ಮರುಬಳಕೆ – ಒಂದು ಚಿಂತನೆ

Share Buttonಮರುಬಳಕೆ ಎಂಬ ಕಲ್ಪನೆ ಇಲ್ಲದಿದ್ದರೆ ಬಹುಷಃ ಈ ಜಗತ್ತು ಪೂರ ತಿಪ್ಪೆ ಗುಂಡಿಯಾಗಿ ಮಾನವ ಪರದಾಡಬೇಕಾಗಿತ್ತೇನೋ! ಆ ಮರುಬಳಕೆಯ ಪ್ರಯೋಗ ಇವತ್ತು ನೆನ್ನೆಯದಲ್ಲ. ಶತಮಾನಗಳಿಂದ ನಡೆದು ಬಂದು ಒಂದು ಪದ್ಧತಿಯ ಪ್ರಯೋಗ ಎನ್ನಿ. ಮರುಬಳಕೆಯ ವಿಸ್ತಾರ ಬಹಳ ವಿಶಾಲ. ಇವುಗಳ ಒಂದು ಅವಲೋಕನ ಈ ಚಿಂತನೆಯ ಉದ್ದೀಶ್ಯ. ಭಾರತ ವರ್ತುಲ ಮಿತವ್ಯಯಕ್ಕೆ (Circular economy) ಪ್ರಸಿದ್ಧ. ಅಂದರೆ ವಸ್ತುವಿನ ಮರುಬಳಕೆ ಅದರ ಪೂರ್ಣಾಯುಷ್ಯದವರೆಗೆ ಮಾಡುವ ಪ್ರಕ್ರಿಯೆ.

ನಾವು ಚಿಕ್ಕವರಿದ್ದಾಗ ಮನೆಯ ಹಿರಿಯಣ್ಣ, ಹಿರಿಯಕ್ಕ ಹಾಕಿದ ಅಂಗಿಗಳನ್ನೇ ತಮ್ಮಂದಿರಿಗೂ, ತಂಗಿಯರೂ ಬಳಸಿ ಅದು ಪೂರಾ ಹರಿದು ನೆಲ ಒರೆಸುವ ಬಟ್ಟೆಯಾಗಿ ಮರು ಬಳಕೆಯಾಗುತ್ತಿತ್ತು. ಹಳೆ ಬಟ್ಟೆ ತುಂಡುಗಳು ಹಳೇ ಹಾಸಿಗೆಯ ಹೊದಿಕೆ ಉಪಯೋಗಿಸಿ ರಜಾಯಿಗಳಾಗುತ್ತಿದ್ದವು. ಹಾಗೇ ಚಪ್ಪಲಿ, ಷೂಗಳು ಕನಿಷ್ಟ 4-5 ಬಾರಿ ಚಮ್ಮಾರನ ಬಳಿ ರಿಪೇರಿಗೆ ಹೋಗಿ ಮರುಜೀವ ಪಡೆಯುತ್ತಿದ್ದವು. ಬೆತ್ತದ ಕುರ್ಚಿಗಳು ಕಿತ್ತರೂ ಅದು ರಿಪೇರಿಯಾಗಿ ಮರುಬಳಕೆಗೆ ಸಿದ್ಧ. ಛತ್ರಿಗಳಂತೂ ಕನಿಷ್ಠ 10 ಬಾರಿ ರಿಪೇರಿಯಾಗಿದ್ದ ನೆನಪು ನನಗಿದೆ. ಮನೆಯ ಹಳೆಯ ಚಾಕು, ಕತ್ತರಿಗಳನ್ನು ಬೀದಿಯಲ್ಲಿ ಬರುವ ರಿಪೇರಿಯವನು ಅದನ್ನು ಪುನಃ ಹೊಸದಾಗಿ ಪರಿವರ್ತಿಸುವ ಪರಿ ನಿಜಕ್ಕೂ ಆಶ್ಚರ್ಯಕರ. ಹೀಗೆ ಈ ತರಹದ ಪುನರ್ ಬಳಕೆಯ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಾ ಹೋಗುತ್ತದೆ. ಹಾಸಿಗೆ ರಿಪೇರಿಯ ಹತ್ತಿಯ ಮರುಬಳಕೆಗೆ ಉತ್ತಮ ಉದಾಹರಣೆ. ಹಳೇ ಪೇಪರ್‌ಗಳು ಕಾಗದದ ಕಾರ್ಖಾನೆಗೆ ರವಾನೆ. ಖಾಲಿ ಶೀಶೆಗಳು ಹೊಸ ಗಾಜಿನ ಬಳೆ, ಬಾಟ್ಲಿಗಳ ತಯಾರಿಕೆಗೆ ಬಳಕೆ. ಇವು ಪರಿಸರ ಉಳಿಸುವುದಷ್ಟೇ ಅಲ್ಲ, ಮೂಲ ಸಾಮಗ್ರಿಗಳ ಬಳಕೆಗೂ ಕಡಿವಾಣ ಹಾಕುತ್ತದೆ. ಹಳೇ ಲೋಹಗಳ ಚೂರುಗಳಂತೂ ಬಹಳ ಉಪಯೋಗಿ. ಅವುಗಳನ್ನು ಕರಗಿಸಿ ಹೊಸ ಲೋಹಗಳ ತಯಾರಿಯ ಕಾರ್ಖಾನೆಗಳೇ ಒಂದು ಬೃಹತ್ ಉದ್ಯಮ. ಇನ್ನು ಪ್ರಾಣಿಗಳ, ಮನುಷ್ಯರ ಮಲಮೂತ್ರಗಳು ಗೊಬ್ಬರಗಳಾಗಿ ಪುನರ್ ಬಳಕೆಯಾಗುತ್ತಿವೆ.

ತಿರುಪತಿ ಹಾಗೂ ಇತರ ಪ್ರಸಿದ್ಧ ದೇವಸ್ಥಾನಗಳ ಭಕ್ತರ ಕೇಶಮುಂಡನಗಳ ಕೇಶ ವಾರ್ಷಿಕ ಸಾವಿರಾರು ಟನ್‌ಗಳಷ್ಟು. ಅದರ ಹರಾಜು, ವಿಲೇವಾರಿಯಿಂದ ಕೋಟ್ಯಂತರ ರೂಪಾಯಿ ಆದಾಯವಿದೆ. ಈ ಕೇಶಗಳಿಂದ ತರಹಾವರಿ ಕೃತಕ ಕೇಶಗಳ ಉತ್ಪಾದನೆ, ಒಂದು ಬೃಹತ್ ಉದ್ಯಮ. ಹೀಗೆ ಇವು ಮರುಬಳಕೆಯಾಗುತ್ತಿವೆ.

ಈಗಿನ ಜ್ವಲಂತ ಸಮಸ್ಯೆ ಪ್ಲಾಸ್ಟಿಕ್‌ನ ಬಳಕೆ ಮತ್ತು ಮರುಬಳಕೆ. ಹಳೇ ಪ್ಲಾಸ್ಟಿಕ್‌ನಿಂದ ಹೊಸ ಪರಿಕರಗಳನ್ನು ತಯಾರಿಸಬಹುದು. ಪ್ಲಾಸ್ಟಿಕ್‌ನ ತ್ಯಾಜ್ಯ ಈಗ ರಸ್ತೆ ನಿರ್ಮಾಣಕ್ಕೆ ಬಹುವಾಗಿ ಉಪಯೋಗಿಸಲ್ಪಡುತ್ತಿದೆ. ಪ್ಲಾಸ್ಟಿಕ್ ಜೈವಿಕ ವಿಭಜನೆ ಆಗದಿರುವುದರಿಂದ ಇವುಗಳ ಮರುಬಳಕೆ ಹಾಗೂ ಶಾಶ್ವತ ನಿರ್ನಾಮ ಅತ್ಯವಶ್ಯ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ಸಾಗಿದೆ. ಪ್ಲಾಸ್ಟಿಕ್‌ನಿಂದ ತೈಲ ಉತ್ಪಾದನೆ ಒಂದು ಹೊಸ ಆವಿಷ್ಕಾರ.

ಕೆಟ್ಟುಹೋದ ವಿದ್ಯುನ್ಮಾನ, ಕಂಪ್ಯೂಟರ್, ಜಂಗಮವಾಣಿಗಳ ನಿರ್ವಹಣೆ ಹಾಗೂ ಮರುಬಳಕೆ ನಿಜಕ್ಕೂ ಬಹು ದೊಡ್ಡ ಸವಾಲು. ಇದರ ಬಗ್ಗೆ ಸಾಕಷ್ಟು ಸಂಶೋಧನೆ ಪ್ರಗತಿಯಲ್ಲಿದೆ. ಪಾದರಸ, ಸೀಸ, ಅಂಟಿಮನಿ ಮುಂತಾದ ಘನ ಲೋಹಗಳು ನೀರಿನಲ್ಲಿ ಸೋರಿ ಜಲಚರಗಳು ನಿರ್ನಾಮವಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಇವುಗಳ ತಡೆ ಹಾಗೂ ಮರುಬಳಕೆಗಳ ಬಗ್ಗೆ ಯೋಚನೆ ಅತ್ಯಗತ್ಯ.

ಉಕ್ಕಿನ ಕಾರ್ಖಾನೆಗಳಲ್ಲಿ ಕಬ್ಬಿಣ ಉತ್ಪಾದಿಸುವಾಗ ಕಿಟ್ಟಗಳ ಪರಿಮಾಣ ಅಪಾರವಾಗಿ ಇರುತ್ತದೆ. ಇದು ಮೊದಲು ಬರೇ ಗುಂಡಿ ಮುಚ್ಚುವ ಕಾರ್‍ಯಕ್ಕೆ ಉಪಯೋಗವಾಗುತ್ತಿತ್ತು. ಈಗ ಇದರಿಂದ ಸಿಮೆಂಟ್ ಉತ್ಪಾದನೆ ಮಾಡಿ ಕಟ್ಟಡಗಳ ಬಳಕೆಗೆ ಉಪಯುಕ್ತವಾಗಿದೆ. ಮರುಬಳಕೆ ಯಶಸ್ವಿಯಾಗಿ ಆಗುತ್ತಿದೆ.

ರಬ್ಬರ್ ಟೈರ್‌ಗಳ ಮರುಬಳಕೆಗೆ ರಿಟ್ರೇಡಿಂಗ್ ಎನ್ನುತ್ತಾರೆ. ಇದರಿಂದ ವಾಹನಗಳ ಚಕ್ರಗಳು ಪುನಃ ಮರುಬಳಕೆಗೆ ಸಿದ್ಧವಾಗುತ್ತವೆ. ಪೂರಾ ಹಾಳಾದಾಗ ಈ ರಬ್ಬರ್ ಮತ್ತೆ ಮೂಲ ಉತ್ಪಾದನೆಯ ಜಾಗಕ್ಕೆ ಸೇರಿ ಮರುಬಳಕೆಗೆ ತಯಾರಾಗುತ್ತದೆ.
ಮಳೆ ನೀರು ಕೊಯ್ಲು ಈಗ ಬಹಳ ಪ್ರಚಲಿತದಲ್ಲಿರುವ ಒಂದು ಯೋಜನೆ. ಮಳೆನೀರಿನ ಪುನರ್ ಬಳಕೆ ಬಹಳ ಯಶಸ್ವಿಯಾಗಿದೆ. ಹಾಗೆಯೇ ಉಪಯೋಗಿಸಿದ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಪುನರ್‌ಬಳಕೆ ಮಾಡುತ್ತಿರುವುದು ನೀರಿನ ಅತ್ಯಂತ ಪರಿಣಾಮಕಾರಿ ಬಳಕೆಗೆ ಸಾಕ್ಷಿ. ಎಲ್ಲಾ ನಗರಗಳಲ್ಲೂ, ಕಾರ್ಖಾನೆಗಳಲ್ಲೂ, ಬಹುಮಹಡಿ ಅಪಾರ್ಟ್‌ಮೆಂಟ್‌ಗಳ ಸಮೂಹಗಳಲ್ಲಿ ಮೇಲಿನ ವ್ಯವಸ್ಥೆಗಳನ್ನು ಸರಕಾರ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಕ್ತ ಸುತ್ತೋಲೆ ಹೊರಡಿಸಿದೆ.

ವಿದ್ಯುತ್ ಉತ್ಪಾದನೆಯ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆಯಿಂದ ದೊಡ್ಡ ಪ್ರಮಾಣದ ಬೂದಿ (Fly Ash) ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಇಟ್ಟಿಗೆಗಳನ್ನು ತಯಾರಿಸಿ ಇದರ ಮರು ಬಳಕೆಯನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ತಟ್ಟೆ ಹಾಗೂ ಬಟ್ಟಲುಗಳ ಅತ್ಯಂತ ಪರಿಣಾಮಕಾರಿ ಪರ್‍ಯಾಯ ಅಡಕೆ ಹಾಳೆಯಿಂದ ತಯಾರಿಸಿದ ವಸ್ತುಗಳು. ಇವುಗಳು ಜೈವಿಕ ವಿಭಜನೆಯಾಗುವುದರಿಂದ ಪರಿಸರ ಕಲುಷಿತವಾಗುವ ಪ್ರಮೇಯವೇ ಇಲ್ಲ. ಈಗ ಇದು ಬಹಳ ಬಳಕೆಯಲ್ಲಿರುವುದು ಒಂದು ಶುಭ ಸೂಚನೆ.ಪ್ರಕೃತಿ ಮರುಬಳಕೆಯ ಪ್ರಕ್ರಿಯೆಗೆ ಉತ್ಕೃಷ್ಟ ಉದಾಹರಣೆ. ಮರಗಳ ಎಲೆಗಳು ಬಿದ್ದು ಕ್ರಿಮಿ ಕೀಟ ಹಾಗೂ ತೇವದ ಸಹಯೋಗದಿಂದ ಕೊಳೆತು ಗೊಬ್ಬರವಾಗಿ ಪುನಃ ಭೂಮಿಯನ್ನು ಸೇರುತ್ತವೆ. ಮರದ ಹಸಿರು ಎಲೆಗಳು ಮಾನವ ಮತ್ತು ಪ್ರಾಣಿಗಳ ಉಸಿರಾಟದ ಇಂಗಾಲಾಮ್ಲವನ್ನು ಹೀರಿ ಆಮ್ಲಜನಕವನ್ನು ಹೊರಸೂಸುತ್ತವೆ.

ನೀರು ಮತ್ತು ಭೂಮಿಯ ಮೇಲಿನ ತೇವ ಸೂರ್ಯಕಿರಣಗಳಿಂದ ಆವಿಯಾಗುತ್ತದೆ. ಮೋಡವಾಗಿ ಮತ್ತೆ ಮಳೆಯ ರೂಪದಲ್ಲಿ ಪುನಃ ಭೂಮಿಯನ್ನು ಸೇರುತ್ತದೆ. ಇವೆಲ್ಲ ಪ್ರಕೃತಿ ನಿರ್ಮಿತ ಮರುಬಳಕೆಗೆ ಉತ್ತಮ ಉದಾಹರಣೆ. ಇದಲ್ಲದೆ ಪ್ರಕೃತಿಯ ಸಾರಜನಕ, ರಂಜಕ, ಇಂಗಾಲ ಇವುಗಳ ಮರುಬಳಕೆಯ ವರ್ತುಲ ನಿಜಕ್ಕೂ ಆಶ್ಚರ್ಯಕರ.

ಹೀಗೆ ಮರುಬಳಕೆಯ ಪ್ರಯೋಗ ಎಲ್ಲಾ ಪ್ರಕಾರಗಳಲ್ಲಿ ಆದರೆ ಪರಿಸರದ ಉಳಿಕೆಗೆ ಬಹಳ ಸಹಾಯವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

-ಕೆ. ರಮೇಶ್

5 Responses

 1. Padma Anand says:

  ಸವಿವರಗೊಂದಿಗೆ ಉಪಯುಕ್ತ ಮಾಹಿತಿ ನೀಡುತ್ತಲೇ ಸಮಾಜಿಕ ಕಳಕಳಿಯನ್ನು ಬಿಂಬಿಸುವ ಸೊಗಸಾದ ಲೇಖನ.

 2. ಉಪಯುಕ್ತ ಮಾಹಿತಿ ಇತ್ತಿರುವ…ಮರುಬಳಕೆ ಲೇಖನ ಚೆನ್ನಾಗಿ ಮೂಡಿಬಂದಿದೆ.. ಸಾರ್
  .

 3. ನಯನ ಬಜಕೂಡ್ಲು says:

  ಮಾಹಿತಿಪೂರ್ಣ ಲೇಖನ ಸೊಗಸಾಗಿದೆ

 4. ಶಂಕರಿ ಶರ್ಮ says:

  ವಸ್ತುಗಳ ಮರುಬಳಕೆಯ ಮಹತ್ವವನ್ನು ಬಿಂಬಿಸುವ ಮಾಹಿತಿಯುಕ್ತ, ಉಪಯುಕ್ತ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: