ವಾಟ್ಸಾಪ್ ಕಥೆ 20: ಹೃದಯವಂತಿಕೆ

Share Button
ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಒಂದು ಕಾಡಿನಲ್ಲಿ ಬೃಹತ್ತಾದ ವೃಕ್ಷವಿತ್ತು. ಅದರ ಕೊಂಬೆ ರೆಂಬೆಗಳು ನಾಲ್ಕೂ ಕಡೆಗೆ ಹರಡಿಕೊಂಡಿದ್ದವು. ಇದರಿಂದ ಮರದ ವ್ಯಾಪ್ತಿ ವಿಶಾಲವಾಗಿತ್ತು. ಹಚ್ಚಹಸಿರು ಎಲೆಗಳಿಂದ ಕೂಡಿದ್ದ ಮರವು ಸುಂದರವಾಗಿತತು. ಹಣ್ಣು, ಕಾಯಿ, ಹೂಗಳಿಂದ ತುಂಬಿದ ಶಾಖೆಗಳಲ್ಲಿ ಹಲವಾರು ಪಕ್ಷಿಗಳು ಗೂಡುಕಟ್ಟಿಕೊಂಡು ವಾಸವಾಗಿದ್ದವು. ಕಾಡಿನ ಪ್ರಾಣಿಗಳೂ ಆಗಾಗ್ಗೆ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಹೋಗುತ್ತಿದ್ದವು. ದಾರಿಹೋಕರು, ದನಗಾಹಿಗಳಿಗೆ ಇದು ಖಾಯಂ ಆಶ್ರಯತಾಣವಾಗಿತ್ತು. ಅನೇಕ ಜಾತಿಯ ಪಕ್ಷಿಸಂಕುಲದಲ್ಲಿ ಒಂದು ಬಣ್ಣಬಣ್ಣದ ಮನಮೋಹಕವಾಗ ಗಿಳಿಯೂ ಇತ್ತು. ಅದಕ್ಕೆ ತನಗೆ ಆಶ್ರಯ ನೀಡುರುವ ಮರದ ಬಗ್ಗೆ ಬಹಳ ಅಭಿಮಾನ, ಪ್ರೀತಿ.

ಒಂದು ದಿನ ಎಲ್ಲಿಂದಲೋ ಹಾರಿಬಂದ ಮರಕುಟಿಕ ಹಕ್ಕಿಯೊಂದು ಮರದಬಳಿಗೆ ಬಂತು. ತನಗೆ ಅಲ್ಲಿರಲು ಆಶ್ರಯ ಕೊಡೆಂದು ಮರವನ್ನು ಕೇಳಿಕೊಂಡಿತು. ಮರವು ‘ಆಗಲಿ’ ಎಂದಿತು. ಇದನ್ನು ಕಂಡ ಗಿಳಿಯು ”ಮರವೇ, ಅದು ಮರಕುಟಿಕ ಹಕ್ಕಿ. ಮರವನ್ನೇ ಕುಕ್ಕಿ ಕುಕ್ಕಿ ತಿನ್ನುತ್ತದೆ. ಅದಕ್ಕೂ ನೀನು ಇರಲು ಅನುಮತಿ ಕೊಟ್ಟಿದ್ದು ಸರಿಯಲ್”ಲ ಎಂದಿತು. ಅದಕ್ಕೆ ಮರವು ”ಗಿಳಿಮರಿಯೇ ನನ್ನಲ್ಲಿ ನೂರಾರು ರೀತಿಯ ಪಕ್ಷಿಗಳು ವಾಸವಾಗಿವೆ. ಇದೂ ಒಂದು ರೀತಿಯ ಪಕ್ಷಿಯೇ. ಅದು ತನ್ನ ಆಹಾರಕ್ಕೋಸ್ಕರ ಕುಕ್ಕಿ ಅಲ್ಪಸ್ವಲ್ಪ ಕಾಂಡವನ್ನು ತಿಂದರೆ ನನಗೆ ನಷ್ಟವೇನೂ ಆಗದು” ಎಂದಿತು. ಮರದ ವಿಶಾಲ ಮನಸ್ಸನ್ನು ಕಂಡು ಗಿಳಿಗೆ ಆಶ್ಚರ್ಯವಾಯಿತು.

ಕೆಲವು ಕಾಲ ಹೀಗೇ ಕಳೆಯಿತು. ಆ ಮರಕ್ಕೆ ಏನೋ ರೋಗ ತಲೆದೋರಿ ಅದರ ಎಲೆಗಳೆಲ್ಲ ಉದುರಿಹೋದವು. ಹೂ, ಕಾಯಿ, ಹಣ್ಣುಗಳು ಮಾಯವಾದವು. ರೆಂಬೆ ಕೊಂಬೆಗಳೆಲ್ಲ ಬರಿದಾಗಿ ಕಲಾಹೀನವಾದವು. ಅಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳೆಲ್ಲ ಅಲ್ಲಿಂದ ಹಾರಿಹೋಗಿ ಬೇರಕಡೆ ಆಶ್ರಯ ಪಡೆದವು. ಮರಕುಟಿಗವೂ ಬೇರೆಕಡೆಗೆ ಹಾರಿಹೋಯಿತು. ಆದರೆ ಮುದ್ದು ಗಿಳಿಮರಿ ಮಾತ್ರ ಮರವನ್ನು ಬಿಟ್ಟು ಹೋಗಲಿಲ್ಲ. ಮರದ ಬಾಂಧವ್ಯ ಕಳೆದುಕೊಳ್ಳಲು ಅದಕ್ಕೆ ಇಷ್ಟವಾಗಲಿಲ್ಲ. ಹೀಗಿರುವಾಗ ಒಬ್ಬ ಬೇಟೆಗಾರ ಅಲ್ಲಿಗೆ ಬಂದ. ಅವನು ಬೋಳುಬೋಳಾಗಿರುವ ಮರದ ಕೊಂಬೆಯಮೇಲೆ ಸುಂದರವಾದ ಗಿಳಿಯೊಂದು ಮಾತ್ರ ಕುಳಿತಿರುವುದು ಕಾಣಿಸಿತು. ಆತನಿಗೆ ಆಶ್ಚರ್ಯವಾಯಿತು. ”ಏ ಗಿಳಿಮರಿ ಎಲ್ಲರೂ ಬೋಳಾದ ಈ ಮರವನ್ನು ಬಿಟ್ಟು ಹೋಗಿದ್ದರೂ ನೀನು ಮಾತ್ರ ಒಬ್ಬನೇ ಕುಳಿತಿದ್ದೀಯಲ್ಲಾ ಏನು ಕಾರಣ?” ಎಂದು ಕೇಳಿದನು.

ಗಿಳಿಯು ದುಃಖದಿಂದ ”ನೋಡಣ್ಣಾ ಈ ಮರ ಭವ್ಯವಾಗಿದ್ದಾಗ ನೂರಾರು ಜನ ಇದರ ಆಶ್ರಯ ಪಡೆದರು. ಆದರೆ ಅದಕ್ಕೆ ಏನೋ ರೋಗ ತಗುಲಿದೆ ಎಂದಾಗ ಯಾರೂ ಅದರ ಬಗ್ಗೆ ಆಲೋಚಿಸಲೇ ಇಲ್ಲ. ತಮ್ಮಬಗ್ಗೆ ಮಾತ್ರ ಯೋಚಿಸಿದರು. ಅವರಾರಿಗೂ ಉಪಕಾರಸ್ಮರಣೆಯೇ ಇಲ್ಲ. ನನಗೆ ತುಂಬ ದುಃಖವಾಗಿದೆ. ಈ ಮರಕ್ಕೆ ಏನಾದರೂ ಔಷಧಿ ಕೊಡಿಸಿ ರೋಗವನ್ನು ಹೋಗಲಾಡಿಸಬೇಕೆಂದು ನನಗೆ ಆಸೆ. ಆದರೆ ಏನು ಮಾಡಬೇಕೆಂದು ತೋಚುತ್ತಿಲ್ಲ. ನೀನಾದರೆ ಬುದ್ಧಿವಂತ ಇದಕ್ಕೇನಾದರೂ ಉಪಾಯವಿದ್ದರೆ ಮಾಡುತ್ತೀಯಾ?” ಎಂದು ಬೇಡಿಕೊಂಡಿತು.

ಬೇಡನಿಗೆ ಗಿಳಿಯ ಮಾತುಗಳನ್ನು ಕೇಳಿ ಮನಸ್ಸು ಕರಗಿತು. ಅವನು ಮರದ ಬುಡ, ರೆಂಬೆ, ಕೊಂಬೆಗಳನ್ನೆಲ್ಲ ಪರೀಕ್ಷಿಸಿದ. ಅದು ಪೂರ್ತಿಯಾಗಿ ಒಣಗಿರಲಿಲ್ಲ. ಆಗ ”ನೀನೇನೂ ಚಿಂತಿಸಬೇಡ ಗಿಳಿಮರಿ. ನನಗೆ ಒಬ್ಬ ಮರಗಳ ತಜ್ಞ ಗುರುತಿದ್ದಾನೆ. ಅವನನ್ನು ಕರೆತಂದು ಏನು ಮಾಡಲು ಸಾಧ್ಯ ಮಾಡುತ್ತೇನೆ” ಎಂದು ಆಶ್ವಾಸನೆ ನೀಡಿ ಹೋದ.

ಮರುದಿನ ಅವನೊಡನೆ ಮತ್ತೊಬ್ಬನನ್ನು ಕರೆತಂದ. ಆತನೂ ಮರದ ಬುಡ, ಕೊಂಬೆ, ರೆಂಬೆಗಳನ್ನೆಲ್ಲ ಕೂಲಂಕುಷವಾಗಿ ಪರಿಶೀಲಿಸಿದ. ಆಮೇಲೆ ಮರದ ಬೇರಿನ ಸಮೀಪದಲ್ಲಿ ತಗ್ಗೊಂದನ್ನು ತೆಗೆದು ಅದರೊಳಕ್ಕೆ ಏನೋ ಮದ್ದನ್ನು ತುಂಬಿ ಮುಚ್ಚಿದ. ಅದಕ್ಕೆ ನೀರು ಸುರಿದ. ಬೇಟಗಾರನಿಗೆ ಒದಷ್ಟು ಮದ್ದಿನ ಪುಡಿಯನ್ನು ಕೊಟ್ಟು ದಿನವಹಿ ಅದನ್ನು ಮರದ ಬುಡದಲ್ಲಿ ಯಾವ ಪ್ರಮಾಣದಲ್ಲಿ ಹೇಗೆ ಹಾಕಬೇಕೆಂದು ಹೇಳಿಕೊಟ್ಟ. ಅವನು ಹೋದಮೇಲೆ ಬೇಟೆಗಾರನು ಮರಕ್ಕೆ ಶುಶ್ರೂಷೆ ಮಾಡುವ ವಿಧಾನವನ್ನು ಗಿಳಿಮರಿಗೆ ಹೇಳಿಕೊಟ್ಟು ಮದ್ದಿನ ಪುಡಿಯನ್ನು ಜೋಪಾನವಾಗಿ ಉಪಯೋಗಿಸುವಂತೆ ಅದಕ್ಕೆ ಜವಾಬ್ದಾರಿ ವಹಿಸಿದ. ಗಿಳಿಮರಿಯು ಪ್ರೀತಿಯಿಂದ ಪ್ರತಿದಿನ ವೈದ್ಯ ಹೇಳಿದಂತೆಯೇ ಮರದ ಆರೈಕೆ ಮಾಡ ತೊಡಗಿತು. ಅದಕ್ಕೆ ಸರಿಯಾಗಿ ಒಂದು ಹದವಾದ ಮಳೆಕೂಡ ಸುರಿಯಿತು. ಹೀಗಾಗಿ ಔಷಧಿಯು ಮರದ ಬೇರಿನಿಂದ ಕಾಂಡಕ್ಕೆ, ರೆಂಬೆ ಕೊಂಬೆಗಳಿಗೆ ರವಾನೆಯಾಗಿ ಮರವು ಮತ್ತೆ ಚಿಗುರಲು ಪ್ರಾರಂಭವಾಯಿತು. ಕ್ರಮೇಣ ಹೊಸ ಎಲೆಗಳು ಮೂಡಿದವು. ಮರ ಹಸಿರಾಗಿ ಮೊದಲಿನಂತೆ ನಳನಳಿಸತೊಡಗಿತು. ಬೇಟಗಾರ ಮತ್ತೆ ಏನಾಗಿದೆಯೆಂದು ನೋಡಲು ಬಂದನು. ಮರವೆಲ್ಲ ಹಸಿರಿನಿಂದ ಕೂಡಿದ್ದು ತನ್ನ ಚಿಕಿತ್ಸೆ ಫಲಕೊಟ್ಟಿದ್ದು ನೋಡಿ ಸಂತೋಷವಾಯಿತು. ಆಗ ಗಿಳಿಮರಿಯು ”ಬೇಟಗಾರಣ್ಣಾ, ನೀನು ಮಾಡಿದ ಉಪಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ತುಂಬ ಧನ್ಯವಾದಗಳು” ಎಂದು ಕೃತಜ್ಞತೆ ಅರ್ಪಿಸಿತು.

ಮತ್ತೆ ಮರ ಮೊದಲಿನಂತಾಗಿದ್ದುದನ್ನು ಕಂಡು ವಲಸೆ ಹೋಗಿದ್ದ ಪಕ್ಷಿಗಳೆಲ್ಲ ವಾಪಸ್ಸಾದವು. ಮತ್ತೆ ಎಲ್ಲವೂ ಮೊದಲಿನಂತಾದದ್ದನ್ನು ಕಂಡು ಮರಕ್ಕೆ ಸಂತೋಷವಾಯಿತು. ಅದು ಗಿಳಿಮರಿಗೆ ”ಗೆಳೆಯನೆಂದರೆ ನೀನೇ. ಎಂತಹ ಹೃದಯವಂತ. ನಿನ್ನಿಂದ ನಾನು ಮೊದಲಿನಂತಾದೆ. ನಿನ್ನಂತಹವರು ಸಂಖ್ಯೆಯಲ್ಲಿ ಸಾವಿರ ಸಾವಿರವಾಗಲಿ” ಎಂದು ಹರಸಿತು. ಅದಕ್ಕುತ್ತರವಾಗಿ ಗಿಳಿಮರಿಯು ”ಮರವೇ ನನ್ನದೇನೂ ಹೆಚ್ಚುಗಾರಿಕೆಯಲ್ಲ. ನಾನು ಕೇಳಿಕೊಂಡ ತಕ್ಷಣ ಆ ಬೇಟೆಗಾರನು ಹೋಗಿ ವೃಕ್ಷತಜ್ಞನನ್ನು ಕರೆದು ತಂದ. ಅವರು ಕೊಟ್ಟ ಮದ್ದನ್ನು ನಾನು ನಿನ್ನ ಬೇರುಗಳಿಗೆ ಉಣಬಡಿಸಿದೆ. ನಿಜವಾದ ಹೃದಯವಂತನೆಂದರೆ ಬೇಟೆಗಾರನೇ ಸರಿ” ಎಂದಿತು.
ನಮಗೆ ಆಶ್ರಯ ಕೊಟ್ಟವರನ್ನು ನಾವೆಂದಿಗೂ ಮರೆಯಬಾರದು. ಅವರಿಗೆ ಕಿಂಚಿತ್ ಸಹಾಯ ಮಾಡುವ ಅವಕಾಶ ದೊರೆತರೆ ಖಂಡಿತ ಅದನ್ನು ಮಾಡಲೇಬೇಕು.

-ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

5 Responses

 1. ನಯನ ಬಜಕೂಡ್ಲು says:

  ಕಥೆ ಸುಂದರವಾಗಿದೆ ಅಷ್ಟೇ ಅಲ್ಲ ಹೃದಯಸ್ಪರ್ಶಿಯಾಗಿಯೂ ಇದೆ. ತುಂಬಾ ಇಷ್ಟವಾಯಿತು.

 2. Padmini Hegde says:

  ಕಥೆ ಬೋಧಪ್ರದ.

 3. ಶಂಕರಿ ಶರ್ಮ says:

  ಕಣ್ಣು ಮಂಜಾಗುವಂತೆ ಮಾಡಿತು ಮೇಡಂ, ನಿಮ್ಮ ಈ ಸರ್ತಿಯ ಕಥೆ.
  ಸರಳವಾದರೂ ಸುಂದರ ಸಂದೇಶ ಹೊತ್ತ ಕಥೆ ತುಂಬಾ ಇಷ್ಟವಾಯ್ತು.

 4. ಧನ್ಯವಾದಗಳು ನಯನಮೇಡಂ ಹಾಗೂ ಪದ್ಮಿನಿ ಮೇಡಂ

 5. ಧನ್ಯವಾದಗಳು. ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: