ಪುಸ್ತಕ ಪರಿಚಯ :ಆಯ್ದ ಹತ್ತು ಕಥೆಗಳು (ಅನುವಾದಿತ ಕಥಾ ಸಂಕಲನ)

Share Button

ಪುಸ್ತಕ:-  ಆಯ್ದ ಹತ್ತು ಕಥೆಗಳು ( ಅನುವಾದಿತ ಕಥಾ ಸಂಕಲನ)
ಲೇಖಕರು:- ಮಾಲತಿ ಮುದಕವಿ
ಪ್ರಕಾಶಕರು :- ಎನ್. ಕೆ. ಎಸ್. ಪ್ರಕಾಶನ
ಬೆಲೆ :- 210 /-

ಇಲ್ಲಿ ಮರಾಠಿ ಭಾಷೆಯಿಂದ ಆರಿಸಿ ಅನುವಾದಿಸಲ್ಪಟ್ಟ 10 ಕಥೆಗಳಿವೆ.   ಬೇರೆ ಭಾಷೆಗಳನ್ನು ಅರಿಯದ ಓದುಗರಿಗೆ ಹೀಗೆ  ಅನುವಾದಿಸಲ್ಪಟ್ಟ ಕಥೆ, ಬರಹಗಳು  ಬೇರೆ  ಭಾಷೆಯ ಸಾಹಿತ್ಯದ ತಿರುಳನ್ನು  ಅರಿಯಲು ಸಹಕಾರಿ.  ಆ ನಿಟ್ಟಿನಲ್ಲಿ ಮಾಲತಿಯವರದ್ದು ಇದೊಂದು ಉತ್ತಮ ಕೆಲಸ. 

ಹದಿಹರೆಯದವರ ಮನಸ್ಸು ಬಹಳ  ಸೂಕ್ಷ್ಮ.  ಬಾಲ್ಯ ಕಳೆದು ಯೌವ್ವನಕ್ಕೆ ಕಾಲಿರಿಸುವ ಹಂತದಲ್ಲಿ ಹದಿಹರೆಯದವರು ಬಹಳ ಗಂಭೀರ, ಕೋಪಿಷ್ಟ, ಚಂಚಲ ಹಾಗೂ ಗೊಂದಲದ ಮನಸ್ಥಿತಿಯನ್ನು ಹೊಂದಿರುತ್ತಾರೆ.  ಹೆತ್ತವರು ಈ ಹಂತದಲ್ಲಿ ಅವರ ಮುಂದೆ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ.  ಎಚ್ಚರ ತಪ್ಪಿದಲ್ಲಿ ಅದರ ಪರಿಣಾಮ ಬಹಳ ಗಂಭೀರವಾಗುವ ಸಾಧ್ಯತೆಗಳೇ ಹೆಚ್ಚು.  ಮಕ್ಕಳು ಈ ಹಂತಕ್ಕೆ ಬಂದಾಗ ಬಹಳ  ನಾಜೂಕಿನಿಂದ ಅವರೊಡನೆ ವ್ಯವಹರಿಸುವ  ವ್ಯವಧಾನ ಇರಬೇಕು.  ಇಲ್ಲದಿದ್ದಲ್ಲಿ ಸಂಬಂಧಗಳ ನಡುವೆ ಮನಸುಗಳ ನಡುವೆ ಬಿರುಕು ಮೂಡುವ ಅವಕಾಶಗಳು ಬಹಳ.  ಹದಿಹರೆಯದವರು ಮನೆಯಲ್ಲಿ ಇರುವಾಗ ಹೆತ್ತವರು ದೊಡ್ಡವರು ಅನ್ನಿಸಿಕೊಂಡವರು ತಮ್ಮ ಕಾಮನೆಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದನ್ನು ಕಲಿಯಬೇಕು.  ಅವರ ಮುಂದೆ ಹೇಗೆಂದರೆ ಹಾಗೆ ವರ್ತಿಸುವುದಲ್ಲ ಹಾಗೊಂದು ವೇಳೆ ವರ್ತಿಸಿದಲ್ಲಿ ಅದು ಅವರ ಮನಸ್ಸಿನ ಮೇಲೆ  ದುಷ್ಪರಿಣಾಮ  ಬೀರುವ ಸಾಧ್ಯತೆಗಳಿವೆ.  ಈ  ಎಚ್ಚರ  ಹೆತ್ತವರಲ್ಲಿ ಇರಬೇಕಾದದ್ದು  ಅಗತ್ಯ. 

ಅಗತ್ಯಗಳಿಗೂ ಉಪಯೋಗಿಸದೆ  ಸಂಪತ್ತು,  ಹಣವನ್ನು  ಕೂಡಿ ಇಡುವುದು ಒಂದು ಮನೋವ್ಯಾಧಿಯೇ.  ಬದುಕಲು ತಕ್ಕಷ್ಟು ಹಣ ಬೇಕು ನಿಜ ಹಾಗೆಂದು ಹಣವೇ ಎಲ್ಲವೂ ಆಗುವುದಿಲ್ಲ.  ಎಲ್ಲದಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ.  ಮಕ್ಕಳು  ಒಂದು ಹಂತವನ್ನು ತಲುಪಿ ಸುಂದರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಹೆತ್ತವರ ಪಾತ್ರ,  ತ್ಯಾಗ ಬಹಳ ದೊಡ್ಡದು.  ಇದನ್ನು ಎಂತಹದೇ ಪರಿಸ್ಥಿತಿಯಲ್ಲೂ ಮರೆಯಬಾರದು.   ಈ ವಿಚಾರದಲ್ಲಿ ಜೊತೆಗಾರರು ದಾರಿ ತಪ್ಪಿಸುವ ಪ್ರಯತ್ನ ನಡೆಸಿದರೂ ಅದನ್ನು ವಿರೋಧಿಸಿ ಹೆತ್ತವರ ಪ್ರತಿ ಕೃತಜ್ಞತೆ ತೋರುವ ವಿವೇಚನೆ ಇರಬೇಕು.  ಸಂಪತ್ತನ್ನು ಕೂಡಿಡುವ  ಚಾಳಿ ಎಂದಿಗೂ ನೆಮ್ಮದಿಯನ್ನು  ತರಲಾರದು.   ಇದರ ಬದಲಾಗಿ ಇದ್ದದ್ದನ್ನು ಅಗತ್ಯವಿರುವವರೊಡನೆ ಹಂಚಿಕೊಳ್ಳುವ ಗುಣ ನೆಮ್ಮದಿ ಮಾತ್ರ ಅಲ್ಲ ಸಂಬಂಧಗಳನ್ನು ಒಗ್ಗೂಡಿಸುತ್ತದೆ,  ಗಟ್ಟಿಗೊಳಿಸುತ್ತದೆ ಈ  ಸತ್ಯವನ್ನು ಇಂದು ಅರಿತು ಸಾಗಬೇಕಾಗಿದೆ. 

ಪ್ರೀತಿ ಒಂದು ನವಿರಾದ  ಅನುಭೂತಿ.  ಅದು ತನ್ನಿಂದ ತಾನೇ ಹುಟ್ಟಿಕೊಳ್ಳಬೇಕು.  ಒತ್ತಾಯದಿಂದ ಅದನ್ನು ಪಡೆಯಲು ಸಾಧ್ಯವಿಲ್ಲ.  ಒಂದು ಹೆಣ್ಣು ತುಸು ನಗುತ್ತಾ,  ಸ್ವಲ್ಪ  ಸಲುಗೆಯಿಂದ  ಸ್ನೇಹ  ಹಸ್ತ ಚಾಚಿದರು ಸಾಕು ಗಂಡು  ಅದನ್ನೇ ಪ್ರೀತಿ ಎಂದು ತಿಳಿಯುವ ಮಟ್ಟಕ್ಕೆ ತಪ್ಪು ಕಲ್ಪನೆಯಲ್ಲಿ ಮುಳುಗುತ್ತಾನೆ.  ಪ್ರೀತಿಯ ಪರಿಭಾಷೆ ಕಾಮ ಅಲ್ಲ,  ಆದರೆ ಗಂಡು ಎಡವುದೇ ಇಲ್ಲಿ.  ಪ್ರೀತಿಯ ಹೆಸರಿನಲ್ಲಿ ಬೇರೆನನ್ನೋ  ಬಯಸಿ.  ಹೆಣ್ಣು ಭಾವ ಜೀವಿ.  ಅವಳು ಪ್ರೀತಿಯಲ್ಲಿ ಒಮ್ಮಿಂದೊಮ್ಮೆಲೆ ಸೋಲುವುದಿಲ್ಲ.  ಪ್ರೀತಿ ಎಂದರೆ ಅವಳ ದೃಷ್ಟಿಯಲ್ಲಿ ಬಹಳ ಪರಿಶುದ್ಧ ಹಾಗೂ ಹಂತ ಹಂತವಾಗಿ ಮನಸ್ಸನ್ನು ಆವರಿಸುವಂತದ್ದು.  ಇದನ್ನು ಅರ್ಥೈಸಿಕೊಳ್ಳುವವರು ಕೆಲವೇ ಕೆಲವು ಮಂದಿ,  ಅಂತಹ ಮನಸ್ಸುಗಳು ಬೇಗ ಒಂದಾಗುತ್ತವೆ.  ಅಲ್ಲದವುಗಳು ಭಗ್ನಗೊಂಡು ದೂರವಾಗುತ್ತವೆ.  ಗಂಡು ಎಷ್ಟೇ ಪರಿಧಿಯನ್ನು ದಾಟಿ ಸಾಗಿದರೂ,   ಎಡವಿದರೂ ಯಾರು ಪ್ರಶ್ನಿಸಲಾರರು.  ಅದೇ ಒಂದು ಹೆಣ್ಣಾದರೆ ಮಾಡದ ಅಪವಾದಗಳನ್ನು,  ಅಪರಾಧಗಳನ್ನು ಅವಳ ಮೇಲೆ ಇಂದಿಗೂ ಹೇರುವುದರಲ್ಲಿ ಹಿಂದೆ ಉಳಿದಿಲ್ಲ ಈ ಸಮಾಜ. 

ಸಂಬಂಧಗಳ ಎಳೆ ಬಹಳ ನಾಜೂಕು.  ಒಂದು ಸಣ್ಣ ಏಟು ಸಾಕು  ಬಿರುಕು  ಮೂಡಲು.  ಸಂಬಂಧಗಳನ್ನು ಕಳೆದುಕೊಳ್ಳುವುದು ತುಂಬಾ ಸುಲಭ.   ಒಂದು ಮನ ಮುರಿಯುವ ಮಾತು ಸಾಕು,  ಅದೇ ಆ ಸಂಬಂಧವನ್ನು ನಿಭಾಯಿಸುವುದು,  ಹೊಂದಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ.  ಎಲ್ಲರಿಗೂ ಈ ಹೊಂದಾಣಿಕೆಯ ಕಲೆ ಕರಗತವಾಗಿರುವುದಿಲ್ಲ,  ಕೆಲವರಿಗಷ್ಟೇ ಇದು ಸಾಧ್ಯ.  ಅಂತಹವರು ಸುಂದರವಾದ ಸಂಸಾರವನ್ನು, ಸ್ನೇಹಿತರನ್ನು,  ಬಳಗವನ್ನು ಹೊಂದಿರುತ್ತಾರೆ.  ಇನ್ನೊಬ್ಬರ ಮನ ನೋಯಿಸಿ ಸಂಬಂಧವನ್ನು ಕಡಿದುಕೊಂಡು ಸಾಗುವುದು ಸಾಧನೆಯಲ್ಲ.  ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ ಮನಸುಗಳನ್ನು ಗೆಲ್ಲುತ್ತಾ ಸಂಬಂಧಗಳನ್ನು ಉಳಿಸಿಕೊಳ್ಳುವುದು  ನಿಜವಾದ ಸಾಧನೆ.   ಈ ಉಳಿಸಿಕೊಳ್ಳುವಿಕೆಯಲ್ಲೇ  ನಿಜವಾದ ಸುಖ, ಸಂತೋಷ, ನೆಮ್ಮದಿ ಅಡಗಿದೆ. 

ತಂದೆ ತಾಯಿ ತಮ್ಮ ಕಷ್ಟಗಳು ಏನೇ ಇದ್ದರೂ ಅದರ ಬಿಸಿ, ಕಾವು ತಮ್ಮ ಕರುಳ ಕುಡಿಗಳಿಗೆ ತಟ್ಟದಂತೆ ಎಚ್ಚರವಹಿಸಿ ನೋವನ್ನು ಮರೆಮಾಚಿ ಅವರನ್ನು ಸಮಾಜದಲ್ಲಿ ಉನ್ನತ ರೀತಿಯಲ್ಲಿ ಬಾಳುವಂತಹ ಶಿಕ್ಷಣ,  ಸಂಸ್ಕಾರ ನೀಡಿ ಬೆಳೆಸುವುದು ಒಂದು ರೀತಿ.  ಅದೇ ಮಕ್ಕಳು ಬೆಳೆದಂತೆ ತಮ್ಮ ಹೆತ್ತವರ ಬೆಲೆ ಅರಿಯದೆ,  ಬೆಳೆದು ಬಂದ ದಾರಿಯನ್ನು ಮರೆತು ಆ ಹೆತ್ತವರನ್ನು ಬೀದಿಗೆ ತಳ್ಳುವುದು,  ವೃದ್ಧಾಶ್ರಮಗಳಲ್ಲಿ ಬಿಟ್ಟು ಒಂಟಿಯಾಗಿಸುವುದು ಈ ಸಮಾಜದಲ್ಲಿ ಇತ್ತೀಚೆಗೆ ಕಾಣಸಿಗುತ್ತಿರುವಂತ ಸಾಮಾನ್ಯ ಹಾಗೂ ಇನ್ನೊಂದು ರೀತಿ.  ಇವೆರಡರ ಹೊರತಾಗಿಯೂ  ಬದುಕಿನಲ್ಲಿ ಪರಿಸ್ಥಿತಿಗಳು ಹೇಗೆ ಬರುತ್ತವೆ ಎಂದರೆ ಬಯಸದೆಯೂ ಕೆಲವೊಮ್ಮೆ ತಮ್ಮ ಹೆತ್ತವರನ್ನು ವೃದ್ಧಾಶ್ರಮದಲ್ಲಿ ಇರಿಸಬೇಕಾಗಿ ಹೇಗೆ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ  ಅನ್ನುವುದನ್ನುಹೇಳುವ ಒಂದು ಮನಮಿಡಿಯುವ ಅನುವಾದಿತ ಕಥೆ. 

ಆಯ್ದ ಹತ್ತು ಕಥೆಗಳಲ್ಲಿ ಪ್ರತಿಯೊಂದು ಕಥೆಯೂ ಚೆನ್ನಾಗಿದೆ.  ಅನುವಾದಿತ ಕಥೆಗಳಲ್ಲಿ ಹುಬ್ಬಳ್ಳಿ ಧಾರವಾಡ ಕಡೆಯ ಮಾತಿನ ಶೈಲಿಯನ್ನು ಬಳಸಲಾಗಿರುವುದು ಇನ್ನೂ ಸುಂದರ.  ಯಾವುದೇ ಒಂದು ಸಾಹಿತ್ಯವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವುದು ಸುಲಭದ ವಿಚಾರವೇನು ಅಲ್ಲ.  ಇಲ್ಲಿ ಭಾಷೆಯ ಮೇಲಿನ ಹಿಡಿತ ಮುಖ್ಯವಾಗುತ್ತದೆ.  ಈ ವಿಚಾರದಲ್ಲಿ ಮಾಲತಿ ಮೇಡಂ ಗೆದ್ದಿದ್ದಾರೆ.  ಈ ಅನುವಾದಿತ ಕಥೆಗಳ ಜೊತೆಗೆ ಮಾಲತಿಯವರ ಬಿಡುಗಡೆಗೊಂಡ ಇನ್ನೆರಡು ಹೊಸ ಕೃತಿಗಳು “ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆ’‘ ಹಾಗೂ ”ಫಾಸಿಗೆ ಸಾಕ್ಷಿ” ಕಾದಂಬರಿ.

– ನಯನ  ಬಜಕೂಡ್ಲು

7 Responses

 1. ಪುಸ್ತಕ ಪರಿಚಯ ಪರಿಣಾಮ ಕಾರಿಯಾಗಿ ಬಂದಿದೆ..ನಯನ ಮೇಡಂ..

 2. ಸುಚೇತಾ says:

  Very nice ☺️

 3. Anonymous says:

  Good and Analysing Article

 4. ಶಂಕರಿ ಶರ್ಮ says:

  ಅನುವಾದಿತ ಕಥಾಸಂಕಲನದ ವಿಮರ್ಶಾತ್ಮಕ ಲೇಖನ ಚೆನ್ನಾಗಿದೆ.

 5. Padmini Hegde says:

  ಕಥಾ ಸಂಕಲನದ ವಿಮರ್ಶಾತ್ಮಕ ಪರಿಚಯ ಚೆನ್ನಾಗಿದೆ

 6. Padma Anand says:

  ಓದುವ ಬಯಕೆ ಮೂಡಿಸುವಲ್ಲಿ ಪುಸ್ತಕಾವಲೋಕನ ಗೆದ್ದಿದೆ.

 7. Anonymous says:

  ಧನ್ಯವಾದಗಳು ಚಂದದ ಪರಿಚಯಕ್ಕೆ ನಯನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: