ತಿಂಡಿಯೊಂದು, ಘಮ ಹಲವು!

Share Button


ಮಾನವ ಬದುಕಬೇಕಾದರೆ ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ತುತ್ತಿನ ಚೀಲ ತುಂಬಿಸುವಾಗ ನಾಲಗೆಯ ರಸಗ್ರಂಥಿಗಳಿಗೂ ತೃಪ್ತಿಯಾಯಿತೆಂದರೆ ಮನಸ್ಸಿಗೇನೋ ಖುಷಿ.  ಅದರಲ್ಲೂ ಮನೆಯಲ್ಲೇ ತಯಾರಿಸಿದ ಊಟ, ತಿಂಡಿ ತಿನಸುಗಳ ಸೇವನೆ ಹೊಟ್ಟೆಗೂ ಹಿತ, ದೇಹಕ್ಕೂ ಒಳ್ಳೆಯದು. ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಸಹಾಯಕಾರಿಯೂ ಹೌದು. ಶುಚಿ, ರುಚಿ, ಬಣ್ಣ, ಘಮ ತುಂಬಿದ ಅಡುಗೆ ಯಾರಿಗೆ ತಾನೇ ಇಷ್ಟವಿಲ್ಲ? ಅಡುಗೆಮನೆಯೆಂಬುದು ಒಂದು ಪ್ರಯೋಗಶಾಲೆಯಂತೆಯೇ. ಈ ಪ್ರಯೋಗಶಾಲೆಯಲ್ಲಿ ವಿಧವಿಧದ ಪ್ರಯೋಗಗಳು ನಡೆಯುತ್ತಿದ್ದವು, ನಡೆಯುತ್ತಲಿವೆ, ಮುಂದೆಯೂ ನಡೆಯುತ್ತವೆ. ನಮ್ಮ  ಹಿರಿಯರಿಂದ ನಮಗೆ ತಿಳಿದಿರುವ ಕೆಲವು ಅಡುಗೆಗಳು ಸಾಂಪ್ರದಾಯಿಕ ತಿಂಡಿ/ ವ್ಯಂಜನಗಳೆಂದು ಬಿರುದು ಪಡೆದುಕೊಂಡಿವೆ. ನಮ್ಮ ಸೃಜನಶೀಲತೆಯಿಂದ, ನಾವೇ ಹೊಸದಾಗಿ ಮಾಡುವ ಅಡುಗೆ ಹೊಸರುಚಿ ಎನಿಸಿಕೊಳ್ಳುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. 

ನನಗೆ ಯಾವಾಗಲೂ ಸೋಜಿಗವೆನಿಸುವ ಅಚ್ಚರಿಯ ವಿಷಯವೆಂದರೆ, ಯಾವುದೇ ತಿಂಡಿಯನ್ನು ಯಾರು ಮೊತ್ತ ಮೊದಲ ಸಲ ಮಾಡಿರಬಹುದು? ಅವರಿಗೆ ಆ ಆಲೋಚನೆ ಹೇಗೆ ಬಂದಿರಬಹುದು? ಯಾವ ರೀತಿ ಮಾಡಿದರೆ ಅದು ತಿನ್ನಲು ಚೆನ್ನಾಗಿರಬಹುದು? ಪ್ರಕೃತಿಯಲ್ಲಿ ಲಭ್ಯವಿರುವ ಎಲೆ/ಸೊಪ್ಪು, ಹಣ್ಣು, ಹೂವು, ಬೇರು ಮುಂತಾದವುಗಳನ್ನು ಬಳಸಿಕೊಂಡು ವಿಧವಿಧದ ಅಡುಗೆಗಳನ್ನು ಅವಿಷ್ಕರಿಸಿದಂತಹ ಚೇತನಗಳಿಗೆ ಶಿರಬಾಗಿ ಶರಣು. 

ಈ ಲೇಖನದಲ್ಲಿ ಸಾಂಪ್ರದಾಯಿಕ ಸಿಹಿತಿಂಡಿಯೊಂದರ ಹಲವು ರೂಪಾಂತರಗಳನ್ನು ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಯಾವ ತಿಂಡಿಯಿರಬಹುದು ಅನ್ನುವ ಪ್ರಶ್ನೆ ನಿಮ್ಮೆದುರು ಇದೆ. ಓದುವಾಗ ನಿಮಗೇ ಗೊತ್ತಾಗುತ್ತದೆ ಯಾವ ಸಿಹಿ ತಿಂಡಿಯೆಂದು. ಈ ಸಿಹಿತಿಂಡಿ ಮಾಡಲು ಬೇಕಾದ ಮೂಲಸಾಮಗ್ರಿಗಳು ಅಕ್ಕಿ, ತೆಂಗಿನಕಾಯಿ ತುರಿ ಹಾಗೂ ಬೆಲ್ಲ. ಬೇಕಿದ್ದರೆ ಏಲಕ್ಕಿ, ಸ್ವಲ್ಪ ತುಪ್ಪ…ಅಬ್ಬಬ್ಬಾ ಊರಿಂದೂರಿಗೆ ಬದಲಾಗುವ ಅದೆಷ್ಟೊಂದು ಪಾಕವಿಧಾನಗಳು! ಪಾಕವಿಧಾನದ ಜೊತೆಗೆ ಬದಲುವ ತಿಂಡಿಯ ಘಮ!

ನೆನೆಸಿದ ಅಕ್ಕಿಯನ್ನು ರುಬ್ಬಿ, ನಂತರ  ಹಿಟ್ಟನ್ನು ಎಲೆಗಳ(?) ಮೇಲೆ ಹರಡಿ, ಆ ಬಳಿಕ ಬೆಲ್ಲ ತೆಂಗಿನಕಾಯಿ ತುರಿ ಮಿಶ್ರಿತ ಹೂರಣವನ್ನು ಹರಡಿ, ಆ ಬಳಿಕ ಎಲೆಗಳನ್ನು  ಮಡಚಿ ಹಬೆಯಲ್ಲಿ ಬೇಯಿಸಿದರೆ ಈ ಸಿಹಿತಿಂಡಿ ಸಿದ್ಧ. ಈಗ ನಿಮಗೆ ತಿಂಡಿ ಯಾವುದೆಂದು ಗೊತ್ತಾಗಿರಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿಯ ದಿನ ಈ ಸಿಹಿತಿಂಡಿ ಮಾದುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆ ದಿನ ವಿಶೇಷವಾಗಿ ಈ ಸಿಹಿತಿಂಡಿಯನ್ನು ಅರಿಶಿಣದ ಎಲೆ ಬಳಸಿಯೇ ಮಾಡುವರು. ಹಾಗಾಗಿಯೇ ಈ ತಿಂಡಿಯ ಹೆಸರು ಅರಿಶಿಣ ಎಲೆ ಕಡುಬು/ಗಟ್ಟಿ.  ತುಳುವಿನಲ್ಲಿ ಈರಡ್ಯೆ ಅಂತಲೂ ಕರೆಯಲ್ಪಡುತ್ತದೆ. ಹವ್ಯಕ ಸಮುದಾಯದವರು ಗೆಣಸಲೆ ಎಂದೂ ಕರೆಯುವರು. ಈ ತಿಂಡಿ ತಯಾರಿಸಿದಂದು ಅರಿಶಿಣದ ಎಲೆಯ ಘಮ ಮನೆಯಿಡೀ ಹರಡುವುದು. ಈ ಸಿಹಿತಿಂಡಿ ತಯಾರಿಸಿ ಅಡಗಿಸಿಟ್ಟರೂ, ತನ್ನಿರವನ್ನು ಪರಿಮಳದ ಮೂಲಕವೇ ಇತರರಿಗೆ ತಿಳಿಯಪಡಿಸುತ್ತದೆ.

PC : Internet


ಈ ಸಿಹಿತಿಂಡಿಯನ್ನು ಕೇವಲ ಅರಿಶಿಣ ಎಲೆ ಬಳಸಿ ಮಾತ್ರ ಮಾಡುವುದಲ್ಲ. ಬಾಳೆ ಎಲೆ ಉಪಯೋಗಿಸಿಯೂ ಮಾಡುವರು. ನನ್ನ ತವರು ಮನೆಯಲ್ಲಿ ಯಾವಾಗಲೂ ಬಾಳೆ ಎಲೆ ಉಪಯೋಗಿಸಿಯೇ ಈ ತಿಂಡಿ ಮಾಡುತ್ತಿದ್ದ ನೆನಪು. ಕೆಲವು ವರ್ಷಗಳ ಹಿಂದೆ ನನ್ನ ಆತ್ಮೀಯರೊಬ್ಬರು ಉತ್ತರ ಕನ್ನಡದ ಕೆಲವು ಊರುಗಳಲ್ಲಿ ಇದೇ ತಿಂಡಿಯನ್ನು ದಾಲ್ಚಿನ್ನಿ ಎಲೆಯಲ್ಲಿ ಮಾಡುವರೆಂದು ತಿಳಿಸಿದರು. ದಾಲ್ಚಿನ್ನಿ ಎಲೆಗಳನ್ನು ತಂದು ಆ ಪ್ರಯೋಗವನ್ನೂ ಮಾಡಿದ್ದಾಯಿತು. ಆಹಾ… ಎಂತಹ ಅದ್ಭುತ ರುಚಿ… ತಿಂಡಿ ತಿಂದ ಬಳಿಕ ದೀರ್ಘಕಾಲ ನಾಲಿಗೆಯ ರಸಗ್ರಂಥಿಗಳು ಆ ವಿಶೇಷ ಘಮವನ್ನು ಮೆದುಳಿಗೆ ರವಾನಿಸುತ್ತಲೇ ಇರುತ್ತವೆ. ಅರಿಶಿಣದ ಎಲೆ, ಬಾಳೆ ಎಲೆ, ದಾಲ್ಚಿನ್ನಿ ಎಲೆ ಇವುಗಳ ಜೊತೆ ಹೊಸ ಸೇರ್ಪಡೆ- ಗೋಳಿ ಮರದ ಎಲೆ ಹಾಗೂ ಕೊಕ್ಕೋ ಗಿಡದ ಎಲೆ. ರುಚಿಯಲ್ಲಿ ಖಂಡಿತಾ ವ್ಯತ್ಯಾಸವಿದೆ. ಆದರೆ ಹೊಗಳುವಷ್ಟು ಘಮ ಇಲ್ಲ. ಏನೋ ಒಂದು ತಾಜಾತನ ಇರುವುದಂತೂ ನಿಜ.

ಬೇರೆ ಬೇರೆ ಎಲೆ ಬಳಸಿ ಘಮ ಬದಲಿಸುವ ಜೊತೆಗೆ, ಅಕ್ಕಿಯನ್ನು ಬದಲಿಸಿ ಘಮ ಬದಲಿಸುವುದುಂಟು. ಕೆಲವರು ಕುಚ್ಚಲಕ್ಕಿ ಬಳಸಿದರೆ, ಇನ್ನು ಕೆಲವರು ದೋಸೆ ಅಕ್ಕಿಯನ್ನು ಬಳಸುವರು. ಕೆಲವರು ರುಬ್ಬಿದ ಹಿಟ್ಟನ್ನು ಹಸಿಯಾಗಿಯೇ ಎಲೆಯ ಮೇಲೆ ಸವರುವರು. ಇನ್ನು ಕೆಲವರು ರುಬ್ಬಿದ ಹಿಟ್ಟನ್ನು ಹದಕ್ಕೆ ಬೇಕಾದಷ್ಟು  ನೀರು ಸೇರಿಸಿ ಬಾಣಲೆಗೆ ಹಾಕಿ, ಬೆಂಕಿ ಉರಿಯಲ್ಲಿಟ್ಟು, ನೀರಿಂಗುವ ತನಕ ಸೌಟಿನಲ್ಲಿ ಹಿಟ್ಟನ್ನು ಮಗುಚುತ್ತಾ, ನಂತರ ಆ ಹಿಟ್ಟನ್ನು ಎಲೆಯ ಮೇಲೆ ಹರಡುತ್ತಾರೆ. ಇದರಿಂದ ತಿಂಡಿ ಮೆದುವಾಗಿರುವುದು. ಕುಚ್ಚಲಕ್ಕಿ ಹಿಟ್ಟು ಬಳಸಿದರೂ ತಿಂಡಿ ಮೆದುವಾಗಿರುವುದು.

ಇದೇ ತಿಂಡಿಯ ಘಮವನ್ನು ಬದಲಿಸಲು ಬೇರೆ ಬೇರೆ ರೀತಿಯ ಬೆಲ್ಲ ಬಳಸುವರು. ಕೆಲವರಿಗೆ ಕಪ್ಪೂ ಬೆಲ್ಲವೇ ಬೇಕು ಈ ತಿಂಡಿಗೆ. ಇನ್ನು ಕೆಲವರು ಬಿಳಿಬೆಲ್ಲ, ಕೆಂಪು ಬೆಲ್ಲ ಬಳಸುವರು. ಬೆಲ್ಲ-ತೆಂಗಿನಕಾಯಿ ತುರಿಯ ಮಿಶ್ರಣವನ್ನು ಕೆಲವರು ಹಾಗೇ ಹಿಟ್ಟಿನ ಮೇಲೆ ಹರಡುವರು. ಆದರೆ ಹೆಚ್ಚಿನವರು ತೆಂಗಿನಕಾಯಿ ತುರಿ ಹಾಗೂ ಬೆಲ್ಲದ ಮಿಶ್ರಣವನ್ನು ಬೆಂಕಿ ಉರಿಯಲ್ಲಿಟ್ಟು ಬೇಕಾದಷ್ಟು ಪಾಕ ಬರುವಂತೆ ಮಾಡಿ, ಆ ಹೂರಣವನ್ನು ಬಳಸುವರು. ಈ ಕ್ರಮದಿಂದಲೂ ತಿಂಡಿಯ ರುಚಿ ಬದಲಾಗುವುದು. ಹೂರಣ ತಯಾರಿಸುವಾಗ ಏಲಕ್ಕಿ ಮತ್ತು ತುಪ್ಪ ಬಳಸಿದರೆ ಘಮವೂ ಬದಲಾಗುವುದು. 

ಈ ತಿಂಡಿಯ ಮೇಲೆ ಪರಿಮಳಭರಿತ ತುಪ್ಪವನ್ನು ಸವರಿಕೊಂಡು ತಿನ್ನುವಾಗ ಸಿಗುವ ಆ ಅನುಭೂತಿ ಇದೆಯಲ್ಲವೇ? ಅದು ವರ್ಣನಾತೀತ. ಒಂದು ತಿಂಡಿಯ ತಯಾರಿಯಲ್ಲಿ ಇಷ್ಟೆಲ್ಲಾ ವೈವಿಧ್ಯತೆಗಳನ್ನು ಗಮನಿಸಿದಾಗ ನನಗನಿಸಿದ್ದು ಇಷ್ಟು- ಇದೂ ಒಂದು ಸಂಶೋಧನೆಯೇ ಎಂದು!ತಲೆಮಾರಿನಿಂದ ತಲೆಮಾರಿಗೆ ಯಾವುದೇ ಪುಸ್ತಕದ ಅಗತ್ಯವಿಲ್ಲದೆ ಬಾಯಿಂದ ಬಾಯಿಗೆ ಅನೂಚಾನವಾಗಿ ಹರಿದುಕೊಂಡು ಬಂದ ಆ ಮಾಹಿತಿಗೆ ದಂಗಾಗಲೇ ಬೇಕು, ತಲೆಬಾಗಲೇ ಬೇಕು.

ಡಾ. ಕೃಷ್ಣಪ್ರಭ ಎಂ, ಮಂಗಳೂರು

20 Responses

 1. ಆಶಾನೂಜಿ says:

  ರುಚಿ ರುಚಿಯಾದ ತಿಂಡಿಯನ್ನು ಉಣಬಡಿಸಿದಿರಿ ಪ್ರಭಾ.

 2. ವಾವ್ ಅದರ ಘಮಲು ರುಚಿ ತಿಂದವರೇ ಬಲ್ಲರು…ನನ್ನ ಗೆಳತಿ ಮನೆಯಲ್ಲಿ ಒಮ್ಮೆ ತಿಂದು ಅವರಿಂದ ಕೇಳಿ ಮಾಡಿದೆನಾದರೂ ಆ ಹದವಾಗಲೀ ರುಚಿಯಾಗಲೀ ಬರಲಿಲ್ಲ…ಮತ್ತೆ ಪ್ರಯೊಗಮಾಡುವ ಗೋಜಿಗೆ ಹೋಗಲಿಲ್ಲ…ಆದರೆ ಅವರ ಮನೆಯಲ್ಲಿ ಮಾಡಿದಾಗ ನನಗೊಂದು ಪಾಲು..ಉಂಟು.
  ನಿರುಪಣೆ ಚೆನ್ನಾಗಿದೆ ಮೇಡಂ..

  • Anonymous says:

   ತಿಂದ ಹಾಗೆ ಅನುಭವವಾಯಿತು

  • Dr Krishnaprabha M says:

   ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ… ಈ ತಿಂಡಿ ಮಾಡುವುದು ಸುಲಭವೇ ಆದರೂ ಸ್ವಲ್ಪ ಸಮಯ ವಿನಿಯೋಗಿಸಬೇಕಾಗುವುದು

 3. ನಯನ ಬಜಕೂಡ್ಲು says:

  ತಿಂಡಿಯಷ್ಟೇ ಸಿಹಿ ಸಿಹಿ ಬರಹವೂ. ಸೊಗಸಾಗಿದೆ.

  • Dr Krishnaprabha M says:

   ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ

 4. Padma Anand says:

  ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ವ್ಯಂಜನದ ಎಲ್ಲಾ ಮಗ್ಗಲುಗಳನ್ನೂ ತೆರೆದಿಡುವ ಸೊಗಸಾದ ಲೇಖನ.

  • Dr Krishnaprabha M says:

   ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಪದ್ಮಾ ಮೇಡಂ

 5. sujatha says:

  ಮೈಸೋರು ಕಡೆ ಇದನ್ನು ಕುಚ್ಚಲ ಕಡುಬು ಅಂತೀವಿ. ನಾಗರಪಂಚಮಿಯಂದು ಮಾಡುವ ಭಕ್ಷ್ಯ. ಇದರೊಂದಿಗೆ ಖಾರ ಕಡುಬೂ ಸಹ. ನೆನಸಿಕೊಂಡರೆ ಬಾಯಲ್ಲಿ ನೀರು.

  • Dr Krishnaprabha M says:

   ನೀವು ನೀಡಿದ ಮಾಹಿತಿಗೆ ಧನ್ಯವಾದಗಳು.. ಹಾಗೇ ಬರಹ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು

 6. Dr Sumana Bolar says:

  Your articles are a treat to the readers. In fact you have made us also ponder on this thought as to who might have actually initiated these authentic recipes

 7. Hema says:

  ಸವಿಯಾದ ಬರಹ…ಸಾಂಪ್ರದಾಯಿಕ ಅಡುಗೆಗಳು ರುಚಿಕರ ಹಾಗೂ ಆರೋಗ್ಯಕರ. ಆದರೆ ತಯಾರಿಕೆಗೆ ಸಮಯ ಬೇಕಾಗುತ್ತದೆ. ಹಿಂದೆಲ್ಲ ಕೂಡುಕುಟುಂಬಗಳಿದ್ದಾಗ, ಮನೆಯವರೆಲ್ಲ ಕೆಲಸಕ್ಕೆ ಸಹಕರಿಸುತ್ತಾ ವಿಶೇಷ ಅಡುಗೆ ಮಾಡುವ ಸಡಗರವಿರುತ್ತಿತ್ತು. ಇದು ಅಡುಗೆಯ ಸವಿಯನ್ನು ಹೆಚ್ಚಿಸುತ್ತಿತ್ತು.

  • ಸುನಂದ ಹೊಳ್ಳ says:

   ನನಗೆ ಇಷ್ಟದ ತಿಂಡಿ..ಈ ತಿಂಡಿಯ ಬಗ್ಗೆ ಇಷ್ಟುಪ್ರಯೋಗಗಳು ಮಾಡಬಹುದೆಂದು ಇದನ್ನು ತಿಂದಷ್ಟೇ ಖುಷಿ ಆಯಿತು.ಬಾಯಲ್ಲಿ ನೀರು ಬಂತು.ಬರಹ ಚೆನ್ನಾಗಿದೆ

   • Dr Krishnaprabha M says:

    ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ. ನಾನು ಕೇಳಿ ತಿಳಿದಿದ್ದನ್ನು, ಮತ್ತು ರುಚಿ ನೋಡಿದ್ದೆಲ್ಲವನ್ನೂ ಹಂಚಿಕೊಳ್ಳುವ ಅನ್ನಿಸಿತು

  • Dr Krishnaprabha M says:

   ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ತಿಂಡಿ ಮಾಡಲು ಶ್ರಮ ಬೇಕಾಗುತ್ತದೆ ನಿಜ. ತಿನ್ನುವಾಗ ಅಷ್ಟೇ ಖುಷಿ ಆಗುವುದೂ ಅಷ್ಟೇ ಸತ್ಯ.. ಲೇಖನಗಳನ್ನು ಚಂದದ ಚಿತ್ರಗಳ ಜೊತೆ ಪ್ರಕಟಿಸುವ ನಿಮಗೆ ಮಗದೊಮ್ಮೆ ಧನ್ಯವಾದಗಳು

 8. ಶಂಕರಿ ಶರ್ಮ says:

  ಪ್ರತೀ ವರ್ಷ ನಾಗರಪಂಚಮಿಯಂದು ಅರಸಿನ ಎಲೆಯಲ್ಲಿ ಗೆಣಸಲೆ ಮಾಡಿ, ನೈವೇದ್ಯ ಮಾಡಿ ತಿನ್ನುವುದು ಅನೂಚಾನವಾಗಿ ನಡೆದುಬಂದಿದೆ. ಅದರ ನೆನಪೇ ನಾಲಗೆಯ ರಸಗ್ರಂಥಿಗಳನ್ನು ಉತ್ತೇಜಿಸುತ್ತಿದೆ ಮಾರಾಯ್ರೆ… ಅದರ ವಿವಿಧ ರೂಪಗಳ ಪರಿಚವಾಯ್ತು ನಿಮ್ಮಿಂದ…ಧನ್ಯವಾದಗಳು.

 9. ಸುವರ್ಣಮಾಲಿನಿ says:

  ಅಮ್ಮ ನಮಗೋಸ್ಕರ ಬಾಳೆ ಎಲೆಯಲ್ಲಿ ಮಾಡುತ್ತಿದ್ದ ಗೆಣಸಲೆ, ಪರಿಮಳ ಬರಲು ಅರಿಶಿನ ಎಲೆಯನ್ನು ಅದರ ಮೇಲೆ ಇಟ್ಟು ಘಮಘಮಿಸುವ ರುಚಿಕರ ತಿಂಡಿ. ವಾವ್.
  ನೆನಪಿಸಿದ ತಮಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: