‘ಮೈಸೂರು ಆಕಾಶವಾಣಿ’ಯೊಂದಿಗೆ ಸುಮಧುರ ಬಾಂಧವ್ಯದ ಬೆಸುಗೆ: ‘ಸಮುದ್ಯತಾ ಕೇಳುಗರ ಬಳಗ!’.
ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ ಕೂಡ ಸಂಪರ್ಕ ಮಾಧ್ಯಮಗಳಲ್ಲಿ “ಆಕಾಶವಾಣಿ” ಇವತ್ತಿನವರೆಗೂ ಕೂಡ ತನ್ನತನವನ್ನು ಕಾಯ್ದುಕೊಂಡಿದೆ. ವರ್ಷದಿಂದ ವರ್ಷಕ್ಕೆ… ಒಂದಲ್ಲ ಒಂದು ರೀತಿಯಲ್ಲಿ….. ಸದಭಿರುಚಿಯ ಕಾರ್ಯಕ್ರಮಗಳ ಸವಿ, ಸಿಹಿ ಹೂರಣದ ಮಹಾಪೂರವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುಗರಿಗೆ ಉಣಬಡಿಸುತ್ತಾ, ತಾನು ಬೆಳೆದು, ಕೇಳುಗ ವರ್ಗದವರನ್ನು ಕೂಡ ಬೆಳೆಸುತ್ತಿರುವ “ಆಕಾಶವಾಣಿ” ಎಂಬ ಪದವನ್ನ ಕೇಳಿದರೆ ಸಾಕು ಮೈಮನಗಳು ರೋಮಾಂಚನಗೊಳ್ಳುತ್ತವೆ!.
ದಿನಂಪ್ರತಿ ಲಕ್ಷಾಂತರ ಕೇಳುಗರ ಕಿವಿ ತಲುಪುವ “ಆಕಾಶವಾಣಿ” ಒಂದು ರೀತಿಯಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಏಕೆಂದರೆ. ನಾವು ದಿನನಿತ್ಯ ನಮ್ಮ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಕಾರ್ಯಕ್ರಮಗಳನ್ನು ಕೇಳಬಹುದು ಜೊತೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಮೌಲಿಕವಾಗಿರುತ್ತದೆ. ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಷಾ ಸೊಗಡನ್ನು ಪರಿಚಯಿಸುವ, ಬಿಂಬಿಸುವ ಪ್ರಯತ್ನ ಮಾಡುತ್ತದೆ. ಆಕಾಶವಾಣಿ ಸಮಯಕ್ಕೆ ಹೆಚ್ಚು ಆದ್ಯತೆ ಕೊಡುತ್ತದೆ. “ಬಹುಜನ ಹಿತಾಯ, ಬಹುಜನ ಸುಖಾಯ”– ಎಂಬಧ್ಯೇಯ ವಾಕ್ಯವನ್ನು ಹೊಂದಿರುವ ಆಕಾಶವಾಣಿ ಅಬಾಲವೃದ್ಧರಾದಿಯಾಗಿ ಸಾಹಿತ್ಯ, ಸಂಗೀತ, ಆರೋಗ್ಯ, ಕೃಷಿ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮಾಹಿತಿ ಜೊತೆಗೆ ಮನರಂಜನೆಯನ್ನು ಕೂಡ ನೀಡುತ್ತಿದೆ.
ನನ್ನ ದಿನಚರಿ ಪ್ರಾರಂಭವಾಗುವುದೇ ಆಕಾಶವಾಣಿಯನ್ನು ಕೇಳುವುದರ ಮೂಲಕ. ಆಕಾಶವಾಣಿಯ ಸಿಗ್ನೇಚರ್ ಟ್ಯೂನ್ ನಿಂದ ಹಿಡಿದು……. ಬೆಳಗಿನ ಕಾರ್ಯಕ್ರಮಕ್ಕೆ ಶುಭ ಕೋರುವ ಉದ್ಘೋಷಕರ ಮಾತುಗಳು…… ನಂತರ ಆ ದಿನದ ಕಾರ್ಯಕ್ರಮದ ವಿವರ ಪಟ್ಟಿ. ಇನ್ನು ರಾತ್ರಿ 11.05 ಇಂಗ್ಲಿಷ್ ನ್ಯೂಸ್ ಕೇಳಿ “ಜೈ ಹಿಂದ್” ಎಂದು ಘೋಷಿ ಸಿದ ನಂತರ ನಾನು ನಿದ್ದೆಗೆ ಜಾರುತ್ತೇನೆ!!. ಇದೆಲ್ಲವೂ ಕೂಡ ದಿನನಿತ್ಯ ಸಾಗುತ್ತಲೆ ಇರುತ್ತದೆ.
ಇಂತಹ ಸದಭಿರುಚಿಯ ಕಾರ್ಯ ಕ್ರಮಗಳನ್ನು ಕೇವಲ ಕೇಳದೆ, ಒಂದಿಷ್ಟು ಜನರೊಟ್ಟಿಗೆ ಒಂದು ಸಂಘದ ಮೂಲಕ ಮತ್ತಷ್ಟು ಕೇಳುಗರನ್ನು ಸೇರ್ಪಡೆ ಮಾಡುತ್ತಾ…… ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ…….. ಆಕಾಶವಾಣಿಯ ಜೊತೆಗೆ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧವನ್ನು ಇಟ್ಟುಕೊಳ್ಳುವುದರ ಮೂಲಕ ಉದ್ಯಾನ ನಗರಿ ಮೈಸೂರಿನಲ್ಲಿ “ಸಮುದ್ಯತಾ ಕೇಳುಗರ ಬಳಗ” ಉದಯವಾಗಿದೆ.
ಏನಿದು ಸಮುದ್ಯತಾ ಕೇಳುಗರ ಬಳಗ?!.
ನೂರಕ್ಕೂ ಹೆಚ್ಚು ಸದಸ್ಯರಿರುವ ಈ ಬಳಗದ ಪ್ರಾರಂಭ ಅಚ್ಚರಿ ಮೂಡಿಸಿ ಈಗ ರಾಜ್ಯದಲ್ಲೇ ಮಾದರಿಯಾಗಿದೆ. ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮ, ಅಥವಾ ಪತ್ರಗಳ ಮೂಲಕ ಹೆಸರುಗಳು ಹೆಚ್ಚಾದಾಗ ಹಿರಿಯ ಕೇಳುಗರಾದ ಅಂದ ಸಂಗೀತ ಶಿಕ್ಷಕಿಯಾಗಿದ್ದ ಎಂ ಕೆ ರುಕ್ಮಿಣಿ ಮೇಡಂ ರವರು ಸಂಘ ಸ್ಥಾಪಿಸುವತ್ತ ಆಸಕ್ತಿ ವಹಿಸಿದರು. ಆಕಾಶವಾಣಿ ಯವರೊಂದಿಗೆ ಮಾತನಾಡಿ ಮತ್ತಷ್ಟು ಕೇಳುಗರ ಪಟ್ಟಿ ಪಡೆದುಕೊಂಡರು. ಕೃಷ್ಣಮೂರ್ತಿಪುರಂನ ಅವರ ಮನೆ ಸಂಘದ ಕಚೇರಿ ಆಯ್ತು!. ಇಲ್ಲಿಗೆ ಸಮಯ ಸಿಕ್ಕಾಗ ಭೇಟಿ ನೀಡಿ ಪರಸ್ಪರ ಪರಿಚಯ ಮಾಡಿಕೊಂಡು, ಪ್ರಾರಂಭದಲ್ಲಿ 10 ರಿಂದ 20 ಜನ ಸ್ನೇಹಿತರಿದ್ದ ಬಳಗ ಈಗ ನೂರಕ್ಕೂ ಹೆಚ್ಚು ಖಾಯಂ ಕೇಳುಗ ವರ್ಗವನ್ನು ಹೊಂದಿದೆ. ನೊಂದಾಯಿತ ಸಂಘಕ್ಕೆ ಎಂ ಕೆ ರುಕ್ಮಿಣಿ ಮೇಡಂ ರವರು “ಸಮುದ್ಯತಾ ಕೇಳುಗರ ಬಳಗ” ಎಂದು ಹೆಸರಿಡಲಾಯಿತು. ಈಗ 13 ವರ್ಷ ಪೂರೈಸಿರುವ ಬಳಗ ಎಲ್ಲರ ಮನ ಸೆಳೆದಿದೆ.
ಬಳಗದ ಉದ್ದೇಶ ಕಾರ್ಯ ಚಟುವಟಿಕೆ:-
ಕೇವಲ ಆಕಾಶವಾಣಿಯನ್ನು ಕೇಳುವುದಷ್ಟೇ ಅಲ್ಲದೆ ಮತ್ತಷ್ಟು ಕೇಳುಗ ವರ್ಗವನ್ನು ಸೃಷ್ಟಿಸುವುದು, ಜೊತೆಗೆ ಪರಿಸರ ಜಾಗೃತಿ, ಆರೋಗ್ಯ ಕಾಳಜಿ, ತಪಾಸಣಾ ಶಿಬಿರಗಳು, ಸ್ವಚ್ಛತೆಯ ಬಗ್ಗೆ ಅರಿವು, ಮೂಢನಂಬಿಕೆಗಳ ಬಗ್ಗೆ ಅರಿವು, ಹೀಗೆ ಒಂದಿಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಜೊತೆಗೆ ಆಕಾಶವಾಣಿಯವರೊಂದಿಗೆ ಒಡನಾಟ ಇಟ್ಟುಕೊಂಡು ಮತ್ತಷ್ಟು ಕಾರ್ಯಕ್ರಮ ಹೆಚ್ಚಲು ಅವರೊಟ್ಟಿಗೆ ಕೈಜೋಡಿಸುವುದು.
ಬಳಗದ ಸದಸ್ಯರುಗಳು.
ಸುಧಾರಾಜ್, ಭಗವತಿ, ಮೃತ್ಯುಂಜಯ, ಹರಳಹಳ್ಳಿ ಪುಟ್ಟರಾಜ್, ಮಹಾದೇವಸ್ವಾಮಿ, ಕಲಾಪ್ರಸಾದ್, ಅನಂತ ಲಕ್ಷ್ಮಿ ಶ್ರೀಪಾಲ್ ಜೈನ್, ಅನಿತಾ ಅಶೋಕ್, ವೀಣಾ ಶ್ರೀಕಾಂತ್, ಡಾ. ಸುರೇಶ್, ವೈಜಯಂತಿ, ಲಕ್ಷ್ಮಿ ಶಶಿಕುಮಾರ್ ಎ ಡಿ ನಂಜುಂಡಸ್ವಾಮಿ, ಶಿಲ್ಪಿ ರಮೇಶ್, ಚಂದ್ರಕಲಾ, ಲೋಕೇಶ್, ಗಧಾದರ್ ಭಟ್, ಪಾಲಳ್ಳಿ ರಮೇಶ್, ಗಾನಸುಮಾ ಪಟ್ಟಸೋಮನಹಳ್ಳಿ, ಎಂ ಆರ್ ಶ್ರೀಕಂಠನ್, ನಂದೀಶ್ ವಾಲ್ಮೀಕಿ, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರುಗಳಲ್ಲಿ ಹಲವರು ಅನಿವಾರ್ಯ ಕಾರಣಗಳಿಂದ ಬಳಗದಿಂದ ಹೊರ ಉಳಿದಿದ್ದಾರೆ. ಜೊತೆಗೆ ಮತ್ತಷ್ಟು ಜನರು ಸೇರ್ಪಡೆಗೊಂಡಿರುತ್ತಾರೆ.
ಬಳಗದ ಅಧ್ಯಕ್ಷರು, ಕಾರ್ಯದರ್ಶಿಗಳು.
ಬಳಗದ ಮೊದಲ ಅಧ್ಯಕ್ಷರು ಹಾಗೂ ಸಂಸ್ಥಾಪನಾ ಅಧ್ಯಕ್ಷರು ಎಂ ಕೆ ರುಕ್ಮಿಣಿ. ನಂತರದಲ್ಲಿ ಪಾರ್ವತಿವಟ್ಟಂ, ಜಯಲಿಂಗಣ್ಣ, ಟಿ ಎಂ ರಾಜೇಶ್ವರಿ, ಪ್ರಸ್ತುತ ಅಧ್ಯಕ್ಷರಾಗಿ ಶ್ರೀ ಕಣ್ಣೂರು ಗೋವಿಂದಾಚಾರಿ ಇದ್ದಾರೆ. ಅದೇ ರೀತಿ ಕಾರ್ಯದರ್ಶಿಯಾಗಿ ಸುಧಾರಾಜ್ ಪ್ರಾರಂಭದಲ್ಲಿಯು ಪ್ರಸ್ತುತವಾಗಿ ಟಿ ಎನ್ ರಾಜೇಶ್ವರಿ ಅವರು ಇದ್ದಾರೆ.
ಬೇರೆ ಊರುಗಳಲ್ಲಿ ಬಳಗದ ಕಾರ್ಯಕ್ರಮಗಳು
ಮೊದಲೇ ಹೇಳಿದಂತೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ಹೇಳುವುದರ ಜೊತೆಗೆ ಆಕಾಶವಾಣಿಯ ಅಭಿಮಾನಿಗಳು ಇರುವ ಊರಿಗೆ ಹೋಗಿ. ಕಾರ್ಯಕ್ರಮಗಳನ್ನು ಮಾಡುವುದು ಬಳಗದ ಪ್ರಮುಖ ಉದ್ದೇಶವಾಗಿತ್ತು. ಅದರಿಂದಾಗಿ ಪಾಂಡವಪುರದ ಕೆನ್ನಾಳು ಗ್ರಾಮದ ವಾಸುದೇವ ಮೂರ್ತಿ, ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದ ಸೃಷ್ಟಿ ಮಲ್ಲಿಕಾರ್ಜುನ್, ಹಾಗಿನವಾಳು ಗ್ರಾಮದ ನಂದೀಶ್ ವಾಲ್ಮೀಕಿ ಸುರೇಶ್ ಗೆಳೆಯರ ಆಯೋಜಕತ್ವದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಲ್ಲದೆ ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಶಾಲಾ ಮಕ್ಕಳೊಂದಿಗೆ…., ಮೈಸೂರು ತಾಲೂಕು ಕೆಂಚಲಗೂಡು ಗ್ರಾಮದ ಕಲಿಯುವ ಮನೆಯಲ್ಲಿ….., ಮೈಸೂರಿನ ಅಜಿತ ನೆಲೆಯ ಶಾಲೆಯಲ್ಲಿ….,ಅಕ್ಕನ ಬಳಗದಲ್ಲಿ….. ಮುಂತಾದ ಕಡೆ ಪರಿಸರ ಜಾಗೃತಿ, ಆರೋಗ್ಯ ಕಾಳಜಿ, ತಪಾಸಣಾ ಶಿಬಿರಗಳು,ಇನ್ನಿತರ ವಿಷಯಗಳ ಬಗ್ಗೆ ಗ್ರಾಮಗಳ ಜನರೊಂದಿಗೆ ಬೆರೆತು, ಅರಿವು ಮೂಡಿಸಿದ್ದಾರೆ.
ಅನೇಕ ಸಂಪನ್ಮೂಲ ವ್ಯಕ್ತಿಗಳ ಮೂಲಕ ಉಪನ್ಯಾಸ ಕಾರ್ಯಕ್ರಮಗಳು ಕೂಡ ನೆರವೇರಿವೆ. ಈ ರೀತಿ ವರ್ಷಕ್ಕೆ ಮೂರ್ನಾಲ್ಕು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಷ್ಟೇ ಅಲ್ಲದೆ, ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಆಕಾಶವಾಣಿಯಲ್ಲಿ ನಿವೃತ್ತರಾದ ಕಲಾವಿದರು, ಅಧಿಕಾರಿ/ ಸಿಬ್ಬಂದಿ ವರ್ಗದವರನ್ನು ಜೊತೆಗೆ ಕೇಳುಗ ಪ್ರತಿಭೆಗಳ ಸನ್ಮಾನ, ಜೊತೆಗೆ ಅನೇಕ ಬಡ ಪ್ರತಿಭೆಗಳ ಪ್ರತಿಭಾ ಪುರಸ್ಕಾರ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಈ ಮೂಲಕ ನೆರವೇರಿದೆ. ಅಲ್ಲದೆ ಸಮಾಜದಲ್ಲಿ ಎಲೆಮರೆ ಕಾಯಿಯಾಗಿ ಉಳಿದುಕೊಂಡು, ಅಪರೂಪದ ಸಾಧನೆ ಮಾಡಿದ ಅನೇಕ ಸಾಧಕರನ್ನು ಸನ್ಮಾನಿಸಿದ್ದಾರೆ.
ಇಂತಹ ವಿಭಿನ್ನ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಅನೇಕ ಜನರು ಕೂಡ ಭಾಗಿಯಾಗಿದ್ದಾರೆ ಅವರುಗಳಲ್ಲಿ…. ಆಂದೋಲನ ದಿನಪತ್ರಿಕೆಯ ರಾಜಶೇಖರ್ ಕೋಟಿ, ಕನ್ನಡ ಪ್ರಭಾ ಪತ್ರಿಕೆಯ ಅಂಶಿ ಪ್ರಸನ್ನಕುಮಾರ್, ಮಂಡ್ಯ ರಮೇಶ್, ಸವಿಗನ್ನಡ ಪತ್ರಿಕೆಯ ರಂಗನಾಥ್, ಕವಿ/ ಲೇಖಕರುಗಳಾದ ಡಾ ಸಿ ಪಿ ಕೃಷ್ಣಕುಮಾರ್, ಸಿ ನಾಗಣ್ಣ, ಕಬ್ಬಿನಾಲೆ ವಸಂತ ಭಾರದ್ವಾಜ್, ಗುಬ್ಬಿಗೂಡು ರಮೇಶ್, ಈಚನೂರು ಕುಮಾರ್, ಹಿರಿಯ ಪತ್ರಕರ್ತರಾದ ಕೃಷ್ಣ ವಟ್ಟಂ, ಆಕಾಶವಾಣಿಯ ಹಿರಿಯ ವಾರ್ತಾ ವಾಚಕರಾದ ಎ ಆರ್ ರಂಗರಾವ್ ಮುಂತಾದವರು ಭಾಗಿಯಾಗುವುದರ ಮೂಲಕ ತಾವು ಕೂಡ ಆಕಾಶವಾಣಿಯನ್ನು ಕೇಳಿದ್ದರಿಂದ ಪಡೆದುಕೊಂಡ ಅನುಕೂಲ, ಸವಿ ಸವಿ ನೆನಪುಗಳನ್ನು ನಮ್ಮೊಟ್ಟಿಗೆ ಹಂಚಿಕೊಂಡು, ಈ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳಗದ ಮುಂದಿನ ಯೋಜನೆಗಳು.
ಇದೇ ತಿಂಗಳ ಅಂತ್ಯದಲ್ಲಿ (ಫೆಬ್ರವರಿ) ಸಮುದ್ಯತಾ ಕೇಳುಗರ ಬಳಗದ ವಾರ್ಷಿಕೋತ್ಸವವನ್ನು ಆಚರಿಸಲಾಗುವುದು, ಜೊತೆಗೆ ಮೈಸೂರು ಆಕಾಶವಾಣಿಯ ಜೊತೆಗೆ ಮತ್ತಷ್ಟು ಒಡನಾಟ ಇಟ್ಟುಕೊಂಡು ಮತ್ತಷ್ಟು ಸದಭಿರುಚಿಯ ಕಾರ್ಯಕ್ರಮಗಳ ಬಗ್ಗೆ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರೊಂದಿಗೆ ಮಾತನಾಡುವುದಾಗಿಯೂ, ಹಾಗೂ ಸಂಘದ ಸಂಸ್ಥಾಪನಾ ಅಧ್ಯಕ್ಷರಾದ ದಿ ಎಂ ಕೆ ರುಕ್ಮಿಣಿ ರವರ ಹೆಸರಿನಲ್ಲಿ “ಸದ್ಭಾವನಾ ಪ್ರಶಸ್ತಿಯನ್ನು” ನೀಡುವುದಾಗಿ ಪ್ರಸ್ತುತ ಬಳಗದ ಅಧ್ಯಕ್ಷರಾದ ಶ್ರೀ ಕಣ್ಣೂರು ಗೋವಿಂದ ಚಾರಿ ತಿಳಿಸಿದ್ದಾರೆ.
ಮತ್ತಷ್ಟು ಕೇಳುಗರ ಸೇರ್ಪಡೆ.
ಈ ಬಳಗದಲ್ಲಿ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ರೈತರು, ಕಾರ್ಮಿಕರು ಎಲ್ಲಾ ವರ್ಗದ, ಎಲ್ಲಾ ವಯೋಮಾನದ ಕೇಳುಗರು ಇದ್ದಾರೆ. ಮತ್ತಷ್ಟು ಖಾಯಂ ಕೇಳುಗರನ್ನು ನಮ್ಮ ಬಳಗಕ್ಕೆ ಸೇರಿಸಿ, ನಮ್ಮ ಬಳಗ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಬಳಗದ ಕಾರ್ಯದರ್ಶಿಗಳಾದ ಟಿ ಎನ್ ರಾಜೇಶ್ವರಿಯವರು ಆಶಯ ವ್ಯಕ್ತಪಡಿಸಿದ್ದಾರೆ.
ರಾಜಕ್ಕೆ ಮೊದಲ ಕೇಳುಗರ ಬಳಗ ಈ ಸಮುದ್ಯತಾ!.
ಹಲವು ವರ್ಷಗಳ ಹಿಂದೆ ಬೆಂಗಳೂರಿನ ಹಿರಿಯ ಆಕಾಶವಾಣಿ ಅಧಿಕಾರಿಯಾಗಿದ್ದ ಎ ಎಸ್ ಚಂದ್ರ ಮೌಳಿ ರವರು ಶ್ರೋತ್ರು ಸಂಶೋಧನೆ ವಿಭಾಗವನ್ನು ಪ್ರಾರಂಭಿಸಿ, ಈ ಮೂಲಕ ಅನೇಕ ಸದಭಿರುಚಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕೇಳುಗರೊಂದಿಗೆ ಸಂವಾದ, ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಲ್ಲದೆ ಕೆಲವು ವಾಟ್ಸಾಪ್ ಗಳಲ್ಲಿ ಕೇಳುಗರ ಬಳಗ ಇವೆ. ಇವುಗಳನ್ನು ಹೊರತುಪಡಿಸಿ, ನಂದೊಯಿತ ಕೇಳುಗರ ಬಳಗ ಈ ನಮ್ಮ ಸಮುದ್ಯತಾ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬಳಗದ ಹಿರಿಯ ಸದಸ್ಯರಾದ ಶ್ರೀಮತಿ ಸುಧಾರಾಜ್ ರವರು.
ಬಳಗದೊಂದಿಗೆ ಸ್ಪಂದಿಸುವ ಆಕಾಶವಾಣಿಯ ಹಿರಿಯ ಅಧಿಕಾರಿಗಳು.
ಈ ಬಳಗ ಪ್ರಾರಂಭವಾದಾಗ ಆಕಾಶವಾಣಿಯಲ್ಲಿ ಕೆ ಎಸ್ ನಿರ್ಮಲಾದೇವಿ, ವಿಜಯಹರನ್, ಆನಂದ್ ವಿ ಪಾಟೀಲ್, ಎಚ್ ಶ್ರೀನಿವಾಸ್, ಆಕಾಶವಾಣಿಯ ನಿರ್ದೇಶಕರಾಗಿ/ ಕಾರ್ಯಕ್ರಮ ಕಾರ್ಯಕ್ರಮ ಮುಖ್ಯಸ್ಥ ರಾಗಿದ್ದರು. ಈಗ ಪ್ರಸ್ತುತ ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಶ್ರೀ ಎಸ್ ಎಸ್ ಉಮೇಶ್ ರವರು ಕೋವಿಡ್- 19 ಸಂದರ್ಭದಲ್ಲಿ ಬಳಗದೊಂದಿಗೆ ಸೇರಿ ಕೋವಿಡ್ಗೆ ತುತ್ತಾದ ಸಂತ್ರಸ್ತರಿಗೆ ಆಹಾರದ ಕಿಟ್ಟನ್ನು ವಿತರಣೆ ಮಾಡಿದ್ದಾರೆ. ಜೊತೆಗೆ ಆಕಾಶವಾಣಿ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಬಳಗದೊಂದಿಗೆ ಸೇರಿ ಆಚರಿಸಿದ್ದು ಒಂದು ವಿಶೇಷ. ಅಂದು ಸಾರ್ವಜನಿಕರಿಗಾಗಿ ಆಕಾಶವಾಣಿಯ ಸ್ಟುಡಿಯೋ ವೀಕ್ಷಣೆಗೂ ಕೂಡ ಅವಕಾಶ ನೀಡಿದ್ದರು. ಜೊತೆಗೆ ವನಮಹೋತ್ಸವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಇಂತಹ ಬಳಗದಲ್ಲಿ ನಾನು ಕೂಡಭಾಗಿಯಾಗುತ್ತಿದ್ದೇನೆ ಎನ್ನುವುದು ಕೂಡ ಹೆಮ್ಮೆಯ ವಿಷಯ.
ಆಕಾಶವಾಣಿಯ ಮೂಲಕ ಕ್ರಿಕೆಟ್ ಕಾಮೆಂಟರಿ, ದಸರಾ ವೀಕ್ಷಕ ವಿವರಣೆ, ತಲಕಾವೇರಿ ತೀರ್ಥೋದ್ಭವ, ಚಲನಚಿತ್ರ ಧ್ವನಿ ವಾಹಿನಿ, ಎಲ್ಲಾ ಜಿಲ್ಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅಥವಾ ಕನ್ನಡ ರಾಜ್ಯೋತ್ಸವಗಳ ಬಾನುಲಿ ವರದಿ, ನಾಡು- ನುಡಿ ಸಂಸ್ಕೃತಿಯ ಬಗೆಗಿನ ನೇರ ವೀಕ್ಷಕ ವಿವರಣೆಗಳು…… ಅದರಲ್ಲೂ ಕನ್ನಡದ ಹಳೆಯ ಹಾಗೂ ಹೊಸ ಚಿತ್ರಗೀತೆಗಳನ್ನು ಹೇಳುವುದು ಒಂದುರೀತಿಯಲ್ಲಿ ಸೊಗಸು!. ವರ್ಣಿಸಲದಳ ಅನುಭವ ನೀಡುತ್ತದೆ!!.
ಈ ನಿಟ್ಟಿನಲ್ಲಿ ಈ “ಸಮುದ್ಯತಾ ಕೇಳುಗರ ಬಳಗ” ಕೇವಲ ಆಕಾಶವಾಣಿಯನ್ನು ಕೇಳುವುದಷ್ಟೇ ಅಲ್ಲದೆ ಮತ್ತಷ್ಟು ಲವಲವಿಕೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಭಾರತ ದಲ್ಲೇ ಪ್ರಥಮ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಆಕಾಶವಾಣಿಯ ಜೊತೆಗೆ ಕಾರ್ಯಕ್ರಮಗಳೊಟ್ಟಿಗೆ, ಅಧಿಕಾರಿಗಳೊಂದಿಗೆ ಮತ್ತಷ್ಟು ಸುಮಧುರ ಬಾಂಧವ್ಯವನ್ನು ಇಟ್ಟುಕೊಂಡು ಮುಂದೆ ಸಾಗಲಿ ಎಂಬುದೇ ನಮ್ಮ ಆಶಯ.
ಒಂದು ರೀತಿಯಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತ ಬೆಳೆದಿರುವವರು ಮತ್ತು ಬೆಳೆಯುತ್ತಿರುವವರು ಕೂಡ ಇದ್ದಾರೆ.
ಈಗ ತಂತ್ರಜ್ಞಾನ ಮುಂದುವರೆದಿರುವುದರಿಂದ ಮೊಬೈಲ್ ನಲ್ಲೆ ಆಕಾಶವಾಣಿಯ ಎಲ್ಲಾಕಾರ್ಯಕ್ರಮಗಳನ್ನು ಕೂಡ ಸುಲಭವಾಗಿ ಕೇಳಬಹುದು.
ವಿಶ್ವ ರೇಡಿಯೋ ದಿನಾಚರಣೆಯನ್ನು ಫೆಬ್ರವರಿ 13 ರಂದು ಆಚರಿಸಲಾಗಿದೆ. ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ನಿಲಯದ ನಿರ್ದೇಶಕರಿಗೆ, ಸಮಸ್ತ ಸಿಬ್ಬಂದಿ ವರ್ಗದವರಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ,ಕೇಳುಗರಿಗೆ….. ವಿಶ್ವ ರೇಡಿಯೋ ದಿನಾಚರಣೆ ಹಾರ್ದಿಕ ಶುಭಾಶಯಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಆಕಾಶವಾಣಿಯೊಡನೆ ಸಮಧುರ ಬಾಂಧವ್ಯ.. ಅದರ ವಿಸ್ತಾರ ಅಭಿಮಾನಿ ಬಳಗ ..ತಮ್ಮ ಆಶಯ ಹಂದಿರುವ ಲೇಖನ ಬಹಳ ಆಪ್ತ ವಾಗಿ ಉತ್ತಮ ನಿರೂಪಣೆ ಯೊಂದಿಗೆ ಬಂದಿದೆ…ಧನ್ಯವಾದಗಳು ಸಾರ್
It is very programme all the best
ಚೆನ್ನಾಗಿದೆ ಲೇಖನ. ಇಂದಿಗೂ ಆಕಾಶವಾಣಿಯನ್ನು ಕೇಳುವ ಮಜವೇ ಬೇರೆ.
ನಮ್ಮೂರಿನ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರದಲ್ಲಿ ಆಗಾಗ ಕಾರ್ಯಕ್ರಮಗಳನ್ನು ನೀಡುತ್ತಾ, ಅದರೊಳಗೆ ಒಂದಾಗುತ್ತಾ.. ರೇಡಿಯೋ ಆನ್ ಮಾಡುವುದರ ಮೂಲಕವೇ ದಿನವನ್ನು ಪ್ರಾರಂಭ ಮಾಡುತ್ತಾ, ಮನೆಯ ಒಂದು ಸದಸ್ಯನಂತೆ ಭಾವನೆ ಮೂಡಿಸುವ ರೇಡಿಯೋದ ಜೊತೆ ವರ್ಷಗಟ್ಟಲೆ ನಡೆದಿರುವ ನನಗೆ ತಮ್ಮ ಲೇಖನ ಆತ್ಮೀಯವೆನಿಸಿತು…ತಮ್ಮ ಸಮುದ್ಯತಾ ಕೇಳುಗರ ಬಳಗದ ಕಾರು ಶ್ಲಾಘನೀಯ… ಧನ್ಯವಾದಗಳು.
“ಸಮುದ್ಯತಾ” ಕೇಳುಗರ ಬಳಗದ ಕಾರ್ಯವೈಖರಿ, ಮತ್ತು ಸದಾಶಯಗಳನ್ನು ಬಹಳ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದೀರಿ. ಮತ್ತಷ್ಟು ಸದಸ್ಯರ ಸೇಪರ್ಡೆಯಾಗಲಿ, ಆಕಾಶವಾಣಿ ಎಂದೆಂದಿಗೂ ಉತ್ತಮ ಶ್ರವಣ ಮಾಧ್ಯಮವೇ ಹೌದು. ಅದು ಹಲವಾರು ಜನರ ಅವಿಭಾಜ್ಯ ಅಂಗವಾಗಿಯೇ ಇದೆ. ಅಭಿನಂದನೆಗಳು.