ಗೇರು ಹಣ್ಣಿನ ಸುತ್ತ….

Share Button


ವಾಟ್ಸಾಪ್ ಸಂದೇಶಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ನಮ್ಮ ಆತ್ಮೀಯರೊಬ್ಬರ ಸಂದೇಶ “ಗೇರು ಹಣ್ಣು ಬೇಕಾ?”. ಅವರ ಮನೆಗೂ ನಮ್ಮ ಮನೆಗೂ ಜಾಸ್ತಿ ದೂರವೇನಿಲ್ಲ. ಸಂದೇಶ ಓದಿದ ಕೂಡಲೇ ಮನದಲ್ಲೇನೋ ಪುಳಕ. ಅವಿತು ಕುಳಿತಿದ್ದ ನೆನಪುಗಳೆಲ್ಲಾ ಧಿಗ್ಗನೆದ್ದು ನಿಂತ ಅನುಭವ. ಗೇರು ಹಣ್ಣು ತಿನ್ನದೆ ಸುಮಾರು 25 ವರ್ಷಗಳ ಮೇಲಂತೂ ಆಗಿತ್ತು. ಎಗ್ಗಿಲ್ಲದೆ, ಯಾರ ಅನುಮತಿಯನ್ನೂ ಬೇಡದೆ, ಮನಸ್ಸಿಗೆ ತೃಪ್ತಿಯಾಗುವಷ್ಟು ವಿವಿಧ ಬಣ್ಣದ, ವಿವಿಧ ರುಚಿಯ ಗೇರು ಹಣ್ಣುಗಳನ್ನು ಹೊಟ್ಟೆಗಿಳಿಸುತ್ತಿದ್ದ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ದಿನಗಳು ಮನೋಭಿತ್ತಿಯಲ್ಲಿ ದೃಶ್ಯಗಳಾಗಿ ಮೂಡಿಯಾಗಿತ್ತು. ಹಾಗಾಗಿ ಹಣ್ಣು ಬೇಕಾ ಎಂದು ಕೇಳುವಾಗ ಬೇಡವೆನ್ನಲು ಮನಸ್ಸು ಒಪ್ಪಲಿಲ್ಲ. ಬದಲಾದ ಋತುಮಾನಗಳು, ಹೆಚ್ಚಾದ ವಯಸ್ಸು.. ಆದರೂ ಮನಸ್ಸು ಕೇಳಬೇಕಲ್ವಾ? “ಒಂದು ಹಣ್ಣು ಇರಲಿ” ಅಂತ ಮರು ಸಂದೇಶ ಕಳುಹಿಸಿದೆ. “ಒಂದು ಯಾಕೆ? ಎರಡು ಹಣ್ಣು ಕೊಡುವೆ” ಅಂತ ಮರು ಸಂದೇಶ ಬಂತು ಅವರಿಂದ. ಈಗಲೇ ಬರುತ್ತೇನೆಂದು ಅವರ ಮನೆಗೆ ಹೋಗಿ ಹಣ್ಣುಗಳನ್ನು ತೆಗೆದುಕೊಂಡು ಬಂದೆ.

 “ನೀವು ಹಣ್ಣು ತಿನ್ನುವಿರಾ?” ಎಂದು ಮಗಳಲ್ಲಿ ಹಾಗೂ ಯಜಮಾನರಲ್ಲಿ ಕೇಳಿದಾಗ ಬೇಡವೆಂದರು. ನಾನೂ ಜಾಸ್ತಿ ಒತ್ತಾಯಿಸಲಿಲ್ಲ.  ಕೆಲವು ದಿನಗಳಿಂದ ಹೊಟ್ಟೆಯೊಳಗೆ ಏನೋ ಸಂಕಟ, ತಳಮಳ, ಸುಸ್ತು ನನ್ನನ್ನು ಕಾಡುತ್ತಿದ್ದುದರಿಂದ ಗೇರು ಹಣ್ಣು ತಿನ್ನಲು ಅದೇನೋ ಅವ್ಯಕ್ತ ಭಯ. ಏನು ಬೇಕಾದರೂ ಆಗಲೆಂದು ಯೋಚಿಸಿ  ಆ ಎರಡೂ ಹಣ್ಣುಗಳನ್ನು ತಿಂದು ಮುಗಿಸಿದೆ. ನನಗೇ ಅಚ್ಚರಿಯಾಗುವಂತೆ, ರಾತ್ರಿ ನಿದ್ದೆ ಮಾಡುವಾಗಲೂ ಕಾಡುತ್ತಿದ್ದ ಹೊಟ್ಟೆನೋವು ಕಡಿಮೆಯಾಗಿತ್ತು. ಹಾಗಾದರೆ ಹೊಟ್ಟೆನೋವು ಕಡಿಮೆ ಮಾಡುವ ಶಕ್ತಿ ಗೇರುಹಣ್ಣಿಗಿರಬೇಕು ಅನ್ನುವ ವಿಷಯ ಮನದಟ್ಟಾಯಿತು. ಆ ನಿಟ್ಟಿನಲ್ಲಿ ಎಂದಿಗೂ ಯೋಚಿಸಿರಲೇ ಇಲ್ಲ. ಬಾಲ್ಯದಲ್ಲಿ ಗೇರುಹಣ್ಣುಗಳನ್ನು ಬೇಕಾದಷ್ಟು ತಿಂದಾಗಲೂ ಆಕ್ಷೇಪಿಸುತ್ತಿರಲಿಲ್ಲ. ಯಾರೂ ನಮ್ಮನ್ನು ಅಡ್ಡಿಪಡಿಸುತ್ತಿರಲಿಲ್ಲ ಸಹಾ. ಆದರೆ ಗೇರುಹಣ್ಣು ತಿಂದರೆ ಒಳ್ಳೆಯದು ಅಥವಾ ಜಾಸ್ತಿ ತಿಂದರೆ ಒಳ್ಳೆಯದಲ್ಲವೆಂದು ಕೂಡಾ ಕೇಳಿದ ನೆನಪು ಸಹಾ ಇರಲಿಲ್ಲ. ಗೇರಿನ ಚಿಗುರೆಲೆಗಳ ತಂಬುಳಿ ಮಾಡಿ ತಿಂದರೆ ಹೊಟ್ಟೆಗೆ ಒಳ್ಳೆಯದೆಂದು ಹೇಳುವುದನ್ನು ಕೇಳಿದ್ದೆ.  ಈಗಲಾದರೂ, ಗೇರುಹಣ್ಣಿನ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳಲೇ ಬೇಕೆಂದು ಗೂಗಲ್ ಹುಡುಕಾಟ ನಡೆಸಿದಾಗ ಸಿಕ್ಕಿದ ಮಾಹಿತಿಗಳನ್ನು ಕಂಡಾಗ ನಿಜವಾಗಿಯೂ ಅಚ್ಚರಿಯಾಗಿತ್ತು.

ಸುಲಭವಾಗಿ ಸಿಗುವ ರಸಭರಿತ ಗೇರುಹಣ್ಣುಗಳನ್ನು ಹಲವು ರೋಗಗಳಿಗೆ ಮದ್ದಾಗಿ ಬಳಸಬಹುದು. ಒಟ್ಟಾರೆಯಾಗಿ ಆರೋಗ್ಯವರ್ಧಕ ಹಣ್ಣು. ಶಕ್ತಿಯ ಆಗರ. ಪ್ರೋಟೀನ್, ವಿವಿಧ ಬಗೆಯ ವಿಟಮಿನ್ ಗಳು, ಖನಿಜಾಂಶಗಳಾದ ಕಬ್ಬಿಣ, ತಾಮ್ರ, ಪೊಟ್ಯಾಶಿಯಂ, ಮೆಗ್ನಿಷಿಯಂ, ಕ್ಯಾಲ್ಸಿಯಂ, ಝಿಂಕ್, ಮ್ಯಾಂಗನೀಸ್,… ಎಲ್ಲವೂ ಗೇರುಹಣ್ಣುಗಳಲ್ಲಿವೆ. ಗೇರು ಹಣ್ಣಿನ ನಿಯಮಿತ ಸೇವನೆಯಿಂದ ಸಿಗುವ ಉಪಯೋಗಗಳ ಪಟ್ಟಿ ಮಾಡಲು ಹೊರಟರೆ, ಆ ಪಟ್ಟಿ ದೀರ್ಘವಾಗುವುದು. ಜೀರ್ಣಕ್ರಿಯೆ ಉತ್ತಮಗೊಳಿಸಲು, ಜಠರ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಹೊಟ್ಟೆನೋವು ಶಮನಗೊಳಿಸಲು, ಜಂತುಹುಳ ನಿರ್ಮೂಲನೆ ಮಾಡಲು, ರಕ್ತಹೀನತೆ ದೂರ ಮಾಡಲು, ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು, ಗೇರುಹಣ್ಣು ಸಹಕಾರಿ. ಗಾಯಗಳನ್ನು ಅತಿ ಬೇಗ ವಾಸಿ ಮಾಡುವಂತಹ ಗುಣವೂ ಗೇರುಹಣ್ಣಿಗಿದೆ. ಗೇರುಹಣ್ಣಿನಲ್ಲಿರುವ ಅನಾಕಾರ್ಡಿಕ್ ಆಮ್ಲವು ಬಾಯಿಹುಣ್ಣು, ಹಲ್ಲಿನ ಹುಳುಕು ಇವುಗಳಿಗೆ ರಾಮಬಾಣ. ಗೇರುಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೊಟ್ಯಾಶಿಯಂ ಮೂಳೆ ಸವೆತವನ್ನು ನಿಯಂತ್ರಿಸಲು ಸಹಕಾರಿ. ಲುಥೆನ್ ಹಾಗೂ ಜಿಯಾಕ್ಸಾಂಥಿನ್ ಅಂಶಗಳು ಕಣ್ಣಿನ ಊತ, ಪೊರೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿ. ಹಣ್ಣಿನಲ್ಲಿರುವ ನಾರಿನಂಶ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವ ಶಕ್ತಿಯೂ ಗೇರುಹಣ್ಣಿಗಿದೆ. ವಿಟಮಿನ್ ಬಿ, ಫಾಲಿಕ್ ಆಸಿಡ್ ಗರ್ಭಿಣಿಯರಿಗೆ ಉತ್ತಮ. ಗೇರುಹಣ್ಣು ಸೇವನೆಯಿಂದ ಮೆದುಳಿನ ಶಕ್ತಿಯೂ ಹೆಚ್ಚುವುದಂತೆ. ಅಲ್ಲದೆ ಹೃದಯದ ಸ್ನಾಯುಗಳನ್ನು ಬಲಪಡಿಸುವುದು ಹಾಗೂ ಹೃದಯಸಂಬಂಧಿ ರೋಗಗಳಉ ಬರದಂತೆ ತಡೆಯುತ್ತವೆ. ಅಷ್ಟೇ ಏಕೆ? ಗೇರುಹಣ್ಣುಗಳಲ್ಲಿರುವ ತಾಮ್ರ ಹಾಗೂ ಕ್ಯಾಲ್ಸಿಯಂ ಆಂಶಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ಸಹಾ ನಿಯಂತ್ರಿಸುತ್ತವೆಯಂತೆ.

PC: Internet


ಇಷ್ಟೆಲ್ಲಾ ಆರೋಗ್ಯಗುಣಗಳಿರುವ ಗೇರು ಹಣ್ಣುಗಳ ಜೊತೆ ಕಳೆದ ದಿನಗಳ ಬಗ್ಗೆ ಬರೆಯದೇ ಹೇಗಿರಲಿ? ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಕೈಯಲ್ಲೊಂದು ಅಥವಾ ಎರಡು ಬೇರೆ ಬೇರೆ ಉದ್ದದ ಬಿದಿರಿನ  ಕೊಕ್ಕೆ (ಗೇರು ಹಣ್ಣುಗಳನ್ನು ಕೊಯ್ಯಲು ಬಳಸುವ ಸಾಧನ) ಹಾಗೂ ಬೆತ್ತದ ಬುಟ್ಟಿ (ಗೇರುಹಣ್ಣುಗಳನ್ನು ಸಂಗ್ರಹಿಸಲೆಂದೇ ಇರುತ್ತಿತ್ತು) ಹಿಡಿದು ಗೇರುಮರಗಳ ಬಳಿಗೆ ಸಾಗುತ್ತಿದ್ದ ನೆನಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹಳದಿ, ಕೇಸರಿ, ಕೆಂಪು, ಕೇಸರಿ, ಕೆಂಪುಮಿಶ್ರಿತ ಗುಲಾಬಿ,… ಹೀಗೆ ಹಲವು ಬಣ್ಣಗಳ ಹಣ್ಣುಗಳಿರುವ ಮರಗಳು. ಒಂದೊಂದು ಮರದ ಹಣ್ಣಿಗೂ ಬೇರೆ ಬೇರೆ ರುಚಿ. ಹಣ್ಣಿನ ಆಕಾರಗಳಲ್ಲಿಯೂ ವ್ಯತ್ಯಾಸ. ಮರದ ಗಾತ್ರ ಅಥವಾ ಹಣ್ಣಿನ ಬಣ್ಣದ/ಗಾತ್ರದ ಆಧರಿಸಿ ಮರಕ್ಕೊಂದು ಹೆಸರು (ಅದು ನಾವೇ ಇಟ್ಟದ್ದು)- ದೊಡ್ಡ ಮರ, ಹಳದಿ ಹಣ್ಣಿನ ಮರ, ಕೇಸರಿ ಹಣ್ಣಿನ ಮರ,… ಮರವನ್ನೇರಿ/ ಏರದೆ ಕೊಕ್ಕೆಯ ಸಹಾಯದಿಂದ ಹಣ್ಣು ಕೊಯ್ಯುವ ಕೆಲಸ ಒಬ್ಬರದಾದರೆ (ಪ್ರಾಯದಲ್ಲಿ ದೊಡ್ಡವರು), ಬಿದ್ದ ಹಣ್ಣುಗಳನ್ನು ಹೆಕ್ಕುವುದು ಸಣ್ಣವರ ಕೆಲಸ. ಕೆಲವೊಮ್ಮೆ ಒಬ್ಬಳೇ ಹೋಗುವುದಿತ್ತು. ಎಷ್ಟೇ ದೊಡ್ಡ ಮರವಾದರೂ, ಗೇರುಹಣ್ಣು ಕೊಯ್ಯಲೆಂದು ಯಾವುದೇ ಭಯವಿಲ್ಲದೇ ಮರವೇರುತ್ತಿದ್ದೆ. ಕೆಲವೊಮ್ಮೆ ಗುಡ್ಡಕ್ಕೆ ಮೇಯಲು ಬಿಟ್ಟ ದನಗಳು ಕೂಡಾ ಜೊತೆಯಾಗುತ್ತಿದ್ದವು. ನಮ್ಮ ಮನೆಯ ದನಗಳು ಸಿಗಲಿಲ್ಲವೆಂದಾದರೆ, ಆ ದಿನಗಳಂದು  ಆ ಹಣ್ಣುಗಳನ್ನೆಲ್ಲಾ ಮನೆಗೇ ಹೊತ್ತು ತಂದು ಬೀಜ ಬೇರ್ಪಡಿಸಿ ದನಗಳಿಗೆ ತಿನ್ನಲು ನೀಡುತ್ತಿದ್ದೆವು. ಗೇರುಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ, ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ನಮ್ಮ ತಂದೆಯವರು ಪೇಟೆಗೆ ಹೋಗಿ ಗೇರುಬೀಜಗಳನ್ನು ಮಾರಾಟ ಮಾಡಿ, ಮನೆಗೆ ಬೇಕಾದ ಕೆಲವು ಪಾತ್ರೆಗಳನ್ನು ಆ ಹಣದಿಂದ ತರುತ್ತಿದ್ದರು.

ಗೇರು ಇಳುವರಿಯ ಸಂದರ್ಭ, ಕೆಲವು ಗೇರು ಬೀಜದ ಕಳ್ಳರು ಇರುತ್ತಿದ್ದರು. ಮೈ ಮುರಿದು ದುಡಿಯಲು ಮನಸ್ಸಿಲ್ಲದ ಕೆಲವು ಸೋಮಾರಿಗಳು ಅವರ ಸಂಜೆಯ ಕುಡಿತಕ್ಕೆ ಹಣ ಹೊಂದಿಸಲು ಗೇರುಮರಗಳ ಮಾಲೀಕರು ಇಲ್ಲದ ಸಮಯ ನೋಡಿ, ತಮಗೆ ಸಾಧ್ಯವಾದಷ್ಟು ಕೊಯಿದುಕೊಂಡು ಹೋಗುತ್ತಿದ್ದರು. ಆ ಕಾರಣದಿಂದ ಕೆಲವೊಮ್ಮೆ ಗೇರು ಹಣ್ಣಾಗುವ ಮೊದಲೇ ಅಂದರೆ ದೋರೆಕಾಯಿಗಳನ್ನೇ (ನಾವು ಕಾಯಣ ಅನ್ನುತ್ತಿದ್ದೆವು) ಕೊಯ್ಯಬೇಕಾಗುತ್ತಿತ್ತು. ಶಾಲೆಗೆ ಹೋಗುವಾಗ ದಾರಿ ಬದಿಯಲ್ಲಿರುತ್ತಿದ್ದ ಮರಗಳಿಂದ ಉದುರಿದ ಹಣ್ಣುಗಳಿಂದ ಬೀಜ ಬೇರ್ಪಡಿಸಿ (ನಾಲ್ಕು ಬೀಜ ಸಿಕ್ಕಿದರೆ ಒಂದು ಒಡ್ಡಿ), ಅಂಗಡಿಯಲ್ಲಿ ಮಾರಿ, ತಮಗೆ ಬೇಕಾದ ಚಾಕೋಲೇಟ್, ಮಿಠಾಯಿ ಖರೀದಿಸುತ್ತಿದ್ದ ನಮ್ಮ ಸಹಪಾಠಿಗಳು ನಮಗೂ ತಿನ್ನಲು ಕೊಡುತ್ತಿದ್ದ ನೆನಪಿನ್ನೂ ಹಸಿರಾಗಿದೆ. ಗೇರು ಬೀಜ ಕುಟ್ಟುವ ಆಟದ ಪಂದ್ಯಗಳು ಕೂಡಾ ಸಹಪಾಠಿಗಳ ಮಧ್ಯೆ ನಡೆಯುತ್ತಿತ್ತು. ಬೇರೆಯವರ ಮರಗಳ ಗೇರುಬೀಜ ಬಿದ್ದಿದ್ದರೂ ಹೆಕ್ಕಬಾರದು ಎಂದು ನಮ್ಮಮ್ಮ ನಮಗೆ ಮನದಟ್ಟು ಮಾಡಿಸಿದ್ದರು.

ಇನ್ನು ನೆನಪಿಗೆ ಬರುವುದು- ವಿಷು ಸಂಕ್ರಾಂತಿಯ ಸಂದರ್ಭ.  ನಮ್ಮ ಮನೆಯಾಳುಗಳು, ಹಸಿಬೀಜದ ತಿರುಳನ್ನು ಬಾಳೆ ಎಲೆಯಲ್ಲಿ ಹಾಕಿ ತಂದುಕೊಡುತ್ತಿದ್ದ ಪರಿಪಾಠ ಬೆಳೆದು ಬಂದಿತ್ತು. ಆ ಎಳೆಬೀಜಗಳನ್ನು ಮಧ್ಯಾಹ್ನದ ವಿಶೇಷ ಊಟಕ್ಕೆ ತಯಾರಿಸುವ ಪಾಯಸಕ್ಕೆ ಹಾಕುತ್ತಿದ್ದರು. ಮನೆಯಾಳುಗಳಿಗೂ ಹೊಸಬಟ್ಟೆಯ ಜೊತೆ  ಅವರ ಮನೆಯವರೆಲ್ಲರಿಗೂ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ವಿಶೇಷ ಊಟ ನೀಡಲಾಗುತ್ತಿತ್ತು. ನಮ್ಮ ಕಣ್ಣಿಗೆ ಬೀಳದೇ ಬಾಕಿಯಾದ ಗೇರುಬೀಜಗಳು ಮಳೆಗಾಲದಲ್ಲಿ ಮೊಳಕೆಯೊಡೆದು ಬರುತ್ತಿದ್ದವು. ಆ ಮೊಳಕೆಯೊಡೆದ ಬೀಜಗಳು ತಿನ್ನಲು ಬಲು ರುಚಿ. ಆ ರುಚಿಯನ್ನು ಎಣಿಸಿಕೊಂಡರೆ ಈಗಲೂ ನಾಲಿಗೆಯಲ್ಲಿ ನೀರು ಬರುತ್ತದೆ. 

PC:Internet

ಈಗ ಗೇರುಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಗೇರು ಸಂಶೋಧನಾ ಕೇಂದ್ರಗಳು ಉತ್ತಮ ಇಳುವರಿ ನೀಡುವ ವಿಶೇಷ ತಳಿಗಳನ್ನು ಅಭಿವೃದ್ಧಿಪಡಿಸುತ್ತಲೇ ಇವೆ. ಮಡಕ್ಕತಾರ, ಯು ಎನ್, ನೇತ್ರಾ, ಉಳ್ಳಾಲ, ಧನ, ಭಾಸ್ಕರ, ಅಮೃತ್, ಧಾರಾಶ್ರೀ, ಚಿಂತಾಮಣಿ, ವೆಂಗುರ್ಲಾ,… ಮುಂತಾದ 45 ಕ್ಕೂ ಹೆಚ್ಚು ತಳಿಗಳನ್ನು ಸಂಶೋಧನಾಲಯಗಳು ಬಿಡುಗಡೆ ಮಾಡಿವೆ. ಪೋರ್ಚುಗೀಸ್ ಕಾಲದಲ್ಲಿ ದಕ್ಷಿಣ ಅಮೆರಿಕಾದಿಂದ  ನೆರೆಯ ಗೋವಾ ರಾಜ್ಯಕ್ಕೆ ಬಂದು ಅಲ್ಲಿಂದ ನಮ್ಮ ಕರ್ನಾಟಕಕ್ಕೆ ಬಂದ ಗೇರು ಹಣ್ಣನ್ನು  ಗೋವಿಕಾಯಿ, ಗೋಯಿಕಾಯಿ ಎಂದು ಕೂಡಾ ಕರೆಯುತ್ತಾರೆ. ನಮ್ಮ ತುಳುವಿನಲ್ಲಿ ಗೋವೆದ ಕುಕ್ಕು, ಗೋಂಕು, ಬೀಜೊದ ಮರ ಎಂದೆಲ್ಲಾ ಕರೆಯುತ್ತಾರೆ

ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಗೇರು. ಇದರ ಹಣ್ಣನ್ನು ಹಾಗೆಯೇ ತಿನ್ನಬಹುದು. ಉಪ್ಪು, ಖಾರ ಹಚ್ಚಿಯೂ ತಿನ್ನುವರು. ಕೆಲವರಿಗೆ ಇದರ ವಾಸನೆ ಹಿಡಿಸುವುದಿಲ್ಲ. ತಿಂದ ನಂತರ ಗಂಟಲಲ್ಲಿ ಸ್ವಲ್ಪ ಒಗರು ಉಳಿದು ಗಂಟಲು ಗರಗರ ಆಗುತ್ತದೆ.  ಈ ಹಣ್ಣನ್ನು  ಕಡುಬು, ದೋಸೆ, ಬನ್ಸ್, ತಂಪುಪಾನೀಯ ಹಾಗೆಯೇ ಮದ್ಯ/ ವೈನ್ ತಯಾರಿಯಲ್ಲಿ ಬಳಸುತ್ತಾರೆ. ಗೇರುಹಣ್ಣುಗಳನ್ನು ಕೊಳೆಯಿಸಿ ಮಾಡುವ ಗೋವಾ ಫೆನ್ನಿ (ತುಳುವಿನಲ್ಲಿ ಗಂಗಸರೊ- ಇವುಗಳ ತಯಾರಿ ಕಾನೂನು ಬಾಹಿರವಾಗಿತ್ತು. ಆದರೂ ಕದ್ದುಮುಚ್ಚಿ ಮಾಡುತ್ತಿದ್ದರು) ಪ್ರಸಿದ್ಧವಾಗಿದೆ. ಪ್ರಸನ್ನ ಬೇಲೂರು ಅನ್ನುವ ವಿಜ್ಞಾನಿ ಆರು ವಿಧದ ಅಲ್ಕೋಹಾಲ್ ಮುಕ್ತ ಪಾನೀಯ ತಯಾರಿಸಿ ಪೇಟೆಂಟ್ ಕೂಡಾ ಪಡೆದುಕೊಂಡಿದ್ದಾರೆ. ಗೇರು ಹಣ್ಣಿನ ಜ್ಯೂಸ್‌ನಲ್ಲಿ ಆ್ಯಪಲ್ ಜ್ಯೂಸ್‌ಗಿಂತ ಅಥವಾ ಕಿತ್ತಳೆ ಹಣ್ಣಿಗಿಂತ ಅಧಿಕ ಪೋಷಕಾಂಶವಿದೆ ಎಂದು ತಜ್ಞರು ಹೇಳುತ್ತಾರೆ. 

ಎಲ್ಲರಿಗೂ ಗೊತ್ತಿರುವಂತೆ  ಗೇರು ಹಣ್ಣಿನ  ಬೀಜವನ್ನು (ಗೋಡಂಬಿ ಎನ್ನುವರು) ಹಾಗೆಯೇ ತಿನ್ನುವರು, ಹುರಿದ ಗೋಡಂಬಿಯ ರುಚಿಯಂತೂ ಅದ್ಭುತ. ಗೋಡಂಬಿಯನ್ನು ಹಲವು ಸಿಹಿತಿಂಡಿ ತಯಾರಿಯಲ್ಲಿ, ವಿವಿಧ  ಅಡುಗೆಗಳಲ್ಲಿ, ಖಾದ್ಯಗಳಲ್ಲಿ ಬಳಸುವರು. ಬೀಜದ ಸಿಪ್ಪೆಯಿಂದ ಎಣ್ಣೆ ತಯಾರಿಸುವರು ( ನಾವೆಲ್ಲಾ ಸಣ್ಣಂದಿನಿಂದ ಕೇಳಿ ತಿಳಿದಂತೆ, ನಾವು ಹಣ್ಣೆಂದು ತಿನ್ನುತ್ತಿದ್ದುದು ತೊಟ್ಟಿನ ರೂಪಾಂತರವಂತೆ. ಬೀಜದ ಹೊರಗಿನ ಕವಚವೇ (ಸಿಪ್ಪೆಯೇ) ಹಣ್ಣೆಂದು ಅಧ್ಯಯನಗಳು ಹೇಳುತ್ತವೆ). ಈ ಎಣ್ಣೆಯನ್ನು ಮರದ ಪಕಾಸುಗಳಿಗೆ ಸವರಿ ಗೆದ್ದಲು ಹಿಡಿಯದಂತೆ ಸಂರಕ್ಷಿಸಲು ಬಳಸುವರು. ಹಿಂದಿನ ಕಾಲದಲ್ಲಿ  ಚೆನ್ನಾಗಿ ತಿಕ್ಕಿ ನಯಗೊಂಡ ಮಣ್ಣಿನ ನೆಲದ ಮೇಲೆ ಸವರುತ್ತಿದ್ದರು. ಆ ನೆಲ ನೀರನ್ನು ಹೀರಿಕೊಳ್ಳುತ್ತಿರಲಿಲ್ಲ. ಹಾಗೆಯೇ ಕೆಲವು ಚರ್ಮರೋಗಗಳಿಗೂ ದಿವೌಷಧಿ.

“ಗೇರು ಹಣ್ಣು ಬೇಕಾ?” ಎಂದು ಕೇಳಿ ಗೇರು ಹಣ್ಣು ನನಗೆ ತಿನ್ನಲು ನೀಡಿದ  ನನ್ನ ಆತ್ಮೀಯರಿಗೆ ಈ ಲೇಖನ ಅರ್ಪಣೆ.

ಡಾ. ಕೃಷ್ಣಪ್ರಭ ಎಂ, ಮಂಗಳೂರು

10 Responses

 1. ವಾವ್..ಗೇರುಹಣ್ಣಿನ ಲೇಖನ ಬಹಳ..ಸಗಸಾಗಿ ಮೂಡಿಬಂದಿದೆ ಮೇಡಂ… ಅದರ ಜೊತೆಗೆ ನಿಮ್ಮ ಹಳೆಯ ನೆನಪು ..ಅದರ ಉಪಯೋಗ ಎಲ್ಲಾ… ನಾವು ಚಿಕ್ಕವರಿದ್ದಾಗ ತಿಂದ ನೆನಪು …ಆದರೆ ಅದರ ಔಷಧೀಯ ಗುಣಗಳು ಗೊತ್ತಿರಲಿಲ್ಲ..ಅಂತು ಅದನ್ನು ಕೊಟ್ಟು.. ನಿಮ್ಮ ನ್ನು ಚಿಂತನೆಗೆ ಹಚ್ಚಿದ ಸ್ನೇಹಿತರಿಗೆ…ಅದನ್ನು ವಿಸ್ತಾರವಾಗಿ ತಳಿಸಿದ ನಿಮಗೆ ಧನ್ಯವಾದಗಳು .

 2. Padma Anand says:

  ಸೊಗಸಾದ ಗೇರುಹಣ್ಣಿನ ಲೇಖನ ಓದಿದ ನಂತರ ನಾನೂ ವಾಟ್ಸಾಪ್ ತಡಕಾಡಿದೆ, ನನಗೂ ‘ಗೇರು ಹಣ್ಣು ಬೇಕಾ’ ಎಂಬ ಸಂದೇಶ ಬಂದುದೆಯೇನೋ ಎಂದು.

  ಚಂದದ ನಿರೂಪಣೆಯ ಮಾಹಿತಿಪೂರ್ಣ ಲೇಖನಕ್ಕಾಗಿ ಅಭಿನಂದನೆಗಳು.

 3. Geetha Poornima says:

  Good work madam. I too went back to my childhood days

 4. ಸುನಂದಾ ಹೊಳ್ಳ says:

  ಗೇರು ಹಣ್ಣು ಅಪೂರ್ವ ಹಣ್ಣು.ಬಾಲ್ಯದ ನೆನಪು ಮರುಕಳಿಸಿತು.ಗೇರುಹಣ್ಣಿಂದ ಕೊಟ್ಟಿಗೆ,ಮಾಡುತ್ತಾರೆ.ಹೇಳುವುದು ಕೇಳಿದ್ದೇನೆ ಅಷ್ಟ್ಟೇ.ಗೇರು ಎಲೆಯಿಂದ ಹಲ್ಲು ಉಜ್ಜುವುದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು ನಾವು ಉಜ್ಜುತ್ತಿದ್ದೆವು.ಅದರ ಚಿಗುರನ್ನು ತಂಬುಳಿಮಾಡಬಹುದು.

 5. ನಯನ ಬಜಕೂಡ್ಲು says:

  ಬಹಳ ಚೆನ್ನಾಗಿದೆ ಮೇಡಂ ಬರಹ. Very nice.

 6. ಜ್ಯೋತಿ ಆನಂದ್ says:

  ಓಹ್…ಗೇರು ಹಣ್ಣಿನ ಹಿಂದೆ ಇಷ್ಟೆಲ್ಲಾ ನೆನಪುಗಳು ಮಾಹಿತಿಯ ಭಂಡಾರವೇ ತೆರೆದು ಕೊಂಡಿದೆ .

 7. Anonymous says:

  ಬಾಲ್ಯದಲ್ಲಿ ನಾನೂ ಸಾಕಷ್ಟು ಗೇರು ಹಣ್ಣು ತಿಂದಿದ್ದೇನೆ. ಚೆಂದದ ಬರಹ..ನೆನಪುಗಳ ಮೆರವಣಿಗೆ…

 8. ಶಂಕರಿ ಶರ್ಮ says:

  ಆಹಾ…ಗೇರುಹಣ್ಣನ್ನು ಆಸ್ವಾದಿಸಿದಷ್ಟೇ ಸ್ವಾದಿಷ್ಟವಾದ ಲೇಖನ! ಚಿಕ್ಕಂದಿನ ನೆನಪಿನ ಸರಮಾಲೆ ಜೊತೆಗೆ, ಇಂದಿಗೂ ಮನೆ ಹಿತ್ತಿಲಲ್ಲಿರುವ ಗೇರುಹಣ್ಣನ್ನು ತಿನ್ನುವ ಭಾಗ್ಯ ನನಗೆ. ಇಷ್ಟೆಲ್ಲಾ ಔಷಧೀಯ ಗುಣ ಇರೋದೇ ಗೊತ್ತಿರಲಿಲ್ಲ! ಇನ್ನು ಮುಂದೆ ನಾಲ್ಕು ಹೆಚ್ಚೇ ತಿಂದು ಬಿಡುವೆ!…ನಿಮಗೂ ಗೇರುಹಣ್ಣು ಬೇಕಾ??

 9. ಆಶಾ ನೂಜಿ says:

  ಚಂದದ ಗೇರು ಹಣ್ಣಿನ ಬರಹ ತಿಂದಷ್ಟು ಖುಷಿ ಆಯಿತು ಓದಿ ನಾನು ಈಗ ನಾಲ್ಕು ವರುಷದ ಹಿಂದೆ ಗೇರು ಹಣ್ಣು ಕೊಯ್ಯಲು ಹೋಗಿ ಬರುತ್ತಿದ್ದೆ ಮಕ್ಕಳು ಶಾಲೆಯಿಂದ ಬರುವ ಮೊದಲು ತಲುಪುತ್ತಿದ್ದೆ.

 10. ಅರವಿಂದ ಶ್ಯಾನಭಾಗ says:

  ನನಗೆ ಗೇರು ಗೋವಾ ಫೆನ್ನಿಗೆ/ಕಳ್ಳ ಭಟ್ಟಿಗೆ ಹೋಗುತ್ತದೆ ಎನ್ನುವ ವಿಚಾರವಷ್ಟೇ ಗೊತ್ತಿತ್ತು. ಈ ಲೇಖನ ಕಾಜೂವಿನ ಆಜು-ಬಾಜು ಏನಂತ ತಿಳಿಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: