ಗಂಗೆ

Share Button

ಪ್ರವಾಸ ಎಂದೊಡನೆ ಈ ಬಾರಿ ಸ್ವಲ್ಪ ಉತ್ಸುಕತೆ ಜಾಸ್ತಿಯೇ ಬೇರೂರಿತ್ತು . ಭಾರತದೊಳಗೆ ಹೃಷಿಕೇಶ ನೋಡಿ ಆನಂತರ  ‘ತೇರಿ ‘ ನೋಡಲು ಡೆಲ್ಲಿ ,ಡೆಹರಾಡೂನ್ ದಾಟಿಹೋಗಬೇಕಾಗಿದೆ. ಈ  ಪ್ರಯಾಣದಲ್ಲಿ ತಂಗಿ ,ತಂಗಿಮಗಳು ,ವಿದೇಶದಿಂದ , ಸ್ವದೇಶವ ನೋಡಲು ಜೊತೆಗಿದ್ದರು . ತಾಯಿ  ಮತ್ತು ತಮ್ಮನ ಕುಟುಂಬ  ನಮ್ಮ ಮನೆಮಂದಿಯ ಗುಂಪೇ ಇತ್ತು. ನಮ್ಮ ಕುಟುಂಬದ ,ದೊಡ್ಡ ಗುಂಪೇ  ಗಂಗೆಯನ್ನು ನೋಡಿ ದೀಪದ ಆರತಿ  ಮಾಡಿ ಪೂಜಿಸಲು ಹೋಗುತ್ತಿದ್ದೇವೆ . ತೇರಿಯಲ್ಲಿ ಬೋಟಿಂಗ್ ಮಾಡಿ ಮಕ್ಕಳಿಗೆ ನಿರುತ್ಸಾಹವಾದಾಗ ಜೀವನದ ಕೆಲವು ಕೋನಗಳನ್ನು ಬದಲಿಸಿ  ಜಿಗುಪ್ಸೆ ಹೊರದೂಡಲು ಪ್ರವಾಸ ಕೆಲವೊಮ್ಮೆ ಮುಖ್ಯವಾಗುತ್ತದೆ . ನಿಸರ್ಗದ ಅಚ್ಚನ್ನು ಮನದೊಳಗೆ ತೇಲಿಸಿ ತೇಲಿಸಿ  ಮುನ್ನುಗ್ಗುತ್ತಿರುವ  ವಿಮಾನ ನಮ್ಮ ಗಂಗೆಯ ದರ್ಶನಕ್ಕೆ  ಸವಾರಿಯ ವಾಹನ. ಎಲ್ಲರ ಮೊಗದಲ್ಲೂ ಅಪರೂಪಕ್ಕೆ ಒಟ್ಟಾಗಿ ಟೂರ್  ಹೊರಟಿರುವುದರಿಂದ ನಗೆಯು ಕಾಣುತ್ತಿತ್ತು.ಬೆಂಗಳೂರಿನಿಂದ ಡೆಲ್ಲಿಯ ಏರ್ಫೋರ್ಟ್ ತಲುಪಿ ಅಲ್ಲಿ ವಿಶ್ರಮಿಸಿ ಡೆಹರಾಡೂನ್ಗೆ ಅಲ್ಲಿಂದ ಮತ್ತೆ   ಒಂದುವರೆ  ಗಂಟೆಯ ಪ್ರಯಾಣ . ಡೆಹರಾಡೂನ್ ಏರ್ಫೋರ್ಟ್ ಅಂತೂ ತಲುಪಿದ್ದೆವು.ಡೆಲ್ಲಿ  ,ಡೆಹರಾಡೂನ್  ಬಿಟ್ಟು ಇನ್ನೂ ಮುಂದೆ ನಮ್ಮ  ಪ್ರಯಾಣವಿತ್ತು .ಡೆಹರಾಡೂನ್ ಯಿಂದ  ಎರಡು ಕ್ಯಾಬ್ ಮಾಡಿಕೊಂಡು ಹೃಷಿಕೇಶ ತಲುಪಿದೆವು. ನಮ್ಮೆಲ್ಲರ ಕನಸು ಗಂಗಾನದಿಯ ಮುಂದೆ ಕುಳಿತು ಗಂಗೆಯನ್ನು ವೀಕ್ಷಿಸುವುದು . ಹಗಲು ಮತ್ತು ರಾತ್ರಿ ಆಕೆಯ ಚಲನೆಯನ್ನು ಹಿತವಾದ ಶಬ್ದಮಾಧುರ್ಯವನ್ನು ಆಲಿಸುವುದು .

ಹೃಷಿಕೇಶ ತಲುಪಿದಾಗಲೇ ಗೊತ್ತಾಗಿದ್ದು   ನಮ್ಮ ದೇಶದಲ್ಲಿ ಜನಸಂಖ್ಯೆ ಜಾಸ್ತಿ ಇರುವುದು ನಿಜದ ಸಂಗತಿ ! ಗಂಗಾಮಾತಾ ಸೈಲೆಂಟಾಗೇ  ಆಕೆಯ ಪಾಡಿಗೆ ಹರಿಯುತ್ತಿರುವಾಗ ಜನರೇಕೆ ಅಬ್ಬರಮಾಡಿಕೊಂಡು ಗಂಗೆಗೆ  ಶಬ್ಧದ ಅರಿವಿನ ಪಾಠ ಮಾಡುವಂತೆ ಆಡುತ್ತಿದ್ದಾರೆ ? ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಅಯ್ಯೋ  ಹಗಲು ಅಯ್ಯೋ ರಾತ್ರಿ ಯಾವುದನ್ನು ಮಿಸ್ ಮಾಡದೆ ಗಂಗೆಯ ಸನ್ನಿಧಿಯಲ್ಲಿ ಶಾಂತಿಯಿಂದ ಕೂತು ಮನಸ್ಸನ್ನು ನೆಮ್ಮದಿಗೆ ತಂದುಕೊಳ್ಳಬೇಕೆನ್ನುವವರೇ ಜಾಸ್ತಿ ಮಂದಿ ಇದ್ದರು.

ತಂಗುವ ಕೋಣೆಗಳನ್ನು ನೆನೆದರೆ ಮೆಟ್ಟಿಲುಗಳೇ ನೆನಪಾಗುತ್ತವೆ .ರೂಂ ತಲುಪುವಷ್ಟರಲ್ಲಿ ಕಾಲುನೋವು ಇಲ್ಲದವರಿಗೂ ಕಾಲುನೋವು ಬರುವುದು  ಖಂಡಿತ . ಮೆಟ್ಟಿಲನ್ನು  ಹತ್ತಿ ಹತ್ತಿ ಸಾಕುಬೇಕಾಗಿ  ಯಾಕೆ ಹೀಗೆ ವ್ಯವಸ್ಥೆ ಎಂದು ಕೇಳಿದರೆ  ಗಂಗಾನದಿ ಹತ್ತಿರದಲ್ಲಿ ನೋಡಿಕೊಂಡು ಕುಳಿತುಕೊಳ್ಳುವುದು ಸುಲಭವಾದ ಮಾತಲ್ಲ ಕಣಮ್ಮಾ ಕಷ್ಟಪಡಲೇಬೇಕು  ಹತ್ಬೇಕು  ಇಳಿಬೇಕು ಅನ್ನುವವರ ಮಾತನ್ನು ಕೇಳಿಸಿಕೊಂಡಾಗ ನಿಜವೆ ಅನ್ನಿಸಿತ್ತು .

ಗಂಗಾನದಿಯ ಹತ್ತಿರ ನಡೆಯುವ ವಿಜೃಂಭಿಸುವ ಪೂಜೆ , ಗಂಗೆಗೆ ದೀಪದ ಆರತಿ  ಮಾಡುವುದು  ಎಲ್ಲವನ್ನು ಹತ್ತಿರದಿಂದ ನೋಡಬೇಕೆಂದು ಹೊರಟೆವು. ಜನರೋ ಇರುವೆಗಳ ಸಾಲೋ  ಅನ್ನುವಷ್ಟು ಉಕ್ಕುತ್ತಿತ್ತು ಜನರಸಂಖ್ಯೆ. ಅರಳಿಮರದ ಸುತ್ತ ಅಲಂಕಾರ  ವಿಭಿನ್ನತೆಯಿಂದ ಇತ್ತು.ಆ ಮರದ ಹತ್ತಿರ ಹೂವು ,ದೇವರಬತ್ತಿ , ದೀಪ , ಎಲ್ಲವನ್ನು ಗಂಗೆಯ ಮೇಲೆ ತೇಲಿಬಿಡಲು ಮಾರುತ್ತಾ ಜನ ಅಲ್ಲಲ್ಲಿ  ಕುಳಿತ್ತಿದ್ದರು . ಎಲೆಯ ತಟ್ಟೆಯ ಮೇಲೆ ಹೂವು ದೀಪ ಎಣ್ಣೆಯ ಬತ್ತಿ ಗಂಗೆಗೆ ಅರ್ಪಿಸಲು ಕೊಂಡುಕೊಂಡು ಒಳಗೆ ಹೋಗಿ ಕ್ಯೂನಲ್ಲಿ ನಿಂತೆವು. ಗಂಗಾ ಆರತಿಯನ್ನು ನೋಡಲು ಮೊದಲೇ ಹೋಗಿ ಕುಳಿತರೆ ಕಾಣಿಸುತ್ತದೆ ಎಂಬ ಹಿರಿಯರೊಬ್ಬರ ಮಾತಂತೆ ಮೆಟ್ಟಿಲುಗಳ ಮೇಲೆ ಹತ್ತಿ ನೋಡಲು ಎಲ್ಲಾ ಕುಳಿತುಕೊಂಡೆವು .

ಜನರ ಸಂಖ್ಯೆ ಕಡಿಮೆ ಇರುವಾಗಲೇ ಹೋಗಿ ಜಾಗ ಹಿಡಿದುಕೊಂಡು ಕುಳಿತುಕೊಂಡರೆ ಅಧ್ಬುತವಾಗೇ ಗಂಗಾ ಆರಾಧನೆಯನ್ನು ನೋಡಿ ಕಿವಿಯಲ್ಲಿ ಕೇಳಿ ಕಣ್ಮನಗಳ ಗಂಗೆಯ ಮನದಂಗಳಕ್ಕೆ ಹೋಗಿ  ಬರುವಂತೆ ಮಾಡಿಕೊಳ್ಳಬಹುದು .ಗಂಗಾಗೆ ಅನೇಕ ತರಹದ ಶ್ಲೋಕ , ಭಜನೆ, ಇತ್ಯಾದಿ  ಲವಲವಿಕೆಯಿಂದ ವ್ಯವಸ್ಥಿತ ರೂಪದಲ್ಲೇ ಜೋರಾಗಿ ಹೇಳುತ್ತಿದ್ದರು. ಎರಡು ಗಂಟೆಗಳು ಬದುಕಿನ ಜಂಜಾಟಗಳನ್ನು ಮರೆತು ಅಲ್ಲೇ ಕುಳಿತುಕೊಂಡು ಬಿಡಬೇಕೆನಿಸುತ್ತಿತ್ತು . ಅಲ್ಲಿನ ವಾತಾವರಣದಲ್ಲಿ ಒಬ್ಬ ಹಿರಿಯವ್ಯಕ್ತಿ ಓಡಾಡಿಕೊಂಡು   ಜವಬ್ದಾರಿ ನಿರ್ವಹಿಸುತ್ತಿದ್ದರು . ‌ಆ ಜಾಗದಲ್ಲಿ ಯಾವುದೇ ತಾರತಮ್ಯವೂ ಕಂಡುಬರಲಿಲ್ಲ. ಭಜನೆಯ ಹಾಡುಗಳ ಜೊತೆಗೆ ಒಂದೇ ಬಣ್ಣದ ವಸ್ತ್ರ  ಧರಿಸಿದ ಅನೇಕ  ಜನರು ಗಂಗಾ ನದಿಯ ಮುಂದೆ ದೀಪದ ಆರತಿ ಪ್ರಾರಂಭಿಸಿದರು .

ಆ  ದೀಪದ ಆರತಿಯನ್ನು ನೋಡಲು  ಅನೇಕ ದೇಶದಿಂದ ವಿದೇಶಿಗರೂ ಬಂದು ಪಾಲ್ಗೊಳ್ಳುತ್ತಾರೆ. ಇದೊಂದು ಕ್ಷಣಕ್ಕಾಗಿ ಮೂರುದಿನ ನಾಲ್ಕುದಿನವಾದರೂ ತಾಳ್ಮೆಯಿಂದ ಕಾಯ್ದು ಭಾಗವಹಿಸುತ್ತಾರೆ . ನಮ್ಮ ದೇಶದವರಂತೂ ಗಂಗೆ ತುಂಬಿ ಹರಿಯುವಾಗ ಹೇಗೆ ಕಾಣುತ್ತಾಳೋ ಅದೇ ತರವೇ ತುಂಬಿ ಹರಿದು ಬಂದಂತೆಯೇ ಬರುತ್ತಾರೆ. ಗಂಗಾರತಿ ಪ್ರಾರಂಭವಾದೊಡನೆ ಎಲ್ಲಾ ಭಕ್ತಿಯಿಂದ ಎದ್ದು ನಿಂತು ವೀಕ್ಷಿಸಿ ಗೌರವದಿಂದ ಎಲ್ಲಾ ಮಂಗಳಾರತಿ ತೆಗೆದುಕೊಳ್ಳುತ್ತಾರೆ .ಆ ಜಾಗದಲ್ಲಿ ಅಹಂಕಾರವಾಗಿ ಅವರಿಗೆ ಇವರಿಗೆ ಎಂಬ ಭೇದಭಾವ ಮಾಡದೆ ಪ್ರತಿ ವ್ಯಕ್ತಿ , ಮಹಿಳೆಯರು ,ಮಕ್ಕಳು, ಎಂದುಕೊಂಡು ಮುಖಭೇದ ಮಾಡದೆ, ತಳ್ಳದೆ ಎಲ್ಲರಿಗೂ ಮಂಗಳಾರತಿ ದೊರಕುವಂತೆ ಮಾಡುತ್ತಾರೆ.

ಗುಂಪಿನಲ್ಲಿ ಕೈಯಲ್ಲಿದ್ದ  ನಿಂಬೆದೀಪ ಬತ್ತಿ ಹೂವು ಜೋಪಾನ ಮಾಡುವುದೂ ಅಲ್ಲಿ ಕಷ್ಟವಾಗಿತ್ತು. ಮುಂದೆ ಒಂದು ಜಾಗದಲ್ಲಿ ಆರತಿ ಮಾಡಿದ ದೀಪವೊಂದರಿಂದ ದೀಪ ನನ್ನ ಹಚ್ಚಿದೆ. ಹಚ್ಚಿಕೊಂಡು ನಿಧಾನವಾಗಿ ಜನರ ಗುಂಪಿನಲ್ಲಿ ಜಾಗಮಾಡಿಲೊಂಡು ಗಂಗೆಯ ಕಂಬಿಗಳ ಹತ್ತಿರ ದೀಪದ ಆರತಿ ಮಾಡಿದೆ.ಜನರು ಜಾಸ್ತಿ ನುಗ್ಗಲಾರಂಭಿಸಿದರು ಗಂಗೆಯ ನೀರನ್ನು ಮೂರುಬಾರಿ ತಲೆಯ ಮೇಲೆ ಚಿಮುಕಿಸಿಕೊಂಡೆ . ದೀಪವನ್ನು ನಾನು ತೇಲಿಬಿಡುವೆ ದೀದೀ ಎಂದು ಚಿಕ್ಕ ಹುಡುಗಿ ಬಿಡದೆ ಕಿತ್ತುಕೊಂಡು ಬಿಟ್ಟಳು. ಗಂಗೆಗೆ ಪೂಜೆ ಮಾಡಿ.ದೆ ಮಂಗಳಾರತಿ ತೆಗೆದುಕೊಂಡೆ. ಹೂವುಗಳ ಅರ್ಚನೆ ಮಾಡಿದೆ . ಆದರೆ ಆ ಗುಂಪಿನಲ್ಲಿ ಆ ಹುಡುಗಿಯನ್ನು ಹತೋಟಿ ಮಾಡಲಾಗಲಿಲ್ಲ . ಅವಳು ನನ್ನ ದೀಪವನ್ನು ನುಗ್ಗಿ ಯಶಸ್ವಿಯಾಗಿ ತೇಲಿಬಿಟ್ಟು ನನ್ನ ಬಳಿ ಓಡಿಬಂದಳು. ಯೋಚಿಸಬೇಡಿ ಏನೂ ಆಗಲ್ಲ ಒಳ್ಳೆಯದಾಗುತ್ತದೆ ನನಗೆ ದುಡ್ಡುಕೊಡಿ ಅಂದಳು. ಇಪ್ಪತ್ತು ರೂಪಾಯಿಯ ನೋಟನ್ನು ಇಬ್ಬರು ಹುಡುಗಿಯರು ತೆಗೆದುಕೊಂಡರು . ಆ ಮೇಲೆ ಎಲ್ಲರಿಗೂ ದೊಡ್ಡ ತಟ್ಟೆಯಲ್ಲಿ ದೀಪವಿರುವ ತಟ್ಟೆ ಕೊಟ್ಟು ಗಂಗಾನದಿಗೆ ಮತ್ತೆ ನಮ್ಮಗಳ ಕೈಯಲ್ಲಿ ಆರತಿ ಮಾಡಿಸಿದಾಗ ಎಲ್ಲರೂ ಹರ್ಷಿತರಾಗಿ ಗಂಗೆಗೆ ತಲೆಬಾಗಿ ನಮಸ್ಕರಿಸಿದೆವು.

ಗಂಗಾನದಿಯ ಮೇಲೆ  ಭಕ್ತರ ದೀಪಗಳು ತೇಲುವುದನ್ನು ನೋಡಿದಾಗ ಸ್ವರ್ಗಲೋಕ ಕಂಡಂತೆಯೇ ಆ ಬೆಳಕಿನೋಕುಳಿ ರಾತ್ರಿಯಲ್ಲಿ ಜನರ ಚಿತ್ತವನ್ನು ತನ್ನತ್ತ ಸೆಳೆದು ಮನರಂಜಿಸುತ್ತದೆ . ಗಂಗೆಯನ್ನು ನೋಡುವಾಗ ಅಲ್ಲಿ ಬಂದ ಭಕ್ತಾಧಿಗಳು  ಆಕೆಯ ಮುಂದೆ ಎಲ್ಲ ಚಿಂತೆ ಮರೆತು ನರ್ತಿಸಲಾರಂಭಿಸಿದರು. ಅಷ್ಟೊಂದು ಜನ ನರ್ತಿಸುವಾಗ ಅವರನ್ನೆಲ್ಲಾ ನೋಡಿ ಅವಕ್ಕಾದೆವು. ಅವರುಗಳ ಗುಂಪು  ಕೈಯಿಂದ  ಕಾಲಿಂದ  ಚಲನೆಗಳಿಂದ ಹೆಜ್ಜೆಗಳ ಊರಿ ಕುಣಿದು ಕುಪ್ಪಳಿಸಿದರು . ಒಂದೆಡೆ ಎಲ್ಲಾ ನಿಂತು ಗಂಗೆಯ ಮುಂದೆ ಡ್ಯಾನ್ಸ್ ನೋಡಿದಾಗ ಹಿರಿಯರೇ ಜಾಸ್ತಿ ಭಾಗವಹಿಸಿದ್ದರು . ಅವರುಗಳೆಲ್ಲಾ ಈ ಪರಂಪರೆಯನ್ನು ಹಿಂದಿನಿಂದ ಗಂಗಾನದಿಯ ಮುಂದೆ  ಆಚರಿಸುತ್ತಾರೆ ಎಂದು ತಿಳಿಯಿತು .

ಅಲ್ಲಿಂದ ಎಲ್ಲಾ ನೇರವಾಗಿ ಹೃಷಿಕೇಷದ ಮಧ್ಯದಲ್ಲಿ ಹರಿಯುತ್ತಿರುವ ಗಂಗಾನದಿಯ ಮುಂದೆ ಮಧ್ಯರಾತ್ರಿಯವರೆಗೂ ನೆಮ್ಮದಿಯಿಂದ ಕೂತು ಆಮೇಲೆ ಹೋಗೋಣ ಎಂದು  ಮೆಟ್ಟಿಲುಗಳ ಇಳಿದು ಕೆಳಗೆ ಹೋದರೆ , ನಮ್ಮಂತೆಯೇ ಆಸೆಪಟ್ಟು ಆಗಲೇ ಸುಮಾರು ಜನ ಜಾಗ ಹಿಡಿದು  ಕೂತ್ತಿದ್ದರು.ನಾವುಗಳೂ ಅವರಂತೆಯೇ‌ ದೂರ ದೂರ ಶಾಂತವಾಗಿ ಗಂಗಾಳ ಪಕ್ಕವೇ ಅವಳ ನೋಡುತ್ತಾ ಕುಳಿತುಬಿಟ್ಟೆವು . ಮಧ್ಯರಾತ್ರಿ ಎಲ್ಲಾ ಕಡೆ ಆಗಿರಬಹುದೇನೋ  ಆದರೆ ಈ ಹೃಷಿಕೇಶಕ್ಕೆ‌  ರಾತ್ರಿ ಆದಂತೆ ಕಾಣುತ್ತಿರಲಿಲ್ಲ .

ಅಲ್ಲಿಗೆ ಬರುವ ಜನರು ಸಮಯವನ್ನು ವ್ಯರ್ಥ ಮಾಡಬಾರದೆಂದು ರಾತ್ರಿಯನ್ನು ಬೆಳಗು ಮಾಡಿಕೊಂಡು  ಸುತ್ತಿ ,ತಿರುಗಿ  ,ಕೂತು , ಜೂಲ್ಹಗಳ ಮೇಲೆ ನಡೆದಾಡಿ ಚಂದ್ರನಿಗೆ ರಾತ್ರಿಯಲ್ಲೇ ಬೆಳಕು ತೋರಿಸಿ  ಗಡ್ಬಡ್ ಮಾಡುತ್ತಾರೆ . ಗಂಗಾನದಿಯ ಮುಂದೆ ಕೂತ ಈ ನಮ್ಮ ಫ್ಯಾಮಿಲಿಯವರು ಯಾಕೋ ಬೆಳಕರಿಯುವವರೆಗೂ  ಮೇಲೆ  ಎದ್ದು ನಿಲ್ಲುವ ಹಾಗೆ ಕಾಣುತ್ತಿಲ್ಲ . ನೋಡಿ  ನೋಡಿ ಅವರ ಧ್ಯಾನಮಗ್ನಕ್ಕೆ ಭಂಗ ತರಬಾರದೆಂದು ಎದ್ದು ಫೋಟೋಗಳ ಸೆರೆಹಿಡಿಯಲಾರಂಭಿಸಿದೆ . ಅವರನ್ನೆಲ್ಲಾ ಬಿಟ್ಟು ಕತ್ತಲಲ್ಲಿ ಗಂಗೆಯ ಸಮೀಪಕ್ಕೆ ಹೋಗಿ ಅಲ್ಲಿ ನಿರ್ಮಲವಾಗಿ ಆಕೆ ಹರಿಯುವಾಗ ಆಕೆಯ ಸಂಪತ್ತಿನಂತ ಬಂಡೆಗಳು ಸುಂದರವಾಗಿ ಕಂಗೊಳಿಸುವುದನ್ನು ನೋಡಿ ವೀಡಿಯೋಗಳನ್ನು  ಜಾಸ್ತಿಯೇ ಮಾಡಿಕೊಂಡೆ . ಮೇಲೆ ನೋಡಿದರೆ ಎಲ್ಲಾ ಅಳ್ಳಾಡದಂತೆ ಗಂಗೆಯ ಮುಂದೆ ಕೂತು ಮೈಮರೆತಂತೆ  ಕಾಣಿಸಿದ್ದರಿಂದ ಒಳ್ಳೆಯದೇ ಆಯಿತೆಂದುಕೊಂಡು ಅವರನ್ನೆಲ್ಲಾ ಅವರು ಕೂತ ಎಲ್ಲಾ ಕೋನಗಳಿಂದ ಗಂಗೆಯ ಜೊತೆ ಫೋಟೋಗಳ ತೆಗೆದೆ .

ಗಂಗೆ ಹರಿಯುವಾಗ ಹತ್ತಿರದಲ್ಲಿ ಏನೋ ಒಂದುತರ ಕನಸಾ  ? ನನಸಾ ? ನಾನು ಗಂಗೆಯ ಮುಂದೆ ನಿಂತು ಮಧ್ಯರಾತ್ರಿಯಲ್ಲಿ ರಾತ್ರಿಯ ಚಂದಿರನ ಗಂಗೆಯ ಮೇಲೆ ನೋಡುತ್ತಿರುವೆನಾ ! ಚಂದಿರ ಸಹ ಖುಷಿಯಾಗಿ ಗಂಗೆಯ ಸ್ನೇಹಿತನಾಗಿ ಇಲ್ಲೇ ಹರಟೆಹೊಡೆಯುವ ಹಾಗೆ ಜಾಗ ಖಾಲಿ ಮಾಡದೆ ನದಿಯ ಪಕ್ಕದಲ್ಲೇ ಇರುವಂತೆ ಆಗಸದಿ ಬಿಡಾರ  ಹಾಕಿ ಜಾಂಡಾ ಊರಿದಂತೆ ಕಾಣುತ್ತಾನೆ . ಆದರೆಲ್ಲರಿಗೂ ಗೊತ್ತು ಆತ ಎಲ್ಲಾ ಕಡೆ ಕಾಣುತ್ತಾನೆಯಾದರೂ ಇಲ್ಲಿ ವಿಭಿನ್ನ, ಸುಂದರ ,ದುಂಡಗೆ ದಂಡೆಯಾತ್ರೆ ಎಲ್ಲಾ ಕಡೆ ಹೇಗೆ ಮಾಡಿ ಕಾಣಿಸಿಕೊಳ್ಳುವನೋ ಆಶ್ಚರ್ಯ ಈ ಸೂರ್ಯ ಚಂದ್ರರ ಆಟ. ಇವರಿಬ್ಬರ ಆಟದ ಮಧ್ಯ ಮೂರನೆಯವರಿಗೆ ಲಾಭ ಎನ್ನುವಂತೆ ಅವರಿಬ್ಬರೇನು ?  ಜನರೂ ಹಾಗೆಯೇ ಎನ್ನುವಂತಾಗಿಹೋಗಿದ್ದಾರೆ.ಕತ್ತಲೆ ಎನ್ನುತ್ತಾರೆ ಇಲ್ಲಿ ಅಂಧಕಾರದ ಗಂಧವೇ ಸುತ್ತ ವಾತಾವರಣದಲ್ಲಿ ಮೆತ್ತಿಕೊಂಡಿಲ್ಲ . ಯಾವುದೂ ಹಿಂದಿನ ರಾಜಸಂಸ್ಥಾನದಲ್ಲಿ ಓಡಾಡಿದಂತೆ, ರಾತ್ರಿಯೆಲ್ಲಾ ಪಹರೆದಾರರೂ ಓಡಾಡುವಂತೆ , ರಾತ್ರಿಯ ಹೀಯಾಳಿಸುವಂತೆ ಬೆಳಕನ್ನು  ರಾತ್ರಿ  ಮಾಡಿಕೊಳ್ಳುತ್ತಾರೆ. ಅದೇನೋ ಈ ಗಂಗೆಯ ಮುಂದೆ ನಿಂತಾಗ ಗಂಗಾನದಿಯು ನಮ್ಮವಳು  ಸಂಭಂಧಿಕಳಂತೆ ಕಾಣಿಸಿ  ಅವಳನ್ನು ಬಿಟ್ಟು ಹೋಗುವಾಗ ಬೇಸರವಾಗುವುದು ಸತ್ಯವೇ ಆಗಿದೆ. ಕಣ್ಣ ಮುಂದೆಯೇ ದೇವತೆ ಇದ್ದರೂ ದೇವರುಗಳು ಕಾಣಲ್ಲ ಎಂದುಕೊಂಡೇ ಬದುಕುತ್ತೇವೆ.

ಹೊಟ್ಟೆ ಹಸಿವಾಗತೊಡಗಿದೆ ಏನು ಮಾಡುವುದೆಂದು ಮಕ್ಕಳು ಹೇಳಿದಾಗ ನೈಜತೆಯ ಅರಿವಾಗಿ ಎಲ್ಲಾ ಎದ್ದು ನಿಂತು ಛೋಟಿವಾಲಾ ಹೋಟೆಲ್ ಕಡೆ ನಡೆದುಕೊಂಡು ಹೊರಟೆವು. ಛೋಟಿವಾಲಾ ಹೋಟೆಲ್ನಲ್ಲಿ ಫೇಮಸ್ ಏನು? ಪರೋಟ ,ಉಪ್ಪಿನಕಾಯಿ , ಮೊಸರು, ಇದೇ ಅಲ್ಲಿ ಫೇಮಸ್ಸು . ಯಾವುದೇ ಹೋಟೆಲ್ಗೆ ಹೋದರೂ ರಾತ್ರಿಯ ಊಟ  ವೈಭವವಾಗಿರುತ್ತದೆಯಲ್ಲದೆ ಫ್ರೆಷ್ ಇರುತ್ತೆ . ಬೆಳಗ್ಗೆ ಅದೇ ಹೋಟೆಲ್ಗೆ ತಿಂಡಿಗೆ ಹೋದರೆ ಅದೇ ರಾತ್ರಿಯ ಅನ್ನ , ಇಡ್ಲಿಗೆ  ಹಳೆಯ ಸಾಂಬರ್ , ಹಳೆಯ ಪರೋಟ ಬಿಸಿ ಮಾಡಿ ತಂದಿಡುತ್ತಾರೆ . ರಾತ್ರಿ ತಿಂದ ಮೆತ್ತನೆಯ ಪರೋಟಗಳು ಬೆಳಿಗ್ಗೆ ಪದೇ ಪದೇ ಬಿಸಿಮಾಡಿ ಒರಟಾಗಿಬಿಟ್ಟಿರುತ್ತವೆ .

ಎಲ್ಲಾ ಜೂಲ್ಹ ಮೇಲೆ ನಡೆದುಕೊಂಡು ಓಡಾಡಬೇಕೆಂದು  ಸೀತಾಜೂಲ್ಹದ ಮೇಲೆ  ನಿಧಾನವಾಗಿ ಮಾತನಾಡಿಕೊಂಡು ಇನ್ನು ಎರಡುಗಂಟೆಯಾದರೂ ಮಲಗಿ ವಿಶ್ರಮಿಸಿಕೊಳ್ಳಬೇಕೆಂದು ಗಂಗಾನದಿಯ ದಂಡೆಯ ಮೇಲೆ ಇರುವ ರೂಂಗಳಿಗೆ ತೆರಳಿದೆವು .ಹೋಟೆಲ್ನ ಬಾಲ್ಕಾನಿಯಲ್ಲಿ ನಿಂತರೆ ಹತ್ತಿರದಲ್ಲೇ ಗಂಗೆಯ ಜಲಧಾರೆಯನ್ನು ವೀಕ್ಷಿಸಬಹುದು . ಯಾರೂ ಮಲಗುತ್ತಿಲ್ಲ  ಯಾಕೆಂದು ನೋಡಿದರೆ ಎಲ್ಲರೂ ಸಾಲಾಗಿ ಒಂದೊಂದು ಖುರ್ಚಿಹಾಕಿಕೊಂಡು  ಸಾಲಾಗಿ ಕೂತರು. ಬೆಳಿಗ್ಗೆ ಎದ್ದು ಸೀತಜೂಲ್ಹ , ಹನುಮಂತಜೂಲ್ಹದ ಮೇಲೆ  ಎಲ್ಲಾ ನಡೆದುಬರೋಣ ಎಂದು ಮಾತನಾಡಿಕೊಂಡು ಒಬ್ಬೊಬ್ಬರು ಖುರ್ಚಿಯಿಂದೆ ಮೇಲೆ  ಎದ್ದು ಒಳಗೆ ಹೋಗಿ ಮಲಗಿದರು. ಓ ! ಎಂದುಕೊಂಡೆ .

ಮೊದಲೇ ಡೆಲ್ಲಿಯನ್ನು ದೇವಗಿರಿ ಎಂದು ಹೆಸರಿಟ್ಟ ದೊರೆ ಮಹಮದ್ಬಿನ್ ತೊಘಲಕ್ ಇದ್ದ ಸ್ಥಳಕ್ಕೆ ಬಂದಿದ್ದೇವೆ. ಡೆಲ್ಲಿ ,ಬಿಟ್ಟಾಚೆ ಇದ್ದೇವೆಯಾದರೂ ಆತನ ಸ್ವಭಾವ ಈ ಜಾಗವನ್ನು ನಾವುಗಳೆಲ್ಲಾ ಕದಲುವವರೆಗೂ ನಮಗೂ ಅಂಟಿಕೊಳ್ಳುವುದರಿಂದ ಹೀಗೆ ಯದ್ವತದ್ವಾ ಆಡುತ್ತೇವೆ   ಅಂದುಕೊಂಡೆ . ಬೆಳಿಗ್ಗೆ ಸೀತಾಜೂಲ್ಹವನ್ನು ಎಲ್ಲಾ ಮೂಲೆಗಳಿಂದಲೂ ಫೋಟೋಗಳನ್ನು ತೆಗೆದೆ. ಆನಂತರ ಸೂರ್ಯೋದಯ ದೃಶ್ಯವನ್ನು ಸಹ ನಿಸರ್ಗದೊಡನೆ ಬೆರೆಸಿ ಕೆಲವು ಚಿತ್ರಗಳ ಮೊಬೈನಲ್ಲಿ ತೆಗೆದುಇಟ್ಟುಕೊಂಡೆ . ಸೀತಾಜೂಲ್ಹದ  ಹೆಬ್ಬಾಗಿಲಿನಂತಿರುವ ಕಂಬಗಳಿಗೆ ನೀಲಿ ಹಳದಿ ಫಲಕಗಳ ನೇತು ಹಾಕಿದ್ದಾರೆ. ಹೃಷಿಕೇಶಕ್ಕೆ ಎಲ್ಲರಿಗೂ ಹಾರ್ಧಿಕ ಸ್ವಾಗತ ಕೋರುತ್ತೇವೆ ಎಂಬ ಬರವಣಿಗೆ ಸೀತಾಜೂಲ್ಹದ ಒಳಗೆ ಹೋಗುವ ಪ್ರತಿಯೊಬ್ಬರಿಗೂ ಅನ್ವಯಿಸುವಂತೆಯೇ ಇತ್ತು. ಸೀತಾಜೂಲ್ಹವನ್ನು ಕಾಯುವಂತೆ ಸ್ವಲ್ಪವಲ್ಲದ ಅತಿರೇಕದ ಕೋತಿಗಳು ಕುಣಿದು ನೆಗೆದು ಕಲ್ಲು ಬಾಗಿಲುಗಳ ಮೇಲೆ ಸಿಕ್ಕ ಜನರಿಗೆ ಎಷ್ಟುಬೇಕೊ ಅಷ್ಟು ತಂಟೆಮಾಡುತ್ತಿದ್ದವು .

ಶಿವನಿಂದ ಭೂಮಿಗಿಳಿದ ಗಂಗೆ ಉಗಮವಾದ ಸ್ಥಳಕ್ಕೆ ‘ ಗೋಮುಖ ‘ ಎಂದು ಕರೆಯುವರಂತೆ . ಗೋಮುಖ ಎಂಬ ಸ್ಥಳದಲ್ಲಿ ಮಂಜು ಕರಗಿ ಕರಗಿ ನೀರಾಗಿ ಅಲ್ಲಿಂದ ಗಂಗೆ ಬರುತ್ತಾಳೆ ಎನ್ನುತ್ತಾರೆ . ಗೋಮುಖದಲ್ಲಿ ಇತ್ತೀಚೆಗೆ ಮಂಜು ಜಾಸ್ತಿ ಉದ್ಭವವಾಗುತ್ತಿಲ್ಲ ಗಂಗೆ ಸಹ ಹರಿಯಲು ಉಮ್ಮಸ್ಸು ತೋರಿಸುತ್ತಿಲ್ಲ ಎಂದು ಇಲ್ಲಿ ಕೆಲ ಜನರು ಹೇಳುತ್ತಾರೆ . ಅವರೇಳುವುದು ನಿಜವೊ ಸುಳ್ಳೋ ಆದರೆ ಎಲ್ಲಾ ಕಡೆ ಗಂಗೆಯ ರಭಸ ಕಮ್ಮಿಯಾಗಿರುವುದು ನಿಜವೆ ಎಂದು ಗಂಗಾನದಿಯನ್ನು ಅದರ ಹರಿಯುವಿಕೆಯನ್ನು ಗಮನಿಸಿದಾಗ ಗೊತ್ತಾಯಿತು. ಹತ್ತುವರ್ಷದ ನಂತರ ಗಂಗೆ ಎಂಬ ನದಿ ಸಹ ಕಾಣದಾಗಬಹುದು. ಮಂಜು ಸೃಷ್ಟಿ ಆಗುತ್ತಿಲ್ಲವೆಂದು ಅದನ್ನು ಉಳಿಸಿಕೊಂಡು ಕೆಳಗಿನಿಂದ ಮಂಜು ನಿಲ್ಲದಂತೆ ಏನಾದರೂ ಮಾಡಬೇಕೆಂದು ವೈಜ್ಞಾನಿಕ ವಾಗಿಯೂ ಚಿಂತಿಸುತ್ತಿರುವರಂತೆ. ಗಂಗಾನದಿಯನ್ನು ನೋಡಿದರೆ ಪುಣ್ಯ ಪಾಪಗಳನ್ನು ತೊಳೆಯುವುದು ಎನ್ನುತ್ತಾರೆ. ಅರ್ಧಕರ್ಧ ಮಂಜು ಕರಗಿ ಸ್ವಲ್ಪಮಾತ್ರವೇ ಉಳಿದಿದೆ ಗೋಮುಖದಲ್ಲಿ ಅನ್ನುವರು. ಮಂಜು ಕರಗದಂತೆ ಹೆಲಿಕ್ಯಾಪ್ಟರ್ನಲ್ಲಿ ಉಪ್ಪು ಸುರಿಯುತ್ತಾರೆ. ಈ ರೀತಿ ಮಾಡುವುದರಿಂದ ಮಂಜು ಕರಗುವುದಿಲ್ಲ ಜೊತೆಗೆ ಗಂಗೆ ಸಹಾ ಎಲ್ಲ ಕಡೆ ನಲಿದು ಹರಿಯುತ್ತಾಳೆ .

ಕುಟುಂಬದವರ ಜೊತೆ ಗಂಗಾನದಿಯನ್ನು ನೋಡುತ್ತಾ  ಅವಳನ್ನು ನೆನೆದು ಒಂದುವರ್ಷದ ಹಿಂದೆ ಗಂಗೆಯನ್ನು ಶಿವನ ಬಗ್ಗೆ ಬರೆದಿರುವ ಕವನವೊಂದಕ್ಕೆ ಸೇರಿಸಿ ಜ್ಞಾಪಿಸಿಕೊಂಡಿದ್ದೆ . ಈ ದಿನ ಆಕೆಯ ಮುಂದೆ ನಿಂತಿದ್ದೇನೆ ಅಲ್ಲದೆ ಎರಡು ದಿನ ಹೃಷಿಕೇಷದಲ್ಲಿ ಇರುವೆ ಎಂದ ಮೇಲೆ ಆಕೆಯ ಆಶೀರ್ವಾದವೇ ಇರಬೇಕು .

ಆ  ಗಂಗೆಯ ಬಗ್ಗೆ ಬರೆದ ಬರಹವನ್ನು ಈಗ ಇಲ್ಲೂ ವ್ಯಕ್ತಪಡಿಸಲು ಬರಹದ ಮೂಲಕ ಇಚ್ಛಿಸಲ್ಪಡುವೆ .

ಶಿವಮಯ ಶಿವಮಯ
ಹರಮಯ ಹರಮಯ
ಜಯ ಜಯ ಜಯ ಜಟೆಯಲಿ
ಜಟ ಜಟ ಜಿಗಿಯುವ ಗಂಗೆಯ
ರಭಸಕ್ಕೆ ದಕ ದಕ ಹೃದಯ ಪಕಪಕ
ಪಾರ್ವತಿ ಪಕ್ಕ ಪಕ್ಕ  ತೃಪ್ತ ನರ್ತನ
ತನನನ ತನನನ ಶಿವಮಯ ಹರಮಯ .

 ದ್ರಾಕ್ಷಿ ದ್ರಾಕ್ಷಿಯ ರುದ್ರಾಕ್ಷಿಯೆ
ಜಪತಪ ಜಪತಪ ಹರಜಪ
ಮನಜಪ ಜಪಿಸಲು ಪರವಶ
ತ್ರಿಶೂಲದೊಡೆಯನೆ ನಂದಿಯ
ಪಾಲಕ  ಲಕ ಲಕ ನಿನ್ನಯ ಮುಖ
ಫಲಕವು ವೀಭೂತಿ ರೇಖೆಗಳ
ಗೆರೆ ಗೆರೆ ರಂಗೋಲಿ ಸೃಷ್ಟಿ ಕರ್ತ .

ನೀಲಿಯ ಶಿಖರ ನೀಲಿಯಮೋಡ
ಬಣ್ಣ ಬಣ್ಣದ ಮನಸ್ಸ ಹೊತ್ತ
ಭಕ್ತರ ಕೂಗಿಗೆ ಧಕ ಧಕ ಕುಣಿಯುತ
ದಡದಡ ಬರುವೆ  ನೀನೆ ಸೊಗಸು .
ಮಂಜೆ ಕರಗಿದೆ ಉದುರು ಉದುರುತ
ಸೊರ ಸೊರ ನಿನ್ನಾವರಿಸಿ ಪೂಜಿಸಿದೆ .

ನೆಲೆ ನೆಲೆ ಚಂದ್ರನ ನೆಲೆ  ,ನಾಗರನೆಲೆ ,
ಜೀವಗಂಗೆಯನೆಲೆ ,ನಾಟ್ಯನಗರದನೆಲೆ
ಗಣಗಳನೆಲೆ ,ಗಣಪ ಸುಭ್ರಮಣ್ಯರನೆಲೆ,
ಗೌರೀಶನ ನೆಲೆ ,ಸೊಂಪಾಗಿ ಹರಡಿದೆ
ಶಿವಮಯ ಶಿವಮಯ ಹರಮಯ
ಪಕ್ಕಪಕ್ಕ ಪಾರ್ವತಿ ಪಕಪಕ ಹೃದಯ
ನಿಸರ್ಗೆ ಪಠಿಸುತ್ತಿಹಳು ಶಿವಮಯ
ದಭ ದಭ ಮಿತ ಹಿತ  ಹರಮಯ .

ಗಂಗಾಮಾತೆ ವಿವಿಧ ರೀತಿಯಲ್ಲಿ ನಮ್ಮ ಜೊತೆಯೇ  ಇರದಂತೆ  ಇರುತ್ತಾಳೆ . ಗಂಗೆ ಇಲ್ಲದಿದ್ದರೆ ಮನುಜ ದಿನದ ಯಾವ ಕ್ಷಣವನ್ನು ಕಳೆಯಲಾರ . ಗಾಳಿಯಲ್ಲೂ ನೀರಿನಂಶ ಜಾಸ್ತಿಯೇ ಇರುವುದರಿಂದ ಅಲ್ಲೂ ಗಂಗೆ ನೆಲೆಸಿರುತ್ತಾಳೆ . ಹೆಂಡತಿಯನ್ನು ಡೈವರ್ಸ್ ಮಾಡಬಹುದು , ಸ್ನೇಹಿತರಿಲ್ಲದೆ ಇರಬಹುದು , ಕಾಫಿ ಆಡಿಗೆ , ಏಸಿ , ಪಾನಕ ,ಜಳಕ , ಉಸಿರಾಟ , ಇತ್ಯಾದಿ ನೀರೆಂಬ ಗಂಗೆಯಿಂದ ಮಾತ್ರ. ಹೋಟೆಲ್ಗೆ ಹೋಗಿ ಯಾರಾದರೂ  ಚಪಾತಿ ತಿಂದೆ, ಇಡ್ಲಿ ತಿಂದೆ, ಪೋಹ ತಿಂದೆ , ಉಪಮ ತಿಂದೆ ಆದರೆ ಕಾಫಿಯನ್ನು ಕುಡಿಯಲಿಲ್ಲ ಮತ್ತು ನೀರನ್ನು ಕುಡಿಯಲಿಲ್ಲ ಎಂದು ಯಾರಿಗಾದರೂ ಹೇಳಿದರೆ ಅವನನ್ನು ಹುಚ್ಚುದೊರೆ ” ಮಹಮದ್ _ ಭಿನ್_ ತೊಘಲಕ್ ” ಎನ್ನುತ್ತಾರೆ . ಏಕೆಂದರೆ ಅನ್ನಕ್ಕೆ ನೀರು ಹಾಕಿಲ್ವಾ ? ಚಪಾತಿಗೆ ನೀರು ಹಾಕಿ ಕಲಸಿಲ್ವಾ? ಹೆಸರುಬೇಳೆಗೆ ನೀರುಹಾಕದೆ ಬೇಯಿಸದೆ ಪೋಹ ಮಾಡಿದ್ದೇವಾ ? ನೀರು ನಿನ್ನೊಳಗೆ ಸೇರಿಕೊಂಡಿಲ್ವಾ ? ಎನ್ನುತ್ತಾರೆ. ಆದಷ್ಟು ಬೇಗ ಬೆಂಗಳೂರಿಗೆ ಹೋಗಿ ಮಹಮದ್ಭಿನ್ತೊಘಲಕ್ ರವರ ಗುಣಗಳನ್ನು ಅಂಟಿಸಿಕೊಳ್ಳಬಾರದೆಂದು ಹೃಷಿಕೇಷದ ಸೀತಮ್ಮನ ಸೀತಾಜೂಲ್ಹದೊಳಗೆ ಸೀತಾಲೋಚನೆ ಮಾಡಿದೆ .

ಪ್ರವಾಸಮಾಡಿ ಒಂದು ದಿನ ಮನೆಮಂದಿಗೆಲ್ಲಾ  ವಿರಾಮ ಬೇಕು. ಹಕ್ಕಿ ಹಾರಾಡುವಾಗ  ನದಿಯು ಹರ್ಷಿಸಿ ಹಕ್ಕಿಗಳು ಅವರಮ್ಮನ ತಾಣದಲ್ಲಿ ತೃಪ್ತಿಯಾಗಿ ರೆಕ್ಕೆಗಳನ್ನು ಲೀಲಾಜಾಲವಾಗಿ ಹರಡಿಕೊಂಡು ಹಾರಾಡುವಾಗ ಆ ನದಿಯ ಹಸಿರು ಬಣ್ಣ ನಿಸರ್ಗದಲ್ಲೂ ವಿರಳ ಅದರ ಸಮದ ಬಣ್ಣ ಇನ್ನೊಂದಿಲ್ಲ .ತಾಯಮ್ಮನ ನೀರಿನ ತಾಳಕ್ಕೆ ಮುಂದೆ ಹೋಗಲು ಮನಸ್ಸಾಗುವುದಿಲ್ಲ .

ಕತ್ತಲೆಯಲ್ಲಿ ಎಷ್ಟು ಸುಂದರಿ ಗಂಗಮ್ಮ? ಗಂಗಮ್ಮನ ಕತ್ತಲೆಯ ಹರಿದಾಟ ನಮಗೂ ಮಲಗದಾಗಲಾಗದಂತ ಪರದಾಟ .
ಯಾಕೆ ಮಲಗಿದ್ದೇವೆ ? ಯಾಕೆ ನಮಗೆ ದಿನಾ ಈ ರೀತಿ ಆಗುವುದಿಲ್ಲ ಕಾರಣ ಅದರ ಶಬ್ದ ಜುಳುಜುಳು ಝರಿಯಂತೆ ಅಲ್ಲ ಆ ಶಬ್ಧ
ಸಹ  ಎಲ್ಲರ ಸ್ವತ್ತಲ್ಲ . ಆ ಸ್ಥಳದಲ್ಲಿ ನಿಂತು ಆಲಿಸಿದಾಗಲೇ ಅದರ ಮಹತ್ವ ನಮಗೆ ಅರಿವಾಗುವುದು .

ಮಕ್ಕಳಿಲ್ಲದವರಿಗೆ ಮಕ್ಕಳನ್ನು ದಯಪಾಲಿಸುತ್ತಾಳೆ ಎಂದು ಹಿಂದಿನಿಂದಲೂ ನಮ್ಮ ಹಿರಿಯರು ಆಕೆಯ ಪೂಜೆಯನ್ನು ಮಾಡುವುದನ್ನು ಬಿಟ್ಟಿಲ್ಲ . ಮದುವೆಯ ಸಂದರ್ಭದಲ್ಲೂ ಬಿಂದಿಗೆಯಲ್ಲಿ ನೀರು ತುಂಬಿಸಿ ಚಪ್ಪರದ ಹಿಂದಿನ ದಿನ ಗಂಡಿನ ಮನೆಯಲ್ಲಿ ಹೆಣ್ಣಿನ ಮನೆಯಲ್ಲಿ ಗಂಗೆಯನ್ನು ಆರಾಧಿಸಿ ಗಂಗಮ್ಮನ ಪೂಜೆ‌ಯನ್ನು ಆಚರಿಸುವುದನ್ನು ಬಿಟ್ಟಿಲ್ಲ .

ಕೆಲವರು ಮಣ್ಣಿನ ಗಡಿಗೆಗಳನ್ನು ತೆಗೆದುಕೊಳ್ಳಲು ಸಂತೆಗೆ ಹೋಗಿ ಸಿಗದಿದ್ದರೆ ಕುಂಬಾರಬೀದಿಗೆ ಹೋಗಿ ಕಣ್ಣಿಗೆ ಬೇಕಾದ ಮಣ್ಣಿನಬಿಂದಿಗೆಗಳನ್ನು ಕೊಂಡು ಮನೆಗೆತಂದು ಅದರ ಮೇಲೆ ರಂಗೋಲಿಗಳನ್ನು  ಬಿಳಿಬಣ್ಣದಲ್ಲಿ ಅಥವಾ ಸೀಮೆಸುಣ್ಣದಲ್ಲಿ
ಬರೆದು ಮುತ್ತೈದೆಯರಿಗೆಲ್ಲಾ ಕೊಟ್ಟು ನೀರಿನ ಶಾಸ್ತ್ರಗಳನ್ನು ಬಾವಿ ಅಥವಾ ಕೆರೆ ನದಿ ಹತ್ತಿರ ಮೂರು ಕಲ್ಲುಗಳನ್ನು ಇಟ್ಟು ಅರಿಶಿನ ಕುಂಕುಮ ಹೂವು ಮುಡಿಸಿ ಗಂಧದಕಡ್ಡಿ ಬೆಳಗಿ ದೀಪಹಚ್ಚಿ ,ಬಾಳೆಹಣ್ಣುಗಳ ತುದಿಯಲ್ಲಿ ಮುರಿದು  ಗಂಗಮ್ಮನಿಗೆ ಇಟ್ಟು ತೆಂಗಿನಕಾಯಿ  ಹೊಡೆದು ಮಹಿಳೆಯರಿಗೆ ಫಲತಾಂಬೂಲ ಅರಿಶಿನ ಕುಂಕುಮ ವಿಳೆದೆಲೆ, ಅಡಿಕೆ ಹಂಚಿ .ಬೆಲ್ಲದಿಂದ ಮಾಡಿದ.
ಸಿಹಿ ಹಂಚಿ ಪೂಜಿಸಿದ ಮಣ್ಣಿನಬಿಂದಿಗೆಯಲ್ಲಿ ಕೂತ ಗಂಗಮ್ಮನನ್ನು , ಸೊಂಟಕ್ಕೆ ಎತ್ತಿ ಕೂರಿಸಿಕೊಂಡು ಅಲಂಕಾರಭೂಷಿತರಾದ  ಹೆಣ್ಣುಮಕ್ಕಳು  ಎತ್ತಿಕೊಂಡು ಮನೆಯೊಳಗೆ ತಂದು ರಂಗೋಲಿ ರಚಿಸಿದ ಜಾಗದಲ್ಲಿ ಗೌರವವಾಗಿ ತಂದು ಕೂರಿಸುತ್ತಾರೆ .

ಗಂಗೆಯ ಬಗ್ಗೆ  ಆಕೆಯ ತ್ಯಾಗದ ಬಗ್ಗೆ  ನಮ್ಮ ಪ್ರತಿದಿನದ   ನಿತ್ಯಕರ್ಮ ,  ಗಿಡಮರಗಳು ಉಲ್ಲಾಸಿತಗೊಂಡು  ಉದಾರವಾಗಿ ಎಲೆ ಹರಡಿಕೊಂಡು ಹಾರಾಡಿ ಅಲುಗಿ , ತಂಪು ಸೂಸುವುದಕ್ಕೆ ಕಾರಣಕರ್ತೆಯಾದ  ಗಂಗೆ ಎಲ್ಲದರಲ್ಲೂ ಅವಳದೇ ಅಗ್ರಸ್ಥಾನವಾಗಿ ಕಣ್ಣಿಗೆ ಕಾಣುವ ನಿಜವಾದ ದೇವತೆ ಗಂಗೆಯೇ ಆಗಿದ್ದಾಳೆ .ಗಂಗೆ ಮಾತ್ರವಲ್ಲ  ನೀರಾಗಿ ಹರಿವ ಅನೇಕ ನದಿಗಳಿಗೆ ಅವರದೇ ಹೆಸರುಗಳಿವೆ .ಆದರೆ ಗಂಗೆ ಎಂದರೆ ನೀರು ಅದು ಯಾವ ಹೆಸರು ಇದ್ದರೂ ನೀರಿಗೆ ಗಂಗೆ ಎಂದೇ ಕರೆಯುವುದು .

ಬಿಸ್ಲೆರಿ , ಮಿನರಲ್ವಾಟರ್ ಎನ್ನುತ್ತಾರೆಯಾದರೂ ಅದು ನೀರು ನೀರು . ಅವಕ್ಕೆಲ್ಲಾ ಏನೇನೋ ಹೆಸರಿಡುತ್ತಾರೆ‌‌ಯಾದರೂ ಅದನ್ನು ಕೊಂಡುಕೊಂಡ ಜನರು ನೀರು ಕುಡಿಯುತ್ತಿದ್ದೇವೆ ಎನ್ನುತ್ತಾರೆಯೇ ಹೊರತು  ಆ ಹೆಸರಿನ ಈ ಹೆಸರಿನ ನೀರು ಕುಡಿಯುತ್ತಿದ್ದೇವೆ ಎಂದು ಹೇಳುವುದಿಲ್ಲ. ಹೂವು , ಕಂಕಣ ,  ಇಟ್ಟು ದೀಪ ಹಚ್ಚಿ ನೀರಿನ ಮೇಲೆತೇಲಿಸುವುದು ಆರತಿ ಮಾಡುವುದು ಇವೆಲ್ಲಾ ಗಂಗೆಗೆ ಬಾಗನ  ಕೊಟ್ಟಂತೆ ಎಂದುಕೊಂಡು ರೂಢಿಮಾಡಿಕೊಂಡಿದ್ದಾರೆ .

ಈ ರೀತಿಯ ಅಭ್ಯಾಸಗಳಿಂದಲೇ ನಮ್ಮ ದೇಶದಲ್ಲಿ ಅತಿವೃಷ್ಠಿ ,  ಅನಾವೃಷ್ಠಿ ,ಕಮ್ಮಿಯಾಗಿ ಅನಾಹುತಗಳು ಮಿತವಾಗಿವೆಯಲ್ಲದೆ ಮಳೆಬೆಳೆಯಾಗುತ್ತಿವೆ .

ಶೋಭಿತಾ ನಾಗತಿಹಳ್ಳಿ( ಶೋಭ . ಟಿ .ಆರ್ .)

9 Responses

 1. ನಾವು ಸಹ ಗಂಗೆಯಲ್ಲಿ ಒಂದು ಸುತ್ತು ಹಾಕಿಬಂದಂತಹ ಅನುಭವವಾಯಿತು..ನಿಮ್ಮ ಪ್ರವಾಸ ಕಥನ… ಧನ್ಯವಾದಗಳು ಶೋಭಿತಾ ಮೇಡಂ.

 2. ನಯನ ಬಜಕೂಡ್ಲು says:

  ಬಹಳ ಸುಂದರವಾಗಿದೆ ಪ್ರವಾಸ ಕಥನ

 3. Anonymous says:

  ❤️

 4. ಶಂಕರಿ ಶರ್ಮ says:

  ಇತ್ತೀಚೆಗೆ ಹೃಷಿಕೇಶದಲ್ಲಿ ನಾವು ಕೂಡಾ ನೋಡಿದ ಗಂಗಾರತಿ ನೆನಪಾಯ್ತು…ಭಕ್ತಿ ಭಾವದ ಕವನದೊಂದಿಗೆ ಸೊಗಸಾದ ಲೇಖನ.

  • ವಿದ್ಯಾ says:

   ನಿರೂಪಣ ಶೈಲಿ ಸೊಗಸಾಗಿದೆ,
   ಗಂಗಾರತಿ ನೋಡದವರಿಗೆ ಕಣ್ಣಿಗೆ ಕಟ್ಟಿದಂತೆ ಲೇಖನ ಮೂಡಿ ಬಂದಿದೆ ಮೇಡಂ

 5. kushi says:

  Divine

 6. Padma Anand says:

  ಪ್ರವಾಸ ಕಥನದ ರೂಪದ ಗಂಗಾರಾಧನೆ ಸೊಗಸಾಗಿ ಮೂಡಿ ಬಂದಿದೆ.

 7. Padmini Hegade says:

  ಗಂಗೆಯ ಗುಣಗಾನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: