ಅವಳು

Share Button


ನನ್ನನ್ನು ಕಾಡುವ ಸ್ಪೋಂಡಿಲೋಸಿಸ್ ನ ಚಿಕಿತ್ಸೆ ಗಾಗಿ ವೈದ್ಯರನ್ನು ಭೇಟಿ ಮಾಡಲು ಕಾಸರಗೋಡಿನ ಕೇರ್ ವೆಲ್ ಆಸ್ಪತ್ರೆಗೆ ಹೋಗಿ ಹಿಂತಿರುಗಿ ಬರಲು ಬಸ್ಸಿಗೆ ಕಾಯುತ್ತಿದ್ದೆ.ರಸ್ತೆ ಯ ಅಗಲೀಕರಣದ ಕಾಮಗಾರಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ದರಿಂದ ತಂಗುದಾಣವನ್ನು ಅಗೆದು ಹಾಕಿದ್ದರು. ಕೂರಲು ಆಸನವಿಲ್ಲ. ಕಾಮಗಾರಿಗೆ ಬಳಸುವ ಒಂದು ಕೆಂಪು ಕಲ್ಲು ಮಾತ್ರವೇ ಇತ್ತು.

ಅಷ್ಟರಲ್ಲಿ ಒಬ್ಬಾಕೆ ಮಧ್ಯವಯಸ್ಸುದಾಟಿದ ಹೆಣ್ಣು ಮಗಳು- ನೋಡಿದರೇ ಗೊತ್ತಾಗುತ್ತಿತ್ತು ತೀರ ಬಡವೆಯೆಂದು. ಆಕೆ ಒಬ್ಬಾಕೆ ನಿವೃತ್ತ ಅಧ್ಯಾಪಿಕೆಯ ಮನೆಗೆಲಸಕ್ಕೆ ಸ್ವಲ್ಪ ದೂರದ ಸೀತಾಂಗೋಳಿಯಿಂದ ದಿನಾ ಬಂದು ಹೋಗುತ್ತಿದ್ದವಳು.ಬಸ್ಸಿನ ಬಣ್ಣವನ್ನು ನೋಡಿ ಅದು ಎಲ್ಲಿಗೆ ಹೋಗುವ ಬಸ್ಸೆಂದು ಊಹಿಸುತ್ತಿದ್ದಳು. ನಾನೂ ಸೀತಾಂಗೋಳಿ ಬಸ್ಸಿಗಾಗಿ ಕಾಯುತ್ತಿರುವುದನ್ನು ಅವಳಿಗೆ ತಿಳಿ ಸಿದೆ. ಅವಳು ನಿಂತ ಭಂಗಿಯನ್ನು ನೋಡಿ ದಾಗ ಅವಳಿಗೆ ಸೊಂಟನೋವಿರಬೇಕೆಂದು ಊಹಿಸಿದೆ . ಆಕೆ ಅತ್ತ ಇತ್ತ ನೋಡಿ ಅಲ್ಲೇ ಇದ್ದ ಕೆಂಪು ಕಲ್ಲಿನಲ್ಲಿ ಕೂತಳು. ನಾನು ಅವಳನ್ನು ನೋಡಿ ನಕ್ಕು ಮಾತಿಗಿಳಿದೆ. ಕೇಳಿದಾಗ ಅವಳಿಗೆ ಸೊಂಟದ ಆಪರೇಷನ್ ಆಗಿ ರಾಡ್ ಹಾಕಿರುವ ವಿಚಾರ ಹೇಳಿದಳು. ಈಗಲೂ ಕಿವಿಯ ಬಳಿ ನರಸಂಬಂಧಿ ಯಾದ ಕಾಯಿಲೆ ಅವಳನ್ನು ಬಾಧಿಸುತ್ತಿದೆ. ನರರೋಗ ತಜ್ಞ ರ ಬಳಿ ಹೋಗಿ ದುಡ್ಡು ಖಚಾ೯ಗಿದೆ. ಆದರೆ ಕಾಯಿಲೆ ಗುಣವಾಗಿಲ್ಲ. ಎಳೆಯ ಪ್ರಾಯದಲ್ಲಿಯೇ ವಿಧವೆಯಾದ ಆಕೆಗೆ ಒಬ್ಬ ಮಗ ಮಾತ್ರ. ಆತ ಕೂಲಿ ಕೆಲಸಕ್ಕೆಹೋಗುತ್ತಿದ್ದಾನೆ. ಅವನಿಗೆ ಇಬ್ಬರು ಮಕ್ಕಳಿದ್ದಾರೆ. ಈಕೆ ಗೆ ನಿಜವಾಗಿ ವಿಶ್ರಾಂತಿಯ ಅಗತ್ಯವಿದೆ. ಆದರೆ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದಾಳೆ. ವಿಧವಾ ಪೆನ್ಶನ್ ಸಿಗುತ್ತದೆ. ನೇರವಾಗಿ ಅವಳ ಖಾತೆಗೆ ಜಮೆಯಾಗುತ್ತದೆ ಎಂದೂ ಹೇಳಿದಳು. ಮಗನ ಸಂಸಾರದ ನಿವ೯ಹಣೆಗೆ ತನಗೆ ಸಾಧ್ಯವಿದ್ದಷ್ಟು ಕಾಲ ದುಡಿಯುವ ಹಂಬಲ ಅವಳದು. ಸಾಮಾನ್ಯಳಾದ ಆಕೆಯ ಕಣ್ಣಲ್ಲಿ ಏನೋ ಒಂದು ತೇಜಸ್ಸಿತ್ತು. ಅದು ಅವಳ ವ್ಯಕ್ತಿತ್ವಕ್ಕೆ ಒಂದು ಘನತೆಯನ್ನು ಕೊಡುತ್ತಿತ್ತು. ಬಹುಶಃ ಬದುಕನ್ನು ಬಂದಂತೆ ಎದುರಿಸುವ, ಜೀವನ ಪ್ರೀತಿ ಯನ್ನು ಬಿಟ್ಟು ಕೊಡದ ಒಂದು ಗುಣ ಅವಳನ್ನು ಪೊರೆಯುತ್ತಿತ್ತು ಅನಿಸುತ್ತದೆ.

ಅಷ್ಟರಲ್ಲಿ ನಮ್ಮ ಬಸ್ಸು ಬಂತು. ಖಾಲಿ ಆಸನಗಳಿರಲಿಲ್ಲ. ಡ್ರೈವರ್ ಪಕ್ಕದ ಸೀಟಿನಲ್ಲಿ ಬೇರೆ ಹೆಂಗಸರ ಜತೆ ಇಬ್ಬರು ಮಕ್ಕಳು ಕೂತಿದ್ದರು. ನಾನು ನಿವಾ೯ಹಕನಿಗೆ ಹೇಳಿ ಅವರನ್ನು ಎಬ್ಬಿಸಿ ಇವರನ್ನು ಕೂರಿಸಲು ಹೇಳಿದೆ. ಆಕೆ ಸಂಕೋಚದಿಂದಲೇ ಕುಳಿತಳು. ಮತ್ತು ಆಗಾಗ ನಿಂತಿದ್ದ ನನ್ನ ಕಡೆಗೆ ಆತ್ಮೀಯ ನೋಟ ಬೀರುತ್ತಿದ್ದಳು. ನನ್ನ ಸ್ಟಾಪ್ ಬಂದಾಗ ಅವಳತ್ತ ನೋಡಿ ತಲೆಯಾಡಿಸಿ ನಾನು ಇಳಿದೆ.

ದಾರಿಯುದ್ದಕ್ಕೂ ಅವಳ ಮುಖ ಕಾಡುತ್ತಿತ್ತು.ಬಂಧುವಲ್ಲ, ಬಳಗವಲ್ಲ. ಕೇವಲ ಅಪರಿಚಿತಳಾದ ಅವಳನ್ನು ಆ ಕ್ಷಣಕ್ಕೆ ಆತ್ಮೀಯ ವಾಗಿಸಿದ ಆ ತಂತು ಯಾವುದು? ಈಗ ಮೊಬೈಲ್ ಬಂದಮೇಲೆ ಬಸ್ಸಿನಲ್ಲಾಗಲೀ ರೈಲಿನಲ್ಲಾಗಲೀ ನಾವು ಸಹ ಪ್ರಯಾಣಿಕರ ಜತೆ ಮಾತುಕತೆ ಯನ್ನು ಮರೆತುಬಿಟ್ಟಿದ್ದೇವೆ. ಅಷ್ಟೇ ಅಲ್ಲ ಜೀವನ ಯಾತ್ರೆಯ ಸಹ ಪ್ರಯಾಣಿಕರ ಜತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಅವರವರ ಗೋಳದಲ್ಲಿ ಭ್ರಮಣ ನಿರತರೇ.

ಮಹೇಶ್ವರಿ ಯು.

11 Responses

  1. ಅವಳು..ಲೇಖನ ದಲ್ಲಿ ಬರದಿರುವ ಅನುಭವ..ಮೊಬೈಲ್ ನ ಪರಿಣಾಮ… ಕೊನೆಯ ವಾಕ್ಯ.ಎಲ್ಲರೂ..ಅವರವರ ಗೋಳದಲ್ಲಿ ಭ್ರಮಣ ನಿರತರೇ…ಪ್ರಸ್ತುತ… ಮೇಡಂ

  2. ಶೈಲಜಾ. ಕೆ says:

    ಈ ಅನುಭವ ನನಗೆ ಪ್ರತಿನಿತ್ಯ ಆಗ್ತಿದೆ ಮೇಡಂ, ಸಾರ್ವಜನಿಕ ಸಾರಿಗೆಯಲ್ಲಿ ವೃದ್ಧರಿಗೆ ಯುವ ಜನಾಂಗ ಆಸನಗಳನ್ನು ಬಿಟ್ಟು ಕೊಡ್ತಿಲ್ಲ. ಕೊಡ ಬೇಕಿದ್ದರೆ ಮಧ್ಯವಯಸ್ಕರೇ ಕೊಡಬೇಕಾಗಿದೆ. ಯುವ ಜನಾಂಗದ ಕಣ್ಣು, ಮನಸ್ಸೆಲ್ಲವೂ ಕೈಗಳಲ್ಲಿರುವ ಮೊಬೈಲ್ಗಳಲ್ಲಿ ಮುಳುಗಿ ಹೋಗಿದೆ.

  3. ನಯನ ಬಜಕೂಡ್ಲು says:

    ಆಪ್ತ ಬರಹ ಮೇಡಂ.

  4. ಶಂಕರಿ ಶರ್ಮ says:

    ಅಸಹಾಯಕತೆಯ ನಡುವೆಯೂ ಸ್ವಾಭಿಮಾನದ ಬದುಕು ನಡೆಸುತ್ತಿರುವ ಸಾವಿರಾರು ಹೆಂಗೆಳೆಯರ ಪ್ರತಿನಿಧಿಯಂತಿರುವ ‘ಅವಳ’ ಕುರಿತ ಲೇಖನ ಮನಮುಟ್ಟಿತು.

  5. ವಿದ್ಯಾ says:

    ಬರಹದ ನಿರೂಪಣಾ ಶೈಲಿ ಇಷ್ಟು ವಾಯಿತು ಆಪ್ತತೆ ಹೆಚ್ಚಿಸುವ ಬರಹ

  6. Padma Anand says:

    ಭಾವತಂತುವನ್ನು ಮೀಟಿದ ಸುಂದರ ಅನುಭವ ಲೇಖನ.

  7. ಮಹೇಶ್ವರಿ ಯು says:

    ಧನ್ಯವಾದಗಳು ಸೋದರಿಯರೇ

  8. Padmini Hegde says:

    ಅವರವರ ಗೋಳದಲ್ಲಿ ಭ್ರಮಣ ನಿರತ ಜೀವನ ಯಾತ್ರೆ!

  9. MANJURAJ H N says:

    ನಮ್ಮೊಳಗೊಂದು ಮತ್ತು ನಮ್ಮಾಳದಳೊಂದು ಮಾನವತೆಯ ಸುರಳೀತವಿದ್ದರೆ ಇಂಥ ಕರುಳಸ್ಪಂದನ ಅನುದಿನ! ಜೀವನ ಪ್ರಯಾಣದಲಿ ಜೀವಯಾನವನ್ನು ಮರೆತು ಯಾಂತ್ರಿಕರಾದರೆ
    ಬಹಳಷ್ವನ್ನು ಕಳೆದುಕೊಳ್ಳುತ್ತೇವೆ. ದುರಂತವೆಂದರೆ ಏನನ್ನು ಕಳೆದುಕೊಳ್ಳುತ್ತಿದ್ದೇವೆಂಬುದೂ ಅರಿವಾಗದಂಥ ಕಾಲ……..

    ಬರೆಹ ಪುಟ್ಟದಾದರೂ ಆಶಯ ದೊಡ್ಡದಿದೆ. ʼಮನ ನೋಡಾ ಸಂಪನ್ನʼ ಇಂಥ ತುಡಿತವನ್ನೇ ಹೃದಯವಂತಿಕೆ ಎನ್ನುವುದು. ದಯೆಯೇ ನಿಜದ ಧರ್ಮ; ಜೀವನ ಮರ್ಮ

    ಲೇಖಕಿಗೆ ಅಭಿನಂದನೆಗಳು.

  10. MANJURAJ H N says:

    * ನಮ್ಮಾಳದಲೊಂದು* ಎಂದು ಓದಿಕೊಳ್ಳಬೇಕಾಗಿ ವಿನಂತಿ* – ಮಂಜುರಾಜ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: