ಪುಟ್ಟ ಹುಡುಗನ ದಿಟ್ಟ ಸಾಹಸದ ಅನಾವರಣ ”ಅರಣ್ಯನಿ” ಕಾದಂಬರಿ

Share Button

ಲೇಖಕರ ಪರಿಚಯ: ತೇಜಸ್ ಎಚ್ ಬಾಡಾಲ
ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಬಹುಮುಖ ಪ್ರತಿಭೆಯ ಈತನಿಗೆ ಹಲವು ರೀತಿಯ ಹವ್ಯಾಸಗಳಿವೆ. ಸಾಹಿತ್ಯ, ಕವಿತ್ವ, ಜೊತೆಗೊಂದಿಷ್ಟು ಸಂಗೀತ. ಈತ ತಾನೇ ರಚಿಸಿದ ಕವನಗಳಿಗೆ ರಾಗಹಾಕಿ ಹಾಡುತ್ತಾನೆ. ಗದುಗಿನ ಅಶ್ವಿನಿ ಪ್ರಕಾಶನದವರು ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಫರ್ಧೆಯಲ್ಲಿ ಈತನಿಗೆ ದ್ವಿತೀಯ ಬಹುಮಾನ ದೊರಕಿದೆ. ಈತನು ಈಗಾಗಲೇ ಸ್ವಾತಂತ್ರ್ಯ ಯೋಧರ ಬಗ್ಗೆ ಉಪನ್ಯಾಸ, ಮತ್ತು ಶ್ರೀಕೃಷ್ಣನ ಕೊನೆಯ ದಿನಗಳ ಬಗ್ಗೆ ಸಂಗೀತೋಪನ್ಯಾಸವನ್ನೂ ನೀಡಿದ್ದಾನೆ. ಈತನಿಗೆ ಭಾರತೀಯ ಶಾಸ್ತ್ರ ವಿದ್ಯೆಗಳಲ್ಲಿ ಆಸಕ್ತಿಯಿದೆ. ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ ಪ್ರಧಾನಮಂತ್ರಿಗಳ ಯುವ ( ಯಂಗ್ ಅಪ್‌ಕಮಿಂಗ್ ಅಂಡ್ ವರ್‍ಸಟೈಲ್ ಆಥರ್‍ಸ್) ಯೋಜನಾ ಸರಣಿಯ ಅಡಿಯಲ್ಲಿ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಈ ಯೋಜನೆಯನ್ನು 75 ನೆಯ ಸ್ವಾತಂತ್ರ್ಯೋತ್ಸವದ ಭಾಗವಾಗಿ ಭಾರತ ಶಿಕ್ಷಣ ಮಂತ್ರಾಲಯವು 2021-22 ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಜೊತೆಗೆ ಜಾರಿಗೆ ತಂದಿತು. ಕೃತಿಗಳು ಭಾರತೀಯ ರಾಷ್ಟ್ರೀಯ ಹೋರಾಟದ ಸುತ್ತ ಹೆಣೆದುಕೊಂಡಿದ್ದು ಅದರಲ್ಲಿಯೂ ಇದುವರೆಗೆ ಅನಾಮಧೇಯವಾಗುಳಿದ ವ್ಯಕ್ತಿಗಳ ಪಾತ್ರಗಳ ಬಗ್ಗೆ ಒತ್ತು ನೀಡುತ್ತವೆ. 22 ಅಧಿಕೃತ ಭಾಷೆಗಳಿಂದ ಲೇಖಕರನ್ನು ಆಯ್ದುಕೊಳ್ಳಲಾಗಿದ್ದು ಕನ್ನಡದಿಂದ ತೇಜಸ್ ಎಚ್. ಬಾಡಾಲ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

ಹಿನ್ನೆಲೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ 1857 ರಿಂದಲೇ ಪ್ರಾರಂಭವಾದರೂ ಅದು ಫಲನೀಡಿದ್ದು ಗಾಂಧೀಜಿಯವರ ನೇತೃತ್ವದ ಅಹಿಂಸಾ ಚಳುವಳಿಯ ಮೂಲಕ. ಹಾಗೆಂದರೆ ಬೇರೆಯವರು ಪ್ರಯತ್ನ ಮಾಡಲಿಲ್ಲವೇ? ಖಂಡಿತ ಮಾಡಿದರು. ಅವರ ಮಾರ್ಗ ವಿಭಿನ್ನವಾದುದು. ಬ್ರಿಟಿಷ್ ಸಾಮ್ರಾಜ್ಯ ಷಾಹಿಗಳು ನಮ್ಮ ದೇಶವನ್ನು ಕುತಂತ್ರ ಮಾರ್ಗದಿಂದ ಆಕ್ರಮಿಸಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದೇ ಅಲ್ಲದೆ ನಮ್ಮಲ್ಲಿನ ಸಂಪತ್ತನ್ನು ಲೂಟಿಮಾಡಿ ಕೊಂಡು ಹೋದರು. ಅಡ್ಡಿಪಡಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದರು. ಆದ್ದರಿಂದ ಉಗ್ರವಾದ ಮಾರ್ಗದಿಂದಲೇ ಇವರನ್ನು ದೇಶದಿಂದ ಓಡಿಸಬೇಕೆಂಬ ಪ್ರಯತ್ನಗಳು ದೇಶದ ಹಲವಾರು ಭಾಗಗಳಲ್ಲಿ ನಡೆದವು. ನೇತಾಜಿ ಸುಭಾಸ್‌ಚಂದ್ರಭೋಸ್ ಸೈನ್ಯವನ್ನೇ ಸಂಘಟಿಸಿ ಅನ್ಯ ದೇಶಗಳ ನೆರವಿನಿಂದ ಬ್ರಿಟಿಷರನ್ನು ಎದುರಿಸುವ ಪ್ರಯತ್ನ ಮಾಡಿದರು. ಹಾಗೆಯೇ ಲಾಲಾಜಿಯವರ ಅನುಯಾಯಿಗಳಾದ ಭಗತ್‌ಸಿಂಗ್, ರಾಜಗುರು, ಸುಖದೇವ್ ಎಂಬುವರು ಬ್ರಿಟಿಷ್ ಅಧಿಕಾರಿಯ ಕ್ರೂರ ಕೃತ್ಯದ ಪ್ರತೀಕಾರವಾಗಿ ಬ್ರಿಟಿಷ್ ಪೋಲೀಸ್ ಅಧಿಕಾರಿಯನ್ನು ಕೊಂದು ತಾವು ಹುತಾತ್ಮರಾದರು. ನ್ಯಾಯ ತೀರ್ಮಾನ ಯಾವಾಗಲೂ ಅಡಳಿತಾರೂಢ ಅಧಿಕಾರಿಗಳ ಕಡೆಗಿರುತ್ತಿತ್ತು. ಇವರಷ್ಟೇ ಅಲ್ಲ ಇನ್ನೂ ನೂರಾರು ಉಗ್ರಗಾಮಿ ಭಾರತೀಯ ಹೋರಾಟಗಾರರು ಬಲಿದಾನ ನೀಡಿದರು. ಬ್ರಿಟಿಷರ ದುರಾಕ್ರಮಣ ಮತ್ತು ದೇವತಾ ಮೂರ್ತಿಗಳ ಅಪಹರಣವನ್ನು ತಪ್ಪಿಸಲು ನಡೆಯುವ ಇಂತಹುದೇ ಒಂದು ಸಣ್ಣ ಪ್ರಯತ್ನ ಲೇಖಕರ ಕಲ್ಪನೆಯಲ್ಲಿ ಕಥೆಯಾಗಿ ರೂಪುಗೊಂಡು ಅರಣ್ಯನಿ’ ಕಾದಂಬರಿಯಾಗಿದೆ.

ಅರಣ್ಯನಿ ಕಥೆ: ಕಾದಂಬರಿಯ ಕಥಾಭಾಗಕ್ಕೆ ಬಂದರೆ ಅದು ನಡೆದಿರಬಹುದಾದ ಕಾಲ ಸುಮಾರು 1946ರ ಆಜೂಬಾಜು. ಏಕೆಂದರೆ ಅಲ್ಲಿನ ಸಾಹಸಿ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುವಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಗಿತ್ತು ಎಂಬ ಅಂಶ ತಿಳಿದು ಬರುತ್ತದೆ. ಮೊಟ್ಟಮೊದಲಿಗೆ ಕಥೆಗಾಗಿ ಲೇಖಕರು ಆಯ್ಕೆ ಮಾಡಿಕೊಂಡಿರುವ ಅರಣ್ಯಪ್ರದೇಶ ಪಶ್ಚಿಮ ಘಟ್ಟಗಳ ಶೋಲಾಕಾಡುಗಳು. ಇಂತಹದ್ದೊಂದು ಕಾಲ್ಪನಿಕ ಸಾಹಸೀ ಐತಿಹಾಸಿಕ ವಿಷಯವನ್ನಾರಿಸಿಕೊಂಡು ಅದನ್ನು ಸ್ವಂತ ಕಲ್ಪನಾ ಘಟನೆಗಳ ಮೂಲಕ ಬೆಳೆಸಿ ಕೃತಿ ರಚಿಸಿರುವ ಯುವ ಲೇಖಕ ತೇಜಸ್ ಅಭಿನಂದನೀಯರು. ಇದಕ್ಕಾಗಿ ಇವರು ನಡೆಸಿರುವ ಅಧ್ಯಯನ ಮತ್ತು ಪರಿಶ್ರಮ ಪ್ರಶಂಸನೀಯವಾದುದು.

ಕಾಡಿನ ಮಕ್ಕಳಿಗೆ ಹೊರಗಿನ ನಾಗರಿಕ ಬದುಕಿನ ನಂಟಿಲ್ಲ. ಅವರ ಪಾಲಿಗೆ ಎಲ್ಲವೂ ಅರಣ್ಯವೇ ಆಗಿದೆ. ಅದೇ ಅವರ ಬಾಳಿನ ಕಾಮಧೇನು. ಮೂವರು ಇಂಥಹ ಯುವಕರು ಕಾಳ, ನಾಗ, ಬೋಕರಿಗೆ ಬಾಲ್ಯದ ಆಟಪಾಟ, ಕಾಡನಲ್ಲಿ ಅಲೆದಾಟ ಬಿಟ್ಟರೆ ಬೇರೇನೂ ತಿಳಿದಿಲ್ಲ. ಒಮ್ಮೆ ಈ ಸಾಹಸಿಗಳು ನಡೆಯುತ್ತಾ ಅರಣ್ಯದ ಇನ್ನೊಂದು ಭಾಗಕ್ಕೆ ತಲುಪುತ್ತಾರೆ. ಅಲ್ಲಿ ಅವರು ಕಾಣುವ ಜನರು ಬೇರೆಯಾಗಿಯೇ ಇರುತ್ತಾರೆ. ಏಕೆಂದರೆ ಅವರಲ್ಲಿ ಆಗಲೇ ನಾಗರಿಕತೆಯ ಅರಿವು ಸ್ವಲ್ಪಮಟ್ಟಿಗೆ ಆಗಿರುತ್ತದೆ. ಅಲ್ಲಿ ಅವರು ಪಶುಸಂಗೋಪನೆ, ಹತ್ತಿವಸ್ತ್ರಗಳ ಉಪಯೋಗ ಮಾಡಿಕೊಂಡಿರುತ್ತಾರೆ. ಹಸುವಿನ ಹಾಲನ್ನು ಅಲ್ಲಿ ಈ ಮುಗ್ಧ ಮಕ್ಕಳು ಕುಡಿದದ್ದೇ ಮೊದಲ ಬಾರಿಗೆ. ಆ ಪ್ರದೇಶಕ್ಕೆ ಆಗಲೇ ಪಾದ್ರಿಯೊಬ್ಬ ಬಂದಿದ್ದು ಜನರಿಗೆ ಕ್ರಿಶ್ಚಿಯನ್ ಧರ್ಮಪ್ರಚಾರ ಮಾಡಿರುತ್ತಾನೆ. ಪುಟ್ಟ ಚರ್ಚು ಕೂಡ ತಲೆಯೆತ್ತಿರುತ್ತದೆ. ತಮ್ಮೊಂದಿಗೆ ಕೂಡಿ ಪಾದ್ರಿಯವರ ಸಲಹೆಯಂತೆ ಕೆಲಸ ಮಾಡಿದರೆ ಅವರಿಗೆ ಎಲ್ಲ ಸವಲತ್ತುಗಳೂ ದೊರೆಯುತ್ತವೆಂಬ ಪ್ರಲೋಭನೆಯನ್ನೂ ಇವರಿಗೆ ನೀಡುತ್ತಾರೆ.

ಅಲ್ಲಿಂದ ಹಿಂದಕ್ಕೆ ಬಂದ ಮೂರು ಯುವಕರು ಈ ವಿಷಯವನ್ನು ತಮ್ಮ ಮಾತಾಪಿತೃಗಳೊಡನೆ ಹಂಚಿಕೊಳ್ಳುತ್ತಾರೆ. ಕುತೂಹಲದಿಂದ ಅವರೆಲ್ಲರೂ ಒಟ್ಟಿಗೆ ಹೊಸಜಾಗಕ್ಕೆ ಹೋಗಿ ಬರುವಷ್ಟರಲ್ಲಿ ಅವರು ವಾಸವಾಗಿದ್ದ ಗುಡಿಸಲುಗಳು ಪೂರ್ತಿ ಅಗ್ನಿಗಾಹುತಿಯಾಗಿರುತ್ತವೆ. ಅಲ್ಲದೆ ಇವರೆಲ್ಲರ ಮೇಲೆ ಆಗಂತುಕರು ಧಾಳಿ ನಡೆಸುತ್ತಾರೆ. ಕಾಳ, ನಾಗ, ಬೋಕರು ಗಾಯಾಳುಗಳಾಗಿ ಮೈಮರೆತು ಬಿದ್ದಿದ್ದಾಗ ಯಾರೋ ಅವರನ್ನು ಕೊಂಡೊಯ್ದು ಸುರಕ್ಷಿತ ಸ್ಥಳದಲ್ಲಿ ಶುಶ್ರೂಷೆ ಮಾಡುತ್ತಾರೆ. ಹಗೆ ಮಾಡಿ ಇವರನ್ನು ಕಾಪಾಡಿದವರು ಕೃಷ್ಣಾಚಾರ್ಯ ಎಂಬುವ ತೀವ್ರಗಾಮಿ ಸಂಘಟನೆಯ ಸ್ವಾತಂತ್ರ್ಯ ಹೋರಾಟಗಾರು. ಇವರಿಗೆ ಸ್ಫೂರ್ತಿ ವೀರ ಸಾವರ್ಕರರ ಜೀವನ ಚರಿತ್ರೆಯ ಹೊತ್ತಿಗೆ. ಮೂರೂ ಜನ ಯುವಕರು ಚೇತರಿಸಿಕೊಂಡ ನಂತರ ಆಚಾರ್ಯರ ಮಾತುಗಳು ಮತ್ತು ಬೋಧನೆಗಳಿಂದ ಪ್ರಭಾವಿತರಾಗುತ್ತಾರೆ. ಅ ಯುವಕರ ಮಾತಾಪಿತೃಗಳು ಧಾಳಿಕೋರರಿಗೆ ಬಲಿಯಾದರೆಂಬ ಸುದ್ಧಿ ನಂತರ ಆಚಾರ್ಯರಿಂದ ತಿಳಿದು ಬರುತ್ತದೆ. ಯುವಕರ ಮನಸ್ಸಿನಲ್ಲಿ ಆ ದುರಾಚಾರಿಗಳ ವಿರುದ್ಧ ತಂದೆತಾಯಿಗಳ ಕೊಲೆಗೆ ಪ್ರತೀಕಾರ ಮಾಡಬೇಕೆಂಬ ಕಿಚ್ಚು ಹತ್ತುತ್ತದೆ.

ಈ ಹಿನ್ನೆಲೆಯಲ್ಲಿ ಆಚಾರ್ಯರ ಪರಿಚಯ, ಅವರ ಮಾರ್ಗದರ್ಶನ ನಾಗ, ಕಾಳ, ಬೋಕರ ಜೀವನಕ್ಕೊಂದು ದಿಕ್ಸೂಚಿಯಾಗುತ್ತದೆ. ಇಲ್ಲಿಂದ ಮುಂದಕ್ಕೆ ನಡೆಯುವುದೇ ಅವರ ಸಾಹಸಮಯ ಚಟುವಟಕೆಗಳು. ಆಚಾರ್ಯರು ಮೊದಲಿಗೆ ಯುವಕರಲ್ಲಿ ಸಾಮಾನ್ಯ ತಿಳಿವಳಿಕೆಯ ಬೀಜ ಬಿತ್ತುತ್ತಾರೆ. ದೇಶ, ಸ್ವಾತಂತ್ರ್ಯ, ಚಳುವಳಿಗಳ ಬಗ್ಗೆ ವಿವರಿಸುತ್ತಾರೆ. ನಂತರ ಅವರಿಗೆ ಭಜರಂಗಬಲಿ ಮಹಾನ್ ಸಾಹಸಿ ಹನುಮಂತನ ಬಗ್ಗೆ ತಿಳಿಸಿಕೊಡುತ್ತಾರೆ. ಅವನೇ ಎಲ್ಲರಿಗೂ ಶಕ್ತಿಯ ಸ್ಫೂರ್ತಿಪುರುಷ, ಆರಾಧ್ಯದೇವತೆಯೆಂಬ ತಿಳಿವನ್ನು ಅವರೆಲ್ಲರ ಅಂತರಂಗದಲ್ಲಿ ಸ್ಥಿತವಾಗುವಂತೆ ಬೋಧಿಸುತ್ತಾರೆ. ಯುವಕರಿಗೆ ನಿಯಮಿತವಾಗಿ ವ್ಯಾಯಾಮ, ದೇಹಧಾರ್ಢ್ಯ ರೂಢಿಸಿಕೊಳ್ಳುವುದು, ಸಮರಕಲೆಯ ಅಭ್ಯಾಸ, ಅದರಲ್ಲಿಯೂ ಭಾರತೀಯ ಕಲರಿಪಟ್ಟುವಿನ ತರಬೇತಿ ನೀಡುತ್ತಾರೆ. ಜೊತೆಗೆ ಗಧೆ, ಬಿಲ್ಲುಬಾಣ, ಕತ್ತಿ, ಮೊದಲಾದ ಆಯುಧಗಳನ್ನು ಬಳಸುವುದನ್ನು ಕಲಿಸುತ್ತಾರೆ. ಒಟ್ಟಿನಲ್ಲಿ ಅವರನ್ನು ಸಮಗ್ರ ಯೋಧರನ್ನಾಗಿ ಮಾಡುತ್ತಾರೆ. ಮುಂದೆ ಕಾರ್ಯಾಚರಣೆಗಳಲ್ಲಿ ಅನುಸರಿಸಬೇಕಾದ ಅಂಶಗಳ ಬಗ್ಗೆ ತಿಳಿಸಿಕೊಡುತ್ತಾರೆ. ಸತತ ಜಾಗೃತಿ, ತೀಕ್ಷ್ಣನೋಟ, ವೈರಿಗಳ ಚಲನವಲನ ಗಮನಿಸುವುದು, ಶತೃಗಳ ಬಗ್ಗೆ ಗುಪ್ತವಾಗಿ ಮಾಹಿತಿಗಳನ್ನು ಸಂಗ್ರಹಿಸುವ ಬೇಹುಗಾರಿಕೆ, ಶತೃಗಳಲ್ಲಿ ವಿಶ್ವಾಸದಿಂದ ವರ್ತಿಸಿ ಅವರ ಗುಟ್ಟುಗಳನ್ನು ಅರಿಯುವುದು, ಶತೃಗಳಿಗೆ ಕಾಣದಂತೆ ಅಡಗಿಕೊಂಡು ಅವರಮೇಲೆ ಆಕ್ರಮಿಸುವ ಗೆರಿಲ್ಲಾ ಯುದ್ಧರೀತಿಗಳು ಎಲ್ಲವನ್ನೂ ನಿಧಾನವಾಗಿ ಕಲಿಸುತ್ತಾರೆ. ಅಷ್ಟುಹೊತ್ತಿಗಾಗಲೇ ಆಚಾರ್ಯರ ಶಿಷ್ಯರಾಗಿ ಇವುಗಳಲ್ಲಿ ಪರಿಣತರಾಗಿದ್ದ ಕಾಂತ, ಸಾಕ್ಷಿ ಎಂಬುವರನ್ನು ಇವರಿಗೆ ಪರಿಚಯಿಸುತ್ತಾರೆ. ಅವರಿಂದ ಬಹಳಷ್ಟು ಮಾರ್ಗದರ್ಶನ ಇವರಿಗೆ ದೊರೆಯುತ್ತದೆ. ಕಾಂತನಿಗೆ ಶತ್ರುಗಳ ಮಿತ್ರತ್ವ ಗಳಿಸಿ ಅವರ ಗುಟ್ಟುಗಳನ್ನು ತಿಳಿಯುವ ಅಪಾಯಕಾರಿ ಕೆಲಸ. ಅದರಲ್ಲಿ ಒಮ್ಮೆ ಆತ ಶತ್ರು ಪಡೆಯವರಲ್ಲಿ ಸೇರಿ ತನ್ನ ಜೊತೆಗೆ ಸೈನಿಕರು ನಾಲ್ವರಿದ್ದರೂ ಮೇಲೆ ತಮ್ಮತ್ತ ಆಕ್ರಮಣ ಮಾಡಿದ ಹೆಬ್ಬುಲಿಯೊಂದನ್ನು ಬರಿಯ ಬಿದಿರಿನ ಉರಿಯುವ ದೊಂದಿಗಳ ಸಹಾಯದಿಂದಲೇ ಎದುರಿಸಿ ಓಡಿಸುತ್ತಾನೆ. ಅದನ್ನು ವೀಕ್ಷಿಸಿದ ಕೈಯಲ್ಲಿ ಬಂದೂಕು ಹಿಡಿದಿದ್ದ ಬ್ರಿಟಿಷ್ ಸೈನಿಕರು ಬೆರಗಾಗುತ್ತಾರೆ. ಅಂದಿನಿಂದ ಅವನ ಸಾಹಸಕ್ಕೆ ಮೆಚ್ಚಿ ಬ್ರಿಟಿಷ್ ಅಧಿಕಾರಿಗಳು ಕಾಂತನನ್ನು ಪ್ರಶಂಸಿಸಿ ಅವನಿಗೆ ಹವಾ ಟೈಗರ್ ಎಂಬ ಬಿರುದು ನೀಡಿದ್ದೇ ಅಲ್ಲದೆ ಒಂದು ಸೈನಿಕರ ಗುಂಪನ್ನು ಅವನೇ ಮುನ್ನಡೆಸುವ ಅಧಿಕಾರ ನೀಡಿ ಅವನಿಗೊಂದು ಬಂದೂಕನ್ನೂ ಕೊಡುತ್ತಾರೆ.

ಅರಣ್ಯ ಪ್ರದೇಶ ಮತ್ತು ಬೆಟ್ಟಸಾಲುಗಳ ಗ್ರಾಮಗಳಲ್ಲಿ ಆಚಾರ್ಯರೊಡನೆ ಮಿತ್ರತ್ವ ಹೊಂದಿರುವ, ಸಂಪರ್ಕದಲ್ಲಿರುವ ಅನೇಕ ಸಣ್ಣಪುಟ್ಟ ಗುಂಪುಗಳಿವೆಯೆಂಬ ವಿಷಯವೂ ಕಾಲಕ್ರಮೇಣ ಯುವ ಸಾಹಸಿಗಳಿಗೆ ತಿಳಿಯುತ್ತದೆ. ತಾವೆಲ್ಲರೂ ಒಟ್ಟಾಗಿ ಅತಿಕ್ರಮಣಕಾರರಾದ ಬ್ರಿಟಿಷರ ಯೋಜನೆಗಳನ್ನು ವಿಫಲಗೊಳಿಸುವುದೇ ಮುಖ್ಯ ಗುರಿ ಎಂದು ಇವರೆಲ್ಲರಿಗೂ ಅರಿವಾಗಿರುತ್ತದೆ. ಅರಣ್ಯ ಮಧ್ಯೆ ತಲೆಯೆತ್ತಿದ ಬೆಟ್ಟಗಳಲ್ಲಿ ಅಲ್ಲಲ್ಲಿ ಪೂರ್ವ ಕಾಲದಿಂದ ಭಾರತೀಯರು ಪವಿತ್ರವೆಂದು ಆರಾಧಿಸಿಕೊಂಡು ಬಂದಿರುವ ಅನೇಕ ದೇವಾಲಯಗಳಿದ್ದವು. ಅವುಗಳ ಬಗ್ಗೆ ಪುರಾತತ್ವ ತಜ್ಞ ಬ್ರಿಟಿಷ್ ಅಧಿಕಾರಿಯೊಬ್ಬ ಮಾಹಿತಿಗಳನ್ನು ಕಲೆಹಾಕಿ ಅವುಗಳಲ್ಲಿದ್ದ ಮೂರ್ತಿಗಳನ್ನು ಅಪಹರಿಸಲು ಮತ್ತು ದೇವಾಲಯಗಳಲ್ಲಿ ಆಪತ್ಕಾಲಧನವಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತನ್ನು ಲೂಟಿ ಮಾಡಲು ಯೋಜನೆ ಹಾಕಿ ಬಂದಿದ್ದರು. ಅವರೆಲ್ಲ ಕೆಲಸ ಮುಗಿಸಿ ಶೀಘ್ರವಾಗಿ ಹಿಂದಿರುಗಿ ಹೋಗುವ ಆತುರದಲ್ಲಿದ್ದರು. ಅದಕ್ಕಾಗಿ ಜಲಮಾರ್ಗದಲ್ಲಿ ಚಲಿಸುವ ಪುಟ್ಟ ಹಡಗುಗಳಲ್ಲಿ ಸಾಕಷ್ಟು ಮಂದಿ ಸೈನಿಕರನ್ನೂ ಕರೆತಂದಿದ್ದರು. ಆದರೆ ದೇವಾಲಯಗಳಿರುವ ಸ್ಥಳಗಳು ಹತ್ತಲು ಸಾಧ್ಯವಾಗದ ದುರ್ಗಮ ಹಾದಿಯಲ್ಲಿದ್ದವು. ಅದಕ್ಕಾಗಿ ಬ್ರಿಟಿಷರು ಸ್ಥಳೀಯ ಜನಗಳನ್ನೇ ಹಣ ಮತ್ತು ಸವಲತ್ತುಗಳ ಆಸೆ ಹುಟ್ಟಿಸಿ ಮಾಗದರ್ಶನ ಮಾಡಲು ಬಳಸಿಕೊಳ್ಳುತ್ತಿದ್ದರು. ಮೂರ್ತಿಗಳನ್ನು ಮತ್ತು ಲೂಟಿಮಾಡಿದ ಸಂಪತ್ತನ್ನು ತುಂಬಿದ ಪೆಟ್ಟಿಗೆಗಳನ್ನು ಗ್ರಾಮೀಣರ ಎತ್ತಿನ ಗಾಡಿಗಳ ಮೂಲಕವಾಗಿಯೇ ನದಿಯ ಬಳಿಯಿದ್ದ ಹಡಗುಗಳಿಗೆ ಸಾಗಿಸಲು ಆಲೋಚಿಸಿದ್ದರು.
ಅಚಾರ್ಯರು ಮತ್ತವರ ನಂಬಿಕಸ್ಥ ಯೋಧರಾದ ನಾಗ, ಕಾಳ, ಬೋಕ, ಸಾಕ್ಷಿ, ಕಾಂತ, ಮತ್ತು ಅವರ ಹಿತೈಷಿಗಳಾದ ವಿಶ್ವನಾಥರೆಂಬ ಸ್ಥಳೀಯರೊಡನೆ ಬ್ರಿಟಿಷರ ಯೋಜನೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಯಾರ್‍ಯಾರು ಎಲ್ಲೆಲ್ಲಿ ಕಾರ್ಯಾಚರಣೆಯಲ್ಲಿರಬೇಕು ಎನ್ನುವುದನ್ನು ತೀರ್ಮಾನಿಸಿ ಅದರಂತೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ ಎತ್ತಿನ ಬಂಡಿಯ ಮಾಲೀಕರು ಸ್ಥಳೀಯರಾದ್ದರಿಂದ ಇವರೊಡನೆ ಕೈಜೋಡಿಸಿದ್ದರು.

ಅರಣ್ಯದ ವಿವಿಧ ಭಾಗಗಳಲ್ಲಿ ಹರಡಿ ಅಡಗಿದ್ದ ಬೇರೆ ಬೇರೆ ಗುಂಪುಗಳ ನಡುವೆ ಸಂಪರ್ಕಕ್ಕಾಗಿ ಅವರು ಬಳಸಿದ ಸಂಕೇತಗಳೆಂದರೆ ಲಯಬದ್ಧವಾದ ಚಂಡೆಶಬ್ದ, ಮತ್ತು ಸಿಂಗಳೀಕನ ಕೂಗಿನ ಅನುಕರಣೆ. ಅಧಿಕಾರಿಗಳು ಅಲ್ಲಿಯವರೆಗೆ ಹತ್ತು ಪೆಟ್ಟಿಗೆಗಳಲ್ಲಿ ಆಭರಣಗಳೇ ಮುಂತಾದ ಅಮೂಲ್ಯ ವಸ್ತುಗಳನ್ನು ತುಂಬಿಸಿ ಸಂಗ್ರಹಿಸಿಟ್ಟಿದ್ದರು. ಅದರ ಮಾಹಿತಿಯು ಆಚಾರ್ಯರ ಸಹಯೋಗಿ ವಿಶ್ವನಾಥರಿಗೆ ತಿಳಿದಿತ್ತು. ಕೊನೆಯ ಲೂಟಿಗಾಗಿ ಅರಣ್ಯನಿ ಬೆಟ್ಟದಲ್ಲಿರುವ ಗಣಪತಿ, ಪಂಜುರ್ಲಿ ಮತ್ತು ಅರಣ್ಯದೇವಿಯ ಮೂರ್ತಿಗಳನ್ನು ಕದಿಯುವ ಪ್ರಯತ್ನ ನಡೆದಿತ್ತು.

ಇದನ್ನು ಯಶಸ್ವಿಯಾಗಿ ತಡೆಯುವ ಪ್ರಯತ್ನ ಆಚಾರ್ಯರ ಯೋಧರಿಂದ ನಡೆಯಿತು. ಅರಣ್ಯನಿ ಬೆಟ್ಟವನ್ನೇರುವುದು ತುಂಬ ಕಷ್ಟಕರವಾಗಿತ್ತು. ಸೈನಿಕರ ಗುಂಪು ಹಂತಹಂತವಾಗಿ ಮೇಲೇರುತ್ತಿರುತ್ತಿದ್ದಂತೆ ಹಿಂದಿನಿಂದ ಆಕ್ರಮಣ ಮಾಡಿ ಅವರನ್ನು ಸ್ವಾತಂತ್ರ್ಯ ಯೋಧರು ಹತ್ಯೆ ಮಾಡತೊಡಗಿದರು. ಆಗ ಅಕಸ್ಮಾತ್ತಾಗಿ ಕಾಂತನ ಗುಟ್ಟು ಗೊತ್ತಾಗಿ ಅಧಿಕಾರಿಯೊಬ್ಬ ಅವನು ತಮ್ಮ ಶತ್ರುವೆಂದು ಗುಂಡಿಟ್ಟು ಕೊಂದುಬಿಟ್ಟನು. ಇನ್ನೊಬ್ಬ ಸೈನಿಕ ಪಂಜುರ್ಲಿ ದೇವತೆಯ ಮೂರ್ತಿಯನ್ನು ಹೊಳೆಯ ಬಳಿ ಎತ್ತಿ ಓಡುತ್ತಿರುವಾಗ ಆತುರದಲ್ಲಿ ಮೂರ್ತಿಯನ್ನು ಹೊಳೆಯೊಳಕ್ಕೆ ಹಾಕಿಬಿಟ್ಟ. ಅವನೂ ಹೊಳೆಯೊಳಗೆ ಮುಳುಗಿದಾಗ ಮೊಸಳೆಗೆ ಬಲಿಯಾಗಿ ಸತ್ತ, ಆದರೆ ಪ್ರತ್ಯಕ್ಷದರ್ಶಿಯಾದ ಆಚಾರ್ಯರು ತಾವೇ ಹರಿವು ಕಡಿಮೆಯಿರುವ ಕೆಳಭಾಗದಲ್ಲಿ ಮುಳುಗಿ ಮೂರ್ತಿಯನ್ನು ಎತ್ತಿ ಹೊರತಂದರು. ಅರಣ್ಯನಿ ದೇವಿಯ ಮೂರ್ತಿಯನ್ನು ಅವರು ಅಪಹರಿಸಲು ವಿಫಲರಾದರು. ಜೊತೆಗೆ ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ ಆಭರಣಗಳು, ಅಮೂಲ್ಯ ವಸ್ತುಗಳನ್ನು ಎತ್ತಿನ ಬಂಡಿಯವರು ಹಡಗಿನ ಬದಲಾಗಿ ಸುರಕ್ಷಿತವಾಗಿ ಆಚಾರ್ಯರ ಸ್ಥಾನಕ್ಕೆ ಸಾಗಿಸಿದ್ದರು. ಎಲ್ಲ ಲೂಟಿಕೋರರ ಹತ್ಯೆಯಾಗಿ ಉದ್ದೇಶಿತ ದೇವಾಲಯಗಳ ಮೂರ್ತಿಗಳು ಮತ್ತು ಅಮೂಲ್ಯ ವಸ್ತುಗಳು, ಮತ್ತು ಅರಣ್ಯ ಪ್ರದೇಶದ ರಕ್ಷಣಾಕಾರ್ಯ ಸುಸೂತ್ರವಾಗಿ ನಡೆದು ಸಂಪೂರ್ಣವಾಯಿತು. ಸ್ವಾತಂತ್ರ್ಯ ಕಲಿಗಳ ಪ್ರಯತ್ನ ಯಶಸ್ವಿಯಾಗಿ ಎಲ್ಲರೂ ಆಚಾರ್ಯರ ಗುಡಿಸಲಿನಲ್ಲಿ ಸೇರಿದರು. ಆದರೆ ತಮ್ಮ ಪ್ರಯತ್ನದಲ್ಲಿ ಮುಖ್ಯ ಪಾತ್ರಧಾರಿ ಕಾಂತ ಹುತಾತ್ಮನಾಗಿದ್ದ. ಅವನಿಗಾಗಿ ಎಲ್ಲರೂ ಕಣ್ಣೀರುಗರೆದರು. ಅಷ್ಟು ಹೊತ್ತಿಗೆ ದೇಶ ಸ್ವತಂತ್ರವಾಗಿದ್ದು ಸ್ವತಂತ್ರ ಭಾರತದ ಸರ್ಕಾರಿ ಪೋಲೀಸ್ ಅಧಿಕಾರಿ ತಾನೇ ಖುದ್ದಾಗಿ ಆಚಾರ್ಯರಲ್ಲಿಗೆ ಬಂದು ಎಲ್ಲರ ಸಾಹಸವನ್ನು ಪ್ರಶಂಸಿಸಿ ತನ್ನ ಗೌರವ ಸೂಚಿಸಿದ. ಅರಣ್ಯನಿ ಕಥಾವಸ್ತು ಇಲ್ಲಿಗೆ ಸಮಾಪ್ತಿಯಾಗಿದೆ.

ಕಥಾ ನಿರೂಪಣೆಯ ಬಗ್ಗೆ ಒಂದು ಮಾತು: ಕಾಡಿನಲ್ಲಿ ಸಾಹಸಿಗಳ ಚಲನವಲನ, ಕಾರ್ಯಾಚರಣೆಗಳನ್ನು ಹೆಜ್ಜೆಹೆಜ್ಜೆಗೂ ನಮ್ಮ ಮುಂದೆಯೇ ನಡೆದಂತೆ ವಿವರಿಸಿರುವ ಲೇಖಕ ತೇಜಸ್ ಮುಂದೆ ಒಬ್ಬ ಒಳ್ಳೆಯ ಕಥೆಗಾರನಾಗುವ ಎಲ್ಲ ಲಕ್ಷಣಗಳನ್ನು ತೋರಿದ್ದಾರೆ. ಇವರ ಮುಂದಿನ ಪ್ರಯತ್ನಗಳು ನಿರಂತರವಾಗಿರಲಿ ಮತ್ತು ಇವರಿಗೆ ಹೆಚ್ಚೆಚ್ಚು ಯಶಸ್ಸು ಸಿಗಲೆಂದು ಆಶಿಸುತ್ತೇನೆ. ಕೃತಿಗಾಗಿ ಇನ್ನೊಮ್ಮೆ ಅಭಿನಂದನೆಗಳು.

-ಬಿ.ಆರ್.ನಾಗರತ್ನ. ಮೈಸೂರು.

15 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ ಕಾದಂಬರಿಯ ಪರಿಚಯ

 2. Anonymous says:

  ಸುಂದರವಾದ ವಿಶ್ಲೇಷಣೆ ಸುಲಲಿತವಾದ ವಿವರಣೆ. ಪುಟ್ಟ ಹುಡುಗನ ದಿಟ್ಟ ಸಾಹಸಕ್ಕೆ ಹಾಗೂ ಪುಸ್ತಕ ಪರಿಚಯಕ್ಕೆ ನಮ್ಮ ದೊಂದು ಮೆಚ್ಚಿಗೆಯ ಅಭಿನಂದನೆಗಳು

 3. ಧನ್ಯವಾದಗಳು ನಯನ ಮೇಡಂ

 4. MAJNURAJ H N says:

  ಕಾದಂಬರಿಯ ಪರಿಚಯ ಸೊಗಸಾಗಿ ಮೂಡಿಬಂದಿದೆ. ವಿಶೇಷ ಕಥಾವಸ್ತು ಮತ್ತು ನಿರೂಪಣಾ ಕ್ರಮ ಗಮನ ಸೆಳೆಯಿತು.

  ಕಾದಂಬರಿ ಓದುವ ಹಂಬಲ ಉಂಟಾಗುವಂತೆ ಮಾಡಿತು. ಇದೇ ನಿಮ್ಮ ಬರೆಹದ ಸಾರ್ಥಕತೆ. ಧನ್ಯವಾದಗಳು

  • Tejas H Badala says:

   ಧನ್ಯವಾದಗಳು ಮಂಜುರಾಜ್‌ ಸರ್!‌ ದಯವಿಟ್ಟು ಪುಸ್ತಕವನ್ನು ಓದಿ, ನಿಮ್ಮ ಅಭಿಪ್ರಾಯ ತಿಳಿಸಿ!

 5. ಧನ್ಯವಾದಗಳು ಮಂಜುರಾಜ್ ಸರ್

 6. Padma Anand says:

  ಕುತೂಹಲಭರಿತ ಸಾಹಸಮಯ, ದೇಶಪ್ರೇಮವನ್ನು ಜಾಗೃತಗೊಳಿಸಿವಂತಹ ಕಥಾವಸ್ತುವನ್ನು ಹೊಂದಿರುವ ಪುಸ್ತಕ , ಹಾಗೂ ಯುವ ಬರಹಗಾರರ ಪರಿಚಯ ಸೊಗಸಾಗಿ ಮೂಡಿ ಬಂದಿದೆ ಅದರಲ್ಲೂ ನಮ್ಮ ಈ ಯುವ ಪ್ರತಿಭೆಯ ಕಂಪು ಆಗಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಪ್ರತಿಭೆಗೆ ಸಂದ ಪುರಸ್ಕಾರವಾಗಿದೆ. ಲೇಖಕ ತೇಜಸ್ ಅವರಿಗೂ , ಪರಿಚಯಿಸಿದ ಗೆಳತಿ ನಾಗರತ್ನ ಅವರಿಗೂ ತುಂಬು ಮನದ ಅಭಿನಂದನೆಗಳು.

  • Tejas H Badala says:

   ಎಲ್ಲಾ ಶ್ರೀಗುರುಗಳ ಕೃಪೆ ಹಾಗು ನಿಮ್ಮಂತಹವರ ಆಶೀರ್ವಾದ..ನಾಗರತ್ನ ಆಂಟಿಯವರ ದೊಡ್ಡತನ ಅಷ್ಟೇ, ನಾನು ಪುಸ್ತಕ ಕೊಟ್ಟರೆ ಅದನ್ನು ಓದಿ, ಇಷ್ಟು ಬಿಡುವು ಮಾಡಿಕೊಂಡು, ಅವಲೋಕನ ಬರೆದಿದ್ದಾರೆ!

 7. Tejas H Badala says:

  ಅಬ್ಬಾ! ಆಂಟಿ, ಸಾಷ್ಟಾಂಗ ಪ್ರಣಾಮಗಳು…ನನಗೇ ನನ್ನ ಪುಸ್ತಕವನ್ನು ಮತ್ತೊಮ್ಮೆ ಓದಿದಂತೆ ಆಯಿತು! ನಿಮ್ಮ ಪ್ರೋತ್ಸಾಹ ಹಾಗು ಆಶೀರ್ವಾದಗಳು ಸದಾ ನನ್ನ ಮೇಲಿರಲಿ ಎಂದು ಬೇಡುತ್ತೇನೆ

 8. ಧನ್ಯವಾದಗಳು ಪದ್ಮಾ ಮೇಡಂ

 9. Hema says:

  ಯುವಮನಸ್ಸುಗಳು ಮಾತೃಭಾಷೆಯಲ್ಲಿ ಮಾತನಾಡಲೂ ಹಿಂಜರಿಯುವ ಈ ದಿನಗಳಲ್ಲಿ, ಇಷ್ಟು ಉತ್ತಮವಾದ ಕಥಾವಸ್ತುವನ್ನು ಆರಿಸಿಕೊಂಡು, ಪ್ರಬುದ್ಧವಾದ ಕಾದಂಬರಿ ಬರೆದು, ಪ್ರಧಾನಮಂತ್ರಿಯವರ ‘ಯುವ’ಯೋಜನೆಯಲ್ಲಿ ಆಯ್ಕೆಯಾದ ತೇಜಸ್ ಬಗ್ಗೆ ನಮಗೆಲ್ಲಾ ಹೆಮ್ಮೆ. ನಿಮ್ಮಿಂದ ಇನ್ನಷ್ಟು ಸಾಹಿತ್ಯದ ಸೃಷಿಯಾಗಲಿ, ಶುಭವಾಗಲಿ ಎಂದು ನನ್ನ ಹಾರೈಕೆ.

 10. ಶುಭಹಾರೈಕೆಗಳು ತೇಜಸ್… ನಿನ್ನಿಂದ ಇನ್ನೂ ಹೆಚ್ಚಿನ ಸಾಹಿತ್ಯ ಕೃತಿಗಳು ಬರ ಲಿ ದೇವರು ನಿನಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ…ಇಂದಿನ ಯುವಕರಿಗೆ ಮಾದರಿಯಾಗಲಿ ಶುಭವಾಗಲಿ.

 11. ಶಂಕರಿ ಶರ್ಮ says:

  ಪ್ರಧಾನಮಂತ್ರಿಯವರ ಯುವ ಜನರಿಗಾಗಿರುವ ಯೋಜನೆಯಡಿ ತೇಜಸ್…ಯುವಸಾಹಿತಿ ಆಯ್ಕೆಯಾದುದು ನಿಜಕ್ಕೂ ಅಭಿಮಾನದ ಸಂಗತಿ… ಅಭಿನಂದನೆಗಳು. ಕಾದಂಬರಿಯ ಕಿರುಪರಿಚಯ ಚೆನ್ನಾಗಿದೆ.

 12. ಧನ್ಯವಾದಗಳು ಹೇಮಾ ಹಾಗೂ ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: