ದೇವರನಾಡಲ್ಲಿ ಒಂದು ದಿನ – ಭಾಗ 7
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತಪ್ಪಿದ ಹಾದಿ
ಮಾಯನತ್ ವಾಡಿಯಲ್ಲಿ ಚಳಿ ಹೆಚ್ಚಾಗಿದ್ದರಿಂದ ಬೆಚ್ಚಗೆ ಹೊದ್ದು ಮಲಗುವ ಸಮಯವದು. ಆದರೆ ನಾನು ಜಾಗ ಸಾಲದಿರಲು ಕೆಳಗೆ ಹೊದಿಕೆ ಹಾಸಿ ಮಲಗಿದ್ದೆ. ಸಾಮಾನ್ಯವಾಗಿ ಹೊಸ ಜಾಗವೆಂದರೆ ನಿದಿರೆ ಸ್ವಲ್ಪ ದೂರವೇ ಉಳಿಯುತ್ತದೆ. ನನಗೂ ಕೂಡ ಹಾಗೆಯೇ ಆಯಿತು. ನಸುಕಿಗೆ ಎದ್ದು ಪ್ರಕೃತಿಯ ಸೌಂದರ್ಯವನ್ನು ಸವಿಯೋಣ ಎಂದು, ವಾಕ್ ಹೋಗುವ ನಿರ್ಧಾರ ಮಾಡಿದ್ದೆವು. ಅಂತೆಯೇ ನಾಲ್ಕು ಜನರೂ ತಯಾರಾದೆವು. ನನಗೆ ಬೆಳಗಿನ ವೇಳೆಯಲ್ಲಿ ವಾಕ್ ಮಾಡುವ ಸಮಯ ಅವಕಾಶ ಎರಡೂ ಇಲ್ಲವಾದ್ದರಿಂದ ಇಂದು ಸಿಕ್ಕ ಸಮಯದ ಉಪಯೋಗ ಮಾಡಿಕೊಳ್ಳುವ ಅನಿಸಿತು. ನಿತ್ಯ ಮನೆಯಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಸ್ನಾನವಾಗಬೇಕು ನನಗೆ. ಇಲ್ಲೂ ಕೂಡ ಬೆಳಿಗ್ಗೆನೇ ಬಿಸಿನೀರಿಗೆ ಕಾಯದೆ ಸ್ನಾನ ಮುಗಿಸಿಯೇ ಬಂದೆ. ಮುಂಜಾನೆ ಆರರ ಹೊತ್ತಿಗೆ ವಾಕ್ ಮಾಡಲು ನಡೆದೆವು. ಮನೆಯಿಂದ ಹೊರಬಂದರೆ ಗೇಟ್ ಇನ್ನೂ ತೆಗೆದೇ ಇರಲಿಲ್ಲ. ಏನು ಮಾಡೋದು….. ಕಾಂಪೌಂಡ್ ಹಾರಿಯೆ ಹೊರಟಿದ್ದು.
ತಿರುವಿನಲ್ಲಿ ಬಿಸಿಬಿಸಿ ಕಾಫಿ ಕುಡಿದು ಹೊರಟೆವು. ಮುಖ್ಯ ರಸ್ತೆಯನ್ನು ಬಿಟ್ಟು ಊರ ಒಳಗಿನ ಹಾದಿ ಹಿಡಿದೆವು. ಪುಟ್ಟ ಪುಟ್ಟ ಕಾಫಿ ಎಸ್ಟೇಟ್ ನ ಹಾದಿ ಅದಾಗಿತ್ತು. ವಿಶಾಲವಾದ ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸಿಕೊಂಡಿರುವರು. ದೇವರನಾಡಿನ ಜನರು ಎಲ್ಲರೂ ಒಳ್ಳೆಯ ವಿದ್ಯಾವಂತರು, ಬುದ್ಧಿವಂತಿಕೆ ಹೆಸರಾದವರು ಹಾಗೂ ಸಿರಿವಂತರು. ಅಲ್ಲಿನ ವಸ್ತುಸ್ಥಿತಿ ನೋಡಿದರೆ ತಿಳಿಯುತ್ತಿತ್ತು. ಅವರ ಜಾಣ್ಮೆ ಮತ್ತು ಸಿರಿತನ.
ಪ್ರತೀ ಮನೆಗಳೂ ವಿಶೇಷ ಆಕಾರದಲ್ಲಿ ಕಟ್ಟಿದ ಮನೆಗಳವು. ನೋಡಲು ಎರಡು ಕಣ್ಣು ಸಾಲದು. ಪ್ರತೀ ಮನೆಯವರೂ ಸುಂದರ ಕೈತೋಟಗಳನ್ನು ನಿರ್ಮಿಸಿದ್ದರು. ಮನೆಯ ಮುಂದಿನ ಗಾರ್ಡನ್ ನಲ್ಲಿ ಬೆಳೆದ ಬಳ್ಳಿಗಳು, ವಿಧ ವಿಧವಾದ ಹೂದಾನಿಗಳು ಬಹಳಷ್ಟು ನನ್ನ ಮನಸೆಳೆದವು. ನಾವೆಲ್ಲಾ ಫೋಟೋಗೆ ಪೋಸ್ ಕೊಟ್ಟು ಒಂದಷ್ಟು ಗ್ಯಾಲರಿ ಭರ್ತಿಮಾಡಿದೆವು. ಎಲ್ಲಾ ಗಿಡ ಬಳ್ಳಿಗಳ ಮೇಲೆಲ್ಲಾ ಇಬ್ಬನಿ ಮುತ್ತಂತೆ ಕುಳಿತು ಕಣ್ಣಿಗೆ ಆಕರ್ಷಕವಾಗಿ ಕಂಡವು. ಬಹಳ ಸಮಯದ ನಂತರ ಸೂರ್ಯನು ಮೆಲ್ಲನೆ ಅಡಿಯಿಡಲು ಪ್ರಾರಂಭಿಸಿದ. ಇಬ್ಬನಿಯು ಸೂರ್ಯನ ಅಪ್ಪುಗೆಯ ಬಯಸಿ ಅವನಲ್ಲಿ ಲೀನವಾಯಿತು.
ವಿಶಾಲವಾದ ಸ್ವಚ್ಛಂದ ರಸ್ತೆಯಲ್ಲಿ ಮಲಗಿಬಿಡುವಷ್ಟು ಮನಸಾಗುತ್ತಿತ್ತು. ಕುಳಿತು, ನಿಂತು, ಕ್ಯಾಟ್ ವಾಕ್ ಮಾಡಿ ಎಂಜಾಯ್ ಮಾಡಿದೆವು. ಯಾಕೆಂದರೆ ನಮ್ಮನ್ನು ನೋಡುವವರು ಅಲ್ಲಿ ಯಾರೂ ಇರಲಿಲ್ಲ. ಹಾಗೆ ಮತ್ತೊಂದು ತಿರುವಿನತ್ತ ನಡೆದೆವು. ದಿಬ್ಬದಂತಿದ್ದ ಸ್ಥಳವನ್ನು ಏರಿಹೋದರೆ ಚಂದದ ಪುಟ್ಟ ಪುಟ್ಟ ದೇವಾಲಯಗಳು ಒಂದೇ ಕಾಂಪೌಂಡ್ ನಲ್ಲಿ ನಿರ್ಮಿಸಲಾಗಿತ್ತು. ದೂರದಿಂದ ಹೆಂಚಿನ ಮನೆಯ ರೀತಿ ಕಾಣುವ ಇವು ದೇವಾಲಯಗಳಾಗಿದ್ದವು. ನನ್ನ ಸ್ನಾನ ಮುಗಿದಿದ್ದರಿಂದ ದೇವರ ದರ್ಶನ ಮಾಡಿ ಸಂತೃಪ್ತಳಾದೆ.
ಬೇಗನೆ ಹೊರಡಬೇಕಿದ್ದರಿಂದ ಲಗುಬಗೆಯಲ್ಲಿ ಹೋಂ ಸ್ಟೇ ಸೇರಿಕೊಂಡೆವು. ರಾತ್ರಿ ಕಣ್ತುಂಬಿಕೊಳ್ಳಲಾಗದ ಹೋಂ ಸ್ಟೇ ಬೆಳಗಿನಲ್ಲಿ ಬಹಳವೇ ಆಕರ್ಷಕವಾಗಿ ಕಂಡಿತು. ಪುಟ್ಟ ಗಾರ್ಡನ್ ನಲ್ಲಿ ಲೋಟಸ್ ಕೊಳ, ಲಾನ್, ತೂಗುಬಿದ್ದ ವಿಧ ವಿಧವಾದ ಬಳ್ಳಿಗಳ ಗುಚ್ಛ, ಸುಂದರ ಶಿಲ್ಪದ ಕೆತ್ತನೆ ಯಾವುದೋ ಪುಟ್ಟ ಪ್ರಪಂಚಕ್ಕೆ ಕೊಂಡೊಯ್ಯುತ್ತಿತ್ತು. ಮನೆಯ ಒಳಾಂಗಣ ಕೂಡಾ ಅಚ್ಚುಕಟ್ಟಾಗಿತ್ತು. ಒಂದು ಸುತ್ತು ಸುತ್ತಿ ಬರುವ ವೇಳೆಗೆ ತಿಂಡಿ ಕೈ ಬೀಸಿ ಕರೆಯಿತು. ಬ್ರೆಡ್ ಜಾಮ್, ಉಪ್ಪಿಟ್ಟು, ಪೂರಿ, ವಿಶೇಷವಾಗಿ ಅವರ ಕೈತೋಟದ ಹಣ್ಣಿನ ಜ್ಯೂಸ್ ಎಲ್ಲವನ್ನೂ ಹೊಟ್ಟೆಗಿಳಿಸಿ ಕೊನೆಯ ಬಾರಿ ಗ್ರೂಪ್ ಫೋಟೋ ತೆಗಿಸಿಕೊಂಡು, ಮನೆಯ ಮಾಲೀಕರಿಗೆ ವಿದಾಯ ಹೇಳಿ, ನಮಗೆ ನಿಗದಿತವಾದ ಕಾರನ್ನು ಹತ್ತಿ ಕೂತೆವು.
ನಮ್ಮ ದಾರಿಯೀಗ ಕಲ್ ಪೆಟ್ಟಾ ಕಡೆ ಸಾಗಿತು. ಆ ದಾರಿಯಲ್ಲಿ ಬರುವ ಬಾಣಾಸುರ ಸಾಗರ ಡ್ಯಾಂ ನ ಬ್ಯಾಕ್ ವಾಟರ್ ಗೆ ಹೋಗುವುದಿತ್ತು. ಮಾನತ್ ವಾಡಿಯನ್ನು ಬಿಟ್ಟೆವು. ಸುಮಾರು ಎರಡುಗಂಟೆಯ ಹಾದಿಯದು. ಮಾನತ್ ವಾಡಿಯಲ್ಲಿ ಸಾಕಷ್ಟು ರಸ್ತೆ ರಿಪೇರಿಯ ಕೆಲಸ ನಡೆಯುತ್ತಿದ್ದರಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟೆವು. ಒಂದಷ್ಟು ದೂರ ಸವೆದೆವು. ರಸ್ತೆಯ ಇಕ್ಕೆಲಗಳಲ್ಲಿ ಒಳ್ಳೆಯ ಕೃಷಿ ಮಾಡಿದ ಹೊಲ ತೋಟಗಳು ಕಣ್ಣಿಗೆ ಹಬ್ಬವನ್ನುಂಟುಮಾಡಿದ್ದವು. ಬಾಳೆಗಳಂತೂ ನೋಡಲೇ ಚೆನ್ನ . ರಸ್ತೆ ಸಾಗಿತು. ಮೀನಗಡಿ ದಾಟಿದ ನಂತರ ಎಡಕಲ್ಲು ಗುಡ್ಡ ಕ್ಕೆ ಹೋಗುವ ಮನಸ್ಸಿತ್ತು. ಆದರೆ ಸಮಯದ ಅಭಾವದಿಂದ ಹೋಗದೇ ಕಲ್ಪೆಟ್ಟಾ ತಲುಪಿ ಬಾಣಾಸುರ ಡ್ಯಾಂ ನ ಹಾದಿ ಹುಡುಕಿದರೆ ನಮ್ಮ ಕಾರು ರೂಟ್ ತಪ್ಪಿದ್ದು ಗೊತ್ತಾಯಿತು. ಮತ್ತೆ ಹಿಂತಿರುಗಿ ಒಂದು ಗಂಟೆಯ ಹಾದಿ ಸವೆಸಿ ಬೇಕಿತ್ತು. ಡ್ರೈವರ್ ಒಪ್ಪದೇ ಕಲ್ಪೆಟ್ಟಾದಲ್ಲಿ ಇಳಿದುಬಿಟ್ಟೆವು. ಮಾನತ್ ವಾಡಿಯಲ್ಲೇ ರೂಟ್ ನಮಗೆ ಮಿಸ್ ಆದದ್ದು ತಿಳಿಯಲೇ ಇಲ್ಲ . ಉಳಿದವರು ಹೋಗಿಯಾಗಿತ್ತು. ಬೇಸರದಿಂದ ಇಳಿದು ಕಲ್ಪೆಟ್ಟಾದಲ್ಲಿ ಶಾಪಿಂಗ್ ಮುಗಿಸಿದೆವು.
ಊಟದ ಸಮಯಕ್ಕೆ ಎಲ್ಲಾ ಮತ್ತೆ ಕಲ್ಪೆಟ್ಟಾದಲ್ಲೇ ಸೇರಿ ಬಿಸಿ ಬಿಸಿ ಕುಸುಬಲಕ್ಕಿ ಅನ್ನ, ಮಜ್ಜಿಗೆ ಹುಳಿ ತಿಂದು ಬೇಗನೇ ಹೊರಟೆವು. ಮುಂದೆಯಾದರೂ ಸುಲ್ತಾನ್ ಬತ್ತೇರಿಗೆ ಹೋಗುವ ಎಂದು ಹೊರಟೆವು. ಸ್ವಲ್ಪ ದೂರ ಹೋದ ನಂತರ ಬಂಡೀಪುರ ಕಾಡಿನ ಹಾದಿಯನ್ನು ಇಂತಿಷ್ಟು ಸಮಯದಲ್ಲಿ ಬಿಡಬೇಕು. ತುಂಬಾ ಕತ್ತಲೆಯಾದರೆ ಕಷ್ಟ ಎಂದು ಚರ್ಚೆಯಾಗಿ ಕೊನೆಗೆ ಊರಿನ ಹಾದಿ ಹಿಡಿದೆವು.
ಬಂಡೀಪುರ ತಲುಪಿದಾಗ ಐದೂವರೆ ಆಗಿತ್ತು. ಪ್ರಾಣಿಗಳೆಲ್ಲಾ ತಮ್ಮ ಗೂಡು ಸೇರುವ ಸಮಯ… ಸಾಕಷ್ಟು ಪ್ರಾಣಿಗಳನ್ನು ನೋಡಬಹುದು ಎಂದು ಕೊಂಡ ನಮಗೆ ಒಂಟಿಸಲಗನ ಹೊರತಾಗಿ ಯಾವ ಪ್ರಾಣಿಯ ದರ್ಶನವೂ ಆಗಲಿಲ್ಲ. ಬಂಡೀಪುರ ಕಾಡಿನ ಸೊಬಗನ್ನು ಕಣ್ತುಂಬಿಕೊಂಡದ್ದೇ ಒಂದು ಭಾಗ್ಯ. ರಸ್ತೆಯಲ್ಲಿ ಕಾಫಿ ಕುಡಿದು ಎಲ್ಲರಿಗೂ ಕೊನೆಯ ವಿದಾಯ ಹೇಳಿ ಕಾರು ಹತ್ತಿದೆವು. ಏಕೆಂದರೆ ಮತ್ತೆ ಯಾರೂ ಭೇಟಿ ಆಗುವಂತಿರಲಿಲ್ಲ. ಅವರವರ ವೇಗಕ್ಕೆ ಕಾರುಗಳು ಚಲಿಸಬೇಕಿತ್ತು. ಇಳಿಯುವ ದಾರಿಯೂ ಬೇರೆಯೇ ಇತ್ತು.
ಎರಡುದಿನದ ಪ್ರವಾಸ ಮನಸಿಗೆ ಒಂದು ಮುದವನ್ನು ತಂದುಕೊಟ್ಟಿತ್ತು. ಎಂಟುಗಂಟೆಯ ಹೊತ್ತಿಗೆ ಮೈಸೂರು ಸೇರಿಕೊಂಡು ನಮ್ಮ ನಮ್ಮ ಮನೆಯ ದಾರಿ ಹಿಡಿದೆವು. ವಾಯ್ ನಾಡು ನೋಡಲು ಸುಮಾರು ಹದಿನೈದು ದಿನವಾದರೂ ಬೇಕು. ಅಷ್ಟು ಕಣ್ತುಂಬಿಕೊಳ್ಳುವ ಪ್ರದೇಶಗಳಿವೆ. ಒಮ್ಮೆ ಭೇಟಿ ಕೊಡಿ.
(ಮುಗಿಯಿತು.)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=37904
-ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ
ದೇವರ ನಾಡಿಲ್ಲಿ..ಒಂದು ದಿನ..ಏಳು ಕಂತುಗಳಲ್ಲಿ.
ತಮ್ಮ ಪ್ರವಾಸದ ಅನುಭವ ವನ್ನು … ಸೊಗಸಾದ ನಿರೂಪಣೆ ಯೊಂದಿಗೆ ..ಅನಾವರಣ ಗೊಳಿಸಿದ. ಗೆಳತಿ ಭಾಗ್ಯಾಳಿಗೆ ಧನ್ಯವಾದಗಳು
Beautiful. ಬಹಳ ಸುಂದವಾಗಿ ಮೂಡಿ ಬಂತು ಪ್ರವಾಸದ ಸರಣಿ.
ಪ್ರವಾಸದ ಚಿತ್ರಣ ಚೆನ್ನಾಗಿತ್ತು
ದಾರಿ ತಪ್ಪಿ ಬಾಣಾಸುರ ಅಣೆಕಟ್ಟು ನೋಡಲಾಗದದು ನಿಜಕ್ಕೂ ಬೇಸರವೆನಿಸಿತು. ಸರಳ, ಸುಂದರ ಪ್ರವಾಸ ಕಥನವನ್ನು ಆನಂದಿಸಿದೆವು…ಧನ್ಯವಾದಗಳು ಮೇಡಂ