ಕಾದಂಬರಿ : ‘ಸುಮನ್’ – ಅಧ್ಯಾಯ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಕಿಟ್ಟಿ ಪಾರ್ಟಿ

ಅಂದು ಗಿರೀಶ ತಿಂಡಿ ತಿಂದು ಆಫೀಸಿಗೆ ಹೋಗುವ ಮುಂಚೆ ಪತ್ರಿಕೆಯನ್ನು ತಿರುವುತ್ತ ಕುಳಿತ್ತಿದ್ದ. ಸುಮನ್ ಇನ್ನೊಂದು ಪತ್ರಿಕೆಯನ್ನು ಹಿಡಿದು ಅಲ್ಲೆ ಕುಳಿತಳು. ಗಿರೀಶನ ಮೊಬೈಲ್ ಟ್ರಿನ್‍ಗುಟ್ಟಿತು.

ಕೆಲ ನಿಮಿಷದ ಸಂಭಾಷಣೆಯ ನಂತರ ಮೊಬೈಲ್ ಕೆಳಗಿಡುತ್ತಾ ಗಿರೀಶ “ಸುಮನ್ ಬೋರ್ ಬೋರ್ ಅಂತಾ ಇರ್ತಿಯಲ್ಲ, ಇವತ್ತು ಆ ಸೋನಾಲ್ ಮನೆಯಲ್ಲಿ ಕಿಟ್ಟಿ ಪಾರ್ಟಿಯಂತೆ. ನಿನ್ನನ್ನು ಕರೆದಿದಾಳೆ. ಡ್ರೈವರ್‌ನ ಕಳುಹಿಸ್ತೀನಿ, ಹೋಗು ಮಧ್ಯಾಹ್ನ ಮೂರು ಗಂಟೆಗೆ”.

ಸುಮನ್‍ಗೆ ಸೋನಾಲ್ ಯಾರು ಹೊಳೆಯಲಿಲ್ಲ ಎಂದು ಸಾರುತ್ತಿತ್ತು ಅವಳ ಮುಖ.

ಅದನ್ನು ನೋಡಿ “ಅದೇ ನನ್ನ ಫ್ರೆಂಡ್ ರಾಹುಲ್ ಹೆಂಡ್ತಿ. ಅವತ್ತು ಫೋಲಿಯೋದಲ್ಲಿ ಸಿಕ್ಕಿದ್ರಲ್ಲ. ಜ್ಞಾಪಕ ಬಂತಾ?”

“ಹೂಂ ಹೂಂ ಅದೇ ಕೂದಲೆಲ್ಲ ಕೆಂಪು ಕೋತಿ ಬಣ್ಣ ಇತ್ತಲ್ಲ ಗೊತ್ತಾಯ್ತು” ಸೋನಾಲ್‍ಳ ಪ್ರತಿಬಿಂಬ ಕಣ್ಣ ಮುಂದೆ ಬಂದು ಸುಮನ್ ನಕ್ಕಳು.

ಗಿರೀಶ ಅವಳನ್ನೊಮ್ಮೆ ದಿಟ್ಟಿಸಿ ನೋಡಿದ. ಇನ್ನೇನು ಬಯ್ಯುವನು ಎನಿಸಿ ಸುಮನ್ ನಗುವುದನ್ನು ನಿಲ್ಲಿಸಿದಳು.

“ಎರಡುವರೆಗೆ ರೆಡಿಯಾಗು ಡ್ರೈವರ್‌ನ ಕಳುಹಿಸ್ತೀನಿ ಹೋಗು. ಡ್ರೈವರಗೆ ಎಷ್ಟು ಹೊತ್ತಿಗೆ ಬಂದು ಪಿಕ್ಅಪ್ ಮಾಡಬೇಕು ಹೇಳು” ಲ್ಯಾಪ್ಟಾಪ್ ಎತ್ತಿಕೊಂಡು ಗಿರೀಶ ಹೊರ ನಡೆದ. 

ಸರಿ ಸುಮನ್ ಎರಡುವರೆ ಹೊತ್ತಿಗೆ ತೋಳಿಲ್ಲದ ತರಬೂಜಾ ಬಣ್ಣದ ಶಿಫಾನ್ ಚುಡಿದಾರು ಧರಿಸಿ ಹೊರಡಲು ಅಣಿಯಾದಳು. ಅವಳಿಗೆ ಈ ಕಿಟ್ಟಿ ಪಾರ್ಟಿ ಗೀರ್ಟಿ ಎಲ್ಲಾ ಸಮಯ ಹಾಗೂ ಹಣ ಹಾಳು ಮಾಡುವ ಪ್ರಸಾಧನಗಳು ಎಂಬ ಭಾವನೆ ಆದರೂ ನೋಡಿ ಬರುವ ಎಂದು ಹೊರಟಳು. ಇಂದಿರಾನಗರದಲ್ಲಿದ್ದ ಸೋನಾಲಳ ಮನೆಗೆ ಚಾಲಕ ಕರೆದುಕೊಂಡು ಬಂದ. ಆರುವರೆಗೆ ಚಾಲಕನಿಗೆ ಬರಲು ಹೇಳಿ ಒಳಗೆ ನಡೆದಳು.

“ಹಾಯ್” ಬಾಗಿಲು ತೆರೆದ ಸೋನಾಲ್ ಸುಮನಳ ಕೆನ್ನೆಗೆ ತನ್ನ ಕೆನ್ನೆ ತಾಕಿಸಿ ಗಾಳಿಗೆ ಮುತ್ತಿಟ್ಟಳು. ಒಂದ್ನಿಮಿಷ ಗಲಿಬಿಲಿಗೊಂಡ ಸುಮನ್ ನಗುತ್ತ ಅವಳ ಆಲಿಂಗನದಿಂದ ಬಿಡಿಸಿಕೊಂಡಳು. ಅವಳು ಒಳ ನಡೆದಂತೆ ಅಲ್ಲಿದ್ದ ರೇಖಾ, ರತ್ನ, ಯೋಜನಾ, ಸಂಜನಾ ಎಲ್ಲರೂ ಸುಮನಳನ್ನು ಹಾಗೇ ಬರಮಾಡಿಕೊಂಡರು. ಈ ಶೋಕಿಯ ಆದರದಿಂದ ರಂಗೇರಿದ ಕೆನ್ನೆ ಸುಮನಳ ಚೆಲುವನ್ನು ದ್ವಿಗುಣಗೊಳಿಸಿತು. ಹೋಗಿ ಒಂದು ಕುರ್ಚಿಯ ಮೇಲೆ ಕುಸಿದಳು. ಒಂದ್ನಿಮಿಷದ ಮೌನದ ನಂತರ ಎಲ್ಲರು ಮಾತಾಡಲು ಶುರು ಮಾಡಿದರು.

“ನೀವು ಇನ್ಯಾವುದಾದರೂ ಕಿಟ್ಟಿ ಪಾರ್ಟಿಗೆ ಹೋಗಿದೀರಾ?” ರೇಖಾ ವಿಚಾರಿಸಿದಳು.

“ಇಲ್ಲ” ತಲೆ ಆಡಿಸಿದಳು ಸುಮನ್.

“ಹಾಗಾದರೆ ನಿಮ್ಮ ಇನಿಶಿಯೇಶನ್‍ಗೆ ಸೋನಾಲ್ ಸರಿಯಾದ ಕಾರ್ಯಕ್ರಮ ತಯಾರಿ ಮಾಡಿದಾಳೆ” ನಗುತ್ತ ರೇಖಾ ಹೇಳಿದಳು.

ಸುಮನ್‍ಗೆ ಅರ್ಥವಾಗಲಿಲ್ಲ ಎಂದು ಅರಿತು ರತ್ನ “ಅಷ್ಟು ಕಾತುರ ಬೇಡ. ತಾಳ್ಮೆಯಿರಲಿ. ಆಗೇ ಹೋತಾ ಹೈ ಕ್ಯಾ? ತೆರೆಯ ಮೇಲೆ ನೋಡಿ” ಸೇರಿಸಿದಳು.

ಅಷ್ಟರಲ್ಲಿ ಇನ್ನು ನಾಲ್ಕೈದು ಹೆಂಗಸರು ಒಳಗೆ ಬಂದರು. ಸುಮನ್‍ಗೆ ಅವರನ್ನು ನೋಡಿದ ಜ್ಞಾಪಕ ಅದರೆ ಹೆಸರುಗಳು ಜ್ಞಾಪಕವಿಲ್ಲ. ಎಲ್ಲರು ಗುಂಪು ಗುಂಪಾಗಿ ಮಾತಾಡುತ್ತಿದ್ದರು.

ಆ ಕಿಟ್ಟಿ ಪಾರ್ಟಿ ತಿಂಗಳಿಗೆ ಒಮ್ಮೆ ಒಬ್ಬರ ಮನೆಯಲ್ಲಿ  ಸೇರುವುದು. ಅಲ್ಲಿ ಒಬ್ಬೊಬ್ಬರು ಚೀಟಿ ಹಾಕುವ ಮೊತ್ತ ಕೇಳಿ ಸುಮನ್ ದಂಗಾದಳು. ಅಲ್ಲಿ ಹನ್ನೆರಡು ಜನ ಇರುವದರಿಂದ ಚೀಟಿ ಎತ್ತಿದಾಗ ಒಬ್ಬರಿಗೆ ಎರಡು ಲಕ್ಷ  ನಲ್ವತ್ತು ಸಾವಿರ ರೂಪಾಯಿ ಬರುವುದು. ಅದರಲ್ಲಿ ಒಬ್ಬರು ಪರಿವಾರ ಸಮೇತ ಸಿಂಗಾಪುರ್ ಪ್ರವಾಸ ಮಾಡಿದರೇ, ಇನ್ನೊಬ್ಬರು ನೇಪಾಳ ನೋಡಿ ಬಂದಿದ್ದರು. ಮತ್ತೊಬ್ಬರು ವಜ್ರದ ಬಳೆಗಳನ್ನು ಖರೀದಿಸಿದಾಗಿ ಹೇಳಿದರು. ಹೀಗೇ ನಡೆದಿತ್ತು ಮಾತಿನ ಸವಾರಿ. ಸುಮನ್ ಅವರ ಮಾತನ್ನು ಕೇಳುತ್ತ ಕುಳಿತ್ತಿದ್ದಳು.

ಎಲ್ಲರು ಬಂದಾದ ಮೇಲೆ ಚೀಟಿ ಎತ್ತಿದರು. ಅಂದು ಚೀಟಿ ರೇಖಾಳ ಹೆಸರಿಗೆ ಬಂತು.  ಹುಯ್ಯಿ ಅಂತ ಅವಳನ್ನು ಎಲ್ಲರು ಆಲಂಗಿಸಿ ಗಾಳಿಗೆ ಮುತ್ತಿಕ್ಕಿದರು. ರೇಖಾ ಅಷ್ಟೂ ಮೊತ್ತವನ್ನು ತನ್ನ ಗೋಣಿ ಚೀಲದಂತಹ ಪರ್ಸಿಗೆ ತುಂಬಿದಳು. ಈಗ ಸೋನಾಲಳು “ಬನ್ನಿ ಬನ್ನಿ” ಎಲ್ಲರನ್ನು ಟಿವಿ ಕೋಣೆಗೆ ಕರೆದೊಯ್ದಳು. ಕೋಣೆಯ ಒಂದು ಕಡೆ ಮೇಜಿನ ಮೇಲೆ ತರಾವರಿ ತಿಂಡಿ ಹಾಗೂ ಪಾನೀಯಗಳನ್ನು ಇಡಲಾಗಿತ್ತು. ಒಂದು ಗೋಡೆಗೆ ಸಾಮ್‍ಸಂಗ್ ಹೋಮ್ ಥಿಯೇಟರ್ ಅಣಿ ಮಾಡಲಾಗಿತ್ತು. ಅದರ ಎದುರುಗಡೆ ಬೆತ್ತದ ಸೋಫಾ ಸೆಟ್, ಬೀನ್ ಬ್ಯಾಗ್‍ಗಳು ಎಲ್ಲಾ ಒಪ್ಪ ಓರಣವಾಗಿ ಇಟ್ಟಿದ್ದರು. ಎಲ್ಲರು ತಟ್ಟೆ ತುಂಬ ತಿಂಡಿ ಪೇರಿಸಿಕೊಂಡು, ಪಾನೀಯದ ಲೋಟ ಹಿಡಿದು ನಗುತ್ತ ಮಾತನಾಡುತ್ತ ಕುರ್ಚಿಗಳ ಮೇಲೆ ಆಸೀನರಾದರು. ಸುಮನ್ ತಟ್ಟೆಗೆ ಸಮೋಸ, ಕೇಕ್ ಹಾಕಿಕೊಂಡು ಪೆಪ್ಸಿ ಹಿಡಿದು ಯಾವ ಚಲನಚಿತ್ರವಿರಬಹುದು ಎಂದುಕೊಳ್ಳುತ್ತ ಕುಳಿತಳು.

ಕಿಟಕಿಯ ಪರದೆಯನ್ನು ಎಳೆದು ತುಸು ಕತ್ತಲಾದ ಕೋಣೆಯಲ್ಲಿ ಸೋನಾಲ್ “ಸರ್‌ಪ್ರೈಸ್” ಎನ್ನುತ್ತ ಟಿವಿಯ ರಿಮೋಟ್ ಒತ್ತಿದಳು. ಎಲ್ಲರು ಬಿಟ್ಟ ಬಾಯಿ ಬಿಟ್ಟಕೊಂಡು “ಧೋಸ್ ನೈಟ್ಸ್” ಶೀರ್ಷಿಕೆ ಬರುತ್ತಿದಂತೆ ಸಂತಸದಿಂದ “ವಾವ್” ಅಂತ ಕೂಗಿದರು.

“ನಿನ್ನ ರೆಪ್ಯೂಟೇಶನ್ ಕಾಪಾಡಿಕೊಂಡೆ ಸೋನಾಲ್.”

“ಟೂ ಗುಡ್” ಎಂಬ ಕೂಗುಗಳು ಎಲ್ಲಾ ದಿಕ್ಕಿನಿಂದ ಕೇಳಿ ಬರುತ್ತಿತ್ತು.

ಗಾಬರಿಯಲ್ಲಿ ಸುಮನಳ ತಟ್ಟೆಯಿಂದ ಸಮೋಸ ಕೆಳಗೆ ಬಿದ್ದಿದ್ದನ್ನು ಯಾರೂ ಗಮನಿಸಲಿಲ್ಲ. ಎಲ್ಲರು ಮೌನವಾದಾಗ ಅಶ್ಲೀಲ ಶಬ್ದಗಳೊಂದಿಗೆ ಅಶ್ಲೀಲ ದೃಶ್ಯಗಳು ತೆರೆ ಕಂಡವು. ಸುಮನಳನ್ನು ಬಿಟ್ಟು ಎಲ್ಲರು ಅವನ್ನು ನೋಡಿ ಟೀಕೆ ಮಾಡುತ್ತ ನಕ್ಕು ನಲಿಯುತ್ತಿದ್ದರು.

“ಹೇ ಅವನ ಫಿಗರ್ ನೋಡು.”

“ಫಿಗರ್ ಹೋಗ್ಲಿ. ಅವನು ಏನ ಮಾಡ್ತಿದಾನೆ ಅದನ್ನ ನೋಡು.”

ಒಂದ್ನಿಮಿಷ ಎಲ್ಲರು ಗಮನವಿಟ್ಟು ಟಿವಿ ನೋಡಿದರು. ಮರುಕ್ಷಣ “ಸಮಥಿಂಗ್ ಟು ಟ್ರೈ” ಯಾರೋ ಎಲ್ಲರ ಪರವಾಗಿ ನುಡಿದಾಗ  “ಓ ಎಸ್ಸ್” ‌ಓಕ್ಕೊರಿಲಿನಲ್ಲಿ ಎಲ್ಲರು ನಗುತ್ತ ನುಡಿದರು.

ಇವರುಗಳು ಮಧ್ಯ ಸುಮನ್ ಹೆಚ್ಚುತ್ತಿರುವ ಗಾಬರಿ ಹಾಗೂ ಅಸಹ್ಯವನ್ನು ಅದುಮಲು ಒಂದ್ನಿಮಿಷ ಕಣ್ಣು ಮುಚ್ಚಿದರೇ ಇನ್ನೊಂದು ನಿಮಿಷ ಇನ್ನೇಲೋ ನೋಡುವಳು. ಕಣ್ಣು ಮುಚ್ಚಿದರೂ ಕಿವಿ ತೂತಾಗುವಂತೆ ಕೇಳಿ ಬರುತ್ತಿದ್ದ  ನಲಗುತ್ತಿರುವ ಶಬ್ದಕ್ಕೆ  ಅವಳಿಗೆ ಮೈ ಪರಚಿಕೊಳ್ಳುವಷ್ಟು ಅಸಹ್ಯವಾಗುತ್ತಿತ್ತು. ಹೀಗೇ ಒಂದು ಗಂಟೆಯ ಹಿಂಸೆಯ ನಂತರ ಮಧ್ಯಂತರ. ಕೈಯಲಿದ್ದ ತಟ್ಟೆಯನ್ನು ಮೇಜಿನ ಮೇಲಿಟ್ಟು ಸುಮನ್ ಗಾಳಿ ಬೆಳಕಿಗೆ ಹಂಬಲಿಸುತ್ತ ಹೊರಗೆ ಬಂದು ಕುಳಿತಳು.

ಹತ್ತು ನಿಮಿಷ ಒಂದು ಯುಗದಂತೆ ಅನಿಸಿ ಎಲ್ಲರು ಉತ್ಸಾಹದಿಂದ ಟಿವಿ ಕೋಣೆಗೆ ಮತ್ತೆ ತೆರಳಿದರು. ಸುಮನ್‍ಗೆ ಅದು ಒಂದು ನರಕ. ಜನ್ಮದಲ್ಲೇ ನೀಲಿ ಚಿತ್ರಗಳನ್ನು ನೋಡಿಲ್ಲದ ಅವಳಿಗೆ ಭಾರಿ ಹಿಂಸೆ ಆಗುತ್ತಿತ್ತು. ಎದ್ದು ಮನೆಗೆ ಹೋಗುವ ಅಂದರೆ ಎಲ್ಲರು ಏನೆಂದುಕೊಳ್ಳುವರು ಎಂಬ ಸಂಕೋಚ. ಅದರ ಮೇಲೆ ಚಾಲಕ ಬರುವುದೇ ಆರುವರೆಗೆ. ಕೊನೆ ಕೊನೆಗೆ ಅವಳಿಗೆ ಹೊಟ್ಟೆ ತೊಳೆಸಿ ವಾಂತಿ ಆಗುವಷ್ಟು ಸಂಕಟ. ಅದನ್ನು ತಡೆಯಲು ನಿಮಿಷಕ್ಕೆ ಇಪ್ಪತ್ತು ಸಲ ಉಗುಳು ನುಂಗಿ ನುಂಗಿ ಮೈಯೆಲ್ಲಾ ಬೆವರುತ್ತಿತ್ತು. ಮುಖ ವಿವರ್ಣವಾಗಿ ಇನ್ನೇನು ತಡೆಯಲು ಆಗುವುದಿಲ್ಲ ಅನಿಸುವ ಹೊತ್ತಿಗೆ ಸಿನಿಮಾ ಮುಗಿಯಿತು. ಅದೇ ಸಮಯಕ್ಕೆ ಚಾಲಕ ಬಂದ ಎಂದು ಸೋನಾಲಳ ಕೆಲಸದವನು ಹೇಳಿದ. ಎಲ್ಲರಿಗೂ ಆತುರ ಆತುರವಾಗಿ “ಬೈ” ಹೇಳಿ ಸುಮನ್ ಓಡಿ ಹೋಗಿ ಕಾರು ಹತ್ತಿದಳು. ರಂಗಪ್ಪ ಮನೆಯ ಬಾಗಿಲು ತೆಗೆಯುತ್ತಿದಂತೆ ದಡಬಡ ಓಡಿ ಹೋಗಿ ಬಚ್ಚಲಿನಲ್ಲಿ  ವಾಂತಿ ಮಾಡಿಬಿಟ್ಟಳು. ಮಧ್ಯಾಹ್ನ ಮಾಡಿದ್ದ ಊಟದಿಂದ ಹಿಡಿದು ತಿಂದ ಒಂದು ಚೂರು ಕೇಕಿನವರೆಗೂ ಎಲ್ಲಾ ಹೊರ ಹಾಕಿದಳು.

ಮುಖ ಒರಿಸಿಕೊಳ್ಳುತ್ತ ಹೋಗಿ ಗಿರೀಶ ಪಕ್ಕ ಕುಳಿತಳು. ನಡೆದುದೆಲ್ಲ ತನ್ನ ಮನಸ್ಸಿನಿಂದ ಹೊರ ಹಾಕುವಂತೆ ಗಿರೀಶಗೆ ಹೇಳಿದಳು. ಅವಳ ಅಸಹ್ಯ, ಸಂಕಟ, ಹಿಂಸೆ ಯಾವುದೂ ಗಿರೀಶ ಕಿವಿಗೆ ಬೀಳಲಿಲ್ಲ “ಓಪನ್ ಮೈಂಡೆಡ್ ಆಗಿರಬೇಕು ಸುಮನ್. ನೀನು ಅದನ್ನ ಎಂಜಾಯ್ ಮಾಡುವುದನ್ನು ಕಲಿ. ಇಲ್ಲಿಯ ಜೀವನಶೈಲಿಯಲ್ಲಿ ಇದು ಮಾಮೂಲು” ಈ ವಿಷಯ ಇಲ್ಲಿಗೆ ಸಾಕು ಎನ್ನುವಂತೆ ಟಿವಿ ಹಾಕಿದ. ಪೆಚ್ಚಾದ ಸುಮನ್‍ಗೆ ಟಿವಿ ನೋಡುವ ಮನಸ್ಸು ಬರದೆ ತನ್ನ ಕೋಣೆಗೆ ಹೋಗಿ ಒಂದು ಪುಸ್ತಕ ಕೈಗೆತ್ತಿಕೊಂಡಳು. ಅಂದು ರಾತ್ರಿ ಊಟ ಮಾಡಿದ್ದನ್ನು ತಿರುಗಿ ವಾಂತಿ ಮಾಡಿ ಸುಮನ್ ಕಿಟ್ಟಿ ಪಾರ್ಟಿ ಹಾಗೂ ಆ ದಿನಕ್ಕೆ ಇತಿಶ್ರೀ ಹಾಡಿದಳು ಬೇಗ ಮಲಗಿ. ಒಂದು ವಾರವಾದರೂ ಅವಳ ಮನಸ್ಸಿನ ಅಸಹ್ಯ, ಹಿಂಸೆ ದೂರವಾಗಲಿಲ್ಲ.      

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38099

(ಮುಂದುವರಿಯುವುದು)

-ಸುಚೇತಾ ಗೌತಮ್.‌ 

7 Responses

 1. ಕಾದಂಬರಿಯು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತಿದೆ..ವಾಸ್ತವಿಕ ಬದುಕಿನ ಅನಾವರಣ… ಕಾದಂಬರಿ ಯ ನಾಯಕಿಯಮನದ…ತುಮುಲ..ಯಾವ ಘಟ್ಟಕ್ಕೆ ಮುಟ್ಟತ್ತದೆನ್ನುವ…ಕುತೂಹಲ… ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ..

 2. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿದೆ.

 3. ಸುಚೇತಾ says:

  ಧನ್ಯವಾದಗಳು ಮೇಡಂ .

 4. ಶಂಕರಿ ಶರ್ಮ says:

  ಅಸಹಜ ವಾತಾವರಣದಿಂದ ತಳಮಳಿಸಿದ ಸುಮನ್ ಮುಂದೇನು ಮಾಡಿದಳು??..
  ನೋಡೋಣ…
  ಸರಳ, ಸಹಜ ನಿರೂಪಣೆ ಚೆನ್ನಾಗಿದೆ.

 5. Anonymous says:

  ಅನಿರೀಕ್ಷಿತ ತಿರುವುಗಳರಂದ ಕುತೂಹಲ ಹೆಚ್ಚುತ್ತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: