ಅವಿಸ್ಮರಣೀಯ ಅಮೆರಿಕ – ಎಳೆ 49

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸುಂದರ ಸಮುದ್ರದಂಡೆ…

ಸಮುದ್ರತೀರ ಬಹಳ ಸ್ವಚ್ಛವಾಗಿತ್ತು. ಮರಳ ಮೇಲೆ ನೂರಾರು ಬಣ್ಣದ ಕೊಡೆಗಳು, ಮಳೆಗಾಲದಲ್ಲಿ ನೆಲದಿಂದ ಮೇಲೆದ್ದ ಬಣ್ಣದ ಅಣಬೆಗಳಂತೆ ಕಂಗೊಳಿಸುತ್ತಿದ್ದವು. ಪುಟ್ಟ ಮಕ್ಕಳ ಮರಳಿನ ಮನೆಗಳು, ಅವರ ಕಲರವ, ಓಡಾಟ, ಚೆಂಡಾಟ, ಗಾಳಿಪಟ ಇತ್ಯಾದಿಗಳಿಂದ ತೀರವು ಲವಲವಿಕೆಯ ಗೂಡಾಗಿತ್ತು. ಅಲ್ಲೇ ಸಮೀಪದಲ್ಲಿ, ತೀರದಿಂದ ಸಮುದ್ರದೊಳಗಡೆಗೆ ಸುಮಾರು ಇನ್ನೂರು ಮೀಟರ್ ಉದ್ದವಿದ್ದ, ದೊಡ್ಡದಾದ ಹಳೆಯ ಸೇತುವೆಯೊಂದು ಕುತೂಹಲ ಹುಟ್ಟಿಸುವಂತಿತ್ತು. ಆ ಕಡೆಗೆ ಹೋಗಿ ಸುತ್ತಾಡಿಕೊಂಡು ಬರಲು ಉಚಿತ ಪ್ರವೇಶವಿತ್ತು. ಸೇತುವೆಯ ಮುಂಭಾಗದಲ್ಲೇ ಎತ್ತರವಾದ ವೀಕ್ಷಣಾ ಕೊಠಡಿಯಲ್ಲಿ ಸಿಬ್ಬಂದಿಯೊಬ್ಬ ಕರ್ತವ್ಯ ನಿರತನಾಗಿರುವುದು ಕಂಡುಬಂತು. ಅಲ್ಲಿಯ ಸೂಚನಾಫಲಕದಲ್ಲಿ; ಅಲ್ಲಿ ನಿರಂತರವಾಗಿ ಸಮುದ್ರದ ಏರಿಳಿತ, ದಿನದಲ್ಲಿ ಗಾಳಿಯ ಗರಿಷ್ಟ ವೇಗಗಳನ್ನು ದಾಖಲಿಸುತ್ತಿರುವ ಬಗ್ಗೆ ವಿವರಗಳಿದ್ದವು. ಅಲ್ಲದೆ ಆ ದಿನದ ವಿವರಗಳನ್ನು ಮುಂಭಾಗದ ಸೂಚನಾಫಲಕದಲ್ಲಿ ದಾಖಲಿಸಲಾಗಿತ್ತು. ಹಾಗೆಯೇ ಮುಂದುವರಿದಂತೆ, ಅದಾಗಲೇ ಅಲ್ಲಿ ಬಹಳ ಜನರ ಓಡಾಟ ಕಂಡುಬಂತು. ಕೆಲವು ಮಂದಿ, ತಮ್ಮ ಪಕ್ಕದಲ್ಲಿ ನೀರು ತುಂಬಿದ ಬಾಲ್ದಿಯನ್ನಿರಿಸಿಕೊಂಡು ಸಮುದ್ರ ನೀರಿನಲ್ಲಿ ಗಾಳವನ್ನು ಇಳಿಬಿಟ್ಟು ಮೀನು ಹಿಡಿಯುತ್ತಿದ್ದರು. ಅದೇನೂ ಅವರಿಗೆ ಆ ದಿನದ ಆಡುಗೆಗಾಗಿ ಏನೂ ಅಲ್ಲ ಬಿಡಿ…ಸುಮ್ಮನೇ ಖುಷಿಗಾಗಿ ರಜಾದಿನದ ಹವ್ಯಾಸವಷ್ಟೆ! ಅವರನ್ನು ಗಮನಿಸಿದಾಗ ನಿಜವಾಗಿಯೂ ನನಗೆ ನಗು ಬಂತು. ಹಿಂದೆ ದೇವರನ್ನು ಒಲಿಸಲು ಮಹರ್ಷಿಗಳು ಮಾಡಿದ್ದ ತಪಸ್ಸಿಗೂ ಅವರು ಇಷ್ಟು ಅಚಲವಾಗಿ ಕುಳಿತಿದ್ದರೋ ಇಲ್ಲವೋ.. ಅವರು ಅದಕ್ಕಿಂತಲೂ ಹೆಚ್ಚು ಶ್ರದ್ಧೆಯಿಂದ ಕೊಂಚವೂ ಅಲ್ಲಾಡದೆ ಗಂಟೆಗಟ್ಟಲೆ ಕುಳಿತು ಒಂದೇ ಒಂದು ಪುಟ್ಟ ಮೀನು ಸಿಕ್ಕಿದರೆ, ಅವರಿಗೆ ದೊಡ್ಡ ತಿಮಿಂಗಿಲವೇ ಸಿಕ್ಕಿತೇನೋ ಅಂದುಕೊಳ್ಳುವಷ್ಟು ಪಡುವ ಸಂಭ್ರಮವು ಮೋಜೆನಿಸುತ್ತದೆ.

ಸೇತುವೆಯ ಇನ್ನೊಂದು ತುದಿ ವರೆಗೆ ಹೋದಾಗ, ಅಲ್ಲಿ ಹಾಳಾದ, ಹಳೆಯದಾದ, ಮುರಿದುಹೋದ ಮಧ್ಯಮ ಗಾತ್ರದ ಹಡಗು ಅರ್ಧ ಮುಳುಗಿದ ಸ್ಥಿತಿಯಲ್ಲಿ ನಿಂತಿತ್ತು. ಅಲ್ಲಿ ವಿಚಾರಿಸಿದಾಗ; ಹಲವು ವರ್ಷಗಳ ಹಿಂದೆ ಅದೊಂದು ಹಳೆಯದಾದ ವ್ಯಾಪಾರೀ ಹಡಗುಗಳು ಲಂಗರು ಹಾಕುವ ಸ್ಥಳವಾಗಿತ್ತೆಂದು ತಿಳಿಯಿತು. ಮುರಿದ ಹಡಗಿನಲ್ಲಿ ಸಾವಿರಾರು, ಬಿಳಿಯ ಸಮುದ್ರ ಪಕ್ಷಿಗಳು ನಿರ್ಭೀತಿಯಿಂದ ವಾಸವಾಗಿದ್ದವು. ಇದರಿಂದಾಗಿ ಆ ಪ್ರದೇಶ ಪೂರ್ತಿ ತುಂಬಿದ ಗಬ್ಬುವಾಸನೆ ಮೂಗಿಗೆ ಅಡರುತ್ತಿತ್ತು… ಹೆಚ್ಚು ಸಮಯ ಅಲ್ಲಿ ನಿಲ್ಲಲಾಗದೆ ಹಿಂತಿರುಗಿದೆವು. ಸಮುದ್ರತೀರದ ಪಕ್ಕದಲ್ಲೇ ಸಾಗುವ ರಸ್ತೆಯ ಇನ್ನೊಂದು ಪಕ್ಕದಲ್ಲಿ; ಮರಳಲ್ಲಿ ಆಡಿದ ಮಕ್ಕಳನ್ನು ಶುಚಿಗೊಳಿಸಲು ಅಥವಾ ಇತರರಿಗೂ ಉಪಯೋಗಕ್ಕಾಗಿ ಉತ್ತಮ ನೀರಿನ ವ್ಯವಸ್ಥೆಯುಳ್ಳ, ಸ್ವಚ್ಛವಾದ ಸ್ನಾನಗೃಹ, ಶೌಚಾಲಯಗಳನ್ನು ಕಾಣುವಾಗ ಮೆಚ್ಚದಿರಲು ಸಾಧ್ಯವೇ ಇಲ್ಲ. ಅಲ್ಲೇ ಪಕ್ಕದಲ್ಲಿ ಧಾರಾಳ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ಸಾಗರತೀರದಲ್ಲಿ ಸುತ್ತಾಡಿ, ಕತ್ತಲೆಯಾಗುತ್ತಿಂದ್ದತೆಯೇ ಮನೆ ಕಡೆಗೆ ಹೊರಟಿತು ನಮ್ಮ ಸವಾರಿ…ದಿನದ ಅದ್ಭುತ ನೆನಪುಗಳನ್ನು ಮೂಟೆ ಕಟ್ಟಿಕೊಂಡು..!

ಸ್ಮರಣಾರ್ಥ ದಿನ (Memorial Day)

ಅಮೆರಿಕದಲ್ಲಿ ಮೇ 25 ಗಣರಾಜ್ಯೋತ್ಸವ ದಿನವಾಗಿದೆ. ಅದರ ಮುನ್ನಾ ದಿನವಾದ ಮೇ 24, ಮೆಮೋರಿಯಲ್ ಡೇ ಆಗಿದ್ದು; ಇದು ಗಣರಾಜ್ಯೋತ್ಸವದ ಒಂದು ಭಾಗವಾಗಿದೆ.

ಆ ದಿನ ಮೇ 24, ಭಾನುವಾರ…ಎಲ್ಲಾ ಕಡೆಗಳಲ್ಲಿಯೂ ಹಬ್ಬದ ವಾತಾವರಣ. ಅಲ್ಲಿಯ ಮುಖ್ಯ ನಗರವಾದ ಸ್ಯಾನ್ ಫ್ರಾನ್ಸಿಸ್ಕೋ (SFO)ದಲ್ಲಿ ಅದ್ಧೂರಿಯ ಕಾರ್ಯಕ್ರಮಗಳಿರುವುದರಿಂದ, ಅಲ್ಲಿಗೆ ಹೋಗುವ ತಯಾರಿ ನಡೆದಿತ್ತು. ಹಾಗೆಯೇ, ಬೆಳಗ್ಗೆ 11:15ಕ್ಕೆ ಅಲ್ಲಿಗೆ ತಲಪಿದೆವು. ವೈಭವದ ಪೆರೇಡ್ ಅದಾಗಲೇ ಆರಂಭವಾಗಿತ್ತು. ನಮ್ಮ ವಾಹನ ನಿಲ್ಲಿಸಲು ಕೂಡಾ ಸ್ಥಳ ಸಿಗಲು ಕಷ್ಟಪಡಬೇಕಾಯಿತು. ಎಲ್ಲೋ ದೂರದಲ್ಲಿ ನಿಲ್ಲಿಸಿ ಪೆರೇಡ್ ನಡೆಯುವ ಸ್ಥಳಕ್ಕೆ ಬಂದಾಗ ನಂಬಲಾಗಲೇ ಇಲ್ಲ! ಜನವೋ ಜನ…ನಮ್ಮ ಊರಿನ ರಥೋತ್ಸವದ ದಿನದ ಜನ ಜಂಗುಳಿ ನೆನಪಾಯ್ತು…ಈ ತನಕ ಅಮೆರಿಕದಲ್ಲಿ ಇಷ್ಟು ಜನರನ್ನು ಒಂದೇ ಕಡೆಗೆ ನೋಡಿಯೇ ಇರಲಿಲ್ಲ!

ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಜನಜಾತ್ರೆ. ನಾವು ಎಲ್ಲವನ್ನೂ ಸರಿಯಾಗಿ ವೀಕ್ಷಿಸಲು ಅನುಕೂಲವಾಗುವಂತೆ; ಬೇರೆ ಬೇರೆ ಕಡೆಗಳಿಂದ ಬರುವ ರಸ್ತೆಗಳು ಒಂದುಗೂಡುವ ಜಾಗವನ್ನು ಆರಿಸಿಕೊಂಡೆವು. ಆಹಾ… ವಿವಿಧ ವಾದ್ಯ ಸಂಗೀತಗಳ ತಂಡಗಳು ಮುಂಭಾಗದಲ್ಲಿದ್ದರೆ; ಅದರ ಹಿಂದಿನಿಂದ, ವಿಚಿತ್ರ ಆದರೂ ಚಂದದ ವೇಷಧಾರಿ ಕಲಾವಿದರು ಸಮೂಹ ನೃತ್ಯ ಮಾಡುತ್ತಾ ಬರುವ ಮೆರವಣಿಗೆಯನ್ನು ನೋಡುವುದೇ ಆನಂದ. ಬೇರೆ ಬೇರೆ ರಸ್ತೆಗಳಲ್ಲಿ ಬಂದ ಮೆರವಣಿಗೆಗಳು; ಆ ಕೂಡುರಸ್ತೆಯಲ್ಲಿ ಒಟ್ಟಾಗಿ, ಮುಂದೆ ಮುಖ್ಯರಸ್ತೆಯಲ್ಲಿ ಮುಂದುವರಿಯುವವು. ಇವುಗಳಲ್ಲಿ ಮಹಿಳಾ ಕಲಾವಿದರು ಹೆಚ್ಚು ಸಂಖ್ಯೆಯಲ್ಲಿದ್ದುದು ವಿಶೇಷ. ಇವರ ಜೊತೆಗೆ;
ನಮ್ಮಲ್ಲಿಯಂತೆ ಟ್ಯಾಬ್ಲೋಗಳಲ್ಲೂ ಮೆರವಣಿಗೆ ಸಾಗಿತ್ತು. ತರತರಹದ ಬಣ್ಣಗಳ ಹಕ್ಕಿ ಗರಿಗಳಿಂದ ಅಲಂಕರಿಸಿಕೊಂಡು, ಬಣ್ಣ ಬಣ್ಣದ ವಿಚಿತ್ರ ದಿರುಸುಗಳನ್ನು ತೊಟ್ಟ ಕಲಾವಿದರ ವಿಶೇಷವಾದ ನೃತ್ಯ ಕಣ್ತುಂಬಿತು. ಇವುಗಳು ಈಜುಡುಗೆಗಳಿಗಿಂತ ದೊಡ್ಡದಾಗಿ ಏನೂ ಇಲ್ಲದಿದ್ದರೂ, ಸಹಜವಾಗಿಯೇ ಆಸ್ವಾದಿಸಿದ್ದಂತೂ ನಿಜ. ಮುಂದಕ್ಕೆ ಹೋಗುತ್ತಿದ್ದಂತೆ ಕಲಾವಿದರು, ಬಣ್ಣ ಬಣ್ಣದ ಪ್ಲಾಸ್ಟಿಕ್ ಮಣಿಹಾರಗಳನ್ನು, ಕರಪತ್ರಗಳನ್ನು ಜನರ ಗುಂಪಿನೆಡೆಗೆ ಎಸೆಯುತ್ತಿದ್ದರು. ಅದನ್ನು ಹಿಡಿಯಲೂ ಪೈಪೋಟಿ! ನಾಲ್ಕು ಮಾಲೆಗಳು ನಮ್ಮ ಕೈ ಸೇರಿ ಮೊಮ್ಮಗಳ ಕೊರಳನ್ನು ಅಲಂಕರಿಸಿದವು. ಆದರೆ ಸ್ವಲ್ಪ ಹೊತ್ತಲ್ಲೇ ರಸ್ತೆಯಿಡೀ ಈ ಕಸಗಳಿಂದ ತುಂಬಿ ತುಳುಕಿತು!

ಮಧ್ಯಾಹ್ನ ಒಂದು ಗಂಟೆಯಾಗುತ್ತಿದ್ದಂತೆಯೇ ಜನಸಂದಣಿ ಕರಗತೊಡಗಿತು. ಹಾಗೆಯೇ ಒಂದು ವಿಚಿತ್ರ ದೃಶ್ಯವು ಗೋಚರಿಸಿತು. ಕೊನೆಯ ನೃತ್ಯ ಸಮೂಹ ಮುಂದಕ್ಕೆ ಚಲಿಸುತ್ತಿದ್ದಂತೆಯೇ; ಅದರ ಹಿಂಬದಿಯಿಂದ ರಸ್ತೆ ಶುಚಿಮಾಡುವ ಯಂತ್ರದೊಂದಿಗೆ ಬಂದ ಕೆಲಸಗಾರರು; ನೋಡು ನೋಡುತ್ತಿದ್ದಂತೆಯೇ ಪೂರ್ತಿ ರಸ್ತೆಯನ್ನು ಶುಚಿಗೊಳಿಸಿ, ಅಲ್ಲಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ಮಾಡಿದುದನ್ನು ಕಂಡು ದಂಗಾದೆ! ಊಟ ಮುಗಿಸಿ, ಮಕ್ಕಳನ್ನು ಪಾರ್ಕಿನಲ್ಲಿ ಆಟವಾಡಿಸಿ, ಅನುಭವಗಳನ್ನು ಹೊತ್ತು ಮನೆಗೆ ತಲಪುವಾಗ ರಾತ್ರಿ ಗಂಟೆ 7. ಮುಂದೆ ಮೇ 28ರಂದು ನಮ್ಮ ಪ್ರಯಾಣವನ್ನು; ನಮ್ಮ ಬಂಧುಗಳು ವಾಸವಾಗಿರುವ ದೂರದ ಪೋರ್ಟ್ ಲ್ಯಾಂಡ್ ಗೆ ನಿಗದಿಪಡಿಸಲಾಗಿತ್ತು…ಇನ್ನು ಸ್ವಲ್ಪ ದಿನಗಳಲ್ಲಿಯೇ ಅಲ್ಲಿಗೆ ಹೋಗುವ ತಯಾರಿ ನಡೆಸಬೇಕಿತ್ತು. ಅದರ ಯೋಚನೆಯಲ್ಲಿಯೇ ನಿದ್ರಾದೇವಿಗೆ ಶರಣಾದುದು ಮಾತ್ರ ತಿಳಿಯಲೇ ಇಲ್ಲ.

ಪೋರ್ಟ್ ಲ್ಯಾಂಡ್ ನತ್ತ…

ದಿನಗಳು ಸರಿಯುತ್ತಿದ್ದವು…ಮೇ 28 ಬಂದೇ ಬಂತು. ಪ್ರಯಾಣಕ್ಕೆ ಸಜ್ಜಾಗಿ ಬೆಳಗ್ಗೆ 5:15ಕ್ಕೆ ಮನೆಯಿಂದ ಹೊರಟು; ಸೆನೋಸೆಯ ದೇಶೀಯ ವಿಮಾನ ನಿಲ್ದಾಣದಿಂದ 7ಗಂಟೆಗೆ ಹೊರಡುವ ಅಲಾಸ್ಕಾ ಏರ್ ಲೈನ್ಸ್ ವಿಮಾನದಲ್ಲಿ ಆರೂಢರಾದೆವು…ಪೋರ್ಟ್ ಲ್ಯಾಂಡ್ ನತ್ತ ಹಾರಲು.

ಒರೆಗಾನ್ ರಾಜ್ಯದಲ್ಲಿರುವ ಪೋರ್ಟ್ ಲ್ಯಾಂಡ್ ನಗರವು ಸುಮಾರು 376 ಚದರ ಕಿ.ಮೀ ವಿಸ್ತೀರ್ಣವಿದ್ದು; ರಾಜ್ಯದಲ್ಲೇ ಅತೀ ಹೆಚ್ಚು ವಿಸ್ತಾರದ ನಗರವಾಗಿದೆ. ಸುಮಾರು ಆರೂವರೆ ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಇದು, ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ಅಮೆರಿಕದ ಪಶ್ಚಿಮ ಕರಾವಳಿಯ ಅತ್ಯಂತ ಸುಂದರ ನಗರವಾಗಿರುವ ಇದು; ತನ್ನಲ್ಲಿರುವ ಸುಂದರ ಹಸಿರುಸಿರಿ, ದಟ್ಟ ಕಾನನಗಳೊಂದಿಗಿನ ಅತ್ಯಪೂರ್ವ ಗಿರಿಶಿಖರಗಳು, ಸುಂದರ ಜಲಪಾತಗಳು, ಅಹ್ಲಾದಕರ ಹವಾಮಾನ ಇತ್ಯಾದಿಗಳಿಂದಾಗಿ, ಸಾಧಾರಣ 1830ನೇ ಇಸವಿಯಿಂದಲೇ ಜನರನ್ನು ತನ್ನೆಡೆಗೆ ಆಕರ್ಷಿಸತೊಡಗಿತು. ಇದನ್ನು ಗುಲಾಬಿಗಳ ನಗರ(Rose City) ಎಂಬುದಾಗಿಯೂ ಕರೆಯುವರು. 1888ರಲ್ಲಿ ಫ್ರಾನ್ಸಿನ ಪ್ರಸಿದ್ಧ ಮಹಿಳೆಯೊಬ್ಬರು, ಅಲ್ಲಿಂದ ತಂದಂತಹ ಮಿಶ್ರತಳಿಯ ವಿಶೇಷ ಗುಲಾಬಿ ಹೂಗಳನ್ನು ನಗರದಲ್ಲಿಡೀ ಬೆಳೆಸಲು ಪ್ರಾರಂಭಿಸಿದಳು…ಅದಕ್ಕೇ ಇದು ಇಂದಿಗೂ ಗುಲಾಬಿ ನಗರವಾಗಿಯೇ ಜಗತ್ಪ್ರಸಿದ್ಧ.

ಈ ಪಟ್ಟಣದ ಹೊರವಲಯದಲ್ಲಿರುವ ಬೀವರ್ಟನ್(Beaverton) ಎಂಬ ಪುಟ್ಟ ಪಟ್ಟಣದಲ್ಲಿ ನಮ್ಮ ಬಂಧುಗಳು(ವಿನಾಯಕ, ವಿಜೇತಾ.) ನೆಲೆಸಿದ್ದರು. ಚಂದದ ತಾಣವೊಂದಕ್ಕೆ ಭೇಟಿ ಕೊಡುವ ಉತ್ಸಾಹದಲ್ಲಿದ್ದ ನಮಗೆ, 1: 45 ಗಂಟೆಯಷ್ಟು ಸಮಯ ಪ್ರಯಾಣ ಮಾಡಿ, ಪೋರ್ಟ್ ಲ್ಯಾಂಡ್ ತಲಪಿದ್ದೇ ತಿಳಿಯಲಿಲ್ಲ. ವಿಮಾನವಿಳಿದಾಗ ನಮ್ಮನ್ನು ಕರೆದೊಯ್ಯಲು ಬರಬೇಕಾಗಿದ್ದ ಬಂಧುಗಳೇ ನಾಪತ್ತೆ! ಒಂದು ಗಂಟೆ ತಡವಾಗಿಯಾದರೂ ಅವರು ಬಂದಾಗ ಸಂತೋಷವೇ ಆಯಿತೆನ್ನಿ.

ಅವರ ಮನೆ ಕಡೆಗೆ ಹೋಗುತ್ತಾ; ಸುಮಾರು ಅರ್ಧಗಂಟೆ ಪ್ರಯಾಣದಲ್ಲಿ ಕಂಡ ಅದ್ಭುತ ದೃಶ್ಯಗಳನ್ನು ಏನೆನ್ನಲಿ?! ನಮ್ಮ ಊಟಿಯಂತಹ ಅಹ್ಲಾದಕರ ವಾತಾವರಣ, ರಸ್ತೆಗಷ್ಟೇ ಜಾಗ ಬಿಟ್ಟು; ಒಂದಿಂಚೂ ಬಿಡದೆ ಬೇರೆಲ್ಲಾ ಕಡೆಗಳಲ್ಲಿ, ಕಾಲುದಾರಿಯಲ್ಲಿ ನಡೆದಾಡಲು ಸ್ವಲ್ಪ ಜಾಗವಿರಿಸಿ ಎಲ್ಲೆಡೆಯಲ್ಲಿ ಗುಲಾಬಿ ಹೂಗಳದೇ ವೈಭವ. ರಸ್ತೆ ಪಕ್ಕದ ಗೋಡೆಗಳಲ್ಲಿ, ಬೀದಿ ದೀಪದ ಕಂಬಗಳಲ್ಲಿ ಸಹಿತ ಸಣ್ಣ, ದೊಡ್ಡ ಕುಂಡಗಳಲ್ಲಿ ನಳನಳಿಸುವ ಹೂವುಗಳು. ದಿಬ್ಬದಂತಹ ಜಾಗಗಳಲ್ಲಿ, ಗುಲಾಬಿ ಹೂಗಳ ಪೊದೆಗಳಲ್ಲಿ ಪೂರ್ತಿ ಪುಟ್ಟ ರಾಣಿಯರ ಕಿರುನಗೆ! ಆಹಾ…ಇದಕ್ಕೆ ಗುಲಾಬಿ ನಗರವೆಂಬ ಹೆಸರು ನಿಜಕ್ಕೂ ಅನ್ವರ್ಥನಾಮವೆನಿಸಿತು. ಕಣ್ಣು, ಮನವನ್ನು ತೆರೆದಿಟ್ಟು ಅಸ್ವಾದಿಸಿದಂತಹ ಕ್ಷಣಗಳು ಇಂದಿಗೂ ಮನದೊಳಗಡೆಗೆ ಪರಿಮಳ ಸೂಸುತ್ತಿವೆ! ಇನ್ನೂ ವಿಶೇಷವೆಂದರೆ; ನಗರ
ಮಧ್ಯದಲ್ಲೇ ತುಂಬಿ ಹರಿಯುವ ನದಿ! ರಾಜ್ಯದ ವಾಯವ್ಯ ದಿಕ್ಕಿನಲ್ಲಿರುವ ಈ Willamette ಹೆಸರಿನ ನದಿಯು, ಕೊಲಂಬಿಯಾ ಮಹಾನದಿಯ ಉಪನದಿಯಾಗಿದೆ. ಇಂತಹದೇ 27 ಉಪನದಿಗಳು ಪೂರ್ತಿ ರಾಜ್ಯದಲ್ಲಿ ಪಸರಿಸಿಕೊಂಡಿವೆ. ಈ ಸಮೃದ್ಧ ಜಲದಿಂದಾಗಿ ಈ ಭೂಭಾಗವು ಸಂಪದ್ಭರಿತವಾಗಿ, ನಿತ್ಯ ಹಸಿರು, ಹೂಗಳಿಂದ ಕಂಗೊಳಿಸುತ್ತದೆ. ಸುಮಾರು 300 ಕಿ.ಮೀ ದೂರ ಹರಿಯುತ್ತಾ; ಇಕ್ಕೆಲಗಳಲ್ಲಿರುವ ಭೂಪ್ರದೇಶಗಳನ್ನು ಫಲವತ್ತಾಗಿಸಿದೆ. ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯು ಅಗಲವಾಗಿಯೂ, ಅತ್ಯಂತ ಕಲಾತ್ಮಕವಾಗಿಯೂ ಇದ್ದು ಕಮಾನು ಆಕೃತಿಯಲ್ಲಿದೆ.

ಮನೆ ಸಮೀಪಿಸಿದಂತೆ, ಹಸಿರು ವೈಭವದ ನಡುವೆ ಹತ್ತಾರು ಮರದ ಮನೆಗಳು ಮನ ತುಂಬಿದವು. ನೆಲ ಮಟ್ಟದಿಂದ ಸುಮಾರು ಆರೇಳು ಅಡಿಗಳಷ್ಟು ಎತ್ತರದಲ್ಲಿ ಕಟ್ಟಲಾದ ಮನೆಗೆ ಏರಿ ಹೋದಾಗ ಮಡಿಕೇರಿಯ ಯಾವುದೋ ರೆಸಾರ್ಟ್ ತಲಪಿದ ಅನುಭೂತಿ! ದಂಪತಿಗಳ ಪುಟ್ಟ ಮಗು ಜೊತೆ ಆಟ… ಮಧ್ಯಾಹ್ನದ ಊಟದ ಬಳಿಕ ಹೊರಗಡೆಗೆ ಸುತ್ತಾಡಲು ಹೊರಟೆವು…

ಸೂರ್ಯಕಿರಣಗಳು ನೆಲಕ್ಕೆ ತಾಗದಂತಿರುವ ರೆಡ್ ವುಡ್ ಮರಗಳ ದಟ್ಟ ಕಾನನದ ನಡುವೆ ಹಾವು ಹರಿದಂತೆ ಓರೆ ಕೋರೆಯಾಗಿ ಸಾಗಿದ ಅತಿವಿರಳ ವಾಹನ ಸಂಚಾರವಿರುವ ರಸ್ತೆಯಲ್ಲಿ ನಮ್ಮಿಬ್ಬರನ್ನು ಮಾತ್ರ ಕರೆದೊಯ್ಯುತ್ತಿತ್ತು, ಆ ಬಂಧುಗಳ ಕಾರು. ಏರು ರಸ್ತೆಯಲ್ಲಿ ಸಾಗಿದಾಗ, ಆಳ ಕಣಿವೆಯ ದಟ್ಟ ಹಸಿರು ಕಣ್ಮನಗಳನ್ನು ತಂಪು ಮಾಡಿತು. ಒಂದು ಹಂತದಲ್ಲಿ ಕಾರನ್ನು ನಿಲ್ಲಿಸಿ, ಕಾಡಿನ ಮಧ್ಯದಲ್ಲಿರುವ ಸೊಗಸಾದ ಕಾಲುದಾರಿಯಲ್ಲಿ ಹತ್ತು ನಿಮಿಷ ಬೆಟ್ಟವೇರಿದಾಗ…ಆಹಾ… ಮುಂಭಾಗದಲ್ಲೇ ಕಾಣ್ತಾಯಿದೆಯಲ್ಲಾ…..!!

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38135

-ಶಂಕರಿ ಶರ್ಮ, ಪುತ್ತೂರು.  

8 Responses

 1. Anonymous says:

  ಸೊಗಸಾಗಿದೆ ಪ್ರಕೃತಿ ವರ್ಣನೆಗಳು.

 2. ಎಂದಿನಂತೆ ಅಮೇರಿಕಾ ಪ್ರವಾಸ ಕಥನ ಓದಿ ಸಿಕೊಂಡು ಹೋಯಿತು…ಅದರ ಜೊತೆ ನಾನೂ ..ಪ್ರಯಾಣಿಸುತ್ತಿದ್ದೇನೆ…ಧನ್ಯವಾದಗಳು ಮೇಡಂ

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು…ನಾಗರತ್ನ ಮೇಡಂ.

 3. ಸುಚೇತಾ says:

  ತುಂಬಾ ಚೆನ್ನಾಗಿದೆ.

 4. Padma Anand says:

  ಅಮೆರಿಕೆಯ ವಿವಿಧ ತಾಣಗಳ ಭೇಟಿ ಮತ್ತು ವರ್ಣನೆಯೊಂದಿಗೆ ಕುತೂಹಲವನ್ನೂ ಉಳಿಸಿಡುವಲ್ಲಿಯೂ ಲೇಖನ ಗೆದ್ದಿದೆ.

  • ಶಂಕರಿ ಶರ್ಮ says:

   ತಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯ ನಮನಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: