ಕಾದಂಬರಿ : ‘ಸುಮನ್’ – ಅಧ್ಯಾಯ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸುಮನ್ ಹಾಗೂ ಗಿರೀಶ ಮೊದಲೇ ಕಾದಿರಿಸಿದ “ಹನಿಮೂನ್ ಟ್ರಿಪ್” ಹಿಡಿಯಲು ಬೆಂಗಳೂರಿಗೆ ಧಾವಿಸಿದರು. ಅಂದೇ ರಾತ್ರಿ ಲಂಡನ್‍ಗೆ ತೆರಳಿದರು. ಲಂಡನ್‌ನಿನಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ, ಬಿಗ್ ಬೆನ್, ವಿಶ್ವ ವಿಖ್ಯಾತ ಲಂಡನ್ ಸೇತುವೆ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಸೇರಿದಂತೆ ಮೂರು ದಿನದಲ್ಲಿ ಏನೇನು ನೋಡಬಹುದೋ ಎಲ್ಲಾ ನೋಡಿದರು. ಸುಮನ್ ಆಂಗ್ಲ ಕಥೆ ಕಾದಂಬರಿಗಳಲ್ಲಿ ಓದಿದ ಜಾಗಗಳೆನೆಲ್ಲ ನೋಡಿ ತನ್ನನ್ನು ತಾನು ಮರೆತು ಚಿಕ್ಕ ಹುಡುಗಿಯಂತೆ ಸಂತಸಪಟ್ಟಳು. ಅಲ್ಲಿಂದ ಇಂಗ್ಲಿಷ್ ಚಾನಲ್ ಕೆಳಗೆ ಸಮುದ್ರದಡಿ ಕಟ್ಟಿರುವ ಯುರೋ ರೈಲಿನಲ್ಲಿ ಪ್ಯಾರಿಸ್‍ಗೆ ಬಂದಿಳಿದರು. ಅಲ್ಲಿ ಕಂಬಗಳ ಮೇಲಿಟ್ಟಿರುವ ಚಿನ್ನದ ಬೊಂಬೆಗಳನ್ನು ಬೆರಗುಗಣ್ಣನಿಂದ ನೋಡಿ ಚಾಂಪ್ಸ್ ಎಲಿಸೀಸ್, ವರ್ಸೈಲ್ಸ್ ಅರಮನೆಗಳಿಗೆ ಭೇಟಿ ನೀಡಿ ಎರಡು ದಿನಗಳ ನಂತರ ಸ್ವಿಟ್ಜರ್ಲೆಂಡಿನ ರಾಜಧಾನಿ ಜಿನೀವಾಗೆ ಬಂದಿಳಿದರು. ಅಲ್ಲಿಯ ಸುಂದರವಾದ ಕಣಿವೆಗಳಲ್ಲಿನ ಡೈರಿಗಳಲ್ಲಿ ಮಾಡುವ ಚಾಕಲೇಟ್ ಅನ್ನು ಸುಮನ್ ಎಷ್ಟು ತಿಂದರೂ ಸಾಲದೆನ್ನುವಷ್ಟು ತಿಂದು “ಉಂಡೂ ಹೋದ ಕೊಂಡೂ ಹೋದ” ಎನ್ನುವ ಹಾಗೆ ಡಬ್ಬಗಟ್ಟಲೆ ಕೊಂಡಳು. ಗಿರೀಶ ಅವಳ ಸಂತೋಷದಲ್ಲಿ ತಾನೂ ಮುಳುಗಿ ಹೋದ. ಹೋದಲೆಲ್ಲ ಅವರಿಗಾಗಿ ಉಕೃಷ್ಟ ಹೋಟೆಲಗಳಲ್ಲಿ ಕೋಣೆಯನ್ನು ಕಾಯ್ದಿರಿಸಿದ್ದರು. ಆ ಹೋಟೆಲ್‍ಗಳ ವೈಭವವನ್ನು ಎರಡು ಕಣ್ಣುಗಳಲ್ಲಿ ನೋಡಿಯೇ ಆನಂದಪಡಬೇಕು. ಹೀಗೆ ಮಧುಚಂದ್ರದ ಜೇನು ಹೀರಿದ ಸುಮನ್ ಗಿರೀಶನೊಂದಿಗೆ ಹತ್ತು ದಿನದ ನಂತರ ಭಾರತಕ್ಕೆ ಹಿಂದುರಿಗಿದಳು.
ಸುಮನ್ ಹಾಗೂ ಗಿರೀಶ ಬೆಂಗಳೂರಿನಲ್ಲಿ ಮನೆಗೆ ಬಂದಾಗ ರಾತ್ರಿ ಎಂಟೂವರೆ. ಸುಸ್ತಾಗಿದ್ದರಿಂದ ನಿದ್ದೆ ಬಂದೇ ಬಿಟ್ಟಿತು. ಮನೆಯಲ್ಲಿ ಒಬ್ಬ ಅಡುಗೆಯವನಿದ್ದಾನೆ ಎಂದಷ್ಟೆ ಗಮನಿಸಿದ್ದ ಸುಮನ್ ಕನಸಿನಲ್ಲಿ ಲಂಡನ್‍ಗೆ ಇನ್ನೊಮ್ಮೆ ಭೇಟಿ ನೀಡಿದಳು. ಸುಮನ್‍ಗೆ ಎಚ್ಚರವಾಗುವ ಹೊತ್ತಿಗೆ ಗಿರೀಶ ಎಚ್ಚರಗೊಂಡು ಅವಳನ್ನೆ ನೋಡುತ್ತ ಮಲಗಿದ್ದ. ಕಣ್ಣು ಬಿಟ್ಟ ಸುಮನ್ ನಾಚಿಕೆಯಿಂದ ಏಳಲು ಹೊರಟಳು. ಗಿರೀಶ ಅವಳನ್ನು ತಡೆಯುತ್ತ “ಎ ಸುಮನ್ ಯಾಕೆ ಏಳ್ತಿ ರಂಗಪ್ಪ ಇಲ್ಲಿಗೆ ಬೆಡ್ ಕಾಫಿ ತರ್ತಾನೆ ಇರು” ಎಂದು ಲಲ್ಲೆಗರೆದ. ಸುಮನ್ ಗಾಬರಿಯಿಂದ ಕೊಸರಿಕೊಂಡು ಹಾಸಿಗೆಯಿಂದ ಎದ್ದು ಹೊದಿಕೆಯನ್ನು ಮಡಿಸಿ “ನಾವು ಮಲಗಿರುವಾಗ ಅವನಗಿಲ್ಲೇನು ಕೆಲಸ ಛೀ” ಎನ್ನುತ್ತ ಬಚ್ಚಲಿಗೆ ಓಡಿದಳು. ಗಿರೀಶ ಅವಳನ್ನೆ ನೋಡುತ್ತ ಮಲಗಿದ್ದ.
ಬೆಳಗ್ಗೆ ಗಿರೀಶ ಅವಳಿಗೆ ಒಂದು ಆಶ್ಚರ್ಯ ಕೊಟ್ಟ. ಅವತ್ತು ಲೀ ಮೆರಿಡಿಯನ್‍ನಲ್ಲಿ ತನ್ನ ಸ್ನೇಹಿತರು ಹಾಗೂ ಆಫೀಸಿನವರಿಗೆ ತಮ್ಮ ಮದುವೆಯ ರಿಸೆಪ್ಶನ್ ಇರುವುದಾಗಿ ಹೇಳಿದ. ಸುಮನಳನ್ನು ತಿಂಡಿಯ ನಂತರ ಫೋಲಿಯೋ ಅಂಗಡಿಗೆ ಕರೆದುಕೊಂಡು ಹೋಗಿ ಅವಳ ಬಣ್ಣಕ್ಕೆ ಮೆರಗು ನೀಡುವ ಕಡು ನೀಲಿ ಬಣ್ಣದ ಘಾಗ್ರಾ ಚೋಲಿ ಕೊಡಿಸಿದ ಗಿರೀಶ. ಲಂಗದ ಮೇಲೆಲ್ಲ ಸ್ವಾರೊಸ್ಕಿ ಹರಳುಗಳನ್ನು ಅಲ್ಲೊಂದು ಇಲ್ಲೊಂದು ಆಕಾಶದಲ್ಲಿ ನಕ್ಷತ್ರಗಳಂತೆ ಹೊಲಿದಿದ್ದರು. ಚೋಲಿಯ ಮೇಲೆ ಕತ್ತಿನ ಸುತ್ತ ದಟ್ಟವಾದ ಅದೇ ಹರಳುಗಳ ಕುಸುರಿ ಕೆಲಸ. ಅವೆರಡರ ತಲೆ ಮೇಲೆ ಹೊಡೆದಂತಿತ್ತು ಅದರ ಜೊತೆಗಿನ ದಾವಣಿ. ಬ್ಯೂಟಿ ಪಾರ್ಲರ್ ಹುಡುಗಿ ಕೈಯಲ್ಲಿ ಜಡೆಗೆ ಮುತ್ತುಗಳ ಅಲಂಕಾರ ಮಾಡಿಸಿಕೊಂಡು ಗಿರೀಶ ಮದುವೆಯಲ್ಲಿಟ್ಟ ವಜ್ರದ ಸ್ಟಾರ್‌ಬರ್ಸ್ಟ್ ಒಡವೆಯನ್ನು ಹಾಕಿಕೊಂಡು ತೆಳುವಾಗಿ ಮೆಕಪ್ ಮಾಡಿ ಘಾಗ್ರಾ ಚೋಲಿ ಧರಿಸಿ ಸುಮನ್ ಗಿರೀಶ ಕೈ ಹಿಡಿದು “ಧ ಗ್ರಾಂಡ್ ಬಾಲ್‍ರೂಮ್” ಗೆ ಕಾಲಿರಿಸಿದಳು. ಆ ಝಗಝಗಿಸುವ ಬೆಳಕಿನಲ್ಲಿ ಬೆನ್ನ ಹಿಂದಿನಿಂದ ಮುಂದೆ ಬಂದು ಎರಡು ಕೈ ಮೇಲೆ ನವಿರವಾಗಿ ಬಿದ್ದ ದಾವಣಿಯನ್ನು ಲಾವಣ್ಯದಿಂದ ಹಿಡಿದು ಬರುತ್ತಿರುವ ಸುಮನಳನ್ನು ನೋಡಿ ಗಂಡಸರು ಅರೆಕ್ಷಣ ಉಸಿರಾಡುವುದನ್ನೇ ಮರೆತು ಅವಳನ್ನು ನಿಬ್ಬೆರಗಾಗಿ ನೋಡಿದರೇ ತಮ್ಮ ಕಣ್ಣು ತೆಗೆಯಲೂ ಆಗದೆ ಹೊಟ್ಟೆಯಲ್ಲಿ ಅಸೂಯೆಯ ಕಿಡಿ ಹತ್ತಿದ ಹೆಂಗಸರು ಮುಖದ ಮೇಲೆ ಒಂದು ಕೃತಕ ನಗೆ ಬಲವಂತವಾಗಿ ಲೇಪಿಸಿಕೊಂಡರು. ಸುಮನ್‍ಗೆ ಇದ್ಯಾವುದರ ಅರಿವೇ ಇಲ್ಲ. ಶುಭ ಕೋರಲು ಬಂದ ಎಲ್ಲರನ್ನು ಪರಿಚಯಿಸುವ ಪ್ರೀತಿಯ ಗಿರೀಶನ ಜೊತೆ ಕೋಣೆಯ ತುಂಬ ಓಡಾಡಿ ಸಂಭ್ರಮಿಸಿ ಎಲ್ಲರನ್ನು ಭೇಟಿಯಾದರೂ ಅವಳಿಗೆ ಮಾರನೆಯ ದಿನ ಯಾವ ಮುಖಕ್ಕೆ ಯಾವ ಹೆಸರು ಹೊಂದಿಸಲು ಬರದು. ಆ ಸಂಜೆ ಒಂದು ಕನಸಿನಂತೆ. ಮದ್ಯ ಮಾಂಸ ಕೂಡಿದ ಭೋಜನದಲ್ಲಿ ಬರಿ ಸಿಹಿ ಮತ್ತು ಐಸ್ ಕ್ರೀಮ್ ತಿಂದ ಜ್ಞಾಪಕ ಅವಳಿಗೆ. ಇಷ್ಟು ಜನರ ಮಧ್ಯ ತನ್ನವರು ಯಾರೂ ಇಲ್ಲ ಎಂದು ಬಂದು ಹೋಗುವ ದುಃಖದ ಛಾಯೆ, ಇದೊಂದೇ ಜ್ಞಾಪಕ.
ಗಿರೀಶಗೆ ಇನ್ನೆರಡು ದಿನ ರಜ ಇತ್ತು. ಆ ರಜದಲ್ಲಿ ಸುಮನ್ ಜೊತೆ ಬ್ಯಾಂಕಿಗೆ ಹೋಗಿ ಇಬ್ಬರ ಹೆಸರಿನಲ್ಲಿ ಒಂದು ಜಂಟಿ ಖಾತೆ ತೆಗೆದರು. ಬ್ಯಾಂಕಿನ ಒಂದು ಕ್ರೇಡಿಟ್ ಕಾರ್ಡ್ ಅವಳ ಕೈಗಿತ್ತು “ನೀನು ಇದರಿಂದ ಎಷ್ಟು ಬೇಕು ಅಷ್ಟು ಖರ್ಚು ಮಾಡು” ಅಂದ ಗಂಡನ ಕೈಯನ್ನು ಸುಮನ್ ಪ್ರೀತಿಯಿಂದ ಅಮುಕಿದಳು. ಮನೆಗೆ ಬಂದು ಬ್ಯಾಂಕಿನಲ್ಲಿ ಎಷ್ಟು ಹಣ ಇದೆ ಎಂದು ಪಾಸ್‍ಬುಕ್ ನೋಡಿದ ಸುಮನ್‍ಗೆ ಮೈ ಜುಮ್ ಎಂದಿತು. ಅವರ ಖಾತೆಯಲ್ಲಿ ಐವತ್ತು ಲಕ್ಷ ರೂಪಾಯಿ ಇತ್ತು. ನನಗೇಕೆ ಇಷ್ಟೊಂದು ಹಣ ಎಂದಕೊಂಡಳು ಸುಮನ್ ಬೆರಗಿನಿಂದ.
ಮಾರನೆಯ ದಿನ ಗಿರೀಶ ಆಫೀಸಿಗೆ ಹೋಗಿದ್ದ. ಮನೆಯನ್ನೆ ನೋಡದಿದ್ದ ಸುಮನ್ ಸಂಭ್ರಮದಿಂದ ಮನೆಯ ಪರಿಚಯ ಮಾಡಿಕೊಂಡಳು. ಗೇಟಿಗೆ ತಾಗುವಂತೆ ಕಾಂಪೌಂಡಿನಲ್ಲಿ ಒಂದು ಪುಟ್ಟ ನಾಯಿಯ ಮನೆ ಇತ್ತು. ಅದರಲ್ಲಿ ಒಂದು ಬಿಳಿ ಪಮೇರಿಯನ್ ನಾಯಿ. ಟಾಮಿಯ ಮೈದಡವಿ ಸುಮನ್ ತೋಟವನ್ನೊಮ್ಮೆ ನೋಡಲು ಹೊರಟಳು. ಟಾಮಿ ಅವಳ ಹಿಂದೆ ಮುಂದೆ ನೆಗೆಯುತ್ತ ಕುಣಿಯುತ್ತ ಹಿಂಬಾಲಿಸಿತು. ಹೂವು ಹಣ್ಣಿನ ಗಿಡಗಳಿಗಿಂತ ಶೋಕಿಯ ಕ್ರೋಟನ್, ಅಲಂಕಾರಿಕ ಕ್ಯಾಕ್ಟಸ್ ಗಿಡಗಳೇ ತುಂಬಿದ್ದವು. ಮನೆಯ ಒಳಗೆ ಪ್ರವೇಶಿಸುತ್ತಿದಂತೆ ಒಂದು ದೊಡ್ಡ ಲಿವಿಂಗ್ ರೂಮು. ಕೋಣೆಯ ಒಂದು ಕಡೆ ದೊಡ್ಡದಾದ ಕರಿ ಮರದ ಸುಂದರವಾದ ಸೋಫಾ ಸೆಟ್. ಒಂದು ನಲವತ್ತು ಇಂಚಿನ ಸೋನಿ ಬಣ್ಣದ ಟಿವಿ. ಅದಿಟ್ಟ ಗಾಜಿನ ಮೇಜಿನ ಕೆಳಗಿನ ಹಂತದಲ್ಲಿ ಅದೇ ಕಂಪನಿಯ ಡಿವಿಡಿ ಪ್ಲೇಯರ್. ಗೋಡೆಗಳ ಮೇಲೆ ಮಂಜಿತ್ ಬಾವಾ, ಅಂಜು ಇಲಾ ಮೆನನ್, ಜಹಾಂಗೀರ ಸಭಾವಾಲಾ ಹಾಗೂ ಎಮ್.ಎಫ್.ಹುಸೇನರ ಕಲಾಕೃತಿಗಳು ಅವಳ ಗಮನ ಸೆಳೆಯಿತು. ಟಿವಿ ಹಾಗೂ ಸೋಫಾ ಸೆಟ್ ಮಧ್ಯದಲ್ಲಿ ಗೋಡೆಗೆ ಆನಿಸಿ ಒಂದು ಚಿಕ್ಕ ಕಾಫಿ ಟೇಬಲ್ ಇತ್ತು. ಅದರ ಮೇಲೆ ಭಾರತದ ಪ್ರವಾಸಿ ತಾಣಗಳ ದೊಡ್ಡ ದೊಡ್ಡ ಸುಂದರ ಚಿತ್ರಗಳಿರುವ ಕಾಫಿ ಟೇಬಲ್ ಪುಸ್ತಕ. ಕೈಗೆ ಸಿಕ್ಕಿದನ್ನೆಲ್ಲ ಓದುವ ಹುಚ್ಚಿದ್ದ ಸುಮನ್ ಪುಸ್ತಕ ಹಿಡಿದು ಸೋಫಾ ಮೇಲೆ ಕುಳಿತಳು. ಟಾಮಿ ಅವಳನ್ನೆ ನೋಡುತ್ತ ಅವಳ ಕಾಲಡಿ ರತ್ನಗಂಬಳಿ ಮೇಲೆ ಕೂತ್ತಿತ್ತು. ಹತ್ತು ನಿಮಿಷ ಪುಸ್ತಕ ನೋಡಿ ಸುಮನ್ ಟಾಮಿ ಸಮೇತ ಒಳ ನಡೆದಳು. ಅದು ಊಟದ ಕೋಣೆ. ಅಲ್ಲಿ ಕರಿ ಮರದ ಅಂಡಾಕಾರದ ಸುಂದರವಾದ ಊಟದ ಮೇಜು. ಗಾಜಿನ ಬೀರು ಪಕ್ಕದ ಗೋಡೆಯಾಗಿದ್ದು ಅದರ ತುಂಬ ಪಿಂಗಾಣಿ ಸಾಮಾನುಗಳಿದ್ದವು. ಒಂದು ಹಿತಕಾರಿ ಊಟದ ಸೆಟ್, ಅದರ ಪಕ್ಕ ಒಂದು ಬೆಳ್ಳಿಯ ಊಟದ ಸೆಟ್ ಅವಳ ಕಣ್ಣ ಸೆಳೆದವು.
ಅಲ್ಲಿಂದ ಮುಂದೆ ಹೋದರೆ ಅಡುಗೆಮನೆ. ಅದು “ಮಾಡ್ಯುಲರ್ ಕಿಚನ್” ಶೈಲಿ. ನಾಲ್ಕು ಒಲೆಗಳಿರುವ ಕಿಚನೆಟ್, ಮೈಕ್ರೋವೇವ್ ಓವನ್ ಅದರ ಪಕ್ಕ ಟೋಸ್ಟರ್ ಅದರ ಪಕ್ಕ ಕಾಫಿ ಮೇಕರ್ ಎಲ್ಲಾ ಕಟ್ಟೆಯ ಮೇಲೆ ಆಕರ್ಷಕವಾಗಿ ಜೋಡಿಸಲಾಗಿತ್ತು. ಇದನ್ನೆಲ್ಲ ನೋಡಿ ಗಂಡನಿಗೆ ರುಚಿ ರುಚಿಯಾಗಿ ಅಡುಗೆ ಮಾಡಬೇಕೆಂಬ ಆಸೆ ಇನ್ನಷ್ಟು ಪ್ರಭಲವಾಯಿತು. ಅಡುಗೆ ರಂಗಪ್ಪ ಅವಳನ್ನು ನೋಡಿ “ಹೀ” ಎಂದು ಹಲ್ಲು ಬಿಟ್ಟ. ಅಡುಗೆಮನೆಯಿಂದ ಹೊರ ಬಂದು ಸುಮನ್ ಊಟದ ಹಾಲಿನಿಂದ ಬಲಕ್ಕೆ ಅಥಿತಿಗಳ ಕೋಣೆಗೆ ಹೋದಳು. ಅವಳ ಕಣ್ಣಿಗೆ ಮೊದಲು ಕಂಡು ಬಂದಿದ್ದು ಒಂದು ಚಿಕ್ಕ ಕರಿ ಮರದ ಬೀರು. ಅದರ ತುಂಬ ಪುಸ್ತಕಗಳು. ಖುಷಿಯಿಂದ ಹತ್ತಿರ ಹೋಗಿ ಅವುಗಳ ಶೀರ್ಷಿಕೆಗಳನ್ನು ಓದಿದಳು. ನಿರಾಸೆಯಾಯಿತು, ಎಲ್ಲವೂ ಕಾಫಿ ಟೇಬಲ್ ಪುಸ್ತಕಗಳೆ. ಒಂದಕ್ಕಿಂತ ಒಂದು ದುಬಾರಿ ಹಾಗೂ ಸುಂದರವಾಗಿದ್ದವು. ಆದರೆ ಅದರಲ್ಲಿ ಓದಲು ಇರುವುದು ಅತೀ ಕಡಿಮೆ ಲೇಖನ. ಈ ಕೋಣೆಯಲ್ಲಿ ಒಂದು ಕಾರ್ನರ್ ಸ್ಟಾಂಡಿನ ಮೇಲೆ ತುಸು ದೊಡ್ಡದೆನ್ನುವ ಐಫಿಲ್ ಟವರ್, ಬಿಗ್ ಬೆನ್, ಮುಂತಾದವುಗಳನ್ನು ಜೋಡಿಸಲಾಗಿತ್ತು. ಆ ಕೋಣೆಗೆ ಅಂಟಿಕೊಂಡಿದ್ದ ಬಚ್ಚಲುಮನೆಯಲ್ಲಿ ಒಂದು ಟಬ್ ಇದ್ದುದನ್ನು ಗಮನಿಸಿ ಸುಮನ್ ಮಹಡಿಗೆ ಹೋಗಲು ಮೆಟ್ಟಲು ಹತ್ತಿದಳು. ಟಾಮಿ ಅವಳ ಮುಂದೆ ಮುಂದೆ ಬೊಗಳುತ್ತ ಮೆಟ್ಟಲು ಹತ್ತಿ ಹೋಯಿತು.
ಅವರ ಮಲಗುವ ಕೋಣೆ ಅವಳಿಗೆ ಪರಿಚಯವಿತ್ತು. ಗೋಡೆಯಿಂದ ಗೋಡೆಯವರೆಗಿದ್ದ ಬೀರುವಿನಲ್ಲಿ ಒಂದು ಕಾಲು ಭಾಗವೂ ಅವಳ ಬಟ್ಟೆ ಬರೆ ತುಂಬಿರಲಿಲ್ಲ. ಆ ಕೋಣೆಗೆ ಅಂಟಿಕೊಂಡಿದ್ದ ಬಚ್ಚಲುಮನೆಯಲ್ಲಿ ಒಂದು ದೊಡ್ಡ ದುಂಡಗಿನ ಟಬ್ ಇತ್ತು. ಆ ಕೋಣೆಯ ಎದುರಗಡೆ ಇದ್ದ ಗಿರೀಶನ ಕೋಣೆಗೆ ಹೋದಳು. ಅಲ್ಲಿ ಇಲ್ಲಿ ಅವನ ಬಟ್ಟೆ ಬಿದ್ದಿದ್ದವು. ದೊಡ್ಡ ಡ್ರೆಸಿಂಗ್ ಟೇಬಲಿನ ಕನ್ನಡಿ ಹಿಂದಿದ್ದ ಬಾಗಿಲು ತೆರದಿತ್ತು. ಇಣುಕಿ ನೋಡಿದಳು. ಒಂದು ಖಾನೆಯಲ್ಲಿ ಟಾಮಿ ಹಿಲ್ಫಿಗರ್, ರೊಲೆಕ್ಸ್, ಸಿಟಿಜನ್ ಸೇರಿದಂತೆ ಒಂದು ಡಜನ್ ವಾಚುಗಳಿದ್ದವು. ಇನ್ನೊಂದು ಖಾನೆಯಲ್ಲಿ ಒಂದು ಹತ್ತು ಕಫ್ ಲಿಂಕ್ಸ್ ಡಬ್ಬಗಳು. ಮೂರನೆಯ ಖಾನೆಯಲ್ಲಿ ತರಾವರಿ ಶೇವಿಂಗ್ ಕ್ರೀಮ್ ಮುಂತಾದವುಗಳು. ಬೀರುವಿನ ಬಾಗಿಲು ತೆಗೆದರೆ “ಗುಸ್ಸಿ” ಬೆಲ್ಟುಗಳು ಒಂದು ಮೂಲೆಯಲ್ಲಿ ನೇತಾಡಿದರೇ ಬೀರು ತುಂಬ ಆಲೆನ್ ಸೊಲ್ಲಿ, ಪಿಟರ್ ಇಂಗ್ಲೆಂಡಿನ ಶರ್ಟುಗಳು ಇನ್ನೊಂದು ಮೂಲೆಯನ್ನು ಅಲಂಕರಿಸಿದ್ದವು. ಬಾಗಿಲು ಹಾಕಿ ಕೋಣೆ ಆಚೆ ಬಂದು ಮಧ್ಯದ ಪುಟ್ಟ ಲಿವಿಂಗ್ ರೂಮಿನಲ್ಲಿ ಕುಳಿತಳು. ಅಲ್ಲೊಂದು ಟಿವಿ ಇತ್ತು. ಅದರ ಎದುರಗಡೆ ಬೆತ್ತದ ಸೋಫಾ ಸೆಟ್ ಹಾಗೂ ಗಾಜಿನ ಮೇಜು. ಮೇಜು ಒಂದು ನೀಲಿ ಹೂಗಳಿರುವ ಕಾಶ್ಮೀರಿ ಜಮಖಾನೆಯ ಮೇಲೆ ವಿರಾಜಿಸಿತ್ತು. ಸುಮನ್, ಮನೆಯ ವೈಭವಕ್ಕೆ ಬೆರಗಾದಳು. ಟಾಮಿಯ ತಲೆ ಸವರುತ್ತ ಒಂದ್ನಿಮಿಷ ಕಣ್ಣು ಮುಚ್ಚಿದಳು. ಅಮ್ಮ ಅಪ್ಪ ತಮ್ಮಂದಿರ ಮುಖ ಕಣ್ಣು ಮುಂದೆ ತೇಲಿ ಬಂತು. ಅವಳು ಗಿರೀಶ ಜೊತೆ ಹೊರಟಾಗ ಅವರು ನಿಂತು ಕೈ ಬೀಸುತ್ತಿರುವ ದೃಶ್ಯ. ಸುಮನಳ ಕಣ್ಣುಗಳು ತೇವಗೊಂಡವು. ಮನಸ್ಸು ತಡೆಯಲಾರದೆ ಹೋಗಿ ಅವಳಮ್ಮನಿಗೆ ಕರೆ ಮಾಡಿದಳು. ಏನೆಲ್ಲ ಹೇಳಬೇಕು ಅವರಮ್ಮನಿಗೆ. ತಮ್ಮ ಮಧುಚಂದ್ರ, ಮನೆಯ ವೈಭವ ಹೇಳುತ್ತ ಹೋದ ಮಗಳ ಸಂಭ್ರಮವನ್ನು ಅವಳಮ್ಮ ಕಕ್ಕುಲತೆಯಿಂದ ಕೇಳಿದರು. ಗಂಡನಿಗೆ ಹೇಳಿ ಹಿಗ್ಗಿ ಹೀರೆಕಾಯಿಯಾದರು ರಾಜಲಕ್ಷ್ಮಿ.
ಸುಮನಳ ಜೀವನ ಒಂದು ಕನಸಿನಂತೆ ಇತ್ತು. ಬೆಳಗ್ಗೆ ಗಿರೀಶನ ಜೊತೆ ತಿಂಡಿ ತಿಂದು ಅವನು ಆಫೀಸಿಗೆ ಹೋಗುವ ತನಕ ಅವನ ಹಿಂದೆ ಮುಂದೆ ಓಡಾಡುವಳು. ಅವನು ಹೋದ ನಂತರ ತೋಟದ ಸುತ್ತ ಒಂದು ಸುತ್ತು ಹೊಡೆದು ಮನೆಯೊಳಗೆ ಏನೋ ಸಾಪ್ತಾಹಿಕ ಹಿಡಿದು ಕೂರುವಳು. ಗಿರೀಶ ಅತ್ತ ಹೋದದ್ದೇ ತಡ ಟಾಮಿ ಅವಳನ್ನು ನೆರಳಿನಂತೆ ಹಿಂಬಾಲಿಸುತ್ತದೆ. ಅವಳು ಮನೆಯೊಳಗೆ ಕೂತರೆ ಅದು ಕುರ್ಚಿಯ ಪಕ್ಕ ಅವಳನ್ನೆ ನೋಡುತ್ತ ಕೂರುತ್ತದೆ. ಅದರ ತಲೆ ಅವಾಗಲೋ ಇವಾಗಲೋ ನೇವರಿಸುತ್ತಾ ಅದನ್ನು ಮಾತನಾಡಿಸುತ್ತ ಸುಮನ್ ಪತ್ರಿಕೆಗಳನ್ನು ಓದುವಳು. ಟಾಮಿ ಅವಳು ಹೇಳಿದ್ದು ಅರ್ಥವಾದಂತೆ ಅವಳು ಹೇಳುವುದನ್ನು ಗಮನವಿಟ್ಟು ಕೇಳುತ್ತದೆ. ಅವಳು ಒಂದು ಹತ್ತು ನಿಮಿಷ ಅದನ್ನು ಮರೆತು ಪತ್ರಿಕೆ ಓದಿದರೇ ಅದೇ “ಬೌ ಬೌ ನಾನು ಇಲ್ಲೆ ಇದ್ದೀನಿ” ಎಂದು ಅವಳನ್ನು ಮಾತಾಡಿಸುವುದು. ಸುಮನ್ ಸಂತೋಷದಿಂದ ನಕ್ಕು ಅದಕ್ಕೆ ಏನೋ ಹೇಳುವಳು. ಹೀಗೆ ಬೆಳಗ್ಗೆಯಲ್ಲಾ ಇಬ್ಬರು ಪುಸ್ತಕ, ಟಿವಿ ನೋಡುತ್ತ ಕಳೆಯುವರು. ರಂಗಪ್ಪ ಮಾಡಿದ ಊಟ ಮಾಡಿ ಟಾಮಿಗೂ ಊಟ ಹಾಕಿ ಸುಮನ್ ಮಧ್ಯಾಹ್ನ ಗಿರೀಶ ತುಂಬಿರುವ ಕನಸಿನ ಲೋಕಕ್ಕೆ ಜಾರುವಳು. ಸಂಜೆ ಅಲಂಕಾರ ಮಾಡಿಕೊಂಡು ಟಾಮಿಯನ್ನು ಕರೆದುಕೊಂಡು ವಾಕಿಂಗ್ ಹೋಗುವಳು. ಆರುವರೆ ಆಯಿತೆಂದರೆ ಗಿರೀಶಗಾಗಿ ಕಾಯುತ್ತ ಟಿವಿಯ ಮುಂದೆ ಕೂರುವಳು ಸುಮನ್. ಅವನ ಇಷ್ಟು ಗಂಟೆಗೆ ಎಂದು ಬರುವುದಿಲ್ಲ. ಅವನು ಬರುವದ್ರೊಳಗೆ ಒಂದು ಹತ್ತು ಸಲಿ ಬಾಗಿಲಿಗೂ ಟಿವಿಗೂ ಓಡಾಡಿದ ಸುಮನಳ ಕಿವಿ ಗೇಟಿನ ಅಗುಳಿಯ ಶಬ್ದಕ್ಕಾಗಿ ಹಾತೊರೆಯುತ್ತದೆ. ಗಿರೀಶ ಗೇಟಿನ ಒಳಗೆ ಪ್ರವೇಶಿಸಿದರೆ ಸಾಕು ಅವಳಲ್ಲಿ ಏನೋ ಲವಲವಿಕೆ ಏನೋ ಸಂಭ್ರಮ. ಇನ್ನು ಮಲಗುವವರೆಗೂ ಭೂಮಿ ಸೂರ್ಯನ ಸುತ್ತು ಸುತ್ತಿದಂತೆ ಗಿರೀಶನ ಹಿಂದೆ ಮುಂದೆ ಓಡಾಡುವಳು ಸುಮನ್.
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=37997
(ಮುಂದುವರಿಯುವುದು)
-ಸುಚೇತಾ ಗೌತಮ್.
ಕಾದಂಬರಿ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತಿದೆ….
ಧನ್ಯವಾದಗಳು ಮೇಡಂ.
ತುಂಬಾ ಚೆನ್ನಾಗಿದೆ ಕಾದಂಬರಿ. ಐಷಾರಾಮಿ ಬದುಕಿನ ಬಣ್ಣನೆ, ಮುಂದೇನು?
ಧನ್ಯವಾದಗಳು ಮೇಡಂ
ಕಾದಂಬರಿ… ಮುಂದಿನ ಕಂತಿಗಾಗಿ ಕಾಯುವಂತಿದೆ.
ಧನ್ಯವಾದಗಳು ಮೇಡಂ
ಗಿರೀಶ್ ಸುಮನ್ ಅವರ ವೈಭವೋಪೇತ ಬಂಗಲೆಯ ಕಣ್ಣಿಗೆ ಕಟ್ಟುವಂತಹ ವಿವರಣೆ ಬಹಳ ಸೊಗಸಾಗಿದೆ….ಮುಂದೇನು ಎನ್ನುವ ಕುತೂಹಲ ಇಮ್ಮಡಿಸಿದೆ…!
ಧನ್ಯವಾದಗಳು ಮೇಡಂ.
ವೈಭವೋಪಿತ ಜೀವನದ ವಿವರಣೆ ಸೊಗಸಾಗಿ ಮೂಡಿ ಮುಂದೇನು ಎಂಬ ಕುತೂಹಲ ಮೂಡಿದೆ.