ಪಾಸಿಟಿವ್ ಸಂಪತ್ತು

Share Button


ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ, ಕೊಂಡುಕೊಳ್ಳುವ ವಸ್ತುಗಳಲ್ಲಿ ಮತ್ತು ವಾಸ್ತು ವಿಚಾರಗಳಲ್ಲಿ ಸಹ ಈ ವಿಭಾಗಕ್ರಮವಿಟ್ಟು, ಜ್ಯೋತಿಷ್ಯದ ಮುಂದುವರಿಕೆಯಾಗಿ ಸಲಹೆ ನೀಡುವ ಮಂದಿಗೇನೂ ಕಡಮೆ ಇಲ್ಲ. ಮನದಲ್ಲಿ ಬರೀ ಕಹಿ ವಿಷಯಗಳನ್ನು ತುಂಬಿಕೊಂಡು, ಆತ್ಮವಂಚನೆಗೈಯುತ್ತಾ, ಪರಮಾತ್ಮ ಮತ್ತು ಅಂತರಾತ್ಮಗಳಿಗೆ ಹೆದರದೇ, ಸ್ವಾರ್ಥ ಮತ್ತು ಅಧರ್ಮದಿಂದ ಬಾಳುವೆ ನಡೆಸುತ್ತಾ ಇರುವವರು ಯಾವ ರತ್ನ ಕೊಂಡರೇನು? ಯಾವ ಬೆರಳಿಗೆ ಎಂಥ ಹರಳಿನ ಉಂಗುರ ತೊಟ್ಟರೇನು? ಕುಬೇರನ ಮೂಲೆಯನ್ನೇ ಹುಡುಕಿ ವಿಶ್ರಮಿಸಿದರೇನು? ಗಾಳಿ ಬೆಳಕಿಲ್ಲದ ಮನೆ ಕಟ್ಟಿಕೊಂಡು, ವಾಸ್ತುವಿಗೆ ನೇಣು ಹಾಕಿಕೊಂಡು ಒಳ್ಳೆಯದಾಗಲೆಂದು ಹಪಿಸಿದರೇನು? ನೆಗಟೀವು ಪಾಸಿಟೀವಾಗದು! ನನ್ನೊಳಗೆ ಶುದ್ಧಾತ್ಮವಿಲ್ಲದಿರೆ ! ಏನೂ ಪವಾಡವಾಗದು, ಸ್ವತಃ ಪ್ರತ್ಯಕ್ಷವಾದರೂ ದೇವರೇ!!

ಈ ಅಖಂಡ ವಿಶ್ವದಲ್ಲಿ ಇರುವುದೆಲ್ಲ ಎನರ್ಜಿಯ ರೂಪಾಂತರವೇ! ಬರೀ ಬದಲಾವಣೆಯೇ. ಹುಟ್ಟುವುದು ಮತ್ತು ಸಾಯುವುದು ಎಂದರೆ ಶಕ್ತಿಯ ರೂಪಾಂತರ ಎಂದೇ ಅರ್ಥ. ಏನೋ ಇದ್ದದ್ದು ಇನ್ನೇನೋ ಆಗುವ ಪರಿವರ್ತನೆ. ಚರಂಡಿ ನೀರು ಬಿಸಿಲ ಝಳಕ್ಕೆ ಆವಿಯಾಗಿ ಮೋಡಗಟ್ಟಿ ಹನಿಯಾಗಿ ಮಳೆಯಾಗುವಾಗ ಆ ದುರ್ವಾಸನೆ ಎಲ್ಲಿ ಹೋಯಿತು? ಆಮ್ಲಮಳೆಗೆ ಈ ಮಾತು ಅನ್ವಯಿಸುವುದಿಲ್ಲ! ಅದೇ ಭೂಮಿಯೊಳಗಿಳಿದು ಶಿಲಾಪದರಗಳಲ್ಲಿ ಸಂಗ್ರಹವಾಗಿ ಒಳಗೇ ಭೋರ್ಗರೆಯುತ್ತಿರುವುದನ್ನು ನಾವು ಕೊಳವೆಬಾವಿಯಿಂದ ಮೇಲೆತ್ತಿದಾಗ ಬರುವುದು ಶುದ್ಧಜಲವೇ! ತುಂಬಾ ಆಳಕ್ಕೆ ಕೊರೆದು ತೆಗೆವ ನೀರಲ್ಲಿ ಜೀವ ತೆಗೆವ ಕೆಮಿಕಲ್ಲು ಇರುವುದು ಬೇರೆ ಮಾತು. ಅಂದರೆ ನಮಗರ್ಥವಾಗಿರುವ ನಿಸರ್ಗದ ವಿದ್ಯಮಾನವೆಂದರೆ ಬದಲಾವಣೆ ಜಗದ ನಿಯಮ. ಜೊತೆಗೆ ರೂಪಾಂತರ ವಿಶ್ವದ ಸಂಗಮ! ಅಣುಗಳ ಸಂಯೋಗ ಮತ್ತು ಸಂಭ್ರಮ!

ಹಾಗೆಯೇ ನಮ್ಮ ಮನಸ್ಸು, ದೇಹ, ಆತ್ಮ ಮತ್ತು ಚಿತ್ತ ಒಟ್ಟಾರೆ ಜೀವವು ಸಹ ಇಂಥ ರೂಪಾಂತರದ ಅವಸ್ಥೆಯೇ. ಜೀವ ಹೋದ ಮೇಲೆ ಈ ದೇಹ ಮಣ್ಣಲ್ಲಿ ಮಣ್ಣಾಗುವುದು. ಅಥವಾ ಬೆಂಕಿಗಾಹುತಿಯಾಗಿ ಬೂದಿಯಾಗಿ ಜಗದ ಕಣಕಣಗಳಲ್ಲಿ ಸೇರಿ ಅದರ ಸ್ವರೂಪವೇ ಆಗಿ ಬಿಡುವುದು. ಆವರೆಗೂ ದೇಹದೊಂದಿಗೆ ಸಹಬಾಳುವೆ ನಡೆಸಿದ ಜೀವಚೈತನ್ಯ ವಿಶ್ವಶಕ್ತಿಯಲ್ಲಿ ಒಂದಾಗುವುದು. ವಿಶ್ವವು ಶಕ್ತಿಪ್ರವಾಹದ ಅವ್ಯಾಹತ ವಿಕಾಸಯಾನ. ಹಲವು ಬಗೆಯ ಶಕ್ತಿತರಂಗಗಳು ಹೊಮ್ಮುತ್ತಲೇ ಇರುತ್ತವೆ. ನಮ್ಮ ಜೀವದೊಳಗಿನ ಶಕ್ತಿಯೂ ಇಂತಹುದೇ ಒಂದು ನಮೂನೆ. ವಾತಾವರಣದ ಪ್ರಭಾವಗಳಿಂದಾಗಿ ಇಂಥ ಶಕ್ತಿಯು ಸಕಾರಾತ್ಮಕ ಮತ್ತು ನಕಾರಾತ್ಮಕ ರೂಪದಲ್ಲಿ ವ್ಯಕ್ತವಾಗುವುದು. ನಮ್ಮ ಮನೆಯ ಮುಂದೆ ಬೆಳೆದ ಹುಲ್ಲಿನ ಗಾತ್ರ ಕೆಲವೇ ಇಂಚುಗಳಷ್ಟು; ಅದೇ ಮೈದಾನದಲ್ಲಿ ಇನ್ನೊಂದಷ್ಟು ಹೆಚ್ಚು. ಅರಣ್ಯದಲ್ಲಿ ಬೆಳೆದ ಹುಲ್ಲುಗಾವಲು ಹಲವು ಅಡಿಗಳಷ್ಟು ಎತ್ತರ! ಹಾಗೆಯೇ ನಮ್ಮ ಚಿತ್ತ ಮತ್ತು ಜೀವಚೈತನ್ಯ. ಎಲ್ಲವೂ ಪರಿಸರಸಂಬಂಧೀ. ಕಟುಕನ ಅಂಗಡಿಯ ಮುಂದಿರುವ ಗಿಳಿಯ ಮಾತೇ ಬೇರೆ; ಅದೇ ಋಷಿಯ ಆಶ್ರಮದ ಮುಂದಿನ ಗಿಳಿಯ ಮಾತೇ ಬೇರೆ. ಗಿಳಿಗಳೆರಡೂ ಒಂದೇ ತಾಯಿಯ ಮಕ್ಕಳಾದರೂ ಬೆಳೆಯುವ ಮತ್ತು ಕಲಿಯುವ ವಾತಾವರಣ ಬೇರೆ. ನಮ್ಮ ಸ್ವಭಾವಗಳು ಹುಟ್ಟಿನಿಂದ ಬಂದಿರುವಂಥವು ಎಂಬುದು ಎಷ್ಟು ಸತ್ಯವೋ ಮನಸ್ಸು ಮಾಡಿದರೆ ಇವನ್ನು ಬದಲಿಸಿಕೊಳ್ಳಲು ಸಾಧ್ಯ ಎಂಬುದೂ ಅಷ್ಟೇ ಸತ್ಯ. ಇಲ್ಲಿ ಮನಸ್ಸು ಮಾಡುವುದು ಎಂದರೆ ದೃಢನಿರ್ಧಾರ ಮತ್ತು ನಿರಂತರ ಎಚ್ಚರ. ಸಂಕಲ್ಪವನ್ನು ಅನುಷ್ಠಾನ ತರುವ ಕ್ರಿಯಾತ್ಮಕ ನಡೆ. ‘ನಿನ್ನ ಗೆಳೆಯರು ಯಾರೆಂದು ಹೇಳು; ನಿನ್ನನ್ನು ಕುರಿತು ನಾನು ಹೇಳಬಲ್ಲೆ’ ಎಂಬರ್ಥದ ನಾಣ್ನುಡಿಯೊಂದಿದೆ. ಸಸ್ಯ ಸಂಕುಲಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ವಿವೇಚನಾ ಶಕ್ತಿಯಿಲ್ಲ. ಹಾಗಾಗಿ ಅವುಗಳದು ಪರಿಸರಕ್ಕೆ ತಕ್ಕಂಥ ಬೆಳವಣಿಗೆ. ಆದರೆ ನಾವು ಹಾಗಲ್ಲ. ನಮಗೆ ಆಯ್ಕೆಯ ಅವಕಾಶವುಂಟು. ಸಮಾಜದ ಹಿತ ಮತ್ತು ಸಮಾಜ ಕಂಟಕ ಎರಡನ್ನೂ ವಿವೇಕದ ಸಹಾಯದಿಂದ ಗುರುತಿಸಬಲ್ಲೆವು. ಆ ಮಟ್ಟಿಗೆ ನಾವು ಸ್ವತಂತ್ರರು.

PC: Internet

ಈ ನೆಗಟೀವ್ ಮತ್ತು ಪಾಸಿಟಿವ್ ಶಕ್ತಿ ತರಂಗಗಳು ನಮ್ಮ ಜೀವಶಕ್ತಿಯ ಅಂತರಾಳವನ್ನೂ ಸ್ಪರ್ಶಿಸುವುದು ನಿಜ. ಆದರೆ ನಮ್ಮೊಳಗೆ ದೃಢತೆ ಇಲ್ಲದೇ ಹೋದರೆ ಇವುಗಳಿಗೆ ಬಹು ಬೇಗ ವಶವರ್ತಿಗಳಾಗುತ್ತೇವೆ. ನಮ್ಮ ಮನಸ್ಥಿತಿಯು ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯ! ಮನಸ್ಥಿತಿಯೆಂಬುದು ಮೂಲತಃ ನಂನಮ್ಮ ಮನೋಧರ್ಮ. ಪರಿಸ್ಥಿತಿಯೆಂಬುದು ನಮ್ಮ ಕೈಯಳತೆಯಲ್ಲಿ ಇಲ್ಲದ ಸಂದರ್ಭ, ಸನ್ನಿವೇಶ. ಇನ್ನೊಂದಿದೆ. ಇದರ ಹೆಸರು ಕಾಲಧರ್ಮ. ನನ್ನ ಬದುಕು ಮಾತ್ರವಲ್ಲ, ಭಾವನೆ, ಆಲೋಚನೆ, ಸರಿತಪ್ಪುಗಳ ವಿವೇಚನೆ ಎಲ್ಲವೂ ಕಾಲಧರ್ಮಕ್ಕೆ ಅನುಗುಣವಾಗಿ ವ್ಯಕ್ತ. ಕಾಲಧರ್ಮವು ನನ್ನನ್ನು ಪ್ರಭಾವಿಸಿದರೂ ನನ್ನೊಳಗೆ ದೃಢಚಿತ್ತವಿದ್ದರೆ, ಸಕಾರಾತ್ಮಕ ಶಕ್ತಿಬಿಂದುವನ್ನು ಗುರುತಿಸಿ ಗೌರವಿಸುವ ಮನಸ್ಥಿತಿ ಬೆಳೆಸಿಕೊಂಡರೆ ನಕಾರಾತ್ಮಕತೆಯಿಂದ ಬಿಡುಗಡೆ ಹೊಂದಬಹುದು. ಅಗ್ನಿಪರ್ವತ ಸಿಡಿದು ಜನರೆಲ್ಲ ಕೈಗೆ ಸಿಕ್ಕ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಮನೆಯಿಂದಾಚೆ ಓಡಿ ಹೋಗುತ್ತಿರುವಾಗಲೂ ಫಕೀರನೊಬ್ಬ ಕೋಲೂರಿಕೊಂಡು ಶಾಂತಚಿತ್ತದಿಂದ ನಡೆಯುತ್ತಿದ್ದನಂತೆ. ಅವನು ಉಳಿಸಿಕೊಳ್ಳಬೇಕಾಗಿರುವುದು ಏನೂ ಇರಲಿಲ್ಲ; ಗಳಿಸಿಕೊಂಡದ್ದೂ ಏನೂ ಇರಲಿಲ್ಲ! ಲೌಕಿಕಾರ್ಥದಲ್ಲಿ!!

ವಿಶೇಷವೆಂದರೆ ನಕಾರಾತ್ಮಕ ಶಕ್ತಿಯದು ರಭಸ. ಅದರದು ಹತ್ತು ಕಡೆ ಕಣ್ಣು ಮತ್ತು ದೃಷ್ಟಿ. ಎಲ್ಲವನೂ ನುಂಗಿ ಆಪೋಶನ ತೆಗೆದುಕೊಳ್ಳುವ ಬ್ಲಾಕ್ ಹೋಲ್ ಎಂಬ ವಿಶ್ವಾತ್ಮಕವಿದು; ಭಯಾನಕವಾದುದು. ಬಹು ದೊಡ್ಡ ನಕ್ಷತ್ರಗಳನ್ನೂ ನುಂಗಿ ನೊಣೆಯುವಂಥ ಕಾಲರುದ್ರವೇ ಈ ಕಪ್ಪುರಂಧ್ರ. ಆಕಾಶಕಾಯಗಳನ್ನು ತನ್ನೊಳಗೆ ಗರ್ಭೀಕರಿಸಿಕೊಳ್ಳುವ ಮಹಾಕಾಲನಿವ!

ಬಹು ಬೇಗ ನ್ಯೂಸ್ ಆಗುವ, ವ್ಯಾಪಿಸುವ ನೆಗಟೀವ್ ಫೋರ್ಸ್‌ಗೆ ಬಲವೂ ಹೆಚ್ಚು. ಅದಕಾಗಿಯೇ ಒಳ್ಳೆಯದು ಮತ್ತು ಒಳ್ಳೆಯ ಮಂದಿ ಬೆಳಕಿಗೆ ಬರುವುದಿಲ್ಲ! ಹತ್ತಾರು ಬಾರಿ ಮೆಚ್ಚಿ ಮಾತಾಡಿದವರು ಒಮ್ಮೆ ಟೀಕಿಸಿದರೂ ನಮ್ಮ ಮನಸ್ಸು ಮುದುಡುತ್ತದೆ. ನೆಗಟೀವ್‌ಗೆ ನಾವು ಬೇಗ ತೆರೆದುಕೊಂಡಷ್ಟು ಪಾಸಿಟಿವ್‌ಗೆ ಒಲಿಯುವುದಿಲ್ಲ. ಕೆಡುಕನ್ನು ಗುರುತಿಸುವಷ್ಟು ಬೇಗ ಸಜ್ಜನರನ್ನು ಗುರುತಿಸಲಾರೆವು. ಗುರುತಿಸಿದರೂ ಅವರ ಸಜ್ಜನಿಕೆಯನ್ನು ಗುಮಾನಿಯಿಂದ ನೋಡುವುದೇ ಹೆಚ್ಚು. ಇದಕ್ಕೆ ನಕಾರಾತ್ಮಕತೆಯ ಸಂಕೀರ್ಣ ಜಾಲವೇ ಕಾರಣ. ಹಾಗಾಗಿ ನಾವು ನಮ್ಮ ನಡವಳಿಕೆ ಮತ್ತು ವರ್ತನೆಗಳಿಗೆ ಪರಿಸರದ ಪ್ರಭಾವವನ್ನು ಕಾರಣವಾಗಿಸದೇ ನಮ್ಮ ಆಂತರ್ಯವನ್ನು ಬಲಗೊಳಿಸಿಕೊಳ್ಳುವತ್ತ ಮುಂದಡಿಯಿಡಬೇಕು. ಸ್ವತಃ ನಾವೇ ಸಕಾರಾತ್ಮಕ ಶಕ್ತಿ ತರಂಗಗಳ ಪ್ರವಾಹವಾಗಬೇಕು. ಮಾಸ್ತಿಯವರ ಕತೆಗಳನ್ನು ಓದುತಿದ್ದರೆ ಇದರ ಮಹತ್ವವನ್ನು ಮನಗಾಣುತ್ತೇವೆ.

  ಸ್ವಾಮಿ ರಾಮತೀರ್ಥರು ಹೇಳಿದ ಒಂದು ದೃಷ್ಟಾಂತ: ಕಳ್ಳನೊಬ್ಬ ಕದ್ದು ಓಡುತ್ತಿರುವಾಗ ಜನರ ಕೈಗೆ ಸಿಕ್ಕಿ ಬೀಳುವ ಭಯದಿಂದಾಗಿ ಆಶ್ರಮವೊಂದರಲ್ಲಿ ನಡೆಯುತ್ತಿದ್ದ ಸತ್ಸಂಗ ಗೋಷ್ಠಿಯಲ್ಲಿ ನುಸುಳಿ ತಲೆ ಮರೆಸಿಕೊಳ್ಳುತ್ತಾನೆ. ಸತ್ಸಂಗ ಮುಗಿದ ನಂತರ ಬಂದವರೆಲ್ಲ ಆತನನ್ನು ನೋಡಿ ‘ಓ! ಏನಾಶ್ಚರ್ಯ, ಒಳ್ಳೆಯವನಾಗಿದ್ದೀಯಲ್ಲ! ಸತ್ಸಂಗಕ್ಕೆ ಬರುವಷ್ಟು!’ ಎಂದು ಚಕಿತರಾಗಿ ‘ನಿನಗೆ ಒಳ್ಳೆಯ ಬುದ್ಧಿ ಬಂದಿದೆ, ಒಳ್ಳೆಯದಾಗಲಿ’ ಎಂದು ಹಾರೈಸಿದರಂತೆ. ಅವರೆಲ್ಲರ ಪ್ರೀತಿಪೂರ್ವಕ ಹಾರೈಕೆಗಳಿಂದ ಅವನ ಮನಸ್ಸು ಬದಲಾಗಿ ಕಳ್ಳತನ ಮಾಡುವುದನ್ನು ಬಿಟ್ಟು ಬಿಟ್ಟನಂತೆ!

  ಅದಕ್ಕಾಗಿಯೇ ಲೋಕದಲ್ಲಿ ಒಳ್ಳೆಯದನ್ನು ಗುರುತಿಸಿ ಗೌರವಿಸುತ್ತಿರಬೇಕು. ಕೆಟ್ಟದ್ದನ್ನು ನಿರ್ಲಕ್ಷಿಸಬೇಕು. ಇದಕ್ಕಾಗಿ ಮನದಲ್ಲಿ ಶಾಂತಿ, ನೆಮ್ಮದಿ, ಕರುಣೆ, ನಿಗರ್ವೀತನ ಮತ್ತು ಆತ್ಮಾವಲೋಕನಗಳೆಂಬ ಗುಣಗಳು ಬೇಕು. ನಾವು ಒಳ್ಳೆಯವರಾಗಬೇಕಾಗಿರುವುದು ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಎಂಬ ಪರಿಜ್ಞಾನ ಮುಖ್ಯ. ನಮ್ಮೊಳಗೇ ನೆಗಟೀವ್ ಇದ್ದಾಗ ಬಹು ಬೇಗ ಜಗತ್ತಿನ ನಕಾರಾತ್ಮಕತೆಗೆ ತೆರೆದುಕೊಳ್ಳುತ್ತೇವೆ, ಅದನ್ನೇ ಪೋಷಿಸುತ್ತೇವೆ, ಹರಡುತ್ತೇವೆ ಮತ್ತು ಅದೇ ಆಗಿಬಿಡುತ್ತೇವೆ!

-ಡಾ. ಹೆಚ್ ಎನ್ ಮಂಜುರಾಜ್

5 Responses

 1. ನಯನ ಬಜಕೂಡ್ಲು says:

  ಉತ್ತಮ ಲೇಖನ

 2. MANJURAJ H N says:

  ಬರೆಹ ಪ್ರಕಟಿಸಿದ್ದಕ್ಕೆ ಸುರಹೊನ್ನೆಯ ಬಳಗಕ್ಕೆ ಧನ್ಯವಾದಗಳು

 3. Padmini Hegde says:

  ಚೆನ್ನಾಗಿದೆ

 4. ಶಂಕರಿ ಶರ್ಮ says:

  ನಕಾರಾತ್ಮಕ ಭಾವನೆಗಳಿಗೆ ಕಡಿವಾಣ ಹಾಕಿ ಸಕಾರಾತ್ಮಕ ಭಾವನೆಗಳಿಗೆ ನಮ್ಮನ್ನು ನಾವು ತೆರೆದುಕೊಂಡಾಗಲೇ ಎಲ್ಲವೂ ಸಾಧ್ಯವಾಗುವುದು…ಉತ್ತಮ ಚಿಂತನೆ ಹಾಗೂ ಸಂದೇಶ ಹೊತ್ತ ಲೇಖನ ಚೆನ್ನಾಗಿದೆ.

 5. ಸಕಾರಾತ್ಮಕ ನಕಾರಾತ್ಮಕ.. ಸಂಗತಿಗಳ ಬಗ್ಗೆ ಚಿಂತನೆ ಗೆ ಹಚ್ಚವ ಬರಹ ಸೊಗಸಾಗಿದೆ..ಸಾರ್.. ಅಭಿನಂದನೆಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: