ಎಂ. ಪಿ. ಉಮಾದೇವಿಯವರ ʼಶೈವ ವಾತ್ಸಲ್ಯʼ ಮಹಾಕಾವ್ಯ; ಒಂದು ಪರಿಚಯ

Share Button
ವರುಣ್‌ರಾಜ್‌ ಜಿ

ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಮಹಾ ಆಧ್ಯಾತ್ಮಿಕ ಜೀವಿಯೂ ಆಗಿದ್ದ ಡಾ. ಎಂ.ಪಿ. ಉಮಾದೇವಿಯವರು ತಮ್ಮ ಜೀವನದ 24 ವರ್ಷಗಳನ್ನು ಮುಡಿಪಾಗಿಟ್ಟು, ಒಂದು ತಪ್ಪಸ್ಸಿನಂತೆ ರಚಿಸಿದ ಬೃಹತ್‌ ಕಾವ್ಯವೇ ಶೈವ ವಾತ್ಸಲ್ಯ. ಇದರ ಕಥಾ ವಸ್ತು ಶಿವ ಮತ್ತು ಉಮೆಯರ ಪ್ರೇಮ ಮತ್ತು ಶಿವೆಯ ಜನ್ಮಾಂತರಗಳ ಕಥೆ. 

ಶ್ರೀಮಹಾ ವಿಷ್ಣುವು ಧರ್ಮ ಸಂಸ್ಥಾಪನೆಯ ಹೆಸರಿನಲ್ಲಿ ಹತ್ತು ಹಲವು ಅವತಾರಗಳನ್ನೆತ್ತಿ ಬಂದದ್ದರಿಂದ ಅವನು ಮೂರು ಲೋಕಗಳಲ್ಲಿಯೂ ಪ್ರಸಿದ್ಧ. ಆದರೆ, ಶಿವನ ಹೆಂಡತಿ ಉಮೆಗೆ ತನ್ನ ಗಂಡ ಶಿವ ಹೀಗೆ ಪ್ರಸಿದ್ಧಿಯನ್ನು ಪಡೆದಿಲ್ಲವಲ್ಲ ಎಂಬ ಕೊರಗು. ದೇವತೆಗಳ ಸಭೆಯೊಂದರಲ್ಲಿ ನಡೆಯುತ್ತಿದ್ದ ಶ್ರೀಹರಿಯ ಗುಣಗಾನವನ್ನು ಕಂಡು ಉಮೆ ತನ್ನ ನೋವನ್ನು ಪತಿಯಲ್ಲಿ ನಿವೇದಿಸಿಕೊಂಡಾಗ, ಶಿವ ತನ್ನನ್ನು ಕುರಿತು ರಚನೆಯಾಗಿರುವ ಕೃತಿಯೊಂದರ ಕುರಿತು ಆಕೆಗೆ ಹೇಳುತ್ತಾನೆ. ನಂದಿಯ ಜೊತೆಗೆ ಕುಳಿತು ಒಮ್ಮೆ ಈ ಕಾವ್ಯವನ್ನು ಓದಿದ್ದ ಶಿವ ಅದನ್ನು ಉಮೆಯೊಂದಿಗೆ ಓದುವ ಶೈಲಿಯಲ್ಲಿ ʼಶೈವ ವಾತ್ಸಲ್ಯʼ ಪ್ರಾರಂಭವಾಗುತ್ತದೆ. ಅದಕ್ಕೂ ಮುನ್ನ ದೇವ ಸಭೆಯ ವರ್ಣನೆ, ಕೃತಿಯನ್ನು ಓದುವ ತಂತ್ರ ಇತ್ಯಾದಿಗಳು ಈ ಕಾವ್ಯದಲ್ಲಿ ಬರುತ್ತವೆ. 

ಶಿವನ ವಾಹನವಾದ ನಂದೀಶ್ವರನ ಗೌಸು ಅಂದರೆ ಅವನ ಬೆನ್ನ ಮೇಲಿನ ಹೊದಿಕೆ ಹಳೆಯದಾಗಿದ್ದು, ಹೊಸದೊಂದು ಗೌಸನ್ನು ಸಿದ್ಧ ಪಡಿಸಿಕೊಡಬೇಕೆಂಬ ನಂದೀಶ್ವರನ ವಿನಂತಿಯ ಮೇರೆಗೆ ಉಮೆ ದಾಕ್ಷಾಯಿಣಿಯ ಸೀರೆಗಳನ್ನೆಲ್ಲಾ ಹುಡುಕಿ ಅದರ ಎಳೆಗಳನ್ನು ಬಿಡಿಸಿಕೊಂಡು ಬಸವನ ಗೌಸನ್ನು ಸಿದ್ಧಪಡಿಸಲು ತೊಡಗುತ್ತಾಳೆ. ಶಿವನ ವಾಹನವಾದ ಬಸವನ ಗೌಸು ಎಂದರೆ ಅದೇನು ಸಾಮಾನ್ಯದ್ದೇ?, ಆಕಾಶದಗಲವಾದ ಬಸವನ ಗೌಸನ್ನು ಸಿದ್ಧಪಡಿಸಿ ಅದರ ಮೇಲೆ ಕಸೂತಿ ಹಾಕಿ ಸಿಂಗರಿಸಬೇಕು. ಅದು 2040 ಚೌಕಗಳ ವಿಶಾಲವಾದ ಗೌಸು. ಅದಕ್ಕಾಗಿ ಉಮೆ ಶಿವನ ಕಥೆಯನ್ನು ಶಿವನಿಂದಲೇ ಕೇಳುತ್ತಾ ಆ ಕಥೆಯನ್ನೆಲ್ಲಾ ವಿವರವಾಗಿ ಚಿತ್ರಗಳ ರೂಪದಲ್ಲಿ ಹೆಣೆಯುತ್ತಾ ಹೋಗುತ್ತಾಳೆ. ಇದು ಒಂದೆರಡು ದಿನಗಳಲ್ಲಿ ಮುಗಿಯುವ ಕಸೂತಿಯಾಗಿರಲಿಲ್ಲ. ಕವಯತ್ರಿ ಹೇಳುವಂತೆ “ನಂದೀಶ್ವರನ ಈ ಗೌಸು, ಪರಮೇಶ್ವರನ ಪಯಣದ ಹಾಸು”,(ಪುಟ: 94) ಇದು ಶಿವನ ಪ್ರಣಯದ ಹಾಸೂ ಹೌದು. ಇದೇ ರೀತಿ ಶಿವನ ಕಥೆಯು ಸಹ ಒಂದೆರಡು ದಿನ, ಘಟನೆ, ಪುಟಗಳಲ್ಲಿ ಮುಗಿಯುವುದಲ್ಲ. ಶಿವನ ಕಥೆಯೆಂದರೆ ಅದು ಶಿವನ ಕಥೆ ಮಾತ್ರವಲ್ಲ. ಬದಲಾಗಿ ಶಿವನಿಗಾಗಿ ಹಲವಾರು ಜನ್ಮಗಳನ್ನೆತ್ತಿ ಬಂದ ಉಮೆಯದ್ದೂ ಮತ್ತು ಉಮೆಯದ್ದೇ ಕತೆ.

ಉಮೆ ಶಿವನಿಗಾಗಿ 7-8 ಜನ್ಮಗಳನ್ನು ತಳೆಯುತ್ತಾಳೆ. ಅವಳ ಪ್ರತಿಜನ್ಮದಲ್ಲೂ ಒಂದೊಂದು ಕಥೆ, ಒಂದೊಂದು ವ್ಯಥೆ. ವಿಷ್ಣುವಿನ ಅವತಾರಗಳ ಉದ್ದೇಶ ಧರ್ಮ ಸ್ಥಾಪನೆಯಾದರೆ, ಉಮೆಯದ್ದು ತನ್ನ ಜೀವನ ಸಾರ್ಥಕ್ಯ. ವಿಷ್ಣುವಿನ ಮಡದಿ ಲಕ್ಷ್ಮಿಯೇ ಉಮೆಗೆ ಈ ಮಾತನ್ನು ಹೇಳಿ ಮತ್ತೆ ಮತ್ತೆ ಜನ್ಮ ಪಡೆದು ತನ್ನ ಆಸೆಯನ್ನು ಈಡೇರಿಸಿಕೊಳ್ಳುವಂತೆ ಹೇಳುವುದು ಈ ಕಾವ್ಯದ ವಿಶೇಷ. ದಾಕ್ಷಾಯಿಣಿಯಾಗಿ ಹುಟ್ಟಿ ಬಂದ ಪಾರ್ವತಿ, ಮುಂದೆ ಉಮೆಯಾಗಿ, ದುರ್ಗಿಯಾಗಿ, ಅನ್ನಪೂರ್ಣೆಯಾಗಿ, ಪಾರ್ವತಿಯಾಗಿ, ಶ್ರೀಲತೆಯಾಗಿ, ಪುರುಶೇಶ್ವರಿಯಾಗಿ ಹಾಗೂ ಭ್ರಮರಳಾಗಿ ಹುಟ್ಟಿಬರುವುದು, ಹಾಗೂ ಶಿವನನ್ನು ಪ್ರೀತಿಸುವ, ಅವನೊಂದಿಗೆ ಒಂದಾಗುವ ಹಂಬಲ ಹಾಗೂ ಸ್ತ್ರೀ ಸಹಜ ಅಂಜಿಕೆಗಳ ನಡುವೆ ಹೊಯ್ದಾಡುತ್ತಾ ಕೊನೆಗೆ ಶಿವನನ್ನು ಸೇರುವುದನ್ನು ಪ್ರತಿ ಅವತಾರದಲ್ಲಿಯೂ ಕಾಣಬಹುದು. 

ಶಿವನನ್ನು ಕುರಿತ ಪುರಾಣ ಕತೆಯನ್ನು ಆಕರವಾಗಿ ಹೊಂದಿರುವ ಈ ಮಹಾಕಾವ್ಯ, ಶಿವನ ಕಥೆಯನ್ನು ಒಂದು ಕ್ರಮದಲ್ಲಿ ಮಂಡಿಸುವ ಪ್ರಯತ್ನವನ್ನು ಮಾಡುತ್ತದೆ. ಆದರೆ, ಕವಿ ತನ್ನ ಕಾವ್ಯನಿರ್ಮಾಣ ಸಾಹಸದಲ್ಲಿ ಈ ಪೌರಾಣಿಕ ಕಥೆಗಳನ್ನು ಸಾಕಷ್ಟು ಮಾರ್ಪಡಿಸಿಕೊಂಡಿರುವುದನ್ನು ಗಮನಿಸಬಹುದು. ಶಿವನ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಅಂದರೆ, ಷಣ್ಮುಖನ ಜನನ, ವಿಘ್ನೇಶ್ವರನ ಜನನ ಅವರಿಬ್ಬರ ವಿವಾಹಗಳು, ಅಯ್ಯಪ್ಪನ ಜನನ, ವಿಘ್ನೇಶ್ವರ ಮಹಾಭಾರತದ ಲಿಪಿಕಾರನಾಗುವಿಕೆ ಇತ್ಯಾದಿ ಪ್ರಸಂಗಗಳು ಕಾವ್ಯದಲ್ಲಿ ಬಂದರೂ ಅವುಗಳನ್ನು ಕವಯತ್ರಿ ಅಷ್ಟಾಗಿ ವಿವರಿಸುವುದಿಲ್ಲ. ದುರ್ಗಿಯಾಗಿ ಹುಟ್ಟಿದ್ದ ಉಮೆ ಮಹಿಷಾಸುರನನ್ನು, ರಕ್ತ ಬೀಜಾಸುರನನ್ನು ಕೊಲ್ಲುವ ಪ್ರಸಂಗ ಮಾತ್ರ ವಿವರವಾಗಿ ವರ್ಣಿತವಾಗಿದೆ. ಉಮೆಯ ಹಲವು ಅವತಾರಗಳ ಕತೆ ಮುಗಿಯುತ್ತಾ ಬಂದಂತೆ ಬಸವನ ಗೌಸಿನ ಮೇಲಿನ ಕಸೂತಿಯು ಮುಗಿದು ಅದಕ್ಕೆ ಒಂದು ಸೌಂದರ್ಯ ಪ್ರಾಪ್ತವಾಗುತ್ತದೆ. ಒಂದು ಶುಭ ಗಳಿಗೆಯಲ್ಲಿ ಬಸವ ಆ ಗೌಸನ್ನು ಧರಿಸಿ ಸುಖಿಸಿ, ಸಂಭ್ರಮಿಸುತ್ತಾನೆ. ಮುಂದೆ ಉಮೆ ತನ್ನ ಸ್ತ್ರೀ ಸಹಜ ಕುತೂಹಲದಿಂದ, ನಮ್ಮ ಈ ಎಂಟು ಮಂದಿಯಲ್ಲಿ ನಿನಗೆ ಯಾರು ಅತಿ ಪ್ರಿಯರು ಎಂದು ಶಿವನನ್ನೇ ಕೇಳುತ್ತಾಳೆ. ಶಿವ ಏನೆಂದು ಉತ್ತರಿಸಿಯಾನು. ಕೊನೆಗೆ ಶಿವನು ಲಿಂಗವಾಗಿ ಮಾರ್ಪಟ್ಟು ಎಲ್ಲರಿಂದ ಪೂಜಾದಿಗಳನ್ನು ಪಡೆಯುವಲ್ಲಿಗೆ ಸುಮಾರು 1008 ಪುಟಗಳ ಆ ಆಧುನಿಕ ಮಹಾಕಾವ್ಯ “ಶೈವ ವಾತ್ಸಲ್ಯ”ಮುಕ್ತಾಯವಾಗುತ್ತದೆ.

ಒಟ್ಟಿನಲ್ಲಿ, ಶಿವನಿಗಾಗಿ ಪಾರ್ವತಿ ತಳೆಯುವ ಅವತಾರಗಳ ಕಥೆಯೇ ಈ ಮಹಾಕಾವ್ಯದ ವಸ್ತು. ಅದರಲ್ಲಿಯೂ ಉಮೆಯ ಅವತಾರದಲ್ಲಿರುವಾಗ ನಂದೀಶ್ವರನಿಗೆ ಗೌಸನ್ನು ಹೊಲೆಯುವ ಪ್ರಸಂಗದಲ್ಲಿ ಶಿವ ಪಾರ್ವತಿಯರ ಕಾವ್ಯ ಓದುತ್ತಾ, ಚರ್ಚಿಸುತ್ತಾ, ಗೌಸಿಗೆ ಕಸೂತಿ ಹಾಕುವ ಸಂದರ್ಭದ ಘಟನೆಗಳು ಇಲ್ಲಿ ಮುಖ್ಯ ಘಟ್ಟಗಳು. ಇದನ್ನು ಬಹು ಸ್ತರದ ವಿನ್ಯಾಸಗಳಲ್ಲಿ ಕವಯತ್ರಿ ಡಾ ಎಂ.ಪಿ. ಉಮಾದೇವಿಯವರು ಹಣೆದಿದ್ದಾರೆ. ಮೇಲೆ ಚರ್ಚಿಸಿದಂತೆ ಲೇಖಕಿ ಉಮಾದೇವಿ ಬರೆದ ಈ ಮಹಾಕಾವ್ಯವನ್ನು ಶಿವ-ಪಾರ್ವತಿಯರಿಬ್ಬರೂ ಓದುತ್ತಿದ್ದಾರೆ, ಕಾವ್ಯದ ಕಥೆಯಲ್ಲಿ ಶಿವ ಪಾರ್ವತಿಯರ ಸಂವಾದ ಅಂದರೆ, ಶಿವನು ಪಾರ್ವತಿಗೆ ಆಕೆಯ ಜನ್ಮಾಂತರದ ಕಥೆಯನ್ನು ಹೇಳುವ ರೀತಿಯಲ್ಲಿ ಈ ಕಾವ್ಯದ ವಿನ್ಯಾಸವಿದೆ. ಈ ಕಥಾ ನಿರೂಪಣೆಗೆ ಕಾರಣ ಅಥವಾ ವೇದಿಕೆ ಬಸವನ ಗೌಸು. ಕಾವ್ಯದ ಕರ್ತೃ ಎಂ.ಪಿ. ಉಮಾದೇವಿ, ಕಥೆಯನ್ನು ಓದುತ್ತಿರುವವಳು ಉಮೆ, ಬಸವನ ಗೌಸಿನಲ್ಲಿ ಕಸೂತಿ ಹಾಕುತ್ತಿರುವವಳೂ ಉಮೆಯೇ. ಮತ್ತೆ ಮತ್ತೆ ಹುಟ್ಟಿ ಹಲವು ಜನ್ಮಾಂತರಗಳನ್ನು ದಾಟಿ ಬರುವವಳು ಸಹಾ ಇದೇ ಉಮೆ. ಹೀಗಿದೆ ಕಾವ್ಯದ ವಿನ್ಯಾಸ. ಇಲ್ಲಿನ ಕತೆ ಈಗಾಗಲೇ ವಿವರಿಸಿದಂತೆ, ಉಮೆಯ ಕತೆ.

ಕವಿ ಉಮಾದೇವಿ, ಈ ಕೃತಿಯ ಪ್ರಾರಂಭದಲ್ಲಿಯೇ ತಾನು ನಂಜನಗೂಡಿನ ನಂಜುಂಡೇಶ್ವರನಿಗೆ ಒಲಿದಿರುವ ಹಾಗೇಯೇ ಸ್ವತಃ ಶಿವನೇ ತನಗೆ ಒಲಿದಿರುವ ಭಕ್ತಿಯ ಅಹಂಕಾರದಿಂದ ಈ ಕಾವ್ಯವನ್ನು ಅದೇ ನಂಜುಂಡನಿಗೆ ಅರ್ಪಿಸುತ್ತೇನೆಂದು ಹೇಳಿಕೊಂಡಿರುವರು. ಈ ಅಹಂಕಾರ ಸಾತ್ವಿಕವಾದದ್ದು, ಮತ್ತು ಸಹಜವೂ ಆದದ್ದಾಗಿದೆ. ಎಂ.ಪಿ. ಉಮಾದೇವಿಯೇ ಉಮೆಯಾಗಿ ತನ್ನ ಕತೆಯನ್ನು ತಾನೇ ನಿರೂಪಿಸುತ್ತಿರುವೆನೇನೋ ಎಂಬಷ್ಟು ಕಾವ್ಯದ ಒಳಹೊಕ್ಕು ಈ ಕಾವ್ಯವನ್ನು ನಿರೂಪಿಸಿದ್ದಾರೆ. ʼಭಕ್ತ ಭಗವಂತನ ನಡುವೆ ಹೌದು, ಪತಿ ಪತ್ನಿ ಸಂಬಂಧ, ಬಲ್ಲವನೆ ಬಲ್ಲ ಆತ್ಮ ಪರಮಾತ್ಮಗಳ ಅವಿನಾಬಂಧʼ ಎಂಬಂತೆ, ಲೇಖಕಿ ಎಂ.ಪಿ. ಉಮಾದೇವಿಯವರು ಆಧುನಿಕ ಅಕ್ಕಮಹಾದೇವಿಯಾಗಿ ಶಿವನನ್ನು ಅತ್ಯಂತ ಭಕ್ತಿಯಿಂದ ಒಲಿದು, ಅವನನ್ನು ಪ್ರೀತಿಸಿ ಸಾಕ್ಷಾತ್‌ ಉಮೆಯೇ ತಾನಾಗಿ ಪರವಶಗೊಂಡು ಈ ಕಾವ್ಯವನ್ನು ರಚಿಸಿರುವುದನ್ನು ಗಮನಿಸಬಹುದು.

ಮಹಾಕಾವ್ಯಗಳ ಹಿನ್ನೆಲೆಯನ್ನು ಸ್ವಲ್ಪ ಗಮನಿಸುವುದಾದರೆ, ರಾಮಾಯಣ ಮಹಾಭಾರತದಿಂದ ಹಿಡಿದು ಎಲ್ಲಾ ಮಹಾಕಾವ್ಯಗಳ ವಸ್ತುವೂ ಪುರುಷ ಪ್ರಧಾನವಾದದ್ದೇ. ಅಲ್ಲಿನ ವಸ್ತು ಪುರುಷ ಪ್ರಧಾನವಾರುವುದಷ್ಟೇ ಅಲ್ಲದೇ, ಕಾವ್ಯದ ಕರ್ತೃವೂ ಪುರುಷನೇ. ಇನ್ನೇನು ಮಹಾಕಾವ್ಯಗಳ ಯುಗವೇ ಮುಗಿದುಹೋಯಿತು ಎನ್ನುವ ಕಾಲಕ್ಕೆ, 20 ನೇ ಸಹಸ್ರಮಾನದ ಪ್ರಾರಂಭದಲ್ಲಿ ಡಾ. ಎಂ.ಪಿ.ಉಮಾದೇವಿಯವರ ಮಹಾಕಾವ್ಯ ʼಶೈವ ವಾತ್ಸಲ್ಯʼ ಪ್ರಕಟವಾಗುತ್ತದೆ. ಇದು ಕವಿಯ ಸುಮಾರು 24 ವರ್ಷಗಳ ಪರಿಶ್ರಮದ ಫಲ. ಇದನ್ನು, ಪರಿಶ್ರಮದ ಫಲ ಎನ್ನುವುದಕ್ಕಿಂತ ಕವಿಭಾವದ ಮಾಗಿದ ಉತ್ಕಟ ಒಲವಿನ ಫಲವೆಂದು ಹೇಳಬಹುದು. ಈ ಒಲವು ಸಾಕ್ಷಾತ್‌ ಪರಶಿವನ ಮೇಲೆ. ಪ್ರೀತಿಯೇ ಮಾಗಿ ಭಕ್ತಿಯಾಗಿ, ಆಧ್ಯಾತ್ಮದ ಔನತ್ಯಕ್ಕೆ ಏರುವ ಪರಿ ಈ ಕಾವ್ಯದಲ್ಲಿದೆ. ಈ ಕಾವ್ಯ ಮಹಾಕಾವ್ಯಗಳಲ್ಲಿಯೇ ಒಂದು ವಿಶಿಷ್ಠ ಹಾಗೂ ವಿಭಿನ್ನ ಪ್ರಯೋಗ. ಆಧುನಿಕ ಮಹಾಕಾವ್ಯಗಳ ಸಾಲಿನಲ್ಲಿ ಇದೊಂದು ಮಹತ್ವದ ಕೃತಿ. ಶೈವ ವಾತ್ಸಲ್ಯ ಎಂಬುದನ್ನು ಶಿವನ ವಾತ್ಸಲ್ಯ ಎಂಬುದಕ್ಕಿಂತ ಶಿವನ ಕುರಿತ ಶಿವ ಭಕ್ತೆಯ ವಾತ್ಸಲ್ಯ ಎಂದೇ ಅರ್ಥೈಸಿಕೊಳ್ಳಬೇಕು. ಏಕೆಂದರೆ, ಈ ಕಥೆಯು ಮುಖ್ಯವಾಗಿ, ಶಿವನಿಗಾಗಿ ಹಲವು ಅವತಾರಗಳನ್ನು ತಳೆದು ಅವನಿಗಾಗಿ ಪರಿತಪಿಸುವ ಉಮೆಯ ಸುತ್ತಲೇ ಸುತ್ತುತ್ತದೆ. 

ಶಿವ-ಶಿವೆಯರ ಪ್ರೇಮ-ಪ್ರಣಯ ಮತ್ತು ಲೋಕ ರಕ್ಷಣ ಲೀಲೆಯನ್ನು ವಿವರಿಸುವಷ್ಟಕ್ಕೆ ಈ ಕಾವ್ಯ ಸಂತೃಪ್ತಿ ಹೊಂದುವುದಿಲ್ಲ. ಬದಲಾಗಿ, ಉಮೆಯ ಮೂಲಕ ಅಂದರೆ, ಶಿವನ ಪತ್ನಿ ಉಮೆ ಹಾಗೂ ಶಿವನನ್ನು ಒಲಿದ ಕವಯತ್ರಿ ಉಮಾದೇವಿಯರ ಮೂಲಕ ಇಡೀ ಸ್ತ್ರೀ ಕುಲದ ಅಭಿವ್ಯಕ್ತಿ ಹಾಗೂ ಅಭಿರುಚಿಗಳಿಗೆ ಈ ಕಾವ್ಯ ಧ್ವನಿಯಾಗುತ್ತದೆ. ಇದು ಈ ಮಹಾಕಾವ್ಯದ ಅನಂತ ವೈಶಿಷ್ಟ್ಯಗಳಲ್ಲಿ ಒಂದು.

ಭೂಮಿಯ ಮೇಲೆ ನಡೆಯುವಂತೆ, ಕೈಲಾಸದಲ್ಲೂ ಸಮಯವಾಗುತ್ತದೆ, ಕತ್ತಲಾಗುತ್ತದೆ, ಬೆಳಕಾಗುತ್ತದೆ. ದೇವತೆಗಳೂ ನರರಂತೆ ಚಿಂತೆ ಮಾಡುತ್ತಾರೆ, ತಪ್ಪು ಮಾಡುತ್ತಾರೆ ಮತ್ತು ಕಷ್ಟಕ್ಕೆ ಈಡಾಗುತ್ತಾರೆ. ಹೀಗೆ ಶಿವನ ಕೈಲಾಸಕ್ಕೂ ಮತ್ತು ಭೂಮಿಗೂ, ಪುರಾಣದ ಕಾಲಕ್ಕೂ ವರ್ತಮಾನಕ್ಕೂ ಭೇಧವಿಲ್ಲದಂತೆ ಕವಯತ್ರಿ ಈ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಪ್ರಾರಂಭವಾಗುವುದೇ, ʼಯಮʼ ಎಂಬ ಪದದಿಂದ. ಯಾವ ಯಮನಿಂದ ನಮ್ಮೀ ಐಹಿಕ ಜೀವನ ಮುಕ್ತಾಯವೋ ಅದೇ ಯಮನಿಂದ ಶೈವ ವಾತ್ಸಲ್ಯ ಪ್ರಾರಂಭ. ಈ ಕಾವ್ಯವೂ ಆದಿ-ಅಂತ್ಯ, ಭೂತ-ಭವಿಷ್ಯಗಳನ್ನು ಮೀರಿದ ಒಂದು ಕಾಲ-ದೇಶಾತೀತವಾದ ಸಂದರ್ಭದಲ್ಲಿ ಘಟಿಸುವಂತದ್ದು.

ಒಂದು ಸತ್ವಪೂರ್ಣ ಕಾವ್ಯವು ಕಾಲದ ಹಂಗಿಗೆ ಒಳಪಡದೇ ಸರ್ವಕಾಲಕ್ಕೂ, ಸರ್ವ ಅವಸ್ಥೆಗಳಲ್ಲೂ ನಿತ್ಯ ನೂತನವಾಗಿ, ಪ್ರಸ್ತುತವೂ, ಸ್ತುತ್ಯವೂ ಆಗಿರುತ್ತದೆ ಎಂಬುದಕ್ಕೆ ರಾಮಾಯಣ ಮಹಾಭಾರತಗಳೇ ಸಾಕ್ಷಿ, ಇಂತಹ ಮಹಾಕಾವ್ಯಗಳ ಪಟ್ಟಿಯಲ್ಲಿ ಪಂಪಭಾರತ, ಗದಾಯುದ್ಧ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಲೀಲಾವತಿ ಪ್ರಬಂಧ, ಗಿರಿಜಾ ಕಲ್ಯಾಣ ಮುಂತಾದವು ಹಾಗೂ ಆಧುನಿಕ ಮಹಾಕಾವ್ಯಗಳಾದ ರಾಮಾಯಣದರ್ಶನಂ, ಶ್ರೀಹರಿಚರಿತೆ, ಶ್ರೀ ರಾಮ ಪಟ್ಟಾಭಿಷೇಕಂ, ಬುದ್ಧ ಚರಣದಂತಹ ಕೃತಿಗಳೂ ಸೇರಿವೆ. ಇವುಗಳ ಸಾಲಿನಲ್ಲಿ ಭಿನ್ನ, ವಿಶಿಷ್ಟ ಮತ್ತು ಮಹತ್ವವಾದ ಸ್ಥಾನವನ್ನು ಡಾ. ಎಂ.ಪಿ. ಉಮಾದೇವಿಯವರ ʼಶೈವ ವಾತ್ಸಲ್ಯʼ ಮಹಾಕಾವ್ಯ ಪಡೆದಿದೆ. 

ಮಹಾಕಾವ್ಯಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ 21 ನೇ ಸಹಸ್ರಮಾನದಲ್ಲಿಯೂ ಕಾವ್ಯ ಬರೆದ ಕವಯತ್ರಿಗೆ ತನ್ನ ಕಾವ್ಯದ ಓದುಗರ ಚಿಂತೆಯೇ ಇಲ್ಲ. ಏಕೆಂದರೆ, “ಸಾಕ್ಷಾತ್‌ ಶಿವ, ಶಕ್ತಿಯೇ ಶೈವ ವಾತ್ಸಲ್ಯ ಕಾವ್ಯದ ಓದುಗರು”(ಪುಟ: 28) ತಾನು ಯಾರಿಗಾಗಿ ಈ ಕಾವ್ಯವನ್ನು ರಚಿಸಿದ್ದಳೂ ಆ ಶಿವನೇ ಈ ಕಾವ್ಯವನ್ನು ಓದಿ, ಉಮೆಯೊಡನೆ ಹಂಚಿಕೊಂಡು ಆನಂದಿಸಿದ ಮೇಲೆ ಬೇರೆ ಯಾರು ಓದಿದರೂ, ಬಿಟ್ಟರೂ, ಕವಿಗಾವ ನಷ್ಟವೂ ಇಲ್ಲ. ಚಿಂತೆಯೂ ಇಲ್ಲ. 

“ಯೋಚಿಸಿ ಯೋಚಿಸಿ ಕೊರಗದಿರು, ಓದುವವರು ಯಾರು?
ಆ ಜವಾಬ್ದಾರಿಯನ್ನು ಹೊತ್ತಿರುವರು, ಹಣೆಬರಹ ಬರೆದವರು.”(ಪುಟ: 906)

ಎನ್ನುವು ಮೂಲಕ ಕವಯತ್ರಿ ತಮ್ಮ ನಿಶ್ಚಿಂತೆಯನ್ನು ಹೊರಹಾಕುತ್ತಾರೆ. ಇದು ಕವಯತ್ರಿಯ ಅಹಂಕಾರವಲ್ಲ, ಇದೊಂದು ಮಹತ್ವದ ಸಾರ್ಥಕ ಭಾವ.

ಮೇಲೆ ಚರ್ಚಿಸಿದಂತೆ, ಶೈವ ವಾತ್ಸಲ್ಯವು ಮಹಿಳಾ ಪ್ರಧಾನವಾಗಿ, ಮಹಿಳೆಗಾಗಿ ಮಹಿಳೆಯಿಂದಲೇ ರಚಿತವಾಗಿದ್ದು.  ಈ ಕಾವ್ಯ ಸ್ತ್ರೀ ಅಭಿರುಚಿಗಳಿಗೆ ಧ್ವನಿ ನೀಡುವ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡಿದೆ. ಈ ಕಾವ್ಯದಲ್ಲಿ ಸ್ತ್ರೀ ಸಹಜವಾದ ಆಸೆ-ಆಕಾಂಕ್ಷೆಗಳು ಮುಕ್ತವಾಗಿ ಅಭಿವ್ಯಕ್ತಗೊಂಡಿವೆ. ಇಲ್ಲಿ ಬರುವ ಕೆಲವು ವಿವರಣೆಗಳು ಕೇವಲ, ಒಂದು ಮಹಾಕಾವ್ಯದಲ್ಲಿ ಇರಬೇಕಾದ ಅಷ್ಟಾದಶವರ್ಣನೆಗಳನ್ನು ಅಥವಾ ನವರಸಗಳನ್ನು ಗಮನದಲ್ಲಿರಿಸಿಕೊಂಡು ನೀಡಿದವುಗಳಲ್ಲ. ಹಾಗೆ ನೋಡಿದರೆ, ಶೈವ ವಾತ್ಸಲ್ಯದಲ್ಲಿ ಕಾವ್ಯ ಕಟ್ಟಳೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂಬ ಹಠ ಎಲ್ಲಿಯೂ ಕಾಣುವುದಿಲ್ಲ.

ಕಾವ್ಯದ ಪ್ರಾರಂಭದಲ್ಲಿ ಕವಯತ್ರಿ, ಶ್ರೀ ಕೃಷ್ಣನ ಮರಣವನ್ನು ನೆನೆಸಿಕೊಂಡು, ಅವನ ಮೃತ ಶರೀರದ ಅವಸ್ಥೆಯನ್ನು ʼಶ್ರೀ ಕೃಷ್ಣ ಪರಮಾತ್ಮನದ್ದೇ, ಜಗತ್ತು ಕಂಡ ಅತ್ಯಂತ ಕುರೂಪಿ ಹೆಣʼ(ಪುಟ: 68) ಎಂದು ವಿವರಿಸುತ್ತಾರೆ. ಕೃಷ್ಣನ ಸಾವಿನ ಚಿತ್ರಣ ಅವಳ ಮನಸ್ಸಿನಲ್ಲಿ ಎಂಥ ಪರಿಣಾಮವನ್ನು ಉಂಟು ಮಾಡಿತೆಂಬುದನ್ನು ಕಾವ್ಯ ಓದಿಯೇ ಓದುಗರು ಅರ್ಥೈಸಿಕೊಳ್ಳಬೇಕು. ವಿಷ್ಣುವಿನಂತೆ ತನ್ನ ಪತಿ ಪರಶಿವನು ಸಹ ಹಲವು ಅವತಾರಗಳನ್ನು ತಳೆಯುವುದಕ್ಕೆ ಬದಲಾಗಿ ತಾನೇ ಶಿವನಿಗಾಗಿ ಬೇರೆ ಬೇರೆ ಅವತಾರಗಳಲ್ಲಿ ಜನ್ಮಿಸುತ್ತಾಳೆ ಶಿವೆ. ಇದಕ್ಕೆ ಕಾರಣ ತಾನು ಕಂಡ ಕೃಷ್ಣನ ಹೆಣವೇ ಇರಬಹುದು! ಅಂದರೆ, ತನ್ನ ಪತಿಯೂ ಹೀಗೆ ಗುರಿಯಿಲ್ಲದ ಆಗಂತುಕ ಬಾಣವೊಂದಕ್ಕೆ ಬಲಿಯಾಗಿ ಬಿಡಬಹುದೇ ಎಂಬ ಆತಂಕ. ಇದು ಕಾವ್ಯದಲ್ಲಿ ನೇರವಾಗಿ ಅಭಿವ್ಯಕ್ತವಾಗುವುದಿಲ್ಲವಾದರೂ, ಓದುಗರು ಇದನ್ನು ಗ್ರಹಿಸಬಹುದು.

ಡಾ. ಎಂ.ಪಿ. ಉಮಾದೇವಿ

ಕೃಷ್ಣನ ಸಾವನ್ನು ವಿವರಿಸುವ ಸಂದರ್ಭದಲ್ಲಿಯೇ, ಮತ್ತೊಂದು ಕಡೆ ರಾಮಾಯಣವನ್ನು ಕುರಿತು

“ಲೋಕ ಮಾತೆ ಶ್ರೀ ಲಕ್ಷ್ಮಿ ಸೀತೆಯಾಗಿ ಹುಟ್ಟಿದ ಊರು ಮಿಥಿಲ,
ಆದರೆ ಹೆಜ್ಜೆ ಹೆಜ್ಜೆಗೂ ಅವಳ ಬದುಕು ಆಗುತ್ತಿಹುದು ಶಿಥಿಲ”(ಪುಟ: 62) ‌

ಎಂದು ಹೇಳುವ ಮೂಲಕ, ಇಡೀ ರಾಮಾಯಣ ಕಾವ್ಯವನ್ನು ಸ್ತ್ರೀ ದೃಷ್ಠಿಕೋನದಲ್ಲಿ ನೋಡುವ ಪ್ರಯತ್ನ ಮಾಡುತ್ತಾರೆ. ಮುಂದೆ,

“ದ್ವಾರಕೆಯ ನೆಲದಲ್ಲಿ ಎಣಿಸಲು ಸಾಧ್ಯ ಮಣ್ಣಿನ ಕಣಗಳ,
ಸಾಧ್ಯವಿಲ್ಲ ಎಣಿಸುವುದು, ಮಾಂಗಲ್ಯ ಸೂತ್ರದ ಕರಿಮಣಿಗಳ”(ಪುಟ: 66) 

ಎಂದು ಹೇಳುವ ಮೂಲಕ, ಕವಿಯತ್ರಿ ಆ ಯುದ್ಧದ ಭೀಕರತೆಯನ್ನು, ಅದರಿಂದ ಮಹಿಳೆಯರಿಗೆ ಉಂಟಾದ ನೋವನ್ನು ಹಾಗೂ ಇಂತಹ ಯುದ್ಧಗಳ ವಿರುದ್ಧ ತನ್ನ ಆಕ್ರೋಶವನ್ನು ಈ ಪದ್ಯದಲ್ಲಿ ವ್ಯಕ್ತಪಡಿಸುತ್ತಾರೆ. ಇದು ರಾಮಾಯಣ ಮಹಾಭಾರತಗಳನ್ನು ತನ್ನ ಕಾವ್ಯದ ವಸ್ತುಗಳಾಗಿ ಆಯ್ಕೆ ಮಾಡಿಕೊಳ್ಳಲು ಉಮಾದೇವಿಯವರಿಗೆ ಇರಬಾಹುದಾದ ಆಕ್ಷೇಪಣೆಗೂ ಕಾರಣವಾಗಿದ್ದಿರಬಹುದು.

ಶಿವನಿಗಾಗಿ ಉಮೆ ಹಲವು ಜನ್ಮಗಳನ್ನು ಎತ್ತಿಬರುವುದು ಹೌದಾದರೂ, ಯಾವ ಜನ್ಮದಲ್ಲಿಯೂ ತನ್ನ ಸ್ವಾಭಿಮಾನಕ್ಕೆ ದಕ್ಕೆಯುಂಟಾಗದಂತೆ ವರ್ತಿಸುತ್ತಾಳೆ. ನಾವು ಇದನ್ನೊಂದು ಸ್ತ್ರೀಸಹಜ ಅಹಂಕಾರವೆಂದಾದರೂ ಕರೆಯಬಹುದು ಅಥವಾ ಸ್ವಾಭಿಮಾನ, ಹುಚ್ಚುತನ ಇತ್ಯಾದಿ ಏನೇ ಕರೆಯಬಹುದು. ಆದರೆ, ಅದರಿಂದ ಉಮೆ ಏನು ವಿಚಲಿತಳಾಗುವುದಿಲ್ಲ. ಏಕೆಂದರೆ, ಅವಳು ಹುಟ್ಟಿರುವುದು ತನಗಾಗಿ. ಲೋಕದ ಗೊಡವೆ ಅವಳಿಗೆ ಕಿಂಚಿತ್ತೂ ಇಲ್ಲ. 

ಪುರುಷಪ್ರಧಾನ ಸಮಾಜವು ಸೃಷ್ಠಿಸಿರುವ ಮಾನ, ಗೌರವ ದಂತಹ ಮೌಲ್ಯಗಳಿಂದ ಹಿಡಿದು ಸಮಾಜ, ಸಂಬಂಧ, ಮಡಿಯಂತಹ ಎಲ್ಲ ಕಟ್ಟಳೆಗಳನ್ನು ಉಮೆ ಹುಸಿ ಮಾಡುವ ಪ್ರಯತ್ನ ಮಾಡುತ್ತಾಳೆ. 

“ನೀನೇಕೆ ಯೋಚಿಸುವೆ ದಿತಿ ಇತರರು ಕೊಡುವ ಮರ್ಯಾದೆ ಮಾನ, 
ಅದಕ್ಕೇಕೆ ತಾಳಿ ಕಟ್ಟಿಸಿಕೊಂಡು ಮಾಡಿಕೊಳ್ಳುವೆ ಸ್ವತಂತ್ರ್ಯ ಹರಣ” (ಪುಟ:638) 

ಎನ್ನುವ ಮೂಲಕ, ಹೆಣ್ಣು ತನ್ನನ್ನು ಬಂಧಿಸುವ, ನಿರ್ಭಂಧಿಸುವ ಯಾವ ಬಂಧನಕ್ಕೂ ಒಳಗಾಗಬಾರದೆಂದು ಬಯಸುತ್ತಾಳೆ. ಇದರ ಅರ್ಥ, ವಿವಾಹ, ಸಂಸಾರದಂತಹ ಕಟ್ಟಳೆಗಳನ್ನು ನಿರಾಕರಿಸಿಬಿಡಬೇಕೆನ್ನುವುದಲ್ಲ ಬದಲಾಗಿ, ತನ್ನ ಇಷ್ಟಕ್ಕೆ ವಿರುದ್ಧವಾದ ಕಟ್ಟಳೆಗಳನ್ನು ಮೀರುವ ಹಕ್ಕನ್ನು ಮಹಿಳೆ ಎಂದಿಗೂ ಹೊಂದಿರಬೇಕು ಎಂಬುದು.

ಕಾವ್ಯದ ಪ್ರಾರಂಭದಲ್ಲಿಯೇ ಕವಿಗಳನ್ನು ಉದ್ದೇಶಿಸಿ ಭ್ರಮರಳು ಚಿಂತಿಸುವ ಪ್ರಸಂಗವೊಂದು ಬಹಳ ಸ್ವಾರಸ್ಯಕರವಾಗಿ ಈ ಕಾವ್ಯದಲ್ಲಿ ನಿರೂಪಿತವಾಗಿದೆ, 

“ಎಲ್ಲಿ ನೋಡಿದರೂ”, ಭ್ರಮರಳ ಚಿಂತೆ ಬರೀ ಗಂಡಸರ ಹೆಸರು; 
ಸುಳಿವೇ ಇಲ್ಲ “ಹುಡುಕುತ್ತಾ” ಹೆಣ್ಣೊಬ್ಬಳ ಉಸಿರು  ……… 
ಇಲ್ಲದೇ ಉಂಟೇ, …ಎಂ.ಪಿ. ಉಮಾದೇವಿ” (ಪುಟ: 25)

ಈ ಭಾಗದಲ್ಲಿ, ಮಹಾಕಾವ್ಯಗಳ ಚರಿತ್ರೆಯಲ್ಲಿ ಮೊದಲ ಬಾರಿಗೆ ಹೆಣ್ಣಿನ ಹೆಸರು ಮತ್ತು ಆ ಕಾವ್ಯಗಳ ಒಳಗೆ ಅವಳ ಉಸಿರು ಎರಡನ್ನೂ ತನ್ನ ಶೈವ ವಾತ್ಸಲ್ಯ ಮಹಾಕಾವ್ಯವು ಒಳಗೊಳ್ಳಬೇಕೆಂಬ ಆಶಯ ಮತ್ತು ಹಂಬಲ ಕವಿಯಲ್ಲಿ ವ್ಯಕ್ತವಾಗಿದೆ. ಕಾವ್ಯ ಬೆಳೆದಂತೆ ಕವಿಯ ಈ ಆಶಯವೂ ಬೆಳೆಯುತ್ತಾ ಸಾಗುತ್ತದೆ ಮತ್ತು ಹಲವು ಆಯಾಮಗಳನ್ನು ಪಡೆಯುತ್ತದೆ. ಶೈವ ವಾತ್ಸಲ್ಯ ಕಾವ್ಯದ ಅಧ್ಯಾಯ ೯ ರಲ್ಲಿ ಬರುವ ಋಷಿ ಕುಟಿರಗಳು ಮತ್ತವುಗಳ ವಿವರಣೆಯ ಸಂದರ್ಭದಲ್ಲಿ ಬರುವ ಮುಂದಿನ ಸಾಲುಗಳಲ್ಲಿ- 

“ಹಿಂದೆಯೇ ಕಾಣಿಸಿತು ಶಿಷ್ಯರ ಗುಂಪು, ಎಲ್ಲರೂ ಪಾರಂಗತ,…………. 
ತಿಳಿಸುತ್ತಲೇ ಇದ್ದಾರೆ ಮತ್ತೆ ಮತ್ತೆ ತಿದ್ದಿ, ಮರಳಿನಲ್ಲಿ ಓಂ ಅಕ್ಷರ,
ತಿಳಿಸಿಕೊಡಬಾರದೆ, ಹೇಗೆ ಪ್ರೀತಿಸ ಬೇಕು ಸತಿ ಮತ್ತು ಸುತರ” (ಪುಟ: 517)

ಎಂಬಲ್ಲಿ ಶಿಕ್ಷಣ ಎಂದರೆ ಅದು ಮರಳಿನಲ್ಲಿ ಓಂ ಕಾರ ತಿದ್ದಿಸುವುದಷ್ಟೇ ಅಲ್ಲದೇ, ಸ್ತ್ರೀಯನ್ನು ಪ್ರೀತಿಸುವ ಆಧರಿಸುವುದರ ಶಿಕ್ಷಣವಾಗಬೇಕೆಂಬುದನ್ನು ವಿವರಿಸಲಾಗಿದೆ. ಮುಂದೆ ಅಂತಹ ಶಿಕ್ಷಣ ಸಿಗದಿರಲು ಕಾರಣ ಏನು ಎಂಬುದನ್ನು ಕವಯತ್ರಿ ಮುಂದಿನಂತೆ ವಿವರಿಸುತಾರೆ- 

“ಸ್ವತಃ ಕಲಿಸುತ್ತಿರುವ ಗುರುವಿಗೆ ಆಗಿಲ್ಲ, ಈ ವಿಷಯದಲ್ಲಿ ಬೋಧನೆ,
ಹೀಗಾಗಿ ಸಣ್ಣ ತಪ್ಪಿಗೆ ಪತ್ನಿಯರು ಅನುಭವಿಸುತ್ತಿದ್ದಾರೆ, ತೀವ್ರ ವೇಧನೆ” (ಪುಟ: 517)

ಕಲಿಸುವ ಗುರುವಿಗೇ ಈ ವಿಷಯದಲ್ಲಿ ಬೋಧನೆಯಾಗಿಲ್ಲವೆಂಬ ಕಟು ವಾಸ್ತವವನ್ನು ವ್ಯಂಗ್ಯವಾಗಿ ಹೇಳುತ್ತಲೇ, ಇಂತಹ ಸ್ತ್ರೀಯನ್ನು ಅರ್ಥೈಸಿಕೊಳ್ಳುವ ಶಿಕ್ಷಣ ಸಿಗದ ಕಾರಣದಿಂದ ಉಂಟಾದ ಅಪಾಯಗಳ ಒಂದು ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಾರೆ, ಮುಖ್ಯವಾಗಿ-

“ಪತಿಯಿಂದ ಆಜ್ಞೆ, ಪುತ್ರನಿಂದಲೇ ಹತ್ಯೆ, ಹೀಗಾಗಬೇಕೆ ರೇಣುಕ?
……… ದೊರಕಿರಲಿಲ್ಲ ಗುರುಶಿಷ್ಯರಿಗೆ ಸೂಕ್ತ ಶಿಕ್ಷಣ,….

ಪತಿ ಗೌತಮನ ರೂಪದಲ್ಲಿ, ಬಂದ ಜಗಭಂಡ ದೇವ ಅಗ್ನಿ….
ನಿಜ ಪತಿಯ ಸಿಟ್ಟಿನ ಶಾಪಕ್ಕೆ, ಸುಖವಾಗಿ ಇದ್ದವಳು ನಿರ್ಜೀವ ಶಿಲೆ. 

ಕೊಂದಿದ್ದರೆ ವಾಸಿ ಕೂಡುವ ಬದಲು, ದುಷ್ಯಂತನಿಗೆ ಮರೆವು,
…….. ಮೂಡಿಸಬಾರದೆ ಗುರುಕುಲದಲ್ಲಿ, ಈ ಎಲ್ಲದರ ಅರಿವು” (ಪುಟ: 518)

ಹೀಗೆ, ಅಹಲ್ಯೆ, ರೇಣುಕೆ, ಶಾಕುಂತಲೆಯಂತಹ ಹೆಣ್ಣು ಮಕ್ಕಳು ಗಂಡಸರ ಅಜ್ಞಾನದಿಂದಲೇ ಬಹಳಷ್ಟು ನೋವಿಗೆ ಒಳಗಾದದನ್ನು ಚಿತ್ರಿಸುತ್ತಾ, 

“ತಿಳಿಯಲು ವನವಾಸ, ಓದಬೇಕಾಗಿಲ್ಲ ವಾಲ್ಮೀಕಿ ರಾಮಾಯಣ,
ಕೇಳಿಸಿಕೊಂಡರೆ ಸಾಕು ಒಂಟಿ, ಪತಿ ಕೈಬಿಟ್ಟ, ವಿಧವೆಯರ ಆಕ್ರಂಧನ” (ಪುಟ: 518)

ಎಂಬಲ್ಲಿಗೆ ಬಂದು ಸೀತೆಯ ವನವಾಸವನ್ನು ಹಾಗೂ ಪುರುಷರಿಂದ ನಾನಾ ಕಾರಣಗಳಿಗೆ ದೂರಾದ ಮಹಿಳೆಯರ ಆಕ್ರಂದನವನ್ನು ಒಮ್ಮೆಲೆ ಚಿತ್ರಿಸುತ್ತಾರೆ. 

ಈ ಭಾಗವು ಒಟ್ಟು ಶಿಕ್ಷಣ ಪದ್ಧತಿಯಲ್ಲಿ ಸ್ತ್ರೀಯರ ಕುರಿತು ಅದರಲ್ಲಿಯೂ ಆಧುನಿಕ ಪರಿಭಾಷೆಯಾದ ಲಿಂಗ ಸಂವೇದನೆಯ ಶಿಕ್ಷಣವಿರಬೇಕು ಎಂಬ ಅರ್ಥದಲ್ಲಿ ನಿರೂಪಿಸಲ್ಪಟ್ಟಿದೆ. ʼಸ್ತ್ರೀವಾದ ಸ್ತ್ರೀಯರಿಗಿಂತ ಹೆಚ್ಚು ಪುರುಷರಿಗೆ ಬೇಕಾಗಿದೆʼ ಎಂಬ ವಾದವನ್ನು ಈ ಪ್ರಸಂಗ ಪುಷ್ಟೀಕರಿಸುವಂತಿದೆ. ವೃತ್ತಿಯಲ್ಲಿ ವೈದ್ಯರಾಗಿದ್ದು, ಆಧುನಿಕ ಶಿಕ್ಷಣವನ್ನು ಪಡೆದಿದ್ದ ಕವಯತ್ರಿ ಎಂ.ಪಿ. ಉಮಾದೇವಿಯವರು ಕಾವ್ಯದಲ್ಲಿ ಚರ್ಚಿಸಿರುವ ಈ ವಿಚಾರಗಳು ಅಂದಿಗೂ, ಇಂದಿಗೂ ಸಮಯೋಚಿತವಾದವೇ ಆಗಿವೆ.

ಇನ್ನು ಶೈವ ವಾತ್ಸಲ್ಯ ಕಾವ್ಯದಲ್ಲಿ ಕವಯತ್ರಿ ಆಗಾಗ ಕೆಲವು ಧರ್ಮ ಸೂಕ್ಷ್ಮದ ಪ್ರಶ್ನೆಗಳನ್ನು ಕೇಳುತ್ತಾರೆ, ಮೊದಲನೆಯದಾಗಿ, ಕಾವ್ಯದ ಪ್ರಾರಂಭದಲ್ಲಿ ಬರುವ ಒಂದು ಸನ್ನಿವೇಶವನ್ನಿಲ್ಲಿ ಉದಾಹರಣೆಯಾಗಿ ನೋಡಬಹುದು-

ಉಮೆ: …..”ಹಾಗೆ ಎತ್ತಲು ಅವತಾರ ಶ್ರೀಹರಿಗೆ, ಇದೆ ಬಲವಾದ ಕಾರಣ,
ಎಲ್ಲಕ್ಕಿಂತ ಮುಖ್ಯ ಲಕ್ಷ್ಮೀ, ಅವನಿಗೆ ಮನುಜರ ಕಲ್ಯಾಣ”

ಲಕ್ಷ್ಮಿ: “ಅದಕ್ಕಿಂತ ಮುಖ್ಯವಲ್ಲವೇ” ಸಿರಿ”ನಿನಗೆ ನಿನ್ನ ಜೀವನ,…..” (ಪುಟ: 30)

ಇಲ್ಲಿ ವಿಷ್ಣುವು ದುಷ್ಟ ಶಿಕ್ಷಣಕ್ಕಾಗಿ, ಧರ್ಮ ರಕ್ಷಣೆಗಾಗಿ ಜನ್ಮಗಳನ್ನು ಎತ್ತುತ್ತಾನೆ. ಆದರೆ, ಉಮೆಗೆ ಅಂತಹ ಕಾರಣಗಳಾವುವು ಇಲ್ಲ. ಆದರೆ, ಇದಕ್ಕೆ ಲಕ್ಷ್ಮೀ ನೀಡುವ ಸಮರ್ಥನೆ ಏನೆಂದರೆ, ಇವುಗಳಿಗಿಂತಲೂ ನಿನಗೆ ನಿನ್ನ ಜೀವನವೇ ಮುಖ್ಯವಲ್ಲವೇ ಎನ್ನುವುದು. ಇಲ್ಲಿ ಸ್ತ್ರೀಯೊಬ್ಬಳು ಲೋಕ ಕಲ್ಯಾಣ, ಧರ್ಮ ಸ್ಥಾಪನೆಗಳಂತಹ ಕಲ್ಪಿತ ಹುಸಿ/ಭ್ರಮೆಗಳನ್ನು ಕಳಚಿಕೊಂಡು ಅವುಗಳಿಗಿಂತ ತನ್ನ ಜೀವನವೇ ತನಗೆ ಮುಖ್ಯ ಎಂಬ ನಿಲುವಿಗೆ ಬರುವುದು ಒಂದು ಮಹತ್ವದ ಬೆಳವಣಿಗೆ ಎಂದೇ ಹೇಳಬಹುದು. 

ಸಮಾಜ, ಗಂಡ, ಮನೆ, ಮಕ್ಕಳಿಗಾಗಿ, ಮನೆತನದ ಮರ್ಯಾದೆ, ಪ್ರತಿಷ್ಠೆಗಳಿಗಾಗಿ ಸ್ತ್ರೀಯೊಬ್ಬಳು ತನ್ನೆಲ್ಲ ಆಸೆ-ಆಕ್ಷಾಂಕ್ಷೆಗಳನ್ನು ತ್ಯಾಗ ಮಾಡಬೇಕೆಂದು ನಿರೀಕ್ಷಿಸುವ ಸಮಾಜದಲ್ಲಿ, ಸ್ತ್ರೀಯೊಬ್ಬಳು ತನ್ನ ಜೀವನವೇ ತನಗೆ ಮುಖ್ಯ ಎಂಬ ದೃಢವಾದ ನಿಲುವನ್ನು ತಳೆಯುವುದು ಮತ್ತು ತನ್ನ ಜೀವನವೇ ಮುಖ್ಯವಲ್ಲವೇ ಎಂಬ ಪ್ರಶ್ನೆಯೊಂದನ್ನು ಮುಂದಿಡುವುದು ಈ ಕಾವ್ಯದಲ್ಲಿ ವಿಶೇಷವಾಗಿ ಮೂಡಿಬಂದಿದೆ. ಇದನ್ನು ಲೋಕ ಕಲ್ಯಾಣಕ್ಕಾಗಿ ಹಲವು ಜನ್ಮಗಳನ್ನು ತಳೆದ ವಿಷ್ಣುವಿನ ಪತ್ನಿ ಲಕ್ಷ್ಮೀಯೇ ಪಾರ್ವತಿಗೆ ಹೇಳುವುದು ಇನ್ನೂ ವಿಶೇಷ. ಲೋಕ ಕಲ್ಯಾಣದ, ಧರ್ಮ ಸ್ಥಾಪನೆಯ ಒಳ ಮರ್ಮಗಳನ್ನು ಹಾಗೂ ಅದರ ಹುಸಿ ವಿಜೃಂಭಣೆಗಳನ್ನು ಚೆನ್ನಾಗಿ ಅರಿತಿದ್ದ ಲಕ್ಷ್ಮಿಯೇ ಇದನ್ನು ಹೇಳುವುದರಿಂದ, ಈ ಹೇಳಿಕೆಗೆ ಒಂದು ಘನತೆ ಒದಗಿದೆ ಎನ್ನಬಹುದು.

ಮುಂದುವರೆದು, ಈ ಕಾವ್ಯದಲ್ಲಿ ಶಿವ-ಶಕ್ತಿಯರ ಶೃಂಗಾರ ಪ್ರಸಂಗಗಳನ್ನು ವಿವರಿಸುವಾಗ ಕವಯತ್ರಿ ಲೈಂಗಿಕತೆಗೆ ಸಂಬಂಧಿಸಿದ ಪದಗಳನ್ನು ಕಾವ್ಯದುದ್ದಕ್ಕೂ ಬಹಳ ಮುಕ್ತವಾಗಿ ಬಳಸುತ್ತಾರೆ. ಕಾವ್ಯದ ಪಾತ್ರಗಳು ಪ್ರೇಮ-ಕಾಮಗಳ ಅನುಭವಗಳನ್ನು ಬಹಳ ಮುಕ್ತವಾಗಿ ಅಭಿವ್ಯಕ್ತಿಸುತ್ತವೆ.

ಇನ್ನು, ಶೈವ ವಾತ್ಸಲ್ಯ ಕಾವ್ಯದ ರಸ ನಿರೂಪಣೆಯನ್ನು ಕುರಿತು ಗಮನಿಸುವುದಾದರೆ, ಮೇಲೆ ಸೂಚ್ಯವಾಗಿ ಹೇಳಿರುವಂತೆ, ಇದನ್ನೊಂದು ಶೃಂಗಾರ ಕಾವ್ಯವೆಂದು ಕರೆಯಬಹುದು. ಶಿವ ಶಿವೆಯರ ಪ್ರಣಯವೇ ಈ ಕಾವ್ಯದ ಮೂಲ ವಸ್ತು. ಶೃಂಗಾರವನ್ನು ಮೀರಿದ ಅಥವಾ ಶೃಂಗಾರವೇ ಮಾಗಿ ಭಕ್ತಿಯಾಗುವ, ಮುಕ್ತಿಗೆ ಮಾರ್ಗವಾಗುವ ಪರಿಯನ್ನು ನಾವು ಈ ಕಾವ್ಯದಲ್ಲಿ ಕಾಣಬಹುದು. ಶೃಂಗಾರ ರಸದೊಡನೆ ಕೃಷ್ಣನ ಮರಣವನ್ನು ಚಿತ್ರಿಸುವ ಸಂದರ್ಭದಲ್ಲಿ ಭೀಭತ್ಸ ರಸವೂ, ಮಹಿಷನನ್ನು ಕೊಲ್ಲುವಾಗ, ದುರ್ಗೆ ರುಂಡ ಮಾಲಿನಿಯಾಗಿ ನರ್ತಿಸುವಾದ ರೌದ್ರ ರಸವೂ, ಗೋಚರಿಸಿದರೂ ಸಹ ಅವುಗಳು ಅಷ್ಟು ತೀವ್ರವಾಗಿ ಪ್ರಕಟಗೊಳ್ಳುವುದಿಲ್ಲ. ಇನ್ನು ಭಾಷೆ ಹಾಗೂ ಛಂದಸ್ಸಿನ ವಿಷಯಕ್ಕೆ ಬಂದರೆ, ಇದೊಂದು ದ್ವಿಪದ ಕಾವ್ಯ, ಸರಳವಾದ ಹೊಸಗನ್ನಡ ಭಾಷೆಯಲ್ಲಿ, ಪ್ರಾಸ ಬದ್ಧವಾಗಿ ಈ ಕಾವ್ಯ ರಚನೆಯಾಗಿದೆ. 

“ಅಪೂರ್ವ ಶಬ್ದಗಳ ಸಂಗ್ರಹ, ಅರಿತ ಹರ ಅವಳ ಹವ್ಯಾಸ
ಜನ ಮರೆತಿರುವ ಶಬ್ದಗಳು, ಮಾಡುವವು ಅವಳಲ್ಲಿ ವಾಸ” (ಪುಟ: 39) ಕೃತಿಯಲ್ಲಿ ಬಳಸಲಾದ ಇಂತಹ ಕೆಲವು ಅಪೂರ್ವ ಶಬ್ದಗಳು ಮತ್ತು ವಾಕ್ಯ ರಚನೆಯ ಶೈಲಿ ಓದುಗರನ್ನು ಆಕರ್ಷಿಸುತ್ತವೆ. 

ಒಟ್ಟಿನಲ್ಲಿ ಇದೊಂದು ಅದ್ಭುತವಾದ ಶೃಂಗಾರ ಕಾವ್ಯವಾಗಿ, ಶೃಂಗಾರವೇ ಭಕ್ತಿಯಾಗಿ ಮುಕ್ತಿಯ ಸೂಪಾನಕ್ಕೆ ದಾರಿಯಾಗಿ ಅದ್ಭುತವಾಗಿ ಮೂಡಿಬಂದಿದ್ದು,. ಇದನ್ನು ಸಹೃದಯರು ಓದಿ-ಆನಂದಿಸಿ ಶೈವ ವಾತ್ಸಲ್ಯಕ್ಕೆ ಪಾತ್ರರಾಗಬೇಕಿದೆ. ಧನ್ಯವಾದಗಳು.

ವರುಣ್‌ರಾಜ್‌ ಜಿ.

8 Responses

 1. ಓದಬೇಕೆಂಬ ಹಂಬಲವನ್ನು ಉಂಟು ಮಾಡುವಂತೆ ಪುಸ್ತಕ ಪರಿಚಯ ಮಾಡಿಸಿರುವ ನಿಮಗೆ ಧನ್ಯವಾದಗಳು ಸಾರ್.

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. ಶಂಕರಿ ಶರ್ಮ says:

  ಅಪರೂಪದ ಮಹಾಕಾವ್ಯವೊಂದರ ವಿಮರ್ಶಾತ್ಮಕ ಪರಿಚಯವು ಅದ್ಭುತವಾಗಿ ಮೂಡಿಬಂದಿದೆ… ಧನ್ಯವಾದಗಳು.

 4. ಮಹೇಶ್ವರಿ ಯು says:

  ಮಹತ್ವಾಕಾಂಕ್ಷೆಯ ಅಪೂರ್ವ ಕೃತಿಯನ್ನು ಓದಿ ಇಷ್ಟು ವಿಸ್ತಾರವಾಗಿ ಪರಿಚಯಿಸುವುದುಸುಲಭದ ಮಾತಲ್ಲ. ಅಭಿನಂದನೆಗಳು

 5. Padmini Hegde says:

  ಚೆನ್ನಾಗಿದೆ

 6. VARUNRAJ says:

  ನನ್ನ ಬರಹವನ್ನು ಓದಿ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸಹೃದಯರಿಗೆ ಗೌರವಪೂರ್ವಕ ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: