ಸ್ಮೃತಿಕಾರ ಯಾಜ್ಞವಲ್ಕ್ಯ

Share Button

ಯಾವುದೇ ಒಂದು ಕೆಲಸವನ್ನು ಗುರಿಯಿಟ್ಟು ಆಸ್ಥೆ ವಹಿಸಿ ಪೂರೈಸಿದಾಗ ಅದನ್ನು ಸಾಧಿಸಿದ ಸಾರ್ಥಕ ಭಾವ ನಮ್ಮದಾಗುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ಅದು ಕೂಡಲೇ ನಾಶವಾದರೆ …ಹೇಗಾಗಬೇಡ?. ನಾಶವಾಗಲು ಕಾರಣರಾದವರ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. ಹಾಗೆಯೇ ನಾವು ಇಷ್ಟಪಟ್ಟು  ಒಂದು ವಿದ್ಯೆಯನ್ನು ಗುರುಮುಖೇನ ಕಲಿಯುತ್ತೇವೆ ಎಂದಿಟ್ಟುಕೊಳ್ಳಿ. ವಿದ್ಯೆ  ಕಲಿತು ಪೂರ್ತಿಯಾದ ಮೇಲೆ  ‘ಅದರ ಫಲ ನಿನಗೆ ಸಿಗದಂತಾಗಲಿ’ ಎಂದು ಯಾರಾದರೂ ಶಾಪ ಕೊಟ್ಟರೆ…. ನಮ್ಮ ಪರಿಸ್ಥಿತಿ ಊಹಿಸುವುದೇ ಬೇಡ. ಅದರಲ್ಲೂ ವಿದ್ಯೆ ಕಲಿಸಿದ ಗುರುಗಳೇ ಹೇಳಿದರೆ?. ಸಿಟ್ಟು ಮತ್ತು ದುಃಖದಲ್ಲಿ ದಿಕ್ಕೇ ತೋಚದಾಗಿ ತಾಳ್ಮೆ ತಪ್ಪೀತೆಂಬುದು ಸುಳ್ಳಲ್ಲ. ಆದರೆ ಪುರಾಣದೊಳಗೆ ಒಬ್ಬ ಋಷಿಕುಮಾರನಿಗೆ ಇಂತಹ ಪರಿಸ್ಥಿತಿ ಬಂದೊದಗಿತು. ಒಂದು ಕ್ಷಣ ಅವನು ಖಿನ್ನನಾದರೂ ಮತ್ತೆ ಸಂಯಮದಿಂದ ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಂಡನು. ಅಲ್ಲದೆ ಸರಸ್ವತಿಯ ಒಲುಮೆ ದೊರೆತು ಭಾರತದ ಜ್ಞಾನ ಪರಂಪರೆಯಲ್ಲಿ ಮೇಲು ಸ್ಥಾನ ದೊರೆಯಿತು. ಈತನೇ ‘ಯಾಜ್ಞವಲ್ಕ್ಯಸ್ಮೃತಿಕಾರ’.

ಯಾಜ್ಞವಲ್ಕ್ಯನು ಬ್ರಹ್ಮರಾತ ಎಂಬ ಮುನಿಯ ಮಗ.ಈತನು ಮಹಾ ಪಂಡಿತನಾದ ವೈಶಂಪಾಯನ ಮಹರ್ಷಿಯ ಆಶ್ರಮದಲ್ಲಿ ವಿದ್ಯೆ ಕಲಿಯುತ್ತಾ ಆತನ ಶಿಷ್ಯನಾಗಿದ್ದನು. ಅವನ ಸೋದರಳಿಯನೂ ಆಗಿದ್ದನು ಎಂದು ಉಲ್ಲೇಖವಿದೆ. ಯಾಜ್ಞವಲ್ಕ್ಯನು ಕಲಿಯುವುದರಲ್ಲಿ ಬಹಳ ಚುರುಕಾಗಿದ್ದು, ಅಲ್ಪ ಸಮಯದಲ್ಲೇ ನಾಲ್ಕು ವೇದಗಳನ್ನೂ ಅಭ್ಯಾಸ ಮಾಡಿ ಪ್ರತಿಭಾವಂತನಾಗಿದ್ದನು.

ಒಂದು ದಿನ ಆಶ್ರಮದಲ್ಲಿ ಕಲಿಯುವ ಸಹಪಾಠಿಗಳೂ ಯಾಜ್ಞವಲ್ಕ್ಯನಿಗೂ ಮೋಕ್ಷದ ವಿಚಾರದಲ್ಲಿ ವಾದಮಾಡುತ್ತಾ ಭಿನ್ನಾಭಿಪ್ರಾಯವು ತಲೆದೋರಿತು. ಯಾಜ್ಞವಲ್ಕ್ಯ ತನ್ನದೇ ಆದ ನಿಲುವಿನಿಂದ ಪ್ರತಿಪಾದಿಸಿದನು. ಇವನನ್ನುಳಿದು ಇತರ ಶಿಷ್ಯರೆಲ್ಲ ಗುರುಗಳ ಬಳಿಗೆ ದೂರೊಯ್ದು ವಿಚಾರವನ್ನು ನಿವೇದಿಸಿದರು. ವೈಶಂಪಾಯನರು ಯಾಜ್ಞವಲ್ಕ್ಯನ ವಿಚಾರವನ್ನು, ವಾದ ಸರಣಿಯನ್ನೂ ತಿರಸ್ಕರಿಸಿ ಉಳಿದ ಶಿಷ್ಯರ ಪರವಾಗಿ ನಿಂತರು. ಯಾಜ್ಞವಲ್ಕ್ಯನು ತನ್ನ ವಾದವೇ ಸರಿಯೆಂದಾಗ ವೈಶಂಪಾಯನರಿಗೆ ಸಿಟ್ಟು ಬಂದು  “ನೀನು ಆಶ್ರಮ ಬಿಟ್ಟು ಹೊರಗೆ ನಡೆ, ಅಲ್ಲದೆ ನನ್ನಿಂದ ಇದುವರೆಗೆ ಕಲಿತ ವೇದ ವಿದ್ಯೆಯನ್ನು ಇಲ್ಲಿಯೇ ತ್ಯಜಿಸು” ಎಂಬುದಾಗಿ ಕೋಪಾವಿಷ್ಠರಾದರು. ಕೂಡಲೇ ಇಲ್ಲಿಂದ ಹೊರ ನಡೆ ಎಂದು ಆಜ್ಞಾಪಿಸಿದಾಗ ಗುರುಗಳಿಗೆ ಎದುರಾಡುವಂತಿಲ್ಲ. ಅವರ ಆಜ್ಞೆಯನ್ನು ಉಲ್ಲಂಘಿಸುವಂತಿಲ್ಲ. ಗುರುಗಳು ಹೇಳಿ ಕೊಟ್ಟಂತಹ ವಿದ್ಯೆಯನ್ನು ಅಲ್ಲಿಯೇ ಬಿಡುತ್ತಾನೆ. ಅವನು ತ್ಯಜಿಸಿದ ವಿದ್ಯೆಯನ್ನು ಗುರುಗಳು ತಿತ್ತಿರಿ ಪಕ್ಷಿಯ ರೂಪದಲ್ಲಿ ಮತ್ತೆ ಸ್ವೀಕಾರ ಮಾಡುತ್ತಾರೆ!.

ಈ ಪ್ರಸಂಗದಲ್ಲಿ ಓದುಗರಿಗೊಂದು ‘ಚೋದ್ಯ’ ಉದ್ಭವಿಸುತ್ತದೆ. ಏನೆಂದರೆ ಕಲಿತ ವಿದ್ಯೆಯನ್ನು ತ್ಯಜಿಸುವುದು ಹಾಗೂ ಕಲಿಸಿದವರು ಸ್ವೀಕಾರ ಮಾಡುವ ಬಗೆ….!?. ಅಂದಿನ ಜ್ಞಾನಯೋಗಿಗಳಿಗೆ ಅಂತಹ ಚಮತ್ಕಾರಿ ಕಲೆಗಳು ಕರಗತವಾಗಿದ್ದವು. ಒಟ್ಟಿನಲ್ಲಿ ನಾವು ಇಲ್ಲಿ ತಿಳಿಯಬೇಕಾದುದು ಗುರುಗಳು ಶಿಷ್ಯನಿಗೆ ಮಾಡಿದ ಅನ್ಯಾಯ, ಮೋಸ!. ಸಿಟ್ಟು ಎಂಬುದು ಎಂತೆಂತಹ ಕೆಲಸವನ್ನೂ ಮಾಡಿಸುತ್ತದೆ ಎಂಬುದಕ್ಕೆ ಇದೂ ಒಂದು ಪ್ರಥಮ ಉದಾಹರಣೆ. ಆದರೆ ಗುರುಗಳ ಸಿಟ್ಟು ಹಾಗೂ ಶಾಪವು ಯಾಜ್ಞವಲ್ಕ್ಯನಿಗೆ ವರವಾಗಿ ಪರಿಣಮಿಸುತ್ತದೆ. ತಾನು ಇದುವರೆಗೆ ಪ್ರಯತ್ನ ಪಟ್ಟು ಕಲಿತ ವಿದ್ಯೆ ಕೈ ಬಿಟ್ಟು ಹೋಯಿತಲ್ಲ ..,ಎಂದು ಯಾಜ್ಞವಲ್ಕ್ಯ ಹತಾಶನಾಗಿ ತಲೆಗೆ ಕೈಹೊತ್ತು ಕೂರಲಿಲ್ಲ. ಮನದಲ್ಲೇ ತನ್ನ ಭವಿಷ್ಯದ ಬಗ್ಗೆ ಚಿಂತಿಸಿದ ಬಾಲಕ.

ಮುಂದೆ ಯಾಜ್ಞವಲ್ಕ್ಯ ಸೂರ್ಯನನ್ನು ಕುರಿತು ತಪಸ್ಸು ಮಾಡುತ್ತಾನೆ. ಎಡೆಬಿಡದೆ ನಿರಂತರ ಒಂದೇ ಮನಸ್ಸಿನಿಂದ ತಪಸ್ಸು ಮಾಡಿದ ಬಾಲಕನಿಗೆ ಸೂರ್ಯ ಪ್ರತ್ಯಕ್ಷನಾಗಿ   ‘ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ.ನಿನ್ನ ಇಷ್ಟಾರ್ಥ ಯಾವುದು?’ ಎಂದು ಕೇಳುತ್ತಾನೆ. ಆಗ ಬಾಲಕನಾದ ಯಾಜ್ಞವಲ್ಕ್ಯ ತಾನು ಇದುವರೆಗೆ ವೈಶಂಪಾಯನರಿಂದ ಕಲಿತ ವಿದ್ಯೆ ಅದೀಗ ನಷ್ಟವಾಗಿ ಹೋಗಿದ್ದು, ಎಲ್ಲವನ್ನೂ ವಿಷದವಾಗಿ ಹೇಳಿ ತನಗಾದ ನಷ್ಟವನ್ನು ತುಂಬಿಸಿಕೊಳ್ಳುವ ಬಗೆಯನ್ನು ಕರುಣಿಸಬೇಕೆಂದು ಪ್ರಾರ್ಥಿಸುತ್ತಾನೆ. ಆಗ ಸೂರ್ಯದೇವನು  ‘ಬಾಯಿ ತೆರೆ. ವಾಗ್ದೇವಿಯಾದ ಸರಸ್ವತಿಯನ್ನು ನಿನ್ನ ಬಾಯಿಯ ಮೂಲಕ ಶರೀರದೊಳಕ್ಕೆ ಪ್ರವೇಶಿಸುವಂತೆ ಮಾಡುತ್ತೇನೆ‘ ಎನ್ನುತ್ತಾನೆ. ಸೂರ್ಯನ ಅಣತಿಯಂತೆ ಬಾಲಕ ಬಾಯಿ ತೆರೆಯುತ್ತಾನೆ. ಹಾಗೂ ಸರಸ್ವತಿ ದೇವಿಯೂ ಸೂರ್ಯನ ಅಪ್ಪಣೆಯಂತೆ ಯಾಜ್ಞವಲ್ಕ್ಯನ  ಶರೀರಕ್ಕೆ ಪ್ರವೇಶಿಸುತ್ತಾಳೆ.

ಸಕಲ ವಿದ್ಯೆಯನ್ನೊಳಗೊಂಡ ಪ್ರಜ್ವಲಿತ ದೇವತೆಯಾದ ವಾಗ್ದೇವಿಯು ಒಳ ಹೊಕ್ಕಿದ್ದೇ ತಡ; ಬಾಲಕನಿಗೆ ತಡೆಯಲಾರದ ಉರಿಯಿಂದಾಗಿ ಓಡಿಹೋಗಿ  ನೀರಲ್ಲಿ ಕುಳಿತುಕೊಳ್ಳುತ್ತಾನೆ. ಇದನ್ನು ಗಮನಿಸಿದ ಸೂರ್ಯನು ಬಾಲಕನ ಶಾಪವು ಶಮನವಾಗುವಂತೆ ಅನುಗ್ರಹಿಸುತ್ತಾನೆ. ಸೂರ್ಯದೇವನ ಮೂಲಕ ಸರಸ್ವತಿ ದೇವಿಯ ಅನುಗ್ರಹದಿಂದ ಸಮಸ್ತ ವೇದೋಪನಿಷತ್ತುಗಳೂ ಪುರಾಣಗಳೂ ಯಾಜ್ಞವಲ್ಕ್ಯನ ಮನಸ್ಸಿನಲ್ಲಿ ಸ್ಪುರಿಸುತ್ತವೆ. ಮುಂದೆ ಅವನು ಶತಪಥ ಬ್ರಾಹ್ಮಣ (ಮೋಕ್ಷ ಧರ್ಮದ ಬಗೆಗಿನ ತನ್ನ ಅಭಿಪ್ರಾಯವನ್ನು ರಚಿಸುತ್ತಾನೆ). ಮುಂದೆ ಹಲವಾರು ವಿದ್ವನ್ಮಣಿಗಳೊಡನೆ ವಾದಮಾಡಿ ಗೆಲ್ಲುತ್ತಾನೆ. ನಾವು ಪ್ರಾಮಾಣಿಕರಾಗಿದ್ದು ,ಆತ್ಮವಿಶ್ವಾಸ, ಗುರಿ,ಸಾಧನೆ, ಛಲ ಇದ್ದಲ್ಲಿ ಯಾರು ಯಾವರೀತಿಯಿಂದ ಅನ್ಯಾಯ ಮಾಡಿದರೂ ಅದು ನಮಗೆ ಬಾಧಕವಾಗಲಾರದು ಅದನ್ನು ಮೆಟ್ಟಿ ನಿಂದು ನಮ್ಮ ಇಷ್ಟಾರ್ಥ ಈಡೇರಿಸಿಕೊಂಡು ನಾವು ಎತ್ತರಕ್ಕೇರಬಹುದು ಎಂಬುದು ಈ ಕತೆಯ ತಿರುಳು.

-ವಿಜಯಾಸುಬ್ರಹ್ಮಣ್ಯ ಕುಂಬಳೆ

5 Responses

 1. ಎಂದಿನಂತೆ ಪುರಾಣದ ಕಥೆಓದಿಸಿಕೊಂಡು..ಹೋಯಿತು..ಧನ್ಯವಾದಗಳು ವಿಜಯಾ ಮೇಡಂ

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. ಶಂಕರಿ ಶರ್ಮ says:

  ಅಪರೂಪದ ಪೌರಾಣಿಕ ಕಥೆಯು ಎಂದಿನಂತೆ ಸೊಗಸಾಗಿದೆ.

 4. Padma Anand says:

  ಅತ್ಯಂತ ಕುತೂಹಲಕಾರಿ ಕಥೆ.

 5. Padmini Hegde says:

  .ನ್ಯಾಯ ಅನ್ಯಾಯದ ಕಥೆಯಂತೆ ನಿರೂಪಿಸಿರುವುದು ಹೊಸತಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: