ಪರಮಾತ್ಮನ ಮಂತ್ರಿಯೆನಿಸಿದ ‘ಉದ್ಧವ’

Share Button

ಸಮಾಜದಲ್ಲಿ ಯಾವುದೇ ಯೋಗ್ಯ ಸ್ಥಾನಮಾನ, ಐಶ್ವರ್ಯ, ಸತ್ಕೀರ್ತಿ ದೊರಕಲು ನಾವು ಪಡೆದುಕೊಂಡು ಬಂದಿರಬೇಕು ಎಂದು ಮಾತಿದೆ. ಅರ್ಥಾತ್ ಅದು ಪೂರ್ವಯೋಜಿತ ಕರ್ಮಫಲಗಳೊಂದಿಗೆ ದೈವಾನುಗ್ರಹ ಎಂಬ ನಂಬಿಕೆಯಲ್ಲಿ ಆ ನುಡಿ ಬಂದಿದೆ. ನಾವು ಅನುಭವಿಸುವ ನಿರೀಕ್ಷಿಸುವ ಸಕಲ ಕಾಮನೆಗಳೂ ಅಷ್ಟೇ. ಹಿಂದಿನ ಅರಸರ ಆಳ್ವಿಕೆಯಲ್ಲಿ ರಾಜನಮಂತ್ರಿ, ರಾಜಪುರೋಹಿತ, ರಾಜವೈದ್ಯ ಹೀಗೆ ರಾಜರ ನಿಕಟವರ್ತಿಗಳಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇತ್ತು. ಪ್ರಸ್ತುತ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಅದರಲ್ಲೂ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಇಂತಹ ಮೇಲ್ಪಟ್ಟದ ಅಧಿಕಾರಿಗಳ ಆಪ್ತ ಸಲಹೆಗಾರರಿಗೆ (ಪರ್ಸನಲ್ ಅಸಿಸ್ಟೆಂಟ್) ಅವರ ಅಧಿಕಾರಿಗಳಿಂದಾಗಿ ವಿಶೇಷ ಗೌರವ, ಮನ್ನಣೆಗಳು ಲಭಿಸುತ್ತವೆ. ಹಾಗಾದರೆ…ದೇವ ದೇವನಾದ ಭಕ್ತವತ್ಸಲ, ಶ್ರೀಕೃಷ್ಣನ ಮುಖ್ಯಮಂತ್ರಿ ಪಟ್ಟ ಸಿಗಬೇಕಾದರೆ? ಜನ್ಮ ಜನ್ಮಾಂತರದ ಸುಕೃತ ಫಲ ಬೇಡವೇ? ಹೌದು, ಇದರಲ್ಲಿ ಸಂಶಯವಿಲ್ಲ. ಅವತಾರ ಪುರುಷರ ಆಪ್ತರ ಪಟ್ಟಿಯಲ್ಲಿ ಹಿಂದೆ ಇದೇ ಅಂಕಣದಲ್ಲಿ ಕೃಷ್ಣನಿಗೆ ವಿದ್ಯೆ ಕಲಿಸಿದ ‘ಸಾಂದೀಪಿನಿ’ ಮುನಿಯನ್ನು ನೋಡಿದ್ದೇವೆ. ಮಹಾವಿಷ್ಣು ಕಿಂಕರರಾದ ಜಯ-ವಿಜಯರನ್ನು, ರಾಮಸಖ ಸುಗ್ರೀವನನ್ನು, ರಾಮಭಕ್ತ ಹನುಮಂತನನ್ನು, ದಶರಥನ ಮಂತ್ರಿ (ರಾಮನ ಅತೀವ ಭಕ್ತ) ಸುಮಂತ್ರನನ್ನು ಹೀಗೆ ಕೆಲವು ಪುರಷರನ್ನು ಪರಿಚಯಿಸಿದ್ದೇವೆ. ಈ ಬಾರಿ ಶ್ರೀಕೃಷ್ಣನ ಮುಖ್ಯಮಂತ್ರಿ ‘ಉದ್ಧವ’ನ ಬಗ್ಗೆ ಪರಿಚಯಿಸೋಣ.

ಭಗವಾನ್ ವಾಸುದೇವನ ಮುಖ್ಯ ಸೇವಕನ ಪಟ್ಟವೆಂದರೆ ಸುಲಭದಲ್ಲಿ ಸಿಗುವ ಪಟ್ಟ ಅದಲ್ಲ. ಅಂತಹ ಗೌರವವು ಉದ್ಧವನಿಗೆ ದೊರಕಿತು. ಉದ್ಧವನು ವಸುದೇವನ ತಮ್ಮನಾದ ದೇವಭಾಗನ ಮಗ, ಈತನ ತಾಯಿ ಕಂಸನ ತಂಗಿಯಾದ ಕಂಸೆ, ದೇವಸಮಾನವಾದವನೂ ಕೀರ್ತಿಶಾಲಿಯೂ ಆದ ಈತನಿಗೆ ‘ದೇವವ್ರತ’ ಎಂಬ ಹೆಸರೂ ಇದೆ. ಭಾಗವತ ಶ್ರೇಷ್ಠನಾದ ಉದ್ಧವನು ಸಾಧು ಸ್ವಭಾವದವನು. ಬೃಹಸ್ಪತಿಯರ ಶಿಷ್ಯನೆಂಬ ಪ್ರಸಿದ್ಧಿ ಪಡೆದವನು ಮಾತ್ರವಲ್ಲ ನೀತಿಶಾಸ್ತ್ರ ವಿಶಾರದನು. ಈತನಿಗೆ ಬೃಹದ್ಫಲ ಮತ್ತು ಚಿತ್ರಕೇತು ಎಂಬ ಸೋದರರಿದ್ದರು. ಈತನು ಶ್ರೀಕೃಷ್ಣನಿಂದ ಜಾನೋಪದೇಶ ಪಡೆಯುತ್ತಾನೆ.

ಪಾಂಡವರನ್ನು ಕಪಟದ್ಯೂತದಲ್ಲಿ ಸೋಲಿಸಿದ ದುರ್ಯೋಧನನು ಪಾಂಡವರು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ಮೇಲೆ ಧರ್ಮರಾಯನು ನ್ಯಾಯೋಚಿತನಾಗಿ ತನ್ನ ಒಂದು ಭಾಗದ ರಾಜ್ಯವನ್ನು ಕೇಳಿಕೊಂಡರೂ ಕೊಡದೆ ತಿರಸ್ಕರಿಸುತ್ತಾನೆ. ಈ ಸಂದರ್ಭದಲ್ಲಿ ಧರ್ಮರಾಜನಿಂದ ಕಳುಹಿಸಲ್ಪಟ್ಟ ಶ್ರೀಕೃಷ್ಣನು ಹಿತವಚನ ಹೇಳಿದರೂ ಕೌರವ ಕೇಳಲಿಲ್ಲ. ಈ ಸಂದರ್ಭದಲ್ಲಿ ವಿದುರನನ್ನು ಮಂತ್ರಾಲೋಚನೆ ಮಾಡುವುದಕ್ಕಾಗಿ ಬರಮಾಡಿಕೊಂಡಾಗ ವಿದುರನು ಹೇಳಿದ ನೀತಿಯನ್ನೂ ಕೌರವ ಕಿವಿಗೆ ಹಾಕಲಿಲ್ಲ. ಬದಲಾಗಿ ಆತನಿಗೆ ಅವಮಾನ ಮಾಡಿ ಕಳುಹಿಸುತ್ತಾನೆ. ಅಲ್ಲಿಂದ ಹೊರಟ ವಿದುರ ದೇಶದಲ್ಲೆಡೆ ಸಂಚರಿಸುತ್ತಾ ಯಮುನಾ ನದೀ ತೀರಕ್ಕೆ ಬರುತ್ತಾನೆ. ಆಶ್ರಿತರ ದುಃಖವನ್ನು ದೂರಮಾಡುವಂತಹ ಪರಮಾತ್ಮ ಸ್ವರೂಪಿಯಾದ ಶ್ರೀಕೃಷ್ಣನು ತನ್ನ ಕುಲವನ್ನು ಸಂಹಾರ ಮಾಡಬೇಕೆಂದು ಸಂಕಲ್ಪಿಸಿದನು. ಅವನು ವೈಕುಂಠಕ್ಕೆ ತೆರಳಿದಾಗ ಉದ್ಭವನನ್ನು ಬದರಿಕಾಶ್ರಮಕ್ಕೆ ಹೋಗಿ ತಪಸ್ಸು ಮಾಡಲು ಸೂಚಿಸಿ ಹೇಳಿದ್ದೇನೆಂದರೆ ”ಉದ್ಧವಾ… ನಿನ್ನ ಆತಂಕ, ಅಭಿಲಾಶ ನಾನು ಬಲ್ಲೆನು. ಇತರರಿಗೆ ಅತ್ಯಂತ ದುರ್ಲಭವಾದ ಸಾಧನೆಯೊಂದನ್ನು ನಿನಗೆ ಕೊಡುವೆನು. ಹಿಂದಿನ ಜನ್ಮದಲ್ಲಿ ನೀನು ವಸುದೇವತೆಯಾಗಿದ್ದೆ. ಪ್ರಜಾಪತಿಗಳೂ ವಸುದೇವತೆಗಳೂ ಕೂಡಿ ಯಜ್ಞದಿಂದ ನನ್ನನ್ನು ಪಡೆಯಲು ಆರಾಧಿಸಿದರು. ನಿನಗಿದು ಅಂತಿಮ ಜನ್ಮವಾಗಿದೆ. ಈಗ ನಾನು ಮರ್ತ್ಯಲೋಕವನ್ನು ಬಿಟ್ಟು ಸ್ವಧಾಮಕ್ಕೆ ತೆರಳಲು ನಿಶ್ಚಯಿಸಿರುವೆನು. ನೀನು ಬದರಿಕಾಶ್ರಮಕ್ಕೆ ಹೋಗು” ಎಂದು ಶ್ರೀಕೃಷ್ಣನು ಉದ್ಧವನಿಗೆ ಹೇಳಿದನು. ಮುಂದೆ ಉದ್ಧವನಿಗೆ ವಿದುರನು ಎದುರಾಗುವನು. ಉದ್ಧವನು ವಿದುರನಿಗೆ ಭಗವಂತನ ಬಾಲಲೀಲೆಗಳನ್ನು ವರ್ಣಿಸುತ್ತಾನೆ.

ಶ್ರೀಕೃಷ್ಣನು ಸರ್ವಜ್ಞನಾಗಿ ಸದಾ ಅಕುಂಠಿತವಾದ ಅಖಂಡ ಜ್ಞಾನವನ್ನು ಹೊಂದಿದ್ದರೂ ಕಾರ್ಯಾಲೋಚನೆಯಲ್ಲಿ ಉದ್ಭವನನ್ನು ಕರೆಸಿ ಸಲಹೆ ಕೇಳುತ್ತಿದ್ದನು.ಪರಮಾತ್ಮನ ಮಂತ್ರಿಯಾದ ಉದ್ಧವನು ಪ್ರಾತಃಸ್ಮರಣೀಯ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Vijayasubrahmanya says:

  ಸುರಹೊನ್ನೆ ಅಡ್ಮಿನ್ ಶ್ರೀಮತಿ ಹೇಮಮಾಲ ಹಾಗೂ ಓದುಗರಿಗೆ ಧನ್ಯವಾದಗಳು.

 2. ಎಂದಿನಂತೆ ಪುರಾಣ ಕಥೆ ಯ ಹಂದರದಲ್ಲಿ..ಬರುವ ಕಥೆಗಳು ನನಗೆ ಅಪ್ಯಾಯ ಮಾನವೇ..ನೀವು ಕಥೆ ಹೇಳುವ ಮುನ್ನ ಅದಕ್ಕೆ ಸಂಬಂಧಿಸಿದ..ಪೀಠಿಕೆ ಹಾಕುತ್ತೀರಲ್ಲಾ ಅದು ತುಂಬಾ ಉಪಯುಕ್ತ ವಾಗುತ್ತದೆ ವಿಜಯ ಮೇಡಂ..
  ಅದಕ್ಕಾಗಿ ನಿಮಗೆ ಧನ್ಯವಾದಗಳು.

 3. ನಯನ ಬಜಕೂಡ್ಲು says:

  Nice one

 4. Padma Anand says:

  ಪ್ರಾತಃಸ್ಮರಣೀಯ ಉದ್ಧವನ ಪೌರಾಣಿಕ ಕಥೆ ಎಂದಿನಂತೆ ಅಪರೂಪದ ವಿವರಣೆಗಳೊಂದಿಗೆ ಸೊಗಸಾಗಿದೆ. ಅಭಿನಂದನೆಗಳು.

 5. ಶಂಕರಿ ಶರ್ಮ says:

  ಶ್ರೀಕೃಷ್ಣ ಪರಮಾತ್ಮನ ಮಂತ್ರಿ ಉದ್ಧವನ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: