. ಹಿಂದಿನ ಕಾಲದಲ್ಲಿ ಅರಮನೆಯಲ್ಲಿ ವಿದ್ವಾಂಸರನ್ನು ಕರೆಸಿ ಅವರ ಪಾಂಡಿತ್ಯವನ್ನು ಪರೀಕ್ಷಿಸುವುದಕ್ಕೋಸ್ಕರ ಪರಸ್ಪರ ವಾದ ಮಾಡಿಸುವುದು, ಅದರಲ್ಲಿ ಸೋತವರಿಗೆ ಶಿಕ್ಷೆ ವಿಧಿಸುವುದೂ ಇತ್ತು. ಹೀಗೆಯೇ ಆಯಿತು. ಬನ್ದಿಯೊಡನೆ ವಾದ ಮಾಡಿದ ‘ಕಹೋಳ’ನು ಸೋತನು.ಸೋತವನಿಗೆ ಜಲಾಧಿವಾಸವನ್ನು ವಿಧಿಸಿದರು.

ಇತ್ತ ಸುಜಾತೆ ಪತಿಯ ಅಗಲುವಿಕೆಯಿಂದ ಬಹುವಾಗಿ ನೊಂದಳು. ಒಂದು ದಿನ ಪುತ್ರನಿಗೆ ಜನ್ಮವಿತ್ತಳು.ಪಿತೃಶಾಪದಿಂದ ಆ ಮಗುವು ಎಂಟು ಊನತೆಯಿಂದ ಜನಿಸಿದ ಕಾರಣ ‘ಅಷ್ಟಾವಕ್ರ’ ಎಂದೇ ಹೆಸರಿಟ್ಟಳು. ಮಗುವನ್ನು ಚೆನ್ನಾಗಿ ಬೆಳೆಸಿ ವಿದ್ಯೆ ಕೊಡಿಸಿದಳು.ಅಂಗ ಊನತೆಯಿದ್ದರೂ ವೇದೋಪನಿಷತ್ತುಗಳನ್ನು ಕಲಿತುಕೊಂಡ ಅವನು ಮಹಾ ವಿದ್ವಾಂಸನೆನಿಸಿಕೊಂಡನು.
ತನ್ನ ಪಿತನು ‘ಬನ್ದಿ’ ಪಂಡಿತನಿಂದ ಪರಾಜಿತನಾಗಿ ಜಲಾಧಿವಾಸಿಯಾಗಿದ್ದಾನೆಂದು ತಿಳಿದ ಅವನು ಜನಕರಾಜನ ಆಸ್ಥಾನಕ್ಕೆ ಹೋಗಿ ‘ಬನ್ದಿ’ ಪಂಡಿತನೊಡನೆ ವಾದಮಾಡಿ ಗೆದ್ದು ತನ್ನ ಪಿತನನ್ನು ಬಿಡಿಸಿ ಕರೆತಂದನು.

ಹೀಗಿರುತ್ತಾ ಯುವಕ ಅಷ್ಟಾವಕ್ರನಿಗೆ ‘ವಧಾನ್ಯ’ ಮುನಿ ಪುತ್ರಿಯಾದ ‘ಸುಪ್ರಭೆ’ಯನ್ನು ವರಿಸಬೇಕೆಂದು ಮನಸ್ಸಾಯಿತು. ನ್ಯಾಯ ಸಮ್ಮತವಾದ ರೀತಿಯಿಂದಲೇ ‘ವಧಾನ್ಯ’ ಮುನಿಯಲ್ಲಿ ತಮ್ಮ ಕನ್ಯೆಯನ್ನು ತನಗೆ ವಿವಾಹ ಮಾಡಿಕೊಡಿರೆಂದು ಕೇಳಿಕೊಂಡನು. ‘ವಧಾನ್ಯ’ ಮುನಿಯು ತನ್ನ ಕುವರಿ ಸುಪ್ರಭೆಯನ್ನು ಕನ್ಯಾದಾನ ಮಾಡಲು ಒಪ್ಪಿಕೊಂಡನಾದರೂ ಒಂದು ಶರತ್ತನ್ನು ವಿಧಿಸಿದನು. ಅದೇನೆಂದರೆ “ನೀನೀಗಲೇ ಉತ್ತರ ದಿಕ್ಕಿನ ಕುಬೇರನ ಅಲಕಾಪುರಿಯನ್ನು ದಾಟಿ ಹಿಮವತ್ಪರ್ವತವನ್ನೂ ದಾಟಿ ಕೈಲಾಸಕ್ಕೆ ಹೋಗು.ಅಲ್ಲಿಂದ ಮುಂದೆ ಹೋದಾಗ ಒಂದು ವನ ಪ್ರದೇಶವಿದೆ.ಅಲ್ಲಿ ತಪಸ್ವಿನಿಯೂ ದೀಕ್ಷಾ ಪಾರಾಯಣಳೂ ಆದ ವೃದ್ಧ ಸ್ತ್ರೀಯನ್ನು ನೋಡುವೆ.ನೀನು ಅವಳನ್ನು ಸಂದರ್ಶಿಸಿ ಪ್ರಯತ್ನ ಪೂರ್ವಕವಾಗಿ ಪೂಜಿಸಿ, ಆಕೆಯನ್ನು ಪ್ರಸನ್ನಗೊಳಿಸಿ ಬಂದರೆ ನನ್ನ ಮಗಳನ್ನು ವಿವಾಹ ಮಾಡಿಕೊಡುವೆನು.ಈ ನಿಯಮಕ್ಕೆ ಒಪ್ಪಿದೆಯಾದರೆ ಸಾಧಿಸಲು ಪ್ರಯತ್ನಿಸು” ಎಂದನು.

ವಧಾನ್ನ ಮಹರ್ಷಿಯ ಮಾತಿಗೆ ಅಷ್ಟಾವಕ್ರನು ಒಪ್ಪಿಕೊಂಡು ತನ್ನ ಕಾರ್ಯಸಾಧನೆಗೆ ಹೊರಟನು. ಕುಬೇರನನ್ನು ಸಂಸರ್ಶಿಸಿದನು. ಕುಬೇರನು ಅಷ್ಟಾವಕ್ರನನ್ನು ಬಹು ಗೌರವದಿಂದ ಸತ್ಕಾರಗಳನ್ನು ಮಾಡಿದನು. ಅಪ್ಸರೆಯರ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿ ಆತನನ್ನು ಸಂತೋಷಗೊಳಿಸುತ್ತಾ ಕೆಲ ಕಾಲ ಇಲ್ಲೇ ಇರುವಂತೆ ಕೇಳಿಕೊಂಡರೂ ಅಷ್ಟಾವಕ್ರನು ವಿಚಲಿತನಾಗಲಿಲ್ಲ. ತನ್ನ ಪ್ರಯಾಣದ ಮುಖ್ಯೋದ್ಧೇಶವನ್ನು ಗಮನದಲ್ಲಿಟ್ಟುಕೊಂಡು ಶಿವನ ಕೈಲಾಸವನ್ನೂ ದಾಟಿ ರಮಣೀಯವಾದ ವನವೊಂದನ್ನು ಪ್ರವೇಶಿಸಿದನು.ಅಲ್ಲೊಂದು ಭವ್ಯಭವನವನ್ನು ಕಂಡು ಅದರೊಳಗೆ ಪ್ರವೇಶಿಸಿದನು. ಈ ವಿಪ್ರನನ್ನು ಕಾಣುತ್ತಲೇ ಅತಿಶಯ ರೂಪವುಳ್ಳ ಸಪ್ತ ಕನ್ನಿಕೆಯರು ಸುತ್ತುವರಿದರು. ನಾನಾ ವಿಧವಾದ ರೂಪವುಳ್ಳ ಈ ಕನ್ನಿಕೆಯರನ್ನೂ ಅವರ ಹಾವಭಾವಗಳನ್ನೂ ಕಂಡರೆ ಯಾರೇ ಆದರೂ ಆಕರ್ಷಿತರಾಗುತ್ತಿದ್ದರು. ಅಲ್ಲದೆ ಅವರು ಇವನನ್ನು ತಮ್ಮೆಡೆಗೆ ಸೆಳೆಯುತ್ತಿದ್ದರು.ಆದರೆ ತನ್ನ ಸಂಯಮವನ್ನು ಕಾಯ್ದುಕೊಂಡ ಅಷ್ಟಾವಕ್ರನು ಒಳಮನೆಯಲ್ಲಿ ಕಣ್ಣು ಹಾಯಿಸಿದಾಗ ಒಬ್ಬಳು ವೃದ್ಧೆಯನ್ನು ಮಂಚದ ಮೇಲೆ ಕಂಡನು. ಕೂಡಲೇ ಆ ಮುದುಕಿ ಅಷ್ಟಾವಕ್ರನನ್ನು ಕರೆದು ತನ್ನ ಮಂಚದಲ್ಲಿ ಕುಳ್ಳಿರಿಸಿಕೊಂಡಳು. ಈಕೆಯೊಡನೆ ತನಗೆ ಮಾತನಾಡಬೇಕಾಗಿರುವುದೆಂದು ಕೊಂಡ ಅವನು ಸಪ್ತ ಕನ್ನಿಕೆಯರನ್ನು ಅವರ ಪಾಡಿಗೆ ಕಳುಹಿಸುವಂತೆ ವೃದ್ಧೆಗೆ ಸೂಚಿಸಿದನು.

ಸ್ವಲ್ಪ ಹೊತ್ತು ಮಾತನಾಡಿದ ಮೇಲೆ “ತಾಯೇ ನೀನು ಹೋಗಿ ನಿದ್ರಿಸು ರಾತ್ರಿಯಾಯ್ತಲ್ಲ” ಎಂದನು. ಸ್ವಲ್ಪ ಹೊತ್ತು ತನ್ನ ಮಂಚದಲ್ಲಿ ಮಲಗಿದ ಆಕೆ ವಾಪಾಸು ಮಹರ್ಷಿಯ ಬಳಿಗೆ ಚಳಿಯ ನೆಪದಿಂದ ಗಡಗಡನೆ ನಡುಗುತ್ತಾ ಬಂದಳು. ಕನಿಕರ ತೋರಿಸಿ ಮಂಚದಲ್ಲಿ ಬೆಚ್ಚಗೆ ಮಲಗಲು ಹೇಳಿದರೆ; ಆಕೆ ಅಷ್ಟಾವಕ್ರನನ್ನು ಅಪ್ಪಿಹಿಡಿದು ಆಲಂಗಿಸುತ್ತಾ ಸರಸ ಸಲ್ಲಾಪಕ್ಕೆ ಅಣಿಗೊಳಿಸಿದಳು. ಅದಾಗ್ಯೂ ಬಗ್ಗದೆ ಇದ್ದಾಗ ಕಾಮಮೋಹಿತಳಾಗಿ ನನ್ನನ್ನು ಸೇವಿಸು ಎಂದಳು. ಆಗ ಅಷ್ಟಾವಕ್ರನು “ನೀನು ಭೋಗೇಚ್ಛೆಯಿಂದ ಮಾತನಾಡುವುದಿದ್ದರೆ ನನಗೆ ಆಸಕ್ತಿಯಿಲ್ಲ.ವಿಷಯ ಸುಖಗಳನ್ನು ನಾನು ಅನುಭವಿಸಿದವನಲ್ಲ.ಅದು ಹೊರತು ಪಡಿಸಿ ಬೇರೇನಾದರೂ ಇದ್ದರೆ ಹೇಳು” ಎಂದನು. ಆಕೆ ಮತ್ತೂ ಪೀಡಿಸತೊಡಗಿದಳು. ಅಷ್ಟಾವಕ್ರನು ಸ್ವಲ್ಪವೂ ವಿಚಲಿತನಾಗಲಿಲ್ಲ. “ನೀನು ನಿನ್ನ ಹಾಸಿಗೆಗೆ ಹೋಗಿ ಮಲಗಿಕೋ ಎಂದನು.

“ವಿಪ್ರಶ್ರೇಷ್ಠನೇ , ನೀನು ನನ್ನಲ್ಲಿ ಪ್ರಸನ್ನನಾಗಿ ನನ್ನನ್ನು ಪರಿಗ್ರಹಿಸು.ನೋಡು ನಾನು ಕೌಮಾರಾವಸ್ಥೆಯಲ್ಲಿಯೇ ಇದ್ದೇನೆ. ಅಲ್ಲದೆ ಬ್ರಹ್ಮಚಾರಿಣಿಯಾಗಿಯೇ ಇದ್ದೇನೆ. ನನ್ನನ್ನು ಪತ್ನಿಯಾಗಿ ವರಿಸಿ ನನಗೆ ರಕ್ಷಕನಾಗು.ನಿನ್ನಲ್ಲಿ ಅಚಲವಾದ ನಂಬಿಕೆಯನ್ನಿರಿಸಿದ್ದೇನೆ”. ಹೀಗೆ ಹೇಳುತ್ತಿದ್ದ ಆ ವೃದ್ಧೆ ಅತ್ಯಂತ ರೂಪವತಿಯಾಗಿ, ತರುಣಿಯಾಗಿ ಅವನ ಮುಂದೆ ಕಾಣಿಸಿದಳು. ಆಗ ಅಷ್ಟಾವಕ್ರನು “ತಾಯೇ ಲೋಕದಲ್ಲಿ ಪುರುಷರು ತಮ್ಮ ಪತ್ನಿಯ ಹೊರತಾಗಿ ಉಳಿದ ಅನ್ಯ ಸ್ತ್ರೀಯರನ್ನು ತಮ್ಮ ಮಾತೆಗೆ ಸಮನಾಗಿ ಕಾಣಬೇಕಂತೆ. ನೀನು ವೃದ್ಧೆಯಾದರೂ ಈಗ ಯವ್ವನಾವಸ್ತೆಯಲ್ಲಿ ಕಾಣಿಸಿಕೊಂಡರೂ ನನ್ನ ಹೆತ್ತ ತಾಯಿಗೆ ಸಮನಾಗಿ ಕಾಣುತ್ತಿಯೇ.ಈ ವಿಷಯದಲ್ಲಿ ನನ್ನ ಸಂಯಮ ಶಕ್ತಿ ಕರಗದು. ನಾನು ಮದುವೆಯಾಗಿ ಸಂಸಾರ ಮಾಡಬೇಕಾದುದು ‘ವಧಾನ್ಯ’ ಮುನಿಯ ಮಗಳಾದ ‘ಸುಪ್ರಭೆ’ಯನ್ನು. ಭಾಮಿನಿ, ಈ ರೂಪ ಪರಿವರ್ತನೆಯ ಕಾರಣವೇನು? ನೀನಾರು ಸತ್ಯವಾಗಿ ಹೇಳು”.

“ವಿಪ್ರ ಶ್ರೇಷ್ಠನೇ, ಈಗ ನಿಜ ಹೇಳುವ ಸಮಯ ಬಂದಿದೆ. ಕೇಳು, ನಾನು ಉತ್ತರ ದಿಗ್ದೇವತೆಯೆಂದು ತಿಳಿ. ಕನ್ಯಾ ಪಿತೃವಾದ ‘ವಧಾನ್ಯ’ ಮುನಿಯು ನನ್ನಿಂದ ಉಪದೇಶವನ್ನು ಪಡೆಯುವ ಸಲುವಾಗಿಯೇ ನಿನ್ನನ್ನು ಇಲ್ಲಿ ಕಳುಹಿಸಿದನು. ನಾಟ್ಯಗಾತಿಯರಾದ ಸಪ್ತ ಕನ್ನಿಕೆಯರನ್ನೂ ನಿನ್ನ ಮುಂದೆ ನರ್ತಿಸುವಂತೆ ಮಾಡಿದೆ.ಅವರಿಗೂ ನೀನು ಸೋಲಲಿಲ್ಲ. ನಾನೂ ಸಾಕಷ್ಟು ನಿನ್ನ ಸಂಯಮ ಶಕ್ತಿಯನ್ನು ಪರೀಕ್ಷಿಸಿದೆ. ಇನ್ನು ನೀನು ನಿಶ್ಚಿಂತೆಯಿಂದ ನಿನ್ನ ಊರಿಗೆ ಹೋಗಬಹುದು”.

ಅಷ್ಟಾವಕ್ರನು ಕೃತಕೃತ್ಯ ಭಾವದಿಂದ ಆ ದಿಗ್ದೇವತೆಯನ್ನು ವಂದಿಸಿ ತನ್ನೂರಿಗೆ ಹಿಂದಿರುಗಿದನು. ‘ವಧಾನ್ಯ’ನಲ್ಲಿಗೆ ಬಂದು ಸಮಗ್ರ ಅನುಭವಗಳನ್ನೂ ಹೇಳಿಕೊಂಡನು. ವಧಾನ್ಯನು ತನ್ನ ಮಗಳನ್ನು ಶುಭಮುಹೂರ್ತಲ್ಲಿ ಅಷ್ಟಾವಕ್ರನಿಗೆ ವಿವಾಹ ಮಾಡಿಕೊಟ್ಟನು.
ಈ ಅಷ್ಟಾವಕ್ರನ ಕತೆಯಿಂದ ಕೆಲವಾರು ನೀತಿಗಳು ನಮಗೆ ದೊರೆಯುತ್ತವೆ. ಮೊದಲನೆಯದಾಗಿ ಆತನ ಸಂಯಮ ಶೀಲತೆ,ಇನ್ನು ಎರಡನೆಯದಾಗಿ ಕ್ರೋಧ ನಿಗ್ರಹ. ಪೂರ್ವಾಪರ ಯೋಚಿಸದೆ ‘ಕಹೋಳ’ ನ ಮುಂಗೋಪದಿಂದಾಗಿ ಆತನ ಮಗನೇ ಅಷ್ಟಾವಕ್ರನಾಗಿ ಜನಿಸಲು ಕಾರಣವಾಯಿತು. ಇನ್ನೊಂದು ಮುಖ್ಯವಾದ ನೀತಿ ಗರ್ಭಿಣಿಯರಿಗೆ!. ಅಭಿಮನ್ಯುವಿನ ಕತೆಯಿಂದ ವ್ಯಕ್ತವಾಗುವಂತೆ ಇಲ್ಲಿಯೂ ಕೂಡಾ ಗರ್ಭಿಣಿಯರಿಗೆ ಕಿವಿಮಾತು ಸಿಗುತ್ತದೆ. ಗರ್ಭಿಣಿಯ ಯಾವುದೇ ಬಹಿರ್ಮುಖ ಹಾಗೂ ಆಂತರಿಕ ಚಲನ ವಲನಗಳು ಆಕೆಯ ಗರ್ಭಸ್ಥ ಶಿಶುವಿನ ಮೇಲೆ ಪರಿಣಾಮ ಹೊಂದುತ್ತದೆ. ಆದುದರಿಂದ ಗರ್ಭಿಣಿಯು ಕಾಯಾ,ವಾಚಾ,ಮನಸಾ ತ್ರಿಕರಣ ಪೂರ್ವಕವಾಗಿಯೂ ಆಕೆಯ ವಾತಾವರಣ ಸುಸ್ಥಿತಿಯಲ್ಲಿರಬೇಕು ಎಂಬುದು ಇಂದಿನ ವೈದ್ಯರು ಹೇಳುವುದನ್ನು ಹಿಂದೆಯೇ ನಮ್ಮ ಪುರಾಣ ಸ್ಪಷ್ಟೀಕರಿಸಿದೆ.

-ವಿಜಯಾಸುಬ್ರಹ್ಮಣ್ಯ ಕುಂಬಳೆ

5 Responses

 1. Vijayasubrahmanya says:

  ಸುರಹೊನ್ನೆ ಹೇಮಮಾಲ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

 2. ನಾಗರತ್ನ ಬಿ. ಅರ್.ಬಿ.ಆರ್.ನಾಗರತ್ನ says:

  ಜೈ ವಿಜಯಾ ಮೇಡಂ ಒಳ್ಳೆಯ ಕಥೆ..
  ಧನ್ಯವಾದಗಳು.

 3. ನಯನ ಬಜಕೂಡ್ಲು says:

  Nice

 4. ಶಂಕರಿ ಶರ್ಮ says:

  ಉತ್ತಮ ಸಂದೇಶ ವಾಹಕಗಳಾದ ಪೌರಾಣಿಕ ಕಥೆಗಳು ಎಂದಿಗೂ ನವನವೀನ…

 5. S.sudha says:

  ಈ ಕಥೆ ಗೊತ್ತಿಲ್ಲ. ತಿಳಿಸಿದ್ದ ಕ್ಕೆ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: