ಪೋರ್ಚುಗಲ್ಲಿನ ಎಲುಬುಗಳ ಚಾಪೆಲ್

Share Button

ಎಲುಬುಗಳಿಂದಲೇ ಅಲಂಕರಿಸಲ್ಪಟ್ಟ ಚಾಪೆಲ್ಲನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲವೇ? ಹಾಗಿದ್ದಲ್ಲಿ ಬನ್ನಿ, ಪೋರ್ಚುಗಲ್ಲಿನ ಇವೋರಾ ಪಟ್ಟಣಕ್ಕೆ ಹೋಗೋಣ. ಇಲ್ಲೊಂದು ಚಾಪೆಲ್ಲನ್ನು ಎಲುಬು ಮತ್ತು ತಲೆಬುರುಡೆಗಳಿಂದಲೇ ಅಲಂಕರಿಸಿದ್ದಾರೆ. ಮೊದಲಿಗೆ ಚಾಪೆಲ್ ಮತ್ತು ಚರ್ಚ್‌ಗಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುವ ಸ್ಥಳಗಳು ಬೆಸಿಲಿಕಾ, ಕ್ಯಾಥಿಡ್ರಲ್, ಚರ್ಚ್, ಚಾಪೆಲ್ ಎಂದೆಲ್ಲಾ ಕರೆಯಲ್ಪಡುತ್ತವೆ. ಬೆಸಿಲಿಕಾ, ಕ್ಯಾಥಿಡ್ರಿಲ್‌ಗಳಲ್ಲಿ ಪೋಪ್ ಇದ್ದು, ಈ ಧಾರ್ಮಿಕ ಸ್ಥಳದ ನಿರ್ವಹಣೆ ಮಾಡುತ್ತಾg. ಚರ್ಚ್‌ಗಳು ಬಿಷಪ್‌ಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಚಾಪೆಲ್ ಪುಟ್ಟದಾದ ಒಂದು ಪ್ರಾರ್ಥನಾ ಸ್ಥಳವಾಗಿದ್ದು ಸ್ಥಳೀಯರೇ ಇದರ ನಿರ್ವಹಣೆ ಮಾಡುವರು. ಕೆಲವು ಬಾರಿ ಚಾಪೆಲ್‌ಗಳು ಚರ್ಚ್‌ನ ಒಂದು ಭಾಗವಾಗಿರಲೂಬಹುದು. ಇವೋರಾ ಪಟ್ಟಣದಲ್ಲಿ ಪ್ರಖ್ಯಾತವಾದ ಒಂದು ಚಾಪೆಲ್ ಇದೆ. ಚಾಪೆಲ್ ಒಳಗೆ ಪ್ರವೇಶಿಸುತ್ತಿದ್ದ ಹಾಗೇ ಮುಖ್ಯದ್ವಾರದ ಮೇಲೆ ಕೆತ್ತಲಾದ ಒಂದು ಸಾಲು ನಮ್ಮ ಗಮನ ಸಳೆಯುತ್ತದೆ “We bones are here, waiting for you”. ನಾವು ನಿಮಗಾಗಿ ಕಾಯುತ್ತಲಿರುವ ಎಲುಬುಗಳು, ಅರೆ, ಎಲ್ಲಿಗೆ ಹೊರಟಿರಿ? ಗಾಬರಿಯಾಗಬೇಡಿ ಬನ್ನಿ ಈ ಚಾಪೆಲ್ಲಿನ ಒಳಹೊಕ್ಕು ನೋಡೋಣ. ಈ ಚಾಪೆಲ್ 61.4 ಅಡಿ ಉದ್ದವಿದ್ದು, ೩೬ ಅಡಿ ಅಗಲವಿದೆ. ಪ್ರಾರ್ಥನಾ ಕೊಠಡಿಯಲ್ಲಿ ಎಂಟು ಕಂಬಗಳಿದ್ದು, ಅವುಗಳ ಮೇಲೆ ಹಾಗೂ ಆ ಕೊಠಡಿಯ ಗೋಡೆಗಳ ಮೇಲೆಯೂ ಎಲುಬುಗಳನ್ನು ಹಾಗೂ ತಲರಬುರುಡೆಗಳನ್ನು ಜೋಡಿಸಲಾಗಿದೆ. ಬದುಕು ಶಾಶ್ವತವಲ್ಲ, ನಶ್ವರ ಎಂಬ ತತ್ವವನ್ನು ಸಾರುತ್ತಲಿದೆ ಈ ಚಾಪೆಲ್. ‘ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮ ಮನೆ‘ ಎನ್ನವ ಕವಿವಾಣಿಗೆ ಸಾಕ್ಷಿಯಂತೆ ನಿಂತಿವೆ ಈ ಪದಗಳು.

ಫ್ರಾನ್ಸಿಸ್ ಸನ್ಯಾಸಿಗಳು ನಿರ್ಮಿಸಿರುವ ಎಲುಬುಗಳಿಂದ ಅಲಂಕೃತವಾದ ಈ ವಿಶಿಷ್ಟವಾದ ಚಾಪೆಲ್‌ನ ರಹಸ್ಯವಾದರೂ ಏನು? ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಚರ್ಚ್‌ನ ಸುತ್ತಲೂ ಇರುವ ಸ್ಥಳದಲ್ಲಿ ಶವಗಳನ್ನು ಹೂಳುವುದು ಸಂಪ್ರದಾಯ. ಕೆಲವು ಬಾರಿ ಶವಗಳನ್ನು ಹೂಳಲು ಸ್ಥಳದ ಅಭಾವ ಉಂಟಾದಾಗ, ಪುರಾತನ ಸಮಾಧಿಗಳನ್ನು ಅಗೆದು ಎಲುಬುಗಳನ್ನು ಹೊರತೆಗೆದು, ಬೇರೆ ಶವಗಳನ್ನು ಹೂಳುತ್ತಿದ್ದರು. ಹೀಗೆ ಸುಮಾರು 5,000 ಸಮಾಧಿಗಳಿಂದ ಹೊರ ತೆಗೆದ ಎಲುಬುಗಳಿಂದ ಚಾಪೆಲ್ಲನ್ನು ಅಲಂಕರಿಸಲಾಗಿದೆ. ಗೋಡೆಗಳ ಮೆಲೆ ಕೆಲವು ಅರ್ಥಪೂರ್ಣವಾದ ಉಕ್ತಿಗಳೂ ಇವೆ ‘‘The day that I die is better than the day I was born’’. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಸಾವು ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯ ತೊಟ್ಟಿಲಿನಿಂದ ಸಮಾಧಿಯವರೆಗೆ ನಿರಂತರ ಪಯಣ ಬೆಳಸುವನು. ಅವನು ಸಾಗುವ ಹಾದಿಯಲ್ಲಿ ಕಲ್ಲು ಮುಳ್ಳುಗಳಿದ್ದರೂ ಗುರಿ ತಲುಪುವ ಛಲ ಇದ್ದಲ್ಲಿ ಹುಟ್ಟಿಗಿಂತ ಸಾವೇ ಮಹತ್ವ ಪಡೆಯುವುದಲ್ಲವೇ? ‘ಶರಣರ ಸಾವು ಮರಣದಲ್ಲಿ ನೋಡು’, ಎನ್ನುವ ನಾಣ್ಣುಡಿಯಂತೆ ನಾಲ್ಕು ದಿನದ ಬಾಳಿನಲ್ಲಿ ಏನಾದರೂ ಸಾಧನೆ ಮಾಡಿದಲ್ಲಿ, ಅವನ ಬದುಕು ಸಾರ್ಥಕ. ಅಲ್ಲಿ ಮತ್ತೊಂದು ಉಕ್ತಿ ಕೆತ್ತಲಾಗಿತ್ತು – I die in the Light’,ಯೇಸುವಿನಂತೆ ಬದುಕಿನ ಪಯಣದಲ್ಲಿ ಬೆಳಕು ಅರಸುತ್ತಾ, ಪರರಿಗೆ ಬೆಳಕು ನೀಡುತ್ತಾ, ಕೊನೆಗೆ ನಾವೇ ಬೆಳಕಾಗಿ ಬಿಡಬೇಕು.

ಚಾಪೆಲ್‌ನ ಹೃದಯ ಭಾಗದಲ್ಲಿ ಶಿಲುಬೆಗೇರಿಸಿದ ಯೇಸುವಿನ ಮೂರ್ತಿಯಿದ್ದು, ಸನಿಹದಲ್ಲಿ ತಾಯಿ ಮಗನ ಎರಡು ಅಸ್ಥಿ ಪಂಜರಗಳಿವೆ. ಪ್ರಾಪಂಚಿಕ ಭೋಗದಲ್ಲಿ ಮುಳುಗಿರುವ ಮಾನವನನ್ನು ಎಚ್ಚರಿಸಲು ಈ ಅಸ್ಥಿ ಪಂಜರಗಳನ್ನು ಅಲ್ಲಿಟ್ಟಿದ್ದಿರಬಹುದು. ಅವು ಹೇಳುವ ಮಾತು ಕೇಳಿಸಿಕೊಳ್ಳಿ – ‘ನೋಡು ನಮ್ಮನ್ನು, ಬರಿಗೈಲಿ ಬಂದೆವು ಬರಿಗೈಲಿ ಹೊರಟೆವು. ನೀವು ಸಂಪಾದಿಸಿದ ಧನ, ಕನಕ, ಅಂತಸ್ತೆಲ್ಲವನ್ನು ತೊರೆದು ಹೊರಡಲು ಸಿದ್ಧನಾಗಿರು.’ ಸದಾ ಅಧಿಕಾರ, ಸಂಪತ್ತನ್ನು ಬೇಢುವ ಜನರಿಗೆ, ಈ ಐಹಿಕ ಸುಖ ಸಂಪತ್ತು ಕ್ಷಣಿಕ ಎಂದು ತಿಳಿಸುವ ನೀತಿಪಾಠ ಇದು.

Chapel of Bones,Evora Portugal ( PC:Internet)


ಎಲುಬಿನ ಇತಿಹಾಸವೂ ರೋಮಾಂಚಕ – ಬೈಬಲ್ಲಿನಲ್ಲಿ ಬರುವ ಕಥೆಯೊಂದು ಹೀಗಿದೆ. ಸೃಷ್ಟಿಯ ಮೊದಲ ಪುಟದಲ್ಲಿ ಬರುವ ಸಂಗತಿಯಿದು – ನಮ್ಮೆಲ್ಲರ ತಂದೆಯಾದ ದೇವರು ಈಡನ್ ತೋಟದಲ್ಲಿ ಆಡಮ್ ಎಂಬ ಮೊದಲ ಮಾನವನನ್ನು ಸೃಷ್ಟಿಸಿದ, ನಂತರದಲ್ಲಿ ಆಡಮ್ ತನ್ನ ಪಕ್ಕೆಲುಬಿನಿಂದ ಈವ್ ಎಂಬ ಹೆಣ್ಣನ್ನು ಸೃಷ್ಟಿಸಿದ. ಹೀಗೆ ಒಂದು ಎಲುಬಿನಿಂದ ಒಂದು ಜೀವಿಯನ್ನು ಸೃಷ್ಟಿ ಮಾಡಲಾಯಿತು ಎಂಬುದು ಒಂದು ಐತಿಹ್ಯ.

ಯೇಸು ಯಹೂದಿ ಧರ್ಮವನ್ನು ಬಿಟ್ಟು ಕ್ರಿಶ್ಚಿಯಾನ್ ಧರ್ಮವನ್ನು ಆರಂಭಿಸಿದಾಗ, ಯಹೂದಿಗಳ ಕೋಪ ನೆತ್ತಿಗೇರಿತ್ತು. ಆಗ ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಸ್ಮಶಾನಗಳಲ್ಲಿ ಸೇರಿಕೊಂಡು ಸಮಾಧಿಗಳ ಮಧ್ಯೆ ಧಾರ್ಮಿಕ ಸಭೆಗಳನ್ನು ನಡೆಸುತ್ತಿದ್ದರಂತೆ. ಆಗ ಎಲುಬುಗಳನ್ನು ಪಾವಿತ್ರ್ಯತೆಯ ಸೂಚಕಗಳಾಗಿ ಬಳಸಿದರಂತೆ. ಮತ್ತೊಂದು ಸ್ವಾರಸ್ಯಕರವಾದ ಸಂಗತಿ ಇದೆ – ಮಹಾತ್ಮರ ಎಲುಬು, ಹಲ್ಲು, ಕೂದಲುಗಳನ್ನು ಬೌದ್ದರ ಪಗೊಡಾಗಳಲ್ಲಿ, ಮುಸ್ಲಿಮರ ಮಸೀದಿಗಳಲ್ಲಿ ಇಟ್ಟು ಪೂಜಿಸುವ ಪರಂಪರೆಯೂ ಬೆಳೆದು ಬಂದಿದೆ.

ಇನ್ನೊಂದು ಸಂಗತಿಯನ್ನು ಕೇಳೋಣ ಬನ್ನಿ – ಯೇಸುವನ್ನು ಶಿಲುಬೆಗೇರಿಸಲು ಗೋಲ್‌ಗೊತ್ತಾ ಎಂಬ ತಲೆಬುರುಡೆಯಾಕಾರದ ಬೆಟ್ಟದ ಮೇಲೆ ಎಳೆದೊಯ್ಯಲಾಯಿತು. ಈ ಬೆಟ್ಟದ ಹೆಸರಿನಲ್ಲಿಯೇ ಅಡಗಿದೆ ತಲೆಬುರುಡೆ ಎಂಬರ್ಥ. ಅಂದಿನ ಅರಸರ ಕಾಲದಲ್ಲಿ ದೇಶದ್ರೋಹಿಗಳನ್ನು, ಧರ್ಮದ್ರೋಹಿಗಳನ್ನು ಈ ಬೆಟ್ಟದ ಮೇಲೆ ಶಿಲುಬೆಗೇರಿಸುತ್ತಿದ್ದುದರಿಂದ, ಅಲ್ಲಿ ಹಲವು ತಲೆಬುರುಡೆಗಳು ಬಿದ್ದುದರಿಂದ ಗೋಲ್‌ಗೊತ್ತಾ ಎಂಬ ಹೆಸರು ಬಂದಿರಬಹುದೆಂದು ಊಹಿಸುತ್ತಾರೆ. ಕೆಲವು ಚರ್ಚ್‌ಗಳನ್ನು ಹುತಾತ್ಮರ ಸಮಾಧಿಗಳ ಮೇಲೆಯೇ ನಿರ್ಮಾಣ ಮಾಡಿದ ಘಟನೆಗಳೂ ದಾಖಲಾಗಿವೆ.

ಯಾವುದೇ ಜೀವಿ ಮರಣ ಹೊಂದಿದ ಬಳಿಕ ಕೊನೆಗೆ ಉಳಿಯುತ್ತಿದ್ದುದು ಕೇವಲ ಎಲುಬುಗಳು, ಹಾಗಾಗಿ ಈ ಮೂಳೆಗಳಲ್ಲಿ ಆತ್ಮ ಇದೆ ಎಂಬ ನಂಬಿಕೆಯೂ ಕೆಲವು ಜನಾಂಗದವರಲ್ಲಿತ್ತು. ಕೆಲವು ಪೌರಾಣಿಕ ಕಥೆಗಳಲ್ಲಿ ಮಾಟ ಮಂತ್ರದಿಂದ ಅಸ್ಥಿ ಪಂಜರಗಳಿಗೆ ಪುನಃ ಪ್ರಾಣ ನೀಡಿ, ಅವರು ಜೀವಂತವಾಗುವಂತೆ ಮಾಡಿದ ದೃಷ್ಟಾಂತಗಳೂ ಇವೆ. ಈ ಮೂಳೆಗಳಲ್ಲಿ ವಿಶೇಷವಾದ ಮಾಂತ್ರಿಕ ಶಕ್ತಿಯೂ ಇದೆ ಎಂಬ ನಂಬಿಕೆ ಹಲವು ಪ್ರಾಚೀನ ನಾಗರೀಕತೆಗಳಲ್ಲಿ ಮನೆ ಮಾಡಿತ್ತು. ಮಾಟಗಾತಿಯರ ಬಳಿ ಮಾಟ ಮಾಡುವ ಸಾಧನ ಒಂದು ಕಾಲಿನ ಅಥವಾ ಕೈನ ಎಲುಬು ಆಗಿರುತ್ತಿತ್ತು.

ಭಾರತೀಯ ಸಂಸ್ಕೃತಿಯಲ್ಲೂ ತಲೆಬುರುಡೆಗಳನ್ನು ಪವಿತ್ರವಾದ ಅವಶೇಷಗಳನ್ನಾಗಿ ಬಳಸಿರುವ ದೃಷ್ಟಾಂತಗಳನ್ನು ಕಾಣುತ್ತೇವೆ. ರುಂಡಮಾಲೆ ಧರಿಸಿದ ಶಿವ ಕಾಲವನ್ನೇ ಗೆದ್ದು ಮಹಾಕಾಲನಾಗಿದ್ದಾನೆ. ಇನ್ನು ಶಕ್ತಿಯ ಅವತಾರಗಳಾದ ಕಾಳಿಮಾತೆ, ಚಾಮುಂಡಿ, ದುರ್ಗೆಯರೂ ರುಂಡಮಾಲೆಯನ್ನು ಧರಿಸಿ ದುಷ್ಟಸಂಹಾರ ಮಾಡುವುದೂ ಒಂದು ಧಾರ್ಮಿಕ ನಂಬಿಕೆಯಾಗಿದೆ.
ಪೋರ್ಚುಗಲ್ಲಿನ ಇವೋರಾ ಪಟ್ಟಣದಲ್ಲಿರುವ ಎಲುಬಿನ ಚಾಪೆಲ್ ನೋಡಿದಾಗ ಮನದಲ್ಲಿ ಮೂಡಿದ ಚಿಂತನೆಗಳ ಮಾಲೆ ಇದು.

-ಡಾ. ಗಾಯತ್ರಿದೇವಿ ಸಜ್ಜನ್ ,ಶಿವಮೊಗ್ಗ.

5 Responses

 1. ನಿಮ್ಮ ಚಿಂತನಾಮಾಲಿಕೆಯ ಲೇಖನ ಒಳ್ಳೆಯ ಮಾಹಿತಿಯನ್ನು ಕೊಟ್ಟಿದೆ ಮೇಡಂ.

 2. ನಯನ ಬಜಕೂಡ್ಲು says:

  ಮಾಹಿತಿಪೂರ್ಣ ಲೇಖನ

 3. ವಂದನೆಗಳು, ಲೇಖನವನ್ನು ಓದಿ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿರುವ ಸಹೋದಯರಿಗೆ ನನ್ನ ಅನಂತಾನಂತ ವಂದನೆಗಳು

 4. padmini kadambi says:

  ಚೆನ್ನಾಗಿದೆ

 5. Padma Anand says:

  ರುದ್ರ ರೋಚಕ ಸಂಗತಿಗಳನ್ನೊಳಗೊಂಡ ಮಾಹಿತಿಭರಿತ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: