ಯಮಕಿಂಕರರೊಂದಿಗೆ ಒಂದು ಕ್ಷಣ..

Share Button


ಅಂದು ಬಾನುವಾರ. ಮುಂಜಾನೆ ನನ್ನ ದಿನಚರಿಯಂತೆ ವಿನೋಭನಗರದ ಎ.ಪಿ.ಎಮ್.ಸಿ. ಯಾರ್ಡ್‌ನಲ್ಲಿ ವಾಕ್ ಹೊರಟಿದ್ದೆ. ಹಾದಿಯುದ್ದಕ್ಕೂ ದೊಡ್ಡ ದೊಡ್ಡ ಮರಗಳು, ತಂಪಾದ ಗಾಳಿ ಮನಸ್ಸಿಗೆ ಮುದನೀಡುತ್ತಿತ್ತು. ಇದ್ದಕ್ಕಿದ್ದಂತೆ ಕಟಕಟ ಎಂಬ ರೆಂಬೆ ಮುರಿಯುವ ಸದ್ದು ಕೇಳಿತು. ನಾನು ತಲೆಯೆತ್ತಿ ನೋಡಿದೆ, ಮರುಕ್ಷಣ ಮರದ ಮೇಲಿನಿಂದ ದೊಡ್ಡ ರೆಂಬೆಯೊಂದು ನನ್ನ ಕಾಲಿನ ಬಳಿ ಬಿತ್ತು. ನಾನು ಅಲ್ಲಿಯೇ ಕುಸಿದೆ, ತಕ್ಷಣ ವಾಕ್ ಮಾಡುತ್ತಿದ್ದ ನಾಲ್ಕಾರು ಮಂದಿ ಓಡಿ ಬಂದು ನನಗೆ ಕೈನೀಡಿದರು. ಗಂಟಲು ಒಣಗಿತ್ತು, ಮೈ ನಡುಗುತ್ತಿತ್ತು, ಹೃದಯದ ಬಡಿತ ಜೋರಾಗಿತ್ತು. ಅವರ ಪ್ರಶ್ನೆಗಳಿಗೆ ಉತ್ತರ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ನಮ್ಮ ಮನೆಯ ವಿಳಾಸ, ನನ್ನ ಯಜಮಾನರ ಮೊಬೈಲ್ ಸಂಖ್ಯೆಯನ್ನು ಪಟಪಟನೇ ಹೇಳಿದೆ. ಅಷ್ಟೇ, ಮತ್ತೆ ಮಾತು ಹೊರಡಲಿಲ್ಲ. ಸ್ವಲ್ಪ ನೀರು ಕುಡಿದು, ನಿಧಾನವಾಗಿ ಚೇತರಿಸಿಕೊಂಡೆ. ಎರಡು ಹೆಜ್ಜೆ ಮುಂದಿದ್ದರೆ, ನನ್ನ ತಲೆಯ ಮೇಲೆ ಅಷ್ಟು ದೊಡ್ಡ ರೆಂಬೆ ಬೀಳುತ್ತಿತ್ತು, ಮುಂದಿನದನ್ನು ನೀವೇ ಊಹಿಸಿಕೊಳ್ಳಿ. ‘ದೇವರೇ ಕಾಪಾಡಿದ, ಬೆಳಗಾಗೆದ್ದು ಯಾರೋ ಪುಣ್ಯಾತ್ಮರ ಮುಖ ನೋಡಿ ಬಂದಿದ್ದೀರಾ, ಆಯಸ್ಸು ಗಟ್ಟಿಯಿದೆ..’ ಅಂತೆಲ್ಲಾ ಜನ ಮಾತಾಡಿಕೊಳ್ಳುವುದು ಕಿವಿಗೆ ಬೀಳುತ್ತಿತ್ತು. ನನ್ನ ಬಾಯಿಂದ ಮಾತುಗಳೇ ಹೊರಡುತ್ತಿಲ್ಲ, ಯಾರೋ ಹೇಳಿದರು – ‘ಮೇಡಂ, ಬನ್ನಿ ನಿಮ್ಮ ಜೊತೆ ಮನೆಯವರೆಗೆ ಬರುತ್ತೇನೆ.‘ ನಾನು ಮೌನವಾಗಿ ಅವರನ್ನು ಹಿಂಬಾಲಿಸಿದೆ.

ಅಂದು ಹಾಲು, ತರಕಾರಿ, ಹಣ್ಣು ತರಲು ಹೋದ ನಾನು, ಚೌಕಾಸಿ ಮಾಡದೆ ಅವರು ಹೇಳಿದಷ್ಟು ಹಣ ಕೊಟ್ಟು ಕೊಂಡೆ. ಸೊಪ್ಪಿನವಳು ಯಾಕಮ್ಮಾವ್ರೇ ಹುಷಾರಿಲ್ವಾ ಎಂದು ಅಚ್ಚರಿಯಿಂದ ಕೇಳಿದಳು. ನಾನು ಚೌಕಾಸಿ ಮಾಡದೇ ಎಂದೂ ಏನನ್ನೂ ಕೊಂಡವಳೇ ಅಲ್ಲ. ಮನೆಗೆ ಬಂದವಳೇ ಬೀರಿನಲ್ಲಿ ಅಸ್ತವ್ಯಸ್ತವಾಗಿದ್ದ ಸೀರೆಗಳನ್ನು ನೀಟಾಗಿ ಜೋಡಿಸಿದೆ. ಅಡುಗೆ ಮನೆಯಲ್ಲಿ ಹರಡಿದ್ದ ಪಾತ್ರೆ ಪಡಗಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿಟ್ಟೆ. ಲ್ಯಾಪ್‌ಟಾಪ್ ಮುಂದೆ ಹರಡಿದ್ದ ಪುಸ್ತಕ, ಪೇಪರ್‌ಗಳನ್ನೂ ಹೊಂದಿಸಿಟ್ಟೆ. ನನ್ನ ಯಜಮಾನರು ಚಕಿತರಾಗಿ ನನ್ನನ್ನೇ ಗಮನಿಸುತ್ತಿದ್ದರು, ‘ಯಾಕೇ ಏನಾಯ್ತು, ಸ್ವಚ್ಛ ಮನೆ ಅಭಿಯಾನ ಆಚರಿಸುತ್ತಿದ್ದೀಯಾ’ ಎಂದರು. ದಿನಕ್ಕೆ ಹತ್ತು ಬಾರಿಯಾದ್ರೂ ಮನೆಯಲ್ಲಿ ಹರಡಿದ ವಸ್ತುಗಳನ್ನು ಎತ್ತಿಡು ಅಂತ ಅವರು ಹೇಳದ ದಿನವೇ ಇಲ್ಲ. ಆದರಿಂದು, ನಾನೇ ಮುಂದೆ ನಿಂತು ಎಲ್ಲವನ್ನೂ ಓರಣವಾಗಿರಿಸಿದ್ದೆ. ಅವರು ಟೀ ಕುಡಿಯುವಾಗ ನಡೆದ ಘಟನೆಯ ವಿವರ ಹೇಳಿದೆ -‘ಅಕಸ್ಮಾತ್ ನಾನು ಪರಲೋಕಕ್ಕೆ ದಿಢೀರ್ ಅಂತ ಪಯಣ ಬೆಳೆಸಿದರೆ, ಮನೆಯ ಅವ್ಯವಸ್ಥೆ ಕಂಡು ನಿಮಗೆ ಗಾಬರಿಯಾಗದಿರಲಿ. ಮನೆಯ ಸ್ವಚ್ಛತೆ ಕಂಡು ನಿಮ್ಮ ಮನಸ್ಸು ನಿರಾಳವಾಗಲಿ’, ಎಂದಾಗ ಜೋರಾಗಿ ನಕ್ಕರು. ‘ನೀನು ಮತ್ತು ಸ್ವಚ್ಛತೆ ಎರಡೂ ಎಣ್ಣೆ ಸೀಗೆ ಕಾಯಿ ಇದ್ದಹಾಗೆ. ಇರಲಿ ಬಿಡು, ಇಂದು ತಿಂಡಿಗೆ ಬೆಣ್ಣೆ ದೋಸೆ ಹೊಟೇಲಿಗೆ ಹೋಗೋಣ ನಡಿ’ ಎಂದು ಹೊರಡಿಸಿದರು.

ನಾನು ನಿರ್ಮಲಕ್ಕನ ಮನೆಯಲ್ಲಿ ನೋಡಿದ್ದ ಹಿಂದಿ ಚಲನಚಿತ್ರ – ಫೋಟೋಫ್ರೇಮ್ ನೆನಪಾಯಿತು. ನನ್ನ ಬಾಳಿನ ಪಯಣ ಮುಗಿದ ಮೇಲೆ ಮಕ್ಕಳು ಗೋಡೆಯ ಮೇಲೆ ತೂಗು ಹಾಕಲು ಒಂದು ಫೋಟೋ ಬೇಕಲ್ಲ. ಯಾವುದೋ ಒಂದು ಸೊಟ್ಟ ಮುಖದ ಪೋಟೋ ಹಾಕಿದರೆ ನನ್ನ ಮೊಮ್ಮಕ್ಕಳು, ಮರಿಮಕ್ಕಳು ಅಜ್ಜಿಯ ಮುಖ ನೋಡಿ ಗೇಲಿ ಮಾಡಬಾರದಲ್ಲ ಎನ್ನಿಸಿತು. ಮನೆಯೆಲ್ಲಾ ತಡಕಾಡಿದೆ. ಕಪಾಟಿನಲ್ಲಿಟ್ಟಿದ್ದ ಆಲ್ಬಮ್‌ಗಳ ಪುಟಗಳನ್ನೆಲ್ಲಾ ತಿರುವಿ ಹಾಕಿದೆ, ಆದರೆ ನನ್ನದೊಂದು ಸರಿಯಾದ ಫೋಟೋ ಸಿಗಲಿಲ್ಲ. ಹಳೆಯ ತಲೆಮಾರಿನವಳಾದ ನನಗೆ, ಮೊಬೈಲಿನಲ್ಲಿ ತೆಗೆಸಿದ ಫೋಟೋ ಚೆನ್ನಾಗಿ ಬರಲ್ಲ ಎಂಬ ಭಾವ. ಮತ್ತೆ ಯಜಮಾನರನ್ನು ಕಾಡಿದೆ. ‘ರೀ, ಫೋಟೋ ಸ್ಟುಡಿಯೋಗೆ ಹೋಗಿ ಒಂದು ಫೋಟೋ ತೆಗೆಸಿಕೊಂಡು ಬರೋಣ.’ ನನ್ನ ಗಡಿಬಿಡಿ ನೋಡಿ ಯಜಮಾನರು ಮರುಮಾತಾಡದೇ ಒಪ್ಪಿಗೆ ಸೂಚಿಸಿದರು. ನಾಲ್ಕಾರು ಸೀರೆ ತೆಗೆದು ಉಟ್ಟು ನೋಡಿದೆ, ತೃಪ್ತಿಯಾಗಲಿಲ್ಲ, ಯಾವ ಸೀರೆ ಉಡಲಿ ಎಂದು ಯಜಮಾನರ ಸಲಹೆ ಕೇಳಿದೆ. ಕೊನೆಗೆ ನೇರಳೆ ಬಣ್ಣದ ಸೀರೆ ಆರಿಸಿ, ಅದಕ್ಕೊಪ್ಪುವ ಆಭರಣ ಧರಿಸಿ ಸ್ಟುಡಿಯೋಗೆ ಹೋಗಲು ಸಿದ್ಧಳಾದೆ. ಈ ಲೋಕದಿಂದ ಹೊರನಡೆಯಲು ನಾನು ಮಾಡುತ್ತಿದ್ದ ಪೂರ್ವಸಿದ್ಧತೆ ಕಂಡು ‘ಅಯ್ಯೋ ಮರುಳೇ’ ಎಂದು ನನ್ನ ಒಳಮನಸ್ಸು ನಗುತ್ತಿತ್ತು ಯಜಮಾನರು ಸೋಫಾ ಮೇಲೆ ಕುಳಿತೇ ನಿದ್ದೆಗೆ ಶರಣಾಗಿದ್ದರು. ಅವರನ್ನು ಎಬ್ಬಿಸಿ ಫೋಟೋ ತೆಗೆಸಿಕೊಳ್ಳಲು ಹೊರಟೆವು. ಆದರೆ ಮನಸ್ಸಿನಲ್ಲಿ ಮತ್ತೊಂದು ಪ್ರಶ್ನೆ ಕಾಡುತ್ತಿತ್ತು. ಈ ಇಳಿ ವಯಸ್ಸಿನಲ್ಲಿ ಫೋಟೋ ಏಕೆ ಎಂದು ಫೋಟೋಗ್ರಾಫರ್ ಕೇಳಿದರೆ ಏನೆಂದು ಹೇಳುವುದು? ಅದು ಅವನ ಉದ್ಯೋಗ. ಅವನು ಹಾಗೆ ಕೇಳಲಾರ ಎಂಬ ಅನಿಸಿಕೆ ಮನದ ಮೂಲೆಯಲ್ಲಿ ಇಣುಕುತ್ತಿತ್ತು. ಸಂಕೋಚದಿಂದಲೇ ಸ್ಟುಡಿಯೋದೊಳಗೆ ಅಡಿಯಿಟ್ಟೆ. ಮೊಬೈಲ್ ಬಂದ ಮೇಲೆ ಹೆಚ್ಚು ವ್ಯಾಪಾರವಿಲ್ಲದೆ ಕುಳಿತಿದ್ದ ಫೋಟೋಗ್ರಾಫರ್ ಸಂಭ್ರಮದಿಂದ ನಮ್ಮನ್ನು ಸ್ವಾಗತಿಸಿದ. ಯಜಮಾನರು ನನಗಿಂತ ಮೊದಲೇ ಫೋಟೋ ತೆಗೆಸಿಕೊಳ್ಳಲು ಸಿದ್ಧರಾದದ್ದನ್ನು ಕಂಡು ಬೆರಗಾಗುವ ಸರದಿ ನನ್ನದಾಗಿತ್ತು. ನನ್ನ ಸರದಿ ಬಂದಾಗ ಫೋಟೋಗ್ರಾಫರ್‌ನ ಸಲಹೆ ಸೂಚನೆಗಳು ಗಲಿಬಿಲಿ ಉಂಟು ಮಾಡಿದವು. ತಲೆ ಎತ್ತಿ, ತುಸು ಓರೆಯಾಗಿ ನಿಂತುಕೊಳ್ಳಿ, ಕೈಗಳನ್ನು ಕಟ್ಟಿ, ನೆಟ್ಟಗೆ ನಿಲ್ಲಿ, ಬೆನ್ನು ಬಾಗಿಸಬೇಡಿ, ನಗುಮುಖವಿರಲಿ ಇತ್ಯಾದಿ. ಅಂತೂ ಇಂತೂ ನನ್ನ ಮತ್ತು ಯಜಮಾನರ ಸಿಂಗಲ್ ಫೋಟೋ, ಇಬ್ಬರೂ ಒಟ್ಟಿಗೇ ನಿಂತ ಫೋಟೋ ತೆಗೆಸಿಕೊಂಡಾಯಿತು. ಇನ್ನು ಎಷ್ಟು ಪ್ರತಿಗಳು ಬೇಕು, ಯಾವ ಫ್ರೇಮ್ ಬೇಕು ಎಂದೆಲ್ಲಾ ಸಾಕಷ್ಟು ಚರ್ಚೆಯಾಗುವ ಹೊತ್ತಿಗೆ ಊಟದ ಹೊತ್ತು ಮೀರಿತ್ತು.

ಅಂದು ಬಹುದಿನದಿಂದ ಮಾತನಾಡಿಸದೇ ಇದ್ದ ಗೆಳತಿಯರಿಗೆ ಮತ್ತು ಬಂಧು ಬಾಂಧವರಿಗೆ ಫೋನ್ ಮಾಡಿದೆ. ಒಂದೇ ಸಮನೆ ಸುರಿಯುವ ಮಳೆಯಂತೆ ಪಟಪಟನೇ ಮಾತಾಡಿದೆ. ಅವರ ಮಾತು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಅಕ್ಕ ತಂಗಿಯರ ಜೊತೆ ಮಾತಾಡಿದೆ, ಅಣ್ಣ ತಮ್ಮಂದಿರ ಜೊತೆ ಹರಟಿದೆ. ಸಂಜೆಯಾಗಿತ್ತು. ಟಿ.ವಿ. ಮುಂದೆ ಕುಳಿತವಳಿಗೆ ಹಾಗೇ ಜೊಂಪು ಹತ್ತಿತ್ತು. ಮತ್ತೆ ಬೆಳಗಿನ ಘಟನೆ ಕಣ್ಣಮುಂದೆ ತೇಲಿ ಬಂತು. ಯಮಕಿಂಕರಿಬ್ಬರು ನನ್ನ ಮುಂದೆ ನಿಂತಿದ್ದರು. ಅವರು –‘ನೀನು ಮಾಡುತ್ತಿರುವ ಕೆಲವು ಒಳ್ಳೆಯ ಕಾರ್ಯಗಳಿಂದ ಬದುಕುಳಿದೆ. ಕೇಳು, ಮೂರು ವರಗಳನ್ನು. ಸಾಧ್ಯವಾದಲ್ಲಿ ತಥಾಸ್ತು ಎನ್ನುತ್ತೇವೆ’, ಎಂದರು. ಅಬ್ಬಾ ಇವರ ಷರತ್ತುಗಳಿಂದ ಕೊಡಿದ ಕೃಪಾಕಟಾಕ್ಷ ಕಂಡು ನಗು ಬಂತು. ಇರಲಿ, ಇವರು ಅಪ್ಪಣೆ ಕೊಡಿಸಿದಂತೆ ಮೂರು ವರಗಳನ್ನು ಕೇಳಿ ಬಿಡೋಣ ಎಂದು ಸಿದ್ಧಳಾದೆ – ಯಮಕಿಂಕರರೇ, ಮೊದಲನೆಯದು, ನಾನು ಅಳಿಲು ಸೇವೆ ಮಾಡುತ್ತಿರುವ ತಾಯಿಮನೆ, ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದರಲ್ಲಿ ಯಶಸ್ವಿಯಾಗಲಿ’ ಯಮಕಿಂಕರರು ತಥಾಸ್ತು ಎಂದರು. ಎರಡನೆಯದು, ‘ನನಗೆ ಶಾಂತಿ, ನೆಮ್ಮದಿ, ಆರೋಗ್ಯ ಕರುಣಿಸಿರುವ ಶ್ರೀ ಶಿವಗಂಗಾ ಯೋಗಕೇಂದ್ರ ಮನೆಮನೆಗೆ ಯೋಗ ತಲುಪಿಸುವುದರಲ್ಲಿ ಯಶಸ್ವಿಯಾಗಲಿ’‘. ಮತ್ತೆ ಯಮಕಿಂಕರರು ತಥಾಸ್ತು ಎಂದರು. ಮೂರನೆಯದು, ‘ನನಗೆ ಸಂಗೀತ ಮತ್ತು ವಾಹನ ಚಾಲನೆ ಎಂದರೆ ತುಂಬಾ ಇಷ್ಟ. ನಾನು ಹೇಳುವ ಹಾಡುಗಳು ಇಂಪಾಗಿರುವಂತೆ ಅನುಗ್ರಹಿಸು. ವಾಹನ ಚಾಲನೆ ಕರಗತವಾಗುವಂತೆ ವರ ನೀಡು. ನನ್ನ ಬರವಣಿಗೆಯ ಕಾಯಕ ಜನರ ಮನಮುಟ್ಟುವಂತಿರಲಿ.’

ಆಗ ಯಮಕಿಂಕರರು – ‘ನಿಲ್ಲಿಸು, ನಾವು ಹೇಳಿದ್ದು ಮೂರು ವರಗಳನ್ನು ಕೇಳು ಎಂದು, ಆದರೆ ನೀನು ಆರು ಬೇಡಿಕೆಗಳನ್ನು ನಮ್ಮ ಮುಂದಿಟ್ಟಿದ್ದೀಯಾ., ನೀನು ಹಾಡು ಹೇಳುವಾಗ ಯಾರಿಗೂ ತೊಂದರೆಯಾಗದಂತೆ ನಿರ್ಜನ ಪ್ರದೇಶದಲ್ಲಿ ನಿಂತು ಹಾಡು ಹೇಳುವುದು ಉತ್ತಮ. ವಾಹನ ಚಾಲನೆಯ ಆಸೆ ಕೈಬಿಡು, ಏನಾದರೂ ಅವಘಡ ಸಂಭವಿಸಿದರೆ ನೀನು ಜೈಲು ಸೇರುತ್ತಿಯಾ, ಎಚ್ಚರ. ಇನ್ನು ಕೊನೆಯದು – ನಿನ್ನ ಬರವಣಿಗೆಯ ಕಾಯಕ ಯಶಸ್ವಿಯಾಗಲು ಅಧ್ಯಯನ, ಸತತ ಪರಿಶ್ರಮ, ತಾಧ್ಯಾತ್ಮ ಬೇಕು, ನಾನು ಅಂತಹ ವರ ಕೊಡಲು ಅಶಕ್ಯ’.

ಅಂದು ನನ್ನ ವಿಚಿತ್ರ ನಡವಳಿಕೆಯನ್ನು ಗಮನಿಸಿದ್ದ ಯಜಮಾನರು ಮೆಲ್ಲನೆ ನನ್ನ ಭುಜ ಅಲುಗಾಡಿಸಿದಾಗ ಕಣ್ಣು ತೆರೆದು ನೋಡಿದೆ. ಯಮಕಿಂಕರರು ಅದೃಶ್ಯರಾಗಿದ್ದರು ನನ್ನ ಹಗಲುಗನಸು ನೆನಸಿಕೊಂಡು ನಕ್ಕುಬಿಟ್ಟೆ, ಯೋಗಕೇಂದ್ರ ಹಾಗೂ ತಾಯಿಮನೆ ಸಾಧನೆಯ ಶಿಖರಕ್ಕೇರಲಿ ಎಂದು ಹಾರೈಸುತ್ತಾ ಟೀ ಮಾಡಲು ಅಡುಗೆ ಮನೆಗೆ ಹೋದೆ.

-ಡಾ.ಗಾಯತ್ರಿದೇವಿ ಸಜ್ಜನ್

10 Responses

 1. Vijayasubrahmanya says:

  ಚೆನ್ನಾಗಿದೆ ಓದಿಸಿಕೊಂಡು ಹೋದ ಬರಹ.

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. ಆಶಾನೂಜಿ says:

  ಅಯ್ಯೋ…..ಏನೆಲ್ಲಾ ಆಯಿತು …. ಚೆನ್ನಾಗಿದೆ ಓದಿಸಿಕೊಂಡು ಹೋಯಿತು

 4. ವಂದನೆಗಳು

 5. ಹಹ್ಹ…ಮೇಡಂ.. ನಿಮ್ಮ ಲೇಖನ ನಿಜಕ್ಕೂ ಮುದತರಿಸಿತ ಧನ್ಯವಾದಗಳು…

 6. Padma Anand says:

  ಲಘುಹಾಸ್ಯದ ಲೇಪವಿದ್ದರೂ ಚಿಂತನೆಗೆ ಹಚ್ಚುವ ಜೀವನ ಪ್ರೀತಿಯನ್ನು ಸಾರುವ ಸುಂದರ ಲೇಖನ.

 7. SHARANABASAVEHA K M says:

  ನಿಮ್ಮ ‌ಕಲ್ಪನೆಯಂತೆ……..ನಾವು ಹೋಗಿಬಿಟ್ಟರೆ…..ಅನ್ನುವುದೇ…..ಬರಹ ಬೆಳೆಯುತ್ತಾ ಹೋಗಲು ಕಾರಣವಾಗುತ್ತದೆ…… ವರ ಕೇಳಬೇಕಾದಾಗ ತಾಯಿಮನೆಯ ಮಕ್ಕಳ ಮೇಲೆ ನಿಮ್ಮ ಕಾಳಜಿ ಶಿವಗಂಗಾಯೋಗಕೇಂದ್ರದ ಮೇಲಿನ ನಿಮ್ಮ ಅಭಿಮಾನ ಕಂಡು‌ಕಣ್ಣು ತುಂಬಿ ಬಂತು….ನೀವು ನೂರು ಕಾಲ ಬಾಳುತ್ತೀರಾ……ಬರೆಯುವ ಸಾಮರ್ಥ್ಯ ಆಗಲೇ ಆ ಭಗವಂತ ಕೊಟ್ಟಿದ್ದಾನೆ ಅದಕ್ಕೆ ಆ ಯಮಕಿಂಕರನ ಕೈಯಲ್ಲಿ ವರ ಕೊಡಲು ಆಗಿಲ್ಲ….. ಲವಲವಿಕೆಯಿಂದ ಕೂಡಿದ ಬರಹ……ಧನ್ಯವಾದಗಳು ಮೇಡಂ

 8. ವಂದನೆಗಳು ತಮ್ಮ ಮೌಲ್ಯಯುತ ವಾದ ವಿಮರ್ಶೆ ಗೆ

 9. ಶಂಕರಿ ಶರ್ಮ says:

  ಅಬ್ಬಾ…ಇಂತಹ ಘಟನೆಯನ್ನು ಊಹಿಸಿಕೊಂಡರೇ ಸಾಕು!! ಕೂದಲೆಳೆಯ ಅಂತರದಲ್ಲಿ ಅದೆಷ್ಟೋ ಅವಘಡಗಳು ತಪ್ಪಿ ಹೋಗುತ್ತವೆ… ಅಂತೂ, ಬಹಳ ಅದೃಷ್ಟಶಾಲಿಗಳಾದ ತಮ್ಮ ಲಘು ಹಾಸ್ಯಬರಹ ಚೆನ್ನಾಗಿದೆ ಮೇಡಂ.

 10. S.sudha says:

  ನಿಜವಾದ ವಿಷಯ. ಕನಸಿನ ಲೇಪನ. ಬಹಳ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: