ದೇವರನಾಡಲ್ಲಿ ಒಂದು ದಿನ – ಭಾಗ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕೈ ಬೀಸಿ ಕರೆವ ಕುರುವಾ
ಪ್ರಕೃತಿ ಸೌಂದರ್ಯಕ್ಕೆ ಪ್ರತೀ ಪ್ರದೇಶವೂ ಹೇಳಿಮಾಡಿಸಿದ್ದು. ನಮಗೆ ಸವಿಯುವ ಮನಸ್ಸು ಮತ್ತು ಆಂತರಿಕ ಕಣ್ಣು ಎರಡೂ ಮುಖ್ಯ. ನಮ್ಮ ಊರಿನ ಹೊರಗಿನ ದಿಬ್ಬದಲ್ಲೊ, ಮನೆಯ ಮೇಲೆ ನಿಂತರೆ ಕಾಣುವ ಸೂರ್ಯೋದಯ, ಸೂರ್ಯಾಸ್ತ ಎರಡೂ ವಿಶೇಷ ಅನಿಸಲ್ಲ. ಏಕೆಂದರೆ ದಿನನಿತ್ಯ ನೋಡುವ ದೃಶ್ಯಗಳು ಅವು. ಆದರೆ ಇಲ್ಲೂ ಕೂಡ ಅನುಭವಿಸಬೇಕು. ಆನಂತರ ಬೇರೆ ಪರಿಸರದಲ್ಲಿ. ಮೊದಲು ನಾವು ನಮ್ಮ ಸುತ್ತ ಮುತ್ತ ಇರುವ ಸೌಂದರ್ಯವನ್ನು ಸವಿಯಬೇಕು. ಆನಂತರ ಬೇರೆ ಎನ್ನುವುದು ನನ್ನ ಅನುಭವ. ಏಕೆಂದರೆ ಪ್ರತೀ ಪ್ರದೇಶದ ಆಚಾರ, ವಿಚಾರ,ಸಂಸ್ಕೃತಿ ,ಭಾಷೆ ,ಆಹಾರ,ಉಡುಗೆ ತೊಡುಗೆ, ಬೆಳೆ, ಮತ್ತಿತರ ವ್ಯತ್ಯಾಸಗಳು ಅರಿವಾಗುತ್ತದೆ. ಮತ್ತು ಅನುಭವ ವೇದ್ಯವಾಗುತ್ತದೆ. ಹಾಗಾಗಿ ಮೊದಲು ನಮ್ಮ ಪರಿಸರ ಆನಂತರ ಬೇರೆ ಪರಿಸರ. ನಮ್ಮ ನಾಡು, ನಮ್ಮ ದೇಶದಲ್ಲಿ ಇಲ್ಲದಿರೋದು ಏನೂ ಇಲ್ಲ. ಆದರೆ ನಾವು ಹುಡುಕುವುದಿಲ್ಲ ಅಷ್ಟೇ.
ಹಹ….. ಪ್ರಕೃತಿ ಸೌಂದರ್ಯ ಅಂದ ಕೂಡಲೇ ನೆಪ್ಪಾದುದು ನಮ್ ಕರುನಾಡ ಪಕ್ಕದ ನಾಡಾದ ಕೇರಳದ ವಾಯ್ ನಾಡು ಸೌಂದರ್ಯ. ಹಸಿರುಚಾರಣಗಳ ನಡುವೆ ಕಾಣುವ ಮನೆ,ದೇವಾಲಯ, ಬಂಗಲೆ, ಕೆರೆ,ಕೊಳ, ದ್ವೀಪ,ನದಿ ವಾಹ್! ಅದಕ್ಕೆ ಅದೇ ಸಾಟಿ. ಆಯಸ್ಸು ಆರೋಗ್ಯ ವಯಸ್ಸು ಮನಸ್ಸು ಎಲ್ಲಾ ಇದ್ದಾಗ …..ಎಲ್ಲಾ ಜಂಜಾಟ ಬಿಟ್ಟು ಒಮ್ಮೆ ನೋಡ್ರಲಾ……ಇಂತಹ ಆನಂದವನ್ನು ನೋಡಿ ಅನುಭವಿಸಿ ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಭಗವಂತ ಈ ಧರೆಯಲ್ಲಿ ಏನೆಲ್ಲಾ ಕೊಟ್ಟಿದ್ದಾನೆ ಎಂದು ನೆನೆದು ಕರಜೋಡಿಸುವಂತಾಯಿತು. ನಾನು ಹೆಚ್ಚು ಪ್ರವಾಸ ಮಾಡಿದವಳಲ್ಲ. ಆದರೆ ಮಾಡಿರುವಷ್ಟು ಪ್ರವಾಸಗಳನ್ನು ಮನದಣಿಯೆ ಸವಿದಿರುವೆ.
ನಮ್ಮ ಪಯಣ ವಾಯ್ ನಾಡಿನ ‘ಕುರುವಾ’ ದ್ವೀಪದ ಕಡೆ ತಿರುಗಿತ್ತು. ಮೇಲೆ ಹೇಳಿದಂತೆ ಸುಂದರ ಪ್ರಕೃತಿಯ ಮಡಿಲಲ್ಲಿ ಕಣ್ಮನ ಸೆಳೆಯುವ ದ್ವೀಪ ‘ಕುರುವಾ’. ಎಲ್ಲರೂ ಟಿಕೇಟ್ ಪಡೆದು, ಸುರಕ್ಷಾ ಜಾಕೇಟ್ ತೊಟ್ಟು ದ್ವೀಪದ ಸನಿಹ ಹೊರಟೆವು. ಬಿದಿರಿನಿಂದ ತಯಾರಿಸಿದ ವಿಶೇಷ ದೋಣಿಯಾಕಾರದ ತೆಪ್ಪಗಳವು. ಸಾಂಪ್ರದಾಯಿಕ ದೋಣಿ ಕಟ್ಟುವ ಕಲೆ ನಾನು ತಿಳಿದಂತೆ ಕೇರಳಿರಿಗೆ ಚೆನ್ನಾಗಿ ಗೊತ್ತಿದೆ. ಇದು ತಲತಲಾಂತರದಿಂದ ಬಂದ ಕಲೆಯಾಗಿದೆ. ಉತ್ಕೃಷ್ಟ ದೋಣಿಗಳನ್ನು ಕೇರಳದವರು ತಯಾರಿಸುವರು. ಪ್ರಪಂಚದಲ್ಲಿ ಅತೀ ವೇಗದ ಬೆಳವಣಿಗೆಗೆ ಪಾತ್ರವಾಗಿರುವ ಹುಲ್ಲು ಎಂದರೆ ಅದು ಬಿದಿರು. ಸಾಮಾನ್ಯವಾಗಿ ಉಷ್ಣತೆಗೆ ಹೊಂದಿಕೊಂಡ ಸಸ್ಯ ಸಂಕುಲ. ಆರ್ಥಿಕ ಲಾಭವನ್ನು ತಂದುಕೊಡುವ ಬಿದಿರಿನಿಂದ ಬಹುಪಯೋಗಿ ಕೆಲಸಕ್ಕೆ ಬಳಸುವರು. ಹಾಗೇ ನಾ ನೋಡಿದ ತೆಪ್ಪ ಕೂಡಾ ಬಿರುದಿನಿಂದ ತಯಾರಿಸಿದ್ದು. ಆಧುನಿಕ ಯುಗದಲ್ಲಿ ಬಿದುರಿನ ಬಳಕೆ ಹೆಚ್ಚಾಗಿ ಕಂಡುಬರುತ್ತದೆ. ಅಲಂಕಾರಿಕ ವಸ್ತುಗಳಲ್ಲಿ ಇದೇ ಮೇಲುಗೈ. ಹೆಚ್ಚಿನ ಸಂಕುಚಿತ ಮತ್ತು ಕರ್ಷಕ ಶಕ್ತಿಯನ್ನು ಹೊಂದಿರುವ ಇದು ಒಳಗೆ ತುಂಬಾ ಟೊಳ್ಳಾಗಿದ್ದೂ ಜಂಟಿ ಕಾಂಡವನ್ನು ಹೊಂದಿರುವುದರಿಂದ, ಬಾಗುವ ಶಕ್ತಿಯಿರುವುದರಿಂದ, ನಮ್ಯತೆ ಹಗುರ ಗುಣ ಹೊಂದಿರುವುದರಿಂದ, ಒಳ್ಳೆಯ ಬೆಂಕಿ ನಿರೋಧಕ ಗುಣ ಹೊಂದಿರುವುದರಿಂದ ಅತೀ ವೇಗವಾಗಿ ಬೆಳೆಯುವ ಬಿರುದನ್ನು ಸುಮಾರು ಮೂರರಿಂದ ನಾಲ್ಕು ವರ್ಷಗಳ ಬೆಳೆಯನ್ನು ಬಳಸುವರು. ಇಂತಹ ಬಿದಿರಿನಿಂದ ತಯಾರಾದ ತೆಪ್ಪದಲ್ಲಿ ಹತ್ತುವಾಗ ತಬ್ಬಿಬ್ಬಾಗಿ ಭಯವಾದರೂ ಎರಡು ತೆಪ್ಪಗಳಲ್ಲಿ ಕುಳಿತು ಹೊರಟೆವು.
ಈ ತುದಿಯಿಂದ ಆ ತುದಿಗೆ ಒಂದು ದಪ್ಪ ಹಗ್ಗ ಕಟ್ಟಲಾಗಿದ್ದು ಆ ಹಗ್ಗದ ಸಹಾಯದಿಂದ ಕಾಲಿನಲ್ಲೇ ಮುಂದೆ ಜಗ್ಗುತ್ತಿದ್ದರು. ಅದು ಸಣ್ಣಗೆ ಚಲಿಸುತ್ತಿತ್ತು. ವೀಡಿಯೋ,ಪೋಟೋಗಾಗಿ ನಾವೇ ಹುಟ್ಟು ಹಿಡಿದು ನೀರನ್ನು ಹಿಂದೆ ಚಲಿಸುವಂತೆ ಮಾಡುತ್ತಿದ್ದೆವು. ಆಮೇಲೆ ಅನಿಸಿದ್ದು ಅದು ಇಲ್ಲಿ ಒಂದು ನೆಪ ಮಾತ್ರವಷ್ಟೇ.
ಎಲ್ಲಿ ನಾವಿರುವೆವೋ ಅಲ್ಲಿ ಚಂದ ಗದ್ದಲ ಇದ್ದೇ ಇರುತ್ತದೆ. ಹಾಯ್…ಓಯ್..ಎಂದು ಗದ್ದಲ ಮಾಡುತ್ತಾ….ಗತಕಾಲದ ಹಾಡು ಕುವೆಂಪುರವರ “ದೋಣಿಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ” ಎಂದು ಹಾಡುತ್ತಾ ಸಾಗಿದೆವು. ಸುತ್ತಲಿನ ಹಸಿರು ಚಾರಣದ ನಡುವೆ ಪ್ರಶಾಂತವಾದ ಕುರುವಾ ದ್ವೀಪದಲ್ಲಿನ ನೀರು ನಸು ಹಸಿರ ಚಾದರವನ್ನು ಹೊದ್ದು ಪ್ರಶಾಂತತೆಯನ್ನು ಕಾಪಾಡಿಕೊಂಡಿತ್ತು. ನೀರಿನಲ್ಲೆದ್ದ ತರಂಗಗಳೆಲ್ಲಾ ಒಂದರ ಹಿಂದೆ ಒಂದು ತೀರ ಸೇರಿ ಚುಂಬಿಸಿ ಮರೆಯಾಗುತ್ತಿದ್ದವು. ಆ ಅಲೆಯ ಜೊತೆ ನನ್ನ ಮನಸೂ ಕೂಡಾ ಸಾಗಿ ಮತ್ತೆ ಬಾಲ್ಯಕ್ಕೆ ಕರೆದೊಯ್ಯುತ್ತಿತ್ತು. ಯಾವುದಾದರೂ ಪುಟ್ಟ ಕೊಳ ಹುಡುಕಿ ಹೋಗುತ್ತಿದ್ದೆವು. ಅಲುಗಾಡದೆ ನಿಂತ ನೀರೊಳಗೆ ಸಣ್ಣ ಕಲ್ಲೆಸೆದು ಬರುವ ತರಂಗಗಳ ಜೊತೆ ಕಣ್ಣು ಕೂಡ ಎಣಿಸುತ್ತಾ ಇರುತ್ತಿತ್ತು. ಈಗಲೂ ಅದು ನೆನಪಾಯಿತು. ನೆನಪಿನ ನಡುವೆ ತೆಪ್ಪ ಇನ್ನೇನು ತೀರ ಮುಟ್ಟುವುದರಲ್ಲಿ ಇತ್ತು.
ನೀರಿನೊಳಗೆ ಮೊಸಳೆ,ಹಾವುಗಳಿವೆ ಎಂಬ ಭಯದಲ್ಲಿ ನೀರಲ್ಲಿ ಕೈಯಾಡಿಸದಂತೆ ತೆಪ್ಪವನ್ನು ದೋಣಿಯಾಕಾರಕ್ಕೆ ಮಾಡಿದ್ದರಿಂದ ನೀರು ಕೈಗೆ ಸಿಗುವಂತಿರಲಿಲ್ಲ. ಮುಂದಿನವರ ದೋಣಿಗೆ ಪೈಪೋಟಿ ನೀಡುವ ಮಾತುಕತೆಯಲ್ಲಿ, ಫೋಟೋ ವೀಡಿಯೋಗಳ ಸಂಭ್ರಮದಲ್ಲಿ ಒಂದು ಸುತ್ತು ಬಂದದ್ದು ತಿಳಿಯಲೇ ಇಲ್ಲ. ದುರಂತವೆಂದರೆ ಸುತ್ತು ಹಾಕುವಾಗ ಸುತ್ತಲಿನ ವೈಭವವನ್ನು
ಸವಿಯುವುದನ್ನು ಬಿಟ್ಟು ಸುಮ್ಮನೆ ಹೀಗೆ ಸಾಗಿದ್ದು ನನಗೆ ತುಸು ಬೇಸರವಾಯಿತು. ನೀರಿನಲ್ಲಿ ತೇಲಿದ ಅನುಭವವನ್ನು ನಾನು ಚೆನ್ನಾಗಿ ಸವಿಯಲಿಲ್ಲ. ಕಣ್ಣಳತೆಗೆ ಸುತ್ತಿಸಿ ತೀರ ಸೇರಿಸುತ್ತಿದ್ದರು. ಮತ್ತೂ ಬೇಕಿತ್ತು ಎಂದುಕೊಳ್ಳುವಷ್ಟರಲ್ಲಿ ತೀರ ಸಿಕ್ಕಿ ಇಳಿದಾಯಿತು. ಒಂದೈದು ನಿಮಿಷ ಹಾಗೆ ಸುತ್ತಲಿನ ಸೌಂದರ್ಯವನ್ನು ಕಣ್ಣಲ್ಲಿ ಸೆರೆ ಹಿಡಿದು ಹೊರಟೆ. “ಎಂಥಾ ಸೌಂದರ್ಯ ನೋಡು, ಈ ವಾಯ್ ನಾಡ ಬೀಡು” ಬಾಯಿಂದ ವಾವ್! ಎನ್ನುವ ಉದ್ಗಾರ ಪದೇಪದೇ ಬರುತ್ತಲೇ ಇತ್ತು. ಅಷ್ಟರಲ್ಲಿ ನಮ್ಮ ತೆಪ್ಪದ ಬಳಿ ‘ಹಾವು ‘ಎಂದು ಕಿರುಚಿದ ಶಬ್ಧ. ನಾ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಅದೆಲ್ಲಿ ಹರಿಯಿತೋ. ಹಾವಿನ ಬಣ್ಣ, ನೀರಿನ ಬಣ್ಣ ಎರಡೂ ಸಮವಾಗಿ ಮೇಳೈಸಿದ್ದವು.
ಈ ಕಣ್ಣುಗಳದು ಅದೇನು ಪುಣ್ಯವೋ. ಈ ಜನ್ಮದ ಸಾರ್ಥಕತೆ ಅದರದು. ತಂಪಾದ ತೀರದಿಂದ ಮತ್ತೆ ಸುಡುಬಿಸಿಲ ಜಾಗಕ್ಕೆ ಬಂದಾಗ ಅಯ್ಯೋ ದೇವರೆ ಅಲ್ಲೇ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತಿತ್ತು ಎಂಬ ಅಭಿಪ್ರಾಯ ಮಾತ್ರ ಬದಲಾಗಲೇ ಇಲ್ಲ. ಸಮಯ ಸರಿದದ್ದು ತಿಳಿಯಲೇ ಇಲ್ಲ. ಹೊಟ್ಟೆ ಚುರುಗುಡುತ್ತಿತ್ತು.ಸುತ್ತ ಹುಡುಕಿದರೂ ಒಂದು ಚಂದದ ಹೋಟೆಲ್ ಇಲ್ಲ. ಅಲ್ಲಲ್ಲೇ ಇದ್ದ ಸಣ್ಣ ಸಣ್ಣ ಮೆಸ್ ಗಳು ವೆಜ್ -ನಾನ್ ವೆಜ್ ಬಳಕೆಯವು. ವಿಧಿಯಿಲ್ಲದೆ ಒಂದೆರಡು ತುತ್ತು ಕುಸುಬಲಕ್ಕಿ ಅನ್ನ…..ಮಜ್ಜಿಗೆ ಹುಳಿ ತಿಂದು ಹೊರಟೆವು.
ಸೂರ್ಯ ಅಂತೂ ಎರ್ರಾಬಿರ್ರಿ ಗರಂ ಆಗಿದ್ದ. ತಣ್ಣಗಿನ ನೀರು ಕುಡಿದು ಸಂಜೆ ತಂಗುವ ದಾರಿ ಹಿಡಿದೆವು.
(ಮುಂದುವರೆಯುವುದು..)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37848
-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ
ಪ್ರವಾಸ ಕಥನ ಚಂದದ ನಿರೂಪಣೆಯನ್ನು ಹೊತ್ತು ಸಾಗುತ್ತಿದೆ..ಧನ್ಯವಾದಗಳು ಗೆಳತಿ..ಲಕ್ಷ್ಮಿ
ಚೆನ್ನಾಗಿದೆ
ಚಂದದ ಬರಹ
ಕೇರಳ ಪ್ರವಾಸ ಕಥನ ಚೆನ್ನಾಗಿದೆ. ದಪ್ಪನೆಯ ಬಿದಿರ ದೋಣಿಯು ವಿಶೇಷವೆನಿಸಿತು.