ಜನಪದ ಸಾಹಿತ್ಯ-ಕಥನಗೀತೆ-ದೃಢವತಿ ಸಂಪನ್ನೆ
ಜನಪದ ಖಂಡಕಾವ್ಯ: ಡಾ. ಜೀಶಂಪ ರವರು ಸಂಪಾದಿಸಿದ, ಚೇತನ ಬುಕ್ ಹೌಸ್, ಮೈಸೂರು ಇವರು 2002 ರಲ್ಲಿ ಪ್ರಕಟಿಸಿದ ಕೃತಿ ”ಜನಪದ ಖಂಡಕಾವ್ಯ”. ಜನಪದ ಸಾಹಿತ್ಯದ ಬಹು ಮುಖ್ಯ ಅಂಗ ಕಥನ ಗೀತೆಗಳು; ಇವು ಹೆಣ್ಣುಮಕ್ಕಳು ತಮ್ಮ ಬದುಕಿಗೆ ಹತ್ತಿರವಾದ, ತಮ್ಮ ಹೃದಯದ ರಾಗಭಾವಗಳಿಗೆ ಸಮೀಪವರ್ತಿಯಾದ ಸಂಗತಿಗಳನ್ನು ಹಾಡಿಕೊಂಡ ಗೀತೆಗಳು; ಸ್ತ್ರೀಯರ ಆಶಯಗಳನ್ನು ಸಮರ್ಪಕವಾಗಿ ಪ್ರತಿಮಿಸುವ ಅಪರಿಮಿತ ಕಥನಗೀತೆಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳೇ ಆಗಿವೆ; ಹೆಣ್ಣುಮಕ್ಕಳ ಹಾಡ್ಗಬ್ಬಗಳಲ್ಲಿ ಕಥಾ ಕ್ರಿಯೆಗಿಂತ ನೋವಿನ ಸಂದರ್ಭಗಳ ಚಿತ್ರಣಕ್ಕೆ ಪ್ರಾಶಸ್ತ್ಯ ಎಂದು ಅವುಗಳ ವಿಶೇಷತೆಯನ್ನು ಗುರುತಿಸುತ್ತಾರೆ ಡಾ. ಜೀಶಂಪ ರವರು. ಅವರು ತಮ್ಮ ಜನಪದ ಖಂಡಕಾವ್ಯ ಕೃತಿಯಲ್ಲಿ ಸಂಗ್ರಹಿಸಿ ಕೊಟ್ಟಿರುವ 8 ಕಥನ ಗೀತೆಗಳಲ್ಲಿ ”ದೃಢವತಿ ಸಂಪನ್ನೆ” ಯೂ ಒಂದು.
ಜನಪದ ಸಾಹಿತ್ಯದ ಮೌಲಿಕತೆ: ಜನಪದ ಸಾಹಿತ್ಯವನ್ನು ಜಗತ್ತಿನಾದ್ಯಂತ ವಿದ್ವಾಂಸರು ಒಂದು ಜನಾಂಗದ ಬಿಸಿಯುಸಿರು, ಜನಾಂಗದ ಬೆವರಿನಲ್ಲಿ, ಕಣ್ಣೀರಿನಲ್ಲಿ ಅಥವಾ ಆನಂದಾಶ್ರುವಿನಲ್ಲಿ ನಾದಿದ ರೊಟ್ಟಿ ಎಂದು ಗುರುತಿಸಿದ್ದಾರೆ. ಜನಪದ ಸಾಹಿತ್ಯವು ಒಂದು ಕಾಲದ ಜೀವನದ ವಿವಿಧ ಹಂತದ ರೀತಿನೀತಿಗಳಲ್ಲಿ, ಸಾಮಾಜಿಕ ನಡಾವಳಿಗಳಲ್ಲಿ ರಕ್ತಗತವಾಗಿದ್ದ, ಬೇರೂರಿದ್ದ ಜನಪದ ಬದುಕಿನ ವಿವಿಧ ಮುಖಗಳ ಅಭಿವ್ಯಕ್ತಿಯೇ ಆಗಿದೆ ಎಂದೇ ಈ ಸಾಹಿತ್ಯವನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಜನಪದ ಸಾಹಿತ್ಯವು ಚಿತ್ರಿಸುವ ಪಾತ್ರಗಳು, ಘಟನೆಗಳ ವಿವರಣೆಗಳು ಜನಾಂಗದ ಮಾನಸಿಕ ಸ್ವರೂಪವನ್ನು ಸೆರೆ ಹಿಡಿಯುತ್ತವೆ; ಅತಿ-ರಂಜಕತೆ ಹಾಗೂ ರಮ್ಯಗುಣಗಳಿಂದ ನಿರ್ಮಿತವಾಗಿರಬಹುದಾದ ಅಸಹಜ ಮತ್ತು ಅತಿ-ಧ್ವನಿಯ ಆವರಣಗಳನ್ನು ತೆಗೆದು ಹಾಕುತ್ತವೆ ಮತ್ತು ಶುಧ್ಧ ಜನಪದ ಜೀವನವನ್ನು ಅನಾವರಣಗೊಳಿಸುತ್ತವೆ; ಜಾನಪದದ ರೂಪ ಸ್ವರೂಪಗಳು ಇಂದೂ ವ್ಯಾಪಕವಾಗಿ ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ತನ್ನ ಪ್ರಭಾವ, ಪ್ರತಿಕ್ರಿಯೆಗಳ ಮುದ್ರೆಯೊತ್ತಿದೆ ಎನ್ನುತ್ತಾ ವಿದ್ವಾಂಸರು ಜನಪದ ಸಾಹಿತ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಎತ್ತಿಹಿಡಿಯುತ್ತಾರೆ.
ಇಬ್ಬಂದಿತನದ ಮೂಲ: ಸಂಪನ್ನೆ ಕಥನಗೀತೆಯು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬೆರೆತು ಹೋಗಿರುವ ಧೃವವಿರೋಧಿ ದ್ವಂದ್ವಗಳನ್ನು, ಇಬ್ಬಂದಿತನಗಳನ್ನು ಚಿತ್ರಿಸುತ್ತದೆ. ಇದನ್ನು ಪೋಷಿಸುವವ ಗಂಡು ಎನ್ನುತ್ತದೆ. ಎಲ್ಲ ಕುಲ, ಜನಾಂಗ, ಬುಡಕಟ್ಟುಗಳಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂದು ಮರೆತು ಬಿಡಬೇಕಾದವಳು ಅಲ್ಲ. ಅವಳ ಮಗ \ ಮಗಳು ಎರಡು ಕುಲಗಳ ಬಾಂಧವ್ಯವನ್ನು ಬೆಸೆಯುವ ಕೊಂಡಿ ಎಂದು ಪರಿಗಣಿಸುವ ಸಮುದಾಯಗಳು ಈಗಲೂ ಇವೆ. ಕಥನಗೀತೆಯಲ್ಲಿ ಸಂಪನ್ನೆ ತಂಗಿ. ಮದುವೆಯಾದ ಮೇಲೆ ತನಗೆ ಗಂಡು ಮಗು, ತನ್ನ ಅಣ್ಣನಿಗೆ ಹೆಣ್ಣು ಮಗು ಹುಟ್ಟಿದರೆ ಅಣ್ಣನ ಮಗಳು ತನಗೆ ಸೊಸೆಯಾಗಬೇಕು ಎಂದು ತಂಗಿ ಆಶಿಸುವುದು ಸಹಜ. ಅದೇ ರೀತಿ ಅಣ್ಣನ ಹೆಂಡತಿ ತನಗೆ ಹೆಣ್ಣು ಮಗುವಾದರೆ ತನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿ ತನ್ನ ತವರಿನೊಂದಿಗಿನ ಸಂಬಂಧ ಕಡಿದು ಹೋಗದಂತೆ ನೋಡಿಕೊಳ್ಳಬೇಕು ಎನ್ನುವ ಆಸೆಯನ್ನು ಹೊಂದಿರುವುದೂ ಸಹಜ. ಆದರೆ ಅಣ್ಣನ ಹೆಂಡತಿ ಸೊಸೆಯಾಗಿ ಬಂದವಳು. ಅವಳು ಗಂಡನ ಮನೆಯವರ ಆಶೋತ್ತರಗಳಿಗೆ ಸ್ಪಂದಿಸಬೇಕು, ಅದು ಅವಳ ಕರ್ತವ್ಯ. ಇದು ಸಮಾಜದ ನಿರೀಕ್ಷೆ.
ಲೋಕರೂಢಿಯ ಕಟ್ಟು: ಸಮಾಜದ ನಿರೀಕ್ಷೆಗೆ ಅನುಗುಣವಾಗಿ ಸಂಪನ್ನೆ ಮತ್ತೆ ಅವಳ ಅತ್ತಿಗೆ ತಮಗೆ ವಿಭಿನ್ನ ಲಿಂಗದ ಮಕ್ಕಳು ಹುಟ್ಟಿದರೆ ಅವರಿಬ್ಬರಿಗೆ ಮದುವೆ ಮಾಡಿ ಬಂಧುತ್ವದ ಬಳ್ಳಿ ಚಿಗುರಿ ಹಬ್ಬುವಂತೆ ನೋಡಿಕೊಳ್ಳುತ್ತೇವೆಂದು – ”ಕೆರೆಯ ಒಳಗಿರುವ ಕುರಿ ಸಾಕ್ಷಿ ಮರಿ ಸಾಕ್ಷಿ| ಕೆರೆ ಒಳಗಿರುವ ಜಲ ಸಾಕ್ಷಿ” ಎಂದು ಆಣೆ ಹಾಕಿಕೊಳ್ಳುತ್ತಾರೆ. ‘ಊಟ ಮಾಡ್ಯಾರು ಈಳ್ಯಾವ ಮೆದ್ದ್ಯಾರು| ಮಂಚದ ಮೇಲೆ ಮಲಗ್ಯಾರು| ದುರುಸ್ವಪ್ನ ಬಡಿದಾವೆ‘ ಎಂದೆನ್ನುವ ಕಥನಗೀತೆ ಸಂಪನ್ನೆಯ ಅತ್ತಿಗೆಯ ಮನಸ್ಸು ಆಣೆ ಮಾಡಿದಂತೆ ಇರಲಿಲ್ಲ ಎಂಬುದನ್ನು ಅವರಿಗೆ ಬಿದ್ದದ್ದು ಕೆಟ್ಟ ಕನಸು ಆಗಿತ್ತು ಎಂದೆನ್ನುವುದರ ಮೂಲಕ ಸೂಚಿಸುತ್ತದೆ. ಸಂಪನ್ನೆ, ಅವಳ ಅತ್ತಿಗೆ ಇಬ್ಬರೂ ಗರ್ಭಿಣಿಯರಾಗಿದ್ದಾರೆ. ಲೋಕರೂಢಿಯಂತೆ ಅಣ್ಣ ತಂಗಿಯನ್ನು ತನ್ನ ಮನೆಗೆ ಕರೆದು ತರಬೇಕು, ಮಗು ಹುಟ್ಟುವವರೆಗೂ ತಂಗಿಯನ್ನು ಉಪಚರಿಸಬೇಕು, ಮಗು ಹುಟ್ಟಿದಮೇಲೆ ಗೌರವದಿಂದ ತಂಗಿಯನ್ನು ಅವಳ ಮನೆಗೆ ಕಳುಹಿಸಿಕೊಡಬೇಕು. ಇದನ್ನು ಮೀರಲಾರದ ಅಣ್ಣ ತಂಗಿಯನ್ನು ಕರೆತರಲು ಹೊರಟ. ಅತ್ತಿಗೆಯೂ ಲೋಕರೂಢಿಯನ್ನು ಮೀರಲಾರಳು. ಆದರೆ ಅದನ್ನು ಮರ್ಯಾದಿಸಲೂ ಆರಳು. ಮನೆಗೆ ಬೇಕಾದ ಅಕ್ಕಿ ಇಲ್ಲ, ಬೆಲ್ಲ ಇಲ್ಲ, ತುಪ್ಪ ಇಲ್ಲ, ಎಲೆ ಇಲ್ಲ, ಅಡಿಕೆ ಇಲ್ಲ ಎಂದು ಒಂದೊಂದೇ ನೆವ ಹೇಳಿ ಅವನನ್ನು ತಡೆದಳು. ಅವನು ಅವಳು ಇಲ್ಲವೆಂದು ಹೇಳಿದುದನ್ನೆಲ್ಲ ತಂದಿಟ್ಟು ಹೊರಟೇ ಬಿಟ್ಟ. ಆದರೆ ಅವನು ತನ್ನ ಹೆಂಡತಿಗಿಂತ ಭಿನ್ನ ಮನಸ್ಥಿತಿಯವನೇನೂ ಅಲ್ಲ.
ದುರಹಂಕಾರ: ಸಂಪನ್ನೆಯ ಅತ್ತಿಗೆಯಂತೆ ಅಣ್ಣನೂ ತನ್ನ ಮನೆ ಅವಳ ಮನೆಗಿಂತಲೂ ಹೆಚ್ಚು ಅಂದ ಚೆಂದದ್ದು, ಶ್ರೀಮಂತಿಕೆಯುಳ್ಳದ್ದು ಎಂದು ತಿಳಿದಿದ್ದಾನೆ. ‘ಅವರ್‍ಮನೆ ಊಟ ಮಾಡ್ಬೇಡಿ| ಅವರ್‍ಮನೆ ಈಳ್ಯ ಮೆಲಬೇಡಿ| ಕುಂದ್ರಬೇಡಿರಿ ಮಣೆ ಮೇಲೆ| ಅಂದ ಕುಲದವರು ಚೆಂದ ಕುಲದವರು’ ನಾವು ಎಂದು ಹೆಂಡತಿ ಹೇಳುವ ಬುದ್ಧಿಮಾತಿಗೆ ತಲೆದೂಗಿದ್ದಾನೆ. ಸಂಪನ್ನೆಯ ಮನೆಗೆ ಹೋದವನೆ ಅವಳಿಗೆ – ಬಾರೆ ಬೇಗನೆ ಅರಮನಿಗೆ ಎಂದು ಗದ್ದರಿಸಿ ಹೇಳಿದ್ದಾನೆ. ಸಂಪನ್ನೆಗೆ ಅವನ ಅಂತರಂಗ ಗೊತ್ತಾಗಿ ‘ಅಂದ ಕುಲದವರು ನೀವು ಚೆಂದ ಕುಲದವರು ನೀವು| ನಿಮ್ಮನಿಗೆ ನಾವೀಗ ಬರುವೊಲ್ಲ ‘ಎಂದು ಅವನ ಆಹ್ವಾನವನ್ನು ತಿರಸ್ಕರಿಸಿದ್ದಾಳೆ.
ನಾಟಕದ ಅತ್ತೆಮನೆ: ಅಣ್ಣನಿಗೆ ಲೋಕರೂಢಿಯನ್ನು ಮುರಿಯುವ ಧೈರ್ಯ ಇರದೇ ಇದ್ದುದರಿಂದ ಅತ್ತೆಮ್ಮ ಸೊಸೆಯನ್ನು ಕಳುಹಮ್ಮ ಎಂದು ಸಂಪನ್ನೆಯ ಅತ್ತೆಯನ್ನು ಕೇಳಿಕೊಂಡಿದ್ದಾನೆ. ಅವಳ ಗಂಡ ಮತ್ತೆ ಅವಳ ಅತ್ತೆ ಇಬ್ಬರೂ ಅವಳನ್ನು ಒಪ್ಪಿಸಿ ಕಳುಹಿಸಿಕೊಟ್ಟಿದ್ದಾರೆ. ‘ನಾ ಬರೋ ತನ್ಕ ಉರದರೆ ಜೋತಮ್ಮ| ಬಾಯಿ ತುಂಬ ಹೊನ್ನ ಹುಯಿಸೇನು‘ ಎಂದು ದೀಪ ಹಚ್ಚಿ ಹರಕೆ ಹೇಳಿಕೊಂಡು ಸಂಪನ್ನೆ ಹೊರಟಳು ಎನ್ನುವ ಕಥನಗೀತೆಯ ಸಾಲುಗಳು ಅವಳಿಗೆ ತನ್ನ ಅಣ್ಣನ ವಿಷಯದಲ್ಲಿ, ಅತ್ತೆಮನೆಯವರ ವಿಷಯದಲ್ಲಿ ಅವಭರವಸೆ ಇತ್ತು, ಅಣ್ಣ ಅತ್ತಿಗೆಯರ ಕಡೆಯಿಂದ ತನಗೆ ಆಪತ್ತೇನಾದರೂ ಸಂಭವಿಸಬಹುದು ಎಂಬ ಆತಂಕವಿತ್ತು ಎಂಬುದನ್ನು ಸೂಚಿಸುತ್ತವೆ.
ಮುಖವಾಡ ಕಳಚಿದ ಅಣ್ಣ : ಅಣ್ಣ ಕುದುರೆಯ ಮೇಲೆ, ಬಸಿರಿಯಾದ ತಂಗಿ ಕಾಲುನಡಿಗೆಯಲ್ಲಿ ಹೊರಟಿದ್ದಾರೆ. ಅರ್ಧದಾರಿಯಲ್ಲಿ ಅಣ್ಣ ಅವಳ ಆಭರಣಗಳನ್ನೆಲ್ಲ ಬಿಚ್ಚಿಸಿ ತೆಗೆದುಕೊಂಡ. ತನ್ನ ರುಮಾಲನ್ನು ಅವಳಿಗೆ ಕೊಟ್ಟು ಅವಳುಟ್ಟ ಪಟ್ಟೆ ಸೀರೆಯನ್ನೂ ಬಿಚ್ಚಿಸಿ ತೆಗೆದುಕೊಂಡ. ಅವಳನ್ನು ದಾರಿಯಲ್ಲೇ ಬಿಟ್ಟು ಕುದುರೆಯನ್ನು ಓಡಿಸಿಕೊಂಡು ಹೊರಟೇ ಹೋದ. ಸಂಪನ್ನೆ ಈಗ ಈ ದುಃಸ್ಥಿತಿಯಲ್ಲಿ ಗಂಡನ ಮನೆಗೆ ಹಿಂತಿರುಗಿ ಹೋಗುವಂತಿಲ್ಲ. ಅವಳಿಗೂ ಅವಮರ್ಯಾದೆ, ಅವಳ ಅಣ್ಣನಿಗೂ ಅವಮರ್ಯಾದೆ. ಅಣ್ಣನ ಮನೆಗೂ ಹೋಗುವಂತಿಲ್ಲ, ಅವಳು ಬರುವುದು ಅಣ್ಣನಿಗೂ ಇಷ್ಟವಿಲ್ಲ, ಅತ್ತಿಗೆಗೂ ಇಷ್ಟವಿಲ್ಲ. ಆದರೆ ಅವಳ ಅತ್ತಿಗೆಗೆ ಬಿದ್ದ ಕನಸಿನಂತೆ ಅವಳಿಗೆ ಗಂಡು ಮಗು, ಅವಳ ಅತ್ತಿಗೆಗೆ ಹೆಣ್ಣು ಮಗು ಹುಟ್ಟಲಿದೆ. ಅವರು ಮಾಡಿಕೊಂಡ ಆಣೆ ಭಾಷೆಯಂತೆ ಅವರ ಮಕ್ಕಳಿಗೆ ಮುಂದೆ ಮದುವೆ ಮಾಡಬೇಕಾಗಿದೆ. ಅದಕ್ಕಾಗಿ ಸಂಪನ್ನೆ ಅಣ್ಣ ಅವಳನ್ನು ನಡು ದಾರಿಯಲ್ಲಿಯೇ ಬಿಟ್ಟುಹೋದರೂ ಹೇಗೋ ಅಂತೂ ಅವನ ಮನೆಗೆ ಬಂದು ಮುಟ್ಟಿದ್ದಾಳೆ.
ಅತ್ತಿಗೆಯ ದ್ವಂದ್ವ ನಡೆ: ಸಂಪನ್ನೆಯನ್ನು ಮನೆಯ ಬಾಗಿಲಿನಲ್ಲಿ ನೋಡಿದ ಅವಳ ಅತ್ತಿಗೆಗೆ ಏನೂ ಮಾಡಲಾಗದೆ ಕಂಚಿನ ಬಟ್ಟಲಿಗೆ ಮಿಂಚೆಣ್ಣೆ ಹುಯ್ಕೊಂಡು ಸುಣ್ಣದ ತಿಳಿನೀರ ಇಟಗೊಂಡು ಅವಳನ್ನು ಸ್ವಾಗತಿಸಬೇಕಾಯಿತು. ಆದರೆ ಕೇರಿಯೊಳಗೆ ಹೋಗಿ ”ಒಳ್ಳೆ ಅಕ್ಕಿ ಕೊಡುತೀನಿ ನುಚ್ಚಕ್ಕಿ ಕೊಡಿರವ್ವ| ನುಚ್ಚಕ್ಕುಣ್ಣೋರ ಸೊಸಿ ಬಂದ್ಲು| ಒಳ್ಳೆ ಬೆಲ್ಲ ಕೊಡುತೀನಿ ಕಂಟು ಬೆಲ್ಲ ಕೊಡಿರಮ್ಮ | ಕಂಟು ಬೆಲ್ಲುಣ್ಣೋರ ಸೊಸಿ ಬಂದ್ಲು| ಒಳ್ಳೆಡಕೆ ಕೊಡತೀನಿ ಗೋಟಡಕೆ ಕೊಡಿರಮ್ಮ| ಗೋಟಡಕೆ ಹಾಕೋರ ಸೊಸಿ ಬಂದ್ಲು| ಒಳ್ಳೆಲೆ ಕೊಡುತೀನಿ ತರಗೆಲೆ ಕೊಡಿರಮ್ಮ| ತರಗೆಲೆ ಹಾಕೋರ ಸೊಸಿ ಬಂದ್ಲು| ಒಳ್ಳೆ ತುಪ್ಪ ಕೊಡತೀನಿ ಮುಗ್ಗು ತುಪ್ಪ ಕೊಡಿರಮ್ಮ| ಮುಗ್ಗು ತುಪ್ಪುಣ್ಣೋರ ಸೊಸಿ ಬಂದ್ಲು” ಎಂದು ಸಾರಿಕೊಂಡು ಬರ್‍ತಾಳೆ. ಆಮೇಲೆ ಅತ್ತಿಗೆ ಸಂಪನ್ನೆಯ ಊಟದಲ್ಲಿ ವಿಷ ಬೆರೆಸಿ ಸಾಯಿಸಲು ಪ್ರಯತ್ನಿಸಿದಳು. ಸಂಪನ್ನೆ ಸಾಯುವುದರ ಬದಲಿಗೆ ಒಂದು ತುತ್ತು ತಿನ್ನುವ ವೇಳೆಗೆ ತಲೆ ಸುತ್ತು ಬಂದು ಬಿದ್ದುಬಿಡುತ್ತಾಳೆ. ಅವಳು ಎಚ್ಚರಗೊಳ್ಳುವ ವೇಳೆಗೆ ಅವಳ ಅಣ್ಣ ಚಂದ್ರಾಯುಧದಿಂದ ತನ್ನ ಹೆಂಡತಿಯ ತಲೆ ಕತ್ತರಿಸಲು ಹೊರಟ. ಎದ್ದು ಕುಳಿತ ಸಂಪನ್ನೆ ಅಣ್ಣನ ಕೈಯಿಂದ ಚಂದ್ರಾಯುಧ ಕಸಿದು ಗೂಡಿನಲ್ಲಿರಿಸಿದಳು, ಎಂತೋರ ಮಗಳೆಂದು ಎಂತೋರ ಸೊಸೆಯೆಂದು ಅಪಕೀರ್ತಿ ಬರುತ್ತದೆ ಎಂದು ಎಚ್ಚರಿಸಿದಳು. ಸಂಪನ್ನೆಗೆ ಮಗು ಹುಟ್ಟುವ ಸಮಯ ಬಂದಿದೆ. ಅಣ್ಣ ಪಲ್ಲಕ್ಕಿ ಹೊರುವವರಿಗೆ ಉಂಬಳಿಯನ್ನು ಕೊಟ್ಟು ಎಲ್ಲರೂ ಕಾಣುವ ಹಾಗೆ ಪಲ್ಲಕ್ಕಿಯಲ್ಲಿ ಸೂಲಗಿತ್ತಿಯನ್ನು ಕರೆತಂದಿದ್ದಾನೆ. ಅತ್ತಿಗೆ ಹುಟ್ಟುವ ಮಗುವನ್ನು ಕುತ್ತಿಗೆ ಹಿಚುಕಿ ಸಾಯಿಸು ಹೊನ್ನು ಕೊಡುತೀನಿ ಎಂದಿದ್ದಾಳೆ ಸೂಲಗಿತ್ತಿಗೆ. ಅದಕ್ಕೆ ಅಣ್ಣನ ಆಕ್ಷೇಪಣೆಯೇನೂ ಇಲ್ಲ. ಆದರೆ ಸೂಲಗಿತ್ತಿಯ ಹಲ್ಲು ಮುರಿದು ಹುಟ್ಟಿಬಿಟ್ಟ ಸಂಪನ್ನೆಯ ಮಗ.
ಇದಾದ ನಂತರ ಅಣ್ಣ ಅತ್ತಿಗೆಯರು ಮಗು, ಬಾಣಂತಿಯನ್ನು ಗಂಡನ ಮನೆಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡುವುದಿಲ್ಲ, ತಾವೇ ಚೆನ್ನಾಗಿ ನೋಡಿಕೊಳ್ಳುವುದೂ ಇಲ್ಲ. ಕುಲ ದೀಪಕನಾದ ಗಂಡು ಮಗು ಹುಟ್ಟಿದರೂ ಅತ್ತೆ ಮನೆಯವರು ಮಗು ಬಾಣಂತಿಯನ್ನು ನೋಡಲೂ ಬರುವುದಿಲ್ಲ, ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಸಂಪನ್ನೆ ಹೇಗೆ ಅಣ್ಣನ ಮನೆಯನ್ನು ತಾನೇ ತಲುಪಿದಳೋ ಹಾಗೇ ಅತ್ತೆ ಮನೆಯನ್ನೂ ಮಗುವಿನೊಂದಿಗೆ ತಲುಪಿದ್ದಾಳೆ. ಕಾಲ ಕಳೆದಿದೆ. ಸಂಪನ್ನೆಯ ಅತ್ತಿಗೆಗೆ ಹೆಣ್ಣುಮಗುವಾಗಿ ಈಗ ಅದು ಬೆಳೆದು ದೊಡ್ಡದಾಗಿದೆ. ಹಾಗೆಯೇ ಸಂಪನ್ನೆಯ ಮಗನೂ ಬೆಳೆದು ದೊಡ್ಡವನಾಗಿದ್ದಾನೆ. ಅಮ್ಮನ ಸೇವೆಯನ್ನು ಭಕ್ತಿಯಿಂದ ಮಾಡಿದ್ದಾನೆ. ಸಂಪನ್ನೆ ಹಿಂದಿನ ಕಥೆಯನ್ನೆಲ್ಲಾ ಮಗನಿಗೆ ತಿಳಿಸಿ ಹೇಳಿದ್ದಾಳೆ. ಮಾಡಿಕೊಂಡ ಆಣೆ ಭಾಷೆಯನ್ನು ಪೂರೈಸಲೇ ಬೇಕು ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಏಳು ಹೆಡೆ ಸರ್ಪವನ್ನು ಏಳು ಪಾಲು ಮಾಡಿ ಅವುಗಳನ್ನು ಅಂದ ಚೆಂದದ ಬಳೆಗಳನ್ನಾಗಿ ಮಾರ್ಪಡಿಸಿ ಮಗನ ಕೈಗೆ ಕೊಟ್ಟು ತನ್ನ ಅಣ್ಣನ ಮಗಳನ್ನು ಮದುವೆ ಮಾಡಿಕೊಂಡು ಬಾ ಎಂದು ಕಳುಹಿಸಿಕೊಟ್ಟಿದ್ದಾಳೆ.
ಸಂಪನ್ನೆಯ ಅತ್ತಿಗೆಗೆ ತಾನು ಮತ್ತು ತನ್ನ ತವರಿನವರು ಅಂದ ಚೆಂದದ ಕುಲದವರು ಎನ್ನುವ ಅಹಂಕಾರ ತಾನೇ ಹಾಕಿಕೊಂಡ ಆಣೆ ಭಾಷೆಯನ್ನು ಮರೆತುಬಿಡುವಷ್ಟು ಇದೆ. ಅವಳು ತನ್ನ ಮಗಳನ್ನು ತನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಲು ಎಲ್ಲ ಸಿದ್ಧತೆ ನಡೆಸಿದ್ದಾಳೆ. ಆ ಮಗಳು ನೀರು ತರಲು ಬಂದಾಗ ಸಂಪನ್ನೆಯ ಮಗ ಅವಳನ್ನು ತಾನು ತಂದ ಅಂದ ಚೆಂದದ ಬಳೆಗಳಿಂದ ಆಕರ್ಷಿಸಿ ಅವಳಿಗೆ ಆ ಅಂದ ಚೆಂದದ ಬಳೆಗಳನ್ನು ತೊಡಿಸಿಬಿಡುತ್ತಾನೆ. ಅವಳು ಮನೆಗೆ ಹೋದ ನಂತರ ಅವಳ ಕೈಯಲ್ಲಿ ಬಳೆ ನೋಡಿ ಅವಳ ಅಮ್ಮನಿಗೆ ಗಾಬರಿಯಾಗುತ್ತದೆ. ತಮ್ಮನೊಂದಿಗೆ ಮದುವೆ ಶಾಸ್ತ್ರ ಮಾಡಲು ಬಳೆ ತೊಡಿಸುವುದಕ್ಕಿಂತ ಮುಂಚೆ ಅವಳಿಗೆ ಬಳೆ ಯಾರೋ ತೊಡಿಸಿಬಿಟ್ಟಿರುವುದರಿಂದ ಅವಳು ಆ ಬಳೆಗಳನ್ನು ಸುತ್ತಿಗೆಯಿಂದ ಒಡೆದು ಹಾಕಲು ನೋಡುತ್ತಾಳೆ. ಅವು ಒಡೆಯುವುದಿಲ್ಲ.
ಮಗಳ ಮದುವೆ ಮಾಡುವ ವಿಫಲ ಪ್ರಯತ್ನ: ಬಳೆ ವಿಷಯವನ್ನು ಬದಿಗಿರಿಸಿ ತಕ್ಷಣವೇ ಜೋಯಿಸರನ್ನು ಕರೆಸಿ ಕೂಡಲೇ ತಮ್ಮನೊಂದಿಗೆ ಮದುವೆ ಮಾಡಿಬಿಡಲು ನೋಡಿದರೆ ಸಂಪನ್ನೆಯ ಅತ್ತಿಗೆಗೆ ಊರೊಳಗೆ ಜೋಯಿಸರೇ ಸಿಗುವುದಿಲ್ಲ. ದೇವಸ್ಥಾನದ ಹತ್ತಿರ ಬಂದಾಗ ಸಂಪನ್ನೆಯ ಮಗ ದೇವಸ್ಥಾನದಲ್ಲಿ ಜೋಯಿಸನಂತೆ ಕುಳಿತಿರುತ್ತಾನೆ. ಅವನನ್ನು ಸಂಪನ್ನೆಯ ಅತ್ತಿಗೆಯೂ ಗುರುತಿಸುವುದಿಲ್ಲ, ಅತ್ತಿಗೆಯ ಮಗಳೂ ತನಗೆ ಬಳೆ ತೊಡಿಸಿದವನು ಇವನೇ ಎಂದು ಗುರುತಿಸುವುದಿಲ್ಲ. ಅವನನ್ನು ಜೋಯಿಸ ಎಂದೇ ತಿಳಿದು ತನ್ನ ಮಗಳ ಮದುವೆ ಮಾಡಿಸಿಕೊಡು ಎಂದು ಅತ್ತಿಗೆ ಕೇಳಿಕೊಳ್ಳುತ್ತಾಳೆ. ಅವನು ತನಗೆ ಮದುಮಗನ ಬಟ್ಟೆ, ಹೆಣ್ಣಿನವರ ಹರದಾಳಿ, ಮಾಲೆ ಕೊಟ್ಟರೆ ಮದುವೆ ಮನೆಗೆ ಬರುತ್ತೇನೆ ಎಂದು ಶರತ್ತನ್ನು ವಿಧಿಸುತ್ತಾನೆ. ಅವುಗಳನ್ನು ಕೊಟ್ಟಮೇಲೆ ಅದನೆಲ್ಲಾ ತೊಟ್ಟುಕೊಂಡು ಮದುವೆಮನೆಗೆ ಹೋಗಿ ಅತ್ತೆ ಮಾವರ ಎದೆಗೆ ಬಾಣ ಹೂಡುತ್ತಾನೆ. ಅವರ ಮಗಳನ್ನು ತನಗೇ ಕೊಟ್ಟು ಮದುವೆ ಮಾಡಿದರೆ ಮಾತ್ರ ಬಾಣವನ್ನು ಹಿಂತೆಗೆದುಕೊಳ್ಳುತ್ತೇನೆ ಎನ್ನುತ್ತಾನೆ. ಪ್ರಾಣದ ಮೇಲಿನ ಆಸೆಯಿಂದ ಅವರು ಅವನಿಗೇ ಮಗಳನ್ನು ಕೊಟ್ಟು ಮದುವೆ ಮಾಡುತ್ತಾರೆ. ಸಂಪನ್ನೆಯ ಹೋರಾಟ ಸುಖಾಂತ್ಯ ಕಾಣುತ್ತದೆ.
ಲೋಕರೂಢಿಯ ಪಾಲನೆ – ನ್ಯಾಯಕ್ಕಾಗಿ ಹೋರಾಟ: ಇಲ್ಲಿ ಸಂಪನ್ನೆ ಮತ್ತೆ ಅವಳ ಮಗನನ್ನು ಹೊರತುಪಡಿಸಿ ಉಳಿದ ಸಂಪನ್ನೆಯ ಅಣ್ಣ, ಅತ್ತಿಗೆ, ಅತ್ತೆ, ಮಾವ, ಗಂಡ ಎಲ್ಲರೂ ತಾವು ಲೋಕರೂಢಿಗೆ ಬದ್ಧರು ಎಂದು ತೋರಿಸಿಕೊಳ್ಳುತ್ತಾರೆ, ಸಂಪನ್ನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ನಾಕು ಜನರ ಮುಂದೆ ತೋರಿಸಿಕೊಳ್ಳುತ್ತಾರೆ. ಮರೆಯಲ್ಲಿ ಅದನ್ನು ಮುರಿಯಲು ಪ್ರಯತ್ನಿಸುತ್ತಾರೆ. ಅವಳು ತವರು ಮನೆಗೆ ಹೊರಟಾಗ ಅಷ್ಟು ದೂರ ಅವಳನ್ನು ಕಳುಹಿಸಿಕೊಡಲು ಬಂದ ಗಂಡ, ಅತ್ತೆ, ಮಾವಂದಿರು ಊರಿನವರ ಮುಂದೆ ತಾವು ಸೊಸೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂದು ಪ್ರದರ್ಶನ ಮಾಡುತ್ತಾರೆ. ಆನಂತರ ಹುಟ್ಟಿದ್ದು ಗಂಡು ಮಗುವಾದರೂ ಅಂದದ ಚಂದದ ಕುಲದವರ ಮಗಳು ಎನ್ನುವ ಅಹಂಕಾರದ ಪೀಡೆ ತೊಲಗಿತು ಎಂದಂದುಕೊಂಡಂತೆ ಅವಳನ್ನು ನೋಡಲು ಬರುವುದೇ ಇಲ್ಲ, ಆ ನಂತರದಲ್ಲಿಯೂ ಅವಳನ್ನೂ, ಮೊಮ್ಮಗನನ್ನೂ ಕರೆದುಕೊಂಡು ಹೋಗಲು ಬರುವುದಿಲ್ಲ. ಅವಳೇ ಗಂಡನ ಮನೆಗೆ ಮಗುವಿನೊಂದಿಗೆ ಬರುತ್ತಾಳೆ. ಮುಂದೆ ಸಂಪನ್ನೆಯ ಅತ್ತಿಗೆ ತಾನು ಹಾಕಿಕೊಂಡ ಆಣೆ ಭಾಷೆಯನ್ನು ಮುರಿದು ಸಂಪನ್ನೆಯ ಮಗನೊಂದಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವುದರ ಬದಲಿಗೆ ತನ್ನ ಮಗಳನ್ನು ತನ್ನ ತಮ್ಮನಿಗೆ ಮದುವೆ ಮಾಡಿಕೊಡುವ ವ್ಯವಸ್ಥೆ ಮಾಡುತ್ತಾಳೆ. ಅದಕ್ಕೆ ಸಂಪನ್ನೆಯ ಅಣ್ಣನ ಒಪ್ಪಿಗೆಯೂ ಇರುತ್ತದೆ.
ಇವನ್ನೆಲ್ಲ ಬಯಲಿಗೆಳೆದು ಸಂಪನ್ನೆ ಮತ್ತೆ ಅವಳ ಮಗ ಯಾವುದು ನ್ಯಾಯವೋ ಅದನ್ನು ಪಡೆಯಲು ಹೋರಾಡುತ್ತಾರೆ, ಜಯಶೀಲರಾಗುತ್ತಾರೆ. ಕಥನಗೀತೆ ಪ್ರಸ್ತಾಪಿಸುವ ನ್ಯಾಯ ಆಣೆ ಭಾಷೆಗೆ ತೋರಬೇಕಾದ ಬದ್ಧತೆ. ಇಲ್ಲಿ ಸಂಪನ್ನೆ ಎದುರಿಸುವ ಅವಮರ್ಯಾದೆ, ಆಪತ್ತುಗಳಿಗೆ ಮೂಲಕಾರಣ ಅವಳ ಅತ್ತಿಗೆಯ ಪರಸ್ಪರ ವಿರುದ್ಧವಾದ ನಡೆಯನ್ನು ಸರಿಯಾದ ನಡೆಯನ್ನಾಗಿ ರೂಪಿಸದ ಅಣ್ಣನ ಇಬ್ಬಂದಿತನದ ಮನಃಸ್ಥಿತಿ, ಅವನ ಪೊಳ್ಳು ಅಹಂಕಾರ, ಜೊತೆಗೆ ಸಂಪನ್ನೆಯ ಅಣ್ಣ ಅತ್ತಿಗೆಯರು ತಮ್ಮದು ತಪ್ಪು ನಡೆ ಎಂದು ಪಶ್ಚಾತ್ತಾಪ ಪಡದೇ ಇರುವುದು ಎಂದೆನ್ನುತ್ತದೆ ಕಥನಗೀತೆ. ಸರಿಯಾದ ನಡೆಗೆ ತಾನು ಬದ್ಧ ಎನ್ನುವ ಸಂಪನ್ನೆಯ ಆತ್ಮಸ್ಥೈರ್ಯಕ್ಕೆ ಆಧಾರ ತನ್ನದು ಆಣೆ ಭಾಷೆಯ ಸತ್ಯ ಎಂಬ ಭರವಸೆಯೇ ಆಗಿದೆ ಎಂಬುದನ್ನೂ ಅದು ಸ್ಪಷ್ಟಪಡಿಸುತ್ತದೆ. ಇದೇ ಕಥನಗೀತೆಯ ವಿಶೇಷತೆ ಮತ್ತು ಪ್ರಸ್ತುತತೆ.
-ಪದ್ಮಿನಿ ಹೆಗಡೆ, ಮೈಸೂರು
ಸೊಗಸಾದ ಜಾನಪದ ಕಥನ..ತಿಳಿಸಿದಕ್ಕೆ..ಧನ್ಯವಾದಗಳು ಪದ್ಮಿನಿ ಮೇಡಂ
ಮಾಹಿತಿಪೂರ್ಣ
ಜನಪದ ಸಾಹಿತ್ಯದ ಅಂದ ಚಂದ ಚೆನ್ನಾಗಿ ಮೂಡಿ ಬಂದಿದೆ
ಜಾನಪದ ಶೈಲಿಯ ಸಂಪನ್ನೆಯ ಕಥೆ ಚೆನ್ನಾಗಿದೆ.
ಕಥನಕ್ಕೆ ಸ್ಪಂದಿಸಿದ ಹೇಮಮಾಲಾ ಮೇಡಂಗೆ ಬಿ.ಆರ್. ನಾಗರತ್ನ ಮೇಡಂಗೆ, ನಯನ ಬಜಕೂಡ್ಲು ಮೇಡಂಗೆ, ಗಾಯತ್ರಿ ಸಜ್ಜನ್ ಮೇಡಂಗೆ, ಶಂಕರಿ ಶರ್ಮ ಮೇಡಂಗೆ ಹೃತ್ಪೂರ್ವಕ ಧನ್ಯವಾದಗಳು